Hindu Vani
Index
ಆರ್ಥಿಕ ಪ್ರಗತಿ
ಭಾರತದ ಆರ್ಥಿಕ ಪ್ರಗತಿ
ಜಾಗತಿಕ ಬ್ಯಾಂಕ್ ತನ್ನ ವಾರ್ಷಿಕ ಸಂಶೋಧನಾ ವರದಿಯಲ್ಲಿ 2024-25ರ ವರ್ಷದ ಭಾರತದ ಆರ್ಥಿಕ ಪ್ರಗತಿಯನ್ನು ಶೇಕಡಾ 7 ಎಂದು ಅಂದಾಜಿಸಿದೆ. ಜಾಗತಿಕ ಆರ್ಥಿಕ ಹಿಂಜರಿತವು ಹಲವು ಮುಂದುವರಿದ ದೇಶಗಳನ್ನು ಕಾಡುತ್ತಿದ್ದರೆ ಅಂತಹ ಸ್ಥಿತಿಯಲ್ಲೂ ಭಾರತದ ಪ್ರಗತಿಯು ಅಸಾಧಾರಣವಾದುದು ಎಂದು ಪ್ರಶಂಸೆಗೆ ಒಳಗಾಗಿದೆ. ಅದರಲ್ಲೂ ನಡುವಿನಲ್ಲಿ ಶೇಕಡಾ 6.6 ಎಂದು ಅಂದಾಜಿಸಲಾಗಿದ್ದ ಪ್ರಗತಿಯನ್ನು ಈಗ ತಿದ್ದಿ 7% ಎಂದು ಅದು ನಿಶ್ಚಯಿಸಿದೆ.
ಆರ್ಥಿಕ ಪ್ರಗತಿಗೆ ಪ್ರಮುಖವಾದುದು ಹಲವು ಉತ್ಪಾದನಾ ವಲಯಗಳಲ್ಲಿ ಆಗುತ್ತಿರುವ ಹೂಡಿಕೆಯ ವ್ಯತ್ಯಾಸ, ಇನ್ನೊಂದು, ದೇಶದ ಖಾಸಗಿ ಮಟ್ಟದಲ್ಲಿ ಆಗುವ ಉತ್ಪಾದನೆಗಳ ಬಳಕೆಯ ಪ್ರಮಾಣ. ಈ ಎರಡು ವಿಚಾರಗಳಲ್ಲೂ ಭಾರತವೀಗ ಮುಂಚೂಣಿಯಲ್ಲಿರುವುದು ಉತ್ಪಾದನೆಯ ಉತ್ತೇಜನಕ್ಕೆ ಕಾರಣವಾಗುತ್ತದೆ. ಉತ್ಪಾದನೆಯನ್ನು ಬಳಸುವುದರಲ್ಲಿ ಜನರ ಆರ್ಥಿಕ ಸ್ಥಿತಿ ಬಹುಮುಖ್ಯ, ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವಾದುದರಿಂದ ಗ್ರಾಮೀಣ ಜನರ ಆದಾಯದಲ್ಲಿ ಈಗ ಹೆಚ್ಚಳವಾಗಿದೆ. ಇದು ಸಹಜವಾಗಿ ಬಳಕೆಯನ್ನು ಅಪಾರವಾಗಿ ಉತ್ತೇಜಿಸುತ್ತದೆ. ಉತ್ಸವಗಳು ಹಬ್ಬ ಹರಿದಿನಗಳು ಮದುವೆ ಮುಂಜಿಗಳು ವೈಭವದಿಂದ ನಡೆಯುತ್ತಿರುವುದು ಇಂತಹ ಉತ್ಪಾದನಾ ವಸ್ತುಗಳ ಬಳಕೆಯನ್ನು ಹೆಚ್ಚಿಸುತ್ತವೆ.
ಇನ್ನು ಬಳಕೆಯ ಸ್ಥಿತಿಯಲ್ಲಿ ಇದ್ದ ಹಲವು. ಅಸಮತೋಲನಗಳನ್ನು ಕೂಡ ಹೋಗಲಾಡಿಸುವುದು ನಡೆದಿದೆ. ಗ್ರಾಮೀಣ ಆರ್ಥಿಕ ಚೇತರಿಕೆಯಿಂದಾಗಿ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕ ಬೆಳವಣಿಗೆಯಲ್ಲೂ ವ್ಯತ್ಯಾಸಗಳು ಬಂದಿವೆ. ಕಳೆದ 5 ವರ್ಷಗಳಲ್ಲಿ ಭಾರತದ ರಫ್ತು 38% ಹೆಚ್ಚಳವಾಗಿದ್ದು 2030ರ ರಫ್ತು ಗುರಿಯನ್ನು 2 ಟ್ರಿಲಿಯನ್ (2000ಕೋಟಿ) ಡಾಲರ್‌ಗಳಿಗೆ ಏರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಅದಕ್ಕಾಗಿ ರಸ್ತೆಗಾಗಿ ನಿಗದಿ ಪಡಿಸಿದ ವಸ್ತುಗಳ ಪಟ್ಟಿಯಲ್ಲಿ ವೈವಿಧ್ಯತೆಯನ್ನು ತರಲಾಗಿದೆ. ಇನ್ನು ಈ ವಿಭಾಗದ ವಸ್ತುಗಳ ಪ್ರಮಾಣವನ್ನೂ ಹೆಚ್ಚಿಸುವಲ್ಲಿ ಗಮನ ಹರಿಸಲಾಗಿದೆ. ಸಾಂಪ್ರದಾಯಿಕವಾಗಿ ಭಾರತದ ಮೇಲುಗೈಯಾಗಿರುವ ಔಷಧಿ, ಉಡುಪು, ಸೆಮಿಕಂಡಕ್ಟರ್, ನವೀಕರಿಸುವ ಇಂಧನಗಳ ವಿಭಾಗದಲ್ಲಿ ಹೆಚ್ಚಳವನ್ನು ಸಾಧ್ಯವಾಗಿಸುವುದನ್ನು ಭಾರತವು ಕಂಡುಕೊಂಡಿದೆ. ಪಾದರಕ್ಷೆ ಇಲೆಕ್ಟ್ರಾನಿಕ್ ವಸ್ತುಗಳು ಕೃಷಿಉತ್ಪನ್ನಗಳು ಈಗ ಹೊಸದಾಗಿ ಪಟ್ಟಿಯಲ್ಲಿ ಸೇರಿವೆ. ಆಂತರಿಕ ಬಳಕೆ, ಉತ್ಪಾದನಾ ಕ್ಷೇತ್ರದ ಬೆಂಬಲ, ಕೃಷಿ ಉತ್ಪಾದನೆಯಲ್ಲಿ ಸಂಭವನೀಯವಾದ ಹಿಂಜರಿತವನ್ನು ತಡೆಯುವ ಪ್ರಯತ್ನಗಳು ಒಂದು ಕಡೆಯಾದರೆ, ನಗರ ಪ್ರದೇಶದಲ್ಲಿ ನಿರುದ್ಯೋಗವನ್ನು ಕಡಿತಗೊಳಿಸಿ ಮಹಿಳಾ ಉದ್ಯೋಗವನ್ನು ಸಾಧಿಸುವ ಕರೋನಾ ನಂತರದ ಪ್ರಯತ್ನವು ಈಗ ಫಲಕಾರಿಯಾಗಿದೆ.
ಬೆಲೆ ಏರಿಕೆಯು ಈಗ ಹತೋಟಿಯಲ್ಲಿದ್ದು ಕಡು ಬಡತನವು 16.2% ನಿಂದ 2.3% ಗೆ ಇಳಿದಿದೆ. ಅಂದರೆ 17 ಕೋಟಿ ಜನರು ಈಗ ಕಡು ಬಡತನದಿಂದ ಹೊರ ಬಂದಿರುವರು. ಇದು ಜಾಗತಿಕ ಬ್ಯಾಂಕಿನ ವರದಿ. ರಫ್ತು ವ್ಯಾಪಾರದ ಲಾಭವನ್ನು ಹೆಚ್ಚಿಸಲು ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವುದು; ನಿರ್ಬಂಧಗಳಲ್ಲಿ ಒಂದಷ್ಟು ಸಡಿಲತೆ, ಕೈಗಾರಿಕೆಗಳಿಗೆ ಹೊಸ ಸಂಶೋಧನೆಯ ಬೆಂಬಲವನ್ನು ಹೊಂದಿಸುವ ಪ್ರಯತ್ನವು ನಡೆದಿದೆ.
ಐ. ಎಂ. ಎಫ್. ವರದಿಯ ಪ್ರಕಾರ ಈಗಾಗಲೇ ಭಾರತವು ಜಪಾನ್ ದೇಶವನ್ನು ಹಿಂದಿಕ್ಕಿದೆ. ಈಗಿನ್ನು ಭಾರತಕ್ಕಿಂತ ಮುಂದಿರುವುದು ಅಮೇರಿಕಾ ಚೀನಾ ಮತ್ತು ಜರ್ಮನಿ ದೇಶಗಳು ಮಾತ್ರವೆ.
ಪೌರಕಾರ್ಮಿಕರೊಂದಿಗೆ ಯೋಗ ದಿನಾಚರಣೆ
ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ, ವಿಶ್ವ ಹಿಂದೂ ಪರಿಷತ್ ಮೈಸೂರು ಹಾಗೂ ಮೂಕಾಂಬಿಕಾ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಮೂಕಾಂಬಿಕಾ ಸಮೃದ್ಧಿ ಬಡಾವಣೆಯ ಉದ್ಯಾನವನದಲ್ಲಿ ಪೌರಕಾರ್ಮಿಕರೊಂದಿಗೆ |ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆಯನ್ನು ಮಾಡಲಾಯಿತು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಪುನೀತ್ ಜಿ. ಪೌರಕಾರ್ಮಿಕರಿಗೆ ಶಾಂತಿ ಮಂತ್ರ, ಸೂರ್ಯ ನಮಸ್ಕಾರ ಮಂತ್ರ ಹಾಗೂ ಯೋಗಾಭ್ಯಾಸ ಹೇಳಿಕೊಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪುನೀತ್ ಜಿ. ಕೂತ್ತೂರು ಯೋಗಾಭ್ಯಾಸದಿಂದ ನಮ್ಮ ದೈಹಿಕ, ಮಾನಸಿಕ ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಸ್ವಚ್ಚತಾ ಸೇನಾನಿಗಳಾಗಿ ಪ್ರತಿನಿತ್ಯ ದುಡಿಯುವ ಕೈಗಳು ನಿಮ್ಮದು. ನಿಮ್ಮ ಆರೋಗ್ಯ ಬಹಳ ಮುಖ್ಯ. ಯೋಗಾಭ್ಯಾಸ ಹಾಗೂ ಆಯುರ್ವೇದದ ಸಹಾಯದಿಂದ ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಪರಮೇಶ್ವರ್ ಮಾತನಾಡಿ ಭಾರತಿಯ ಯೋಗ ಪದ್ಧತಿಯು ಇಂದು ವಿಶ್ವವ್ಯಾಪಿಯಾಗಿ ಹರಡಿರುವುದು ನಮ್ಮ ಹೆಮ್ಮೆ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಪಂಚಾಯಿತಿಯ ನೌಕರರಿಗೆ ನಿತ್ಯ ಯೋಗ ಮಾಡಲು ತಿಳಿಸಿದರು. ಈ ಸಂದರ್ಭದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ. ಆರ್. ಗಣೇಶ್, ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣಾಚಾರ್, ಬಾಲಸುಬ್ರಹ್ಮಣ್ಯಂ ಸೇರಿದಂತೆ ಹಲವು ಗಣ್ಯರು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.