Hindu Vani
Index
ಪ್ರಸ್ತುತ
ಯಾವಾಗಲೂ ಹೀಗೇ (ಕಳೆದ ತಿಂಗಳಿನಿಂದ...)
ರೈಲು ನಿಲ್ದಾಣವಲ್ಲದೆ ಬೇರೆಲ್ಲೋ ನಿಂತಿರುವುದರಿಂದ ಇಳಿಯುವುದು ಅಷ್ಟು ಸುಲಭವಾಗಿರಲಿಲ್ಲ. ರೈಲಿನಲ್ಲಿದ್ದವರಿಗೆ ಕೆಳಗೆ ಬಗೆ ಬಗೆಯ ತಿಂಡಿ, ಪಾನೀಯಗಳ ಮಾರಾಟದ ಭರಾಟೆ ಮತ್ತಷ್ಟು ಜೋರಾಗಿತ್ತು. ಹೀಗೆ ರೈಲು ನಿಂತಿರುವುದಕ್ಕೆ ಕಾರಣ ಕೇಳಿದರೆ ಯಾರಿಗೂ ಗೊತ್ತಿಲ್ಲವೋ, ಹೇಳಬಾರದೆಂಬ ನಿಯಮವೋ ಒಟ್ಟಾರೆ ಹೀಗೆ ಮಾರುವವರು ಹಾರಿಕೆಯ ಉತ್ತರಕೊಟ್ಟು ಹೋಗಿಬಿಡುತ್ತಿದ್ದರು. ಹೀಗೆ ಅಲ್ಲಿ ಚಹಾ ಮಾರಲು ಬಂದಾತನನ್ನು ಪ್ರಶ್ನಿಸಿದಾಗ “ಟೈರ್ ಪಂಚರ್ ಆಗಿದೆ” ಎಂದು ಉತ್ತರಿಸಿ ಮಾಯವಾಗಿಬಿಟ್ಟಿದ್ದ. “ರೈಲಿಗೆ ಟೈರೇ” ಎಂದು ಯೋಚಿಸುವಾಗ ನಗು ಬಂದಿತ್ತು.
ಅರ್ಧ ಗಂಟೆ, ಮುಕ್ಕಾಲು ಗಂಟೆ ಸಮಯ ಉರುಳುತ್ತಿದ್ದಂತೆ ಎಲ್ಲರ ಮುಖಗಳಲ್ಲೂ ಚಿಂತೆಯ ಕಾರ್ಮೋಡ ಆವರಿಸತೊಡಗಿತ್ತು. “ಯಾವಾಗ ರೈಲು ಹೊರಟೀತು.. ಹೀಗೆ ನಿಂತಿರಲು ಕಾರಣವಾದರೂ ಏನು? ರೈಲಿನ ಹಳಿಗಳಿಗೇನಾದರೂ ತೊಂದರೆಯಾಗಿದೆಯೇ? ವಿಪರೀತ ವಿಳಂಬವಾದರೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಮನೆ ತಲುಪುವುದು ಹೇಗೆ? ಅದರಲ್ಲೂ ರೈಲು ಹೊರಡುತ್ತದೆಂಬ ಭರವಸೆ ಇದೆಯೇ? ಇಂತಹ ಸಂದರ್ಭಗಳಲ್ಲಿ ಯಾದರೂ ರೈಲ್ವೆ ಅಧಿಕಾರಿಗಳಾಗಲಿ ಸಂಬಂಧ ಪಟ್ಟವರಾಗಲಿ ಏನು ತೊಂದರೆಯಾಗಿದೆಯೆಂಬುದನ್ನು ಪ್ರಯಾಣಿಕರಿಗೆ ತಿಳಿಸಬೇಕಲ್ಲವೆ? ಹೀಗೆ ನಾನಾ ಬಗೆಯ ಟೀಕೆ ಟಿಪ್ಪಣಿಗಳು ಬರತೊಡಗಿದ್ದವು.
“ನಮ್ಮ ದೇಶದಲ್ಲಿ ಯಾವುದು ಸರಿಯಾಗಿರುತ್ತದೆ ಹೇಳಿ.. ಎಲ್ಲವೂ ಹೀಗೆಯೇ ಎಂದು ಒಬ್ಬರು ಹೇಳಿದ್ದಕ್ಕೆ ಮತ್ತೊಬ್ಬರು ದನಿಗೂಡಿಸುತ್ತಿದ್ದರು. ಆದರೆ ವಾಸ್ತವವೆಂದರೆ ಅದೇ ರೈಲಿನಲ್ಲಿ ನಾವು ಹಲವಾರು ಬಾರಿ ಪ್ರಯಾಣ ಮಾಡಿದ್ದೇವಾದರೂ ಹೀಗಾಗಿರುವುದು ಇದೇ ಪ್ರಥಮ ಬಾರಿ. ಎಲ್ಲೋ ಹತ್ತು ಹದಿನೈದು ನಿಮಿಷಗಳು ತಡವಾಗಿರಬಹುದಷ್ಟೇ ಅಪರೂಪಕ್ಕೊಮ್ಮೆ ಹೀಗಾದರೂ ನಮ್ಮಲ್ಲಿ ವ್ಯವಸ್ಥೆ ಯಾವುದೂ ಸರಿಯಿಲ್ಲ ಎಂದು ತುಸುವೂ ಹಿಂದು ಮುಂದು ಆಲೋಚಿಸದೆ ಆರೋಪ ಹೊರಿಸಿ ಬಿಡುತ್ತೇವೆ.
ಜೊತೆ ಜೊತೆಗೇ ಕೆಟ್ಟಕೆಟ್ಟ ಯೋಚನೆಗಳು...ಏನಾದರೂ ದುರಂತ, ಕಾದಿದೆಯೇ ಎಂಬ ಅನುಮಾನವೇ ಭಯವನ್ನು ಹುಟ್ಟು ಹಾಕಿತ್ತು. ರಾತ್ರಿ ಮೆಟ್ರೋ ಸಂಚಾರದ ಸಮಯವೂ ದಾಟಿ ಹೋದರೆ ಮತ್ತೆ ಮನೆ ಸೇರುವುದು ಹೇಗೋ.. ರೈಲು ಹೊರಟೀತೆ ಎಂಬುದೊಂದೇ ಪ್ರಶ್ನೆ ಎಲ್ಲರನ್ನು ಕಾಡತೊಡಗಿತ್ತು.
ಅಷ್ಟರಲ್ಲೇ ರೈಲಿನೊಳಗಿದ್ದ ಕೆಲವು ಪ್ರಯಾಣಿಕರು ಹೇಗೋ ರೈಲಿನಿಂದ ಇಳಿದು ಪತ್ತೆ ಕಾರ್ಯದಲ್ಲಿ ತೊಡಗಿದ್ದರು.
ನಮಗೂ ಕುಳಿತಲ್ಲೇ ಕುಳಿತು ಕಾಲುಗಳು ನೋಯತೊಡಗಿದ್ದವು. ನಮಗೂ ಅವರಂತೆ ಹೊರಗೆ ಹೋಗಿ, ಹೊರಗಿರುವ ಸುಂದರ ಪರಿಸರ. ಮರಗಿಡಗಳನ್ನಾದರೂ ನೋಡುತ್ತಾ ಒಳ್ಳೆಯ ಗಾಳಿಯನ್ನು ಉಸಿರಾಡುವ ಹಂಬಲ. ಆದರೆ ರೈಲು ಹೊರಟುಬಿಟ್ಟರೆ ಎಂಬ ಭಯ. ನಿಲ್ದಾಣವಲ್ಲದ ಕಡೆ ಹತ್ತುವುದು, ಇಳಿಯುವುದು ಸುಲಭ ಸಾಧ್ಯವಿಲ್ಲ. ಆಮೇಲೆ ಏನಾದರೂ ಬಿದ್ದು ಗಾಯವಾದರೆ ಎಂದು ಕುಳಿತಲ್ಲೇ ಚಡಪಡಿಸುತ್ತಿದ್ದೆವು. ಅಷ್ಟರಲ್ಲೇ ಒಬ್ಬರು ಫೋನಿನಲ್ಲಿ ಫೋಟೋವನ್ನು ಕ್ಲಿಕ್ಕಿಸಿ ತಂದಿದ್ದರು. ಸುಟ್ಟು ಕರಕಲಾಗಿ ಹೋದ ಟಿಪ್ಪರ್‌ನ ಚಿತ್ರವದು. ಟಿಪ್ಪರ್‌ನ ಮೇಲಿನ ಭಾಗಕ್ಕೆ ರೈಲ್ವೆ ವಿದ್ಯುತ್ ತಂತಿಗಳು ತಗುಲಿ ಬೆಂಕಿ ಹೊತ್ತಿಕೊಂಡು ಪೂರ್ತಿ ಸುಟ್ಟು ಹೋಗಿದೆಯಂತೆ. ಪ್ರಾಯಶಃ ಜೀವಹಾನಿಯೇನೋ ಆಗಿರಲಾರದು. ಹೀಗೆ ನಾವು ಅರ್ಥೈಸಿಕೊಡಿದ್ದೆವು. ರೈಲ್ವೆ ಕ್ರಾಸಿಂಗ್‌ನಲ್ಲಿ ಹಾಗಾಗಿದ್ದರಿಂದ ರೈಲು ಮತ್ತು ಆ ವಿದ್ಯುತ್ ತಂತಿ ರಿಪೇರಿಯಾಗಬೇಕಲ್ಲ.
ರೈಲು ನಿಂತಿರುವುದು ಶಿವಪುರದಲ್ಲಿ ಬೇಕಾಗುವ ಪರಿಕರಗಳೊಂದಿಗೆ ರಿಪೇರಿ ಮಾಡುವವರು ಬರುವ ವ್ಯವಸ್ಥೆಯಾಗಬೇಕು. ಆದಷ್ಟು ಬೇಗ ದುರಸ್ತಿಯಾಗಬೇಕು. ಜನ ಜಾತ್ರೆಯಾಗದಂತೆ ತಡೆಯಬೇಕು. ತುರ್ತಾಗಿ ಮಾಡಿದ ರಿಪೇರಿ ಅವಘಡಕ್ಕೆ ಎಡೆಮಾಡದಂತಿರಬೇಕು. ಮಳೆಯ ತೊಂದರೆಯೂ ಆಗಬಹುದು. ಇಷ್ಟೇಲ್ಲಾ ಆಗುವಾಗ ರಾತ್ರಿ ಕಳೆದು ಈ ದಿನ ಯಾವ ಘಳಿಗೆಯಲ್ಲಿ ರೈಲು ಹತ್ತಿದೆವೋ? ಹೀಗೇ ಕುಳಿತು ಬೆಳಗು ಮಾಡಬೇಕೆನೋ ಇಂತಹ ಯೋಚನೆಗಳೇ ಕಾಡುತ್ತಿರುವಾಗ ಒಮ್ಮೆ ರೈಲು ಹೊರಡುವ ಸೂಚನೆ ಸಿಕ್ಕಿತ್ತು. ಆದರೆ ಒಂದೆರೆಡು ನಿಮಿಷವಷ್ಟೇ! ಮತ್ತೇ ರೈಲು ನಿಂತಾಗ ನಿರಾಶೆ ಕಾಡತೊಡಗಿತ್ತು. ಅಚ್ಚರಿಯಾಗುವಂತೆ ರೈಲು ಹೊರಟೇ ಬಿಟ್ಟಿತ್ತು. ಮನೆಯಿಂದ ಮೇಲೆ ಮೇಲೆ ಫೋನ್ ಕರೆಗಳು ಬರತೊಡಗಿದ್ದವು.
ಮನೆಯಲ್ಲಿ ರೈಲಿನಲ್ಲಿ ಅಂರ್ತಜಾಲ ಸಿಗುತ್ತಿರಲಿಲ್ಲವಾದ್ದರಿಂದ ಮನೆಯಲ್ಲಿ ಗೂಗಲ್ ಸರ್ಚ್ ಮಾಡಿ ರಾತ್ರಿಯ ಒಂಭತ್ತೂವರೆಗೆ ರೈಲು ತಲುಪುವ ತಪ್ಪು ಮಾಹಿತಿಯನ್ನು ನೋಡಿ ಸಿಡಿಮಿಡಿಗುಟ್ಟುತ್ತಿದ್ದರು. ಶಿವಪುರದಿಂದ ಎಷ್ಟೇ ವೇಗವಾಗಿ ಹೊರಟರೂ ಸಮಯಕ್ಕೆ ತಲುಪುವುದು ಅಸಾಧ್ಯದ ಮಾತು. ರೈಲಿನ ಎಂದಿನ ನಿಗದಿತ ಸಮಯ ಎಂಟೂವರೆ ಆದರೆ ಸುಮಾರು ಎರಡು ಗಂಟೆಗೂ ಮೀರಿ ರೈಲು ಶಿವಪುರದಲ್ಲಿ ನಿಂತಿತ್ತು. ಈಗೊಮ್ಮೆ ಹೊರಟ ರೈಲು ವೇಗದಿಂದ ಚಲಿಸತೊಡಗಿತ್ತು. ಇದೀಗ ತಮಗೆ ಬೆಂಗಳೂರು ತಲುಪುವ ಭರವಸೆ ಹಸಿರಾಗತೊಡಗಿತ್ತು. ತುಮಕೂರಿನ ಬಳಿಯ ರಿಪೇರಿಯ ಕಾರ್ಯ ರೈಲಿನ ವೇಗಕ್ಕೆ ತುಸು ಭಂಗ ತಂದಿತ್ತಾದರೂ ಎಲ್ಲಾ ಅಡೆತಡೆಗಳನ್ನು ಮೀರಿ ರಾತ್ರಿಯ ಹತ್ತೂವರೆಯ ವೇಳೆಗೆ ಯಶವಂತಪುರ ನಿಲ್ದಾಣವನ್ನು ತಲುಪಿಯೇ ಬಿಟ್ಟಿತ್ತು.
ಮೆಟ್ರೋದಲ್ಲಿ ಪ್ರಯಾಣಿಸುವ ನಂಬಿಕೆ ಹಸಿರಾಗಿತ್ತು. ಎಲ್ಲರಿಗೂ ಮೆಟ್ರೋ ಹಿಡಿಯುವ ಧಾವಂತ, ಅಂತೂ ರಾತ್ರಿಯ ಹನ್ನೊಂದೂವರೆಗೆ ಮನೆ ತಲುಪಿದಾಗ ಸಮಾಧಾನದ ನಿಟ್ಟುಸಿರು. ತಡವಾದರೂ ಯಾವುದೇ ತೊಂದರೆಯಿಲ್ಲದೆ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿ ಮನೆ ತಲುಪಿದ್ದರ ಹಿಂದೆ ಎಷ್ಟೆಲ್ಲಾ ಜನರ ಪಾತ್ರವಿದೆ ಎಂದು ಆಗ ಯೋಚಿಸುವಂತಾಗಿತ್ತು. ಎಷ್ಟು ಜನರು ತುರ್ತು ಸೇವೆ ಸಲ್ಲಿಸಿರಬಹುದು. ರೈಲ್ವೆ ಅಧಿಕಾರಿಗಳು, ವಿದ್ಯುತ್ ಕಾರ್ಯನಿರ್ವಹಿಸುವವರು. ಕರ್ಮಚಾರಿಗಳು ಎಷ್ಟೆಲ್ಲಾ ಆತಂಕ ತೊಂದರೆ ಎದುರಿಸಿರಬಹುದು. ಯಾವುದೇ ಸಮಯದ ನಿರ್ಬಂಧವಿಲ್ಲದೆ ಕೆಲಸ ಮಾಡಲು ಅವರು ಸಿದ್ದರಾಗಿರಬೇಕಲ್ಲ. ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ರೈಲ್ವೆ ಇಲಾಖೆಯ ಬಗ್ಗೆ ಅಪರೂಪಕ್ಕೊಮ್ಮೆ ತೊಂದರೆಯಾದರೆ ಮನ ಬಂದಂತೆ ದೂಷಿಸುತ್ತೇವಲ್ಲ.. ಆದಷ್ಟೂ ಸ್ವಚ್ಛವಾಗಿಸುವ ರೈಲ್ವೆ ಸಿಬ್ಬಂದಿಗಳ ಪ್ರಯತ್ನವನ್ನು ನಮ್ಮ ಪ್ರಯಾಣದ ವೇಳೆ ಹಾಳುಗೆಡುವುತ್ತೇವಲ್ಲ. ಮನಸ್ಸಿಗೆ ಬಂದಂತೆ ಕಸಹಾಕುತ್ತೇವಲ್ಲ. ಕೇವಲ ನಕಾರತ್ಮಕವಾಗಿಯೇ ಯೋಚಿಸುತ್ತಾ ನಿಂದಿಸುವುದರಲ್ಲೇ ನಮಗೆ ತೃಪ್ತಿಯೇ! ಅಷ್ಟೆಲ್ಲಾ ಕಷ್ಟಪಟ್ಟು ಆದಷ್ಟು ಶೀಘ್ರವಾಗಿ ದುರಸ್ತಿಗೊಳಿಸಿ ಸುರಕ್ಷಿತವಾಗಿ ನಮ್ಮನ್ನು ಮನೆ ತಲುಪಿಸಿದ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆಯೇ ಹೇಗೆ ಸಕಾರಾತ್ಮಕವಾಗಿ ಯೋಚಿಸಬೇಕೆಂದರೂ ಇದ್ದುದನ್ನು ಸ್ಮರಿಸದೆ ಇಲ್ಲದುದರ ಬಗ್ಗೆ ಗೊಣಗುವುದೇ ಮನುಷ್ಯರ ಸ್ವಭಾವವಲ್ಲವೇ! ಅದರಿಂದ ನಾವು ಹೇಗೆ ಹೊರತಾದೇವು?.