Hindu Vani
Index
ಮುಖಪುಟ ಲೇಖನ
ಮೊನ್ನೆ ಮೊನ್ನೆ ರಾಷ್ಟ್ರಾಧ್ಯಕ್ಷೆ ದೌಪದಿ ಮುರ್ಮುರವರು ಈ ವರ್ಷದ ತಮ್ಮ ಜನ್ಮದಿನವನ್ನು ಕಣ್ಣ ದೃಷ್ಟಿ ಕಳೆದುಕೊಂಡ ಪುಟ್ಟ ಮಕ್ಕಳ ಜೊತೆ ಕಳೆದರು. 'ಬಾ ಬಾರ್ ದಿನ್ ಎ ಆಯೇ' ಮತ್ತೆ ಮತ್ತೆ ಬರಲಿ ಈ ದಿನ ಎನ್ನುವ ಚಿತ್ರಗೀತೆಯನ್ನು ಮಕ್ಕಳು ಸಾಮೂಹಿಕವಾಗಿ ಹಾಡಿದರು. ಹಾಡು ಉತ್ಸಾಹ ಭರಿತವಾಗಿದ್ದಿತು. ಆದರೆ ಮಕ್ಕಳು ದೃಷ್ಟಿಯಿಲ್ಲದೆ ನೋಡುವ ಕಣ್ಣಿನ ಆ ನೋಟವು ಮಾತ್ರ ನೋಡುಗರಲ್ಲಿ ಒಂದು ಬಗೆಯ ಅವ್ಯಕ್ತ ನೋವನ್ನು ಉಂಟುಮಾಡುತ್ತಿತ್ತು. ಆ ಮುಖಗಳಲ್ಲಿ ಅತೀವ ನಮ್ರತೆಯೋ, ಅಥವಾ ವಾತ್ಸಲ್ಯವನ್ನೋ ಕರುಣೆಯನ್ನೂ ನಿರೀಕ್ಷಿಸುವ ಅದುಮಿ ಇಟ್ಟಂತಹ ಭಾವನೆಯೋ ಅಡಗಿ ಇದ್ದಂತಿತ್ತು.
ಸುತ್ತಲೂ ಝಗಮಗಿಸುವ ಬೆಳಕು ಸುಂದರ ಅಲಂಕೃತ ಸಭಾಭವನ ಆ ಭವ್ಯ ದೃಶ್ಯದಲ್ಲೆಲ್ಲೋ ಕೊರತೆ ಇದ್ದಂತಿತ್ತು. ಹಾಡು ಹಾಡುತ್ತಿದ್ದಂತೆ ರಾಷ್ಟ್ರಾಧ್ಯಕ್ಷೆ ಮರ್ಮು ಭಾವುಕರಾಗಿ ಬಿಟ್ಟರು. ದೌಪದಿ ಅಮ್ಮ ಅತ್ತೇ ಬಿಟ್ಟರು. ಕ್ಷಣ ಕ್ಷಣಕ್ಕೂ ಒಸರುವ ಕಣ್ಣೀರನ್ನು ತಮ್ಮ ಬಳಿಯ ಕರವಸ್ತ್ರದಿಂದ ಒರಸಿಕೊಳ್ಳುತ್ತಲೇ ಇದ್ದರು. ಕೊನೆಗೆ ಅವಡುಗಚ್ಚಿಕೊಂಡು ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡಿರಲು ಪ್ರಯತ್ನಿಸಿದರು. ಅವರು ರಾಷ್ಟ್ರಾಧ್ಯಕ್ಷೆಯಾಗಿರಬಹುದು. ಅವರಿಗಾಗಿ ನಿಶ್ಚಿತ ಸಾರ್ವಜನಿಕ ಶಿಷ್ಟಾಚಾರಗಳು ಹಲವಿರಬಹುದು. ಆದರೆ ಒಬ್ಬ ತಾಯಿ ಸಹಜವಾಗಿ ಅನುಭವಿಸುವುದನ್ನು ಅವರು ಅಂದು ತಮ್ಮ ಕಣ್ಣೀರಿನಿಂದ ತೋಡಿಕೊಂಡರು. 140ಕೋಟಿ ಪ್ರಜೆಗಳ ಶಕ್ತ ಭಾರತದ ಮೊದಲ ಪ್ರಜೆಯು ಸಂವೇದನಾ ಶೀಲ ಅಮ್ಮನೇ ಆಗಿಬಿಟ್ಟರು. ಈಗ ಅವರು ಪ್ರತಿನಿಧಿಸುವ ಸರ್ಕಾರವು ಅವರ ಈ ಭಾವನೆಯನ್ನು ಗಮನಿಸಬೇಕು. ಏಕೆಂದರೆ ಅವರ ಯೋಚನೆಗಳು, ಈ ದೇಶದ ಯೋಚನೆಗಳು. ಅವರು ಈ ಮಕ್ಕಳಲ್ಲಿ ಏನನ್ನು ಕಂಡರು?
ಭಾರತದಲ್ಲಿ 1 ಲಕ್ಷ ಮಕ್ಕಳು ವರ್ಷವೂ ಹುಟ್ಟು ಕುರುಡಾಗಿ ಜನಿಸುತ್ತಾರಂತೆ. ಈ ಸಂಖ್ಯೆಯಲ್ಲಿ ಅರ್ಧದಷ್ಟು ಮಕ್ಕಳು ಹುಟ್ಟಿದ ಒಂದೆರಡು ವರ್ಷಗಳಲ್ಲಿ ಕುರುಡಿನ ಕಾರಣದಿಂದಾಗಿ ಸಾವನ್ನು ಅಪ್ಪುವರೆಂದರೆ ಈ ದುರಂತದ ಅಗಾಧತೆ ಅಂತಹದು. ಇನ್ನು ಬದುಕುಳಿದ ಮಕ್ಕಳು ಬೆಳಕೆಂಬದನ್ನೂ ಅದು ನೀಡುವ ಲವಲವಿಕೆಯ ಕಲ್ಪನೆಯೇ ಇಲ್ಲದೆ ಬದುಕನ್ನು ದೂಡುತ್ತಿರುತ್ತವೆ. ಮಗುವಿನ ಕುರುಡು, ಮನೆಯ ದುಃಖದ ಮಡುವಾಗಿ ಬಿಡುತ್ತದೆ. ಕುರುಡರಾಗುವ ಶೇಕಡಾ 40 ಮಕ್ಕಳು ಸರ್ಕಾರದ ಮತ್ತು ಸಮಾಜದ ಇಚ್ಛಾಶಕ್ತಿಯ ಮುಂಜಾಗ್ರತೆಗಳಿಂದಲೇ ದೃಷ್ಟಿಯನ್ನು ಪಡೆಯಬಹುದು ಎಂದು ಹಲವು ವರದಿಗಳು ಹೇಳುತ್ತವೆ. ದಿನ ತುಂಬದೆ ಹೆರುವುದರಿಂದ ಹುಟ್ಟುವ ಮಕ್ಕಳಾಗಲೀ, ದಡಾರದಂತಹ ಕಾಯಿಲೆಗಳಿಂದಲೂ, ಕಣ್ಣಿನ ಸೋಂಕಿನಿಂದಲೂ ಕಣ್ಣುಕಳೆದು ಬಿಡುವ ಮಕ್ಕಳು ಈ ಪಟ್ಟಿಯಲ್ಲಿ ಬರುವರು.
ಸರ್ಕಾರಗಳ ಪ್ರಬಲ ಇಚ್ಛಾಶಕ್ತಿಯಿಂದಲೇ ಜಗತ್ತಿನ ದುಃಸ್ವಪ್ನವಾಗಿದ್ದ ಪೋಲಿಯೋ, ಸಿಡುಬು ಮತ್ತು ಕುಷ್ಟ ರೋಗಗಳನ್ನು ನಿವಾರಿಸಲಾಗಿದೆ. ಕುರುಡುತನದ ಬಹುಅಂಶದ ಕಾರಣಗಳನ್ನು ಸುಲಭಮಾರ್ಗಗಳಿಂದ ತಪ್ಪಿಸಿಕೊಳ್ಳಬಹುದು ಎಂಬುದು W.H.O.ದ (ಜಾಗತಿಕ ಆರೋಗ್ಯ ಸಂಸ್ಥೆ) ವರದಿಗಳು ಹೇಳುತ್ತವೆ. ಒಂದು ಕೋಟಿ ಜನಸಂಖ್ಯೆಯ ಪ್ರದೇಶಕ್ಕೆ ಒಬ್ಬ ಕರ್ತವ್ಯಬದ್ಧ ಕಣ್ಣು ತಜ್ಞನೊಂದಿಗೆ ಅವನ ಇಬ್ಬರು ಸಹಕಾರಿಗಳು ಅಲ್ಲಿಯ ಮಕ್ಕಳ ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಾಧ್ಯವೆನ್ನುತ್ತದೆ ಅಂತಹದೊಂದು ವರದಿ.
ರಾಷ್ಟ್ರಾಧ್ಯಕ್ಷೆಯ ಕಾತರವನ್ನು ಅವರ ಸರ್ಕಾರವು ಅರ್ಥೈಸಿಕೊಂಡು ಕಾರ್ಯನಿರತವಾದರೆ ಕುರುಡು ಮಗು ಅನುಭವಿಸುವ ಒಂಟಿತನವನ್ನು, ದೃಷ್ಟಿ ಇಲ್ಲದ ಕಾರಣದಿಂದ ಹುಟ್ಟುವ ಅಸಹಜ ವರ್ತನೆಯನ್ನು ನಿವಾರಿಸಿಕೊಳ್ಳಬಹುದು. ಕಣ್ಣಿನ ದೃಷ್ಟಿಯೊಂದಿಗೆ ಉದ್ಭವಿಸುವ ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಇಲ್ಲವಾಗಿಸಬಹುದು. ಕತ್ತಲೆಯ ದೀರ್ಘ ಬದುಕಿನಲ್ಲಿ ಸವೆಯುವ ಮಕ್ಕಳ ಉತ್ಸಾಹದ ಸೆಲೆಯನ್ನು ಅವರಲ್ಲಿ ಮತ್ತೆ ಮರುಕಳಿಸಬಹುದು. ನಮ್ಮ ರಾಷ್ಟ್ರಾಧ್ಯಕ್ಷರ ಕಣ್ಣೀರು ವೃಥಾ ಹತಾಶೆಯ ಸಂಕೇತವಾಗಬಾರದು.
ಸಂತ ಪಾದಯಾತ್ರೆ
ವಿಶ್ವ ಹಿಂದೂ ಪರಿಷತ್ ಧರ್ಮಪ್ರಸಾರ ವಿಭಾಗದ ಮೂಲಕ ಶಿವಮೊಗ್ಗದ ಭದ್ರಾ ಪ್ರಖಂಡದಲ್ಲಿ ಸಂತರ ಪಾದಯಾತ್ರೆ ಕಾರ್ಯಕ್ರಮ ನಡೆಯಿತು. ಪರಮಪೂಜ್ಯ ಶ್ರೀ ಸ್ವಾಮಿ ವಿನಯಾನಂದ ಸರಸ್ವತಿಯವರು, ರಾಮಕೃಷ್ಣ ವಿವೇಕಾನಂದ ಆಶ್ರಮ, ಶಿವಮೊಗ್ಗ ಪರಮಪೂಜ್ಯ ಶ್ರೀ ನರೇಂದ್ರ ಗುರೂಜಿಯವರು, ಸಂಸ್ಥಾಪಕರು, ಶ್ರೀ ದುರ್ಗಾಶಕ್ತಿ ಸಪ್ತಶತಿ ಋಷಿಪ್ರಜ್ಞಾ ಆಂದೋಲನ ಕರ್ನಾಟಕ, ಇವರ ಸಮ್ಮುಖದಲ್ಲಿ ಪಾದಯಾತ್ರೆ ನಡೆಯಿತು.
ವಿದ್ಯಾನಗರ ಬಡಾವಣೆಯ ಮಾತಂಗಮ್ಮನ ಬೀದಿಯ ಸುಮಾರು 40 ಕ್ಕಿಂತ ಹೆಚ್ಚು ಮನೆಗಳಿಗೆ ಸಂತರು ಭೇಟಿ ನೀಡಿ ಭಕ್ತರನ್ನು ಆಶೀರ್ವದಿಸಿದರು. ನಾವೆಲ್ಲರೂ ಹಿಂದೂ ಸಮಾಜದ ಅವಯವಗಳು, ನಾವೆಲ್ಲರೂ ಒಂದಾಗಿ ಬಾಳಬೇಕು ಎಂಬ ಭಾವವನ್ನು ಜಾಗೃತಿ ಮಾಡಿದರು.
ವೇದಿಕೆಯಲ್ಲಿ ಧರ್ಮ ಪ್ರಸಾರ ವಿಭಾಗದ ಪ್ರಾಂತ ಪ್ರಮುಖರಾದ ಶ್ರೀ ನಾರಾಯಣ ವರ್ಣೇಕರ್ ರವರು, ಬಜರಂಗದಳ ಜಿಲ್ಲಾ ಸಂಯೋಜಕ ವಡಿವೇಲು ರಾಘವನ್ ನಗರದ ಧರ್ಮ ಪ್ರಸಾರ ಪ್ರಮುಖರಾದ ಶ್ರೀ ಕೃಷ್ಣಮೂರ್ತಿ, ಭದ್ರಾ ಪ್ರಖಂಡ ಅಧ್ಯಕ್ಷರಾದ ಶ್ರೀ ಮಹದೇವಪ್ಪ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುನ್ನ ಶ್ರೀ ದೇವಾಲಯ ಸಂವರ್ಧನಾ ಸಮಿತಿಯ ತಂಡದಿಂದ ಅಭೂತಪೂರ್ವ ಭಜನಾ ಸಂಕೀರ್ತನೆ ನಡೆಯಿತು.