Hindu Vani
Index
ಸೂಕ್ತಿಶ್ರೀ
ದಂಡಸ್ಯೇವ ಭಯಾತ್ ಸರ್ವೇ ಧರ್ಮೇ ತಿಷ್ಯಂತಿ ಜಂತವಃ
ಪರಸ್ಪರಂ ತು ಖಾದೇಯುರ್ಯದಿ ದಂಡೋ ನ ರಕ್ಷಯತ್ ||
-- ಉದ್ಯೋಗ ಪರ್ವ ಮಹಾಭಾರತ
ಶಿಕ್ಷೆ ಅಥವಾ ದಂಡನೆಯ ಭಯದಿಂದ ಎಲ್ಲರೂ, ಎಲ್ಲಾ ಪ್ರಾಣಿಗಳೂ ಧರ್ಮ ಮಾರ್ಗದಲ್ಲಿ ನಡೆಯುತ್ತವೆ. ಶಿಕ್ಷಿಸುವ ದಂಡವು ರಕ್ಷಿಸದೆ ಹೋದರೆ ಜನರೆಲ್ಲರೂ ಪರಸ್ಪರ ಒಬ್ಬರನೊಬ್ಬರು ತಿಂದೇ ಬಿಡುತ್ತಿದ್ದರು.
ಧರ್ಮವು ತನ್ನನ್ನು ರಕ್ಷಿಸಿದವರನ್ನು ರಕ್ಷಿಸುತ್ತದೆ ಎನ್ನುವುದಾಗಲೀ, ಜಗತ್ತನ್ನು ರಕ್ಷಿಸುವುದು ಧರ್ಮ ಮಾತ್ರವೇ ಎಂಬ ಮಾತಾಗಲೀ, ಜನರನ್ನು ಆಧರಿಸುವುದು ಧರ್ಮವೇ ಎಂಬುದಾಗಲೀ ಅನೂಚಾನವಾಗಿ ಪ್ರಚಲಿತವಾಗಿರುವ ಮಾತು. ಈ ಮಾತುಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವೆನಿಸುವ ಮಾತುಗಳು.
ಧರ್ಮವು ರಕ್ಷಿಸುವುದೆಂದರೆ ಯಾವ ರೀತಿಯಿಂದ? ಧರ್ಮದ ಕಕ್ಷೆಯೊಳಗೆ ಧರ್ಮವನ್ನು ರಕ್ಷಿಸಲು ಉಪಯೋಗಿಯಾಗಬಲ್ಲ ದಂಡನೆಯೂ ಶಿಕ್ಷೆಯೂ ಒಳಗೊಂಡಿರುತ್ತದೆ. ಅಂದರೆ ಅಪರಾಧಿಗಳಿಗೆ ನೀಡುವ ಶಿಕ್ಷೆಯು ಕೂಡಾ ಧರ್ಮಕಾರ್ಯವೇ. ಇದರಿಂದ ಅಧರ್ಮಕಾರ್ಯಕ್ಕೆ ತಡೆಯಾಗುತ್ತದೆ. ಸಾಮಾನ್ಯ ಜನರು ಅಪರಾಧ ಕೃತ್ಯಗಳಲ್ಲಿ ತೊಡಗುವವರು ದಂಡನೆಗೆ ಭಯಬಿದ್ದು ತಪ್ಪು ಮಾಡದೆ ಉಳಿಯುವರು. ತಮ್ಮ ತಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗುವರು. ಒಂದು ವಿಶೇಷ ನಿಯತಿಗೆ ಬಗ್ಗಿಕೊಂಡು ವಿಶ್ವವು ಮುಂದುವರೆಯುತ್ತದೆ. ಗಾಳಿಯು ಬೀಸುವುದು ಪರಮಾತ್ಮನ ಭಯದಿಂದ, ಸೂರ್ಯನು ಉದಯಿಸುವುದು ಕೂಡಾ ಇದೇ ಬಗೆಯ ಭಯದಿಂದಲೆ. ಇಂದ್ರನು ಮಳೆಯನ್ನು ಸುರಿಸುವುದಾಗಲೀ ಬೆಂಕಿಯು ಸುಡುವ ತನ್ನ ಕರ್ತವ್ಯವನ್ನು ನಿಭಾಯಿಸುವುದಾಗಲೀ ಮೃತ್ಯುವು ದಯೆ ದಾಕ್ಷಿಣ್ಯಗಳಿಲ್ಲದೆ ತನ್ನ ಕೆಲಸವನ್ನು ಮಾಡುವುದೂ ಇದೇ ಭಯದಿಂದ, ಇದು ತೈತ್ತಿರೀಯೋಪನಿಷತ್ತು ಹೇಳುವ ಮಾತು.
ಧರ್ಮವು ಗೋರೂಪದಲ್ಲಿ ಇದೆಯೆನ್ನುತ್ತಾರೆ. ಕೃತ ಯುಗದಲ್ಲಿ ಧರ್ಮವು ನಾಲ್ಕು ಕಾಲುಗಳಿಂದ ಭದ್ರವಾಗಿ ನೆಲೆಯೂರಿತ್ತು. ತ್ರೇತಾಯುಗದಲ್ಲಿ ಧರ್ಮದ ಪರಿಸ್ಥಿತಿಯು ಕೆಟ್ಟು ಹೋಗಿ ಅದರ ಒಂದು ಕಾಲು ಕುಂಟಿತು. ಮೂರು ಕಾಲುಗಳಲ್ಲಿ ಅದು ನಿಲ್ಲಲು ಪ್ರಯತ್ನಿಸಬೇಕಾಯಿತು. ದ್ವಾಪರ ಯುಗವು ಬರುತ್ತಲೇ ಅದರ ಇನ್ನೊಂದು ಕಾಲು ಕೂಡಾ ಕುಂಟಾಗಿ ಧರ್ಮವು ಎರಡೇ ಕಾಲುಗಳಲ್ಲಿ ನಿಲ್ಲಬೇಕಾಯಿತು. ಈಗಿರುವ ಕಲಿಯುಗದಲ್ಲಿ ಅದು ಇನ್ನೂ ಕಷ್ಟವನ್ನು ಅನುಭವಿಸಬೇಕಾಯಿತು. ಧರ್ಮದ ಪಾಲೀಗ ಒಂದನೇ ನಾಲ್ಕು ಭಾಗಕ್ಕೆ ಸೀಮಿತವಾಗಿದೆ. ಸಜ್ಜನರು ಈಗ ಒಂದಿಷ್ಟಾದರೂ ಸುರಕ್ಷಿತರಾಗಿರುವರೆಂದರೆ ಧರ್ಮವು ಒಂದೇ ಕಾಲಿನಲ್ಲಿದ್ದರೂ ನಿಂತಿರಲು ಪ್ರಯತ್ನಿಸಿದುದರಿಂದ.
ಇನ್ನು ಅಪರಾಧಗಳನ್ನು ನಿಯಂತ್ರಿಸುವ ಭಾಗ, ಅದಕ್ಕಿರುವ ಒಂದೇ ಮಾರ್ಗವೆಂದರೆ, ಅಪರಾಧಿಗಳನ್ನು ದಂಡಿಸಿ ಅವರನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು. ಅಪರಾಧಗಳನ್ನು ನಡೆಸಬಲ್ಲ ಅಂಗಾಂಗಗಳನ್ನು ಕಡ್ಡಾಯವಾಗಿ ದಮನಿಸುವುದು ಅಂದರೆ ನಿಗ್ರಹಿಸುವುದು, ತಪ್ಪುಗಳನ್ನು ನಡೆಸದಂತೆ ಮಾಡುವುದು. ಕದಿಯದಿರುವಂತೆ, ಕೊಲ್ಲದಿರುವಂತೆ, ನೋವಾಗುವ ಮಾತನಾಡದಂತೆ, ಮಾಡುವುದು ದಂಡದಿಂದ ಅಂದರೆ ದಂಡನೆಯಿಂದ ಆದರೆ ಇವಕ್ಕೂ ಒಂದು ಮಿತಿಯಿದೆ. ದಂಡನೆಯ ಭಯದಿಂದ ಅಪರಾಧವು ನಿಲ್ಲುವುದು ಪೂರ್ಣವೇನಲ್ಲ.
ಅಪರಾಧವು ಸಂಪೂರ್ಣನಿಲ್ಲಬೇಕಾದರೆ ಅದಕ್ಕೆ ಆಗಬೇಕಿರುವುದು ಅದನ್ನು ಮಾಡಲೆಳೆಸುವ ಮನಸ್ಸನ್ನು ನಿಯಂತ್ರಿಸುವುದು. ಅದೊಂದು ಶಾಶ್ವತವಾದ ನಿಯಂತ್ರಣ ಮಾರ್ಗವಾಗುವುದು. ಇಂತಹ ಮನಸ್ಸಿನ ನಿಗ್ರಹವಾಗುವುದು ಶಮದಿಂದ. ಇದು ಬರೇ ದಂಡನೆಯಿಂದ ಆಗದು. ಕಾನೂನಿಂದ ಸಾಧ್ಯವಾಗದ ಮಾತು. ಅದು ಸಜ್ಜನ ಭಾವನೆಯನ್ನು ಬೆಳೆಸುವುದರಿಂದ ಸಾಧ್ಯ. ಇದು ಅಧ್ಯಯನದಿಂದ, ಸಂಭಾಷಣೆಯಿಂದ, ಪ್ರವಚನಗಳಿಂದ ಸಾಧ್ಯ. ಧರ್ಮಮಾರ್ಗದ ಒಳಿತನ್ನು ಅರಿತವರಿಂದ ಇದು ಆಗಬಲ್ಲುದು. ವಿದ್ಯಾಭ್ಯಾಸದಲ್ಲಿ ಜೀವನ ಮೌಲ್ಯಗಳನ್ನು ಅಳವಡಿಸುವುರಿಂದಲೂ ಇದು ಸಾಧ್ಯವಾಗುವುದು.