Logo

VHP PUBLICATIONS

Hindu Vani


expand_more

ಕ್ಷೇತ್ರ ದರ್ಶನ

By ಪಾರಿಜಾತ ಬಿ.ಎಸ್., ಬೆಂಗಳೂರು

ಮಾವಿನಕೆರೆ ಶ್ರೀರಂಗನಾಥ ಸ್ವಾಮಿ ದೇಗುಲ

ಲಕ್ಷ್ಮೀನಿವಾಸೇ ಜಗತಾಂ ನಿವಾಸೇ ಹೃತ್ಪದ್ಮವಾಸೇ ರವಿಬಿಂಬವಾಸೇ |

ಕೃಪಾನಿವಾಸೇ ಗುಣಬೃನವಾಸೇ ಶ್ರೀರಂಗವಾಸೇ ರಮತಾಂ ಮನೋಮೇ।

- ಶ್ರೀರಂಗ ಅಷ್ಟಕಂ

ಕ್ಷೇತ್ರ ದರ್ಶನ

ಜೀವಜಗತ್ತು ಜೀವ ಮತ್ತು ಜೀವನ ಇವೆರಡರ ನಡುವಿನ ಆಧಾರದಲ್ಲಿ ಸಾಗುತ್ತಿದೆ. ಜೀವವಿದ್ದರೆ ಜೀವನ, ಜೀವನ ಉತ್ತಮವಾದರೆ ಜೀವ ಸೌಖ್ಯ. ಪಡೆದ ಜನ್ಮ ಸಾರ್ಥಕವಾಗಲು ಹಿಡಿದ ಕಾಯಕ ಕಾರಣವಾಗುತ್ತದೆ. ಭಕ್ತಿ ಮಾರ್ಗ, ಜ್ಞಾನ ಮಾರ್ಗಗಳ ಮೂಲಕ ಜೀವನದ ಸನ್ಮಾರ್ಗವನ್ನು ಹುಡುಕಲು ಮಾನವನಲ್ಲಿ ಸದಾ ಪ್ರಯತ್ನಗಳು ನಡೆಯುತ್ತಲೇ ಇವೆ. ತನ್ನ ಗೋಚರಕ್ಕೆ ಬಂದ ಮನಸ್ಸಿಗೆ ತಿಳಿದ ಬಗೆಯಲ್ಲಿ ಶಕ್ತಿಯನ್ನು ಆರಾಧಿಸಿ ಧನಾತ್ಮಕತೆಯ ನೆಲೆಯನ್ನು ಕಂಡುಕೊಳ್ಳುವುದು ಭಕ್ತಿ ಮಾರ್ಗದ ಕಾಣದ ಒಂದು ಬಗೆ.

ಏಕ ಪ್ರಜಾಯತೇ ಜಂತುರೇಕ ಏವ ಪ್ರಲೀಯತೇ।

ಏಕೋನುಭುಕ್ತ ಸುಕೃತ್ಯಂ ಏಕ ಏವಚ ದುಷ್ಕೃತಮ್ |


ಮನುಷ್ಯ ಒಂಟಿಯಾಗಿ ಹುಟ್ಟುತ್ತಾನೆ ಒಂಟಿಯಾಗಿ ಸಾಯುತ್ತಾನೆ, ಪುಣ್ಯದ ಫಲವನ್ನು ಪಾಪದ ಫಲವನ್ನು ತಾನೊಬ್ಬನೇ ಅನುಭವಿಸ ಬೇಕಾಗುತ್ತದೆ. (ಮಂಕುತಿಮ್ಮನ ಕಗ್ಗ ಜೀವನ ದೀವಿಗೆ)

ಜೀವನದಲ್ಲಿ ಎದುರಾಗುವ ಧರ್ಮಸಂಕಟಗಳ ಸಮಯದಲ್ಲಿ ತನ್ನ ಸ್ವಾರ್ಥ, ಅನುಕೂಲತೆಗಳನ್ನು ಮೊದಲು ಪರಿಗಣಿಸಬೇಕೋ ಅಥವಾ ಧರ್ಮನಿಷ್ಠೆಯನ್ನೋ ಎಂಬ ಮನದ ತೊಳಲಾಟಕ್ಕೆ ತಕ್ಕ ನಿರ್ಧಾರ ಕೈಗೊಳ್ಳಬೇಕಾದದ್ದು ಮನುಷ್ಯನು ತಾನೇ.

ಭಾರತದ ತಮಿಳು ನಾಡಿನ ಶ್ರೀರಂಗಂ, ಕರ್ನಾಟಕದ ಶ್ರೀರಂಗಪಟ್ಟಣದಲ್ಲಿನ ಶ್ರೀರಂಗನಾಥ ಹಾಗು ಶಿಂಷಾ ಬಳಿಯ ಶ್ರೀ ರಂಗನಾಥ ಸ್ವಾಮಿಯದ್ದು ಪ್ರಸಿದ್ಧವಾದ ದೇಗುಲಗಳಾಗಿವೆ. ಒಂದೇ ದಿನದಲ್ಲಿ ಈ ಮೂರು ಶ್ರೀರಂಗನಾಥಸ್ವಾಮಿ ದೇಗುಲಗಳ ಭೇಟಿ ದರ್ಶನ ಶುಭಕರವೆಂದು ಹೇಳಲಾಗುತ್ತದೆ. ಅಂತೆಯೇ ಕರ್ನಾಟಕದಲ್ಲಿ ಇನ್ನೂ ಅನೇಕ ಶ್ರೀರಂಗನಾಥ ಸ್ವಾಮಿಯ ಪವಿತ್ರ ಕ್ಷೇತ್ರಗಳಿವೆ. ಅವುಗಳಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ಮಾವಿನಕೆರೆಯ ಬೆಟ್ಟದ ರಂಗನಾಥಸ್ವಾಮಿ ಕ್ಷೇತ್ರವು ಹೆಸರುವಾಸಿಯಾಗಿದೆ.

ಕ್ಷೇತ್ರ ದರ್ಶನ

ಇದು ಬೆಂಗಳೂರಿನಿಂದ ಸುಮಾರು 180 ಕಿ.ಮೀ ದೂರದಲ್ಲಿದೆ. ಸುಂದರ ಪ್ರಕೃತಿಯ ನಡುವಿನ ಬೆಟ್ಟದ ಮೇಲೆ ನೆಲೆಸಿರುವ ಸ್ವಾಮಿಯು ಅನೇಕ ಕುಟುಂಬಗಳ ಮನೆದೇವರಾಗಿ ಪೂಜಿಸಲ್ಪಡುತ್ತಾನೆ. ಈ ದೇಗುಲ ತಲುಪಲು ಸುಮಾರು 500-600 ಅಡಿ ಎತ್ತರದ ಸುಂದರ ಬೆಟ್ಟದಲ್ಲಿ 675 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ ಸಂತ ವಾಹನದಲ್ಲಿ ದೇಗುಲದ ಹತ್ತಿರವರೆಗೂ ತಲುಪಿ ಕೆಲವು ಮೆಟ್ಟಿಲೇರಬೇಕಾಗುತ್ತದೆ.

ಐತಿಹಾಸಿಕ ಹಿನ್ನೆಲೆ: ಈ ದೇವಸ್ಥಾನವು 800 ವರ್ಷಗಳ ಇತಿಹಾಸವನ್ನು ಹೊಂದಿದೆ. ಹಿಂದೆ ಈ ಪ್ರದೇಶವನ್ನಾಳುತ್ತಿದ್ದ ಪಾಳೇಗಾರನಾದ ಲಕ್ಷಣ ನಾಯಕನು ಇದರ ಅಭಿವೃದ್ಧಿ ಕಾರ್ಯಕೈಗೊಂಡು ದೇಗುಲ ನಿರ್ಮಿಸಿದನೆಂದು ತಿಳಿದು ಬರುತ್ತದೆ. ಮುಂದೆ ಈ ಪ್ರದೇಶವನ್ನಾಳಿದ ಆಡಳಿತಗಾರರು ಇದರ ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ.

ಪೌರಾಣಿಕ ಹಿನ್ನೆಲೆ: ಹಿಂದೆ ವಸಿಷ್ಠರಿಂದ ಪ್ರತಿಷ್ಠಾಪಿಸಲ್ಪಟ್ಟು ಪೂಜಿಸಲ್ಪಟ್ಟಿದೆ ಎಂದು ಹೇಳಲಾಗುವ ಹೇಮಾವತಿ ದಡದಲ್ಲಿನ ಈ ಕ್ಷೇತ್ರವು ಅನೇಕ ಋಷಿಮುನಿಗಳ ತಪೋಭೂಮಿ ಎನಿಸಿದೆ. ಬೆಟ್ಟದ ತಳಭಾಗದ ಶ್ರೀ ಲಕ್ಷ್ಮೀವೆಂಕಟರಮಣ ದೇಗುಲವು ಪ್ರಸಿದ್ಧವಾಗಿದೆ. “ಹೇಮಾವತಿ ತಟವಾಸಿ” ಎಂದು ಇಲ್ಲಿನ ಸ್ವಾಮಿಯನ್ನು ಪೂಜಿಸಲಾಗುತ್ತದೆ.

ಕ್ಷೇತ್ರ ದರ್ಶನ

ಪ್ರಶಾಂತ ಹಾಗು ಸುಂದರ ಪ್ರಕೃತಿಯ ನಡುವಿನ ಈ ಕೇತ್ರವು ಸುತ್ತಲೂ ಹಳ್ಳಿಗಾಡಿನ ಹೊಲಗದ್ದೆಗಳ ಸುಂದರ ನಯನ ಮನೋಹರ ದೃಶ್ಯಕ್ಕೆ ಕಾರಣವಾದ ತಾಣವಾಗಿದೆ. ಮಾವಿನಕೆರೆಯ ಕೋಟೆ ಬೀದಿಯಲ್ಲಿ ಸಾಗಿದರೆ ಬಲಕ್ಕೆ ಸಣ್ಣದಾದ ರಸ್ತೆಯು ಬೆಟ್ಟದ ಮೇಲ್ಬಾಗಕ್ಕೆ ಸಾಗುತ್ತದೆ. ಸುತ್ತಲೂ ಸುಂದರ ರಮಣೀಯ ಪ್ರಕೃತಿಯ ನಡುವೆ ಬೆಟ್ಟವೇರಿದರೆ ಶ್ರೀರಂಗನಾಥನ ದೇಗುಲ ತಲುಪಬಹುದು.

ಶ್ರೀರಂಗನಾಥ ದೇಗುಲ: ಬೆಟ್ಟದ ಮೇಲಿರುವ ಈ ದೇಗುಲವು ವಿಶಾಲ ಪ್ರಾಂಗಣವನ್ನು ಹೊಂದಿದೆ. ಸುತ್ತಲೂ ಭಕ್ತರು ಕುಳಿತು ಪ್ರಕೃತಿಯ ಸೊಬಗನ್ನು ಕಾಣಬಹುದು. ಅಲಂಕೃತಗೊಂಡ ಮರದ ಹೆಬ್ಬಾಗಿಲು, ಗರ್ಭಗುಡಿಯಲ್ಲಿ ಸ್ವಾಮಿಯು ಪುಟ್ಟದಾದ ಉದ್ಭವರೂಪದಲ್ಲಿ ನೆಲೆನಿಂತಿದ್ದಾನೆ.

ಕ್ಷೇತ್ರ ದರ್ಶನ

ಶ್ರೀವೆಂಕಟರಮಣ ಸ್ವಾಮಿ ದೇಗುಲ: ಬೆಟ್ಟದ ತಳಭಾಗದಲ್ಲಿ ಕೆಲವು ಕಿ. ಮೀಗಳ ಅಂತರದಲ್ಲಿ ಪ್ರಸಿದ್ಧ ವೆಂಕಟರಮಣ ಸ್ವಾಮಿ ದೇಗುಲವಿದೆ. ಮಾವಿನಕೆರೆಯ ದೇಗುಲಗಳಲ್ಲಿ ಇವೆರಡೂ ಪ್ರಸಿದ್ಧವಾದವು. ನಕ್ಷತ್ರಾಕಾರದ ದೇಗುಲವು ಹೊಸದಾಗಿ ನಿರ್ಮಿತವಾದ ಗೋಪುರವನ್ನು ಹೊಂದಿದೆ. ಆವರಣದಲ್ಲಿ ತಾಯಿ ಪದ್ಮಾವತಿಯು ನೆಲೆ ನಿಂತಿದ್ದಾಳೆ. ಸುಮಾರು 100 ವರ್ಷಗಳ ಹಳೆಯದಾದ ಮರವೊಂದು ಈ ಕ್ಷೇತ್ರದ ಇತಿಹಾಸವನ್ನು ಹೇಳುವ ಸಾಕ್ಷಿಯಾಗಿ ನಿಂತಿದೆ. ಹಿಂದೆ ಈ ಕ್ಷೇತ್ರವನ್ನಾಳಿದ ಪಾಳೇಗಾರನಾದ ತಿಮ್ಮಪ್ಪ ನಾಯಕನ ಕನಸಿನಲ್ಲಿ ಬಂದ ಸ್ವಾಮಿಯ ಆಜ್ಞೆಯಂತೆ ಅವನು ತುಳಸಿ ಮಾಲೆ ಹಿಡಿದು ಈ ಕ್ಷೇತ್ರಕ್ಕೆ ಬಂದು ಈ ದೇಗುಲದ ಅಭಿವೃದ್ಧಿ ಕಾರ್ಯ ಕೈಗೊಂಡನೆಂದು ಹೇಳಲಾಗುತ್ತದೆ.

ಯಾತ್ರಿಕರಿಗೆ ವಿಶೇಷ ಮಾಹಿತಿ:

* ಬೆಂಗಳೂರಿನಿಂದ ಸುಮಾರು 180 ಕಿ.ಮೀ. ದೂರದಲ್ಲಿದೆ. ಮೈಸೂರಿನಿಂದ 95 ಕಿ.ಮೀ. ದೂರದಲ್ಲಿದೆ.

* ಹಾಸನದಿಂದ ಸುಮಾರು 20 ಕಿ.ಮೀ. ದೂರ ಹಾಗು ಹೊಳೆನರಸೀಪುರದಿಂದ 10 ಕಿ.ಮೀ. ದೂರದಲ್ಲಿದೆ.

* ಇಲ್ಲಿಗೆ ಸರ್ಕಾರಿ ಹಾಗೂ ಖಾಸಗಿ ವಾಹನ ವ್ಯವಸ್ಥೆಯಲ್ಲಿ ತಲುಪಬಹುದು.

* ಇಲ್ಲಿಗೆ ಸೆಪ್ಟೆಂಬರ್‌ನಿಂದ ಮಾರ್ಚ್‌ವರೆಗೂ ಭೇಟಿಗೆ ಉತ್ತಮ ಸಮಯ.

* ವಿಶೇಷ ದಿನಗಳ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.

* ವೈಕುಂಠ ಏಕಾದಶಿ, ಹನುಮಜಯಂತಿ ಇತ್ಯಾದಿ ದಿನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

* ಬೆಂಗಳೂರು ಪ್ರಯಾಣಿಕರು ನೆಲಮಂಗಲ ಕುಣಿಗಲ್, ಬೆಳ್ಳೂರು, ಚೆನ್ನರಾಯಪಟ್ಟಣ ಮಾರ್ಗವಾಗಿ ತಲುಪಬಹುದು.

* ಮೈಸೂರಿನಿಂದ ಇಲವಾಲ, ಬಿಳಿಕೆರೆ, ಕೃಷ್ಣರಾಜಸಾಗರ ಮಾರ್ಗದಿಂದ ತಲುಪಬಹುದು.