Hindu Vani
Index
ಸಾಹಿತ್ಯ
ಡಾ| ಎಸ್.ಎಲ್. ಭೈರಪ್ಪ - ಮನಸ್ಸಿನ ಮಾತು
•ಧರ್ಮ ಬರಿಯ ಬೌದ್ಧಿಕ ತೃಪ್ತಿ ಕೊಡುತ್ತಿದ್ದರೆ ಸಾಲದು. ಬುದ್ಧಿಯೇ ಬಾಳಿನ ಪರಮ ಶಕ್ತಿಯಲ್ಲ. ಮನುಷ್ಯನಲ್ಲಿ ಇರುವ ಉಳಿದ ಎಲ್ಲ ಶಕ್ತಿ ಪ್ರವೃತ್ತಿಗಳಿಗೂ ಸಮುಚಿತ ಅವಕಾಶವನ್ನೂ ಗಣನೆಯನ್ನೂ ಕೊಟ್ಟರೆ ಆ ಧರ್ಮವು ಸರ್ವ ಮಾನ್ಯವಾಗುವುದು. ಆಗಲೇ ಅದು ನಮ್ಮ ಜೀವನದ ಎಲ್ಲ ಅಂಗಗಳನ್ನೂ ಒಳಗೊಳ್ಳುವುದು.
ವಾಸ್ತವತೆಗೆ ದೂರವಾದ ಅಸಾಧ್ಯವಾದ ಒಣ ಆದರ್ಶದ ಕೂಗನ್ನು ನೀನೂ ಪಸರಿಸಬೇಡ. ರಾಜಕೀಯದ ಹಿಂದೆ ಮತದ ಶಕ್ತಿಯಿಲ್ಲದಿದ್ದರೆ ರಾಷ್ಟ್ರವಿಭಜನೆ ಏಕೆ ನಡೆಯುತ್ತಿತ್ತು. ಭಾರತದ ಕ್ರೈಸ್ತ ಮತವು ರಾಜಕೀಯದಲ್ಲಿ ಕಡಿಮೆ ಪ್ರಮಾಣದ ಆಟ ಆಡಿಸುತ್ತಿದೆಯೇ ನತದೃಷ್ಟರಾದ ಹಿಂದೂಗಳಲ್ಲಿ ಸಂಘಟನೆಯ ಕಾರ್ಯ ನಡೆಯದೆ ಇದ್ದರೆ ಕೆಲವೇ ದಿನಗಳಲ್ಲಿ ಅವರ ಹೆಸರಿಲ್ಲದಂತಾಗುತ್ತದೆ. – ಧರ್ಮಶ್ರೀ
ಚಿತ್ರಕಲೆಯಲ್ಲಿನ ಪ್ರಕೃತಿ ದೃಶ್ಯಗಳನ್ನು ನೋಡಿ. ಹೊಳೆಯಾಗಲಿ ಕಾಡಾಗಲಿ, ಪರ್ವತವಾಗಲಿ ಮಂಜಿನಿಂದ ಮುಸುಕಿದ ದೂರದ ಗಿರಿ ಶಿಖರವಾಗಲಿ, ಅವುಗಳ ನಡುವೆ ಮನುಷ್ಯ ಪ್ರಾಣಿಗೆ ಸಂಬಂಧಿಸಿದ ಯಾವುದಾದರೂ ಬಂದು ಗುರುತು ಕಾಣುವಂತೆಯೇ ಚಿತ್ರಕಾರ ರಚಿಸಿರುತ್ತಾನೆ. ಕಾಡಿನ ಮಧ್ಯೆ ಮನುಷ್ಯನಿಂದ ನಿರ್ಮಿತವಾದ ಒಂದು ಪುಟ್ಟದಾರಿ ಇರುತ್ತದೆ. ಸರೋವರದಲ್ಲಿ ಒಬ್ಬ ದನಗಾಹಿಯಾದರೂ ನೀರು ಕುಡೀತಿರ್ತಾನೆ. ಹೀಗೆ ಮನುಷ್ಯ ಸಂಬಂಧದ ಗುರುತೇ ಇಲ್ಲದ ಪ್ರಕೃತಿ ಚಿತ್ರಣ ನಮ್ಮ ಮನಸ್ಸನ್ನು ಆಕರ್ಷಿಸಲು ಮಾತ್ರವಲ್ಲ. ನಮಗೆ ಒಂದು ಬಗೆಯ ದಿಗಿಲನ್ನುಂಟು ಮಾಡುತ್ತದೆ.
-ದೂರಸರಿದರು
ಯಾವ ಆಶೆಯೂ ಮನಸ್ಸಿನಲ್ಲಿ ಉಳಿಯಲು ಬಿಡುವಿಲ್ಲದಂತೆ ನಾವು ಇಷ್ಟು ವರ್ಷಗಳ ಕಾಲ ದುಡಿಯುತ್ತಿದ್ದೆವು. ವಿಶ್ರಾಂತಿಗೆ ಅಂತ ಇರುವ ಇಂಥ ವಿರಾಮದಲ್ಲೇ ಅಲ್ಲವೇ ಸ್ವಂತ ಆಶೆಗಳು ಹೊರಗೆ ಬರೂದು?
• ಹೀಗೆ ಜ್ಞಾನ ವೃದ್ಧಿಯ ಸಾಧನೆಯಲ್ಲಿ ಯಾರೂ ಮಡಿಯದಿದ್ದರೆ ಮನುಷ್ಯಕುಲದ ನಾಗರೀಕತೆ ಇನ್ನೂ ಎಷ್ಟು ಕೆಳಗೆ ಇರುತ್ತಿತ್ತು!
ವೇದಾಭ್ಯಾಸ ಮಾಡಿದವನಿಗೆ ತಕ್ಕ ಮಾತು ಇದು. ನಮಗೆ ಸೇರಿರುವ ಆಸ್ತಿ ನಮ್ಮದಲ್ಲವೆಂದು ತಿಳಿದ ತಕ್ಷಣ ನಾವು ತ್ಯಜಿಸಬೇಕು. ಇಲ್ಲದಿದ್ದರೆ ನಮ್ಮ ಸಂತಾನದಲ್ಲಿ ಯಾರಾದರೂ ಅದನ್ನು ಅಧರ್ಮದಿಂದಲೇ ಕಳಕೊಳ್ಳುತ್ತಾರೆ. ಅವರು ಐಶ್ವರ್ಯವನ್ನು ಕಳೆದುಕೊಳ್ಳುವುದು ಭಾವರೂಪವಾದ ನಷ್ಟವಲ್ಲ. ಆದರೆ ಅದನ್ನು ಕಳೆದುಕೊಳ್ಳುವಾಗ ಅಧರ್ಮ ಮಾರ್ಗದಲ್ಲಿಯೂ ಸಾಗ್ತಾರೆ. ಪಾಪ ಸಂಚಯಕ್ಕಿಂತ ದೊಡ್ಡ ನಷ್ಟ ಯಾವುದೂ ಇಲ್ಲ. ನಮ್ಮ ಪಾಪ ಪುಣ್ಯಗಳು ಕಾದಿದ್ದು ನಮ್ಮ ಸಂತಾನದ ಯಾವದಾದರೊಂದು ತಲೆಯ ಜೀವನದಲ್ಲಿ ಕಾಣಿಸಿಕೊಳ್ಳುತ್ತದೆ.
-ವಂಶವೃಕ್ಷ
- ವಸ್ತು ನಿಷ್ಠೆಯಿಂದ ತೂಗಿ ನೋಡುವ ಬದಲು ನಾನು ಭಾವನೆಯ ಮಾಧ್ಯಮದಿಂದಲೇ ಯಾವುದನ್ನೂ ನೋಡುತ್ತೇನೆ. ಜೀವನವು ಭಾವನಾರಹಿತ ವಸ್ತು ನಿಷ್ಠೆಯಲ್ಲ. ಹೆಣ್ಣುಮಕ್ಕಳಿಗೆ ಎಷ್ಟೇ ವಯಸ್ಸಾಗಲಿ, ತಾಯಿ ಬದುಕಿರುವ ತನಕ ಬಾಲ್ಯ ಕಳೆದಿರುವುದಿಲ್ಲ. ಅಮ್ಮ ಸತ್ತ ಮೇಲೆ ಹಿಂದಿನ ಉಲ್ಲಾಸವೇ ಇಲ್ಲ. ಹುಡುಗುತನದ ಭಾವನೆಯೇ ಇಲ್ಲ. ಜಲಪಾತ
* ಸಂಬಳವಿಲ್ಲದೆ ದುಡಿಯೋದರಿಂದಲೂ ಮನುಷ್ಯನಿಗೆ ಅಹಂಕಾರ ಹುಟ್ಟುತ್ತೆ. ಸಂಬಳ ತಗೊಳ್ಳೋ ಇತರರಿಗಿಂತ ತಾನು ಉತ್ತಮ ಎನ್ನುವ ಭಾವನೆ ಬರುತ್ತೆ. ಆ ಭಾವನೆ ಇತರರ ಮೇಲೆ ದಬ್ಬಾಳಿಕೆ ಮಾಡಿಸುತ್ತೆ. ಆ ಇತರರಲ್ಲಿ ಈ ದಬ್ಬಾಳಿಕೆಯನ್ನು ಸಹಿಸಿಕೊಂಡು ತಗ್ಗಿ ನಡೆಸುವ ನೈಚ್ಯಭಾವವನ್ನು ಹುಟ್ಟಿಸುತ್ತೆ.
ಒಂದು ಹೆಜ್ಜೆ ಇಟ್ಟ ಮೇಲೆ ಅಲ್ಲಿಯೇ ಹೂತು ಹೋಗ ಬೇಕೇ? ಬೇರೆ ಹೆಜ್ಜೆ ಇಡುವ ಅಧಿಕಾರವೇ ಇಲ್ಲವೇ?
- ಗ್ರಹಣ
ಡಿಪ್ಲೊಮಸಿ ಎಂದರೆ ಏನು? ಯಾರ ಯಾರ ಎದುರಿಗೆ ಹೇಗೆ ಹೇಗೆ ಬೇಕೋ ಹಾಗೆ ಹಾಗೆ ಮಾತನಾಡಿ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುವುದು. ತಪ್ಪಿಪ್ಪಿಕೊಳ್ಳುವುದು ಅಪಮಾನಕರವಲ್ಲ. ತಪ್ಪಲ್ಲದುದನ್ನು ತಪ್ಪೆಂದು ಒಪ್ಪಿಕೊಂಡು ಸದ್ಯದ ಸಾಧಿಸಿಕೊಳ್ಳುವುದು ನೀಚತನ. ತಾನೇ ತನ್ನ ವ್ಯಕ್ತಿತ್ವವನ್ನು ಬಲಿಕೊಟ್ಟುಕೊಂಡಂತೆ ಅದು. ಮನುಷ್ಯ ಮನುಷ್ಯ ಮಾತನಾಡಲೇಬೇಕೆಂದಿಲ್ಲ. ಜೊತೆಯಲ್ಲಿದ್ದರೆ ಸಾಕು.
• ಪ್ರಾಣ ಕಳೆದುಕೊಳ್ಳಬೇಕೆಂದು ನಿಶ್ಚಯವಾದ ತಕ್ಷಣ ಭಯವಿಲ್ಲ. ಬೇಸರವಿಲ್ಲ. ಸಿಟ್ಟಿಲ್ಲ ಸೇಡಿಲ್ಲ ಮನಸ್ಸಿಗೆ ನಿರಾಳ. ಆದರೆ ಮಂಡಿತೊಡೆಕಾಲುಗಳೇಕೆ ಅದರುವುದಕ್ಕೆ ಶುರುವಾದವು? ಮನಸ್ಸು ಸಾಯುವುದಕ್ಕೆ ಸಿದ್ಧವಾದರೂ ಶರೀರ ಸಿದ್ಧವಾಗುವುದಿಲ್ಲ. ಯಾಕೆ? ಬದುಕುವ ಆಸೆ ಮನಸ್ಸಿನದ್ದೋ ಶರೀರದ್ದೋ?
- ಅನ್ವೇಷಣ
ಬದುಕಿನಲ್ಲಿ ನಿಂತು ಆರಿಸುವುದು ಸುಲಭ. ಸಾವಿನಲ್ಲಿ ನಿಂತು ಅತ್ತ ಕಡೆಯ ಗಾಢ ಕತ್ತಲಿನ ಭಾರವನ್ನು ಹೊತ್ತು ಮುಂದೆ ತನ್ನದಾಗದ ತನ್ನ ಪಾಡಿಗೆ ತಾನು ಸಾಗುವ ಜೀವನದ ಉಬ್ಬುಗಳನ್ನು ಪ್ರೀತಿಸ್ಥಾನಗಳನ್ನು ಆರಿಸುವುದು ಎಷ್ಟು ಕಠಿಣವೆಂಬುದು ತಿಳಿದೇ ಇರಲಿಲ್ಲ. ಇಂಥ ಸಮಸ್ಯೆ ಇರುತ್ತದೆಂಬುದೇ ಗೊತ್ತಿರಲಿಲ್ಲ.
- ನೆಲೆ
ಜನಗಳೆಲ್ಲ ಸಾಚಾ. ನಾಯಕರದ್ದೇ ತಪ್ಪು ಅಂತ ತಿಳಿದು ನಾನು ನಾಯಕರನ್ನು ಸಾರ್ವಜನಿಕವಾಗಿ ವಿರೋಧಿಸುಕ್ಕೆ ಹೋದೆ. ಅವರಿಗಿಂತ ಹೆಚ್ಚಿನ ನಾಯಕತ್ವವನ್ನೂ ತೋರ್ಪಡಿಸಿಕೊಳ್ಳೋಕೆ ಹೋದೆ. ನನಗೆ ಒಂದು ಪರಿಜ್ಞಾನವಿರಬೇಕಿತ್ತು. ಜನಗಳೂ ಭ್ರಷ್ಟರು, ನೀಚರು. ಆದರೆ ಉತ್ತಮರಾಗುವ ಮೂಲಗುಣ ಅವರಲ್ಲಿದೆ. ಉತ್ತಮರಾಗದೆ ತಾವು ಮೇಲೆ ಬರೊಲ್ಲ ಅನ್ನೋ ತಿಳಿವಳಿಕೇನ ಅವರಲ್ಲಿ ಬೆಳೆಸಿದರೆ ಉತ್ತಮತೆ ಎಂದರೇನು? ಮೇಲೆ ಬರೋದು ಎಂದರೇನು? ಅನ್ನೋ ವಿವರಗಳನ್ನು ಆ ಮೇಲೆ ಹೇಳಬಹುದು. ಅವರೇ ಜಾಗೃತರಾಗಿ ಅಲೋಚಿಸಿ ಕಂಡುಕೊಳ್ಳಬಹುದು.
- ಸಾಕ್ಷಿ
(ಡಾ| ಭೈರಪ್ಪನವರು 24-09-2025ರಂದು ಅಗಲಿದರು.)