Hindu Vani
Index
ಸೂಕ್ತಿಶ್ರೀ
ದುಃಖ ದೂರವಾಗಲು ದೃಷ್ಟಿ ಬದಲಾಗಲಿ
ಶೋಕಸ್ಥಾನಸಹಸ್ರಾಣಿ ದುಃಖಸ್ಥಾನಶತಾನಿ ಚ।
ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್ ॥ 39॥
'ಮನುಷ್ಯನಿಗೆ ಶೋಕಪಡುವುದಕ್ಕೆ ಸಾವಿರ ವಿಷಯಗಳು ಸಿಗುತ್ತವೆ. ದುಃಖ ಪಡುವುದಕ್ಕೆ ನೂರಾರು ಕಾರಣಗಳು ಒದಗುತ್ತವೆ. ಹೀಗೆ ಸದಾ ಶೋಕ-ದುಃಖ ಗಳಿಗೀಡಾಗುವವನು ಮೂಢನೇ ಹೊರತು ಪಂಡಿತನಲ್ಲ.”
ದುಃಖವಾಗಲಿ ಶೋಕವಾಗಲಿ ನಮ್ಮ ಅನುಮತಿ ಕೇಳಿ ಬರುವುದಿಲ್ಲ. ಜಗತ್ತಿನ ಸ್ವರೂಪದಲ್ಲಿಯೇ ಆಗಿಂದಾಗ ವೈಪರೀತ್ಯಗಳೂ ಅಸಮತೋಲಗಳೂ ಉಂಟಾಗುವ ಸಂಭವ ಅಡಗಿದೆ. ಹೇಗೋ ಕಷ್ಟಪಟ್ಟು ಒಂದು ದುಃಖಕಾರಣವನ್ನು ನಿವಾರಿಸಿ ಕೊಂಡರೆ ಬೇರೆ ಕಾರಣಗಳೂ ಸಂದರ್ಭಗಳೂ ಸಾಲುಗಟ್ಟಿ ನಿಂತಿರುತ್ತವೆ. ಇದರಿಂದ ಯಾರಿಗೂ ವಿನಾಯಿತಿ ಇಲ್ಲ, ಮತ್ತು ಹೊರಗಿನ ಸಂದರ್ಭಗಳ ಮೇಲೆ ನಮ್ಮ ಅಧಿಕಾರ ನಡೆಯುವುದೂ ಇಲ್ಲ. ಕೆಲವೊಮ್ಮೆ ಸುಖಕಾರಣಗಳು ಒದಗಿದಂತೆ ಅಷ್ಟೇ ಸ್ವಾಭಾವಿಕವಾಗಿ ಕೆಲವೊಮ್ಮೆ ದುಃಖಕಾರಣಗಳೂ ಎದುರಾಗುತ್ತವೆ. ಮಾನಸಿಕ ಕ್ಷೇಶಗಳೊದಗಿದಾಗಲೂ ಅವುಗಳಿಂದ ವಿಚಲಿತರಾಗದೆ ಸಂಯಮದಿಂದಿರುತ್ತಾರೆ ಪ್ರಬುದ್ಧಮನಸ್ಕರು. ಇದು ಪರಮಾರ್ಥಶ್ರದ್ಧೆಯಿಂದ ಶಕ್ಯವಾಗುತ್ತದೆ. ಹೀಗಿರುವಾಗ ಆಗಂತುಕ ಬಾಹ್ಯ ಅಹಿತಕರ ಸನ್ನಿವೇಶಗಳುಂಟಾದಾಗ ಅವುಗಳಿಂದ ಸ್ತಿಮಿತತೆಯನ್ನು ಕಳೆದುಕೊಳ್ಳದಿರುವವರು 'ಪಂಡಿತ'ರು ಎಂದಿದೆ ಮೇಲಣ ಸೂಕ್ತಿ, ಸಂದರ್ಭಸನ್ನಿವೇಶಗಳ ಆಘಾತದಿಂದ ಮುಕ್ತರಾಗುವುದು ಶಕ್ಯವಿರದಿರಬಹುದು; ಆದರೆ ಚಿಂತೆಯಿಂದಲಂತೂ ಮುಕ್ತರಾಗಲು ಯತ್ನಿಸುತ್ತಿರಬೇಕು ಎಂಬುದು ಬೋಧೆ.
“ದುಃಖಸ್ಯಾನಂತರಂ ಸೌಖ್ಯ ಮತಿಮಾತ್ರಂ ದೇಹಿನಾಮ್” (ಮನುಷ್ಯರಿಗೆ ದುಃಖದ ತರುವಾಯ ಉಂಟಾಗುವ ಸೌಖ್ಯವು ಹೆಚ್ಚು ಆಸ್ವಾದ್ಯವಾಗಿರುತ್ತದೆ) - ಎಂದಿದೆ 'ಕ್ಷತ್ರ ಚೂಡಾಮಣಿ'.
ಭಾರತದ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ನಿವೃತ್ತರಾದ ಮೇಲೆ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಅಮೆರಿಕಕ್ಕೆ ಭೇಟಿ ಕೊಡುವ ಸಂದರ್ಭ ಒದಗಿತು. ಆ ಸಮಯ ದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದವರು ಜಾನ್ ಎಫ್. ಕೆನೆಡಿ, ರಾಧಾಕೃಷ್ಣನ್ ಅವರು ವಾಶಿಂಗ್ಟನ್ ವಿಮಾನನಿಲ್ದಾಣದಲ್ಲಿ ಇಳಿಯುವ ವೇಳೆಗೆ ಕಾರ್ಮೋಡ ಕವಿದು ಬೆಳಕು ಮಾಯವಾಗಿ ಕುಂಭದ್ರೋಣವಾಗಿ ಮಳೆ ಸುರಿಯತೊಡಗಿತ್ತು. ವಿಮಾನದಿಂದ ಹೊರಬರುವುದೂ ದುಸ್ತರವಾಗಿತ್ತು.
ಅವರು ವಿಮಾನದಿಂದ ಕೆಳಕ್ಕೆ ಇಳಿದು ಬಂದೊಡನೆ ಅವರಿಗೆ ಅಧ್ಯಕ್ಷ ಕೆನೆಡಿ ಸ್ವಾಗತ ಕೋರಿ ಹಸ್ತಲಾಘವ ನೀಡಿ ಹೇಳಿದರು: “ನೀವು ಬರುತ್ತಿದ್ದಂತೆ ಇಲ್ಲಿ ಕೆಟ್ಟ ಹವೆ ಮುಸುಕಿರುವುದು ನನಗೆ ಖೇದ ತಂದಿದೆ.”
ಇದಕ್ಕೆ ಡಾ. ರಾಧಾಕೃಷ್ಣನ್ ಮುಗುಲ್ನಕ್ಕು ಉತ್ತರಿಸಿದರು: “ಅಧ್ಯಕ್ಷ ಮಹಾಶಯರೆ, ಕೆಟ್ಟ ಸಂಗತಿಗಳನ್ನೂ ಅಸೌಕರ್ಯಗಳನ್ನೂ ತಪ್ಪಿಸು ವುದಾಗಲಿ ಬದಲಾಯಿಸುವುದಾಗಲಿ ನಮ್ಮ ನಿಯಂತ್ರಣದಲ್ಲಿಲ್ಲ. ಆದರೆ ಅವುಗಳ ಬಗೆಗೆ ನಮ್ಮ ದೃಷ್ಟಿಯನ್ನು ನಾವು ಬದಲಾಯಿಸಿಕೊಳ್ಳಬಹುದು; ಇಷ್ಟಂತೂ ನಮ್ಮ ಸ್ವಾಧೀನದಲ್ಲಿದೆಯಲ್ಲವೆ!”
.