Hindu Vani
Index
ಜೀವನ ಚಿತ್ರ
ಡಾ|| ಜಿ. ಮಾಧವಿಲತಾ
ಅನ್ವೇಷಕ ಇಂಜಿನಿಯರಿಂಗ್ ತಂತ್ರಜ್ಞೆ
ಹದಿನೇಳು ವರ್ಷಗಳ ಪರಿಶ್ರಮದಿಂದ ನಿರ್ಮಾಣವಾದ ಅದ್ಭುತ ರೈಲ್ವೆಯ ಒಂದು ಸೇತುವೆಯ ಪ್ರಮುಖ ಪಾತ್ರವಾಗಿ ಮಿಂಚಿದ ಪ್ರತಿಭೆ 2. ಮಾಧವಿಲತಾ ಎನ್ನುವ ಸಿವಿಲ್ ಇಂಜಿನಿಯರ್. ಜಗತ್ತಿನ ಅತಿ ಎತ್ತರದ ಸೇತುವೆಯನ್ನು ಕಟ್ಟುವುದರಲ್ಲಿ 17ವರ್ಷ ಕಾಲ ದುಡಿದ 54 ವರ್ಷದ ಈ ಮಹಿಳೆ ಮೂಲತಃ ಆಂಧ್ರದಾಕೆ.
.
ಉಧಂಪುರ ಶ್ರೀನಗರ ಬಾರಾಮುಲ್ಲಾ ರೈಲು ಮಾರ್ಗದ 272 ಕಿ.ಮೀ. ನಡುವೆ 1350ಮೀಟರ್ ಉದ್ದದ ಸೇತುವೆಯೊಂದು ಇದೆ. ಇದು ಸಿಂಧು ನದಿಯ ಉಪನದಿಯಾದ ಚೀನಾಬ್ ನದಿಯನ್ನು ದಾಟಲು ಕಟ್ಟಿದ ಸೇತುವೆ. 8 ರಿಕ್ಟರ್ ಶಕ್ತಿಯ ಭೂಕಂಪವನ್ನೂ ಈ ಸೇತುವೆಯು ತಡೆಯಬಲ್ಲದು. 220 ಕಿ.ಮೀ ವೇಗದ ಚಂಡಮಾರುತವನ್ನು ಎದುರಿಸುವುದು. -20°c ಶೀತಮಾನವನ್ನು ಸಹಿಸಬಲ್ಲುದು. ಜಾಗತಿಕ ಅದ್ಭುತವೆನ್ನುವ ಫ್ರಾನ್ಸ್‌ನ ಐಫಲ್ ಗೋಪುರಕ್ಕಿಂತಲೂ 40 ಮೀಟರ್ ಎತ್ತರವಿರುವ ಈ ಸೇತುವೆಯು; ನದಿಯ ಇಬ್ಬದಿಯ ಕಡಿದು ಕಲ್ಲುಗಳಿಗೆ ಅಂಟಿಕೊಂಡಂತೆ ನಿರ್ಮಿತವಾದ ಇಂಜಿನಿಯರಿಂಗ್ ವಿಸ್ಮಯವಾಗಿದೆ.
ಮಾಧವಿಲತಾ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಪಡೆದುದು ಕಾಕಿನಾಡದ ಜವಹರಲಾಲ ನೆಹರೂ ಇಂಜಿನಿಯರಿಂಗ್ ಕಾಲೇಜಿನಲ್ಲಿ, ಸ್ನಾತಕ್ಕೋತ್ತರ ಎಂ. ಟೆಕ್ ಅಧ್ಯಯನ ಮಾಡಿದುದು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಾರಂಗಲ್‌ನಲ್ಲಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸಿನಿಂದ ತಮ್ಮ ಪಿ.ಹೆಚ್.ಡಿ.ಯನ್ನು ಪಡೆದರು. ತಮ್ಮ ಬಿ.ಟೆಕ್ ಮತ್ತು ಎಮ್. ಟೆಕ್ ಎರಡರಲ್ಲೂ ಅವರು ಸ್ವರ್ಣಪದಕವನ್ನು ಗಳಿಸಿದ್ದರು. 2000ನೇ ವರ್ಷದಲ್ಲಿ ಅವರು, ಡಾಕ್ಟರೇಟ್ ಪಡೆದರು.
2004ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಸೇರುವ ಮೊದಲು ಅವರು ಗೌಹಾತಿಯ ಐ.ಐ.ಟಿ ಯಲ್ಲಿ ಪ್ರಾಧ್ಯಾಪಕಿಯಾಗಿದ್ದರು. ಐ.ಐ.ಎಸ್.ಸಿ. ಯಲ್ಲಿ ಅವರು ಮೊದಲ ಮಹಿಳಾ ಪ್ರಾಧ್ಯಾಪಕಿಯಾದವರು.
1400 ಕೋಟಿ ಮಾಧವಿಲತಾರವರು ವೆಚ್ಚದ ಈ ಬೃಹತ್ ಸೇತುವೆಯ ನಿರ್ಮಾಣದಲ್ಲಿ ಸೇತುವೆಯ ಯೋಜನೆಯಿಂದ ಶುರುವಿಟ್ಟು ನಿರ್ಮಾಣದವರೆಗೆ ಪ್ರಮುಖ ಸಲಹಾಗಾರರಾಗಿ ಸೇತುವೆಯು ಪೂರ್ಣವಾಗಿ ಕಾರ್ಯಗತವಾಗುವವರೆಗೆ ಶ್ರಮಿಸಿರುವರು. ಮಣ್ಣಿನ ಸ್ವಾಭಾವಿಕ ರಚನೆ ಮತ್ತು ಅದರ ಗಡಸುತನ, ಬೃಹತ್ ಶಿಲೆಗಳ ಟೊಳ್ಳು ರಚನೆಗಳು ಅವುಗಳು ಒಂದನ್ನೊಂದು ಅಂಟಿಕೊಂಡಿರುವ ಪ್ರಾಕೃತಿಕ ಸಹಜ ಬಂಧಗಳ ವೈಜ್ಞಾನಿಕ ಮೌಲ್ಯಮಾಪನಗಳಲ್ಲಿ ಡಾ|| ಮಾಧವಿ ಲತಾರವರ ಹೆಚ್ಚಿನ ನೈಮಣ್ಯವಿದೆ. ಪ್ರಪಾತದ ಇಳಿಜಾರುಗಳಲ್ಲಿ ನಡೆಯಬೇಕಾದ ನಿರ್ಮಾಣದ ದೃಢತೆ ಮತ್ತು ಅದರ ತಾಂತ್ರಿಕತೆಯನ್ನು ಅರಿತುಕೊಳ್ಳುವ ಗಹನವಾದ ಇಂಜಿನಿಯರಿಂಗ್ ತಂತ್ರ ಜ್ಞಾನವು ಅವರಿಗೆ ಕರಗತವಾದುದು. ತಳಪಾಯದ ರಚನೆ ಅದರ ಮೇಲೆ ನಿಲ್ಲುವ ಆಧಾರ ಗೋಡೆಗಳು ಮತ್ತು ಹವಾಮಾನದ ವೈಪರೀತ್ಯಗಳನ್ನು ತಡೆದು ನಿಲ್ಲುವ ನಿರ್ಮಾಣವನ್ನು ಅವರು ಈ ಯೋಜನೆಯಲ್ಲಿ ಯಶಸ್ವಿಯಾಗಿ ಕೈಗೊಂಡರು.
ಕಾಶ್ಮೀರವನ್ನು ತಂತ್ರಜ್ಞಾನದ ನೆರವಿನಿಂದ ಭಾರತದೊಂದಿಗೆ ಪೂರ್ಣವಾಗಿ ಜೋಡಿಸಿದ ಈ ರೈಲು ನಿರ್ಮಾಣದ ಪ್ರಮುಖ ಹಂತದಲ್ಲಿ ಅದನ್ನು ಸಾಧ್ಯವಾಗಿಸಿದ ಡಾ|| ಜೆ. ಮಾಧವಿಲತಾರವರು 2022ರಲ್ಲಿ ಜಗತ್ತಿನ 5 ಸಾಧಕಿ ಮಹಿಳೆಯರಲ್ಲಿ ಒಬ್ಬರೆಂದು ಗುರುತಿಸಿಕೊಂಡುದು ಅನ್ವರ್ಥವಾಗಿದೆ. “ಮಣ್ಣಿನ ಮನಸ್ಸು ಮನುಷ್ಯರಂತೆ. ಅದು ವಿವಿಧ ಪರಿಸ್ಥಿತಿಗಳಲ್ಲಿ ಬಹುವಿಧವಾಗಿ ವರ್ತಿಸುತ್ತದೆ” ಎನ್ನುತ್ತಾರೆ ಮಾಧವಿಲತಾ.
ಭವಿಷ್ಯದ ಜಗತ್ತಿಗಾಗಿ ಈ ನೆಲವನ್ನು ಪಳಗಿಸಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವುದು ನನ್ನ ಸಂಶೋಧನೆಯ ಮೂಲ ಪ್ರವೃತ್ತಿಯಾಗಿದ್ದಿತು. ಯಾವುದೇ ನಿರ್ಮಾಣವು ಭದ್ರವಾಗಿ ನಿಲ್ಲಬೇಕಾಗಿರುವುದು ಈ ನೆಲದಲ್ಲಿ, ಅದು ಈ ನೆಲದಿಂದ ಭದ್ರತೆಯನ್ನು ಪಡೆಯಬೇಕು. ಈ ನೆಲವನ್ನು ನಾವು ಅದಕ್ಕೆ ತಕ್ಕಂತೆ ಸಿದ್ಧಗೊಳಿಸಬೇಕಾಗಿರುವುದು ನಮ್ಮ ಶ್ರಮದಿಂದ. ಭೂಮಿಯ ರಚನೆಯ ಸಂಕಿರ್ಣತೆಯೂ ಅದರ ವೈವಿಧ್ಯತೆಯೂ ನಿರ್ಮಾಣ ಕಾರ್ಯದಲ್ಲಿ ಬೃಹತ್ ಸವಾಲನ್ನು ಒಡ್ಡುತ್ತದೆ. ಅವೆಲ್ಲವನ್ನೂ ನಮ್ಮ ನವನವೀನ ಕಲ್ಪನೆ ಮತ್ತು ತಾಂತ್ರಿಕತೆಯಿಂದ ಸುಧಾರಿಸಿಕೊಳ್ಳಬೇಕು. ಉದಾಹರಣೆಗೆ ನೆಲದ ಮಣ್ಣು ನೀರಿನೊಂದಿಗೆ ಬೆರೆತಾಗಲೂ ಗಾಳಿಯ ಸಂಪರ್ಕ ಪಡೆದಾಗಲಾಗಲೀ ಅದು ಬೇರೆಯೇ ಒಂದು ವಸ್ತುವೆನಿಸಿ ಬಿಡುತ್ತದೆ. ಹಾಗೆಯೇ ಪ್ರಕೃತಿಯ ಮಳೆಗೂ ಪರಿಸರದ ಬೆಳಕಿಗೂ ಅದರ ಪ್ರತಿಕ್ರಿಯೆಯ ಬೇರೆ ಬೇರೆಯೇ, ಎಲ್ಲಕ್ಕೂ ಒಂದೇ ತರಹದ ತಾಂತ್ರಿಕ ಪರಿಹಾರ ಸರಿಯಲ್ಲ.
'ನಾವು ರಚಿಸಿದ ವಿನ್ಯಾಸಗಳು ಸಜೀವಗೊಂಡು ಮೈದಾಳಿದಾಗ ಅದು ಸಮಾಜದ ಅಗತ್ಯವನ್ನು ಪೂರೈಸಿದಾಗ ನಾವು ವಿಜ್ಞಾನದ ಭಾಗವಾಗಿ ಇದ್ದುದು ಜೀವನದ ಸಾರ್ಥಕ ಕ್ಷಣಗಳೆನಿಸುತ್ತವೆ. ಅದು ಜೀವನದಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ. ಪಟ್ಟ ಪರಿಶ್ರಮಗಳು ಯೋಗ್ಯವೆನಿಸುತ್ತವೆ. ಜೀವನವು ಸಾಹಸಮಯವೆನಿಸುತ್ತದೆ.
“ಅವಕಾಶಗಳಿಗೆ ನಾವು ತೆರೆದ ಆಹ್ವಾನವನ್ನು ಕೊಡಬೇಕು. ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿ ಬಂದಾಗ ಲೆಕ್ಕಾಚಾರಗಳಿಗಿಂತ ಧೈರ್ಯಕ್ಕೆ ಬೆಲೆ ಕೊಡಬೇಕು. ನಿಮಗೇನಾದರೂ ಆಯ್ಕೆಯ ಸ್ವಾತಂತ್ರ್ಯವಿದ್ದರೆ ಯಾವುದು ಸುಲಭವಿದೆ ಅನುಕೂಲಕರವಾಗಿದೆ ಎಂಬುದನ್ನು ಆರಿಸುವುದಕ್ಕಿಂತ ನೀವು ಯಾವುದನ್ನು ಪ್ರೀತಿಯಿಂದ ಬಯಸುವಿರೋ ಅದನ್ನು ಆರಿಸಿಕೊಳ್ಳಿ'. ಇವು ಡಾ|| ಮಾಧವಿಲತಾರವರ ಜೀವನ ಧೈಯಗಳು.