Hindu Vani
Index
ಸಂಪಾದಕೀಯ
ಬೇಕು ಸತತ ಜಾಗೃತಿ
ವಿಶ್ವದ ವಲಸಿಗರಿಗೆಲ್ಲ ಭಾರತವೇ ಆತಿಥ್ಯ ನೀಡಬೇಕೇನು? ಈಗ ನಾವಿರುವ 140 ಕೋಟಿ ನಾಗರಿಕರೊಂದಿಗೆ ವಿದೇಶೀ ಪ್ರಜೆಗಳಿಗೆ ಆಶ್ರಯ ನೀಡಲು ಭಾರತವೇನು ಧರ್ಮ ಶಾಲೆಯೇ? ಇದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ದೀಪಂಕರ ದತ್ತ ಮತ್ತು ಕೆ. ವಿನೋದ ಚಂದ್ರನ್ ಅವರ ಪೀಠವು ಶ್ರೀಲಂಕಾದ ತಮಿಳು ಪ್ರಜೆಯೊಬ್ಬರಿಗೆ ಕೇಳಿದ ಪ್ರಶ್ನೆಯಿದು. ಮಾದಕ ದ್ರವ್ಯಗಳ ಕಳ್ಳಸಾಗಣೆಯ ಆರೋಪದಲ್ಲಿ ಏಳುವರ್ಷಗಳ ಶಿಕ್ಷೆಯನ್ನು ಅನುಭವಿಸಿ, ಬಿಡುಗಡೆಗೊಂಡ ಮೇಲೆ ಆ ವ್ಯಕ್ತಿಯು ತಾನು ಭಾರತದಲ್ಲಿ ನೆಲೆಸುವೆನೆಂದು ಸರ್ವೋಚ್ಚ ನ್ಯಾಯಾಲಯದ ಅನುಮತಿಯನ್ನು ಕೋರಿದಾಗ ನ್ಯಾಯಾಮೂರ್ತಿಗಳಿಬ್ಬರು ಮಾಡಿದ ಕಟುವಾದ ಟೀಕೆಯಿದು. ತನ್ನ ಪತ್ನಿ ಮತ್ತು ಮಕ್ಕಳು ಭಾರತದಲ್ಲಿ ನೆಲೆಸಿರುವುದರಿಂದಲೂ ಶ್ರೀಲಂಕಾದಲ್ಲಿ ತನ್ನ ಪ್ರಾಣಕ್ಕೆ ಅಪಾಯವಿರುವುದರಿಂದಲೂ ತಾನೂ ಭಾರತದಲ್ಲಿ ಉಳಿಯುವೆನೆಂದು ಅವರು ಕೋರಿದ್ದರು. ಭಾರತದಲ್ಲೇ ಉಳಿಯಬೇಕೆನ್ನುವುದು ತಮ್ಮ ಹಕ್ಕು ಎನ್ನುವಂತೆ ಭಾವಿಸಬಾರದು. ಆದುದರಿಂದ ಭಾರತವನ್ನು ಬಿಟ್ಟು ಮತ್ತೆಲ್ಲಿ ಬೇಕಾದರೂ ನೆಲೆಸಬಹುದು ಎಂದು ನ್ಯಾಯಾಲಯವು ಅವರಿಗೆ ಕಠಿಣವಾಗಿಯೇ ಸೂಚಿಸಿತು.
ಭಾರತದಲ್ಲಿ ನೆಲೆಸಿ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಸಕ್ರಿಯರಾಗಿರುವ ದ್ರೋಹಿಗಳನ್ನು ಪತ್ತೆ ಹಚ್ಚಬೇಕಾಗಿರುವ ತುರ್ತು ಕಾಡುತ್ತಿರುವ ಈ ಕಾಲಖಂಡದಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಸಮಯೋಚಿತವಾಗಿದೆ.
ಕೇರಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ| ಮೋಹನ್‌ರವರು ತಮ್ಮ ವಿಶ್ವವಿದ್ಯಾಲಯದಲ್ಲಿ ಪಹಲ್ಗಾಂ ಹತ್ಯಾಕಾಂಡದ ಕಥನವನ್ನೇ ಬದಲಾಯಿಸಲು ಮತ್ತು ಆಪರೇಷನ್ ಸಿಂಧೂರದ ಬಗ್ಗೆ ಭಾರತ ವಿರೋಧಿ ವಾತಾವರಣವನ್ನು ಸೃಷ್ಟಿಸಲು ಯೋಜಿಸಿದ ವಿಚಾರ ಸಂಕಿರಣವನ್ನು ತಡೆದರು. ವಿಶ್ವವಿದ್ಯಾಲಯದ ತಮಿಳು ವಿಭಾಗವು ಇಂತಹದೊಂದು ಕಾರ್ಯಕ್ರಮವನ್ನು ಹುಟ್ಟು ಹಾಕಿದ್ದಿತು. ಡಾ|| ಮೋಹನನ್‌ರವರು ಹೇಳುವಂತೆ ದೇಶದ ಹೊರ ಶತ್ರುಗಳನ್ನೇನೋ ನಮ್ಮ ಧೀರ ಸೈನಿಕರು ನೋಡಿಕೊಳ್ಳುವರು. ಆದರೆ ಒಳಶತ್ರುಗಳನ್ನು ಎದುರಿಸುವವರಾರು? ವಿಚಾರ ಸಂಕಿರಣದಲ್ಲಿ 'ಇದು ಮುಂದಿನ ಚುನಾವಣೆಯನ್ನು ಗೆಲ್ಲಲು ದೇಶದ ಪ್ರಧಾನಿಯವರು ಮಾಡಿದ ಸಂಚು ಎಂದು ಸಾಧಿಸಲು ಹೊರಟಿದ್ದರು ಎಂಬುದು ಡಾ|| ಮೋಹನನ್‌ರವರ ಸ್ಪಷ್ಟ ಅಭಿಪ್ರಾಯವಾಗಿದ್ದಿತು.
ಪ್ರಸ್ತುತ ದೇಶದ ಪರಿಸ್ಥಿತಿಯು ಬರೇ ರಣಾಂಗಣಕ್ಕೆ ಮಾತ್ರ ಸೀಮಿತವಾದುದಲ್ಲ. ಅದಕ್ಕೆ ಹತ್ತು ಹಲವು ಮುಖಗಳಿವೆ. ಯುದ್ಧಕಾಲದಲ್ಲಿ ಶತ್ರುರಾಷ್ಟ್ರದ ಪರವಾಗಿ ವಿಚಾರಗಳನ್ನು ವಿಶ್ಲೇಷಿಸುವುದು ಕೂಡಾ ತಪ್ಪಾಗುತ್ತದೆ. ವಿಚಾರವನ್ನು ಅರಿಯುವ ಆಸಕ್ತಿಯಾಗಲೀ ಇಲ್ಲದ; ಪ್ರಾಥಮಿಕ ಅಧ್ಯಯನವಾಗಲೀ ಜೀವನಾನುಭವವಾಗಲೀ, ಗಹನ ಪ್ರಬುದ್ಧತೆಯನ್ನಾದರೂ ಪಡೆಯದ ಎಳಸು ವ್ಯಕ್ತಿಗಳು ಯುದ್ಧದ ವಿಶ್ಲೇಷಣೆಯನ್ನು ಮಾಡ ಹೊರಟಿರುವರು.
ಯುದ್ಧದ ನಡುವೆ ಭಾರತದ ಎಷ್ಟು ವಿಮಾನಗಳು ಹೊಡೆದುರುಳಿದವು ಎಂದು ಪ್ರಶ್ನಿಸುವ ಅಪ್ರಬುದ್ಧರು ರಾಜಕಾರಣದ ಮುನ್ನೆಲೆಯಲ್ಲಿ ಪ್ರತಿಷ್ಠೆಗೊಂಡಿರುವರು. ಪಾಕಿಸ್ತಾನದ ಸಂಸತ್ತು ತನ್ನ ದೇಶದ ರಾಜಕಾರಣಿಗಳ ಹೇಳಿಕೆಗಳಿಗಿಂತ ಭಾರತದ ಇಂತಹ ವ್ಯಕ್ತಿಗಳ ಮಾತುಗಳನ್ನು ಪ್ರತಿಧ್ವನಿಸುತ್ತದೆ. ಭಾರತವನ್ನು ಅವಹೇಳನ ಮಾಡುವ ರಾಜಕೀಯ ಹೇಳಿಕೆಗಳನ್ನು ಭಾರತದ ನಾಯಕನಾಗಬೇಕಾದವನು ಕೊಡುವ ವಿಚಿತ್ರ ಪರಿಸ್ಥಿತಿಯು ಭಾರತದಲ್ಲಿಂದು ಕಾಣುತ್ತಿದೆ. ಪಾಕಿಸ್ತಾನದ ಪರವಾದ ಪ್ರಚಾರ ಮಾಡುವುದು ಹೆಗ್ಗಳಿಕೆಯ ಮಾತಾಗುವುದು ಭಾರತದಲ್ಲಿ ಮಾತ್ರ ಕಾಣಬರುವ ಪರಿಸ್ಥಿತಿ.
ದೇಶವನ್ನು ಧರ್ಮಶಾಲೆಯನ್ನಾಗಿಸುವವರ ಹುನ್ನಾರವನ್ನು ಬಯಲಿಗೆಳೆಯಲು ದೇಶವನ್ನು ಪ್ರೀತಿಸುವವರೆಲ್ಲರೂ ಒಂದಾಗಬೇಕಿದೆ. ಬಂಗ್ಲಾದೇಶಿಗರು ರೋಹಿಂಗ್ಯಾ ಉಪಟಳಗಳು ಕೈಮೀರುವ ಮೊದಲು ಅವುಗಳ ಹುಟ್ಟಡಗಿಸಲು ಈಗ ಸಕಾಲ. ಈಗಾಗಲೇ ಹಲವು ರಾಜ್ಯಗಳಲ್ಲಿ ಇಂತಹ ಸಾವಿರಾರು ಅಕ್ರಮ ನುಸುಳುಗಾರರನ್ನು ಪತ್ತೆ ಹಚ್ಚುವುದು ಪ್ರಾರಂಭವಾಗಿದೆ. ಎಲ್ಲರನ್ನು ಸಾರಾಸಗಟು ಹೊರಕಳುಹಿಸಿ ಭಾರತವನ್ನು ಶತ್ರು ಮುಕ್ತವನ್ನಾಗಿಸಬೇಕಾಗಿದೆ.
ಮೇಡ್ ಇನ್ ಇಂಡಿಯಾ; ಭಾರತವನ್ನು ಸ್ವಾವಲಂಬಿಯನ್ನಾಗಿಸುವ ಸಂಕೇತ. ಭಾರತದ ಶಸ್ತ್ರಾಸ್ತ್ರಗಳು ತಮ್ಮ ಸಾಮರ್ಥ್ಯವನ್ನು ಸ್ಥಾಪಿತಗೊಳಿಸುವ ಹಂತದಲ್ಲಿವೆ. ಭಾರತದ ಬ್ರಹ್ಮಸ್ ಕ್ಷಿಪಣಿಗಳು ಈಗಾಗಲೇ ತಮ್ಮ ಹಿರಿಮೆಯನ್ನು ಪ್ರದರ್ಶಿಸಿವೆ. ಈ ನಡುವಿನಲ್ಲಿ ಅವುಗಳ ಕುರಿತು ಅಪಸ್ವರವನ್ನು ಎತ್ತುವುದು ಪಾಂಡಿತ್ಯವೆನಿಸುತ್ತಿದೆ. ಆಪರೇಷನ್ ಸಿಂಧೂರದಲ್ಲಿ ಮೇಲುಗೈಯಾಗಲು ಕಾರಣವಾದುದು ಫ್ರಾನ್ಸ್, ರಷ್ಯಾ, ಮತ್ತು ಇಸ್ರೇಲ್‌ಗಳಿಂದ ಕೊಂಡುಕೊಂಡ ದುಬಾರಿ ಬೆಲೆಯ ಶಸ್ತ್ರಾಸ್ತ್ರಗಳಿಂದಲ್ಲದೆ ಭಾರತದಲ್ಲಿ ತಯಾರಾದವುಗಳಿಂದಲ್ಲ ಎನ್ನುವ ಲೇಖನವೊಂದು ಈಚಿನ ಆಂಗ್ಲ ದಿನಪತ್ರಿಕೆಯಲ್ಲಿ ಪ್ರಮುಖ ಅಂಕಣ ಬರಹವಾಗಿ ಪ್ರಕಟಗೊಂಡಿತು.
ಭಾರತ ವಿರೋಧಿ ಬೇಹುಗಾರಿಕೆಯ ಜಾಲದ ಒಳಹೊರಗುಗಳು ಊಹೆಗೂ ಮೀರಿದಂತಿದೆ. ಕರ್ನಾಟಕದಲ್ಲಿ 2600 ಬಾಂಗ್ಲಾ ಏಜಂಟರು ಸಕ್ರಿಯರಾಗಿರುವರು ಎನ್ನುವ ವರದಿಯಿದೆ. ಇಂತಹ ಬೇಹುಗಾರರು ನಿಯಮಿತವಾಗಿ ಭಾರತ ವಿರೋಧಿ ಕಥನವನ್ನು ಪ್ರಚಾರ ಮಾಡುತ್ತ ಇರುತ್ತಿದ್ದಾರೆ. ಈಚೆಗೆ ಬಂಧನಕ್ಕೊಳಗಾದ ಮಹಿಳೆಯೊಬ್ಬರು ಪಹಲ್ಯಾಂ ಹತ್ಯಾಕಾಂಡದ ವಿಚಾರವನ್ನು ವರ್ಣಿಸಿದ ರೀತಿ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಕಾಶ್ಮೀರದ ಪಹಲ್ಗಾಂ ಬಗ್ಗೆ ನನ್ನ ಅಭಿಪ್ರಾಯ ಎನ್ನುತ್ತಾ ಆಕೆ ಉಲ್ಲೇಖಿಸಿದ ಪ್ರಸಂಗವನ್ನು 80ಸಾವಿರ ವೀಕ್ಷಕರು ಓದಿದರು ಎಂದು ತಿಳಿದುಬಂದಿದೆ. ಆಕೆ ಅದರಲ್ಲಿ ಪಾಕಿಸ್ತಾನದ ಕುರಿತು ಒಂದೇ ಒಂದು ಸಾಲು ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಆಕೆ ಹೇಳುವಂತೆ “ಕಾಶ್ಮೀರದ ಸ್ಥಿತಿಗೆ ಯಾವುದೇ ದೇಶವನ್ನು ಬೊಟ್ಟು ತೋರಿಸಿ ಗುರಿಯಾಗಿಸುವಂತಿಲ್ಲ. ಭಯೋತ್ಪಾದಕ ಪರಿಸ್ಥಿತಿಯನ್ನು ಖಂಡಿಸಬೇಕು ನಿಜವೆ. ಆದರೆ ಅದಕ್ಕಾಗಿ ಬೇರೆ ಧರ್ಮವನ್ನು ಮತ್ತು ದೇಶವನ್ನು ಹೊಣೆಯಾಗಿಸಬಾರದು. ಯಾರೇ ಆಗಲಿ ಭಯೋತ್ಪಾದಕತೆಯನ್ನು ಬೆಂಬಲಿಸಿದರೆ ಅದಕ್ಕೆ ಕಾರಣವಾಗುವುದು ನಮ್ಮ ಸರ್ಕಾರ. ಹೊಣೆಯಾಗುವುದು ನಾವು. ಇದು ಪಹಲ್ಗಾಂ ಪ್ರಸಂಗದ ಬಗ್ಗೆ ಬರೆದ ಲೇಖನ. ಪಾಕಿಸ್ತಾನದ ರಾಯಭಾರಿ ಕಛೇರಿಯ ಇಫ್ತಾರ್ ಕೂಟದಲ್ಲಿ ಆಕೆ ಭಾಗವಹಿಸುತ್ತಾಳೆ ಎಂದಾಗ ಶತ್ರುದೇಶದ ಹಸ್ತಕರು ಎಷ್ಟು ಹತ್ತಿರದಲ್ಲಿರುವರು ಎಂಬುದು ಅರ್ಥವಾಗುತ್ತದೆ!