Logo

VHP PUBLICATIONS

Hindu Vani


expand_more

ಸಂಘಟನೆ

By ನಯನ ಮತ್ತು ಪ್ರೀತಿ, ಸ್ವಾಮಿ ವಿವೇಕಾನಂದ ವಿದ್ಯಾಕುಲ, ಸಬ್ಬನಹಳ್ಳಿ, ಮೈಸೂರು

ಪರಿಷದ್ ಶಿಕ್ಷಾವರ್ಗ ಕರ್ನಾಟಕ-2025

ಕಾರ್ಯಕರ್ತರನ್ನು ಕಟ್ಟಿ ಬೆಳೆಸುವ ಕಾರ್ಯಾಗಾರ


ವಿಶ್ವ ಹಿಂದು ಪರಿಷದ್ ಕರ್ನಾಟಕದ 10ದಿನಗಳ ಪರಿಷದ್ ಶಿಕ್ಷಾ ವರ್ಗ 2025, ಕಾರ್ಕಳದ ಸಾಣೂರಿನ ರಾಜರಾಜೇಶ್ವರಿ ಶಾಲೆಯ ವಿಶಾಲ ಪರಿಸರದಲ್ಲಿ ನಡೆಯಿತು. ಅದು ಅನನ್ಯ ವಿಚಾರವೊಂದನ್ನು ಸಾಕಾರಗೊಳಿಸಲು ಹೊರಟ ಉತ್ಸಾಹಿಗಳು ಸೇರಿದ ವರ್ಗವಾಗಿದ್ದಿತು. ವೈಚಾರಿಕ ಸಂಘರ್ಷದಲ್ಲಿ ಪಾಲ್ಗೊಂಡು ಗೆಲ್ಲಬೇಕೆಂದು ಹೊರಟ ಧರ್ಮಯೋಧರ ಶಿಬಿರವಾಗಿದ್ದಿತು. ಶಿಕ್ಷಾವರ್ಗದ ಅವಧಿಗಳ ಸಮಗ್ರ ಸಂಯೋಜನೆಯೇ ಅದಕ್ಕೆ ಪುಟ ನೀಡುವಂತೆ ರಚಿಸಿಲಾಗಿದ್ದಿತು.

ಮುಂಜಾನೆ 4.45ಕ್ಕೆ ಉತ್ಥಾನವಾದರೆ ದೇಶದ ಏಕಾತ್ಮತೆಯನ್ನು ವಿವರಿಸುವ ಪ್ರಾತಃ ಸ್ಮರಣೆ ನಂತರ ಯೋಗಭ್ಯಾಸ ಮತ್ತು ಪ್ರಾಣಾಯಾಮಗಳಿಂದ ದಿನವೂ ಹೊಸ ಚೈತನ್ಯದ ಆವಾಹನೆ, ನಿತ್ಯ ಕರ್ಮಗಳನ್ನು ಮುಗಿಸಿ ಶುಚಿರುಚಿಯ ಉಪಾಹಾರಗಳೂ ಸೇರಿದಂತೆ ರಾತ್ರಿ 10:00ರ ವರೆಗೆ ಅವಿರತವಾದ ಬೌದ್ಧಿಕ ಅವಧಿಗಳು ವರ್ಗವನ್ನು ಗುರುಕುಲವನ್ನಾಗಿಸಿತ್ತು.

ಬೆಳಗ್ಗಿನ ಮೊದಲ ಅವಧಿಯ ಬೌದ್ಧಿಕ ಅವಧಿಯಲ್ಲಿ ಜ್ಞಾನ ಜಿಜ್ಞಾಸುವೊಬ್ಬನು ನಿರೀಕ್ಷಿಸುವ ವೈಚಾರಿಕ ನಿಲುವಿನ ಸ್ಪಷ್ಟತೆ, ಕಾರ್ಯನಿರತನೊಬ್ಬನಿಗೆ ಬೇಕಾದ ಕಾರ್ಯ ಪದ್ಧತಿಯ ಪರಿಚಯವು ಆಗುತಿತ್ತು. ವಿಶ್ವ ಹಿಂದು ಪರಿಷತ್ತಿನ ವಿಶ್ವವ್ಯಾಪಿ ಕಾರ್ಯ, ಹಿಂದು ಜೀವನ ಮೌಲ್ಯಗಳು, ಹಿಂದು ಸಂಘಟಿತ ಶಕ್ತಿಯ ವೈಚಾರಿಕ ಆಯಾಮ, ಭಾರತದ ನಿಜ ಇತಿಹಾಸದ ಅರಿವು, ಮರ್ಯಾದಾ ಪುರುಷೋತ್ತಮ ಶ್ರೀರಾಮ, ಧರ್ಮಸಂಸ್ಥಾಪಕ ಶ್ರೀಕೃಷ್ಣ, ಕಾರ್ಯಕರ್ತರ ಗುಣ ವಿಶೇಷತೆ, ಕುಟುಂಬ ಪ್ರಭೋಧ, ಅಖಂಡ ಭಾರತದ ಪರಿಕಲ್ಪನೆ, ಕಥನ ಅಥವಾ ನರೇಟವ್‌ಗಳ ಕುರಿತು ಇದ್ದ ಅವಧಿಗಳಂತೂ ಹಿಂದು ಕಾರ್ಯಕರ್ತನನ್ನು ರೂಪಿಸುವ ವಿಶಿಷ್ಠ ಕಾರ್ಯದ ಪ್ರಾಯೋಗಿಕ ಟಂಕಶಾಲೆಯಾಗಿದ್ದಿತು.

ಸಂಘಟನೆ

ಶ್ರೀರಾಮನ ಕುರಿತು ಮಾತನಾಡಿದವರು “ಶಿಲ್ಪಿಯೊಬ್ಬನು ಧರ್ಮದ ವಿಗ್ರಹವನ್ನು ಕೆತ್ತುತ್ತಾ ಹೋದರೆ ಅದು ಕೊನೆಗೆ ಶ್ರೀರಾಮನದ್ದೇ ವಿಗ್ರಹವಾಗುತ್ತದೆ ಎಂದ ವಾಲ್ಮೀಕಿಗಳ ಮಾತನ್ನು ಮೆಲುಕು ಹಾಕಿದರೆ ರಾಜನೊಬ್ಬನು ಧರ್ಮದ ಪ್ರತಿರೂಪವಾಗುವುದಾದರೆ ಅಂತಹ ಹಂತವನ್ನು ತಲುಪಿದ ಸಮಾಜದ ಸುಂದರ ಅಸ್ತಿತ್ವ ನಮ್ಮಲ್ಲಿ ಇದ್ದ ಬಗ್ಗೆ ಹೆಮ್ಮೆಯೆನಿಸುತ್ತದೆ. ನುಡಿಯನ್ನು ಮತ್ತು ನಡೆಯನ್ನು ಒಂದು ಮಾಡಿದವನು ಶ್ರೀರಾಮ. ಉತ್ತರ ಮತ್ತು ದಕ್ಷಿಣ ಭಾರತವನ್ನು ಜೋಡಿಸಿದವನು ಶ್ರೀರಾಮ. ಗೆದ್ದ ಮೇಲೆ ವೈರತ್ವವಿರದು. ಇರಬೇಕಾದದ್ದು ಸಾವಿನವರೆಗೆ ಮಾತ್ರ ಎಂದುಕೊಂಡು ರಾವಣನ ಅಂತ್ಯ ಸಂಸ್ಕಾರ ಮಾಡಲು ವಿಭೀಷಣನಿಗೆ ಹೇಳಿ ಶತ್ರುವಿನ ಬಗ್ಗೆಯೂ ಸಂಬಂಧದ ಹೊಸ ಆಯಾಮವನ್ನು ತೋರಿಸಿದ ಪುರುಷೋತ್ತಮನು ಶ್ರೀರಾಮ. ಚಿನ್ನದ ಲಂಕೆಯಲ್ಲ ಮನಸ್ಸನ್ನು ತುಂಬುವುದು; ತಾಯಿ ಮತ್ತು ತಾಯಿನೆಲ ಎಂದು ಮಾತೃಭೂಮಿಯ ಪ್ರೀತಿಗೊಂದು ವ್ಯಾಖ್ಯಾನ ನೀಡಿದವನು ಶ್ರೀರಾಮ. ಧರ್ಮಸೂಕ್ಷ್ಮದ ಅರಿವಿದ್ದವನು ಶ್ರೀರಾಮ, ಮರಣಾವಸ್ಥೆಯಲ್ಲಿದ್ದ ವಾಲಿಯು ಮರೆಯಲ್ಲಿ ನಿಂತು ನನ್ನನ್ನು ಕೊಂದೆಯೇಕೆ ಎಂದು ಕೇಳಿದಾಗ ಧರ್ಮವನ್ನು ಮರೆತವನು ಮೃಗಗಳಿಗೆ ಸಮಾನ, ನೀನು ಅಂತಹವನು. ಮೃಗವನ್ನು ಕೊಲ್ಲಲು ಯಾವುದೇ ರೀತಿಯೂ ಸರಿಯೆ ಎಂದುದನ್ನು ಸ್ಮರಿಸಿದಾಗ ರಾಮಾಯಣವು ಸಾವಿರಾರು ವರ್ಷಗಳಿಂದಲೂ ಭಾರತವನ್ನು ಸುಸಂಸ್ಕೃತವಾಗಿಡಲು ಕಾರಣವಾದುದರ ಬಗ್ಗೆ ಅಭಿಮಾನವೆನಿಸುತ್ತದೆ.

ಅದೇ ರೀತಿ ಕೃಷ್ಣನ ಜೀವನದ ಸಮಗ್ರತೆಯನ್ನು ವರ್ಗದಲ್ಲಿ ಕೇಳಿದ ಅವಕಾಶವೂ ವಿಶೇಷ. ತನ್ನೆಲ್ಲ ನೋವುನಲಿವುಗಳನ್ನು ಬದಿಗಿಟ್ಟು ಪರರ ಬದುಕನ್ನು ಸಹನೀಯವಾಗಿಸಲು ಸುಂದರವಾಗಿಸಲು ಹೊರಟವನು ಶ್ರೀಕೃಷ್ಣ, ಅವನ ಮೈಬಣ್ಣವು ಕಪ್ಪು ಎನಿಸಿದುದಾಗಲೀ ಕಪ್ಪು ಬಣ್ಣವು ಸುಂದರವಾದುದಾಗಲೀ ಕೃಷ್ಣನ ಅದ್ವಿತೀಯ ಜೀವನದ ಸೌಂದರ್ಯದಿಂದ. ಕಂಸನು ಅವನನ್ನು ಮಗುವಾಗಿದ್ದಾಗಲೇ ಕೊಲ್ಲಲು ಹೊರಟಿದ್ದನು. ಮಗುವನ್ನು ರಕ್ಷಿಸಿದ ಬಡಗೊಲ್ಲ ಸಮಾಜದ ಅಸಾಧಾರಣ ಸ್ಥೆರ್ಯದಿಂದ ಧರ್ಮರಕ್ಷಕನೊಬ್ಬನು ಅವತರಿಸಿದಂತಾಯಿತು. ಮಹಿಳೆಯರ ರಕ್ಷಣೆ, ಅವರ ಕಣ್ಣೀರನ್ನು ಒರೆಸುವ ರಾಜಕೀಯ ನಿಲುವು ಶ್ರೀ ಕೃಷ್ಣನ ವ್ಯಕ್ತಿತ್ವದ ವಿಶೇಷ, ವಿಶ್ವ ಹಿಂದು ಪರಿಷದ್ ಕಾರ್ಯಕಲಾಪಗಳಲ್ಲಿ ಲವ್ ಜಿಹಾದಿನಂತಹ ಪಿಡುಗನ್ನು ತಡೆಯಲು ನಿರ್ಧರಿಸಿದುದು ಶ್ರೀ ಕೃಷ್ಣನ ಜೀವನದ ಹಾದಿಯಿಂದ ಪ್ರೇರಣೆ ಪಡೆದುದರಿಂದಲೇ ಇರಬಹುದು. ಕೃಷ್ಣನ ಜೀವನದಂತೆಯೇ ಸೆರೆಮನೆ ಮತ್ತು ಸ್ವಾತಂತ್ರ್ಯಗಳ ವ್ಯತ್ಯಾಸವನ್ನು ಅರಿತವರು ಶಿವಾಜಿ, ಸಾವರ್ಕರ್, ಸುಭಾಷಚಂದ್ರ ಬೋಸರಂತಹ ಮಹಾನುಭಾವರು. ರಾಜಸೂಯ ಯಾಗದಲ್ಲಿ ಮೊದಲ ಗೌರವವು ಯಾರಿಗೆ ಸಲ್ಲಬೇಕು ಎಂದಾಗ ಭೀಷ್ಮರು ಶ್ರೀಕೃಷ್ಣನ ಹೆಸರನ್ನು ಸೂಚಿಸುತ್ತಾರೆ. ಆಗ ಕೃಷ್ಣನು ಯಾಗಕ್ಕೆ ಬಂದ ರಾಜರ ರಥದ ಕುದುರೆಗಳಿಗೆ ನೀರುಣಿಸುತ್ತ ಇದ್ದನು. ರಾಜರಿಗೆ ಕೈಕಾಲು ತೊಳೆಯಲು ನೀರು ನೀಡುತ್ತಿದ್ದನು. ಹೀಗೆ ವಿನಯದ ಮೂರ್ತಿಯಾಗಿದ್ದವನು ಶ್ರೀ ಕೃಷ್ಣ, ರಾಜರನ್ನು ತನ್ನಿಚ್ಛೆಯಂತೆ ಪಟ್ಟಕ್ಕೆ ಏರಿಸಿ ಇಳಿಸಲು ಶಕ್ತನಾದ ಕೃಷ್ಣ ತಾನೆಂದೂ ರಾಜನಾಗಲು ಬಯಸದವನು. ಲೋಹಿಯಾ ಹೇಳಿದಂತೆ ಕೃಷ್ಣನು ಪಶ್ಚಿಮದ ದ್ವಾರಕೆಯಿಂದ ಪೂರ್ವದ ಮಣಿಪುರದವರೆಗಿನ ಭಾರತವನ್ನು ಒಂದಾಗಿಸಿದವನು. ವರ್ಗದಲ್ಲಿ ಕೃಷ್ಣನ ಸ್ನೇಹ, ಅದ್ಭುತ ರಾಜಕಾರಣ, ಅಸಾಧಾರಣ ವ್ಯಕ್ತಿತ್ವಗಳ ಪರಿಚಯವಾದುದು ನಮ್ಮ ಭಾಗ್ಯ ಇದೇ ರೀತಿಯಲ್ಲಿ ಉಳಿದ ಅವಧಿಗಳೂ ಇದ್ದವು.

ಮಾಹಿತಿ ಅವಧಿ-ಜಾನಕಾರಿಯಲ್ಲಿ ಪರಿಷದ್ ಸಂಘಟನೆಯ ಇತಿಹಾಸ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಚಯ, ಸಂಘ ಪರಿವಾರದ ಪಕ್ಷಿನೋಟ, ಮತಾಂತರದ ಹಾವಳಿಯ ಪರಿಣಾಮ, ಹಿಂದು ಹಬ್ಬಗಳ ವಿಚಾರ, ಸಂಸ್ಕೃತಿ ಮತ್ತು ಸಂಸ್ಕಾರಗಳ ಮೇಲ್ನೋಟಗಳನ್ನು ಪಡೆದವು. ಪ್ರತಿದಿನ ಮಧ್ಯಾಹ್ನ ಚರ್ಚಾ ಅವಧಿ ಇದ್ದಿತು. ಇದನ್ನು ಗಟಗಳಲ್ಲಿ ವಿಂಗಡಿಸಿ ಗುಂಪುಗಳನ್ನಾಗಿ ಮಾಡಿದ್ದರು. ನಾವು ಇದ್ದುದು ಸಾರ್ವಕ‌ ಗಟದಲ್ಲಿ ಒಂದು ಚರ್ಚಾ ವಿಷಯವನ್ನು ಇಟ್ಟುಕೊಂಡು ಅದನ್ನು ಹಲವು ದೃಷ್ಟಿಯಲ್ಲಿ ಆಯಾಮಗಳಲ್ಲಿ ಚರ್ಚಿಸುವ ಅವಧಿಯಿದು. ಇಂದಿನ ಹಲವು ಸೂಕ್ಷ್ಮ ಸಾಮಾಜಿಕ ಧಾರ್ಮಿಕ ವಿಚಾರಗಳು ಅಲ್ಲಿ ಚರ್ಚಿಸಲ್ಪಡುತ್ತಿದ್ದವು. ಹಿಂದೂ ಪಂಥಗಳು, ಸಾಮರಸ್ಯ, ಅಸ್ಪೃಶ್ಯತೆಯ ನಿರ್ಮೂಲನೆ, ಮಾದಕ ದ್ರವ್ಯಗಳ ಹಾವಳಿ, ಹದಿ ಹರೆಯದ ಸೂಕ್ಷ್ಮತೆ ವಿಚಾರಗಳ ಬಗ್ಗೆ ವಿಭಿನ್ನ ದೃಷ್ಟಿಕೋನಗಳಲ್ಲಿ ವಿಮರ್ಶಿಸುತ್ತಿರುವುದು ಹೊಸ ಅನುಭವವೇ ಆಗಿದ್ದಿತು. ಚರ್ಚೆಯು ಉತ್ಕಟ ಸ್ತರದಲ್ಲಿ ನಡೆಯುವಾಗಲೂ ಅದು ವಿಚಾರದ ಆಳಕ್ಕೆ ಹೋಗುವ ಕಾತರಕ್ಕಾಗಿ ಇದ್ದಿತ್ತಲ್ಲದೆ ಗೆಲುವು ಸೋಲುಗಳನ್ನು ನಿರ್ಧರಿಸುವುದಾಗಿರಲಿಲ್ಲ. 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಪ್ರಾಂಜಲ ಮನಸ್ಸು ಇಲ್ಲೂ ಪ್ರತ್ಯಕ್ಷವಾಗುವಂತಿದ್ದಿತು. ಹೊಸ ಮಾಹಿತಿ ಪಡೆಯುವ, ತಪ್ಪು ಅಭಿಪ್ರಾಯಗಳನ್ನು ತಿದ್ದಿಕೊಳ್ಳಲು ಬೇಕಾದ ಪರಿಸರವೇ ಅಲ್ಲಿ ದೊರಕಿದುದು ನಮ್ಮ ಜೀವನದ ವಿನೂತನ ಅವಕಾಶವೆನಿಸಿತು. ಸಂಜೆಯ ಸಂಘಸ್ಥಾನವೆಂದರೆ ಮೈದಾನದಲ್ಲಿ ನಡೆಯುವ ಶಾರೀರಿಕ ಅವಧಿ, ಭಗವಾ ಧ್ವಜದ ಮುಂದೆ ಸೇರಿ ನಡೆಸುವ ವ್ಯಾಯಾಮ, ಕವಾಯತು, ಆಟಗಳು ಮತ್ತು ಪ್ರಾರ್ಥನೆಯು ವರ್ಗದಲ್ಲಿ ಪಡೆದ ಇನ್ನೊಂದು ದೈವಿಕ ಅನುಭವ. ಆಜ್ಞೆಗಳೆಲ್ಲವೂ ಸಂಸ್ಕೃತದಲ್ಲಿದ್ದು ಕೇಳಲು ಅನುಸರಿಸಲು ಹೆಮ್ಮೆಯೆನಿಸುತ್ತಿದ್ದಿತು.

ರಾತ್ರಿಯ ಸತ್ಸಂಗದ ಅವಧಿಯೂ ಧಾರ್ಮಿಕ ಮತ್ತು ಸಾಮಾಜಿಕ ಗೋಷ್ಟಿಯಾಗಿದ್ದಿತು. ಭಕ್ತಿಪೂರಿತ ಭಜನೆಗಳು ನಂತರ ದೇಶಧರ್ಮದ ಬಗ್ಗೆ ಸ್ಫೂರ್ತಿದಾಯಕ ಮಾತು, ಭಾರತ ಮಾತೆಗೆ ಸಾಮೂಹಿಕ ಆರತಿ ಜಯಘೋಷಗಳು ಉಲ್ಲಾಸದಾಯಕ ಮನಸ್ಸನ್ನು ನಿರ್ಮಿಸುವಂತಿದ್ದವು. ಭೋಜನವೂ ಜೀವನದ ಹಲವು ಸುಂದರ ಕ್ಷಣಗಳಿಗೆ ಚೈತನ್ಯ ನೀಡುವಂತಿದ್ದಿತು. ನಾಡಿನ ಹಲವು ಊರುಗಳಿಂದ ಬಂದ ಶಿಕ್ಷಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತ ಉಣ್ಣುವುದು ಅದರೊಂದಿಗೆ ಸರದಿಯಲ್ಲಿ ಉಣಬಡಿಸುವ ಕೆಲಸವೂ ಬಂದಾಗ ಆ ಆನಂದದ ಅನುಭವೂ ಹೊಸಹೊಸದು. ದಿನದ ಕೊನೆಯ ಅವಧಿಯಲ್ಲಿ ಮನೋರಂಜನೆಯೂ ಪ್ರತಿಭಾ ಪ್ರದರ್ಶನವೂ ಸ್ಪರ್ಧೆಯೂ ಸೇರಿದಂತೆ ಕಾರ್ಯಕ್ರಮಗಳ ಸಂಯೋಜನೆ. ರಾಮಾಯಣ ಮಹಾಭಾರತಗಳ ರಸಪ್ರಶ್ನೆ, ಆಶುಭಾಷಣಗಳು ಅಂತ್ಯಾಕ್ಷರಿಗಳು, ನಗುವಿನೊಂದಿಗೆ ಪ್ರಚಂಡ ಕರತಾಡನದೊಂದಿಗೆ ಜಯಘೋಷದೊಂದಿಗೆ ಸಮಾಪ್ತವಾಗುತ್ತಿದ್ದವು.

ನಾವು ಶಿಕ್ಷಕಿಯರು. ಆದರೆ ವರ್ಗದಲ್ಲಿ ನಾವೂ ವಿದ್ಯಾರ್ಥಿಗಳಾದೆವು. ಕಲಿಯುವುದಕ್ಕೆ ಕೊನೆ ಎಲ್ಲಿದೆ ಎಂಬುದನ್ನು ಅರಿತೆವು. ಹಲವು ವಿಚಾರವಂತರನ್ನು ಕಂಡೆವು. ಜೊತೆಯಲ್ಲಿ ಸಮಯ ಕಳೆದವು. ಹೊಸ ಹೊಸದನ್ನು ಕಲಿತೆವು. ಕೆಲಕೆಲವನ್ನು ಕಳೆದು ಕೊಳ್ಳಬೇಕೆನಿಸಿತು. ಅದನ್ನೂ ಪ್ರಯತ್ನಿಸಿದೆವು. ಕಲಿಯುವುದಕ್ಕೆ ಕೊನೆಯಿಲ್ಲ. ಅರಿವಿಗೆ ಅಂತ್ಯವಿಲ್ಲ, ತಿಳಿವಿಗೆ ತೀರವಿಲ್ಲ. ಪಡೆದುದನ್ನು ಪಸರಿಸಬೇಕು. ಇದು ಈಗಿನ ಅಗತ್ಯವೆನಿಸಿದೆ. ಅದನ್ನು ನೇರವೇರಿಸುವ ಮನಸ್ಸಿನೊಂದಿಗೆ ವರ್ಗದಿಂದ ಹಿಂತಿರುಗಿದೆವು.