Hindu Vani
Index
ಇತಿಹಾಸ
1933ರ ಶಿವಮೊಗ್ಗ ಮುಸ್ಲಿಂ ದಂಗೆ
(ಶಿವಮೊಗ್ಗದಲ್ಲಿ ಪ್ರಮುಖ ಸ್ವಾತಂತ್ರ ಹೋರಾಟಗಾರರೂ ಪ್ರಸಿದ್ಧ ವರ್ತಕರೂ ನಂತರ ಸ್ವಾತಂತ್ರ್ಯ ವೀರ ಸಾವರ್ಕರರ ನಿಕಟವರ್ತಿಗಳಾಗಿ ಹಿಂದು ಮಹಾಸಭಾದ ನೇತೃತ್ವ ವಹಿಸಿದ ಭೂಪಾಳಂ ಚಂದ್ರಶೇಖರಯ್ಯನವರ ಸನ್ಮಾನ ಕೃತಿ “ಬದುಕು ಬರಹದಲ್ಲಿ ಅವರೇ ಬರೆದ ಒಂದು ಆತ್ಮವೃತ್ತ ಬರಹ)
1933 ನೇ ಇಸವಿಯಲ್ಲಿ ಶಿವಮೊಗ್ಗ ನಗರದಲ್ಲಿ ಕೊಪ್ಪಲು ಬಸಪ್ಪ ಮತ್ತು ಗುಲಾಮಿ ಎಂಬ ಈರ್ವರಲ್ಲಿ ಕುಸ್ತಿ ನಡೆಯಿತು. ನಿರ್ಣಾಯಕವಾಗದ ಈ ಪಂದ್ಯದಲ್ಲಿ ಹಿಂದೂ ಈ ಜನರು ಬಸವ ಬೀಳಲಿಲ್ಲವೆಂದೂ ಮುಸ್ಲಿಮರು ಗುಲಾಮಿ ಗೆದ್ದನೆಂದೂ ಘೋಷಣೆಗಳಲ್ಲಿ ತೊಡಗಿದರು. ಇದರ ಪರಿಣಾಮ ಎರಡು ಕೋಮುಗಳಲ್ಲಿ ಮನಸ್ತಾಪ ಬೆಳದಿತ್ತು. ಮೇ 17ನೇ ತಾರೀಕು ಇದು ಅತಿರೇಕಕ್ಕೆ ಹೋಗಿ ಬೈದಾಟ ಹೊಡೆದಾಟಗಳು ಆದವು. ಓರ್ವ ಮುಸ್ಲಿಂ ಸತ್ತು ಹೋದ. ಮುಸ್ಲಿಮರು ದೊಡ್ಡಪೇಟೆಯಲ್ಲಿ ಹಿಂದು ಅಂಗಡಿಗಳ ಲೂಟಿ ಮತ್ತು ಬೆಂಕಿ ಹಚ್ಚುವ ಕೃತ್ಯಗಳಲ್ಲಿ ತೊಡಗಿದರು. ಬಸವೇಶ್ವರ ದೇವಸ್ಥಾನಕ್ಕೆ ಬೆಂಕಿಕೊಟ್ಟು ಸುಟ್ಟು ಹಾಕಿದರು.
17-5-1933ರಂದು ರಾತ್ರಿ ನಾನು ನನ್ನ ವ್ಯಾಪಾರಕ್ಕೆ ಸಂಬಂಧಿಸಿದ ಕೆಲಸಗಳಿಗೆ ಪರವೂರಿಗೆ ಹೋಗಬೇಕಾಗಿತ್ತು. ಆದರೆ ಪುಣೆಯಲ್ಲಿ ಮಹಾತ್ಮರು (ಮಹಾತ್ಮಾಗಾಂಧಿಯವರು) ಉಪವಾಸ ಆರಂಭಿಸಿದ್ದರಿಂದ, ನನ್ನ ಪ್ರವಾಸವನ್ನು ಆ ದಿನ ರದ್ದು ಮಾಡಿ ಶಿವಮೊಗ್ಗದಲ್ಲೇ ಉಳಿದಿದ್ದೆ. ಆ ಬಗ್ಗೆ ಒಂದು ಸಭೆಯನ್ನು ಕಾಂಗ್ರೆಸ್ಸಿನ ಆಶ್ರಯದಲ್ಲಿ ನಡೆಸಿದ್ದಾಯಿತು. ಮರುದಿನ ಸಂಜೆ ತುಂಗಾತೀರದಲ್ಲಿ ಗೆಳೆಯರ ಜೊತೆ ಕುವೆಂಪು ಅವರು ಬರೆದಿದ್ದ 'ರಕ್ತಾಕ್ಷಿ' ನಾಟಕದ ವಾಚನವನ್ನು ಅವರಿಂದಲೇ ಕೇಳಿ, ಆ ಬಗ್ಗೆ ಚರ್ಚೆಯಾಗಿ ತಡವಾಗಿ ಮನೆಗೆ ಬಂದೆ. ಮನೆಯಲ್ಲಿ ಉಂಡು ಹೊರಬಂದಿದ್ದೆ ತಡ, ಹೊಸೂಡಿ ವೆಂಕಟಶಾಸ್ತ್ರಿಗಳು ಧಾವಿಸಿಬಂದು ನಮ್ಮ ತಂದೆಯವರಲ್ಲಿ ಹೇಳಿದರು. ಮುಸಲ್ಮಾನರು ನುಗ್ಗಿ ಬರುತ್ತಿದ್ದಾರೆ. ಊರಿಗೆ ಬೆಂಕಿ ಹಚ್ಚಿ, ಅಂಗಡಿ ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಚಂದ್ರುವನ್ನು (ನನ್ನನ್ನು) ಡೆಪ್ಯೂಟಿ ಕಮಿಶನರಲ್ಲಿ ಕಳುಹಿಸಿ ಬೇಗ ಪೊಲೀಸರನ್ನು ಕರೆಸಬೇಕು ಎಂದರು. ತಕ್ಷಣ ನಾನು ಕಾರಿನಲ್ಲಿ ಜಿಲ್ಲಾಧಿಕಾರಿ ಈಶ್ವರನ್‌ರ ಬಂಗಲೆಗೆ ಹೋಗಿ ಸಮಾಚಾರ ತಿಳಿಸಿ ಡಿ.ಎಸ್.ಪಿ. ದ್ವಾರಕಾನಾಥರ ಮನೆಗೆ ಬಂದೆ. ಅವರು ಊರಲ್ಲಿರಲಿಲ್ಲ. (ಅವರು ಆಗಿನ ನಿಯಮವಿದ್ದಂತೆ ಕಮಿಶನರಿಗೆ ಮೊದಲೇ ತಿಳಿಸದೇನೇ ಟೆನ್ನಿಸ್ ಮ್ಯಾಚ್ ನೋಡಲು ದಾವಣಗೆರೆಗೆ ಹೋಗಿದ್ದರು. ಇದಕ್ಕಾಗಿ ಅವರನ್ನು ಮುಂದೆ ವಜಾಮಾಡಿದರು). ಜಿಲ್ಲಾಧಿಕಾರಿ ಊರಿಗೂ ಹೊಸಬರು. ನಾನು ಅಲ್ಲಿಂದ ಹೆಲ್ತ್ ಆಫೀಸರರ ಮನೆಗೆ ಹೋಗಿ ಅವರನ್ನು ಎಬ್ಬಿಸಿ ಅವರ ಕಾರನ್ನು ತೆಗೆಸಿಕೊಂಡು ಪೇಟೆಗೆ ಬಂದೆ. ಬೆಂಕಿ ಆರಿಸಲು ನಲ್ಲಿಗಳಿಗೆ ನೀರು ಬಿಡಲು ಅವರ ಆಜ್ಞೆ ಬೇಕಾಗಿತ್ತು.
ದೊಡ್ಡಪೇಟೆಯಲ್ಲಿ ನೂರಾರು ಮುಸ್ಲಿಮರು ತಂಡೋಪತಂಡವಾಗಿ ಸೇರಿದ್ದರು; ಅವರ ಕೈಯಲ್ಲಿ ದೊಣ್ಣೆ, ಕತ್ತಿಗಳು, ಅಂಗಡಿಗಳ ಹಲಿಗೆ ಒಡೆದು ಲೂಟಿ, ಬೆಂಕಿಹಚ್ಚುವುದು ನಡೆಸಿದ್ದರು. ರಾವ್ ಲಕ್ಷ್ಮಣನ್ ಮತ್ತು ಸಯ್ಯದ್ ಹುಸೇನ್ ಸಬ್ ಇನ್ಸ್ ಪೆಕ್ಟರುಗಳು ಅತ್ಯಲ್ಪ ಪೊಲೀಸ್ ಸಿಬ್ಬಂದಿಯೊಂದಿಗೆ ಗುಂಪಿನ ದುಷ್ಕೃತ್ಯಗಳನ್ನು ತಡೆಯಲು ಬಹಳ ಸಾಹಸಮಾಡುತ್ತಿದ್ದರು.
ನಾನು ತಾಲೂಕ್ ಆಫೀಸಿಗೆ ಹೋಗಿ ಇಬ್ಬರು ಪೊಲೀಸರನ್ನು ಬಂದೂಕು ಸಮೇತ ಕರೆದುಕೊಂಡು ಬಂದೆ. ಅವರು ಅಲ್ಲಿ ಕಾವಲುಗಾರರಿದ್ದರು. ಅವರಲ್ಲಿ ಒಬ್ಬ ಹಿಂದು. ಮತ್ತೊಬ್ಬ ಮುಸಲ್ಮಾನ. ಅವರನ್ನು ಕರೆದುಕೊಂಡು ಬಂದು ಸಬ್‌ಇನ್ಸೆಕ್ಟರ್ ವಶಕ್ಕೆ ತಲುಪಿಸಿದೆ. ಆತ ಗುಂಡು ಹಾರಿಸಲು ಆಜ್ಞೆ ಮಾಡಿದ. ಮುಸ್ಲಿಂ ಪೊಲೀಸನ ಗುಂಡು ಹಾರಲೇ ಇಲ್ಲ. ಹಿಂದು ಪೊಲೀಸರ ಗುಂಡು ಆಕಾಶಕ್ಕೆ ಹಾರಿತು. ಆಮೇಲೆ ಬಂದೂಕಿಗೆ ಗುಂಡುಗಳೇ ಇರಲಿಲ್ಲ.
ಅಷ್ಟರಲ್ಲಿ ಮುಸ್ಲಿಂ ಗುಂಪು ಬಸವೇಶ್ವರ ದೇವಸ್ಥಾನಕ್ಕೆ ಬೆಂಕಿ ಇಟ್ಟು, ರಾಮಯ್ಯಶೆಟ್ಟರ ಸರಾಫ್ ಅಂಗಡಿ ಲೂಟಿಮಾಡಿ, ರಾವುತ್ ಮಲ್ ಬಟ್ಟೆ ಅಂಗಡಿ ಸುಲಿಗೆ ಮಾಡಿ, ಮುನಿಯಾಜಿರಾಯರ ಅಂಗಡಿಗೆ ಬೆಂಕಿಹಚ್ಚಿತು. ಮಹಾಲಿಂಗಪ್ಪನವರ ಮಹಡಿ ಮನೆಗೆ ಬೆಂಕಿಹಚ್ಚಲು ಹೋದಾಗ ಅವರು ಬಂದೂಕು ತೋರಿಸಿ ಪಾರಾದರು; ಸಿದ್ದೋಜಿರಾಯರೂ ಹೀಗೇ ಪಾರಾಗಿದ್ದರು. ಹಾಲ ಮಂಜಪ್ಪ ಹಾಗೂ ರಾಮರಾವ್ ಪವಾರ್ ಅಂಗಡಿಗೂ ಅಗ್ನಿಸ್ಪರ್ಶ ಆಗಿತ್ತು. ಕಾಳಿಕಾ ದೇವಾಲಯ ಗುಂಪಿನ ದಾಳಿಗೆ ಸಿಕ್ಕಿತ್ತು. ರಿಸರ್ವ್ ಪೋಲೀಸರನ್ನೂ ಮಿಲಿಟರಿ (ಮೈಸೂರ್ ಲ್ಯಾನ್ಸರ್)ಯನ್ನೂ ಕರೆತರಲು ಜಿಲ್ಲಾಧಿಕಾರಿಗಳು ನನಗೆ ತಿಳಿಸಿ ತಾವು ಹೆಲ್ತ್ ಆಫೀಸರರೊಡನೆ ಎರಡು ಮೈಲು ದೂರದ ವಾಟರಿಂಗ್ ಸ್ಟೇಶನ್‌ಗೆ ಹೊರಟರು. ನಾನು ಮತ್ತು ನನ್ನ ಡ್ರೈವರು ಮುಸಲ್ಮಾನರ ಗುಂಪಿನ ನಡುವೆ ಕಾರು ಸಹಿತ ಸಿಕ್ಕಿಬಿದ್ದೆವು. ತಾಲೂಕು ಆಫೀಸಿನ ಚೌಕದಲ್ಲಿ ನೂರಾರು ಜನರಿದ್ದು ಅವರಲ್ಲಿ ನನ್ನ ಪರಿಚಿತರೂ ಹಲವರಿದ್ದರು. “ಹಾಲಪ್ಪ ಮಂಜಪ್ಪ ಅವರ ಅಂಗಡಿಗೂ ಬೆಂಕಿಹಚ್ಚಿದಿರಿ. ಅದರ ಪಕ್ಕದಲ್ಲಿ ನಿಮ್ಮವರೇ ಆದ ಹಾಶಿಂ ಸೇಟರ ಅಂಗಡಿಗೂ ಬೆಂಕಿ ತಾಗಿದೆ. ಹೀಗೆ ಎಲ್ಲ ಮುಸಲ್ಮಾನರ ಅಂಗಡಿಗಳೂ ಬೆಂಕಿಗೆ ಬೀಳಲಿವೆ. ಮಿಲಿಟರಿಯನ್ನು ಕರೆತರಲು ಡೆ| ಕಮಿಶನರ್ ಹೇಳಿದ್ದಾರೆ” ಎಂದು ಅವರಿಗೆ ಹೇಳಿದೊಡನೆ ನಮಗೆ ದಾರಿಬಿಟ್ಟರು. ರಿಸ ಪೊಲೀಸರಿದ್ದಲ್ಲಿಗೆ ಹೋದರೆ ಅವರೆಲ್ಲ ತಮ್ಮ ಮನೆಗಳಲ್ಲಿ ಇಸ್ಪೀಟು ಆಡುತ್ತಿದ್ದು ಡೆ| ಕಮಿಶನರ್‌ರ ಲಿಖಿತ ಆಜ್ಞೆ ಇದ್ದರೆ ಮಾತ್ರ ಬರುವುದಾಗಿ ಹೇಳಿದರು: ಹಾಗೇ ಕೂತುಕೊಂಡು ಬಿಟ್ಟರು. ಮೈಸೂರು ಲ್ಯಾನ್ಸರ್ ಪಡೆಯಿದ್ದ ಕಡೆ ಹೋಗಿ ಅವರ ಕಮಾಂಡೆಂಟ್‌ಗೆ ತಿಳಿಸಿದೆ. (ಒಬ್ಬ ಮರಾಠಿಯವರಿದ್ದು ಅವರ ಹೆಸರು ಮರೆತಿದೆ). ಅವರು ಕೂಡಲೇ ಆಯುಧದಾರಿ ಪಡೆಯೊಂದಿಗೆ ಕುದುರೆಸವಾರಿ ಮಾಡಿ ಬಂದೇ ಬಿಟ್ಟರು. ರಾಮಣ್ಣ ಶೆಟ್ಟಿ ಪಾರ್ಕಿನಲ್ಲಿ ಮುಸಲ್ಮಾನರ ಗುಂಪು ರಾಶಿರಾಶಿ ಕಲ್ಲುಗಳನ್ನು ತೆಗೆದುಕೊಂಡು ಸೈನ್ಯದ ಮೇಲೆ ಪ್ರಯೋಗಮಾಡಿತು. ಸೈನಿಕರು ಗುಂಡುಹಾರಿಸಿದರು. ಗಾಯಗೊಂಡವರನ್ನು ಹೊತ್ತುಕೊಂಡು ಗುಂಪು ತುಂಗಾನದಿ ದಾಟಿ ಆಚೆ ಕಡೆ ಹೋಯಿತು. ನದಿಯ ಆಚೆ ಮದಾರಿ ಪಾಳ್ಯ ಎನ್ನುವ ಕೇರಿಯಿದೆ. ಅಲ್ಲಿ ಹೆಚ್ಚಾಗಿ ಮುಸ್ಲಿಮರೇ ವಾಸಿಸುತ್ತಿದ್ದುದ್ದು. ಈ ರೀತಿಯಾಗಿ ಗುಂಪು ಚದುರಿತು.
ಊರ ಗಣ್ಯರಿಗೆಲ್ಲ ಹೇಳಿಕಳುಹಿಸಿ ಎಲ್ಲರ ಕಾರುಗಳನ್ನು ತರಿಸಿದೆ. ಡಿ.ಎಸ್.ಪಿ. ದ್ವಾರಕಾನಾಥ ಅವರೂ ಅಷ್ಟೊತ್ತಿಗೆ ಬಂದರು. ಈ ಕಾರುಗಳಲ್ಲಿ ಪೊಲೀಸರು ಕೂತು ಊರಲ್ಲಿ ತಿರುಗಿದರು. ಆಯುಧಧಾರಿಗಳಾಗಿದ್ದ ಅನೇಕ ಮುಸಲ್ಮಾನರನ್ನು ಬಂಧಿಸಿದರು. ಬೀದಿಬೀದಿಗೆ ಹೋಗಿ ಹಿಂದೂ ಜನರನ್ನು ನಾನು ಪೇಟೆಗೆ ಕರೆತಂದೆ; ಬೆಂಕಿ ಆರಿಸುವ ಕೆಲಸದಲ್ಲಿ ನಾವೆಲ್ಲ ನಿರತರಾದೆವು, ಹಾಲಪ್ಪ ಮಂಜಪ್ಪ ಅವರ ಅಂಗಡಿ ಉರಿಯುತ್ತಿದ್ದು ಅವರ ಮನೆಮಂದಿಯೆಲ್ಲ ಹಿಂದುಗಡೆ ಮನೆಯಲ್ಲೇ ಇದ್ದಾರೆಂದು ಕೇಳಿ ನಾನು ಪಕ್ಕದ ಖಾದಿ ಭಂಡಾರದ ಮಾಳಿಗೆ ಮೇಲಿಂದ ಹಾಲಪ್ಪ ಮಂಜಪ್ಪ ಅವರ ಅಂಗಡಿಮಾಡಿನ ಮೇಲಿಂದ ಎಂಟು ಅಡಿ ಕೆಳಕ್ಕೆ ಧುಮುಕಿದೆ. ನಾಡಹಂಚು ಮುರಿದು ಉರಿಯುತ್ತಿದ್ದ ಅಂಗಡಿಯೊಳಕ್ಕೆ ನಾನು ಎದೆಮಟ್ಟ ಇಳಿದೆನಾದರೂ ಸುದೈವದಿಂದ ಮಾಳಿಗೆಯ ಮುರಿಯದೇ ಇದ್ದ ಭಾಗಕ್ಕೆ ಎರಡೂ ಕೈಗಳನ್ನು ಊರಿದ್ದರಿಂದ ಉಳಿದುಕೊಂಡೆ. ಮಾಳಿಗೆ ಹಿಂಭಾಗದಲ್ಲಿ ವಾಸದ ಮನೆಗೆ ಹೋಗಿ ಕೂಗಿದಾಗ, ಮಂಜಪ್ಪನವರು ಮಗುವೊಂದರೊಡನೆ ಬಂದರು. ತಾವು ಇನ್ನೊಂದು ಮನೆಯಲ್ಲಿ ಮನೆಮಂದಿಯೊಡನೆ ಸುರಕ್ಷಿತವಾಗಿರುವುದಾಗಿ ಹೇಳಿದರು. ನಾನು ಅಲ್ಲಿಂದ ಓಣಿಯಿಂದ ಹೊರಬಂದುದೇ ತಡ, ಅವರ ಅಂಗಡಿಯಲ್ಲಿ ಬೆಂಕಿಡಬ್ಬಗಳಿಗೆ ಬೆಂಕಿ ಆವರಿಸಿ 'ಭುಕ್ ಭುಗ್' ಎಂದು ಇಡೀ ಕಟ್ಟಡ, ಹಿಂಭಾಗ ಸಹ, ಉರಿದುಕೊಂಡಿತು. ದೈವಕೃಪೆಯಿಂದ ಅವರೆಲ್ಲ ಬದುಕಿದರೆಂದುಕೊಂಡು ಮುಂಭಾಗಕ್ಕೆ ಬಂದೆ. ಆಗ ಹಿಂದೂಗಳೆಲ್ಲ ಗುಂಪು ಸೇರಿ, ಮುಸಲ್ಮಾನರ ಮನೆಗಳಿಗೆ ಬೆಂಕಿಹಚ್ಚಲು ಸನ್ನದ್ದರಾಗುತ್ತಿದ್ದರು. ನಿರಪರಾಧಿಗಳ ಮನೆಗೆ ಬೆಂಕಿ ಹಚ್ಚಿದರೆ ಯಾವ ಸಾರ್ಥಕವೂ ಇಲ್ಲ. ಈಗ ಬೆಂಕಿ ಆರಿಸಿ ಅಪರಾಧಿಗಳನ್ನು ಹಿಡಿದು ಶಿಕ್ಷಿಸುವ ಕೆಲಸ ಮಾಡೋಣ' - ಎಂದು ಕೈಮುಗಿದು ಕೇಳಿಕೊಂಡೆ. ಇದು ಎಲ್ಲರಿಗೂ ಒಪ್ಪಿತವಾಗಿ ಬೆಂಕಿ ಆರಿಸುವುದು, ಹಾನಿಯ ಬಗ್ಗೆ ಫಿರ್ಯಾದಿ ಕೊಡುವುದು, ಅಪರಾಧಿಗಳ ದಸ್ತಗಿರಿಗೆ ನೆರವಾಗುವುದು ಮುಂತಾದ ಕೆಲಸ ಮಾಡಿದೆವು.
ನಾನು ಮನೆಗೆ ಹಿಂದಿರುಗುವಾಗ ಬೆಳಗಾಗಿತ್ತು. ಮಹಡಿಯ ಮೇಲೆ ನನ್ನ ಪತ್ನಿ ರಾಮರತ್ನ ನನಗಾಗಿ ಕಾಯುತ್ತ ನಿಂತೇ ಇದ್ದಳು. “ನಿಮಗೇನಾದರೂ ಅಪಾಯವಾದರೆ ನಾನು ಉಳಿಯುತ್ತಲೇ ಇರಲಿಲ್ಲ ಎಂದು ಅವಳು ಹೇಳಿದಳು. ಮುಂದೆ ಎರಡು ವರ್ಷದಲ್ಲಿ ಆಕೆ ತೀರಿಕೊಂಡಳು. ನನ್ನ ಅಣ್ಣ ನಂಜುಂಡಪ್ಪ, 'ನಿನ್ನೆ ನೀನು ಪ್ರವಾಸ ಹೋಗದ್ದರಿಂದ ಊರು ಉಳಿಯಿತು' ಎಂದರು.
ಎಂಥ ಕ್ಷುಲ್ಲಕ ಕಾರಣಗಳಿಗೆ ಹಿಂದೂ-ಮುಸ್ಲಿಂ ದಂಗೆಗಳಾಗುತ್ತವೆಂದು ತಿಳಿಸಲು ಬರೆದ ವಿವರ ಇದು. ಹಿಂದೂ-ಮುಸ್ಲಿಂ ಸಮಸ್ಯೆಯೆಂದರೆ ಅತ್ಯಂತ ಪ್ರಧಾನ ಸಮಸ್ಯೆಯೆಂದು ಲಾಲಾ ಲಜಪತರಾಯರ ಹೇಳಿಕೆ ಬೆಳಗಾಂವಿ ಕಾಂಗ್ರೆಸ್ಸಿನ ಕಾಲಕ್ಕೆ ಮಾಡಿದ್ದು ಮತ್ತೆಮತ್ತೆ ನಾನು ಜ್ಞಾಪಿಸಿಕೊಳ್ಳುತ್ತಿದ್ದೆ.
ಗಲಭೆಯಾದ ಮಾರನೇ ದಿನ ಗಲ್ಲಿಗಲ್ಲಿಗಳಲ್ಲಿ ಹುಡುಕಿ ಹಿಂದೂ-ಮುಸ್ಲಿಂ ಭೇದವಿಲ್ಲದೆ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಿದೆವು, ಕ್ಲಾರ್ಕ್‌ಪೇಟೆಯ ಒಂದು ಗುಡಿಸಲಲ್ಲಿ ಷರೀಫ್ ನರಳುತ್ತ ಬಿದ್ದಿದ್ದಾನೆಂದು ತಿಳಿದು ಅಲ್ಲಿಗೆ ಹೋದೆವು. ಕಾಲುಮುರಿದು ತೀವ್ರ ಗಾಯಗೊಂಡ ಅವನನ್ನು ಎತ್ತಿ ನಮ್ಮ ಕಾರಿನಲ್ಲಿ ಮಲಗಿಸಿ ಆಸ್ಪತ್ರೆಗೆ ಸೇರಿಸಿದ್ದರಿಂದ ಆತ ಬದುಕಿಕೊಂಡ. ಅವನನ್ನು ಆಸ್ಪತ್ರೆಗೆ ಸೇರಿಸುವಾಗ ಚೆನ್ನಗಿರಿ ರಾಮಸ್ವಾಮಿ ಶೆಟ್ಟರು ಬಂದಿದ್ದರು; ಅಲ್ಲದೆ ಆಗ ಪುರಸಭಾ ಉಪಾಧ್ಯಕ್ಷರಾಗಿದ್ದ ಮಹಾಲಿಂಗಪ್ಪನವರೂ ಬಂದಿದ್ದರು; ಷರೀಫ್ ತನ್ನ ಹೇಳಿಕೆಯಲ್ಲಿ - ತನಗೆ ಹೊಡೆದವರ ಜೊತೆಯಲ್ಲಿ ಅವನನ್ನು ಆಸ್ಪತ್ರೆಗೆ ಸೇರಿಸಿದ ನಮ್ಮ ಹೆಸರುಗಳನ್ನೂ ಹೊಡೆದವರೆಂದೇ ಡಿ.ಎಸ್.ಪಿ. ಯವರಿಗೆ ತಿಳಿಸಿದ್ದ. ಇದರಿಂದ ನಾವು ಮೂವರೂ ಆಪಾದಿತರೇ ಆಗಬೇಕಾಗಿತ್ತು. ಆಗ ಊರ ಪ್ರಸಿದ್ಧ ನ್ಯಾಯವಾದಿಗಳಾದ ಎಸ್. ಸೀತಾರಾಮಯ್ಯ, ಎ. ಅನಂತಯ್ಯ, ಟಿ. ವೆಂಕಟಶಾಸ್ತ್ರೀ, ಜಿ. ಶ್ರೀನಿವಾಸಯ್ಯಂಗಾರ್, ಎಚ್.ಕೆ.ವಿ. ಆಚಾರ್ - ಇವರೆಲ್ಲ ಜಿಲ್ಲಾಧಿಕಾರಿಗಳಿಗೆ ಭೂಪಾಳಂ ಚಂದ್ರಶೇಖರಯ್ಯ ಆಪಾದಿತರಾದರೆ ಅವರ ಪರವಾಗಿ ನಾವೇ ಡಿಫೆನ್ಸ್ ಸಾಕ್ಷಿ, ಎಂದು ಹೇಳಿ ನನ್ನ ಮತ್ತು ಚೆನ್ನಗಿರಿ ರಾಮಸ್ವಾಮಿಶೆಟ್ಟರ ಮೇಲೆಯೂ ಕೇಸುಬಾರದಂತೆ ಮಾಡಿದರು. ಆದರೆ ದುರದೃಷ್ಟದ ವಿಶಯವೆಂದರೆ ಮುನಿಸಿಪಲ್ ವೈಸ್- ಪ್ರೆಸಿಡೆಂಟ್ ಟಿ. ಮಹಾಲಿಂಗಪ್ಪನವರು ಆಪಾದಿತರಾಗ ಬೇಕಾಯಿತು. ಮುಂದೆ ಹೈಕೋರ್ಟಿನಲ್ಲಿ ಷರೀಫನ ಸಾಕ್ಷ್ಯ ನಂಬತಕ್ಕದ್ದಲ್ಲವೆಂದೂ ತನಗೆ ಉಪಕಾರ ಮಾಡಿದವರನ್ನೇ ಆಪಾದಿತರನ್ನಾಗಿ ಮಾಡಲು ಯತ್ನಿಸಿದನೆಂದೂ ಸ್ಥಿರಪಟ್ಟು ಹಿಂದೂ ಆಪಾದಿತರೆಲ್ಲರ ಖುಲಾಸೆ ಆಯಿತು.
ಈ ಪ್ರಕರಣದಲ್ಲಿ ಲೂಟಿ ಮತ್ತು ಬೆಂಕಿ ಹಚ್ಚಿದುದ್ದಕ್ಕಾಗಿ ಪೊಲೀಸರು 65 ಜನ ಮುಸ್ಲಿಮರನ್ನು ಬಂಧಿಸಿ ವಿಚಾರಣೆಗೆ ಗುರಿ ಮಾಡಿದರು. ಮ್ಯಾಜಿಸ್ಟ್ರೇಟ್ ಎಲ್ಲರನ್ನು ಸೇಷನ್ಸ್ ಕೋರ್ಟ್‌ನಲ್ಲಿ ವಿಚಾರಣೆಗೆ ಆಜ್ಞೆ ಮಾಡಿದರು. ಅಲ್ಲಿ 48 ಜನಕ್ಕೆ 14 ವರ್ಷ ಕಠಿಣ ಶಿಕ್ಷೆಯ ಆಜ್ಞೆಯಾಯಿತು. ಮುಂದೆ ಇದು ಹೈಕೋರ್ಟಿನಲ್ಲೂ ಖಾಯಂ ಆಯಿತು.
ಸತ್ತ ಮುಸ್ಲಿಮನ ಕೊಲೆಗಾಗಿ ಆರು ಜನ ಹಿಂದುಗಳನ್ನು ಆರೋಪಿಸಿ ಬಂಧಿಸಲಾಗಿದ್ದಿತು. ಸೆಷನ್ಸ್ ಕೋರ್ಟಿನಲ್ಲಿ ವಿಚಾರಣೆಯಾಯಿತು. ಅಲ್ಲಿಂದ ಅದು ಹೈಕೋರ್ಟಿಗೆ ಹೋಯಿತು. ಶ್ರೇಷ್ಠ ನ್ಯಾಯಾಧೀಶರ ಮುಂದೆ ವಾದವಿವಾದಗಳಾಗಿ ಎಲ್ಲರ ಬಿಡುಗಡೆಗೆಯಾಗಿ ಆ ತೀರ್ಪು ಮುಂದೆ ಖಾಯಂ ಆಯಿತು. ಆಗ ಮೈಸೂರಿನ ಹೈಕೋರ್ಟ್ ಶ್ರೇಷ್ಟ ನ್ಯಾಯಾಧೀಶರಾಗಿದ್ದವರು ಸರ್ ರೀಲಿ ಎಂಬವರು. ಹಿಂದುಗಳ ಪರವಾಗಿ ವಾದಿಸಿದವರು ಶಿವಮೊಗ್ಗದ ಖ್ಯಾತ ನ್ಯಾಯವಾದಿಗಳಾದ ಬಿ.ಜೆ. ನಾರಾಯಣ ಅಯ್ಯಂಗಾರರು.
.