Hindu Vani
Index
ಪ್ರಸ್ತುತ
ಜೀವನಾದರ್ಶ ಅತ್ಯಂತ ಶ್ರೇಷ್ಠಮಟ್ಟದ್ದು
ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಸಿದ್ದಗಂಗಾಮಠದ ಪೂಜ್ಯ ಶ್ರೀ ಶಿವಕುಮಾರಸ್ವಾಮಿಯವರು ಜಾತಿ, ಮತ ಭೇದವಿಲ್ಲದೆ ಲಕ್ಷಾಂತರ ಮಕ್ಕಳಿಗೆ ಉಚಿತ ಊಟ, ವಸತಿ, ವಿದ್ಯೆ ಕೊಡುತ್ತಿದ್ದುದಲ್ಲದೆ ಆ ವ್ಯವಸ್ಥೆ ಹಾಗೇ ಮುಂದುವರೆದುಕೊಂಡು ಹೋಗುವಂತೆ ಏರ್ಪಾಡು ಮಾಡಿದ್ದಾರೆ. ಎಂತಹ ಉನ್ನತ ಜೀವನಾದರ್ಶ ಅವರದು. ಅತ್ಯಂತ ಸರಳ ಜೀವನ ನಡೆಸುತ್ತಿದ್ದ ಪೂಜ್ಯರು ಹೆಚ್ಚು ಮಾತನಾಡದೆ ಕೃತಿಯಲ್ಲೇ ಅವನ್ನು ಮಾಡಿ ತೋರಿಸಿದ ಮಹಾನುಭಾವರು.
ಲೌಕಿಕದಿಂದ ಪಾರಮಾರ್ಥಿಕಕ್ಕೆ: ಸಿರಿಸಂಪದಕ್ಕಾಗಿ ಎಷ್ಟೆಲ್ಲಾ ಕಷ್ಟಪಡುವವರನ್ನು ನಾವು ನೋಡುತ್ತಿರುತ್ತೇವೆ. ಸುಖದ ಜೀವನಕ್ಕೆ ಒಗ್ಗಿಕೊಂಡವರಿಗೆ ತುಸು ಕಷ್ಟ ಬಂದರೂ ತಡೆದುಕೊಳ್ಳುವುದು ಬಲು ಕಷ್ಟ. ಅಂತಹುದರಲ್ಲಿ ಕೋಟಿಗಟ್ಟಲೆ ಹಣ ಹಾಗೂ ಆಸ್ತಿ ಎಲ್ಲವನ್ನು ಬಿಟ್ಟು ಕಠಿಣ ವ್ರತ ಪಾಲಿಸುವುದೆಂದರೆ ಹೇಗಿದ್ದೀತು... ಆದರೆ ತಾವೇ ಬಯಸಿದಾಗ ಮನಸ್ಸು ಎಲ್ಲವನ್ನೂ ಒಪ್ಪಿಕೊಳ್ಳುತ್ತದೆ, ಒಗ್ಗಿಕೊಳ್ಳುತ್ತದೆ. ಜೀವನದ ಗುರಿಯೇ ಬೇರೆಯಾಗಿಬಿಡುತ್ತದೆ. ಬಾಳಿನ ಮತ್ತೊಂದು ಅಧ್ಯಾಯ ಪ್ರಾರಂಭವಾಗುತ್ತದೆ. ಇದಕ್ಕೆ ಗುಜರಾತಿನ ಭವೇಶ್ ಭಂಡಾರಿ ಎಂಬುವವರ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ತಮಗಿದ್ದ ಇನ್ನೂರು ಕೋಟಿ ರೂಪಾಯಿಗಳಷ್ಟು ಆಸ್ತಿಯನ್ನು ದಾನ ಮಾಡಿ ತಮ್ಮ ಮಡದಿಯೊಂದಿಗೆ ಜೈನ ಸನ್ಯಾಸತ್ವವನ್ನು ಸ್ವೀಕರಿಸಿದ್ದು ಅಚ್ಚರಿಯಾದರೂ ಇದು ಸತ್ಯ.
ಅಷ್ಟೆಲ್ಲಾ ಶ್ರೀಮಂತಿಕೆಯನ್ನು ಬಿಟ್ಟು ಲೌಕಿಕ ಸುಖ ಭೋಗಗಳನ್ನು ತ್ಯಜಿಸಿ ಸನ್ಯಾಸತ್ವದ ದೀಕ್ಷೆ ತೆಗೆದುಕೊಂಡು ಅತ್ಯಂತ ಕಠಿಣ ನಿಯಮಗಳನ್ನು ಪಾಲಿಸುತ್ತಾ ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಾ ಧರ್ಮಪ್ರಚಾರಕ್ಕಾಗಿ ತಮ್ಮ ಬಾಳನ್ನು ಮುಡುಪಾಗಿಡುವುದು ಅವರ ಸಂಕಲ್ಪ. ಸತಿ ಪತಿಯರಿಬ್ಬರದೂ ಒಂದೇ ಧೈಯ. ಆ ಹಿಂದಿನ ಬದುಕಿಗೂ ಈಗ ತೆಗೆದುಕೊಂಡಿರುವ ಹೊಸ ಜೀವನಕ್ಕೂ ಎಷ್ಟೊಂದು ಅಂತರ... ಆದರೆ ಜೀವನದ ಗುರಿ ಆಯ್ಕೆ ಮಾಡಿಕೊಂಡು ಸತಿ ಪತಿಯರಿಬ್ಬರೂ ಒಂದೇ ಮನಸ್ಸಿನಿಂದ ಆ ದಾರಿಯಲ್ಲಿ ಸಾಗುತ್ತಿದ್ದಾರೆ. ಹೀಗೆ ಎಷ್ಟೋ ಮಂದಿ ಜೈನ ಯುವತಿಯರು, ಯುವಕರು ದೀಕ್ಷೆಯನ್ನು ಪಡೆದು ಸನ್ಯಾಸತ್ವವನ್ನು ಸ್ವೀಕರಿಸಿ ಕಠಿಣ ವ್ರತಗಳಿಗೆ ಬದ್ದರಾಗುತ್ತಿದ್ದಾರೆ.
ಲೌಕಿಕದಿಂದ ಪಾರಮಾರ್ಥಿಕಕ್ಕೆ:
ಸಿರಿಸಂಪದಕ್ಕಾಗಿ ಎಷ್ಟೆಲ್ಲಾ ಕಷ್ಟಪಡುವವರನ್ನು ನಾವು ನೋಡುತ್ತಿರುತ್ತೇವೆ. ಸುಖದ ಜೀವನಕ್ಕೆ ಒಗ್ಗಿಕೊಂಡವರಿಗೆ ತುಸು ಕಷ್ಟ ಬಂದರೂ ತಡೆದುಕೊಳ್ಳುವುದು ಬಲು ಕಷ್ಟ. ಅಂತಹುದರಲ್ಲಿ ಕೋಟಿಗಟ್ಟಲೆ ಹಣ ಹಾಗೂ ಆಸ್ತಿ ಎಲ್ಲವನ್ನು ಬಿಟ್ಟು ಕಠಿಣ ವ್ರತ ಪಾಲಿಸುವುದೆಂದರೆ ಹೇಗಿದ್ದೀತು... ಆದರೆ ತಾವೇ ಬಯಸಿದಾಗ ಮನಸ್ಸು ಎಲ್ಲವನ್ನೂ ಒಪ್ಪಿಕೊಳ್ಳುತ್ತದೆ, ಒಗ್ಗಿಕೊಳ್ಳುತ್ತದೆ. ಜೀವನದ ಗುರಿಯೇ ಬೇರೆಯಾಗಿಬಿಡುತ್ತದೆ. ಬಾಳಿನ ಮತ್ತೊಂದು ಅಧ್ಯಾಯ ಪ್ರಾರಂಭವಾಗುತ್ತದೆ. ಇದಕ್ಕೆ ಗುಜರಾತಿನ ಭವೇಶ್ ಭಂಡಾರಿ ಎಂಬುವವರ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ತಮಗಿದ್ದ ಇನ್ನೂರು ಕೋಟಿ ರೂಪಾಯಿಗಳಷ್ಟು ಆಸ್ತಿಯನ್ನು ದಾನ ಮಾಡಿ ತಮ್ಮ ಮಡದಿಯೊಂದಿಗೆ ಜೈನ ಸನ್ಯಾಸತ್ವವನ್ನು ಸ್ವೀಕರಿಸಿದ್ದು ಅಚ್ಚರಿಯಾದರೂ ಇದು ಸತ್ಯ. ಅಷ್ಟೆಲ್ಲಾ ಶ್ರೀಮಂತಿಕೆಯನ್ನು ಬಿಟ್ಟು ಲೌಕಿಕ ಸುಖ ಭೋಗಗಳನ್ನು ತ್ಯಜಿಸಿ ಸನ್ಯಾಸತ್ವದ ದೀಕ್ಷೆ ತೆಗೆದುಕೊಂಡು ಅತ್ಯಂತ ಕಠಿಣ ನಿಯಮಗಳನ್ನು ಪಾಲಿಸುತ್ತಾ ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಾ ಧರ್ಮಪ್ರಚಾರಕ್ಕಾಗಿ ತಮ್ಮ ಬಾಳನ್ನು ಮುಡುಪಾಗಿಡುವುದು ಅವರ ಸಂಕಲ್ಪ. ಸತಿ ಪತಿಯರಿಬ್ಬರದೂ ಒಂದೇ ಧೈಯ. ಆ ಹಿಂದಿನ ಬದುಕಿಗೂ ಈಗ ತೆಗೆದುಕೊಂಡಿರುವ ಹೊಸ ಜೀವನಕ್ಕೂ ಎಷ್ಟೊಂದು ಅಂತರ... ಆದರೆ ಜೀವನದ ಗುರಿ ಆಯ್ಕೆ ಮಾಡಿಕೊಂಡು ಸತಿ ಪತಿಯರಿಬ್ಬರೂ ಒಂದೇ ಮನಸ್ಸಿನಿಂದ ಆ ದಾರಿಯಲ್ಲಿ ಸಾಗುತ್ತಿದ್ದಾರೆ. ಹೀಗೆ ಎಷ್ಟೋ ಮಂದಿ ಜೈನ ಯುವತಿಯರು, ಯುವಕರು ದೀಕ್ಷೆಯನ್ನು ಪಡೆದು ಸನ್ಯಾಸತ್ವವನ್ನು ಸ್ವೀಕರಿಸಿ ಕಠಿಣ ವ್ರತಗಳಿಗೆ ಬದ್ದರಾಗುತ್ತಿದ್ದಾರೆ.
ಎಲ್ಲರ ಜೀವನವೂ ಒಂದು ಸುಕೃತವೇ. ಮಹಾಮಹಾ ಸಾಧಕರು ಸಾದನೆಯ ಮಾರ್ಗದಲ್ಲಿ ಸಾಗುತ್ತಾ ಆದರ್ಶವನ್ನು ಮೆರೆದು ತಮ್ಮ ಉಜ್ವಲ ಬದುಕಿನಿಂದ ಸಮಾಜವನ್ನೇ ಬೆಳಗಿದ್ದಾರೆ. ಸಾಮಾನ್ಯರಾದ ನಮಗೆ ಅಂತಹ ಉನ್ನತ ಧೈಯ ಆದರ್ಶಗಳನ್ನು ಪಾಲಿಸಿಕೊಂಡುಬರುವುದು ಕಷ್ಟವಾಗಬಹುದು. ಆದರೆ ಇಂತಹ ಜೀವನ ನಮಗೆ ಲಭ್ಯವಿರುವಾಗ ಒಳ್ಳೆಯ ಬಾಳನ್ನು ಬಾಳೋಣ. ಪರರನ್ನು ನೋಯಿಸದಂತಹ, ಅನ್ಯಾಯ, ದುರಾಶೆಗಳಿಗೆ ಬಲಿಯಾಗದ ಬದುಕನ್ನು ಕಟ್ಟಿಕೊಳ್ಳೋಣ. ಸಾರ್ಥಕ ಬಾಳು ನಮ್ಮದಾಗಲಿ. ಮಹಾತ್ಮರ ಹಾದಿಯನ್ನು ಬೆಂಬಲಿಸುತ್ತಾ ಅವರ ಮಾರ್ಗದರ್ಶನದಲ್ಲಿ ನಮ್ಮ ಜೀವನವನ್ನು ರೂಪಿಸಿಕೊಳ್ಳೋಣ. ಬೆಳಗುವ ಒಂದು ಚಿಕ್ಕ ಹಣತೆಯಾದರೂ ಸುತ್ತಲೂ ಬೆಳಕು ಬೀರುವಂತ ನಮ್ಮ ಜೀವನ ಸಾರ್ಥಕವಾದೀತು.
ವ್ಯಕ್ತಿಗತವಾದ ಜೀವನ ದೃಷ್ಟಿ:
ಒಬ್ಬೊಬ್ಬರ ಜೀವನದ ಗುರಿಯೂ ಒಂದೊಂದು ತೆರನಾಗಿರುತ್ತದೆ. ಎಲ್ಲರಿಗೂ ನಿರ್ದಿಷ್ಟವಾಗಿ ಇಂತಹುದೇ ಗುರಿ ಇರುತ್ತದೆಂದೂ, ಇರಬೇಕೆಂದೂ ಹೇಳಲಾಗದು. ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಸಾಧನೆ ಪರಿಪೂರ್ಣವಾದಾಗ ಸಿಗುವ ತೃಪ್ತಿ, ಆನಂದ ಊಹಾತೀತ. ಒಬ್ಬರ ದೃಷ್ಟಿಯಲ್ಲಿ ಅತಿ ಸಣ್ಣ ವಿಷಯ ಎನಿಸಿದ್ದು ಮತ್ತೊಬ್ಬರಿಗೆ ಮಹೋನ್ನತವಾದುದು ಎನಿಸಬಹುದು. ದೊಡ್ಡ ಪ್ರಮಾಣದಲ್ಲಿ ಹಣ, ಬಂಗಲೆ, ಆಸ್ತಿಗಳಿಕೆಯೇ ಪರಮೋಚ್ಚವೆಂದು ಒಬ್ಬಾತ ಅದನ್ನು ಗಳಿಸಿಯೂ ತೋರಿಸಬಹುದು. ಅದರಿಂದ ಅವರಿಗೆ ತೃಪ್ತಿಯೂ ಸಿಕ್ಕಿತು. ಅದಕ್ಕಾಗಿ ಅವರು ಅಹರ್ನಿಶಿ ಪರಿಶ್ರಮ ಹಾಕಿರಬಹುದು. ಕುಟುಂಬ, ಗೆಳೆಯರು ಎಲ್ಲರನ್ನೂ ಗೌಣವಾಗಿ ಕಂಡಿರಬಹುದು. ಸಮಯಾಸಮಯದ ಪರಿವೆಯೇ ಇಲ್ಲದೆ ದುಡಿದಿರಬಹುದು. ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದಿರಬಹುದು. ಆದರೆ ತಮ್ಮ ಹಣ ಗಳಿಕೆಯ ಇಚ್ಛೆಯಿಂದಾಗಿ ಅವರು ನೆಮ್ಮದಿಯನ್ನು ಕಂಡುಕೊಂಡರು. ಹೀಗೆ ಸಂಪತ್ತಿನ ಗಳಿಕೆಗಾಗಿ ಇಷ್ಟೆಲ್ಲಾ ಪಾಡು ಪಡುತ್ತಿರುವುದನ್ನು ಕಂಡು ಅನೇಕರಿಗೆ ಅವರ ಬಗ್ಗೆ ಕನಿಕರ ಉಂಟಾಗಬಹುದು. ಅಧ್ಯಾತ್ಮ ಚಿಂತಕರಿಗಂತೂ ಅವರ ಮನೋಧರ್ಮ ಅತಿ ಕ್ಷುಲ್ಲಕ ಎನಿಸಬಹುದು.
ಹಣ ಗಳಿಕೆಯ ವ್ಯಾಮೋಹದಲ್ಲಿ ಒಂದು ಅಪಾಯವಂತೂ ಇದ್ದೇ ಇರುತ್ತದೆ. ಗಳಿಸಿದಷ್ಟೂ ಮತ್ತಷ್ಟು ಬೇಕೆಂಬ ಆಸೆ ಹೆಚ್ಚುತ್ತಾ ಹೋಗಬಹುದು. ಈ ವಿಷಯವನ್ನು ಚರ್ಚಿಸುವಾಗ ಟಾಲ್‌ಸ್ಟಾಯ್ ಅವರ ಕಥೆಯೊಂದು ನೆನಪಿಗೆ ಬರುತ್ತದೆ. ಬಡವನೊಬ್ಬನಿಗೆ ಹೇಗಾದರೂ ಧನ ಸಂಪಾದಿಸಬೇಕೆಂಬ ಆಸೆ ಉಂಟಾಗುತ್ತದೆ. ರಾಜನಲ್ಲಿ ಸಹಾಯಕ್ಕಾಗಿ ಯಾಚಿಸುತ್ತಾನೆ. ಆಗ ರಾಜ “ನೀನು ಈಗಿನಿಂದ ಸೂರ್ಯ ಮುಳುಗುವುದರ ಒಳಗೆ ಎಷ್ಟು ದೊಡ್ಡ ಸುತ್ತು ಹಾಕಿ ಮರಳಿ ಇಲ್ಲಿಗೆ ಬರುವೆಯೋ ಅಷ್ಟೂ ಭೂಮಿಯು ನಿನ್ನದಾಗುತ್ತದೆ. ಎಂದು ಆಶ್ವಾಸನೆ ಕೊಡುತ್ತಾನೆ. ಆಗ ಆ ಬಡ ವ್ಯಕ್ತಿಯು ಸಂತೋಷದಿಂದ ಹೊರಡುತ್ತಾನೆ. ಎಷ್ಟು ದೊಡ್ಡ ಸುತ್ತು ಹಾಕಿದರೂ ಇನ್ನಷ್ಟು ಭೂಮಿಯ ವ್ಯಾಮೋಹ. ಎಷ್ಟೆಂದರೆ ಬಿಸಿಲು, ಬಾಯಾರಿಕೆ, ಹಸಿವಿನ ಪರಿವೆಯೇ ಇಲ್ಲದೆ ಓಟವನ್ನು ಮುಂದುವರೆಸುತ್ತಾನೆ. ಆಗಲೇ ಕತ್ತಲಾಗುವ ಸಮಯ ಸಮೀಪಿಸುತ್ತಿದ್ದುದರಿಂದ ಮತ್ತೆ ಮರಳಲು ನಿರ್ಧರಿಸುತ್ತಾನೆ. ಕೊನೆಗೂ ಹೊರಟ ಜಾಗಕ್ಕೆ ತಲುಪುವಷ್ಟರಲ್ಲಿ ವಿಪರೀತ ಆಯಾಸ, ನಿಶ್ಯಕ್ತಿ ಸೇರಿ ಬವಳಿ ಬಂದು ಪ್ರಾಣ ಬಿಡುತ್ತಾನೆ. ಕೊನೆಗೆ ಅವನಿಗೆ ಬೇಕಾಗಿದ್ದು ಆರಡಿ-ಮೂರಡಿ ಜಾಗ ಮಾತ್ರ.
ಇನ್ನು ಅನೇಕರಿಗೆ ಹಣ ಗಳಿಕೆಯಲ್ಲಿ ತೃಪ್ತಿಯೇ ಸಿಗದೆ ಅದಕ್ಕಾಗಿ ಅಡ್ಡದಾರಿಯನ್ನೂ ಹಿಡಿಯುತ್ತಾರೆ. ಹಣ ಸಂಪಾದನೆಯ ಗುರಿಯೇ ಪ್ರಧಾನವಾದಾಗ ಕೈಗೆ ಬಂದರೂ ಬಾಯಿಗೆ ಬಾರದಂತಹ ಪ್ರಮಾದಗಳು ಆಗುತ್ತಲೇ ಇರುತ್ತವೆ.
ಜೀವನದಲ್ಲಿ ಸಂತೋಷ, ನೆಮ್ಮದಿ ಎಂಬುದು ವೈಯಕ್ತಿಕ ಗ್ರಹಿಕೆಗೆ ಬಿಟ್ಟಿದ್ದು. ಒಬ್ಬ ವ್ಯಕ್ತಿ ದಿನವೂ ಗಂಟೆಗಳ ಕಾಲ ಹೊಳೆಯ ದಂಡೆಯಲ್ಲಿ ಕುಳಿತಿರುತ್ತಿದ್ದ. ಆ ದಾರಿಯಲ್ಲಿ ಹೋಗುತ್ತಿದ್ದ ಮಧ್ಯಪ್ರಾಯದವರೊಬ್ಬರಿಗೆ ಅವನು ವೃಥಾ ಕಾಲಹರಣ ಮಾಡುತ್ತಿರುವುದರ ಬಗ್ಗೆ ಬೇಸರವಾಗುತ್ತದೆ. ಒಂದು ದಿನ ಆತನಿಗೆ ಬುದ್ಧಿವಾದ ಹೇಳುತ್ತಾರೆ. ಪ್ರತಿ ದಿನವೂ ಹೀಗೆ ಕಾಲ ಕಳೆಯುವುದರ ಬದಲಾಗಿ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿ ಹೇಳುತ್ತಾರೆ. ಅದರಿಂದ ಏನು ಪ್ರಯೋಜನ ಎಂದು ಆತ ಪ್ರಶ್ನಿಸುತ್ತಾನೆ. ಒಳ್ಳೆಯ ಉದ್ಯೋಗ ಗಳಿಸಬಹುದೆಂಬ ಉತ್ತರ ಸಲಹೆ ಕೊಟ್ಟವರದು. ಅದರಿಂದ ಮುಂದೇನು ಆಗುತ್ತದೆ ಎಂಬ ಪ್ರಶ್ನೆ ಅಲ್ಲಿ ಕುಳಿತವನದು. ಒಳೆಯ ವೇತನ ಪಡೆದು ಸಿರಿಸಂಪದ, ಭೋಗಭಾಗ್ಯಗಳನ್ನೆಲ್ಲಾ ಹೊಂದಬಹುದು ಎಂದು ಉತ್ತರಿಸುತ್ತಾರೆ. ಅದರಿಂದ ಏನಾಗುತ್ತದೆ ಎಂಬುದು ಆತನ ಮರುಪ್ರಶ್ನೆ, ನಂತರ ಸುಖ, ನೆಮ್ಮದಿ ತೃಪ್ತಿಯಿಂದ ನಿಶ್ಚಿಂತನಾಗಿರಬಹುದು ಎಂದು ಪ್ರೋತ್ಸಾಹದ ನುಡಿಗಳನ್ನಾಡುತ್ತಾರೆ. “ಈಗಲೇ ನೆಮ್ಮದಿಯಾಗಿದ್ದೇನಲ್ಲ” ಎಂದು ಅಲ್ಲಿ ಕುಳಿತವನು ನಿಶ್ಚಿಂತೆಯಿಂದಲೇ ಹೇಳುವಾಗ ಹೇಳಿದಾತನ ಮಾತು ಮೌನವಾಗುತ್ತದೆ.
“ಲೋಕೋ ಭಿನ್ನ ರುಚಿ:”
ಒಬ್ಬೊಬ್ಬರ ಮನಃಸ್ಥಿತಿಯೂ ವಿಭಿನ್ನ, ಅನೇಕರು ಯಾರಿಗೂ ತೊಂದರೆ ಕೊಡದೆ ತಮ್ಮ ಕುಟುಂಬದ ಮಟ್ಟಿಗೆ ಸುಖವಾಗಿರುತ್ತಾರೆ. ಅವರು ಬಯಸುವುದು ಕೂಡಾ ಅಷ್ಟೆ... ತಮ್ಮ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಿ ದೇಶಕ್ಕೆ ಕೊಡುವುದೂ ಒಂದು ಸಾಧನೆಯೆ... ಮೊದಲಿನಿಂದಲೂ ತೀರಾ ಬಡತನ, ಅದರಿಂದಾಗಿ ಅನುಭವಿಸಿರಬಹುದಾದ ನೋವು, ಅವಮಾನಗಳಿಂದಾಗಿ ಅವರು ಆಸೆ ಪಡುವುದು, ಅದಕ್ಕಾಗಿ ಪ್ರಯತ್ನಿಸುವುದು ತಪ್ಪೆಂದು ಹೇಳಲಾಗದು. ಆದರೆ ಕನಸು ನನಸಾಗದಿದ್ದಾಗ ನಿರಾಶೆಗೆ, ಖಿನ್ನತೆಗೆ ಒಳಗಾಗಬಾರದಷ್ಟೆ, ಕೆಲವರ ಮಹತ್ಸಾಧನೆ ಸಾಮಾನ್ಯರಿಗೆ ಊಹಿಸಲೂ ಆಗದು. ಅಂತಹ ಸಾಧಕರಿಗೆ ಐಹಿಕ ಸುಖಭೋಗಗಳೆಲ್ಲವೂ ತೃಣ ಸಮಾನ. ಅವರ ಚಿಂತನೆ ಉದಾತ್ತವಾದದ್ದು. “ಲೋಕಹಿತಂ ಮಮ ಕರಣೀಯಂ” ಎನ್ನುವಂತೆ ಪರರಿಗಾಗಿಯೇ ಅವರ ಬದುಕು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳು ಪ್ರಾಣದ ಆಸೆಯನ್ನೂ ಬಿಟ್ಟವರು. ಇಂತಹವರಲ್ಲಿ ಒಬ್ಬರಾದ ಹದಿನಾರರ ಬಾಲಕ ಚಂದ್ರಶೇಖರ ಆಜಾದ್‌ನ ಜೀವನದ ಗುರಿ ದೇಶದ ಸ್ವಾತಂತ್ರ್ಯ, ಅದರತ್ತಲೇ ಅವನ ಚಿತ್ರ. ಒಮ್ಮೆ ಕಾಶಿಯಲ್ಲಿ ಒಂದಷ್ಟು ದೇಶಭಕ್ತರೊಂದಿಗೆ ಸ್ವಾತಂತ್ರ ಚಳುವಳಿಯ ಮುಂಚೂಣಿ ವಹಿಸಿದ್ದ ವೃದ್ಧನಾಯಕಗೆ ಮನಬಂದಂತೆ ಥಳಿಸಿದ್ದ ಅಂಗ್ಲ ಅಧಿಕಾರಿ, ಚಂದ್ರಶೇಖರನಿಗೆ ಆ ಕ್ರೌರ್ಯ ಸಹಿಸಲಾಗದೆ ಪ್ರತಿಯಾಗಿ ಆ ಅಧಿಕಾರಿಗೆ ಗುರಿ ಇಟ್ಟು ಕಲ್ಲೊಂದನ್ನು ಎಸೆಯುತ್ತಾನೆ. ಅದು ಆತನ ಹಣೆಯಲ್ಲಿ ರಕ್ತ ತರಿಸುತ್ತದೆ. ಕ್ರೋಧ, ಅವಮಾನದಿಂದ ಕುದಿಯುತ್ತಿದ್ದ ಅಧಿಕಾರಿಗೆ ಚಂದ್ರಶೇಖರನನ್ನು ಹಿಡಿಯುವಷ್ಟರಲ್ಲಿ ಸಾಕೋಸಾಕಾಗಿ ಹೋಗುತ್ತದೆ. ಮುಂದೆ ಕೋರ್ಟ್‌ನಲ್ಲಿ ವಿಚಾರಣೆಯ ಪ್ರಹಸನವಾಗುತ್ತದೆ. ನ್ಯಾಯಾಧೀಶರು ಇವನ ಹೆಸರು ಕೇಳಿದಾಗ “ಆಜಾದ್” ಎಂದು ದಿಟ್ಟ ಉತ್ತರ ಕೊಡುತ್ತಾನೆ.
“ನಿಮ್ಮ ಅಪ್ಪನ ಹೆಸರು”...ಎಂದಾಗ “ಸ್ವಾಧೀನತೆ” ಎಂದೂ, “ನಿನ್ನ ವಿಳಾಸ” ಎಂಬ ಪ್ರಶ್ನೆಗೆ “ಸೆರೆಮನೆ” ಎಂದು ಆತ್ಮವಿಶ್ವಾಸದಿಂದ ಉತ್ತರಿಸುತ್ತಾನೆ. ಬಾಲಕನಿಗೆ ಧಡೂತಿ ವ್ಯಕ್ತಿಯೊಬ್ಬನಿಂದ ನೀರಿನಲ್ಲಿ ನೆನೆಸಿದ ಛಡಿಯಿಂದ ಹನ್ನೆರಡು ಏಟುಗಳ ಶಿಕ್ಷೆಯಾಗುತ್ತದೆ. ಒಂದೊಂದು ಏಟಿಗೂ ನೋವಿನಿಂದ ಚರ್ಮ ಕಿತ್ತುಬಂದರೂ ತುಟಿ ಕಚ್ಚಿ ಸಹಿಸುತ್ತಾನೆ. ಪ್ರತಿ ಏಟಿಗೂ “ವಂದೇ ಮಾತರಂ”, “ಭಾರತ ಮಾತೆಗೆ ಜಯವಾಗಲಿ” ಎಂಬ ಘೋಷಣೆಗಳನ್ನು ಹಾಕುತ್ತಾನೆ. ಮುಂದೆಯೂ ಕ್ರಾಂತಿ ಮುಂದುವರೆಸುವ ಹುಡುಗ ಆಂಗ್ಲರಿಗೆ ಸಿಂಹಸ್ವಪ್ನನಾಗುತ್ತಾನೆ. ಹಣದಾಸೆಗೆ ಮಿತ್ರನೊಬ್ಬನು ಇವನಿರುವ ಸ್ಥಳದ ಸುಳಿವು ಕೊಟ್ಟು ದ್ರೋಹವೆಸಗುತ್ತಾನೆ. ಕೈಯಲ್ಲಿ ಪಿಸ್ತೂಲು ಹಿಡಿದ ಎಂಭತ್ತು ಮಂದಿ ಪೊಲೀಸರು ಅವನ ಮೇಲೆ ಆಕ್ರಮಣ ಮಾಡುತ್ತಾರೆ. ಆಜಾದ್ ಒಬ್ಬನೇ ಅವರನ್ನೆಲ್ಲಾ ತನ್ನ ಗುಂಡುಗಳಿಂದ ಎದುರಿಸುತ್ತಾನೆ. ಆಂಗ್ಲರಿಗೆ ಸೆರೆಯಾಗಲಿಚ್ಚಿಸದೆ ಕೊನೆಯ ಗುಂಡಿನಿಂದ ತಾನೇ ಹೊಡೆದುಕೊಂಡು ಭಾರತಾಂಬೆಯನ್ನು ಸ್ಮರಿಸುತ್ತಾ ಆಕೆಗೆ ತನ್ನ ಪ್ರಾಣಪುಷ್ಪವನ್ನು ಸಮರ್ಪಿಸುತ್ತಾನೆ. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಚಂದ್ರಶೇಖರ ಆಜಾದ್ ಎಂದೇ ಅಮರನಾಗಿದ್ದಾನೆ.
ಹೀಗೆಯೇ ದೇಶದ ಸ್ವಾತಂತ್ರ್ಯವೇ ಧೈಯವಾಗಿ ರಣರಂಗದಲ್ಲಿ ಕಾದಾಡಿದವರು, ಅಹಿಂಸಾ ಮಾರ್ಗದಿಂದ ಬ್ರಿಟಿಷರನ್ನು ಎದುರಿಸಿದವರು. ಕ್ರಾಂತಿ ಮಾರ್ಗ ಹಿಡಿದವರು, ಈ ಹೋರಾಟದಲ್ಲಿ ಭಾಗಿಯಾದವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾ, ಕೌಟುಂಬಿಕ ಜೀವನದಲ್ಲಿ ಬಂದ ಕಷ್ಟನಷ್ಟಗಳನ್ನು, ಸಾವು ನೋವುಗಳನ್ನು ಅನುಭವಿಸಿದವರು ಲೆಕ್ಕವಿಲ್ಲದಷ್ಟು ಮಂದಿ. ಒಟ್ಟಿನಲ್ಲಿ ಸ್ವಾತಂತ್ರವೇ ಅವರೆಲ್ಲರ ಜೀವನದ ಧೈಯವಾಗಿತ್ತು.
ಆನಂತರದ ವರ್ಷಗಳಲ್ಲಿ ಅಂದರೆ ಅಂದಿನಿಂದ ಇಂದಿನವರೆಗೂ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವಲ್ಲಿ, ದೇಶವಾಸಿಗಳಿಗೆ ರಕ್ಷಣೆಕೊಡಲೋಸುಗ ತಮ್ಮ ಪ್ರಾಣಗಳನ್ನು ಪಣವಾಗಿಟ್ಟು ಗಡಿಗಳಲ್ಲಿ ಕಾಯುತ್ತಾ, ಅನಿವಾರ್ಯವಾದಾಗ ರಣರಂಗದಲ್ಲೂ ಹೋರಾಡುತ್ತಿರುವ ವೀರಯೋಧರದು ಸಾಹಸಗಾಥೆಯೇ ಸರಿ. ಮುಂದೆ ನಡೆದ ಯುದ್ಧಗಳಲ್ಲಿ ನಮ್ಮ ವೀರ ಸೈನಿಕರು ಶತ್ರುಗಳಿಗೆ ಪಾಠ ಕಲಿಸಿದ್ದಾರೆ. ಸಾವು ನೋವುಗಳಾದರೂ ಕೆಚ್ಚಿನಿಂದ ನಮ್ಮ ಸೈನ್ಯ ಹೋರಾಡುತ್ತಾ ಸ್ವಾತಂತ್ರ್ಯದ ರಕ್ಷಣೆ ಮಾಡುತ್ತಲೇ ಬಂದಿದೆ. ಕಾರ್ಗಿಲ್ ಯುದ್ಧದಲ್ಲಿ ವಿಜಯೋತ್ಸವ ಆಚರಿಸಲು ನಮ್ಮ ಯೋಧರು ತೆತ್ತ ಬೆಲೆ ಅಸಾಮಾನ್ಯವಾದುದು. “ಶತ್ರುಗಳನ್ನು ಕೊಲ್ಲುವುದಕ್ಕಿಂತ ಮೊದಲು ಸಾವು ಎದುರಾದರೆ ಸಾವನ್ನೂ ಸಾಯಿಸುತ್ತೇನೆ” ಎಂದು ಹೋರಾಡಿದ್ದು ಧೀರ ಮನೋಜ್ ಪಾಂಡೆ. ನಾನು ಸಾಯುವುದು ಯುದ್ಧಭೂಮಿಯಲ್ಲೇ.” ಎನ್ನುವ ದೃಢನಿಶ್ಚಯದಿಂದ ಯುದ್ಧ ಮಾಡುತ್ತಲೇ ಮಡಿದಿದ್ದು ರಾಜಕುಮಾರ್ ಪೂನಿಯಾ. ದೇಹದ ಅನೇಕ ಭಾಗಗಳನ್ನು ಪಾಕ್ ಸೈನಿಕರು ಕತ್ತರಿಸಿಹಾಕಿದರೂ ಭಾರತದ ಸೈನಿಕರ ಗುಟ್ಟು ಬಿಟ್ಟುಕೊಡಲಿಲ್ಲ ಕ್ಯಾಪ್ಟನ್ ಸೌರಭ್ ಕಾಲಿಯಾ, ಹೀಗೆ ದೇಶದ ರಕ್ಷಣೆಗಾಗಿ ಸರ್ವಶ್ರೇಷ್ಠವಾದ ತಮ್ಮ ಪ್ರಾಣಪುಷ್ಪಗಳನ್ನೇ ಅರ್ಪಿಸಿದವರ ಜೀವನಾದರ್ಶ ಅತ್ಯಂತ ಶ್ರೇಷ್ಠಮಟ್ಟದು.
ಬಾಳದು ನಮ್ಮದು, ಬೆಲೆ ಹಿರಿದಾದುದು.
ಕಳೆದರೆ ವ್ಯರ್ಥವೆ, ಬಾಳೇ ಬರಿದು.
ಒಳಗಿನ ಆತ್ಮವು ಮೆಚ್ಚುವ ರೀತಿಯು,
ಒಳ್ಳೆಯ ಧೈಯದಿ ಸಾರ್ಥಕ ಬದುಕು.
******************** ------------------------------- ***********************