Hindu Vani
Index
ಸಂಪಾದಕೀಯ
ತಂತ್ರಜ್ಞಾನದಿಂದ ಸಮಗ್ರತೆ
ದೇಶದ ಸಮಗ್ರತೆಯನ್ನು ಉಲ್ಲೇಖಿಸುವಾಗಲೆಲ್ಲ ರೂಢಿಯಾಗಿ ಬಂದಿರುವುದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿಸ್ತಾರವಾಗಿ ಹರಡಿರುವ ಈ ಭೂಮಿಯು ಒಂದು ರಾಷ್ಟ್ರ ಎನ್ನುವ ಮಾತು. ವಿಷ್ಣು ಪುರಾಣದಲ್ಲಿ ಬರುವ ಒಂದು ಶ್ಲೋಕವಂತೂ ಈ ಭೂಮಿಯು ತಾಯಿ ನೆಲವೆಂದುಕೊಂಡು ತಲೆ ಬಾಗುವವರಿಗೆ ಅತ್ಯಂತ ಪ್ರಿಯವಾದುದು. 'ಉತ್ತರಂ ಯತ್ಸಮುದ್ರಸ್ಯ ಹಿಮಾದೇವ ದಕ್ಷಿಣಂ। ವರ್ಷಂ ತದ್ಭಾರತಂ ನಾಮಃ ಭಾರತೀ ಯತ್ರ ಸಂತತಿ:'. ಸಾಗರದ ಉತ್ತರಕ್ಕೂ ಮತ್ತು ಹಿಮಾಲಯದ ದಕ್ಷಿಣಕ್ಕೂ ಇರುವ ಭೂಮಿಯೇ ಭಾರತ, ಎನ್ನುವುದು ಉಕ್ತಿಯೆನ್ನುವುದಕ್ಕಿಂತ ಭಾರತೀಯರ ಹೃದಯದ ಭಾವನೆಯೇ ಆಗಿಬಿಟ್ಟಿದೆ. ರಾಷ್ಟ್ರದ ಅಖಂಡತೆಯ ಕುರಿತು ಈ ರೀತಿಯ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಅಖ್ಯಾನಗಳ ಹತ್ತು ಹಲವು ಉದಾಹರಣೆಗಳು ಸಿಗುತ್ತವೆ.
ಆಚಾರ್ಯ ಶಂಕರರು ಭಾರತವನ್ನು ಸುತ್ತಿ ದೇಶದ ನಾಲ್ಕು ದಿಕ್ಕುಗಳಲ್ಲಿ ಆಮ್ಮಾಯ ಪೀಠಗಳನ್ನು ಸ್ಥಾಪಿಸಿದರು. ದೇಶದ ತುತ್ತತುದಿಯ ಕಾಶ್ಮೀರದಲ್ಲಿ ಸರ್ವಜ್ಞಪೀಠವನ್ನು ಏರಿದರು. ಇನ್ನು ಎತ್ತರದ ಕೇದಾರ ಬದರಿ ಧಾಮಗಳ ಅರ್ಚಕರು ದಕ್ಷಿಣದಿಂದ ಬರುವರು. ಸಿಖ್ ಸಾಮ್ರಾಟ ರಣಜಿತ ಸಿಂಹನು ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ ಕಾಶಿ ವಿಶ್ವೇಶ್ವರನ ದೇವಸ್ಥಾನಕ್ಕೆ ಚಿನ್ನದ ಗೋಪುರವನ್ನು ನಿರ್ಮಿಸಲು 14 ಮಣ ಬಂಗಾರವನ್ನು ಕಳುಹಿಸಿದನು. ಹೊಯ್ಸಳ ಸಾಮ್ರಾಜ್ಯದ ವೀರನರಸಿಂಹನು ಹೆಬ್ಬಾಳ ಗ್ರಾಮವನ್ನು ಉಂಬಳಿಯಾಗಿ ಕೊಟ್ಟು ಅದರ ಆದಾಯವನ್ನು ದಕ್ಷಿಣದ ಯಾತ್ರಿಗಳು ಕಾಶೀಕ್ಷೇತ್ರದ ಪ್ರವೇಶಕ್ಕೆ ನೀಡಬೇಕಾದ ಜೆಝಿಯಾ ಸುಂಕವನ್ನು ಸಲ್ಲಿಸಲು ವ್ಯವಸ್ಥೆಯನ್ನು ಮಾಡಿದನು. ಹೋಳ್ಳ ಸಂಸ್ಥಾನದ ರಾಜಮಾತೆ ಅಹಲ್ಯಾಬಾಯಿಯು ಕಾಶಿ ವಿಶ್ವೇಶ್ವರನ ಮಂದಿರದ ಜೀರ್ಣೋದ್ದಾರ ಮಾಡುವುದರೊಂದಿಗೆ ದಕ್ಷಿಣದ ಗೋಕರ್ಣದಲ್ಲೂ ಯಾತ್ರಿಗಳಿಗಾಗಿ ಧರ್ಮ ಛತ್ರವನ್ನು ನಿರ್ಮಿಸಿದಳು. ಪ್ರಾಚೀನ ಕಾಲದಿಂದಲೂ ದೇಶವು ಸಮಗ್ರವಾಗಿಸಲು ರಾಜ ಮಹಾರಾಜರು, ಸಂತ ಜ್ಞಾನಿಗಳೊಂದಿಗೆ ಸಾಮಾನ್ಯರೂ ಬಯಸಿದರು.
ಭೌಗೋಳಿಕ ಸರಹದ್ದುಗಳನ್ನು ಮೀರಿಸುವ ಭಾವನಾತ್ಮಕ, ಧಾರ್ಮಿಕ ಸಂಕೇತಗಳು ದೇಶಕ್ಕೆ ಅಡರಿದ ಹತ್ತು ಹಲವು ಅಪಾಯಗಳನ್ನು ನಿವಾರಿಸಲು ಇತಿಹಾಸದ ಉದ್ದಕ್ಕೂ ಸಫಲವಾದುದನ್ನು ನಾವು ಕಂಡಿರುವೆವು. ಈಚೆಗೆ ನಿರ್ಮಿಸಲ್ಪಟ್ಟ 272 ಕಿ. ಮೀ. ಉದ್ದದ ಉಧಂಪುರ ಶ್ರೀನಗರ ಬಾರಾಮುಲ್ಲಾ ರೈಲು ಮಾರ್ಗವು ಕೂಡಾ ಇದೇ ರೀತಿಯಲ್ಲಿ ಪ್ರಭಾವ ಬೀರಬಲ್ಲ ತಂತ್ರಜ್ಞಾನದ ಒಂದು ಕೊಡುಗೆಯಾಗಿದೆ. ಕಾಶ್ಮೀರದ ಭೌಗೋಳಿಕ ಏಕಾಂಗಿ ತನವು ಕೆಲವೊಮ್ಮೆ ಸ್ವಯಂಕೃತವೆನಿಸಬಹುದು. ಆದರೆ ಇಂತಹದೊಂದು ಭಾವನೆಯನ್ನು ಕೂಡಾ ಹೋಗಲಾಡಿಸಬೇಕಾದ ಕಾಲವಿದು. ಪ್ರಧಾನಿಯವರು ಈಗ ಉದ್ಘಾಟಿಸಿದ ವಂದೇ
ಭಾರತ ರೈಲು, ದೆಹಲಿಯಿಂದ ಶ್ರೀನಗರದ ಪ್ರಯಾಣದಲ್ಲಿ 10ಗಂಟೆಗಳ ಅವಧಿಯನ್ನು ಕಡಿಮೆಯಾಗಿಸಿದೆ. “ಭಾರತವು ಕಾಶ್ಮೀರಕ್ಕೆ ದೂರ” ವೆನಿಸುವ ಮಾನಸಿಕ ತಡೆಯನ್ನು ಹೋಗಲಾಡಿಸಿದೆ. ಪ್ರಗತಿಗೆ ಹೊಸವೇಗವನ್ನು ಹೊಂದಿಸಿದೆ. ದಕ್ಷಿಣದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನ ಪ್ರಾಧ್ಯಾಪಕಿ ಡಾ|| ಮಾಧವಿ ಲತಾ, ಉತ್ತರದಲ್ಲಿ ಈ ತಾಂತ್ರಿಕ ಸಾಧನೆಗೆ ಕಾರಣಕರ್ತೆಯಾಗಿರುವುದು ಈ ಸನ್ನಿವೇಶದಲ್ಲಿ ಸಾಂಕೇತಿಕ ಮಹತ್ವವನ್ನು ನೀಡಿದೆ.
28 ವರ್ಷಗಳಿಂದ ನಿರ್ಮಾಣದ ಹಲವು ಹಂತಗಳನ್ನು ದಾಟುತ್ತ ಬಂದ ಈ ರೈಲುಮಾರ್ಗವು ನೂರಾರು ಪ್ರಾಕೃತಿಕ ಅಡಚಣೆಗಳನ್ನು ನಿವಾರಿಸಿಕೊಂಡು ಈಗ ಕಾರ್ಯನಿರತವಾಗಿದೆ. ಭಾರತದ ಇಂಜಿನಿಯರುಗಳ ಮತ್ತು ತಂತ್ರಜ್ಞರ ಸಾಮರ್ಥ್ಯಕ್ಕೆ ಸವಾಲಾಗಿದ್ದ ಈ ನಿರ್ಮಾಣವು ಈಗ ಜಗತ್ತಿನ ಹಲವು ಪ್ರಸಿದ್ಧ ನಿರ್ಮಾಣಗಳಿಗೆ ಸರಿಸಾಟಿಯಾಗಿದೆ.
ಚಿನಾಬ್ ನದಿಯ ಮೇಲೆ ಕಟ್ಟಿದ ಈ ರೈಲು ಸೇತುವೆಯು ಪ್ರಾನ್ಸಿನಲ್ಲಿರುವ ಜಾಗತಿಕ ಅದ್ಭುತವೆನಿಸುವ ಐಫೆಲ್ ಟವರ್‌ಗಿಂತ 115 ಅಡಿ ಎತ್ತರವಾಗಿದೆ. ನದಿ ದಂಡೆಯಿಂದ 1300 ಅಡಿ ಎತ್ತರದಲ್ಲಿ 4 ಸಾವಿರ ಅಡಿ ಉದ್ದದ ಈ ಕಮಾನು ಸೇತುವೆಯು ತಾಂತ್ರಿಕ ಸಂಶೋಧನೆಗಳ ಫಲವಾಗಿದೆ. ಸೇತುವೆಯ ಮೇಲೆ ಪ್ರಯಾಣಿಸುವಾಗ ಎದುರಾಗುವ 260ಕಿಲೋ ಮೀಟರ್ ಗಾಳಿಯ ವೇಗವನ್ನು ತಡೆದು ಸಾಗುವ ದೃಢತೆಯನ್ನು ಅದು ಹೊಂದಿದೆ. 120 ವರ್ಷಗಳ ಬಾಳಿಕೆಯನ್ನು ಅದು ಪಡೆದಿದೆ. ಈ ಸೇತುವೆಯು ಆಧರಿಸಿಕೊಂಡಿರುವುದು ಕೇಬಲ್‌ಗಳ ಬಂಧದಿಂದ. ಇದಕ್ಕಾಗಿ ಉಪಯೋಗಿಸಲ್ಪಟ್ಟ ಕೇಬಲ್‌ಗಳು 750 ಮೀಟರ್ ಉದ್ದವಿದ್ದು; ಇಂತಹ 96 ಕೇಬಲ್‌ಗಳು ಈ ಸೇತುವೆಯನ್ನು ಆಧರಿಸಿವೆ. ಇಲ್ಲಿ ಒಟ್ಟು 8200 ಟನ್ ಉಕ್ಕು ಉಪಯೋಗಿಸಲ್ಪಟ್ಟಿದೆ. ಈ ಯೋಜನೆಯ ನಿರ್ಮಾಣದ ಖರ್ಚು 73480 ಕೋಟಿ ರೂಪಾಯಿಗಳು, ಮಾರ್ಗದ ನಡುವಿನ 36 ಸುರಂಗಗಳ ಉದ್ದವೇ 719ಕಿ. ಮೀ. ಹೀಗೆ ಕಣಿವೆಗಳನ್ನು ದಾಟಿ ದಿಣ್ಣೆಗಳನ್ನು ಹತ್ತಿ ಅಡಚಣೆಗಳನ್ನು ಗೆದ್ದು ನಿರ್ಮಿಸಿದ ಈ ತಾಂತ್ರಿಕ ಸಫಲತೆಯೂ ಕಾಶ್ಮೀರವನ್ನು ಭಾರತದಲ್ಲಿ ಮಾನಸಿಕವಾಗಿ ವಿಲೀನಗೊಳಿಸಲಿದೆ.
ಪಹಲ್ಯಾಮಿನ ತೊಡಕಿನ ನಂತರ ಕಾಶ್ಮೀರವನ್ನು ಹೊಸಗಾಳಿಗೆ ತೆರೆಯುವಂತೆ ಅನುವುಗೊಳಿಸುವ ಪ್ರಯತ್ನವೊಂದು ನಡೆದಿದೆ. ತಂತ್ರಜ್ಞಾನವು ಕಾಶ್ಮೀರವನ್ನು ಸನಿಹಕ್ಕೆ ತಂದಿದೆ. ಭಾರತದ ಪರಿಶ್ರಮವು ಇಂತಹದೊಂದು ಬದಲಾವಣೆಯನ್ನು ತರಲು, ತಾಂತ್ರಿಕ ಕೌಶಲ್ಯವು ಇಂತಹ ಸಫಲತೆಯನ್ನು ಸಾಧಿಸಲು ಶಕ್ಯವಾಗಬಹುದೇನೋ? ಆದರೆ ಕಾಶ್ಮೀರದ ಜನರ ಮಾನಸಿಕತೆಯು ನಮ್ಮ ಸನಿಹಕ್ಕೆ ಸಾರುವಂತಾಗುವ ಪ್ರಯತ್ನವು ಮಾತ್ರ ಅವರಿಂದಲೇ ಪ್ರಾರಂಭವಾಗಬೇಕಿದೆ. ಇರಾನಿನ ಯುದ್ಧಗ್ರಸ್ಥ ಪ್ರದೇಶದ ಮಿಸೈಲ್‌ಗಳಿಂದ, ಬಾಂಬ್‌ಗಳಿಂದ ಕೂದಲು ಕೂಡಾ ಕೊಂಕದಂತೆ ಸುರಕ್ಷಿತವಾಗಿ ದೆಹಲಿಯ ವಿಮಾನ ನಿಲ್ದಾಣಕ್ಕೆ ತಂದು ಇಳಿದ ಕಾಶ್ಮೀರದ ವಿದ್ಯಾರ್ಥಿಗಳು ಶ್ರೀನಗರಕ್ಕೆ ಬಸ್ಸಿನಲ್ಲಿ ಪ್ರಯಾಣಿಸಲಾರೆವು. ತಮಗೆ ವಿಮಾನವೇ ಬೇಕು ಎಂದು ಹಟಹಿಡಿದರಂತೆ! ಇದಕ್ಕೆ ಏನು ಹೇಳಬೇಕು?