Hindu Vani
Index
ಪ್ರಚಲಿತ
ಬೆಳಗಲಿವೆ ಪ್ರಥಮ ಪ್ರಭಾತದ ಹೊಂಗಿರಣಗಳು
ಸುಮಾರು ಭಾರತ ಭೂಭಾಗದಿಂದ ಎಂಟು ಸಾವಿರ ಕಿ. ಮೀ. ದೂರದ ಆಕ್ಷೇಯ ಏಷಿಯಾದ ಭೂಖಂಡದಲ್ಲಿ ಹಿಂದು ಸಾಮ್ರಾಜ್ಯವೊಂದು ಸ್ಥಾಪಿತಗೊಂಡಿತು. ಅದು ಎರಡನೇಯ ಕ್ರಿಸ್ತ ಶತಮಾನದ ಕಾಲಖಂಡ, ಚೀನಾದ ಗ್ರಂಥಗಳಲ್ಲಿ ಇದು ಮುನಾನ್ ಸಾಮ್ರಾಜ್ಯವೆಂದು ಉಲ್ಲೇಖವಾಗಿದೆ. ಮುನಾನ್ ಎಂದರೆ ಪರ್ವತ ಎಂದು ಅರ್ಥ. ಈ ಸಾಮ್ರಾಜ್ಯದ ಸ್ಥಾಪಕರು ಭಾರತದ ವಸಿಷ್ಠ ಋಷಿಯ ವಂಶಜರಾದ ಋಷಿ ಕೌಂಡಿಣ್ಯರು. ಅವರಿಂದಾಗಿ ಆ ದೇಶದ ಹೆಸರು ಕೂಡಾ ಕಾಂಬೋಡಿಯಾ ಎಂದಾಯಿತು. ಕೌಂಡಿಣ್ಯ ಋಷಿ ಅಲ್ಲಿಯ ರಾಜಕುಮಾರಿಯನ್ನು ವಿವಾಹವಾದರು. ಆಕೆ ನಾಗಾ ಜನಾಂಗದವಳು. ಈ ಋಷಿ ದಂಪತಿಗಳ ವಂಶಜರು ಕಾಂಬೋಡಿಯಾವನ್ನು 150 ವರ್ಷಗಳ ಕಾಲ ರಾಜ್ಯವಾಳಿದರು. ಈಗಲೂ ಅಲ್ಲಿ ರಾಜವಂಶದ ಸಂಕೇತವಾದ ನಾಗಪ್ರತಿಮೆಗಳು ಹೇರಳವಾಗಿ ಕಾಣಸಿಗುತ್ತವೆ.
ಕಳೆದ ತಿಂಗಳು 21ರಂದು ಕಾರವಾರದ ಕದಂಬ ನೌಕಾನೆಲೆಯಲ್ಲಿ ವಿಶಿಷ್ಟವಾದ ಹಾಯಿಪಟದ ನೌಕೆಯೊಂದು ನಿರ್ಮಾಣವಾಗಿ ಲೋಕಾರ್ಪಣೆಗೊಂಡಿತು. ಅದಕ್ಕೆ ಇಟ್ಟ ಹೆಸರು ಭಾರತದ ಸಮುದ್ರಯಾನದ ಪ್ರವರ್ತಕರಲ್ಲಿ ಒಬ್ಬರಾದ ಇದೇ ಋಷಿಯ ಹೆಸರು ಕೌಂಡಿಣ್ಯ ಎಂದು. ಭಾರತದ ಸಮುದ್ರವ್ಯಾಪಾರದ ಪ್ರಾಚೀನ ಪರಂಪರೆಯ ನೆನಪನ್ನು ಮರುಕಳಿಸಲೆಂದೇ ಪ್ರಾರಂಭವಾದುದು ಈ ನೌಕಾನಿರ್ಮಾಣ ಯೋಜನೆ.
ಈ ಯೋಜನೆಯ ಯೋಚನೆಯು ಪ್ರಾರಂಭವಾದುದು ಕೇಂದ್ರದ ಸಂಸ್ಕೃತಿ ಮಂತ್ರಾಲಯದಲ್ಲಿ. ಮತ್ತೆ ಅದಕ್ಕೆ ಕೈಜೋಡಿಸಿದವರು ಭಾರತೀಯ ನೌಕಾಸೇನೆ ಮತ್ತು ಕೇರಳದ ಹೋಡಿ ಇನೊವೇಶನ್ ಎನ್ನುವ ಕಂಪನಿ. 2023 ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾದ ಈ ಕಲ್ಪನೆಯ ಬೆನ್ನು ಹಿಡಿದವರು ಬಾಬು ಶಂಕರನ್ ನೇತೃತ್ವದ ಕೇರಳದ ಕುಶಲಕರ್ಮಿಗಳ ತಂಡ. ಅಲ್ಲಿಂದ ಭಾರತದ ನೌಕಾ ನಿರ್ಮಾಣದಲ್ಲಿ ಅನೂಚಾನವಾಗಿ ಬಂದ ಅನುಭವವನ್ನು ಸಾಕಾರಗೊಳಿಸುವ ಪ್ರಯತ್ನ ಪ್ರಾರಂಭಗೊಂಡಿತು. 500ವರ್ಷಗಳ ಹಿಂದೆ ಸ್ಥಗಿತಗೊಂಡ ಎಳೆಯನ್ನು ಹಿಡಿದು ಹೊರಟವರಿಗೆ ಮದ್ರಾಸ್ ಐ.ಐ.ಟಿಯ ಸಾಗರ ತಂತ್ರಜ್ಞಾನ ಇಲಾಖೆಯು ನೌಕೆಯ ವಿನ್ಯಾಸವನ್ನು ಕೈಗೂಡಿಸಲು ನೆರವಾಯಿತು. ಈ ತಲೆಮಾರು ಕೇಳದ, ಕಾಣದ ನಮೂನೆಯೊಂದನ್ನು ಕಾರ್ಯಗತಗೊಳಿಸಲು ಹೊರಟ ತಂಡಕ್ಕೆ ಪ್ರಚೋದನೆ ನೀಡಲು ದೊರಕಿದ ಒಂದು ನಕ್ಷೆಯೆಂದರೆ ಅಜಂತಾ ಗುಹೆಯಲ್ಲಿ ಬರೆದ ಒಂದು ಹಾಯಿಪಟದ ನೌಕೆಯ ಚಿತ್ರ ಮಾತ್ರವೆ.
ನೌಕೆಯ ತಳಹಲಗೆಗಳನ್ನು ಜೋಡಿಸುತ್ತ ಬಂದು ಅದನ್ನು ಮಟ್ಟಸ ಮಾಡಲು ಹಾಸುವ ಮೇಲ್ಪದರದ ಮರದ ಹಾಳೆಗಳನ್ನು ಹೊಂದಿಸಲು ಮೊಳೆಗಳನ್ನು ಬಳಸುವಂತಿಲ್ಲ. ಪ್ರಾಚೀನ ಕಾಮಗಾರಿಯಲ್ಲಿ ಅದಕ್ಕಾಗಿ ಉಪಯೋಗಿಸುವುದು ಹಗ್ಗಗಳನ್ನು ಮತ್ತು ದಾರಗಳನ್ನು. ಕೌಂಡಿಣ್ಯದಲ್ಲಿ ನೀರು ಒಳಬರದಂತೆ ಈ ಹಲಗೆಗಳನ್ನು ಜೋಡಿಸಲು ತೆಂಗಿನ ನಾರಿನ ಹಗ್ಗಗಳನ್ನೂ ಸ್ವಾಭಾವಿಕ ಗೋಂದು ಮತ್ತು ರಾಳವನ್ನು ಕೂಡಿಸಲಾಯಿತು. ಈ ನೌಕೆಯ ಹಾಯಿಪಟವೂ ಕೂಡಾ ಆಯತಾಕಾರದಲ್ಲಿದ್ದು ಒಂದರ ಮೇಲೊಂದು ಹಾಸುವಂತಿದೆ. ಆಧುನಿಕ ನೌಕೆಗಳಲ್ಲಿ ಕಾಣಸಿಗದ ಹಾಯಿಪಟದ ಬೃಹತ್ ಕಂಭಗಳು, ಮರದ ಚುಕ್ಕಾಣಿಗಳು, ಪ್ರಾಚೀನ ಭಾರತದ ನೌಕಾಯಾನದ ಚಿತ್ರವನ್ನು ಕಣ್ಣ ಮುಂದೆ ಕಟ್ಟಿದಂತೆ ಭಾಸವಾಗುತ್ತದೆ. ಹಾಯಿಪಟದಲ್ಲಿ ಸೂರ್ಯ ಮತ್ತು ಗಂಡ ಭೇರುಂಡದ ಅಗಾಧ ಆಕಾರದ ಚಿತ್ರಗಳಿದ್ದು ಎಲ್ಲವೂ ಪ್ರಾಚೀನ ನೌಕಾ ನಿರ್ಮಾಣದ ಶ್ರೀಮಂತ ಪರಂಪರೆಯನ್ನು ಅನಾವರಣಗೊಳಿಸಿದಂತಿದೆ.
ಹರಪ್ಪಾದ ವ್ಯಾಪಾರಿಗಳು ಮೆಸಪೋಟೋಮಿಯಾದೊಂದಿಗೆ ವಾಣಿಜ್ಯ ವ್ಯವಹಾರಗಳನ್ನು ಇಟ್ಟುಕೊಂಡಿದ್ದರು. ಅನಂತರದಲ್ಲಿ ಪಶ್ಚಿಮ ಭಾರತದ ಸಮುದ್ರ ವ್ಯಾಪಾರದಲ್ಲಿ ಮುಂದಿದ್ದುದು ದ್ವಾರಕೆಯ ಬಂದರು. ಮೌರ್ಯರ ಕಾಲದಲ್ಲಿ ಬಂಗಾಳದ ತಾಮ್ರಲಿಪ್ತಿಯು ಸಮೃದ್ಧ ರೇವು ಪಟ್ಟಣವಾಗಿದ್ದಿತು. ಆಗ್ನೆಯ ಏಷಿಯಾ ಮತ್ತು ಚೀನಾದೊಂದಿಗೆ ವ್ಯಾಪಾರದಲ್ಲಿ ಒರಿಸ್ಸಾದ ಕಟಕ್, ಪಲ್ಲವರ ಮಹಾಬಲಿಪುರ ಮತ್ತು ಚೋಳರ ನಾಗಪಟ್ಟಣಗಳು ಮುಂಚೂಣಿಯಲ್ಲಿದ್ದವು. ಅತ್ತ ಸುವರ್ಣ ದ್ವೀಪವಾಗಿದ್ದ ಸುಮಾತ್ರಾ, ಯವ ದ್ವೀಪವೆಂದು ಕರೆಯಲ್ಪಡುತ್ತಿದ ಜಾವಾಗಳು ಸೇರಿದಂತೆ ಈಗಿನ ವಿಯಟ್ನಾಂ ವರೆಗೆ ನಮ್ಮ ವ್ಯಾಪಾರಿಗಳ ಬೃಹತ್ ನೌಕೆಗಳು ಲಂಗರು ಹಾಕುತ್ತಿದ್ದವು. ಈ ವ್ಯಾಪಾರ ವಹಿವಾಟು ಒಂದು ಸಾವಿರ ವರ್ಷಗಳ ಕಾಲ ನಡೆದು ಬಂದಿತ್ತು.
ಈಗ ಕಾರವಾರದಲ್ಲಿ ನಿರ್ಮಾಣಗೊಂಡ ನೌಕೆ ಕಾಂಡಿಣ್ಯವು ಮೊದಲ ಪ್ರಯಾಣದಲ್ಲಿ ಗುಜರಾತಿನಿಂದ ಹೊರಟು ಓಮನ್ ದೇಶಕ್ಕೆ ಹೋಗಲಿದೆ. ನಂತರದ ಹಂತಗಳಲ್ಲಿ ಹಿಂದೊಮ್ಮೆ ಎಲ್ಲೆಲ್ಲಿ ಭಾರತದ ವ್ಯಾಪಾರಿ ನೌಕೆಗಳು ಲಂಗರು ಹಾಕಿದ್ದವೋ ಅವೆಲ್ಲ ರೇವು ಪಟ್ಟಣಗಳಿಗೆ ಕೌಂಡಿಣ್ಯವು ಭೇಟಿ ನೀಡಲಿದೆ. ಆ ಕಾಲಖಂಡದಲ್ಲಿ ಜಗತ್ತಿನ ಉತ್ಪಾದನೆಯ (G.D.P) 34% ಭಾರತದ ಹತೋಟಿಯಲ್ಲಿದ್ದಿತು ಎಂದು ನೆನಪಾಗಬೇಕಿರುವ ಕಾಲವಿದು. ಚೀನಾದ ಪಾಲಿಗೆ ಆಗ ಇದ್ದುದು ಶೇಕಡಾ 26 ಭಾಗ ಮಾತ್ರ. ಪಶ್ಚಿಮ ಯೂರೋಪ್ ದೇಶಗಳ ಒಟ್ಟು ಉತ್ಪಾದನೆಯ ಮೂರು ಪಾಲಿನಷ್ಟು ಶ್ರೀಮಂತವಾಗಿದ್ದಿತು ನಮ್ಮ ಭಾರತ. ಒರಿಸ್ಸಾದ ಕಟಕ್ ಪ್ರದೇಶದಲ್ಲಿ ಬಲಿಯಾತ್ರೆಯೆನ್ನುವ ಉತ್ಸವವು ನಡೆಯುತ್ತದೆ. ಅದು ಬಲಿಮಹಾರಾಜನ ಸ್ಮರಣೆಗಾಗಿ ಅವನಿರುವ ಬಾಲಿದ್ವೀಪಕ್ಕೆ ಮಾಡುವ ಯಾತ್ರೆ ಅದು ಕಾರ್ತಿಕ ಪೂರ್ಣಿಮೆಯಂದು ನಡೆಯುವ ಕಾಲ. ಹಬ್ಬ. ಅಂದರೆ ಸಾಧಾರಣವಾಗಿ ನವಂಬರ್ ತಿಂಗಳಲ್ಲಿ ಜರುಗುವ ಉತ್ಸವ. ಮಾನ್ಸೂನು ಮಾರುತವು ತನ್ನ ದಿಕ್ಕನ್ನು ಬದಲಿಸಿ ಆತ್ಮೀಯ ಏಷಿಯಾ ಕಡೆಗೆ ಹೋಗುವ ನಾವೆಗಳಿಗೆ ಅನುಕೂಲಿಸುವ ವ್ಯಾಪಾರದ ಪ್ರಾರಂಭವೂ ಕೂಡಾ ನಮಗೆ ಹಬ್ಬವೆ. ಕೌಂಡಿಣ್ಯದ ಯಾನವು ಜಗತ್ತನ್ನು ಇಂತಹದೊಂದು ಉತ್ಸವಕ್ಕೆ ಕರೆಕೊಡುವ ನಾಂದಿ ಹಬ್ಬವಾಗಲಿದೆ.
ಭಾರತದ ಈಶಾನ್ಯ ರಾಜ್ಯಗಳ ಪ್ರಾಮುಖ್ಯತೆಯನ್ನು ಈಚೆಗೆ ವಿವರಿಸಿದ ಪ್ರಧಾನಿಯವರು ಇಲ್ಲಿಯ 8 ರಾಜ್ಯಗಳು ತಮ್ಮ ಭೌಗೋಳಿಕ ಸ್ಥಾನದಿಂದ ಆಗ್ನೆಯ ಏಷಿಯಾದ ದೇಶಗಳೊಂದಿಗೆ ವ್ಯವಹಾರವನ್ನು ಪ್ರಾರಂಭಿಸುವ ಸ್ಥಿತಿಯಲ್ಲಿವೆ ಎಂದರು. ಆಗೋಯ ಏಷಿಯಾ ಭೂಭಾಗಗಳಿಗೆ ಒಂದು ಸಾವಿರ ಕಿ.ಮೀಟರ್‌ಗಳಷ್ಟು ಹತ್ತಿರವಿರುವ ನಮ್ಮ ಈಶಾನ್ಯ ರಾಜ್ಯಗಳು, ಈ ವಾಣಿಜ್ಯ ವ್ಯವಹಾರಗಳಿಗೆ ಅತ್ಯಂತ ಸೂಕ್ತವೆನಿಸಿವೆ.
ಮ್ಯಾನ್ಮಾರ್ ದೇಶದ ರೇವು ಪ್ರದೇಶದಿಂದ ಮುಂದೆ ಉದ್ದಕ್ಕೂ ಭಾರತದ ವ್ಯಾಪಾರ ಕೇಂದ್ರಗಳು ಪ್ರಾರಂಭವಾಗಲಿವೆ. ಬಾಂಗ್ಲಾ ತನ್ನ ಸ್ಥಾನ ಬಲದಿಂದ ಭಾರತವನ್ನು ಹಿಂದಿಕ್ಕುವ ಕುರಿತು ಯೋಚಿಸುತ್ತಿರಲು ಪ್ರಾರಂಭಿಸುತ್ತಿರುವುದಕ್ಕೆ ಒಂದು ದಶಕದ ಹಿಂದೆಯೇ ಅದನ್ನು ಭಾರತವು ಮುಂದಾಲೋಚನೆಯಿಂದ ಯೋಜಿಸಿದ್ದಿತು ಎಂದಾಯಿತು.
ಪ್ರಥಮ ಪ್ರಭಾತ ತವ ವನ ಭುವನೇ ಪ್ರಥಮ ಪ್ರಕಾಶಿತ ತವತಪೋವನೆ. ಭಾರತವನ್ನು ಜಗತ್ತಿನಲ್ಲಿ ಎಲ್ಲೆಲ್ಲೂ ಮೊದಲ ಸ್ಥಾನದಲ್ಲೇ ಇರಲಿದೆ.