Hindu Vani
Index
ವಿಪರ್ಯಾಸ
ಹೋಗಿ ದೇವರನ್ನೇ ಏನಾದರೂ ಮಾಡಲು ಹೇಳಿ
ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಎಂದರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ.ಆರ್. ಗವಾಯಿ. ಆದರೆ ಅವರೇನಾದರೂ ಹಿಂದು ಧರ್ಮವನ್ನು ಕಮ್ಮಿ ಗೌರವಿಸುತ್ತಿರುವವರೇ? ಅಥವಾ ಒಂದಿಷ್ಟು ಹೀಯಾಳಿಸುವರೇ?
ಇದು ಸುಮ್ಮನೆ ಬಂದ ಸಂಶಯದ ಪ್ರಶ್ನೆಯಲ್ಲ. ಮಧ್ಯಪ್ರದೇಶದಲ್ಲಿರುವ ಖಾಜುರಾಹೋ ದೇವಸ್ಥಾನಗಳು ಶಿಲ್ಪಕಲೆ ವಾಸ್ತು ವಿನ್ಯಾಸಗಳಿಗೆ ಪ್ರಸಿದ್ಧವಾದ ಸ್ಥಾನಗಳು. ಅಲ್ಲಿನ ಒಂದು ದೇವಸ್ಥಾನವು ಪ್ರಾಚೀನ ಸ್ಮಾರಕಗಳ ಇಲಾಖೆಗಳಿಗೆ ಸೇರಿದ್ದು ಸಂರಕ್ಷಿತ ಸ್ಮಾರಕವಾಗಿದೆ. ಅಲ್ಲಿರುವ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹದ ತಲೆಯನ್ನು ಉರುಳಿಸಿದ್ದು ವಿಗ್ರಹವನ್ನು ಅದೇ ಸ್ಥಿತಿಯಲ್ಲಿ ಅಲ್ಲಿ ಉಳಿಸಲಾಗಿದೆ. ದಲಾಲ್ ಎನ್ನುವ ಧಾರ್ಮಿಕ ವ್ಯಕ್ತಿಯೊಬ್ಬರಿಗೆ ತನ್ನ ದೇವರ ವಿಗ್ರಹದ ಅಂತಹ ಸ್ಥಿತಿಯನ್ನು ನೋಡಲಾಗದೆ ನ್ಯಾಯಾಲಯದಲ್ಲಿ ಆ ವಿಗ್ರಹವನ್ನು ದುರಸ್ತಿಗೊಳಿಸಿ ಮತ್ತೆ ಪ್ರತಿಷ್ಠಾಪಿಸಬೇಕೆಂದು ತಮ್ಮ ಅಹವಾಲನ್ನು ತೋಡಿಕೊಂಡರು.
ಆ ಪ್ರಕರಣವನ್ನು ತಮ್ಮ ಪೀಠದಲ್ಲಿ ವಿಚಾರಣೆಗೆ ತೆಗೆದುಕೊಂಡವರು ಮುಖ್ಯ ನ್ಯಾಯಾಧೀಶರಾದ ಬಿ. ಗವಾಯಿಯವರು. ಪ್ರಕರಣವನ್ನು ವಿಚಾರಣೆಗೆ ಆರಿಸಿಕೊಳ್ಳುವುದು ಒತ್ತಟ್ಟಿಗಿರಲಿ. ಗವಾಯಿಯವರು ತಮ್ಮ ಕಾನೂನು ಅಪೇಕ್ಷಿಸುವ ಮತ್ತು ವಿಧಿಸುವ ಲಕ್ಷ್ಮಣರೇಖೆಯನ್ನು ಮೀರಿಬಿಟ್ಟರು. ತುಟಿ ಮೀರಿ ಹಿಂದು ಭಕ್ತನೊಬ್ಬನನ್ನು ಹೀಯಾಳಿಸಿ ಬಿಟ್ಟರು.
“ಇಲ್ಲೇಕೆ ಬಂದಿರುವಿರಿ. ಹೋಗಿ ಆ ದೇವರನ್ನೇ ಏನಾದರೂ ಮಾಡಲು ಕೇಳಿಕೊಳ್ಳಿ ಎಂದರು. ನೀವು ನಿಜವಾದ ಭಕ್ತರಾದರೆ ಪ್ರಾರ್ಥನೆಯನ್ನೂ ಜಪವನ್ನೂ ಮಾಡಿಬಿಡಿ”. ಎಂದು ಅವರೆಂದ ಒಂದೊಂದು ಮಾತುಗಳನ್ನೂ ವಿಶ್ಲೇಷಿಸುತ್ತಾ ಗವಾಯಿಯವರ ಮನಸ್ಸು ಹಿಂದು ಧರ್ಮದ ಕುರಿತು, ದೈವ ಭಕ್ತಿಯ ಕುರಿತು ವಿಗ್ರಹ ಪೂಜೆಯ ಬಗ್ಗೆ ಏನೇನನ್ನು ಕಲ್ಪಿಸಿಕೊಂಡಿತು ಎಂದು ಬಹಳಷ್ಟು ಹೇಳಬಹುದು. ಆದರೆ ಅವರು ಇದೇ ಅರ್ಥದ ಮಾತುಗಳನ್ನು ಅಲ್ಲಾನ ಬಗ್ಗೆ ಪೈಗಂಬರರ ಬಗ್ಗೆ ಹೇಳಿದಿದ್ದರೆ ಏನಾಗಬಹುದಿತ್ತು ಎನ್ನುವುದುನ್ನು ಓದುಗರ ಕಲ್ಪನೆಗಳಿಗೆ ಬಿಡುತ್ತೇವೆ.
ಅವರ ಈ ಮಾತುಗಳಿಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಗೋಣಾಡಿಸುತ್ತಾ “ನನಗೆ ಮುಖ್ಯ ನ್ಯಾಯಾಧೀಶರು 10 ವರ್ಷಗಳಿಂದ ಪರಿಚಯ. ಅವರು ಎಲ್ಲಾ ದೇವಸ್ಥಾನಗಳಿಗೆ ಹೋಗುತ್ತಾರೆ” ಎಂದು ಒಗ್ಗರಣೆ ಬೇರೆ ಹಾಕಿದರು. ಅಂದರೆ ದೇವಸ್ಥಾನಕ್ಕೆ ಹೋದರೂ ಬುದ್ಧಿ ಬರಲಿಲ್ಲವಲ್ಲ!
ನ್ಯಾಯಾಧೀಶರೆನ್ನುವ ವ್ಯಕ್ತಿಯನ್ನು ನಮ್ಮ ದೇವಸ್ಥಾನಗಳ ಬಗ್ಗೆ ಕೇಳಬೇಕಾದ ಪರಿಸ್ಥಿತಿ ಬರಬಾರದಿತ್ತು. ಅದಕ್ಕಾಗಿಯೇ ದೇವಸ್ಥಾನಗಳನ್ನು ನಿರ್ವಹಿಸುವುದನ್ನು ಹಿಂದುಗಳ ಪಾಲಿಗೆ ಬಿಟ್ಟುಬಿಡಿ ಎಂದು ಹೇಳುತ್ತಿರುವುದು. ಹಿಂದೂಗಳನ್ನು ಹಿಂದೂ ನಂಬಿಕೆಗಳನ್ನು ಹೀಯಾಳಿಸುವ ಮಂದಿಗೆ ಈಗ ನ್ಯಾಯಾಧೀಶರೂ ಸೇರಿ ಬಿಟ್ಟರು.
ನಂಬಿಕೆ ಮತ್ತು ಶ್ರದ್ಧೆಗಳು ಸಂವಿಧಾನದ ರಕ್ಷಣೆಯನ್ನು ಪಡೆದ ಅಂಶಗಳು. ಇದನ್ನು ಎಲ್ಲರೂ ಅದರಲ್ಲೂ ನ್ಯಾಯಾಂಗವು ಗೌರವಿಸಲೇಬೇಕು. ಸಂವಿಧಾನಿಕ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಕಾನೂನು ರಕ್ಷಿಸಬೇಕು. ಮಾತ್ರವಲ್ಲ ಅವುಗಳ ಬಗ್ಗೆ ನ್ಯಾಯಾಲಯಗಳ ಗೌರವಯುತವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದು ಮತ್ತು ಅಪೇಕ್ಷಿಸುವುದು ಕಾನೂನನ್ನು ಗೌರವಿಸುವವರ ಹಕ್ಕು ಕೂಡ ಆಗಿದೆ.
ಮಾತು ಆಡಿದ ಮೇಲೆ ಆ ಕುರಿತು ಯಾವುದೇ ಸಮಜಾಯಿಸಿ ನೀಡುವುದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಸ್ಥಾನಕ್ಕೆ ಸರಿಗಟ್ಟದ ಸ್ಥಿತಿಯಾಗುತ್ತದೆ. ಇದೀಗ ಇಂತಹ ನ್ಯಾಯಾಧೀಶರು ರಾಷ್ಟ್ರಾಧ್ಯಕ್ಷರ ಬಗ್ಗೆಯೂ ತೀರ್ಮಾನಿಸಲು ಹೊರಟಿರುವರು.
ಶಿವ ಸಂಸಾರ
ಶಂಕರನು ರುಂಡಮಾಲೆ ಮತ್ತು ಸರ್ಪಗಳನ್ನು ಧರಿಸಿಕೊಂಡಿರುತ್ತಾನೆ. ಆದರೆ ಪಾರ್ವತಿಯು ಅತ್ಯಂತ ಸುಂದರವಾದ ಆಭೂಷಣಗಳನ್ನು ಧರಿಸಿಕೊಂಡಿರುತ್ತಾಳೆ. ಶಂಕರನ ಪುತ್ರ ಕಾರ್ತಿಕೇಯನು ಆರು ಮುಖಗಳುಳ್ಳವನು ಹಾಗೂ ಗಣೇಶನು ಉದ್ದವಾದ ಸೊಂಡಿಲು ಮತ್ತು ದೊಡ್ಡ ಹೊಟ್ಟೆಯುಳ್ಳವನೂ ಆಗಿದ್ದಾನೆ. ಇವರಿಗೆ ಕ್ರಮಶಃ ತಮ್ಮತಮ್ಮ ವಾಹನಗಳಾದ ಎತ್ತು, ಸಿಂಹ, ನವಿಲು ಮತ್ತು ಮೂಷಕಗಳಿವೆ. ಇವುಗಳು ಪರಸ್ಪರ ಒಂದು ಇನ್ನೊಂದನ್ನು ಭಕ್ಷಿಸುವಂತಹವು. ಹೀಗಿದ್ದರೂ ಸಹ ಶಂಕರನ ಪರಸ್ಪರ ವಿರುದ್ಧ ಸ್ವಭಾವದವರು ಕೂಡಿದ ಪರಿವಾರದಲ್ಲಿ ಯಾವಾಗಲೂ ಐಕ್ಯತೆಯಿರುತ್ತದೆ. ಇದೇ ಪ್ರಕಾರ ಪರಿವಾರದಲ್ಲಿ ವಿಭಿನ್ನ ಸ್ವಭಾವದವರ ಸಂಗಡ ತನ್ನ ಅಭಿಮಾನ ಮತ್ತು ಸುಖಭೋಗವನ್ನು ತ್ಯಾಗಮಾಡಿ ಇತರರ ಹಿತ ಮತ್ತು ಸುಖದ ಭಾವನೆಯನ್ನು ಇಟ್ಟುಕೊಳ್ಳುತ್ತಾ ಪರಸ್ಪರರಲ್ಲಿ ಪ್ರೇಮಪೂರ್ವಕ ಐಕ್ಯತೆಯಿಂದ ಇರಬೇಕು.
- ವೈ. ಎಲ್. ರಾಮಣ್ಣ, ವಿಜಯನಗರ
.