Hindu Vani
Index
ಕತೆಕತೆ ಕಾರಣ
ಶತ್ರುಗಳು ಬಂದಾಗ ನಾವೆಲ್ಲ ಒಂದು
ಕೌರವರು ತಮ್ಮ ಚಿಕ್ಕಪ್ಪನಾದ ಪಾಂಡುರಾಜನ ಮಕ್ಕಳಾದ ಪಾಂಡವರನ್ನು ಶತ್ರುಗಳಂತೆ ನೋಡುತ್ತಿದ್ದರು. ಅವರು ಹೋದಲ್ಲಿ ಬಂದಲ್ಲಿ ಏನಾದರೊಂದು ತೊಂದರೆ ಕೊಟ್ಟು ಅವರನ್ನು ಹಿಂಸಿಸುವುದೆಂದರೆ ಕೌರವರಿಗೆ ಬಹಳ ಸಂತೋಷವಾಗುತ್ತಿದ್ದಿತು.
ಏನು ಮಾಡಿದರೂ ಪಾಂಡವರು ಮಾತ್ರ ಏನೂ ಬಾಧೆಗೊಳಗಾಗದೆ ಪಾರಾಗುತ್ತಿದ್ದರು. ಪಾಂಡವರನ್ನು ಹೇಗಾದರೂ ಮಾಡಿ ಕಾಡಿಗೆ ಕಳುಹಿಸಿದರೆ ತಮಗೆ ಯಾರ ಅಡ್ಡಿಯೂ ಇಲ್ಲದೆ ಇಡೀ ರಾಜ್ಯವನ್ನು ಆಳಬಹುದೆಂದು ಅವರೀಗ ಒಂದು ಉಪಾಯ ಹೂಡಿದರು. ಪಾಂಡವರನ್ನು ಪಗಡೆಯಾಡಲು ಕರೆಯಬೇಕು. ಮೋಸದಿಂದ ಅವರನ್ನು ಸೋಲಿಸಬೇಕು. ಸೋತರೆ ಹನ್ನೆರಡು ವರ್ಷ ಕಾಡಿಗೆ ಹೋಗಬೇಕೆಂದೂ, ನಂತರ ಯಾರ ಕಣ್ಣಿಗೂ ಬೀಳದೆ ಮತ್ತೆ ಒಂದು ವರ್ಷ ಅಜ್ಞಾತವಾಗಿ ಕಾಲ ಕಳೆಯಬೇಕೆಂದೂ ಶರತ್ತು ಹಾಕಬೇಕು ಎಂದು ಯೋಚಿಸಿದರು.
 
                                                        ಅದರಂತೆ ಪಾಂಡವರು ಪಗಡೆಯಾಡಲು ಬಂದರು. ಕೌರವರ ಸೋದರಮಾವನಾದ ಶಕುನಿಯು ಮೋಸದ ಪಗಡೆಯಾಡುವುದರಲ್ಲಿ ಬಹಳ ಮುಂದು. ಆಟದಲ್ಲಿ ಪಣವಾಗಿ ಚಿನ್ನಾಭರಣಗಳನ್ನೂ, ಸೈನ್ಯವನ್ನೂ ನಂತರ ರಾಜ್ಯವನ್ನೂ ಇಟ್ಟ ಪಾಂಡವರು ಎಲ್ಲವನ್ನೂ ಸೋತರು. ಕೊನೆಗೆ ದೌಪದಿಯನ್ನು ಪಣವಾಗಿಟ್ಟರೆ ಆಟದಲ್ಲಿ ಕಳೆದುಕೊಂಡಿರುವುದನ್ನು ಮತ್ತೆ ಪಡೆಯಬಹುದೆಂದು ಶಕುನಿಯು ಪುಸಲಾಯಿಸಿದನು. ಅದರಂತೆ ನಡೆದುಕೊಂಡ ಯುಧಿಷ್ಠಿರನು ಆಕೆಯನ್ನೂ ಸೋತನು. ಕೌರವರು ದೌಪದಿಯನ್ನು ಆಸ್ಥಾನಕ್ಕೆ ಎಳೆದು ತಂದು ಅಲ್ಲಿ ಎಲ್ಲರೆದುರು ದಾಸಿಯೆಂದು ಕರೆದು ಆಕೆಯನ್ನು ಅವಮಾನಿಸಿದರು. ಕೊನೆಗೂ ಪಾಂಡವರು, ಕೌರವರು ಯೋಚಿಸಿದಂತೆ ಕಾಡಿಗೆ ಹೋದರು.
ಪಾಂಡವರು ಕಾಡಿಗೆ ಹೋದ ಮೇಲೂ ಅವರನ್ನು ಸುಮ್ಮನೆ ಬಿಡಬಾರದೆಂದು ಕೌರವರೂ ಅವರ ಜೊತೆಗಿರುವ ಶಕುನಿ, ಕರ್ಣರೂ ನಿಶ್ಚಯಿಸಿದರು. ಅದರಂತೆ ಕಾಡಿನಲ್ಲಿ ಪಾಂಡವರು ಹೇಗೂ ಕಷ್ಟದಲ್ಲಿ ಜೀವನ ನಡೆಸುತ್ತ ಇರುತ್ತಾರೆ. ಅವರೆದುರು ನಮ್ಮ ವೈಭವದ ಜೀವನವನ್ನು ತೋರಿಸಿಕೊಂಡರೆ ಪಾಂಡವರಿಗೆ ಇನ್ನೂ ಬೇಸರವಾಗುತ್ತದೆ. ಅದುವೆ ನಮಗೆ ಬೇಕಾದುದು ಎಂದುಕೊಂಡರು. ಹಾಗೆಯೇ ಕೌರವರೂ ಅವರ ರಾಣಿಯರೂ ತಮ್ಮ ರಥಗಳಲ್ಲಿ ಕಾಡಿಗೆ ಹೋದರು. ಪಾಂಡವರು ಇರುವ ದೈತವನವೆನ್ನವ ಕಾಡಿನಲ್ಲೇ ತಮ್ಮ ಬಿಡಾರ ಹೂಡಿದರು. ತಮ್ಮೊಂದಿಗೆ ಬಂದ ಸೈನ್ಯ, ವರ್ತಕರು, ಜನರು ಮತ್ತು ಅಂತಃಪುರದ ಹೆಣ್ಣು ಮಕ್ಕಳಿಗಾಗಿ ಉಳಿದುಕೊಳ್ಳಲು ಅಲ್ಲಿರುವ ಮರಗಳನ್ನು ಕಡಿದರು. ಕಾಡನ್ನು ಕಡಿದು ಅಲ್ಲಿರುವ ಸರೋವರಗಳಲ್ಲಿ ಈಜಾಡಿ ಕೆಸರು ತುಂಬಿ ಮಲಿನಗೊಳಿಸಿದರು.
ಅಲ್ಲಿ ಆಗ ಗಂಧರ್ವರು ಎನ್ನುವ ಜನರ ಗುಂಪು ವಾಸ ಮಾಡುತ್ತಿದ್ದಿತು. ಗಂಧರ್ವರ ರಾಜನಾಗಿದ್ದವನು ಚಿತ್ರಸೇನ. ಅವನು ಕೌರವರ ಸೈನಿಕರಿಗೆ ಎಚ್ಚರಿಕೆಯನ್ನು ಕೊಟ್ಟು ಕಳುಹಿಸಿದನು. ಆದರೆ ಅಹಂಕಾರಿಗಳಾದ ದುರ್ಯೋಧನ ದುಶ್ಯಾಸನರು ಗಂಧರ್ವರ ಮೇಲೂ ಕೈ ಮಾಡಿದರು. ಗಂಧರ್ವರಿಗೆ ತಡೆಯಲಾಗಲಿಲ್ಲ. ಅವರು ಕೌರವರ ಮೇಲೂ ಅವರೊಂದಿಗೆ ಬಂದ ಸೈನಿಕರ ಮತ್ತು ಜನರ ಮೇಲೂ ಯುದ್ಧವನ್ನೇ ಹೂಡಿದರು. ಯುದ್ಧವು ಎಷ್ಟು ಮುಂದುವರಿಯಿತು ಎಂದರೆ, ಅದರಲ್ಲಿ ಗಂಧರ್ವರ ಕೈ ಮೇಲಾಯಿತು. ಗಂಧರ್ವರು ದುರ್ಯೋಧನನನ್ನೂ ಸೇರಿಸಿ ಕೌರವರನ್ನೂ ಅವರ ರಾಣಿವಾಸದ ಸ್ತ್ರೀಯರನ್ನೂ ಸೆರೆಹಿಡಿದು ಕರೆದೊಯ್ದರು. ಕರ್ಣನು ಯುದ್ಧದಲ್ಲಿ ಸೋತು ಓಡಿಹೋದನು.
ಕೌರವರ ಪರಿವಾರದಲ್ಲಿ ಅಳಿದುಳಿದ ಕೆಲವರು ದೈತವನದಲ್ಲಿದ್ದ ಪಾಂಡವರ ಬಳಿ ಓಡಿಬಂದರು. ತಮ್ಮನ್ನು ಕಾಪಾಡಬೇಕೆಂದು ಕೇಳಿಕೊಂಡರು. ಕೌರವರನ್ನೂ ಉಳಿದ ಸ್ತ್ರೀಯರನ್ನೂ ಗಂಧರ್ವರ ಸೆರೆಯಿಂದ ಬಿಡುಗಡೆಗೊಳಿಸಬೇಕೆಂದೂ ಬೇಡಿಕೊಂಡರು. ಇದನ್ನು ನೋಡುತ್ತಿದ್ದ ಭೀಮನಿಗೆ ಬಹಳ ಸಂತೋಷ. “ಕಾಡಿಗೆ ಕಳುಹಿಸುದುದಲ್ಲದೆ ಇಲ್ಲಿ ನಮ್ಮ ಕಷ್ಟಗಳನ್ನು ಕಂಡು ಹೀಯಾಳಿಸಿ ನಮ್ಮ ಹೊಟ್ಟೆ ಉರಿಸಲು ಬಂದವರಿಗೆ ತಕ್ಕ ಶಿಕ್ಷೆಯಾಯಿತು” ಎಂದು ಗಟ್ಟಿಯಾಗಿ ಹೇಳಿದನು.
ಆಗ ಧರ್ಮರಾಜನು ತಮ್ಮನನ್ನು ತಡೆದನು. “ತಮ್ಮಂದಿರಾದ ಕೌರವರಿಗೆ ಕೇಡಾದರೆ ಇದು ನಾವು ಸುಖಪಡುವ ಕಾಲವಾಗುತ್ತದೆಯೇ? ಅದರಲ್ಲೂ ಗಂಧರ್ವರು ಬಂದು ನಮ್ಮ ಮನೆಯವರನ್ನು ಸೋಲಿಸಿದರೆ ನಮಗೆ ಸಂತೋಷವಾಗಬೇಕೇ? ನಮ್ಮ ನಮ್ಮ ನಡುವೆ ಇರುವ ಸಿಟ್ಟು, ಕೋಪಗಳು ನಮ್ಮೊಳಗೆ ಮಾತ್ರವಿರಬೇಕು. ಹೊರಗಿನವರು ನಮ್ಮನ್ನು ಅವಮಾನಿಸಿದಾಗ ಅದು ನಮ್ಮೆಲ್ಲರಿಗೆ ಅವಮಾನವೆಂದೆನಿಸಬೇಕು. ಉಳಿದ ಸಮಯದಲ್ಲಿ ನಾವು ಐವರು ಮತ್ತು ಅವರು ನೂರು ಮಂದಿ. ಆದರೆ ಗಂಧರ್ವರಂತೆ ಪರರು ಬಂದಾಗ ನಾವು ನೂರ ಐದು ಮಂದಿ ಎಂದುಕೊಳ್ಳಬೇಕು. ನಮ್ಮ ನೂರು ಮಂದಿಯನ್ನೀಗ ಬಿಡಿಸಿಕೊಂಡು ಬನ್ನಿ” ಎಂದು ಧರ್ಮರಾಜನು ಭೀಮನಿಗೂ, ಅರ್ಜುನನಿಗೂ ಆಜ್ಞಾಪಿಸಿದನು.
ಯುದ್ಧ ಮಾಡುತ್ತಿದ್ದ ಚಿತ್ರಸೇನನು ಅರ್ಜುನನಿಗೆ “ಅಲ್ಲಯ್ಯಾ ನಿಮಗೆ ತೊಂದರೆ ಕೊಡಬೇಕೆಂದು ಬಂದ ಕೌರವರನ್ನು ಸೋಲಿಸಿದರೆ ನಿಮಗೆ ಸಂತೋಷವಾಗಬೇಕಿತ್ತಲ್ಲವೇ” ಎಂದನು. ಆದರೆ ಅರ್ಜುನನಿಗೆ ಧರ್ಮರಾಜನ ಅಪ್ಪಣೆ ಮುಖ್ಯ. ಅರ್ಜುನನು ಕೌರವರನ್ನು ಮತ್ತು ಅವರ ರಾಣಿಯರನ್ನು ಕರೆತಂದು ಧರ್ಮರಾಜನ ಮುಂದೆ ಬಿಟ್ಟನು. ಧರ್ಮರಾಜನು ದುರ್ಯೋಧನನಿಗೆ “ಮುಂದೆ ಈ ರೀತಿ ನಡೆಯಬೇಡಿರಿ. ಇದರಿಂದ ಸುಖವಾಗದು. ಈಗ ನಿನ್ನ ತಮ್ಮಂದಿರನ್ನು ಕರೆದುಕೊಂಡು ಹೋಗು” ಎಂದು ಕಳುಹಿಸಿಕೊಟ್ಟನು.
ಪಾಂಡವರಿಗೆ ನೋವುಂಟುಮಾಡಲು ಬಂದ ಕೌರವರು ಅವಮಾನಗೊಂಡು ಹೋದರು.
