Hindu Vani
Index
ಕತೆಕತೆ ಕಾರಣ
ವೀಣೆ ಸುಬ್ಬಣ್ಣನವರ ಉದಾರತೆ
ವೀಣೆ ಸುಬ್ಬಣ್ಣನವರು “ರಾಯಲ್‌ಸ್ಕೂಲ್‌ನಲ್ಲಿ ಜೊತೆಯಾಗುತ್ತಿದ್ದರು. ಮತ್ತು ಸುಬ್ಬಣ್ಣನವರು ಸಮಾಗಮವಾಗುತ್ತಿದ್ದಿತು ಮತ್ತು ಮುಂದೆ ಮಹಾರಾಜರಾದ ಚಾಮರಾಜ ಒಡೆಯರ್‌ರವರೂ ಸಹಪಾಠಿಗಳಾಗಿದ್ದರು. ಇವರೊಂದಿಗೆ ಶೇಷಣ್ಣನವರೂ ಚಾಮರಾಜ ಒಡೆಯರು ಪಿಟೀಲು, ಶೇಷಣ್ಣನವರು ವೀಣೆ ಹಾಡುಗಾರಿಕೆಯಲ್ಲಿ ಸೇರಿದರೆ ಅದು ಸಂಗೀತದ ಅಪೂರ್ವ .
ತಂಜಾವೂರಿನಲ್ಲಿ ಕೃಷ್ಣ ಭಾಗವತ ದೊಡ್ಡ ಸಂಗೀತಗಾರರು. ಅವರು ಕಲ್ಯಾಣಿ ರಾಗವನ್ನು ಚೆನ್ನಾಗಿ ಹಾಡುತ್ತಿದ್ದರು. ಅವರನ್ನು ಕಲ್ಯಾಣಿ ಕೃಷ್ಣ ಭಾಗವತರ್ ಎಂದೇ ಕರೆಯುತ್ತಿದ್ದರು. ಕರ್ನಾಟಕದ ಸಂಗೀತಗಾರರ ಕಲ್ಯಾಣಿ ರಾಗದ ವಿದ್ವತ್ತು ಅಷ್ಟಕಷ್ಟೇ ಎಂದೂ ಅವರು ಹೀಯಾಳಿಸುತ್ತಿದ್ದರು. ಶೇಷಣ್ಣನವರೂ ಸುಬ್ಬಣ್ಣನವರೂ ತಂಜಾವೂರಿನಲ್ಲಿ ಒಂದು ಕಛೇರಿಯನ್ನು ನಡೆಸಬೇಕಾಗಿದ್ದಿತು. ಅಲ್ಲಿ ಅವರಿಗೆ ಕೃಷ್ಣ ಭಾಗವತರ್‌ರವರ ವಿಚಾರ ತಿಳಿಯಿತು. ಕರ್ನಾಟಕದ ಸಂಗೀತಗಾರರಿಗೆ ಕಲ್ಯಾಣಿ ರಾಗದ ವಿಸ್ತಾರ ಸಾಧ್ಯವಿಲ್ಲ ಎನ್ನುವ ಮಾತನ್ನು ಅಳಿಸಬೇಕೆಂದು ಇಬ್ಬರೂ ನಿಶ್ಚಯಿಸಿದರು. ಅದಕ್ಕಾಗಿ ಇಬ್ಬರೂ ಸೇರಿ ಹತ್ತು ದಿನಗಳ ಕಾಲ ಹಠತೊಟ್ಟು ಕಲ್ಯಾಣಿರಾಗದ ಭಾವ ಮತ್ತು ಮರ್ಮವನ್ನು ರೂಢಿಸಿಕೊಂಡರು. ತಂಜಾವೂರು ಮಹಾರಾಜರ ಮುಂದೆ ನಡೆದ ಆ ಕಛೇರಿಯಲ್ಲಿ ಶೇಷಣ್ಣನವರ ವೀಣೆ ಮತ್ತು ಸುಬ್ಬಣ್ಣನವರ ಶಾರೀರದಲ್ಲಿ ಕಲ್ಯಾಣಿರಾಗವು ಸೊಗಸಾಗಿ ಪ್ರಸ್ತುತಗೊಂಡಿತು. ಮಹಾರಾಜರು ಇಬ್ಬರನ್ನೂ ಸತ್ಕರಿಸಿ “ಕಲ್ಯಾಣಿ ರಾಗವು ನಮ್ಮದೇ ಸ್ವತ್ತು ಎಂದುಕೊಂಡಿದ್ದೇವೆ. ಆದರೆ ಈಗ ನೋಡಿದರೆ ನೀವಿಬ್ಬರೂ ಅದನ್ನು ಸಂಪೂರ್ಣವಾಗಿ ಸಿದ್ದಿಸಿಕೊಂಡಿದ್ದೀರಿ” ಎಂದರು. ಹೀಗೆ ಇಬ್ಬರೂ ಸೇರಿ ಕರ್ನಾಟಕದ ಹರಿಮೆಯನ್ನು ಉಳಿಸಿದರು.
ಸುಬ್ಬಣ್ಣನವರು ಅವರ ಮನೆಯಲ್ಲಿ ಪರಊರಿನಿಂದ ಬಂದ ಸಂಗೀತಗಾರರ ಕಛೇರಿಗಳನ್ನು ಏರ್ಪಡಿಸಿ ಉತ್ತಮ ಸಂಭಾವನೆಯನ್ನೇ ಕೊಡುತ್ತಿದ್ದರು. ಒಮ್ಮೆ ವಿಜಯನಗರದಿಂದ ವೆಂಕಟರಮಣದಾಸರೆಂಬ ವೈಣಿಕರು ಮೈಸೂರಿಗೆ ಬಂದಿದ್ದರು. ಅವರ ವೀಣೆಯನ್ನು ಕೇಳಿದ ಸುಬ್ಬಣ್ಣನವರು ಬಹಳ ಉದಾರತೆಯಿಂದ “ಆಹಾ ಇದು ನಿಜವಾದ ವೀಣೆ, ನಾವೆಲ್ಲ ನುಡಿಸುವುದು ಏಣಿ” ಎಂದು ಉದ್ಗಾರವೆತ್ತಿದರಂತೆ.
ಮಹಾವೈದ್ಯನಾಥ ಅಯ್ಯರ್ ಆ ಕಾಲದ ಶ್ರೇಷ್ಠ ಹಾಡುಗಾರರು. ಅವರ ಕಛೇರಿಯೂ ಸುಬ್ಬಣ್ಣನವರ ಮನೆಯಲ್ಲಿ ಏರ್ಪಟ್ಟತ್ತು. ಅವರ ಸಂಗೀತವನ್ನು ಕೇಳಿದ ಸುಬ್ಬಣ್ಣ ತಮ್ಮ ಬೆರಳಿನಲ್ಲಿದ್ದ ಅತ್ಯಂತ ಬೆಲೆಯ ಪಚ್ಚೆ ಉಂಗುರವನ್ನು ತೆಗೆದು ಅಯ್ಯರ್ ಬೆರಳಿಗೆ ತೊಡಿಸಿದರು. “ಉಂಗುರಕ್ಕೆ ಈಗ ಸರಿಯಾದ ಸ್ಥಾನ ದೊರಕಿತು” ಎಂದರು. ಅದಕ್ಕೆ ಉತ್ತರವಾಗಿ ವೈದ್ಯನಾಥ ಅಯ್ಯರ್ ಸುಬ್ಬಣ್ಣನವರ ಔದಾರ್ಯವನ್ನು ಕಂಡು “ಕೋಟೆಗೆ ಮಹಾರಾಜರು ಪ್ರಭುಗಳು. ಪೇಟೆಗೆ ಪ್ರಭುಗಳು ನೀವೇ” ಎಂದರು.
ಒಮ್ಮೆ ಶ್ರೀನಿವಾಸ ಅಯ್ಯಂಗಾರ್ ಎನ್ನುವ ವಿದ್ವಾಂಸರು ಮದ್ರಾಸಿನಿಂದ ಬಂದಿದ್ದರು. ಎಂದಿನಂತೆ ಅರಮನೆಯ ಕಛೇರಿಯ ನಂತರ ಸುಬ್ಬಣ್ಣನವರ ಮನೆಯಲ್ಲೂ ಕಛೇರಿಯಾಗಬೇಕಾಗಿತ್ತು. ಆದರೆ ಸಂಗೀತಗಾರರು ಸಪ್ಪೆ ಮುಖದಲ್ಲೇ ಕುಳಿತಿದ್ದರು. “ಇವತ್ತು ಕಛೇರಿ ಬೇಡ, ರಾಮನಾಡಿನ ಮಹಾರಾಜರು ಕೊಟ್ಟ ಉಂಗುರ ಕಳೆದುಕೊಂಡು ಬಿಟ್ಟೆ, ಮನಸ್ಸೇ ಸರಿಯಾಗಿಲ್ಲ” ಎಂದರು. ಸುಬ್ಬಣ್ಣನವರು ಬಿಡಬೇಕಲ್ಲ! ಒಳಗೆ ಹೋದವರೆ ಉಂಗುರಗಳನ್ನು ಇಟ್ಟ ಪೆಟ್ಟಿಗೆಯನ್ನೇ ತಂದು, ವಿದ್ವಾಂಸರು ವಿವರಿಸಿದ ರೀತಿಯ ಅದಕ್ಕಿಂತಲೂ ಬೆಲೆಬಾಳುವ ಉಂಗುರವನ್ನು ಹೆಕ್ಕಿ ಅವರ ಬೆರಳಿಗೆ ತೊಡಿಸಿಬಿಟ್ಟರು. ಈಗಿನ್ನು ನಿಮ್ಮ ಸಂಗೀತದಿಂದ ನಮ್ಮನ್ನು ಸಂತೋಷಪಡಿಸಿ ಎಂದರು. ಕಛೇರಿ ಅದ್ಭುತವಾಗಿ ನಡೆಯಿತು. ಕಛೇರಿ ನಡೆದ ನಂತರ ಅವರನ್ನು ಮತ್ತೆ ಮನಬಿಚ್ಚಿ ಸನ್ಮಾನಿಸಿದರು.
ಸುಬ್ಬಣ್ಣನವರಿಗೆ ಒಂದು ಜಮೀನು ತಮಗೆ ಸೇರಿರುವುದು ಅವರಿಗೇ ತಿಳಿದಿರಲಿಲ್ಲ. ಒಂದು ದಿನ ಒಬ್ಬ ಗೃಹಸ್ಥರು ಬಂದು ಆ ಜಮೀನಿನ ವಿಚಾರವನ್ನು ಮಾತನಾಡುತ್ತ ಅದರ ಮಾಲೀಕರು ನೀವೇ ಎಂದು ಹೇಳಿದರು. ಅಷ್ಟಕ್ಕೆ ನಿಲ್ಲದೆ, ಅದನ್ನು ನನಗೆ ಕೊಟ್ಟರೆ ನಿಮ್ಮಿಂದ ಬಹಳ ಉಪಕಾರವಾಗುತ್ತದೆ ಎಂದರು. ಸುಬ್ಬಣ್ಣನವರು, “ಅಷ್ಟೇ ತಾನೆ, ಇನ್ನು ಅದು ನಿಮಗೇ ಸೇರಿದುದು” ಎಂದು ಬಿಟ್ಟರು.
ಒಮ್ಮೆ ಮಹಾರಾಜರಾದ ಚಾಮರಾಜ ಒಡೆಯರೊಂದಿಗೆ ಸುಬ್ಬಣ್ಣನವರು ನೀಲಗಿರಿಗೆ ಪ್ರವಾಸ ಹೋದರು. ಅಲ್ಲಿ ಸುಬ್ಬಣ್ಣನವರಿಗೆ ಜ್ವರ ಕಾಡಿತು. ವೈದ್ಯರು ಹೊಟ್ಟೆಗೆ ಗಂಜಿಯನ್ನು ಮಾತ್ರ ಕುಡಿಯಬೇಕೆಂದು ಪಥ್ಯವನ್ನು ಹೇಳಿದರು. ಆದರೆ ಸುಬ್ಬಣ್ಣನವರಿಗೆ ಗಂಜಿ ಹಿಡಿಸುತ್ತಲೇ ಇರಲಿಲ್ಲ. ಇದು ಮಹಾರಾಜರ ಕಿವಿಗೆ ಮುಟ್ಟಿತು. ಅವರೇ ಸುಬ್ಬಣ್ಣನವರ ಬಳಿ ಬಂದರು. ಸ್ನೇಹದ ಮಾತುಗಳಿಂದ ಕೊಂಚಕೊಂಚವಾಗಿ ಗಂಜಿ ಕುಡಿಸಿದರು. ಆದರೆ ವಾಕರಿಸಿಕೊಂಡ ಸುಬ್ಬಣ್ಣ ವಾಂತಿ ಮಾಡಿಕೊಂಡರು. ಅದು ಪ್ರಭುಗಳ ಉಡುಪಿನ ಮೇಲೂ ಬಿದ್ದಿತು. ಆದರೆ ಮಹಾರಾಜರು ಒಂದಿಷ್ಟೂ ಬೇಸರಿಸದೆ ಮೈಮೇಲೆ ಸಿಡಿದ ವಾಂತಿಯನ್ನು ಒರೆಸಿಕೊಂಡರು. “ಮತ್ತೆ ಸ್ವಲ್ಪವಾಗಿ ಗಂಜಿ ಕುಡಿಸಿರಿ. ಆಗುವುದಿಲ್ಲವೆಂದರೆ ನಮಗೆ ತಿಳಿಸಿ” ಎಂದು ಹೇಳಿ ಹೋದರು. ಇಬ್ಬರಲ್ಲೂ ಇದ್ದ ಪರಸ್ಪರ ಸ್ನೇಹ ಅಂತಹದು.
ಅರಮನೆಯಿಂದ ಸಂಬಳ ಪಡೆದು ಮನೆಗೆ ಬರುವುದರೊಳಗೆ ದಾರಿಯಲ್ಲಿ ಎಷ್ಟೋ ಜನ ತಮ್ಮ ಕಷ್ಟಕಾರ್ಪಣ್ಯಗಳನ್ನು ಬಣ್ಣಿಸುತ್ತ ಸುಬ್ಬಣ್ಣನವರಿಂದ ಅವರ ಸಂಬಳವನ್ನು ತಮ್ಮಲ್ಲಿ ಹಂಚಿಕೊಂಡು ಬಿಡುತ್ತಿದ್ದರು. ಒಮ್ಮೆ ಸುಬ್ಬಣ್ಣನವರು ಅರಮನೆಯ ಸಂಬಳಕ್ಕಾಗಿ ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡ ಮಹಾರಾಜರು ಅವರಿಗೆ “ಯಾರಾದರೊಬ್ಬರ ಕೈಯಲ್ಲಿ, ಒಂದು ಚೀಟಿ ಕಳುಹಿಸಿ ಅಷ್ಟೇ ಸಾಕು, ಸಂಬಳ ಕೊಡುತ್ತೇವೆ” ಎಂದು ಔದಾರ್ಯದ ಮಾತನ್ನು ಹೇಳುವಷ್ಟು ಅವರಿಬ್ಬರ ಸ್ನೇಹವಿದ್ದಿತು. ಅನೇಕರ ಮನೆಯ ಮದುವೆ ಮುಂಜಿಗಳು ಸುಬ್ಬಣ್ಣನವರ ಔದಾರ್ಯದಿಂದಲೇ ನಡೆಯುತ್ತಿದ್ದವು. ಹೀಗಿದ್ದರು ವೀಣೆ ಸುಬ್ಬಣ್ಣನವರು.