Hindu Vani
Index
ಕತೆಕತೆ ಕಾರಣ
ಸಾಮರ್ಥ್ಯವೆಂದರೆ ಮುಂದಾಲೋಚನೆಯು ಕೂಡಾ
ಹಿಂದಿನ ಕಾಲದಲ್ಲಿ ರಾಜರು ಆಳುತ್ತಿದ್ದರು. ಹೀಗೆ ಆಳುವುದಕ್ಕೂ ಒಂದು ರೀತಿಯಿದ್ದಿತು. ಒಬ್ಬ ರಾಜನ ನಂತರ ಅವನ ಮಗನು ರಾಜ್ಯವನ್ನು ಆಳಬೇಕಾಗಿತ್ತು. ಹೀಗೆ ಒಬ್ಬರ ನಂತರ ಒಬ್ಬರು ಅರಮನೆಯವರೇ ರಾಜರಾಗುತ್ತಿದ್ದರು.
ಒಮ್ಮೆ ಏನಾಯಿತೆಂದರೆ ಆ ರಾಜ್ಯದ ರಾಜನಿಗೆ ಮಕ್ಕಳೇ ಇರಲಿಲ್ಲ. ಮುಂದೆ ಅರಸನಾಗುವುದು ಯಾರು? ಅದಕ್ಕೆ ಆ ರಾಜನು ಒಂದು ದಾರಿಯನ್ನು ಕಂಡುಹಿಡಿದನು. ಅರಮನೆಯ ಮುಂದೆ ಒಂದು ದೊಡ್ಡ ಘಂಟೆಯನ್ನು ಕಟ್ಟಿದನು. ತನ್ನ ನಂತರ ರಾಜನಾಗಲು ಬಯಸುವವರು ಆ ಘಂಟೆಯನ್ನು ಬಂದು ಬಾರಿಸಬೇಕು. ಅವನನ್ನು ರಾಜನನ್ನಾಗಿ ಮಾಡಬಹುದು. ಆದರೆ ಅವನು ಎರಡು ವರ್ಷ ಮಾತ್ರ ರಾಜನಾಗಿರಬಹುದು. ಇನ್ನೂ ಒಂದು ವಿಚಾರವಿದೆ. ಅದೆಂದರೆ ಎರಡು ವರ್ಷವಾಗುತ್ತಲೇ ರಾಜನನ್ನು ರಾಜ್ಯದ ಗಡಿಯಲ್ಲಿ ಹರಿಯುವ ನದಿಯ ಆಚೆ ಇರುವ ದಟ್ಟವಾಗಿ ಬೆಳೆದ ಕಾಡಿಗೆ ತಂದು ಬಿಟ್ಟುಬಿಡಬೇಕು. ಯಾರೂ ಶಾಶ್ವತವಾಗಿ ರಾಜನಾಗಿರುವಂತಿಲ್ಲ.
ಹೀಗೆ ಕೆಲವರೇನೋ ರಾಜರಾದರು. ನಂತರ ಕಾಡಿಗೆ ಹೋದರು. ಹೋದವರು ನಂತರ ಕಾಣಲೇ ಇಲ್ಲ. ಹೀಗೆ ಕಾಡಿಗೆ ಕಳುಹಿಸಿ ಬಿಡುವ ವಿಚಾರವೊಂದರಿಂದಾಗಿ ಬಹಳ ಜನರು ರಾಜನಾಗಲು ಹೆದರುತ್ತಿದ್ದರು. ಆ ಕಾಡಾದರೋ ಹಗಲಿನಲ್ಲೇ ಕತ್ತಲೆಂದರೆ ಕತ್ತಲು ಕವಿದಿರುವ ದಟ್ಟ ಅರಣ್ಯ, ಕ್ರೂರ ಮೃಗಗಳು ತುಂಬಿರುವ ಜಾಗ, ಅಲ್ಲಿ ಹೋದವರಲ್ಲಿ ಯಾರೂ ಕೂಡಾ ಹಿಂದೆ ಬಂದಿರಲಿಲ್ಲ. ಹೀಗೆ ಒಬ್ಬೊಬ್ಬ ರಾಜರನ್ನು ಅವರ ಎರಡು ವರ್ಷಗಳ ಅವಧಿಯ ನಂತರ ಕಾಡಿಗೆ ಅಟ್ಟಿದ ಕತೆ ಕೇಳಿದ ಜನ ಯಾರೂ ಕೂಡಾ ರಾಜರಾಗಲು ಮುಂದೆ ಬರುತ್ತಿರಲಿಲ್ಲ. ಹೀಗಾಗಿ ಆ ದೇಶದ ಮಂತ್ರಿಗಳೇ ರಾಜನಿಲ್ಲದಾಗ ರಾಜ್ಯವನ್ನು ನಡೆಸುತ್ತಿದ್ದರು. ಯಾರಾದರೂ ರಾಜನಾಗುವವರು ಬರುತ್ತಾರೇನೋ ಎಂದು ಕಾಯುತ್ತಿದ್ದರು.
ಆದರೆ ಆಶ್ಚರ್ಯ! ಒಂದು ದಿನ ಅರಮನೆಯ ಮುಂದಿನ ಘಂಟೆಯಿಂದ ಜೋರಾಗಿ ಶಬ್ದ ಕೇಳುತ್ತಿತ್ತು. ಜನರೂ ಅರಮನೆಯಿಂದ ಮಂತ್ರಿಗಳೂ ಓಡೋಡಿ ಬಂದರು. ನೋಡಿದರೆ ಒಬ್ಬ ಭಿಕ್ಷೆ ಬೇಡುವ ವ್ಯಕ್ತಿ ಘಂಟೆಯನ್ನು ಬಾರಿಸುತ್ತಾ ಇದ್ದಾನೆ. ಮಂತ್ರಿಗಳು ಅವನನ್ನು ಕೇಳಿದರು, “ಏಕೆ ಘಂಟೆ ಬಾರಿಸುತ್ತಾ ಇರುವೆ?” ಎಂದು. ಅವನು 'ರಾಜನಾಗಲು' ಎಂದ. “ರಾಜನಾದ ಮೇಲೆ ಇರುವ ಶರತ್ತುಗಳು ನಿನಗೆ ಗೊತ್ತಿವೆಯೇ?” ಎಂದು ಕೇಳಿದರೆ “ಹೌದು ಗೊತ್ತಿದೆ. ಎರಡು ವರ್ಷಗಳ ನಂತರ ನನ್ನನ್ನು ನದಿಯಾಚೆ ಇರುವ ಅರಣ್ಯದಲ್ಲಿ ಬಿಡುತ್ತಾರೆ” ಎಂದನು.
ಮಂತ್ರಿಗಳು ಈಗ ಅವನನ್ನು ರಾಜನನ್ನಾಗಿ ಮಾಡಲೇಬೇಕು ತಾನೆ? ಅಂತೂ ರಾಜ್ಯಕ್ಕೆ ಹೊಸ ರಾಜ ಬಂದಂತಾಯಿತು. ಹೊಸ ರಾಜನಂತೂ ಬಹಳ ಚೆನ್ನಾಗಿಯೇ ರಾಜ್ಯವನ್ನು ಆಳಲು ಪ್ರಾರಂಭಿಸಿದನು. ಹೊಲಗಳಲ್ಲಿ ದವಸ ಧಾನ್ಯಗಳು ಚೆನ್ನಾಗಿ ಬೆಳೆದವು. ತೋಟಗಳಲ್ಲಿ ಹೂವು, ಹಣ್ಣು, ಹಂಪಲು, ಕಾಯಿಪಲ್ಲೆಗಳು ಯಥೇಚ್ಚವಾಗಿ ಬಂದವು.
ಪೇಟೆ ಪಟ್ಟಣಗಳಲ್ಲಿ ವ್ಯಾಪಾರ ವಹಿವಾಟುಗಳು ಭರ್ಜರಿಯಾಗಿ ನಡೆದವು. ರಾಜ್ಯದಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ಎಲ್ಲರೂ ಸುಖ ಸಂತೋಷದಲ್ಲಿದ್ದರು. ಎಲ್ಲರಿಗೂ ಈತನೇ ರಾಜನಾಗಿದ್ದರೆ ಚೆನ್ನಾಗಿರುತ್ತದೆ ಎಂದೇ ಭಾವನೆಯಾಯಿತು.
ಆದರೆ ರಾಜನ ಆಡಳಿತ ಎರಡೇ ವರ್ಷ ತಾನೇ! ಆ ಎರಡು ವರ್ಷ ಮುಗಿಯುತ್ತಾ ಬಂದಿತು. ರಾಜನ ರಾಜ್ಯಭಾರದ ಕೊನೆಯ ದಿನವೂ ಬಂದೇ ಬಂದಿತು. ಎಲ್ಲರಿಗೂ ಮನಸ್ಸಿನಲ್ಲಿ ದುಃಖ ಮತ್ತು ಬೇಸರ. ಆದರೇನು ಮಾಡುವುದು? ರಾಜನು ಅರಮನೆಯನ್ನು ಬಿಟ್ಟು ಹೊರಬಂದನು. ಜನರೆಲ್ಲರೂ ಮೌನವಾಗಿ ಅವನನ್ನು ಹಿಂಬಾಲಿಸುತ್ತ ಬಂದರು. ಎಲ್ಲರೂ ನದಿಯ ದಡಕ್ಕೆ ಬಂದರು. ಎಲ್ಲರೂ ಬೇಸರದಿಂದ ಇದ್ದರೆ ಇನ್ನು ಕೆಲವರು ಅಳುತ್ತ ಇದ್ದರು. ಈವರೆಗೆ ಕಂಡ ರಾಜರಲ್ಲಿ ಇಷ್ಟೊಂದು ಒಳ್ಳೆಯ ರಾಜನನ್ನು ಯಾರೂ ನೋಡಿರಲಿಲ್ಲ.
ಎಲ್ಲರ ನಡುವೆ ಸಂತೋಷದಿಂದಲೂ ನಗುನಗುತ್ತ ಇದ್ದವನೆಂದರೆ ರಾಜ ಮಾತ್ರವೇ. ರಾಜನನ್ನು ಕೆಲವು ಮಂತ್ರಿಗಳು ಅಚೆ ದಡದ ಕಡೆ ಇರುವ ಕಾಡಿಗೆ ಹೋಗಲು ದೋಣಿ ಹತ್ತಿಸಿದರು. ಎಲ್ಲರೂ ರಾಜನಿಗೆ ತಮ್ಮ ಕೊನೆಯ ನಮಸ್ಕಾರಗಳನ್ನು ಹೇಳಿದರು. ದೋಣಿಯು ಕಾಡಿನ ಕಡೆ ಹೊರಟಿತು.
ದೋಣಿಯಲ್ಲಿದ್ದವರಿಗೆ ರಾಜನು ನಗುನಗುತ್ತ ಇರುವುದು ಆಶ್ಚರ್ಯವೆನಿಸುತ್ತಿತ್ತು. ಹಿಂದೆ ಬಂದ ಹಲವು ರಾಜರು ಅರಮನೆಯಿಂದ ಹೊರಟಾಗಲೇ ಬೇಸರದಿಂದ ಇರುತ್ತಿದ್ದರು. ದೋಣಿಯನ್ನು ಹತ್ತಿದ ಮೇಲಂತೂ ಅಳುತ್ತಲೇ ಇರುತ್ತಿದ್ದರು. ಈ ರಾಜನನ್ನು ನೋಡಿದ ಮಂತ್ರಿಗಳು ನದಿಯ ಮಧ್ಯೆ ಬಂದಾಗ ಅವನನ್ನು ಕೇಳಿಯೇಬಿಟ್ಟರು. “ಕಾಡಿಗೆ ಹೋಗುವಾಗ, ಅಲ್ಲಿಯ ಮೃಗಗಳ ನೆನಪಾದಾಗ, ನಿಮಗೆ ಭಯವೆನಿಸುವುದಿಲ್ಲವೇ?” ಎಂದು.
ಅದಕ್ಕೆ ರಾಜನು “ಎಲ್ಲಿಯ ಕಾಡು! ಯಾವ ಮೃಗಗಳು? ನೀವೇನು ಹೇಳುತ್ತಿದ್ದೀರಿ?” ಎಂದು ಕೇಳಿದನು. ಎಲ್ಲ ಮಂತ್ರಿಗಳು “ಅದೇ ನಾವೀಗ ಹೋಗುವ ಅರಣ್ಯ” ಎಂದು ಕಾಡು ಇರುವ ಕಡೆ ಕೈ ತೋರಿಸಿದರು. ಆದರೆ ಅವರು ತೋರಿಸಿದ ದಿಕ್ಕಿನಲ್ಲಿ ದೂರದಲ್ಲಿ ಕಾಣಬೇಕಾಗಿದ್ದ ಕಾಡು ಅಲ್ಲಿ ಕಾಣಲೇ ಇಲ್ಲ. ಅದರ ಬದಲು ಅಲ್ಲಿ ದೊಡ್ಡ ಪಟ್ಟಣವಿದ್ದಂತೆ ಕಾಣುತ್ತಿದ್ದಿತು. ದೊಡ್ಡ ದೊಡ್ಡ ಕಟ್ಟಡಗಳು, ಚೆಂದದ ಮನೆಗಳು, ವಿಶಾಲವಾದ ರಸ್ತೆಗಳು, ಓಡಾಡುವ ವಾಹನಗಳು ಕಾಣುತ್ತಿದ್ದವು. ಯಾರಿಗೇ ಆದರೂ ಇಂತಹ ಪಟ್ಟಣವನ್ನು ನೋಡಬೇಕು ಎನ್ನುವಂತ್ತಿತ್ತು ಆ ಪೇಟೆ.
ಎಲ್ಲರೂ ಆಶ್ಚರ್ಯ ಪಡುತ್ತಿದ್ದರೆ, ಆಗ ರಾಜನಾಗಿದ್ದವನೇ ಮಾತನಾಡಿದನು. ನನಗೆ ಮೊದಲೇ ಗೊತ್ತಿತ್ತು. ಎರಡು ವರ್ಷಗಳ ನಂತರದ ನನ್ನ ಜೀವನ ಕಷ್ಟಕರವೆಂದೂ, ಅದನ್ನು ಸುಖಕರವನ್ನಾಗಿಸಲು ಏನು ಮಾಡಬೇಕೆಂದೂ ಆಗಲೇ ನಿರ್ಧರಿಸಿದೆ. ಸಿಕ್ಕಿದ ಈ ಎರಡು ವರ್ಷಗಳಲ್ಲಿ ನಾನಿನ್ನು ಬದುಕಬೇಕಾದ ಆ ಕಾಡನ್ನು ಬದುಕುವ ಭೂಮಿಯನ್ನಾಗಿಸಲು ಪ್ರಯತ್ನಿಸಿದೆ. ಅದಕ್ಕಾಗಿ ಆ ಕಾಡನ್ನೇ ಸುಂದರವಾದ ಪಟ್ಟಣವನ್ನಾಗಿಸಿಬಿಟ್ಟೆ. ಜೀವನದ ಎಲ್ಲಾ ಸೌಕರ್ಯಗಳು ಸಿಗುವ ತರಹ ಮಾಡಿದೆ. ಇನ್ನೇನು ಬೇಕು ಹೇಳಿ? ಎಂದನು.
ಮುಂದಿನ ಜೀವನವನ್ನು ಚೆನ್ನಾಗಿರುವಂತೆ ಮಾಡಲು ಈಗಲೇ ಸಿದ್ದವಾಗುವುದು ಬುದ್ದಿವಂತನ ರೀತಿಯಲ್ಲವೇ?