Hindu Vani
Index
ಸೂಕ್ತಿಶ್ರೀ
ಒಳ ಶತ್ರುಗಳು
ರೋಗೋಂಡಜೋಂಕುರೋಗ್ನಿ ವಿಷಮಶ್ವತರೋ ಘಣಾಃ ಕ್ರಿಮಯ: |
ಪ್ರಕೃತಿ ಕೃತಘ್ನಶ್ಚ ನರಃ ಸ್ವಾಶ್ರಯಮವಿನ್ಯಾಶ್ಯ ನೈಧಂತೇ॥
- ಸುಭಾಷಿತ ರತ್ನ ಭಾಂಡಾರ
ರೋಗ, ಹಕ್ಕಿ, ಮೊಳಕೆ, ಬೆಂಕಿ, ವಿಷ, ಮರವನ್ನು ಕೊರೆಯುವ ಹುಳ, ಸೂಕ್ಷ್ಮ ಕ್ರಿಮಿ, ಪ್ರಕೃತಿಗೆ ಶತ್ರುವಾದ ಮನುಷ್ಯ ಇವರೆಲ್ಲರೂ ತಮಗೆ ಆಶ್ರಯ ನೀಡಿದವರನ್ನೇ ನಾಶಮಾಡುವರಷ್ಟೇ ಅಲ್ಲದೆ ಅಲ್ಲಿಂದಲೇ ಬೆಳೆಯುತ್ತಿರುವರು.
ರೋಗವು ಶರೀರದಲ್ಲಿ ಹುಟ್ಟುತ್ತದೆ. ಅಲ್ಲಿಯೇ ಬೆಳೆಯುತ್ತದೆ. ಮತ್ತು ಶರೀರವನ್ನೇ ನಾಶಮಾಡುತ್ತದೆ. ಕ್ಯಾನ್ಸರ್ ರೋಗವು ಇದಕ್ಕೆ ಉದಾಹರಣೆ. ದೇಹದ ಭಾಗಗಳನ್ನೇ ಬೆಳೆಸುತ್ತಾ ಅದರಿಂದಲೇ ಬೆಳೆಯುತ್ತಾ ಹೋಗಿ ಕೊನೆಗಂತೂ ಇಡಿಯ ದೇಹವೇ ಅದಕ್ಕೆ ಬಲಿಯಾಗುತ್ತದೆ.
ಮೊಟ್ಟೆಯೇನೋ ಮುಂದೆ ಹಕ್ಕಿಯಾಗುವ ಜೀವಾಂಶವನ್ನು ಒಂದಾಗಿಟ್ಟು ರಕ್ಷಿಸುತ್ತದೆ. ಆದರೆ ಆ ಮೊಟ್ಟೆಯನ್ನು ಒಂದು ದಿನ ಆ ಮರಿ ಹಕ್ಕಿಯು ಒಡೆದು ಮೊಟ್ಟೆಯ ಇರುವನ್ನು ನಾಶಮಾಡಿ ಬಿಡುತ್ತದೆ. ಬೀಜದಿಂದ ಹೊಸ ಗಿಡವೇನೋ ಬರುತ್ತದೆ ನಿಜವೆ. ಆದರೆ ಅದಕ್ಕಾಗಿ ಬೀಜವು ತನ್ನ ಅಸ್ತಿತ್ವವನ್ನೂ ಕಳೆದುಕೊಳ್ಳುತ್ತದೆ. ಬೆಂಕಿಯು ಹೆಚ್ಚುವುದು ತಾನಿದ್ದ ಸ್ಥಳದಲ್ಲಿದ್ದ ವಸ್ತುಗಳನ್ನು ಸುಟ್ಟುಕೊಂಡು, ಅದರಿಂದಲೇ ಬೆಂಕಿಯು ಪಸರಿಸುತ್ತಾ ಹೋಗುತ್ತದೆ.
ತನ್ನ ಸುತ್ತಲಿನಲ್ಲಿ ತನ್ನ ಬೆಂಕಿಯನ್ನು ಬೆಳೆಸಲು ನೆರವಾದ ವಸ್ತುಗಳೆಲ್ಲಾ ಸುಟ್ಟ ಮೇಲೆಯೇ ಅದು ಶಾಂತವಾಗುವುದು, ಹಾವನ್ನು ಮನುಷ್ಯನು ಕೊಲ್ಲಬೇಕಾಗಿ ಬರುವುದು ಅದರಲ್ಲಿ ಇರುವ ವಿಷದ ಕಾರಣದಿಂದ. ಹೀಗೆ ವಿಷಕ್ಕೆ ತನ್ನೊಳಗೆ ಇರಲು ಬಿಟ್ಟ ಕಾರಣದಿಂದ ಹಾವು ಸಾಯುತ್ತದೆ. ಮರವನ್ನು ಕೊರೆದು ತಿನ್ನುವ ಹುಳುಗಳು, ಗೆದ್ದಲು ಮೊದಲಾದ ಕ್ರಿಮಿಗಳು ಒಳಗೊಳಗೆಯೇ ಬೃಹದ್ ಮರವನ್ನೇ ಉರುಳಿಸಬಲ್ಲವು. ಇನ್ನು ಪರಿಸರಕ್ಕೆ ಶತ್ರುವಾದ ಮನುಷ್ಯನೂ ಹಾಗೆಯೇ ಪ್ರಕೃತಿಯನ್ನು ನಾಶಮಾಡಿ ತಾನು ಉಳಿಯಲು ಮತ್ತು ಬೆಳೆಯಲು ನೋಡುತ್ತಿರುತ್ತಾನೆ.
ಇದನ್ನು ನೋಡಿದಾಗಲೇ ಕೃತಜ್ಞತೆಯೇ ಇಲ್ಲದ ಬದುಕು ಏನು ಎನ್ನುವುದು ಅರ್ಥವಾಗುತ್ತದೆ. ಮರಕ್ಕೆ ಸುತ್ತಿದ ಬಂದನಿಕೆಗಳೇ ಸೊಂಪಾಗಿ ಬೆಳೆದಿರುವುದನ್ನು ನೋಡುತ್ತೇವೆ. ಹೀಗೆ ಬೆಳೆದ ಆ ಪರಾವಲಂಬಿ ಗಿಡವು ಮರವು ಹೀರಿಕೊಂಡ ಜೀವ ದ್ರವ್ಯವನ್ನು ತಾನು ಕಸಿದು ಹೀರಿ ಮರವನ್ನು ಸತ್ವರಹಿತವಾಗಿಸಿ ಅದನ್ನು ಟೊಳ್ಳಾಗಿಸಿಬಿಟ್ಟು ಒಂದು ದಿನ ಉರುಳಿಸಿ ಬಿಡುತ್ತದೆ. ಪರೋಪಜೀವಿಗಳ ಕಥೆಯೇ ಇಷ್ಟು
ಪ್ರಕೃತಿಯು ನೀಡುವುದೆಲ್ಲವೂ ಶುಭ್ರ, ಶುದ್ಧ ಮತ್ತು ಸ್ವಚ್ಛ, ಆದರೆ ನಡುವೆ ಬಂದ ಮನುಷ್ಯನದ್ದೇ ತೊಡಕು. ಸೃಷ್ಟಿಯು ನೀಡುವ ಗಾಳಿ, ಬೆಳಕು, ನೀರು ಎಲ್ಲವು ಶುದ್ಧವಾಗಿ ಹರಿದು ಬರುತ್ತದೆ. ಆದರೆ ಅದನ್ನು ಕಲುಷಿತಗೊಳಿಸುತ್ತಿರುವುದು ಮನುಷ್ಯನ ಸ್ವಾರ್ಥ, ಮನುಷ್ಯ ಜನ್ಯ ಕೊಳೆ, ಮನುಷ್ಯ ನಿರ್ಮಿತ ಕೈಗಾರಿಕೆಗಳ ಕೊಳಚೆ, ಇವೆಲ್ಲವುಗಳಿಂದ ನೀರು ಅಶುದ್ಧವಾಗುತ್ತದೆ. ಅದರಿಂದ ಮುಂದಿನ ಪೀಳಿಗೆಗಳೂ ಸಂಕಟವನ್ನು ಅನುಭವಿಸಬೇಕಾಗುತ್ತದೆ. ಗಾಳಿಯನ್ನೂ ಕಲುಷಿತಗೊಳಿಸುವ ಶಕ್ತಿ ಮನುಷ್ಯನಿಗಿದೆ. ಓಜೋನ್ ಪದರವನ್ನು ಕಿತ್ತು ಹಾಕಿ ಸೂರ್ಯನ ಬೆಳಕನ್ನು ಅಪಾಯಕಾರಿಯನ್ನಾಗಿ ಮನುಷ್ಯನು ಮಾಡಬಲ್ಲ. ಹೀಗೆ ತನಗೆ ಆಶ್ರಯ ನೀಡಬಹುದಾದ ಮತ್ತು ನೀಡಿದ ಆಶ್ರಯ ದಾತರನ್ನೇ ನಾಶಮಾಡುವ ದುರ್ಬುದ್ಧಿಯೇ ಸಮಾಜವನ್ನೂ ಪ್ರಕೃತಿಯನ್ನೂ ಅಷ್ಟೇಕೆ ದೇಶವನ್ನೂ ನಾಶಮಾಡುತ್ತದೆ.
ವಿದುರ ನೀತಿಯೇ ಹೇಳುತ್ತದೆ ಮಹತ್ತರವಾದುದನ್ನು ರಕ್ಷಿಸಬೇಕು. ಅದಕ್ಕಾಗಿ ಕೆಲವೊಂದನ್ನು ತ್ಯಜಿಸಿಬಿಡಬೇಕು ಎಂದು. ದೇಶದೊಳಗೂ ಕೊರೆಯುವ ಹುಳಗಳು, ಬಂದನಿಕೆಗಳಂತಹ ಪರೋಪ ಜೀವಿಗಳು ಇರುತ್ತವೆ. ಅವನ್ನು ಹೋಗಲಾಡಿಸಬೇಕಾದುದು ದೇಶವನ್ನು ಪ್ರೀತಿಸುವವರ ಕರ್ತವ್ಯವಾಗುತ್ತದೆ. ರೋಗವು ಬೆಳೆಯುವ ಮೊದಲೇ ಅದಕ್ಕೆ ಮದ್ದನ್ನು ಅರೆಯಬೇಕು.