Logo

VHP PUBLICATIONS

Hindu Vani


expand_more

ಮುಖಪುಟ ಲೇಖನ

By ಸಾಗರ್, ವಿಭಾಗ ಸಂಘಟನಾ ಕಾರ್ಯದರ್ಶಿ, ಕೋಲಾರ
ಮುಖಪುಟ ಲೇಖನ

ಕ್ರಾಂತಿಯ ಕಿಚ್ಚು ರಾಮಪ್ರಸಾದ ಬಿಸ್ಮಿಲ್

ಕ್ರಾಂತಿಕಾರಿ ರಾಮಪ್ರಸಾದ ಬಿಸ್ಮಿಲ್ ಹುಟ್ಟಿದುದು 18978 ಜೂನ್ 11ರಂದು ಶಹಜಹಾನಪುರದ ಬಡಕುಟುಂಬವೊಂದರಲ್ಲಿ. ತಮಗೆ ಮರಣದಂಡನೆಯ ತೀರ್ಪು ಬಂದ ಮೇಲೆ ಸೆರಮನೆಯ ಕೋಣೆಯಲ್ಲಿ ಗಲ್ಲುಶಿಕ್ಷೆಗೆ ಕಾಯುತ್ತಿರುವಾಗ ಬಿಸ್ಮಿಲ್ ತಮ್ಮ ಆತ್ಮಚರಿತೆಯನ್ನು ಬರೆಯುತ್ತಾರೆ. ಅವರು ಬರೆದಂತೆ ಆ ಕಾಲಖಂಡದಲ್ಲಿ ಭೀಕರ ಕ್ಷಾಮದಿಂದಾಗಿ ಅವರ ಹಿರಿಯರು ಚಂಬಲ್ ಪ್ರದೇಶದಿಂದ ಶಹಜಹಾನಪುರಕ್ಕೆ ವಲಸೆ ಬಂದರು. ಅವರ ತಂದೆಯವರು ಅಲ್ಲಿಯ ನ್ಯಾಯಾಲಯದಲ್ಲಿ ಮಾರಾಟವನ್ನು ಪ್ರಾರಂಭಿಸಿದ ಮೇಲೆ ಕುಟುಂಬದ ಆರ್ಥಿಕ ಸ್ಥಿತಿಯು ಕೊಂಚ ಸುಧಾರಿಸಿತು.

ಬಿಸ್ಮಿಲ್ ತಮ್ಮ ಬಾಲ್ಯದ ತುಂಟಾಟಗಳಿಂದಲೇ ಊರಲ್ಲಿ ಎಲ್ಲರಿಗೂ ಪರಿಚಯವಾಗಿದ್ದರು. ಕೊಂಚ ದೊಡ್ಡವನಾಗುತ್ತಲೇ ಬಿಸ್ಮಿಲ್, ಊರಿನ ದೇವಸ್ಥಾನದ ರಾತ್ರಿ ಪೂಜೆಯನ್ನು ವಹಿಸಿಕೊಂಡು ಅದನ್ನು ಭಕ್ತಿಯಿಂದಲೂ ಆಸಕ್ತಿಯಿಂದಲೂ ನಿರ್ವಹಿಸಲು ಪ್ರಾರಂಭಿಸಿದರು. ಅದೇ ಕಾಲದಲ್ಲಿ ಆರ್ಯ ಸಮಾಜದ ಸ್ವಾಮಿ ಸೋಮದೇವರಿಂದ ಪ್ರಭಾವಿತರಾದ ಬಿಸ್ಮಿಲ್ ತಮ್ಮ ಜಿಲ್ಲೆಯ ಶುದ್ಧಿ ಕಾರ್ಯಕ್ರಮದ ಮತ್ತು ಪರಾವರ್ತನದ ಕಾರ್ಯದಲ್ಲೂ ಭಾಗವಹಿಸಲು ಪ್ರಾರಂಭಿಸಿದರು.

ಮುಂದಿನ ಜೀವನದ ಅಧ್ಯಾಯದಲ್ಲಿ ರಾಮಪ್ರಸಾದ್ ಆಗ ಜನಪ್ರಿಯವಾಗಿದ್ದ ಕಾಂಗ್ರೆಸ್‌ನ ತೀವ್ರಗಾಮಿಗಳ ಗುಂಪಿಗೆ ಸೇರಿದರು. ಆಗ ಅವರ ನಾಯಕರಾಗಿದ್ದವರು ಬಾಲಗಂಗಾಧರ ತಿಲಕ್, ಲಾಲಾಲಜಪತರಾಯ ಮತ್ತು ಬಿಪಿನ ಚಂದ್ರ ಪಾಲ್‌ರವರು, ಸ್ವಾತಂತ್ರ್ಯ ಬರುವುದು ಕೊಂಚ ತಡವಾದರೂ ಸರಿಯೇ! ಆದರೆ ದೇಶದ ಶಾಂತಿಯನ್ನು ಕದಡಬಾರದು ಎನ್ನುವುದು ಮಂದಗಾಮಿಗಳ ನಿಲುವು. ಆದುದರಿಂದ ಮಂದಗಾಮಿಗಳಿಗೂ ತೀವ್ರಗಾಮಿಗಳಿಗೂ ಒಳಗೊಳಗೆ ತಿಕ್ಕಾಟಗಳು ನಡೆಯುತ್ತಿದ್ದವು. ಆಗೊಮ್ಮೆ ಲೋಕಮಾನ್ಯ ತಿಲಕರು ಲಕ್ಕೋಗೆ ಬರುವವರಿದ್ದರು. ಅವರಿಗೆ ಸ್ವಾಗತವನ್ನು ಕೋರುವುದು ಮಂದಗಾಮಿಗಳಿಗೆ ಇಷ್ಟವಿರಲಿಲ್ಲ. ಆದರೂ ರಾಮಪ್ರಸಾದ್, ವಿರೋಧದ ನಡುವೆಯೂ ಲೋಕಮಾನ್ಯ ತಿಲಕರ ಸ್ವಾಗತ ಸಮಾರಂಭವನ್ನು ಬಹಳ ವೈಭವದಿಂದ ನೆರವೇರಿಸಿದರು. ಅದೇ ಸಮಯದಲ್ಲಿ ಅವರಿಗೆ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧರಿರುವ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಉಂಟಾಯಿತು. ಮುಂದಿನ ವರ್ಷಗಳಲ್ಲಿ ಅವರು ಕ್ರಾಂತಿಕಾರಿಗಳಿಗಾಗಿ ಕರಪತ್ರಗಳನ್ನು ಬರೆದು ಮುದ್ರಿಸಿ ಅವುಗಳನ್ನು ಯಾರಿಗೂ ಪತ್ತೆಯಾಗದಂತೆ ಹಂಚುವ ಕಾರ್ಯಕ್ರಮವನ್ನು ಕೈಗೊಂಡರು. ಆಂಗ್ಲ ಆಡಳಿತವು ಅವರ ಕರಪತ್ರಗಳನ್ನು ಮುಟ್ಟುಗೋಲು ಹಾಕಿ ಅವನ್ನು ಹಂಚುವ ಕಾರ್ಯಕರ್ತರನ್ನು ಬಂಧಿಸುತ್ತಿತ್ತು. ದಿನಗಳದಂತೆ ಅವರಿಗೆ ಕ್ರಾಂತಿಕಾರಿ ಚಳುವಳಿಯಲ್ಲಿ ಹೆಚ್ಚಿನ ಹೊಣೆಗಳನ್ನು ನೀಡಲಾಯಿತು. ಸ್ವಾತಂತ್ರ್ಯ ಯುದ್ಧಕ್ಕಾಗಿ ಆಂಗ್ಲರ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರಗಳನ್ನು ಪಡೆಯುವ ಪ್ರಯತ್ನವನ್ನು ಬಿಸ್ಮಿಲ್ ಪ್ರಾರಂಭಿಸಿದರು. ಮಧ್ಯಭಾರತದ ಪ್ರದೇಶದಲ್ಲಿ ನಡೆಯುವ ಕ್ರಾಂತಿಕಾರಿಗಳ ಹೋರಾಟಕ್ಕೆ ಬಿಸ್ಮಿಲ್‌ ಈ ಪ್ರಯತ್ನದಿಂದ ಬಹಳ ನೆರವು ದೊರೆಯಿತು.

ರಾಮಪ್ರಸಾದ್, ಗಾಂಧೀಜಿಯವರ ನೇತೃತ್ವದ ಅಸಹಕಾರ ಚಳುವಳಿಗೂ ಸಹಕಾರವನ್ನು ನೀಡುತ್ತಿದ್ದರು. ಆದರೆ ಕಾಂಗ್ರೆಸ್ಸಿನ ನಿಲುವಿನಿಂದ ಅವರು ಕೆಲವೇ ಸಮಯದಲ್ಲಿ ಪೂರ್ಣ ನಿರಾಶೆಗೊಂಡರು. “ಅಸಹಕಾರ ಚಳುವಳಿಯು ಅದಾಗಲೇ ನಿರಾಶಾದಾಯಕವಾದ ಪ್ರಯತ್ನವೆನಿಸುತ್ತಿತ್ತು. ಕೊನೆಯ ಪಕ್ಷ ಚಳುವಳಿಯಲ್ಲಿ ಪೂರ್ಣವಾಗಿ ಭಾಗವಹಿಸುವಂತೆ ತೋರಿಸಿಕೊಳ್ಳುತ್ತಿದ್ದ ಹಿರಿಯರ ಬಗ್ಗೆಯೂ ಬಿಸ್ಮಿಲ್ ಭ್ರಮನಿರಸನಗೊಂಡರು. ಅವರಲ್ಲೇ ಒಂದು ಬಗೆಯ ಪರಾಜಯದ ಲಕ್ಷಣಗಳು ತುಂಬಿರುತ್ತಿದ್ದವು. ಹಾಗಿರುವಾಗ ಇನ್ನು ಚಳುವಳಿಯ ಸ್ಥಿತಿಯು ಹೇಗಿರಬೇಡ?” ಎಂದುಕೊಂಡರು ಬಿಸ್ಮಿಲ್.

ಆದುದರಿಂದ ರಾಮಪ್ರಸಾದ್ ಕ್ರಾಂತಿಕಾರಿ ಚಳುವಳಿಯ ಕಡೆಗೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದರು. ಆಗಲೇ ಅವರು ಅಸ್ಟಾಕ್ ಉಲ್ಲಾ ಖಾನರ ಸಂಪರ್ಕವನ್ನು ಪಡೆದರು. ಖಾನ್ ಮತ್ತು ಬಿಸ್ಮಿಲರು ನಿಕಟ ಸ್ನೇಹಿತರಾದರು. ರಾಮಪ್ರಸಾದ್ ಮುಂದೆ ಖಾನರನ್ನು ತಮ್ಮ ಪ್ರಮುಖ ಸಹಾಯಕನನ್ನಾಗಿಸಿದರು. ಅಸಾಧಾರಣ ವ್ಯಕ್ತಿಗಳು ಒಂದೆಡೆ ಸೇರುವುದಕ್ಕೆ ಉದಾಹರಣೆಯೆಂದರೆ ಬಿಸಿಲ್ ಮತ್ತು ಖಾನರ ಸ್ನೇಹ. 1924ರಲ್ಲಿ ಹಿಂದುಸ್ಥಾನ ರಿಪಬ್ಲಿಕನ್ ಆರ್ಮಿಯು ಕಾನಪುರದಲ್ಲಿ ಪ್ರಾರಂಭವಾದಾಗ ಈ ಇಬ್ಬರು ಸಹಜವಾಗಿಯೇ ಅದರ ನಾಯಕರಾದರು. ಬಿಸ್ಮಿಲ್ ಹೆಚ್.ಆರ್. ಏಯ ಶಸ್ತ್ರಾಸ್ತ್ರ ವಿಭಾಗದ ಮುಖ್ಯಸ್ಥರಾದರು. ಕೆಲವು ದಾನಿಗಳು ನಿಯಮಿತವಾಗಿ ಕ್ರಾಂತಿಕಾರಿಗಳಿಗೆ ಹಣವನ್ನು ನೀಡುತ್ತಿದ್ದರೂ. ಒಟ್ಟಾರೆ ಕ್ರಾಂತಿಕಾರಿಗಳ ಸ್ಥಿತಿಯು ಆಶಾದಾಯಕವಾಗಿರಲಿಲ್ಲ. ಕ್ರಾಂತಿಕಾರಿಗಳಂತೂ ಅತ್ಯಂತ ಕಠಿಣ ಜೀವನವನ್ನು ಸಾಗಿಸುತ್ತಿದ್ದರು. ದೈನಂದಿನ ಸಣ್ಣ ಪುಟ್ಟ ಖರ್ಚುಗಳನ್ನು ನಿಭಾಯಿಸುವುದು ಕೂಡಾ ಕಷ್ಟವೆನಿಸುವ ಪ್ರಸಂಗಗಳು ಎದುರಾಗುತ್ತಿದ್ದವು. ಅದಕ್ಕಾಗಿ ಕೆಲವು ಸಣ್ಣ ಪುಟ್ಟ ಸುಲಿಗೆ ಮತ್ತು ದರೋಡೆಗಳನ್ನು ಮಾಡಬೇಕಾಗಿ ಬರುತ್ತಿತ್ತು. ಏನಿದ್ದರೂ ಯಾರ ಸ್ವಾತಂತ್ರ್ಯಕಾಗಿ ಹೋರಾಡುತ್ತಿರುವರೋ ಅವರನ್ನೇ ದೋಚುವುದು ಕ್ರಾಂತಿಕಾರಿಗಳ ಪಾಲಿಗೆ ಬಹಳ ನೋವನ್ನು ಭರಿಸುತ್ತಿತ್ತು.

ಹಲವು ಮೂಲಗಳಿಂದ ಶಸ್ತ್ರಗಳನ್ನು ತರಿಸುವ ಮಾರ್ಗಗಳಿದ್ದವು. ಆದರೆ ಹಣವಿಲ್ಲದೆ ಅವುಗಳನ್ನು ಪಡೆಯುವುದು ಸಾದ್ಯವಾಗುತ್ತಿರಲಿಲ್ಲ. 1925ರಲ್ಲಿ ಕ್ರಾಂತಿಕಾರಿಗಳ ತಂಡದ ಕೇಶವ ಚಕ್ರವರ್ತಿಯನ್ನು ಜರ್ಮನಿಯಲ್ಲಿ ನಡೆಯವ ಈಜು ಸ್ಪರ್ಧೆಗೆ ಕಳುಹಿಸುವ ಅವಕಾಶವೊಂದು ಬಂದಿತು. ಅವರು ಹೋಗುವುದು ಈಜಿನ ಸ್ಪರ್ಧೆಯೆಂದು ಇದ್ದರೂ ನಿಜವಾಗಿ ಅವರು ದೊಡ್ಡ ಸಂಖ್ಯೆಯಲ್ಲಿ ಮೌಸರ್‌ ಪಿಸ್ತೂಲುಗಳನ್ನು ಸಂಗ್ರಹಿಸಿ ತರುವುದು ಆ ಪ್ರವಾಸದ ಉದ್ದೇಶವಾಗಿದ್ದಿತು. ಪಿಸ್ತೂಲ್‌ಗಳೇನೋ ಬಂದುವು. ಅವನ್ನು ಭಾರತದ ಸಮುದ್ರ ಗಡಿಯ ಹೊರಗೆ ದೋಣಿಯಲ್ಲಿ ಸಾಗಿಸಿ ಅವನ್ನು ರಾಜೇಂದ್ರ ಲಾಹಿರಿ ಎನ್ನವ ಕ್ರಾಂತಿಕಾರಿಯು ಸುಪರ್ದಿಗೆ ಒಪ್ಪಿಸಿದುದೂ ಆಯಿತು.

ಹಣ ಈಗ ಹಣ ಪಾವತಿಸುವ ಹೊಣೆ ರಾಮಪ್ರಸಾದರ ಪಾಲಿಗೆ ಬಂದಿತು. ಬಿಸ್ಮಿಲ್ ಸಂಪಾದನೆಗೊಂದು ಬೇರೆ ಹುಡುಕಲೇ ಬೇಕಾಯಿತು. ದಾರಿ ಇದಕ್ಕಾಗಿ ಸರಕಾರಿ ಖಜಾನೆಯನ್ನು ದೋಚುವುದೊಂದೇ ದಾರಿಯೆನಿಸಿತು. ಅದು ಅತ್ಯಂತ ಅಪಾಯಕಾರಿಯಾದ ಸಾಹಸ ಎನ್ನುವುದೂ ಬಿಸ್ಮಿಲ್‌ಗೆ ತಿಳಿದಿದ್ದಿತು. ಬಿಸ್ಮಿಲ್ ತಮ್ಮ ರೈಲು ಪ್ರಯಾಣದಲ್ಲಿ ಪ್ರತಿ ನಿಲ್ದಾಣದಲ್ಲಿ ಕಾವಲುಗಾರನ ಬೋಗಿಯಲ್ಲಿದ್ದ ಸರಕಾರಿ ಖಜಾನೆಯ ಪೆಟ್ಟಿಗೆಯಲ್ಲಿ ಸರ್ಕಾರವು ವಸೂಲು ಮಾಡಿದ ತೆರಿಗೆ ಮತ್ತು ಸುಂಕಗಳ ಮೊತ್ತವನ್ನು ತಂದು ತುಂಬಿಸುವುದನ್ನು ಗಮನಿಸಿದ್ದರು. ಈ ಸಂದರ್ಭವನ್ನು ತಾವು ಉಪಯೋಗಿಸಬಹುದೆಂದು ರಾಮ ಪ್ರಸಾದ್ ತೀರ್ಮಾನಿಸಿದರು. ಇದಕ್ಕಾಗಿ ಶಹರಾನಪುರದಿಂದ ಲಕ್ಷ್ಮೀಗೆ ಸಾಗುವ ಟ್ರೈನ್ ಸಂಖ್ಯೆ 8 ಡೌನ್‌ಟೈನ್ ದೋಚುವುದೆಂದು ನಿರ್ಧರಿಸಲಾಯಿತು. ಅವರ ಪ್ರಕಾರ ಈ ರೈಲು ಲಕ್ಕೋವನ್ನು ತಲುಪುದಾಗ ಕನಿಷ್ಠ ಹತ್ತು ಸಾವಿರ ರೂಪಾಯಿಗಳಾದರೂ ಆ ಪೆಟ್ಟಿಗೆಯಲ್ಲಿ ಸಂಗ್ರಹವಾಗುತ್ತದೆಂದು ಅವರು ಅಂದಾಜಿಸಿದರು. ಆ ಕಾಲದಲ್ಲಿ ಅದು ಬಹಳ ದೊಡ್ಡ ಮೊತ್ತವೇ ಆಗಿದ್ದಿತು. ರೈಲನ್ನು ದೋಚಲು ಲಕ್ಕೋದಿಂದ 20ಮೈಲು ದೂರವಿರುವ ಕಾಕೋರಿ ಎನ್ನುವ ಸಣ್ಣ ನಿಲ್ದಾಣವನ್ನು ಆರಿಸಿಕೊಂಡುದೂ ಆಯಿತು.

ರಾಮಪ್ರಸಾದ್ ಬಿಸ್ಮಿಲ್ ಈ ಅಪಾಯಕಾರಿ ಸಾಹಸಕ್ಕಾಗಿ 10 ಮಂದಿ ತರುಣರ ತಂಡವನ್ನು ಜೊತೆ ಗೂಡಿಸಿದರು. ತಂಡದಲ್ಲಿ ಅಲ್ಫಾಕ್ ಉಲ್ಲಾಖಾನ್ ಒಬ್ಬರಿಗೆ ಮಾತ್ರ ಈ ಯೋಜನೆಯು ಸರಿ ಎಂದು ಕಾಣಲಿಲ್ಲ. ಅದೊಂದು ಅತಿ ಅಪಾಯಕಾರಿಯಾದ ಯೋಜನೆ ಎನಿಸಿತು. ಅದು ಸಫಲವಾದರು ಕೂಡಾ ಹೊಸದಾಗಿ ಪ್ರಾರಂಭವಾದ ಹಿಂದುಸ್ಥಾನ್ ರಿಪಬ್ಲಿಕನ್ ಆರ್ಮಿಯ ಪಾಲಿಗೆ ಇದರಿಂದಾಗಿ ಅನಾವಶ್ಯಕವಾದ ಗಮನವು ಹರಿದು ಅದು ಬಹು ದೊಡ್ಡ ಅಪಾಯವನ್ನು ತಂದೊಡ್ಡಬಹುದು ಎಂದೆನಿಸಿತು. ಆದರೂ ಎಲ್ಲರ ಅಭಿಪ್ರಾಯದಿಂದ ಬೇರಾಗುವುದು ಬೇಡವೆಂದುಕೊಂಡ ಅಶ್ವಾಕ್ ಉಲ್ಲಾಖಾನ್ ಕೊನೆಗೆ ತಮ್ಮ ಒಪ್ಪಿಗೆಯನ್ನೂ ಕೊಟ್ಟರು.

9.8.1925ರಂದು ಬಿಸ್ಮಿಲರ ತಂಡವು ಡೌನ್ ಟ್ರೇನಿನ ಎರಡನೇ ದರ್ಜೆಯ ಬೋಗಿಯನ್ನು ಪ್ರವೇಶಿಸಿತು. ಮೊದಲೇ ನಿರ್ಧರಿಸಿದಂತೆ ಕಾಕೋರಿ ನಿಲ್ದಾಣವು ಬರುತ್ತಿದ್ದಂತೆ ತುರ್ತು ಸರಪಣಿಯನ್ನು ಎಳೆದು ರೈಲನ್ನು ನಿಲ್ಲಿಸಲಾಯಿತು. ಕಾವಲು ಸಿಪಾಯಿಯು ಓಡಿಬರುತ್ತಿದ್ದಂತೆ ಅವನನ್ನು ನೆಲಕ್ಕೆ ಉರುಳಿಸಿ ನಿರಾಯುಧನನ್ನಾಗಿ ಮಾಡಿದರು.

ಪ್ರಯಾಣಿಕರಾರೂ ಕೆಳಗೆ ಇಳಿಯಬಾರದೆಂದೂ ಶಾಂತವಾಗಿ ಇದ್ದಲ್ಲೇ ಇರಬೇಕೆಂದೂ ಕೂಗಿ ಹೇಳಲಾಯಿತು. ಆಗಾಗ್ಗೆ ಗಾಳಿಯಲ್ಲಿ ಗುಂಡುಹಾರಿಸುತ್ತಾ ಪ್ರಯಾಣಿಕರ ವಿರೋಧವು ಬಾರದಂತೆ ಬೆದರಿಸಿದರು. ರೈಲಿನ ಚಾಲಕರನ್ನು ಶೌಚಾಲಯದೊಳಗೆ ದಬ್ಬಿ ಹೊರಬಾರದಂತೆ ನೋಡಿಕೊಂಡರು. ರೈಲಿನ ಇಂಜಿನಿಯರ್‌ನನ್ನು ಅವನ ಬೋಗಿಯಿಂದ ಅತ್ತಿತ್ತ ಹೋಗದಂತೆ ಮಾಡಿದರು. ಉಕ್ಕಿನ ತಿಜೋರಿ ಪೆಟ್ಟಿಗೆಯನ್ನು ಎತ್ತಿ ಹೊರತಂದರು. ಬೀಗವನ್ನು ಒಡೆಯಲು ಮಾಡಿದ ಪ್ರಯತ್ನವು ಪದೇಪದೇ ವಿಫಲವಾಯಿತು. ಅಲ್ಲೇ ಇದ್ದ ಹಾರೆಯಿಂದ ಅಲ್ಪಾಕ್ ಉಲ್ಲಾ ಹೊಡೆದ ಏಟಿಗೆ ಕೊನೆಗೂ ಆ ಬೀಗವು ಒಡೆಯಿತು. ಪೆಟ್ಟಿಗೆಯನ್ನು ತೆರೆದು ನೋಡಿದರೆ ಆ ದಿನ ಅಲ್ಲಿ ಸಂಗ್ರಹವಾದುದು 4600 ರೂಪಾಯಿಗಳು ಮಾತ್ರವೇ, ಅದು ಕೂಡಾ ಆ ಸಮಯದಲ್ಲಿ ಬಹಳ ದೊಡ್ಡ ಮೊತ್ತವೆನಿಸಿದುದು ಸಹಜವೆ. ಹಣವನ್ನು 3 ಚೀಲಗಳಲ್ಲಿ ತುಂಬಿಸಿಕೊಂಡರು.

ಅಗತ್ಯವಿಲ್ಲದಿದ್ದರೆ ಯಾರ ಮೇಲೂ ಗುಂಡು ಹಾರಿಸಬಾರದು ಎನ್ನುವುದು ನಾಯಕರಾದ ಬಿಸ್ಮಿಲ್‌ರ ಆಜ್ಞೆಯಾಗಿದ್ದಿತು. ಎಲ್ಲವೂ ಆದ ಮೇಲೆ ತಿಳಿದುದೇನೆಂದರೆ ರೈಲಿನಲ್ಲಿ 14 ಮಂದಿಯ ಸಶಸ್ತ್ರ ಪಡೆಯೇ ಇದ್ದಿತ್ತು. ಆಶ್ಚರ್ಯವೆಂದರೆ ಯಾರೊಬ್ಬರೂ ವಿರೋಧವನ್ನೇ ತೋರಿಸಲಿಲ್ಲ. ದುರ್ದೈವದಿಂದ ಒಬ್ಬ ನಿರಾಯುಧ ಪ್ರಯಾಣಿಕನು ಕುತೂಹಲವನ್ನು ತಡೆಯಲಾಗದೆ ರೈಲಿನಿಂದ ಕೆಳಗೆ ಇಳಿದನು. ಆಗ ಗೊಂದಲದಲ್ಲಿ ಹಾರಿಸಿದ ಗುಂಡು ಬಿದ್ದು ಅವನು ಸತ್ತು ಹೋದನು. ಬಿಸ್ಮಿಲ್ ಈ ಘಟನೆಯಿಂದ ಬಹಳ ನೊಂದುಕೊಂಡರು. ಮುಂದೆ ನಡೆದ ಪ್ರಕರಣದಲ್ಲಿ ತಂಡದ ಮೇಲೆ ದರೋಡೆಯೊಂದಿಗೆ ಹತ್ಯೆಯ ಆರೋಪವೂ ಸೇರಿಕೊಂಡಿತು.

(ಈಗಲೂ ಈ ಕಾಕೋರಿ ನಿಲ್ದಾಣವಿದೆ. ಅದು ಸುತ್ತಲೂ ಮಾವಿನ ತೋಟದಿಂದ ಸುತ್ತುವರೆದಿದೆ. ಈ ಪ್ರಸಂಗವನ್ನು ವಿವರಿಸುವ ಸಣ್ಣ ವಸ್ತು ಸಂಗ್ರಹಾಲಯವೂ ಅಲ್ಲಿ ಸ್ಥಾಪನೆಗೊಂಡಿದೆ. ಅಂದು ಒಡೆದ ತಿಜೋರಿಯ ಪೆಟ್ಟಿಗೆಯದ್ದೇ ಇನ್ನೊಂದು ನಕಲು ಪೆಟ್ಟಿಗೆಯೂ ಅಲ್ಲಿದೆ. ಪ್ರದರ್ಶನಕ್ಕಿಟ್ಟ ಆ ಭಾರದ ಪೆಟ್ಟಿಗೆಯನ್ನು ನೋಡುವಾಗಲೇ ಅದನ್ನು ಒಡೆಯಲು ಕ್ರಾಂತಿಕಾರಿಗಳು ಅಷ್ಟು ಸಮಯವನ್ನು ಏಕೆ ವ್ಯಯಿಸಿದರು ಎನ್ನುವುದು ಅರ್ಥವಾಗುತ್ತದೆ!)

ಹಣವನ್ನು ತೆಗೆದುಕೊಂಡ ಕ್ರಾಂತಿಕಾರಿಗಳ ತಂಡವು ಅಲ್ಲಿಂದ ಲಕೋವನ್ನು ತಲುಪಿತು. ಅಲ್ಲಿ ಹಣವನ್ನು ಹಂಚಿಕೊಂಡು ಎಲ್ಲರೂ ಮುಂದಿನ ತಮ್ಮ ಕೆಲಸಕ್ಕಾಗಿ ಚದುರಿ ಹೋದರು. ಅಲ್ಲಿಯವರೆಗೆ ಅವರನ್ನು ಯಾರೂ ಪ್ರಶ್ನಿಸಲಿಲ್ಲ.


(ಮುಂದುವರೆಯುವುದು)

ಭಗವದ್ಗೀತೆಯ ಕಲಿಕಾ ತರಗತಿಗಳು

ಬಾಲಸಂಸ್ಕಾರ ಮತ್ತು ವಿಶ್ವ ಹಿಂದು ಪರಿಷದ್ ಬೆಂಗಳೂರಿನ ಹೆಗ್ಗನ ಹಳ್ಳಿ ಮತ್ತು ಅಂದ್ರ ಹಳ್ಳಿ ಪ್ರಖಂಡದಲ್ಲಿ, ವೈಶಾಖ ಮಾಸದಲ್ಲಿ, ದೇವಸ್ಥಾನಗಳಲ್ಲಿ ಪ್ರತಿ ವಾರ ಸತ್ಸಂಗ/ಭಜನೆ ನಡೆಯುತ್ತಿವೆ. ಆರು ದೇವಸ್ಥಾನದಲ್ಲಿ ಶ್ರೀಸತ್ಯನಾರಾಯಣ ಪೂಜೆ, ಮೂರು ದೇವಸ್ಥಾನಗಳಲ್ಲಿ ಸಂಕಷ್ಟಹರ ಪೂಜೆ ಹಾಗೂ ಎರಡು ದೇವಸ್ಥಾನದಲ್ಲಿ ಅಮಾವಾಸ್ಯೆ ಹೋಮ ಹವನ, ಹಾಗೂ ಒಂದು ದೇವಸ್ಥಾನದಲ್ಲಿ ತಿಂಗಳ ಮೊದಲ ಶುಕ್ರವಾರ ತ್ರಿಶತಿ ಕುಂಕುಮಾರ್ಚನೆ ನಡೆಯುತ್ತಿದೆ.

ಭಜನೆ, ಶ್ಲೋಕ ಪಠಣ ಹಾಗೂ ಪ್ರಸಾದ ವ್ಯವಸ್ಥೆಯನ್ನು ಕಾರ್ಯಕರ್ತರು ಮಾಡಿದ್ದಾರೆ. ಎರಡು ಬಾಲ ಸಂಸ್ಕಾರ ಮತ್ತು ಒಂದು ಭಗವದ್ಗೀತೆಯ ಕಲಿಕಾ ತರಗತಿಗಳು ನಡೆದಿವೆ. ಮೇಲಿನ ಎಲ್ಲ ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತರು ನೇತೃತ್ವ ವಹಿಸುತ್ತಾ ಹಿಂದೂ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತ, ಸಂಘಟನೆ ಮಾಡುತ್ತಿದ್ದಾರೆ.

- ಸುರೇಶ ಸಭಾಹಿತ