Logo

VHP PUBLICATIONS

Hindu Vani


expand_more

ಸಂಗ್ರಾಮ

By - ಸಂಜಯ್, ಸಂಘಟನಾ ಕಾರ್ಯದರ್ಶಿ, ತುಮಕೂರು ವಿಭಾಗ

ಭಗತ್ ಮತ್ತು ಆಜಾದ್ ಕ್ರಾಂತಿಯ ಕಣಕ್ಕೆ (ಮುಂದುವರೆದುದು)

ಇದೇ ಕಾಲಖಂಡದಲ್ಲಿ ರಷ್ಯಾ ದೇಶದಲ್ಲಿ 1917ರ ಕಮ್ಯೂನಿಸ್ಟ್ ಕ್ರಾಂತಿ ನಡೆಯಿತು. ಭಾರತದಲ್ಲೂ ಅಲ್ಲಿಯ ಕ್ರಾಂತಿ ಮತ್ತು ಸೋವಿಯಟ್ ಸಾಮಾಜಿಕ ಮತ್ತು ಆರ್ಥಿಕ ಪಲ್ಲಟಗಳ ಬಗ್ಗೆ ಕುತೂಹಲವು ಕಾಣಬಂದಿತು. ಹಾಗೆ ನೋಡಿದರೆ 30ರ ದಶಕದವರೆಗೂ ಆ ಕುರಿತು ಹೆಚ್ಚಿನ ಬರಹಗಳಾಗಲೀ ಪುಸ್ತಕಗಳಾಗಲೀ ಇರಲೇ ಇಲ್ಲ. ಬಹಳ ಅಧ್ಯಯನ ಶೀಲರಿಗೂ ಕೂಡಾ ಮಾರ್ಕ್ಷಿಸ್ಟ್ ಚಿಂತನೆಗಳ ಹೆಚ್ಚಿನ ಪರಿಚಯವು ಇರಲಿಲ್ಲ. ಆಗ ಜನಪ್ರಿಯವಾಗಿ ಕೇಳಸಿಗುತ್ತಿದ್ದುದು ಐರ್ಲೆಂಡ್‌ನ ರಾಷ್ಟ್ರೀಯ ಚಳುವಳಿ, ಭಾರತದಲ್ಲಿ ಹಿಂದು ಪುನರುತ್ಥಾನ ಅಥವಾ ಜಪಾನಿನ ವಿಸ್ತಾರವಾದದ ಚರ್ಚೆಗಳು ಮಾತ್ರ. ಈ ನಡುವೆ ಭಗತ್‌ಸಿಂಗರು. ಮಾರ್ಕ್ಸ್ ಬಗ್ಗೆ ಓದುತ್ತಿದ್ದುದು ಕುತೂಹಲಕಾರಿ ವಿಚಾರವೇ ಆಗಿದ್ದಿತು. ಏಕೆಂದರೆ ಆ ಕುರಿತು ಆಸಕ್ತಿ ತೋರಿದವರೂ ಕೂಡಾ ಮಾರ್ಕ್ಸ್‌ವಾದದಿಂದ ಪ್ರಭಾವಿತರಾಗಿರಲಿಲ್ಲ.

ಆಗ ಸೆರೆಮನೆಯಲ್ಲಿದ್ದ ಸಚೀಂದ್ರನಾಥ ಸನ್ಯಾಲ್‌ ಕೂಡಾ ಮಾರ್ಕ್ಸ್ ಬಗ್ಗೆ ಅಧ್ಯಯನವನ್ನು ಪ್ರಾರಂಭಿಸಿದ್ದರು. ಅವರು ಓದಿದ ಕೆಲವು ವಿಚಾರಗಳು ಒಪ್ಪುವಂತೆ ಇದ್ದರೂ ಅವರಿಗೆ ಒಣ ಭೌತಿಕವಾದವು ಅಸಹನೀಯವೆನಿಸಿತು. ಆ ಕಾಲದಲ್ಲಿ ಸ್ಟಾಲಿನ್ ಮತ್ತು ಮಾವೋರು ತರಬೇಕೆಂದಿದ್ದ ಸಾಮಾಜಿಕ ಬದಲಾವಣೆಗಳಿಂದ ಆಗುವ ಆರ್ಥಿಕ ಮತ್ತು ಸಾಮಾಜಿಕ ಉತ್ಪಾತಗಳ ಅರಿವು ಗೊತ್ತೇ ಇರಲಿಲ್ಲ. ವ್ಯಕ್ತಿಯ ವಿಕಾಸಕ್ಕೆ ಆಸ್ಪದವಿರದ ಮಾರ್ಕ್ಸ್ ವಿಚಾರಗಳು, ವೈಚಾರಿಕ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ನಿರಂತರತೆಗೆ ಅಡ್ಡಿಯಾಗುವುದು ಎನ್ನುವುದನ್ನು ಸಾಲರ ಆಗಿನ ಲೇಖನಗಳು ಧ್ವನಿಸುತ್ತಿದ್ದವು. ಇತಿಹಾಸವು ವರ್ಗ ಸಂಘರ್ಷವೆನ್ನುವ ಈ ಹೊಸವಾದವನ್ನು ಮೆಚ್ಚಲೇ ಇಲ್ಲ. ಅದೇ ಸಮಯದಲ್ಲಿ ರಷ್ಯಾ ಮತ್ತು ಇಂಗ್ಲೆಂಡಿನ ಕಮ್ಯೂನಿಸ್ಟ್ ಕಾರ್ಯಕರ್ತರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನುಸುಳುತ್ತಿರುವುದನ್ನು ಸನ್ಯಾಲರು ಕಂಡು ಕೊಂಡರು.



ಸಂಗ್ರಾಮ

1927ರಲ್ಲಿ ಚೆದುರಿಹೋದ ಕ್ರಾಂತಿಕಾರಿಗಳು ಮತ್ತೆ ಸಂಘಟಿತರಾಗಲು ಪ್ರಯತ್ನಿಸಿದರು. 1928ರ ನಡುವಿನಲ್ಲಿ ಕಾನಪುರದಲ್ಲಿ ಈ ಗುಂಪು ಗುಪ್ತ ಸಭೆಯೊಂದನ್ನು ನಡೆಸಿತು. ಪಂಜಾಬ್ ಮತ್ತು ಉತ್ತರಪ್ರದೇಶದ ಪ್ರತಿನಿಧಿಗಳು ಕೇಂದ್ರಿಕೃತವಾದ ನಾಯಕತ್ವವನ್ನು ಪ್ರತಿಪಾದಿಸಿದರೆ. ಬಂಗಾಳದ ಪ್ರತಿನಿಧಿಗಳು ನಾಯಕತ್ವದ ವಿಕೇಂದ್ರಿಕರಣವನ್ನು ಬಯಸಿದರು. ಬಂಗಾಳದ ತಂಡವು ನಂತರ ನಡೆದ ದೆಹಲಿಯ ಫೀರೋಜ್ ಶಾ ಕೋಟ್ಲಾದ ಸಭೆಯಲ್ಲಿ ಭಾಗವಹಿಸಲಿಲ್ಲ. ಪಂಜಾಬ್, ಉತ್ತರ ಪ್ರದೇಶ ಮತ್ತು ಬಿಹಾರದ ಇಬ್ಬಿಬ್ಬರು ಹಾಗೂ ರಾಜಾಸ್ಥಾನದಿಂದ ಒಬ್ಬರು ಸೇರಿದ ಕೇಂದ್ರೀಯ ಸಮಿತಿಯನ್ನು ಹುಟ್ಟುಹಾಕಲಾಯಿತು. ಬಂಗಾಳದಿಂದ ಯಾರೂ ಪ್ರತಿನಿಧಿಗಳು ಅದರಲ್ಲಿ ಇರಲಿಲ್ಲ. ಚಂದ್ರಶೇಖರ ಆಜಾದ್ ಆ ಸಭೆಯಲ್ಲಿ ಭಾಗವಹಿಸದೇ ಇದ್ದರೂ ಸಶಸ್ತ್ರ ಕಾರ್ಯಚರಣೆಯ ವಿಭಾಗಕ್ಕೆ ಅವರನ್ನೂ ಸರ್ವಾನುಮತದಿಂದ ಆರಿಸಲಾಯಿತು. ಹೀಗಾಗಿ ಈ ತಲೆಮಾರಿನ ಕ್ರಾಂತಿಕಾರಿಗಳಿಗೆ ಆಜಾದ್ ಹಿರಿಯರೆನಿಸಿಕೊಂಡರು.

ಈ ಸಭೆಯಲ್ಲಿ ಸಂಘಟನೆಯ ಹೆಸರಿಗೆ ಸೋಶಿಯಲಿಸ್ಟ್ ಎನ್ನುವ ಶಬ್ದವನ್ನು ಸೇರಿಸಬೇಕೆಂದು ನಿರ್ಣಯವಾಯಿತು. ಇದನ್ನು ಪ್ರಸ್ತಾಪಿಸಿದವರು ಭಗತ್‌ಸಿಂಗ್, ಸದಸ್ಯರ ನೇಕರು ಇದನ್ನು ವಿರೋಧಿಸಿದರು. ಸಚೀಂದ್ರನಾಥ ಸನ್ಯಾಲರಂತಹ ಸ್ಥಾಪಕ ಸದಸ್ಯರು ಇದನ್ನು ಒಪ್ಪುತ್ತಿರಲಿಲ್ಲವೆನ್ನುವುದು ಅವರೆಲ್ಲರ ವಾದವಾಗಿದ್ದಿತು. ಆದರೆ ಭಗತಸಿಂಗರ ಒತ್ತಾಯದಿಂದ ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಷಿಯೇಶನ್‌ (ಹೆಚ್. ಎಸ್. ಆರ್. ಎ.) ಎನ್ನುವ ಹೆಸರಿನಲ್ಲಿ ಸಂಘಟನೆಯು ಪ್ರಾರಂಭಗೊಂಡಿತು. ಹಾಗೆ ನೋಡಿದರೆ ಆಗ ಸೋಶಿಯಲಿಸ್ಟ್ ಎನ್ನುವ ಹೆಸರು ಒಂದು ಫ್ಯಾಶನ್ ಆಗಿದ್ದಿತೆ ಹೊರತು ಅದಕ್ಕೊಂದು ಸಾಮಾಜಿಕವಾಗಿ ಆರ್ಥಿಕ ಆಯಾಮದ ಅರ್ಥವಿರಲಿಲ್ಲ. ಒಟ್ಟಾರೆ ಆಗ ತೀವ್ರ ರಾಜಕೀಯ ಬದಲಾವಣೆಯ ಉದ್ದೇಶವನ್ನು ಹೊಂದಿದ್ದರೆ ಸೋಶಿಯಲಿಸ್ಟ್ ಎಂದು ಕರೆಸಿಕೊಳ್ಳುವುದು ಸರ್ವೇ ಸಾಮಾನ್ಯವೆನಿಸಿಕೊಂಡಿದ್ದಿತು. ಈಗಿನ ಎಡ ಮತ್ತು ಬಲ ಪಂಥಗಳನ್ನು ಆಗ ತೀವ್ರಗಾಮಿಗಳೆಂದೂ ಅಥವಾ ಮಂದಗಾಮಿಗಳೆಂದೂ ಗುರುತಿಸಲಾಗುತ್ತಿತ್ತು. ತಿಲಕರನ್ನೂ ಅರವಿಂದರನ್ನೂ ಸುಭಾಷಚಂದ್ರ ಬೋಸರು ಇದೇ ಅರ್ಥದಲ್ಲಿ ಎಡಪಂಥೀಯರೆಂದು ಹೆಸರಿಸಿದ್ದರು. ಇದೇ ಕ್ರಮದಲ್ಲಿ ಜರ್ಮನಿಯ ನಾಜಿ ಪಕ್ಷವು ತನ್ನನ್ನು ಸೋಶಿಯಲಿಸ್ಟ್ ಪಾರ್ಟಿ ಎಂದು ಕರೆಸಿಕೊಳ್ಳುತ್ತಿದ್ದಿತು.

1919ರ ಗವರ್ನ್‌ಮೆಂಟ್ ಆಫ್ ಇಂಡಿಯಾ ಆಕ್ಸ್‌ನಲ್ಲಿ ಹತ್ತು ವರ್ಷಗಳ ನಂತರ ನಡೆಯಬೇಕಿದ್ದ ರಾಜಕೀಯ ಸುಧಾರಣೆ ಮತ್ತು ಭಾರತೀಯರಿಗೆ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯದ ಕುರಿತು ಸಲಹೆ ನೀಡಲು ಒಂದು ಸಮಿತಿಯು ನೇಮಕಗೊಳ್ಳಬೇಕು ಎನ್ನುವ ಆಗ್ರಹವಿದ್ದಿತು. ಆದರೆ ಆಗಿನ ಬ್ರಿಟಿಷ್ ಸರ್ಕಾರಕ್ಕೆ ಮುಂದೆ ರಚನೆಯಾಗಬಹುದಾದ ಲೇಬರ್ ಪಕ್ಷದ ಸರ್ಕಾರದ ಬಗ್ಗೆ ಅನುಮಾನಗಳಿದ್ದವು. ಲೇಬರ್ ಪಕ್ಷದ ಸರ್ಕಾರವು ಭಾರತೀಯರಿಗೆ ಬಹಳಷ್ಟು ರಿಯಾಯಿತಿಗಳನ್ನೂ ಸೌಲಭ್ಯಗಳನ್ನೂ ನೀಡಬಹುದು ಎನ್ನುವುದನ್ನು ತಪ್ಪಿಸಲು ಅವಸರದಿಂದಲೇ ಜಾನ್ ಸೈಮನ್ ಎನ್ನುವ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಸಮಿತಿಯೊಂದು ರಚಿತವಾಯಿತು. ಅದು ಭಾರತೀಯರ ಪ್ರಾತಿನಿಧ್ಯವೇ ಇಲ್ಲದ ಏಳು ಮಂದಿ ಬ್ರಿಟಿಷ್‌ರ ಸಮಿತಿ. ಆಗಿನ ವೈಸರಾಯ್ ಇಶ್ವಿನ್ ಈ ಸಮಿತಿಯನ್ನು ಘೋಷಿಸಿದರು. ಭಾರತೀಯ ಸದಸ್ಯರು ಪಕ್ಷಪಾತವಿಲ್ಲದೆ ಪೂರ್ವಗ್ರಹ ಪೀಡಿತರಾಗದೆ ಕಾರ್ಯನಿರ್ವಹಿಸಲು ಸಾಧ್ಯವಾಗದು. ಆದುದರಿಂದ ಸಮಿತಿಯಲ್ಲಿ ಬ್ರಿಟಿಷ್ ಸದಸ್ಯರು ಮಾತ್ರ ಇರುವರು ಎಂದು ಇರ್ವಿನ್ ತಮ್ಮ ಪಟ್ಟಿಯನ್ನು ಸಮರ್ಥಿಸಿಕೊಂಡರು.

ಸಂಗ್ರಾಮ

ಪ್ರಾರಂಭದಲ್ಲೇ ಈ ಸಮಿತಿಗೆ ವಿರೋಧವು ವ್ಯಕ್ತವಾಯಿತು. ಸೈಮನ್ ಸಮಿತಿಯು ತನ್ನ ಅಧ್ಯಯನಕ್ಕಾಗಿ ಭಾರತದಲ್ಲಿ ಪ್ರವಾಸ ಮಾಡಿದ ಪ್ರತಿಯೊಂದು ನಗರಗಳಲ್ಲೂ ಬೃಹತ್ ಪ್ರತಿಭಟನೆಗಳು ನಡೆದವು. ಕಪ್ಪು ಬಾವುಟಗಳೂ 'ಗೋ ಬ್ಯಾಕ್ ಸೈಮನ್ ಎನ್ನುವ ಘೋಷಣೆಗಳೂ ಎದುರಾದವು. ವಿದೇಶಗಳಲ್ಲೂ ಅಲ್ಲಿಯ ಭಾರತೀಯರಿಂದ ಪ್ರದರ್ಶನಗಳು ನಡೆದವು. ಲಂಡನ್ನಿನಲ್ಲೂ ನಳಿನಾಕ್ಷ ಸನ್ಯಾಲ್ ಸಂಶೋಧನಾ ಎನ್ನುವ ವಿದ್ಯಾರ್ಥಿಯ ನೇತೃತ್ವದಲ್ಲಿ ಪ್ರದರ್ಶನವೊಂದು ನಡೆಯಿತು. ಇದರಿಂದ ಆಂಗ್ಲ ಸರ್ಕಾರಕ್ಕೆ ಇರಿಸು ಮುರಿಸು ಉಂಟಾದುದು ಸಹಜವೆ. ಸನ್ಯಾಲನನ್ನು ಬಂಧಿಸಲಾಯಿತು. ಅವನಿಗೆ ತನ್ನ ಪರವಾಗಿ ವಕೀಲರನ್ನು ನೇಮಿಸುವ ಆರ್ಥಿಕ ಸಹಾಯವು ದೊರೆಯಲಿಲ್ಲ. ಅವನು ತನ್ನ ಪರವಾಗಿ ತಾನೇ ವಾದಿಸಿ ಗೆದ್ದನು. ಮುಖ ಭಂಗಗೊಂಡ ಪೊಲೀಸರು ವಾಹನ ಸಂಚಾರವನ್ನು ತನ್ನ ಪ್ರದರ್ಶನದಿಂದ ಅಡ್ಡಿಯುಂಟು ಮಾಡಿದ ಕಾರಣದಿಂದ ಅವನಿಗೆ 2 ಪೌಂಡುಗಳ ದಂಡವಿಧಿಸಿ ತನ್ನ ಯಜಮಾನಿಕೆಯನ್ನು ಖಚಿತ ಪಡಿಸಿಕೊಂಡಿತು.

1928ರ ಅಕ್ಟೋಬರ್ 30ರಂದು ಸೈಮನ್ ಸಮಿತಿಯ ಭೇಟಿಯ ವಿರುದ್ಧ ಲಾಹೋರಿನಲ್ಲಿ ಬಹುದೊಡ್ಡ ಪ್ರದರ್ಶನವು ನಡೆಯಿತು. ಅದರ ನೇತೃತ್ವ ವಹಿಸಿದವರು ಹಿರಿಯ ಮುಖಂಡರಾದ ಲಾಲಾ ಲಜಪತ್‌ರಾಯ್ ರವರು. ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರಿದ ಪೊಲೀಸ್ ಪಡೆಯು ಪ್ರದರ್ಶನಕಾರರನ್ನು ತಡೆದು ತಳ್ಳಲು ಪ್ರಯತ್ನಿಸಿತು. “ಸೈಮನ್ ಸಮಿತಿಯ ಕಣ್ಣಿಗೆ ಪ್ರದರ್ಶನಕಾರರ ಪ್ರತಿಭಟನೆಯು ಕಾಣಬಾರದು ಎನ್ನುವುದು ಆಂಗ್ಲ ಸರ್ಕಾರದ ಇಚ್ಛೆಯಾದರೆ; ಸದಸ್ಯರ ಕಣ್ಣನ್ನು ಕಟ್ಟಿ ಸರ್ಕಾರದ ಬಂಗ್ಲೆಗೆ ಕರೆದೊಯ್ಯಲಿ ಎಂದು ಲಾಲಾ ಲಜಪತ್ ರಾಯ್ ಗುಡುಗಿದರು. ಪ್ರದರ್ಶನದ ತೀವ್ರತೆ ಹೆಚ್ಚಾಗುತ್ತಿದ್ದಂತೆ, ಪೋಲಿಸ್ ಸೂಪರಿಟೆಂಡೆಂಟ್ ಜೇಮ್ಸ್ ಸ್ಕಾಟ್ ಲಾಠಿಚಾರ್ಜ್ ಮಾಡುವಂತೆ ಅಜ್ಞಾಪಿಸಿದನು. ಪ್ರದರ್ಶನಕಾರರು ಚದುರಿದರು. ಅದು ಕೆಲವು ಕ್ಷಣಗಳ ಕಾಲ ಮಾತ್ರ. ತಮ್ಮ ನಾಯಕರಾದ ಲಾಲಾ ಲಜಪತ್‌ರಾಯ್ ಒಬ್ಬರೇ ತನ್ನ ಜಾಗದಿಂದ ಕದಲದೇ ನಿಂತಿರುವುದನ್ನು ಕಂಡು ಪ್ರದರ್ಶನಕಾರರು ಮತ್ತೆ ಅವರ ಸುತ್ತ ಧಾವಿಸಿ ಬಂದು ಸುತ್ತುವರೆದು ನಿಂತರು. (ಮುಂದುವರೆಯುತ್ತದೆ).