Hindu Vani
Index
ಪುರಾಣ
ಶುನಃಶೇಫಅಜೀಗರ್ತಿ
ಆದರೆ ಶುನಃಶೇಫನ ಕಥೆ ಋಗ್ವೇದದಿಂದ ಹಿಡಿದು ವಾಲ್ಮೀಕಿರಾಮಾಯಣ, ಭಾಗವತ, ವಿಷ್ಣುಪುರಾಣಗಳಂತಹ ಮಹಾಪುರಾಣಗಳಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ಶುನಃಶೇಫನು ಮಂತ್ರದ್ರಷ್ಟಾರನಾದ ಋಗ್ವದಕಾಲದ ಋಷಿಯೆಂಬ ಅಂಶ ಬಹಳ ಜನಕ್ಕೆ ತಿಳಿದಿರಲಾರದು. ಐತರೇಯ ಬ್ರಾಹ್ಮಣದಲ್ಲಿಯೂ ಈ ಕಥೆ ವಿಸ್ತಾರವಾಗಿ ಪ್ರತಿಪಾದಿತವಾಗಿದೆ. ಅದರ ಮೂವತ್ತಮೂರನೆಯ ಅಧ್ಯಾಯದಲ್ಲಿ ಈ ವಿಚಾರ ಬರುತ್ತದೆ. ಕಥೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿದ್ದರೂ ಮುಖ್ಯ ವಿಷಯದಲ್ಲಿ ವ್ಯತ್ಯಾಸಗಳು ಕಡಿಮೆ.
ಇಕ್ಷಾಕುವಂಶದಲ್ಲಿ ಹುಟ್ಟಿದ ಹರಿಶ್ಚಂದ್ರ ಮಹಾರಾಜನಿಗೆ ನೂರುಜನ ರಾಣಿಯರಿದ್ದರೂ ಪುತ್ರಸಂತಾನವಿರಲಿಲ್ಲ. ಒಂದು ಸಲ ಪರ್ವತ ಮತ್ತು ನಾರದರು ಅವನ ಅರಮನೆಗೆ ಬಂದರು. ಹರಿಶ್ಚಂದ್ರನು ಅವರನ್ನು, ಸಂತಾನೋತ್ಪತ್ತಿಯಿಂದ ಆಗುವ ಲಾಭವೇನು?' ಎಂದು ಪ್ರಶ್ನಿಸಿದನು. ನಾರದರು 'ಮಗನು ತಂದೆಗೆ ಆನಂದವನ್ನು ನೀಡುತ್ತಾನೆ, ಪಿತೃಋಣವನ್ನು ತೀರಿಸಲು ಅವಕಾಶಮಾಡಿಕೊಡುತ್ತಾನೆ. ತಂದೆಯಾದವನೇ ಪುತ್ರರೂಪದಿಂದ ಹುಟ್ಟುವುದರಿಂದ ಅವನ ವಂಶವು ಸ್ಥಿರವಾಗುತ್ತದೆ. ತಂದೆಯನ್ನು ವೃದ್ಧಾಪ್ಯದಲ್ಲಿ ಪೋಷಿಸುತ್ತಾನೆ. ಸಂತಾನವಿಲ್ಲದವನಿಗೆ ಶಾಶ್ವತವಾದ ಗತಿಯಿಲ್ಲ' ಎಂದು ವಿವರಿಸಿದರು. ಅನಂತರ ರಾಜನಿಗೆ, 'ವರುಣನಲ್ಲಿಗೆ ಹೋಗಿ ನಿನಗೊಬ್ಬ ಪುತ್ರನನ್ನು ಅನುಗ್ರಹಿಸುವಂತೆ ಕೇಳಿಕೋ, ಹುಟ್ಟಿದ ಮಗನನ್ನು ಅವನಿಗೇ ಯಜ್ಞದಲ್ಲಿ ಆಹುತಿಯಾಗಿ ನೀಡುವೆನೆಂದು ಭರವಸೆ ಕೊಡು' ಎಂದು ಸಲಹೆ ನೀಡಿ ಅಲ್ಲಿಂದ ಹೊರಟುಹೋದರು.
ಹರಿಶ್ಚಂದ್ರನು ಅದೇ ಪ್ರಕಾರ ವರುಣನಲ್ಲಿಗೆ ಹೋಗಿ ಪ್ರಾರ್ಥಿಸಿದನು. ಅದರಂತೆ ಹರಿಶ್ಚಂದ್ರನು ಒಬ್ಬ ಪುತ್ರನನ್ನು ಪಡೆದು ಅವನಿಗೆ ರೋಹಿತನೆಂದು ನಾಮಕರಣ ಮಾಡಿದನು. ವರುಣನು ಬಂದು ಅವನನ್ನು ತನಗೆ ಆಹುತಿಯಾಗಿ ಕೊಡುವಂತೆ ಕೇಳಿದನು. ಹರಿಶ್ಚಂದ್ರನು 'ಆಹುತಿಯಾಗಬೇಕಾದರೆ ಹತ್ತುದಿನಗಳು ಕಳೆಯಬೇಕು. ಅನಂತರ ನಿನಗೆ ಅರ್ಪಿಸುತ್ತೇನೆ' ಎಂದನು. ಹತ್ತುದಿನಗಳು ಕಳೆದಕೂಡಲೆ ವರುಣನು ಮತ್ತೆ ಬಂದು ಆಹುತಿಯನ್ನು ಅಪೇಕ್ಷಿಸಿದನು. ಹರಿಶ್ಚಂದ್ರನು ಮಗನಿಗೆ ದಂತೋತ್ಪತ್ತಿಯಾದ ಕೂಡಲೆ ಅರ್ಪಿಸುವುದಾಗಿ ಹೇಳಿದನು. ಹೀಗೆಯೇ ವರುಣನು ಮತ್ತೆ ಮತ್ತೆ ಬಂದು ಕೇಳಿದಾಗಲೆಲ್ಲ, ಮಗನಿಗೆ ದಂತಪಾತವಾಗಲಿ, ದಂತವು ಮತ್ತೆ ಬೆಳೆಯಲಿ, ಯೋಧಕವಚವನ್ನು ತೊಡುವ ವಯಸ್ಸಾಗಲಿ ಎಂದು ಒಂದೊಂದೇ ನೆಪ ಹೇಳುತ್ತ ಮುಂದಕ್ಕೆ ಹಾಕುತ್ತ ಬಂದನು. ಕಡೆಗೆ ವರುಣನು ಕಡ್ಡಾಯವಾಗಿ ಹೇಳಿದಾಗ ವಿಧಿಯಿಲ್ಲದೆ ಮಗನನ್ನು ಕರೆದು, “ನಿನ್ನನ್ನು ನನಗೆ ಅನುಗ್ರಹಿಸಿದ ವರುಣನಿಗೆ ನಿನ್ನನ್ನು ಆಹುತಿ ಕೊಡಬೇಕಾಗಿದೆ' ಎಂದು ಹೇಳಿದನು.
ತನ್ನನ್ನು ಕೊಲ್ಲುವರೆಂದು ತಿಳಿದಕೂಡಲೆ ರೋಹಿತನು ತಲೆತಪ್ಪಿಸಿಕೊಂಡು ಕಾಡಿಗೆ ಓಡಿಹೋದನು. ಈ ವಿಷಯವನ್ನು ತಿಳಿದ ವರುಣನು ಹರಿಶ್ಚಂದ್ರನಿಗೆ ಮಹೋದರವೆಂಬ ವ್ಯಾಧಿಯು ಕಾಡುವಂತೆ ಮಾಡಿದನು. ಇತ್ತ ಕಾಡಿನಲ್ಲಿ ತಿರುಗುತ್ತಿದ್ದ ರೋಹಿತನನ್ನು ಇಂದ್ರನು ಮನುಷ್ಯರೂಪದಿಂದ ಸಂಧಿಸಿ ದೇಶಾಟನೆ ಮಾಡುವಂತೆ ಬೋಧಿಸಿದನು. ರೋಹಿತನು ಅದರಂತೆ ಎರಡು ವರ್ಷ ಕಾಡಿನಲ್ಲಿ ಸುತ್ತಾಡಿ ಒಂದು ಗ್ರಾಮಕ್ಕೆ ಬಂದನು. ಆಗಲೂ ಇಂದ್ರನು ಪುನಃ ಬಂದು 'ಊರೂರು ಅಲೆಯುವ ಪರ್ಯಟನದಿಂದ ಪಾಪವೆಲ್ಲವೂ ಪರಿಹಾರವಾಗುತ್ತದೆ. ಆದ್ದರಿಂದ ನೀನು ಸಂಚರಿಸು' ಎಂದನು. ಹೀಗೆ ಪ್ರತಿಸಲವೂ ರೋಹಿತನು ಹಳ್ಳಿಗೆ ಬಂದರೆ ಇಂದ್ರನು ಮತ್ತೆ ಅವನನ್ನು ಕಾಡಿಗೆ ಕಳುಹಿಸುತ್ತಿದ್ದನು. ಅವನ ಐದುವರ್ಷಗಳು ಹೀಗೆಯೇ ಕಳೆದು ಹೋದವು.
ಆರನೆಯ ವರ್ಷ ರೋಹಿತನು ಕಾಡಿನಲ್ಲಿ ಅಲೆಯುತ್ತಿರುವಾಗ ಸುವಯಸ್ ಎಂಬುವವನ ಮಗನಾದ ಅಜೀಗರ್ತನೆಂಬುವವನನ್ನು ಸಂಧಿಸಿದನು. ಅಜೀಗರ್ತನು ದಾರಿದ್ರದಿಂದ ಸಂಸಾರಸಮೇತನಾಗಿ ಉಪವಾಸದಲ್ಲಿದ್ದನು. ಅವನಿಗೆ ಶುನಃಪುಚ್ಛ, ಶುನಃಶೇಫ ಮತ್ತು ಶುನೋಲಾಂಗೂಲರೆಂಬ ಮೂವರು ಪುತ್ರರು ಇದ್ದರು. ರೋಹಿತನು ಅವನಲ್ಲಿ ಹೋಗಿ, 'ನಿನಗೆ ನೂರು ಗೋವುಗಳನ್ನು ಕೊಡುತ್ತೇನೆ. ನಿನ್ನ ಪುತ್ರರಲ್ಲಿ ಒಬ್ಬನನ್ನು ಕೊಡು. ನನ್ನ ಬದಲು ಅವನನ್ನು ವರುಣನಿಗೆ ಆಹುತಿಕೊಡುತ್ತೇವೆ' ಎಂದು ಕೇಳಿಕೊಂಡನು. ಅಜೀಗರ್ತನು ಹಿರಿಯ ಮಗನನ್ನೂ, ಅವನ ಹೆಂಡತಿ ಕಿರಿಯವನನ್ನೂ ಕಳಿಸಲು ಒಪ್ಪದೆ, ಮಧ್ಯದವನು ಮಾತ್ರ ಸಿಕ್ಕಿಕೊಂಡನು. ರೋಹಿತನು ನೂರುಗೋವುಗಳನ್ನು ಅಜೀಗರ್ತನಿಗೆ ಕೊಟ್ಟು, ಶುನಃಶೇಫನನ್ನು ಕರೆದುಕೊಂಡು ತನ್ನ ತಂದೆಯ ಬಳಿಗೆ ಬಂದು, ತಾನು ಮಾಡಿರುವ ಏರ್ಪಾಡನ್ನು ತಿಳಿಸಿದನು. ಹರಿಶ್ಚಂದ್ರನು ವರುಣನ ಬಳಿಗೆ ಹೋಗಿ ಈ ವಿಷಯವನ್ನು ಹೇಳಿದಾಗ ವರುಣನು 'ಕ್ಷತ್ರಿಯನಿಗಿಂತ ಬ್ರಾಹ್ಮಣಬಾಲಕನು ಉತ್ತಮನೆಂದು ಒಪ್ಪಿಕೊಂಡನು. ಅವನೇ ದೊರೆಗೆ ರಾಜಸೂಯಯಾಗದ ವಿಧಿಯನ್ನು ಎಲ್ಲವನ್ನೂ ಅಣಿಗೊಳಿಸಿದನು. ವಿವರಿಸಿ,
ಯಜ್ಞಕ್ಕೆ ವಿಶ್ವಾಮಿತ್ರನು ಹೋತೃವಾಗಿಯೂ ಜಮದಗ್ನಿಯು ಅಧ್ಯರ್ಯುವಾಗಿಯೂ ವಸಿಷ್ಠನು ಬ್ರಹ್ಮನಾಗಿಯೂ ಅಯಾಸನು ಉದ್ಘಾತವಾಗಿಯೂ ನಿಯಮಿತರಾದರು. ಯಜ್ಞದ ಪೂರ್ವಭಾವಿ ವಿಧಿಗಳು ಮುಗಿದ ಮೇಲೆ ಶುನಃಶೇಫನನ್ನು ಯೂಪಸ್ತಂಭಕ್ಕೆ ಕಟ್ಟಲು ಯಾರೂ ಒಪ್ಪಲಿಲ್ಲ. 'ನನಗೆ ಇನ್ನೂ ನೂರು ಗೋವುಗಳನ್ನು ಕೊಟ್ಟರೆ ನಾನೇ ಕಟ್ಟುತ್ತೇನೆಂದು' ಅಜೀಗರ್ತನೇ ಮುಂದೆ ಬಂದನು. ಅವನಿಗೆ ನೂರು ಗೋವುಗಳನ್ನು ಕೊಟ್ಟರು. ಅಪ್ರಸೂಕ್ತವನ್ನು ಪಠಿಸಿ, ಅಗ್ನಿಯನ್ನು ಶುನಃಶೇಫನ ಸುತ್ತ ತೆಗೆದುಕೊಂಡು ಹೋದಮೇಲೆ ಅವನನ್ನು ಕಡಿಯಲು ಯಾರೂ ಒಪ್ಪಲಿಲ್ಲ. ನೂರು ಹಸುಗಳ ಆಸೆಗಾಗಿ ಮತ್ತೆ ಅಜೀಗರ್ತನೇ ಮುಂದೆ ಬಂದನು.
ಅಷ್ಟರಲ್ಲಿ ಶುನಃಶೇಫನು ತಾನು ದೇವತೆಗಳ ಮೊರೆಹೋಗಬೇಕೆಂದು ಮನಸ್ಸು ಮಾಡಿ, 'ಕಸ್ಯ ನೂನಂ ಕತಮಸ್ಯ' ಎಂಬ ಸೂತ್ರದಿಂದ ಪ್ರಜಾಪತಿಗೆ ಮೊರೆಯಿಟ್ಟನು. ಪ್ರಜಾಪತಿಯು ಆವಿರ್ಭೂತನಾಗಿ, 'ಅಗ್ನಿಯು ನಿಮಗೆಲ್ಲರಿಗೂ ಸಮೀಪಸ್ಥನಾದ ದೇವತೆಯಾದುದರಿಂದ ಅವನನ್ನು ಪ್ರಾರ್ಥಿಸು' ಎಂದು ಹೇಳಿದನು. ಆಗ ಶುನಃಶೇಫನು 'ಅಗ್ನರ್ವಯಂ...' ಎಂಬ ಋಕ್ಕಿನಿಂದ ಅಗ್ನಿಯನ್ನು ಪ್ರಾರ್ಥಿಸಿದನು. ಅಗ್ನಿಯು ಬಂದು 'ಸವಿತೃವು ಸಕಲಭೂತಗಳಿಗೂ ಒಡೆಯನು. ಅವನನ್ನು ಆಶ್ರಯಿಸು' ಎಂದನು. ಆಗ ಶುನಃಶೇಫನು 'ಅಭಿಕ್ಷಾ ದೇವ ಸವಿತಃ ಎಂದು ಪ್ರಾರಂಭವಾಗುವ ಋಕ್ಕಿನಿಂದ ಮೂರು ಋಕ್ಕುಗಳಲ್ಲಿ ಸವಿತೃವನ್ನು ಸ್ತುತಿಸಿದನು. ಆಗ ಸವಿತೃವು ಬಂದು, ನೀನು ಪ್ರಭುವಾದ ವರುಣನಿಂದ ಬಂಧಿತನಾಗಿರುವುದರಿಂದ ಅವನನ್ನೇ ಮೊರೆಹೊಗು' ಎಂದು ಹೇಳಿದನು. ಆಗ ಮೂವತ್ತೊಂದು ಋಕ್ಕುಗಳಿಂದ ವರುಣನನ್ನು ಪ್ರಾರ್ಥಿಸಿದನು. ವರುಣನು ಬಂದು, 'ಅಗ್ನಿಯು ಸಕಲದೇವತೆಗಳಿಗೂ ಮುಖಪ್ರಾಯನು ಮತ್ತು ಅತ್ಯಂತ ದಯಾಶಾಲಿ, ನೀನು ಅವನನ್ನು ಪ್ರಾರ್ಥಿಸಿದರೆ ನಾವೆಲ್ಲ ಬಂದು ನಿನ್ನನ್ನು ಬಂಧನದಿಂದ ಬಿಡಿಸುವೆವು' ಎಂದನು. ಶುನಃಶೇಫನು ಪುನಃ ಇಪ್ಪತ್ತೆರಡು ಋಕ್ಕುಗಳಿಂದ ಅಗ್ನಿಯನ್ನು ಪ್ರಾರ್ಥಿಸಲು ಅಗ್ನಿಯು ಬಂದು, 'ವಿಶ್ವೇದೇವರನ್ನು ಪ್ರಾರ್ಥಿಸಿದರೆ ನಿನ್ನ ಬಿಡುಗಡೆಯಾಗುವುದು' ಎಂದನು. ಅದರಂತೆ ಶುನಃಶೇಫನು ವಿಶ್ವೇದೇವರನ್ನು ಒಂದು ಋಕ್ಕಿನಿಂದ ಪ್ರಾರ್ಥಿಸಿದನು. ಅವರು ಬಂದು, 'ಇಂದ್ರನು ಎಲ್ಲರಿಗಿಂತ ಶಕ್ತನು ಮತ್ತು ಪ್ರಬಲನು. ವ್ಯವಹಾರಗಳನ್ನು ಕೊನೆಗಾಣಿಸುವ ಉಪಾಯಗಳನ್ನು ತಿಳಿದವನು. ಅವನನ್ನು ಪ್ರಾರ್ಥಿಸದೆ ಬಿಡುಗಡೆಯಾಗದು' ಎಂದನು. ಮತ್ತೆ ಇಂದ್ರನ ಪರವಾದ ಋಕ್ಕುಗಳನ್ನು ಶುನಃಶೇಫನು ಪಠಿಸಿದನು. ಇಂದ್ರನು ಅವನ ಸ್ತೋತ್ರಕ್ಕೆ ಮೆಚ್ಚಿ ಸುವರ್ಣನಿರ್ಮಿತವಾದ ರಥವನ್ನು ಅನುಗ್ರಹಿಸಿದನು. ಮನಃ, ಅಶ್ವಿನೀದೇವತೆಗಳನ್ನು ಪ್ರಾರ್ಥಿಸು. ಅನಂತರ ನಾವು ನಿನ್ನನ್ನು ಬಿಡುಗಡೆಮಾಡುವೆವು' ಎಂದು ಉಪದೇಶಿಸಿದನು. ಅಶ್ವಿನೀದೇವತೆಗಳು ಪ್ರಾರ್ಥಿತರಾಗಿ ಬಂದು “ಉಷೋದೇವಿಯನ್ನು ಪ್ರಾರ್ಥಿಸು' ಎಂದರು. ಉಷೋದೇವಿಯ ಮೂರು ಋಕ್ಕುಗಳನ್ನು ಹೇಳುತ್ತಿರುವಂತೆಯೇ ವರುಣನ ಪಾಶವು ಕ್ರಮವಾಗಿ ಸಡಿಲವಾಯಿತು. ಹರಿಶ್ಚಂದ್ರನ ಮಹೋದರವೂ ಗುಣವಾಯಿತು.
ಅನಂತರ ಋತ್ವಿಕ್ಕುಗಳು ಶುನಃಶೇಫನನ್ನು ಕುರಿತು, “ನೀನೂ ನಮ್ಮಂತೆಯೇ ಋಷಿಯಾಗಿರುತ್ತೀಯೆ. ಈ ಯಜ್ಞದಲ್ಲಿ ನೀನೂ ಭಾಗವಹಿಸು' ಎಂದು ಆಹ್ವಾನಿಸಿದರು. ಶುನಃಶೇಫನು ಅವರಿಂದ ಸೋಮರಸವನ್ನು ಹಿಂಡುವ ಕ್ರಮವನ್ನು ತಿಳಿದುಕೊಂಡು ಮಂತ್ರಸಮೇತವಾಗಿ ಅದನ್ನು ದ್ರೋಣಕಲಶದೊಳಗೆ ಇರಿಸಿದನು. ಸ್ವಾಹಾಕಾರದೊಡನೆ ಹವಿಸ್ಸನ್ನು ಅರ್ಪಿಸಿದನು. ಹೀಗೆ ಅವನೇ ಯಜ್ಞವಿಧಿಗಳನ್ನೆಲ್ಲ ನೆರವೇರಿಸಿದನು.
ಯಜ್ಞವು ಮುಗಿದ ನಂತರ ಶುನಃಶೇಫನು ವಿಶ್ವಾಮಿತ್ರನ ಸಮೀಪಕ್ಕೆ ಹೋದನು. ಅಜೀಗರ್ತನು ತನ್ನ ಮಗನನ್ನು ಹಿಂದಕ್ಕೆ ಕೊಡುವಂತೆ ವಿಶ್ವಾಮಿತ್ರನನ್ನು ಕೇಳಿದನು. ವಿಶ್ವಾಮಿತ್ರನು ಇವನು ನನಗೆ ದೇವತೆಗಳಿಂದ ಕೊಡಲ್ಪಟ್ಟಿದ್ದಾನೆ' ಎಂದು ಅಜೀಗರ್ತನ ಕೇಳಿಕೆಯನ್ನು ತಿರಸ್ಕರಿಸಿದನು. ಅಂದಿನಿಂದ ಅವನು ವಿಶ್ವಾಮಿತ್ರನ ಪುತ್ರನೆನಿಸಿದನು. ಮುಂದೆ ಅವನಿಂದ ಕಾಪಿಲೇಯರೂ ಬಭ್ರುಗಳೂ ಉತ್ಪನ್ನರಾದರು.
ಅಜೀಗರ್ತನು ಶುನಃಶೇಫನಲ್ಲಿ ಮತ್ತೆ ಬಂದು ತನ್ನಲ್ಲಿಗೆ ಬರುವಂತೆ ಕರೆದನು. ಆಗ ಅವನು 'ಚಂಡಾಲನೂ ಪುತ್ರವಧಕ್ಕಾಗಿ ಕತ್ತಿಯೆತ್ತುವುದಿಲ್ಲ. ನಿನಗೆ ನನಗಿಂತಲೂ ಮೂರುನೂರು ಗೋವುಗಳೇ ಹೆಚ್ಚಾದವು. ನಿನ್ನ ಕೃತ್ಯಕ್ಕೆ ಪ್ರಾಯಶ್ಚಿತ್ತವೇ ಇಲ್ಲ' ಎಂದನು. ವಿಶ್ವಾಮಿತ್ರನೂ ಆ ಮಾತನ್ನು ಅನುಮೋದಿಸಿದನು. ಶುನಃಶೇಫನನ್ನು ತನ್ನ ಹಿರಿಯ ಮಗನೆಂದು ಹೇಳಿದನು. ವಿಶ್ವಾಮಿತ್ರನಿಗೆ ಮಧುಚ್ಛಂದನೇ ಮೊದಲಾದ ನೂರುಜನ ಮಕ್ಕಳಿದ್ದರು. ಮಧುಚ್ಛಂದನಿಗಿಂತ ಹಿರಿಯರಾದ ಐವತ್ತು ಜನರು ತಂದೆಯ ಮಾತನ್ನು ವಿರೋಧಿಸಿದರು. ಅವರಿಂದ ನೀಚಸಂತತಿಯುಂಟಾಗಲೆಂದು ವಿಶ್ವಾಮಿತ್ರನು ಶಾಪಕೊಟ್ಟನು. ಮುಂದೆ ಶಬರ, ಪುಲಿಂದ ಮುಂತಾದವರು ಅವರ ವಂಶದಲ್ಲಿ ಜನಿಸಿದರು. ಮಧುಚ್ಛಂದನಿಗಿಂತ ಕಿರಿಯರಾದ ಐವತ್ತು ಜನ ತಂದೆಯ ಮಾತನ್ನು ಒಪ್ಪಿಕೊಂಡರು. ವಿಶ್ವಾಮಿತ್ರನು ಶುನಃಶೇಫನಿಗೆ ದೇವರಾತನೆಂದು ನಾಮಕರಣಮಾಡಿ, ದಿವ್ಯಜ್ಞಾನವನ್ನು ಉಪದೇಶಿಸಿದನು. ತನ್ನನ್ನು ಅನುಸರಿಸಿದ ಮಕ್ಕಳನ್ನೂ ಅನುಗ್ರಹಿಸಿದನು.