Hindu Vani
Index
ಮಹಾಕಾವ್ಯ
ರಾಮಾಯಣ, ಮಹಾಭಾರತ ಪರೀಕ್ಷಾ ಕುಟುಂಬ ಮಿಲನ
ಮೇ 19, ಭಾನುವಾರ ಧರ್ಮಶ್ರೀ ಕಟ್ಟಡದಲ್ಲಿ ಸಂಭ್ರಮದ ವಾತಾವರಣ. ಕಾರಣ, ಕಳೆದ ಐದು ದಶಕಗಳಿಗೂ ಮೀರಿದ ದೀರ್ಘ ಕಾಲದಿಂದ ನಡೆದುಕೊಂಡು ಬರುತ್ತಿರುವ ಭಾರತ ಸಂಸ್ಕೃತಿ ಪ್ರತಿಷ್ಠಾನದ ರಾಮಾಯಣ ಮತ್ತು ಮಹಾಭಾರತ ಪರೀಕ್ಷಾ ವ್ಯವಸ್ಥೆಯಲ್ಲಿ ಸಹಭಾಗಿಗಳಾಗಿರುವ ಎಲ್ಲ ಕಾರ್ಯಶೀಲರ ಮಿಲನ ಸಮಾರಂಭವೇ ಅದು.
ಈ ವಿಶಿಷ್ಟಪೂರ್ಣ ಯೋಜನೆಯ ಸಫಲತೆಗಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಸಮರ್ಥಕರು, ಸಂಯೋಜಕರು ಮತ್ತು ವ್ಯವಸ್ಥಾಪಕರು ತಮ್ಮ ಸಂಪರ್ಕಾನುಭವ ಮೂಸೆಯಿಂದ ಹೊರ ತೆಗೆದು ಹಂಚಿಕೊಂಡ ಘಟನಾವಳಿಗಳು ಒಂದೊಂದೂ ರೋಚಕವಾಗಿತ್ತು, ಬೋಧಪದವಾಗಿತ್ತು. ಭಾರತ ಸಂಸ್ಕೃತಿಯ ಉಳಿವಿಗಾಗಿ ಅಹರ್ನಿಶಿ ದುಡಿಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ತಜ್ಞರ ಚಿಂತನಪ್ರಧಾನ ಮಾರ್ಗದರ್ಶನಗಳು, ದಿಕ್ಕೂಚಿಗಳಂತೂ ಮುಂದಿನ ಅನೇಕ ದಿನಗಳ ಚಿಂತನೆಗೆ ಗ್ರಾಸವಾದವು. ಒಟ್ಟಿನಲ್ಲಿ ಇದೊಂದು ಸುಂದರ ರಸಾನುಭವ ಕಾರ್ಯಕ್ರಮವಾಗಿತ್ತು.
ಪರೀಕ್ಷಾ ಯೋಜನೆಗೆ ಯೋಗದಾನ ಮಾಡುತ್ತಿರುವ ಎಲ್ಲ ಸಾಧಕರನ್ನು ಸನ್ಮಾನಿಸಿದ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಸಹ ಕಾರ್ಯದರ್ಶಿ ಶ್ರೀ ಸ್ಥಾಣುಮಾಲಯನ್ ಅವರು ಇದೀಗ ಅಖಿಲ ಭಾರತೀಯ ಯೋಜನೆಯಾಗಿ ಬೃಹತ್ತರವಾಗಿ ಬೆಳೆದಿರುವ ರಾಮಾಯಣ ಮತ್ತು ಮಹಾಭಾರತ ಪರೀಕ್ಷಾ ಯೋಜನೆ ಪ್ರಾರಂಭಗೊಂಡಿದ್ದು ಈ ನಮ್ಮ ಕರ್ನಾಟಕದಲ್ಲಿ ಎಂಬುದು ಅತ್ಯಂತ ಹೆಮ್ಮೆಯ ವಿಷಯ. ಕನ್ನಡವಷ್ಟೇ ಅಲ್ಲದೆ, ತೆಲಗು, ತಮಿಳು, ಮಲೆಯಾಳಂ, ಮರಾಠಿ, ಗುಜರಾತಿ, ಒರಿಯಾ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲೂ ಈ ಪರೀಕ್ಷೆಗಳು ನಡೆಯುತ್ತಿವೆ. ಕಳೆದ ವರ್ಷ ಇಡೀ ಭಾರತದಲ್ಲಿ ಒಟ್ಟು ನಾಲ್ಕು ಲಕ್ಷದ ಮುವತ್ತೆರಡು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು' ಎಂಬ ವಿಷಯವನ್ನು ಹಂಚಿಕೊಂಡರು.
ಖ್ಯಾತ ಲೇಖಕರು, ಅಂಕಣಕಾರರು, ಸಮಾಜ ಚಿಂತಕರೂ ಆದ ಶ್ರೀ ರೋಹಿತ್ ಚಕ್ರತೀರ್ಥ ಅವರು ತಮ್ಮ ದಿಕ್ಕೂಚೀ ಭಾಷಣದಲ್ಲಿ ರಾಮಾಯಣ ಮತ್ತು ಮಹಾಭಾರತಗಳಲ್ಲಿನ ಮೌಲ್ಯಗಳ ಪ್ರಸ್ತುತೆಯನ್ನು ಮನಮುಟ್ಟುವ ರೀತಿಯಲ್ಲಿ ತಿಳಿಯ ಹೇಳಿದರು.
'ರಾಮಾಯಣ ಮಹಾಭಾರತ ಪರೀಕ್ಷಾ ಯೋಜನೆಯಲ್ಲಿ ತೊಡಗಿಸಿಕೊಂಡಿರುವರಲ್ಲಿ ಅನೇಕರ ಅನುಭವ ತುಂಬ ಉತ್ತೇಜನಕಾರಿಯಾಗಿದ್ದರೂ ಸಹ ಕೆಲವರ ಅನುಭವಗಳು ಕೊಂಚ ಕಟುವಾಗಿರುವಂತೆಯೂ ಕಂಡುಬರುತ್ತದೆ. ಇದನ್ನು ಕೇಳಿದಾಗ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಕೆಲಸ ಅಷ್ಟು ಸುಲಭ ಸಾಧ್ಯವಲ್ಲವೇನೋ ಅನ್ನಿಸುತ್ತದೆ. ಆದರೆ ಒಳ್ಳೆಯ ಕೆಲಸಗಳನ್ನು ಕೈಗೊಂಡ ಎಲ್ಲರ ಪರಿಸ್ಥಿತಿಯೂ ಇದೇ. ಯಾವುದೂ ಅಷ್ಟು ಸುಲಭವಾಗಿ ನಡೆದು ಹೋಗುವುದಿಲ್ಲ.
ಸೀತಾದೇವಿಯನ್ನು ಹುಡುಕಿಕೊಂಡು ಹೊರಟ ಹನುಮಂತನಿಗೆ ಸಮುದ್ರವನ್ನು ದಾಟುವಾಗ ಎದುರಾದ ಸಮಸ್ಯೆಗಳು ಒಂದೇ ಎರಡೇ? ಆದರೆ ಸೀತೆಯನ್ನು ಕಾಣಲೇಬೇಕೆಂಬ ದೃಢ ನಿಶ್ಚಯ ಹೊಂದಿದ್ದ ಹನುಮಂತನಿಗೆ ಇದೆಲ್ಲ ನಗಣ್ಯವಾಯಿತು. ಎಲ್ಲವನ್ನೂ ಸುಲಭವಾಗಿ ಹಿಂದೆ ಸರಿಸಿ ಅವನು ಮುನ್ನುಗ್ಗಿದ. ಹೀಗೆ ನಮ್ಮ ಉದ್ದೇಶ ಗಟ್ಟಿಯಾಗಿರುವಾಗ ನಾವು ಕೈಗೊಂಡ ಕಾರ್ಯಗಳಲ್ಲಿ ಎಷ್ಟೇ ಎಡರು ತೊಡರುಗಳು ಬಂದರೂ ಅವುಗಳನ್ನು ದಾಟಿಕೊಂಡು ಮುನ್ನಡೆದು ಗುರಿ ಸಾಧಿಸಬೇಕು ಎನ್ನುವ ಸಂದೇಶ ರಾಮಾಯಣದುದ್ದಕ್ಕೂ ಕಂಡು ಬರುತ್ತದೆ. ಕಥೆಯ ಮೂಲಕ ನಮ್ಮ ಮೌಲ್ಯಗಳನ್ನು ಹೇಗೆ ಮಕ್ಕಳಿಗೆ ಮುಟ್ಟಿಸಬಹುದು ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆಯಷ್ಟೆ.
ನಮ್ಮ ಪೂರ್ವಜರು ನಮಗೆ ಎರಡು ವಿಶೇಷ ಕಣ್ಣುಗಳನ್ನು ಕೊಟ್ಟಿದ್ದಾರೆ. ಅವೇ ರಾಮಾಯಣ ಮತ್ತು ಮಹಾಭಾರತ. ಈ ಕಣ್ಣುಗಳ ಮೂಲಕವೇ ನಾವು ಜಗತ್ತನ್ನು ನೋಡಬೇಕು. ನಾವು ಕ್ರಮಿಸುತ್ತಿರುವ ಹಾದಿ ಸರಿಯಾಗಿದೆ ಎನಿಸಬೇಕಾದರೆ ನಮ್ಮ ರಾಜಕೀಯ, ಸಾಂಸ್ಕೃತಿಕ ರೀತಿನೀತಿಗಳು, ವ್ಯವಹಾರಗಳು ಸಹ ಈ ಎರಡು ಗ್ರಂಥಗಳಲ್ಲಿನ ಇದೇ ರೀತಿಯ ಸಂದರ್ಭಗಳಲ್ಲಿನ ನಡಾವಳಿಯಂತೆಯೇ ಇರುವುದು ಅಗತ್ಯ.
ಉದಾಹರಣೆಗೆ, ನೆನ್ನೆ ಮೊನ್ನೆ ತಾನೇ ನಮ್ಮ ದೇಶಕ್ಕೆ ಅಘೋಷಿತ ಯುದ್ಧ ಮಾಡಲೇಬೇಕಾದ ಸಂದರ್ಭ ಎದುರಾಯಿತು. ಆದರೆ ನಾವು ಯಶಸ್ಸಿನ ಹಾದಿಯಲ್ಲಿದ್ದಾಗ ಹೋರಾಟದ ಮಧ್ಯದಲ್ಲಿಯೇ ತೆಗೆದುಕೊಂಡ ಯುದ್ಧವಿರಾಮದ ನಿರ್ಣಯ, ಅದರಿಂದಾಗಿ ಆ ನಂತರ ನಡೆದ ವಿಪರೀತ ಪರಿಣಾಮಗಳನ್ನು ಗಮನಿಸಿದಾಗ ನಾವು ಕೈಗೊಂಡ ತೀರ್ಮಾನ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡುವುದು ಸಹಜ. ಪರಿಸ್ಥಿತಿ, ಪ್ರಸಂಗಗಳು ವಿಭಿನ್ನವಾಗಿದ್ದರೂ ಸಹ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಶತ್ರುಗಳ ನಾಮಾವಶೇಷವಾದ ನಂತರವೇ ಯುದ್ಧಕ್ಕೆ ವಿರಾಮ ದೊರಕಿದ್ದು, ಈ ಯುದ್ಧ ನೀತಿಯನ್ನು ಅನುಸರಿಸದೆ ನಾವು ಈಗಲೂ ಎಷ್ಟೊಂದು ಬವಣೆ ಪಡುತ್ತಿದ್ದೇವೆ. ರಾಮಾಯಣ ಮಹಾಭಾರತಗಳು ಪ್ರತಿಪಾದಿಸುವ ಮೌಲ್ಯಗಳ ಪ್ರಸ್ತುತೆಗೆ ಇದು ಇನ್ನೊಂದು ಉದಾಹರಣೆ. ಈ
ಈ ನೆಲದ ಸಾಂಸ್ಕೃತಿಕ ನೆಲೆಗಟ್ಟನ್ನು ಅಲ್ಲಾಡಿಸುವ ತಿಣುಕಾಟ ನಡೆದುಕೊಂಡು ಬಂದಿರುವಂತದೇ. ರಾಮಾಯಣ ಮಹಾಭಾರತಗಳ ಐತಿಹಾಸಿಕ ಸತ್ಯಾಸತ್ಯತೆಯನ್ನೇ ಅಲ್ಲಗಳೆಯುವ ಪ್ರಯತ್ನಗಳು ವಿಫುಲವಾಗಿ ನಡೆದವು. ಆದರೆ ಈ ಮಹಾ ಗ್ರಂಥಗಳ ಹಿನ್ನೆಲೆಯಿಲ್ಲದೆ ಈ ದೇಶದ ಬದುಕು ಇಲ್ಲ ಎಂಬುದು ನಿರ್ಣಯವಾದ ಮೇಲೆ ಮೂಲ ರಾಮಾಯಣ ಮತ್ತು ಮೂಲ ಮಹಾಭಾರತದ ಮೌಲ್ಯಗಳ ಬಗ್ಗೆ ತಮ್ಮದೇ ಧೋರಣೆ ಹೊಂದಿರುವವರು ಈಗ ಅಪ್ರತ್ಯಕ್ಷವಾಗಿ ಸೆಕ್ಯುಲರ್ ರಾಮಾಯಣ, ಸೆಕ್ಯುಲರ್ ಮಹಾಭಾರತಗಳನ್ನು ತಂದಿದ್ದಾರೆ. ಇವರ ಪ್ರಕಾರ ಸೀತಾಪಹರಣ ಮಾಡಲು ರಾವಣನಿಗೆ ಒತ್ತಾಸೆ ಕೊಟ್ಟ ಮಾರೀಚ ಮಹಾ ಸುಮನಸ್ಯ, ಪಾಪ ರಾವಣನ ಬೆದರಿಕೆಯಿಂದಾಗಿ ಅವನು ಕೆಟ್ಟ ಕೆಲಸಕ್ಕೆ ಕೈಹಾಕಿದ ಎನ್ನುವುದು ಇವರ ವಾದ. ಹಾಗಿದ್ದರೆ ಸಾಯುವಾಗ 'ಹಾ ಸೀತಾ, ಹಾ ಲಕ್ಷ್ಮಣಾ ಎಂದು ಕೂಗಿ ಸೀತೆಯ ದಿಕ್ಕು ತಪ್ಪಿಸಿ ಆ ಮುಂದಿನ ಅನಾಹುತಕ್ಕೆ ಕಾರಣನಾದನಲ್ಲವೇ ಎಂಬ ಪ್ರಶ್ನೆಗೆ ಇವರ ಬಳಿ ಉತ್ತರವಿಲ್ಲ!
ಮಹಾಭಾರತದ ಕರ್ಣನೂ ಸಹ ಇವರ ಪಾಲಿಗೆ 'ಬಹು ದೊಡ್ಡ ಸಜ್ಜನ, ದುರಂತ ಪರಿಸ್ಥಿತಿಗೆ ಸಿಲುಕಿಯೂ ಸಹ ಮಹಾ ದಾನಶೂರನಾಗಿ ಹೊಮ್ಮಿದ ಮಹಾ ವ್ಯಕ್ತಿ. ಹೀಗೆಲ್ಲ
ಮೂಲ ನಿರೂಪಣೆಗಳನ್ನು ತಿರುಚಿ ವಿರೂಪಗೊಳಿಸುವುದು ಮಹಾಭಾರತವು ಪ್ರತಿನಿಧಿಸುವ ಮೌಲ್ಯಗಳನ್ನು ಮರೆಮಾಚಿ ತಮ್ಮದೇ ಅಘೋಷಿತ ಸಿದ್ಧಾಂತಗಳನ್ನು ಹೇರುವ ಪ್ರಯತ್ನ, ಕರ್ಣನ ಪ್ರವೇಶದ ನಂತರದ ಮಹಾಭಾರತದಲ್ಲಿ ದುರ್ಯೋಧನ ಅಥವಾ ಧೃತರಾಷ್ಟ್ರ ತೆಗೆದುಕೊಳ್ಳುವ ಎಲ್ಲ ಅನ್ಯಾಯಕಾರಿ ನಿರ್ಣಯಗಳಲ್ಲಿ ಕರ್ಣನದು ಬಹಳ ಪ್ರಮುಖ ಪಾತ್ರ, ಅಪರೂಪವಾಗಿಯಾದರೂ ಸಹ ದುರ್ಯೋಧನ, ಧೃತರಾಷ್ಟ್ರರೇ ಪಾಂಡವರ ಬಗ್ಗೆ ಕೊಂಚ ಮೃದು ಧೋರಣೆ ತಾಳಿದ ಸಂದರ್ಭಗಳಲ್ಲಿಯೂ ಕರ್ಣ ಹೆಚ್ಚಿನ ಪ್ರಖರತೆಯಿಂದ ದ್ವೇಷ ಸಾಧನೆಗೆ ಪ್ರಚೋದನೆ ಮಾಡುತ್ತಾನೆ. ಇಂತಹ ಕಟು ಸತ್ಯ ಸಂಗತಿಗಳನ್ನು ಮರೆಮಾಚಿ ಖಳ ನಾಯಕನನ್ನು ನಾಯಕನಾಗಿ ಚಿತ್ರಿಸುವ ಅಪಾಯಕಾರೀ ಯತ್ನಗಳ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ.
- ರಾಮಾಯಣ ಮತ್ತು ಮಹಾಭಾರತ ಪರೀಕ್ಷಾ ಯೋಜಕರು ಮತ್ತು ಅಧ್ಯಾಪಕರು 'ಈ ಮೂಲ ಗ್ರಂಥಗಳು ಪ್ರತಿಪಾದಿಸುವ ಮೌಲ್ಯಗಳು ಈಗಲೂ ಸಂಗತವಾದವು, ನಮ್ಮ ಭವಿಷ್ಯವನ್ನು ಭವ್ಯವಾಗಿ ರೂಪಿಸಿಕೊಳ್ಳಲು ಬೇಕಾದ ಅತ್ಯಗತ್ಯ ಸಾಧನ' ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಸುವತ್ತ ವಿಶೇಷ ಒತ್ತು ನೀಡಿದರೆ ಮಾತ್ರ ಒಳಗಿನ ಮತ್ತು ಹೊರಗಿನ ಸಾಂಸ್ಕೃತಿಕ ಆಘಾತದ ಪ್ರಯತ್ನಗಳು ನಿಷ್ಪಲಗೊಳ್ಳುತ್ತವೆ' ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಸಂಸ್ಕೃತಿ ಪ್ರತಿಷ್ಠಾನದ ನಿರ್ವಾಹಕ ವಿಶ್ವಸ್ತರಾದ ಡಾ|| ಟಿ ಎಸ್ ಸತ್ಯವತಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ 'ಮೌಲ್ಯಗಳಲ್ಲಿ ಅತಿ ದೊಡ್ಡವು ಎಂದರೆ ತ್ಯಾಗ ಮತ್ತು ನಿಃಸ್ವಾರ್ಥತೆ. ಇವರೆಡನ್ನೂ ರಾಮಾಯಣದುದ್ದಕ್ಕೂ ಕಾಣಬಹುದು. ಮಹಾಭಾರತದ ಶ್ರೀಕೃಷ್ಣನ ಪಾತ್ರದಲ್ಲಿ ಇದು ಘನೀಭೂತವಾಗಿ ತೋರುತ್ತದೆ. ರಾಮಾಯಣದ ಸುಂದರಕಾಂಡ ಪಾರಾಯಣವೊಂದನ್ನು ನಿಷ್ಠೆಯಿಂದ ಮಾಡಿದರೆ ಸಾಕು ಎಂಬ ಅಭಿಪ್ರಾಯಕ್ಕೆ ಕಾರಣ ಸುಂದರಕಾಂಡದಲ್ಲಿ ಎಲ್ಲ ಮೌಲ್ಯಗಳೂ ಕಾಣಸಿಗುತ್ತವೆ. ಅನ್ನುವುದೇ ಆಗಿದೆ. ವಾಕ್ಚಾತುರ್ಯದಿಂದ ಹಿಡಿದು, ವಿನಯ, ಔದಾರ್ಯ, ಹೃದಯ ಶ್ರೀಮಂತಿಕೆಯಿಂದ ಹಿಡಿದು ಎಲ್ಲ ಮೌಲ್ಯಗಳೂ ಇಲ್ಲಿ ಮೇಳಯಿಸಿವೆ. ಅದೂ ಸಾಕ್ಷಾತ್ ರಾವಣನೇ ಹನುಮಂತನನ್ನು ಮೆಚ್ಚಿಕೊಳ್ಳುವಷ್ಟರ ಮಟ್ಟಿಗೆ!
ಹನುಮಂತನು ಶ್ರೀರಾಮನ ಹೆಸರಿನಲ್ಲಿ ಮಾಡಿದ ಕೆಲಸಗಳೆಲ್ಲ ಲೋಕ ಕಲ್ಯಾಣಕ್ಕಾಗಿ, ತನಗೆಂದು ಅವನು ಏನೂ ಮಾಡಿಕೊಳ್ಳಲಿಲ್ಲ. ತನ್ನ ಪ್ರತಾಪವನ್ನು ಅವನು ಎಂದೂ ಹೇಳಿಕೊಳ್ಳಲಿಲ್ಲ. ಸುಗ್ರೀವನ ಸೈನಿಕರಲ್ಲಿ ಕಿರಿಯರಲ್ಲಿ ಕಿರಿಯ ತಾನು ಎಂದು ಸೀತೆಯ ಮುಂದೆ ಹೇಳಿಕೊಳ್ಳುತ್ತಾನೆ. ಈ ವಿನಯವಂತಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡವರು ತಮ್ಮ ಎಲ್ಲ ಕಾರ್ಯಗಳಲ್ಲೂ ಯಶಸ್ಸು ಗಳಿಸುತ್ತಾರೆ' ಎಂದು ತಿಳಿಸುತ್ತಾ ಈ ಎಲ್ಲ ಮೌಲ್ಯಗಳನ್ನೂ ತಮ್ಮ ತಮ್ಮ ಜೀವನದಲ್ಲಿ ಅನುದಿನವೂ ಅನುಕ್ಷಣವೂ ಇಟ್ಟುಕೊಂಡು ಮುಂದಿನ ಜನಾಂಗಕ್ಕೆ ಮುಟ್ಟಿಸಬೇಕಾದ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲ ಶಿಕ್ಷಕರು ಮತ್ತು ಸಂಯೋಜಕರನ್ನು ಅಭಿನಂದಿಸಿದರು.
ಶ್ರೀಮತಿ ನಾಗಶ್ರೀ ಎ.ಎನ್. ಅವರ ಸುಶ್ರಾವ್ಯ ಪ್ರಾರ್ಥನೆಯಿಂದ ಪ್ರಾರಂಭಗೊಂಡ ಈ ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ ಅರಕಲಿ ವೆಂಕಟೇಶ್ ನಿರೂಪಿಸಿದರು. ಪ್ರತಿಷ್ಠಾನದ ವಿಶ್ವಸ್ತರಾದ ಶ್ರೀ ಹೆಚ್.ಎಸ್. ಸೀತಾರಾಮು, ಎಸ್. ಜಯರಾಮು, ಶ್ರೀ ವೈ.ಬಿ. ರವಿಪ್ರಕಾಶ್ ಮತ್ತು ವಿ.ಸಿ. ಶೇಖರ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.