Hindu Vani
Index
ತತ್ತ್ವ
ವಿಶ್ವದಲ್ಲಿ ಅಸಂಖ್ಯ ವಸ್ತುಗಳು ಇವೆ. ಕೆಲವು ವಸ್ತುಗಳನ್ನು ನಾವು ಪ್ರೀತಿಸುತ್ತೇವೆ. ಆ ವಸ್ತುಗಳ ಪ್ರೇಮ ನಮ್ಮ ಜೀವನದಲ್ಲಿ ಹರವಿಕೊಳ್ಳುತ್ತದೆ. ಬದುಕಿನ ಕೃತಾರ್ಥತೆ ಆ ವಸ್ತು ಸಂಪಾದನೆಯಿಂದ, ಅದರ ಅನುಭವದಿಂದ ಉಂಟಾಗುತ್ತದೆ. ಮನುಷ್ಯ ಒಂದೊಂದು ವಸ್ತುವನ್ನು ಅತಿಯಾಗಿ ಪ್ರೀತಿಸುತ್ತಾನೆ. ಬದುಕಿನ ಆದ್ಯಂತ ಆ ವಸ್ತುವಿಗಾಗಿ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ. ಆತ ಪ್ರೀತಿಸಿದ ವಸ್ತು ಸಾಮಾನ್ಯವೇ ಇರಬಹುದು, ಇಲ್ಲವೆ ಪವಿತ್ರ ವಾಗಿರಬಹುದು. ಲೌಕಿಕವಾಗಿರಬಹುದು ಅಥವಾ ಅಲೌಕಿಕವಾಗಿರಬಹುದು. ಸಾಮಾನ್ಯ ವಸ್ತುವಿಗಾಗಿ ಬಾಳಿದವ ಸಾಮಾನ್ಯ. ಪಾರಮಾರ್ಥಿಕ ವಸ್ತು ಉಪಾಸಿಸುವವ ಸಾಧಕ.
ಇಬ್ಬರಿಗೂ ಒಂದು ಬಗೆಯ ಸಂತಸ ಇದ್ದೇ ಇರುತ್ತದೆ. ಯಾಕೆಂದರೆ ಯಾವುದನ್ನು ನಾವು ಪ್ರೀತಿಸುತ್ತೇವೆಯೋ ಅದು ನಮಗೆ ಸಂತೋಷ ಕೊಡುತ್ತದೆ. ವಸ್ತು ಯಾವುದೇ ಇರಲಿ ಅದು ಮಹತ್ವದ್ದಲ್ಲ. ಸಣ್ಣ ವಸ್ತುವನ್ನು ಪ್ರೀತಿಸಿದರೂ ದೊಡ್ಡ ವಸ್ತುವನ್ನು ಪ್ರೀತಿಸಿದರೂ ನಮಗೆ ಸಂತೋಷ ಉಂಟಾಗುತ್ತದೆ. ಐನ್‌ಸ್ಟೀನರಂಥ ವಿಜ್ಞಾನಿಗಳೂ ವಿಶ್ವಚಿಂತನೆಗೆ ತಮ್ಮನ್ನು ನಿವೇದಿಸಿಕೊಂಡರು. ಬದುಕಿನಾದ್ಯಂತ ಸಂತೋಷ ಪಟ್ಟರು. ವಿಶ್ವದ ಚಿಂತನೆಯಲ್ಲಿ ಅವರೆಷ್ಟು ತನ್ಮಯರಾಗಿದ್ದರೆಂದರೆ, ನೊಬೆಲ್ ಪಾರಿತೋಷಕಗಳೂ, ದೇಶದ ಅಧ್ಯಕ್ಷೀಯ ಸ್ಥಾನಮಾನಗಳೂ ಅವರಿಗೆ ಅಲ್ಪವೆನಿಸಿದವು, ಕಳಾಹೀನವೆನಿಸಿದವು.
ಈ ಈರ್ವರ ಸಂತೋಷಗಳಲ್ಲಿ ಬಹಳ ವ್ಯತ್ಯಾಸ ಕಾಣುವುದಿಲ್ಲ. ಒಬ್ಬ ಹುಡುಗ ಸಮುದ್ರ ದಂಡೆಗೆ ಹೋಗಿ ನಾಲ್ಕು ಹರಳುಗಳನ್ನು ಆರಿಸಿ ಎಷ್ಟು ಸಂತೋಷಪಡುತ್ತಾನೆ! ಆ ಹುಡುಗ ಎಲ್ಲವನ್ನೂ ಮರೆತು ಬಿಟ್ಟಿರುತ್ತಾನೆ. ತಂದೆ ಹಣ ಸಂಪಾದಿಸಿ ಆನಂದಿಸುತ್ತಾನೆ. ಹುಡುಗನಿಗೆ ಹರಳುಗಳನ್ನು ಆರಿಸುವಲ್ಲಿ ಸಂತೋಷ, ಇಬ್ಬರ ಸಂತೋಷಗಳನ್ನು ಹೋಲಿಸಲಾಗದು. ಎರಡರಲ್ಲಿಯೂ ವಿಶೇಷತೆಯಿದೆ. ನಾವು ಬೆಲೆಯಿಲ್ಲದ ವಸ್ತುವೆಂದು ಪರಿಗಣಿಸಿದ ಕಲ್ಲ ಹರಳಿನಲ್ಲಿ ಹುಡುಗ ಪಡೆವ ಹರ್ಷ, ರಾಜಮಹಾರಾಜರು ಮುತ್ತು ರತ್ನಗಳಲ್ಲಿ ಪಡೆವ ಹರ್ಷಕ್ಕಿಂತ ಕಡಿಮೆ ಏನಲ್ಲ! ಆ ಬಾಲಕನಿಗೆ ಕಲ್ಲು ಹರಳುಗಳೇ ಪರಮಾರ್ಥ, ಆತನ ತಂದೆಗೆ ಧನವೇ ಪರಮಾರ್ಥ. ಹಾಗೆಯೇ ಉಳಿದೆಲ್ಲರಿಗೆ. ಅವರವರು ಮೆಚ್ಚಿದ ಪದಾರ್ಥ ಅವರವರಿಗೆ ಪರಮಾರ್ಥ.
“ಒಲಿದ ಲೌಕಿಕರಿಗೆ ಸ್ತ್ರೀ ಪುತ್ರ ಧನ ಕನಕಾದಿಗಳೇ ಬ್ರಹ್ಮ”, ತಾರುಣ್ಯದಲ್ಲಿ ಲಗ್ನ ಮಡದಿ ಮಕ್ಕಳು. ಮುಪ್ಪಾದರೂ ಕೂಡ ಬೇರೆ ಆಲೋಚನೆಗಳಿಲ್ಲ. ಅಷ್ಟು ತನ್ನಯರು, ಮೊದಲು ಸಂಪತ್ತು ಮಾಡುವಲ್ಲಿ ಮಗ್ನತೆ. ಆಮೇಲೆ ಮೊಮ್ಮಕ್ಕಳನ್ನು ಆಡಿಸುವಲ್ಲಿ ತನ್ಮಯತೆ, ಆಮರಣ ಮೈಮರೆವು ಸಾಮಾನ್ಯ ವಸ್ತುಗಳಲ್ಲೂ.
ನಶ್ಯ, ಒಂದೆಲೆಯ ಬಾಧಕ ಪುಡಿ, ಆದರೇನು ? ಅದೊಮ್ಮೆ ನಮ್ಮ ಬಾಳಿನಲ್ಲಿ ಪ್ರವೇಶಿಸಿತೋ ಆಯಿತು. ಹೆಂಡತಿ, ಮಕ್ಕಳು ರಾಜ್ಯ ಏನೆಲ್ಲ ಬಿಡಬಹುದು. ಆದರೆ ಈ ಪುಡಿಯನ್ನು ಬಿಡಲಾಗದು ! ಅಷ್ಟು 'ಬಂಧನಕಾರಿ'; ಅಷ್ಟೇ 'ಸುಖಕಾರಿ' ಕೂಡ! ಅದರಂತೆ ಸಂಸಾರ, ಧನ ಸತಿ ಸುತಾದಿ ಸಂಪಾದನಾರೂಪ ಸಂಸಾರ. ಅದು ಬಂಧನಕಾರಿ. ಸಾಯುವವರೆಗೂ ಬಿಡದಾಗಿದೆ! ಅದು ಸುಖಕರ. ಮಗ್ನಗೊಳಿಸುವುದಾಗಿ ! ಅದು ದುಃಖಕರವೂ ಸರಿ ಕಷ್ಟಸಾಧ್ಯವಾದುದರಿಂದ.
ಸಂಸಾರ ಹಿಡಿಯಲೂ ಆಗದು, ಬಿಡಲೂ ಆಗದು ! ಬಿಡಲಾಗದಷ್ಟು ಸುಖ; ಹಿಡಿಯಲಾಗದಷ್ಟು ದುಃಖ ! ಅಂಥದರಲ್ಲಿ ಮನುಷ್ಯ ಮಗ್ನ! ಅದಕ್ಕೆ ಸಮರ್ಪಿತ !
ಕೆಲವರು ವಿಶ್ವವನ್ನು ಕುರಿತು ಚಿಂತನೆ ಮಾಡುತ್ತಾರೆ. ಅದರಲ್ಲಿ ಮಗ್ನರಾಗಿದ್ದಾರೆ. ಅವರು ವಿಜ್ಞಾನಿಗಳು, ಪ್ರಾಪಂಚಿಕ ಬಂಧನ ಅವರಿಗಿಲ್ಲ.
ಮತ್ತೆ ಕೆಲವರು ಸಾಂಸಾರಿಕ ಹಾಗೂ ವೈಶ್ವಿಕ ಎರಡೂ ಚಿಂತನದ ಪರಿಧಿ ದಾಟಿದವರು. ಪ್ರೀತಿಸುತ್ತಾರೆ; ವಿಚಾರ ಮಾಡುತ್ತಾರೆ; ಶೋಧಿಸುತ್ತಾರೆ. ಆದರೆ ಯಾವುದರಲ್ಲೂ ಮುಳುಗಿಲ್ಲ. ಮುಕ್ತರು, ಸಂತರು, ನಿಶ್ಚಿಂತ ಅನುಭಾವಿಗಳು. ವಿಷಯದ ವಿಚಾರಗಳ ಬಂಧನವಿಲ್ಲ ! ಸಹಜ ಸಿದ್ದರು !
ಒಂದು ಸಣ್ಣ ಘಟನೆ. ಬಹಳ ವರ್ಷಗಳ ಹಿಂದೆ ಒಬ್ಬ ಸಂಗೀತಜ್ಞ ಮಹಾರಾಜನ ಸಭೆಗೆ ದೂರದೇಶದಿಂದ ಬಂದ. ರಾಜಸಭೆಯೊಳಗೆ ಅತ್ಯಂತ ರಸಿಕ ಜನ. ಅವರೆದುರಿಗೆ ಸಂಗೀತ ಕಛೇರಿ. ರಾತ್ರಿ ಕಾಲ, ತಾಸುಗಳೇ ಸರಿದುಹೋದವು. ಆತ ಹಾಡುತ್ತ ಮೈಮರೆತಿದ್ದ. ಸಾವಿರ ಜನರ ಆ ಸಭೆ ಮಂತ್ರಮುಗ್ಧವಾಗಿತ್ತು. ಮಹಾರಾಜರಂತೂ ರಸ-ಸಮಾಧಿಸ್ಥರು. ಸಂಗೀತದ ಕೊನೆಯ ಲಹರಿಗಳು ತೇಲಿ ಮರೆಯಾದವು. ಗಾಯಕ ಬಾಹ್ಯಲೋಕಕ್ಕೆ ಬಂದ. ಸಭೆ ಹಾಗೂ ಮಹಾರಾಜ ಎಷ್ಟೋ ಸಮಯದ ನಂತರ ಮೈಭಾನ ತಿಳಿದೆಚ್ಚತ್ತರು. ಸಂಗೀತಾನಂದದ ಅದ್ಭುತಾನುಭವ! ಸಭೆ ಚಪ್ಪಾಳೆ ತಟ್ಟಿತು. ಸಂತೋಷ ವ್ಯಕ್ತಮಾಡಿತು. ಅದ್ಭುತ! ಅನುಪಮ ಎಲ್ಲರೂ ಪ್ರಶಂಸಿಸುವವರೇ. ಮಹಾರಾಜ ಆತನನ್ನು ಅಧಿಕೃತವಾಗಿ ಮರುದಿನ ರಾಜ ಮರ್ಯಾದೆಯಿಂದ ಗೌರವಿಸುವುದಾಗಿ, ಸತ್ಕರಿಸುವುದಾಗಿ ತಿಳಿಸಿದ. ಮರುದಿನ ಎಲ್ಲ ಅಧಿಕಾರಿಗಳೂ, ಪ್ರಮುಖ ವಿದ್ವಾಂಸರೂ, ಗಾನಸಿದ್ಧರೂ ಕುಳಿತುಕೊಂಡಿದ್ದಾರೆ. ಮಹಾರಾಜ ಸಂಗೀತಗಾರನಿಗಾಗಿ ಅಮೂಲ್ಯ ರತ್ನಗಳ ಮಾಲೆಯನ್ನು ತಯಾರಿಸಿದ್ದಾನೆ. ಆದರೆ ಒಬ್ಬ ! ಅವನೇ ಸಂಗೀತಜ್ಞ! ದಾರಿ ಕಾಯ್ದರು, ಆತ ಬರಲಿಲ್ಲ. ಎಲ್ಲಿ ಹೋಗಿದ್ದಾನೆ? ತಿಳಿಯದು. ಆ ಸಂಗೀತಜ್ಞ ಆ ದಿನ ಸಾಯಂಕಾಲ ವಿಹಾರಕ್ಕೆ ಹೋಗಿದ್ದ, ದೂರ ದೂರ. ತಿಳಿ
ನೀರಿನ ನದಿ ದಡ, ಉಸುಕು. ಕುಳಿತ. ಚಂದ್ರೋದಯವಾಯಿತು. ತಂಪು ಕಿರಣ ಹರವಿದವು. ನಿಶ್ಯಬ್ದದ ಹಿನ್ನೆಲೆ, ಜುಳು ಜುಳು ಹರಿವ ನೀರ ಧ್ವನಿ. ಸುತ್ತಲೆಲ್ಲ ಹಸಿರು ವನಸಿರಿ. ಮಾದಕ ವಾತಾವರಣ, ಗಾಯಕ ತನಗೆ ಅರಿವಿರದಂತೆ ಹಾಡತೊಡಗಿದ. ಅದು ಅದ್ಭುತ ಸಂಗೀತ!
ಸಂಗೀತದ ಅಲೆ ವನದಲ್ಲಿ ತುಂಬಿದವು. ನದಿಯ ತೆರೆಯ ಮೇಲೆ ತೇಲಿದವು! ಸನ್ಮಾನದ ನೆನಪಿಲ್ಲ. ತನುವಿನ ಭಾನವಿಲ್ಲ. ಗಾನಸಮಾಧಿಯನ್ನು ಅನುಭವಿಸುತ್ತಿದ್ದ, ರಾಜನ ಜನ ಹುಡುಕುತ್ತ ಹುಡುಕುತ್ತಾ ಬಂದರು. ನದಿಯ ದಂಡೆಯಲ್ಲಿ ಕಂಡರು. ಎಚ್ಚರಿಸಿದರು. ವಾರ್ತೆ ಅರುಹಿದರು. ಆತ ನುಡಿದ, “ನನಗೆ ಸನ್ಮಾನ? ನಿಸರ್ಗ ನನ್ನನ್ನು ಗೌರವಿಸಿದೆ. ಅದು ದಿವ್ಯ ಸನ್ಮಾನ. ನನಗೆ ರಾಜಸನ್ಮಾನದ ಆವಶ್ಯಕತೆಯಿಲ್ಲ!” ಅವನದು ಮಾಡಿ ಮಾಡದ ಅವಸ್ಥೆ. ನಮಗೆ ಕಾರ್ಯೋತ್ಸಾಹಕ್ಕಿಂತ ಸನ್ಮಾನೋತ್ಸವ ಹೆಚ್ಚು. ಸಾಮಾಜಿಕ ಹಾಗೂ ರಾಜಕೀಯ ಪದವಿ ಪ್ರಶಸ್ತಿಗಳಲ್ಲಿ ತುಂಬ ಆಸಕ್ತಿ, ಕಾರ್ಯಗಳು ಅಷ್ಟಕ್ಕಷ್ಟೇ. ನಮಗೆ ಸಂದ ಈ ಪ್ರಶಸ್ತಿಗಳಿಗೆ ತಿಳಿದವರಲ್ಲಿ ಯಾವ ಬೆಲೆ ಇದೆ? ಆದರೂ ಅವುಗಳ ಹುಚ್ಚು, ಪದ್ಮಶ್ರೀ, ಪದ್ಮಭೂಷಣ, ರತ್ನಗಳಿಗಾಗಿ ಪರದಾಟ! ಹೋರಾಟ! ಸಣ್ಣಪುಟ್ಟ ಪದವಿ, ಮಾನ, ಮರ್ಯಾದೆಗಳಿಗೂ ಅಷ್ಟೇ. ಇವುಗಳಲ್ಲಿ ಮನುಷ್ಯ ಸಿಕ್ಕುಬೀಳುವ, ಯಾರು ಈ ಬಂಧನರಹಿತರೋ ಅವರು ವಿಮುಕ್ತ ಚೇತನರು. ಅವರಿಗೆ ಇಷ್ಟವಾದ ಪರಮ ಗತಿ ಎಂದರೆ 'ದೇವ', “ವಿಮುಕ್ತಾನಾಂ ಪರಮಾ ಗತಿಃ!”
ವಿಶ್ವ ಹಿಂದು ಪರಿಷತ್ ಕರ್ನಾಟಕ ಉತ್ತರ
ಬಜರಂಗದಳ ಪ್ರಾಂತ ಶೌರ್ಯ ಪ್ರಶಿಕ್ಷಣ ವರ್ಗ 2025
ಬಜರಂಗದಳ ಪ್ರಾಂತ ಶೌರ್ಯ ಪ್ರಶಿಕ್ಷಣ ವರ್ಗವು ಕಲ್ಬುರ್ಗಿ ನಗರದ ಶ್ರೀ ಸ್ವಾಮಿ ನಾರಾಯಣ ಗುರುಕುಲದಲ್ಲಿ 6.5.2025 ರಂದು ಉದ್ಘಾಟಿಸಲಾಯಿತು. ಬಜರಂಗಿಗಳನ್ನು ಉದ್ದೇಶಿಸಿ ಪ್ರಾಂತ ಕಾರ್ಯದರ್ಶಿಗಳಾದ ಶಿವಕುಮಾರ್ ಬೋಳಶೆಟ್ಟಿಯವರು “ಕಳೆದ 40 ವರ್ಷಗಳಿಂದ ಯುವಕರಲ್ಲಿ ದೇಶಭಕ್ತಿಯ ಭಾವನೆಗಳನ್ನು ಬೆಳೆಸಿ, ಸೇವಾ ಸುರಕ್ಷಾ ಸಂಸ್ಕಾರ ಎಂಬ ಧೈಯೋದ್ದೇಶವನ್ನು ಇಟ್ಟುಕೊಂಡು ಸಮಾಜದಲ್ಲಿ ನಡೆಯುತ್ತಿರುವ ದೇಶವಿದ್ರೋಹಿ ಚಟುವಟಿಕೆಗಳನ್ನು ಹಿಂದೂ ಸಮಾಜಕ್ಕೆ ಕಂಟಕವಾಗಿರುವ ಲವ್ ಜಿಹಾದ್, ಮತಾಂತರ, ಗೋಹತ್ಯೆ, ಭಯೋತ್ಪಾದನೆ ವಿರುದ್ಧ ಹೋರಾಡಲು ಮಾದಕ ವ್ಯಸನ ಮುಕ್ತ ಭಾರತವನ್ನಾಗಿ ಮಾಡುವ ನಿಟ್ಟಿನಲ್ಲಿ ಯುವಕರನ್ನು ಶಿಕ್ಷಿತಗೊಳಿಸಲು, “ಶೌರ್ಯ ಪ್ರಶಿಕ್ಷಣ ವರ್ಗವಿದೆಯೆಂದು ಮಾರ್ಗದರ್ಶನ ಮಾಡಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಶ್ರೀ ಲಿಂಗರಾಜಪ್ಪ ಅಪ್ಪಾ ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷರು ವಹಿಸಿಕೊಂಡಿದ್ದರು. ಬಸವರಾಜ್ ಹಿರೇಮಠ ಕ್ಷೇತ್ರೀಯ ಧಾರ್ಮಿಕಪುಂಜದ ಪ್ರಮುಖರು ಮತ್ತು ಬಜರಂಗದಳದ ರಾಜ್ಯ ಸಂಯೋಜಕರಾದ ಪುಂಡಲಿಕ ದಳವಾಯಿ, ಸಹ ಸಂಯೋಜಕರಾದ ಬಸವರಾಜ್ ಸುಗೂರ, ವಿಭಾಗ ಕಾರ್ಯದರ್ಶಿ ಶಿವರಾಜ್ ಸಂಗೊಳ್ಳಗಿ, ಕಲ್ಬುರ್ಗಿ ಮಹಾನಗರ ಅಧ್ಯಕ್ಷರಾದ ಶ್ರೀಮಂತನವಲದಿ, ಪ್ರಶಾಂತ್ ಗುಡ್ಡಾ, ಸತೀಶ್ ಮಾಹುರ, ವಿಭಾಗ ಸಂಯೋಜಕರಾದ ಅಜಯ್ ಕುಮಾರ್ ಬಿದ್ರಿ, ಸಹ ಸಂಯೋಜಕರಾದ ಶಿವಕುಮಾರ್, ಸಂತೋಷ್ ಮಾದಿಗ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. (ಭಾವಚಿತ್ರಗಳು ಮುಖಪುಟ 2).