Logo

VHP PUBLICATIONS

Hindu Vani


expand_more

ಕ್ರಾಂತಿ

By ಸಾಗರ್, ವಿಭಾಗ ಸಂಘಟನಾ ಕಾರ್ಯದರ್ಶಿ, ಕೋಲಾರ

ಕ್ರಾಂತಿಯ ಕಿಚ್ಚು ರಾಮಪ್ರಸಾದ ಬಿಸ್ಮಿಲ್-2

(ಕಳೆದ ಸಂಚಿಕೆಯಿಂದ)

ಯಾವುದೇ ಅಡ್ಡಿ ಆತಂಕಗಳಿಲ್ಲದೆ ಇಷ್ಟೆಲ್ಲಾ ನಡೆದು ಹೋದವು. ಕ್ರಾಂತಿಕಾರಿಗಳ ಪ್ರಕಾರ ಇದು ಮಹತ್ವದ ಸಫಲ ಕಾರ್ಯಾಚರಣೆ ಅನಿಸಿಕೊಂಡಿತು. ಕೆಲವೊಂದು ಕೈಸಾಲಗಳನ್ನು ಚುಕ್ತಾಮಾಡಿ ಉಳಿದ ಹಣವನ್ನು ಶಸ್ತ್ರಗಳ ಖರೀದಿಗೆಂದು ತೆಗೆದಿರಿಸಿಕೊಂಡರು. ಇಲ್ಲಿ ವರೆಗೆ ಎಲ್ಲವೂ ಸುಖಾಂತವೆನಿಸಿದುದು ನಿಜೆವೆ. ಆದರೆ ಈ ಸಾಹಸವು ಪತ್ರಿಕೆಗಳ ವರದಿಗಳಿಂದ ದೇಶದಲ್ಲಿ ಕೋಲಾಹಲವನ್ನೇ ಉಂಟುಮಾಡಿತು. ದೇಶವಿಡೀ ಈ ವಾರ್ತೆಯು ಮಹತ್ವದ ಸುದ್ದಿಯೆನಿಸಿ ಬಿಟ್ಟಿತು. ಅದೇ ಸಮಯದಲ್ಲಿ ಬೆಹರಾಂಪುರ ಸೆರೆಮನೆಯಲ್ಲಿದ್ದ ಹಿರಿಯ ಕ್ರಾಂತಿಕಾರಿ ಜೋಗೇಶ ಚಟರ್ಜಿ ಈ ವಾರ್ತೆಯನ್ನು ಪತ್ರಿಕೆಗಳಲ್ಲಿ ಓದಿದರು. ಇದು ಹಿಂದುಸ್ಥಾನ್ ರಿಪಬ್ಲಿಕ್ ಆರ್ಮಿಯ ಸಾಹಸವೆಂದೂ ಅವರು ಅನುಮಾನಿಸಿದರು. ಇತ್ತ ಬ್ರಿಟಿಷ್ ಆಡಳಿತವಂತೂ ಈ ಪ್ರಕರಣವನ್ನು ಭೇದಿಸಲು ತನ್ನೆಲ್ಲಾ ಶಕ್ತಿಯನ್ನು ಪಣಕ್ಕಿಟ್ಟು ಬಿಟ್ಟಿತು. ಅಶ್ಚಕುಲ್ಲಾಖಾನ್ ಈ ಸಾಹಸಕ್ಕೆ ಹಿಂಜರಿದುದು ಮತ್ತು ಇಂತಹ ಪರಿಸ್ಥಿತಿಗೆ ಈ ಘಟನೆಯು ಆಹ್ವಾನ ನೀಡಿದಂತಾಗಲಿದೆ ಎಂದುಕೊಂಡುದು ನಿಜವೆನಿಸಿ ಬಿಟ್ಟಿತು.

ಕೆಲವು ಸಮಯ ಕಳೆಯುತ್ತಿದ್ದಂತೆ ದೋಚಿದ ಕರೆನ್ಸಿ ನೋಟುಗಳು ಚಲಾವಣೆಯಲ್ಲಿ ಬರಲು ಪ್ರಾರಂಭವಾದವು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ವಿಶೇಷ ಸುಪರಿಟೆಂಡೆಂಟ್ ಹಾರ್ಟನ್ ಈ ನೋಟುಗಳು ಎಲ್ಲೆಲ್ಲಿ ಹೊರಬಂದಿವೆ ಎನ್ನುವುದನ್ನು ತಪಾಸಣೆ ಮಾಡಿದನು. ಅವನು ಕಂಡುಕೊಂಡಂತೆ ಶಹಜಹಾನಪುರವೂ ಈ ಚಲಾವಣೆಯ ಕೇಂದ್ರವಾಗಿದ್ದಿತು. ಇಂತಹದೊಂದು ತಪ್ಪು ನಡೆಯಬಹುದು ಎನ್ನುವುದನ್ನು ತಾನು ಊಹಿಸಿರಲಿಲ್ಲ ಎಂದು ಬಿಸ್ಮಿಲ್ ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದರು. ರಾಮಪ್ರಸಾದ ಬಿಸ್ಮಿಲರನ್ನು ಅವರ ಮನೆಯಿಂದ ವಿಚಾರಣೆಗಾಗಿ ಕರೆದರು. ಹಾಗೆಂದು ಇದು ಅಂತಹ ಅಪಾಯವನ್ನು ಉಂಟು ಮಾಡಲಿಲ್ಲ. ಆದರೆ ಇನ್ನೊಂದು ಬೆಳವಣಿಗೆಯು ಮಹಾ ಆಪತ್ತನ್ನು ತಂದಿಟ್ಟಿತು. ಸಂಘಟನೆಯು ಒಬ್ಬ ಸದಸ್ಯ ಬನಾರಸಿ ಲಾಲ್, ರಾಯ್ ಬರೇಲಿಯಲ್ಲಿ ಬಂಧನಕ್ಕೊಳಗಾದನು. ವಿಚಾರಣೆಯ ಹಂತದಲ್ಲಿ ಹಿಂಸೆಗೊಳಗಾದ ಅವನು ತನ್ನೊಪ್ಪಿಗೆಯ ಸಾಕ್ಷಿಯಾಗಿ ಹಿಂದುಸ್ಥಾನ್ ರಿಪಬ್ಲಿಕನ್ ಆರ್ಮಿಯ ಇಡಿಯ ಕಾರ್ಯಾಚರಣೆಯ ಬಗ್ಗೆ ಬಾಯಿ ಬಿಟ್ಟನು.

ಎಲ್ಲಾ ಮಾಹಿತಿಯೊಂದಿಗೆ ಹೊರಟ ಪೊಲೀಸರು ದೇಶದೆಲ್ಲೆಡೆ ಬಂಧನದ ಸತ್ರವನ್ನೇ ಪ್ರಾರಂಭಿಸಿ ಬಿಟ್ಟರು. ಈ ರೈಲು ದರೋಡೆಗೆ ಸಂಬಂಧ ಪಟ್ಟವರನ್ನು ಬಂಧಿಸುವ ಕಾರ್ಯಾಚರಣೆಯೇ ನಡೆಯಲಾರಂಬಿಸಿತು. ದಕ್ಷಿಣೇಶ್ವರದಲ್ಲಿ ರಾಜೇಂದ್ರಲಾಹಿರಿಯನ್ನು ಬಂಧಿಸಲಾಯಿತು. ಅದರೊಂದಿಗೆ ಬ್ರಿಟಿಷ್ ವಿರುದ್ಧ ಮುದ್ರಿತ ಸಾಹಿತ್ಯ ಮತ್ತು ಕರ ಪತ್ರಗಳು, ಒಂದು ಸಿದ್ಧವಾದ ಬಾಂಬ್. ಏಳು ಪಿಸ್ತೂಲುಗಳು, ಸಿಕ್ಕಿದವು. ಸಚೀಂದ್ರನಾಥ ಸನ್ಯಾಲ್ ಮತ್ತು ಅವರ ತಮ್ಮ ಭೂಪೇಂದ್ರ ಕೈಗೆ ಸಿಗದೆ ಇದ್ದವರು ಕೊನೆಗೂ ಸಿಕ್ಕಿ ಬಿದ್ದರು.

ಪೊಲೀಸರು ಹಿಂಸೆ ಮತ್ತು ಧಾರ್ಮಿಕ ಒತ್ತಡದ ಭಾವನೆಗಳ ಮೂಲಕ ಅವರನ್ನು ಮಾಫಿ ಸಾಕ್ಷಿದಾರರನ್ನಾಗಿ ಮಾಡಬಹುದೆಂದುಕೊಂಡಿದ್ದರು. ಆದರೆ ಅದು ಕೈಗೂಡಲಿಲ್ಲ. ಕಾಕೋರಿ ಸಂಚಿನ, ವಿಚಾರಣೆಯು ಒಂದು ವರ್ಷಕಾಲ ಎಳೆದುಕೊಂಡು ಪತ್ರಿಕೆಗಳಲ್ಲಿ ಸತತ ಪ್ರಚಾರವನ್ನು ಗಳಿಸಿಕೊಂಡಿತು. ಕಾಂಗ್ರೆಸ್‌ನಲ್ಲಿದ್ದ ಸ್ವರಾಜಿಸ್ಟ್‌ಗಳ ಗುಂಪು ಈ ಆಪಾದಿತರ ಪರವಾಗಿ ವಕೀಲರ ತಂಡವನ್ನು ಸಂಘಟಿಸಿತು. 31 ಆರೋಪಿಗಳು ವಿಚಾರಣೆಗೊಳಪಟ್ಟರು. ಒಂದು ಹಂತದಲ್ಲಿ ಬಂಧಿತರೆಲ್ಲರೂ ತಮ್ಮನ್ನು ಅಮಾನವೀಯವಾಗಿ ನಡೆಸುತ್ತಿರುವರೆಂದು ಉಪವಾಸವನ್ನು ಕೈಗೊಂಡರು. ಈ ನಡುವೆ ಸೆರೆಮನೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ರೋಚಕ ಪ್ರಯತ್ನಗಳೂ ನಡೆದವು.

ಬಂಧನಕ್ಕೊಳಗಾಗದೆ ಹೊರಗುಳಿದ ಸಚಿಂದ್ರನಾಥ ಸನ್ಯಾಲರ ತಮ್ಮ ರವಿಂದ್ರನಾಥರು ತುಳಸಿ ರಾಮಾಯಣದ ಪ್ರತಿಯೊಳಗೆ ಒಂದು ಸಣ್ಣ ಗರಗಸವನ್ನು ಅಡಗಿಸಿ ಸೆರೆಮನೆಯೊಳಗೆ ಕಳುಹಿಸಲು ಸಫಲರಾದರು. ಸನ್ಯಾಲರು ಅದರಿಂದ ತಮ್ಮ ಕೋಣೆಯ ಕಿಟಕಿಗಳ ಕಂಬಿಗಳನ್ನು ಕತ್ತರಿಸಿದರು. ಇನ್ನೇನು ಹೊರಹೋಗಲಿರುವ ಹಂತದಲ್ಲಿ ಪತ್ತೆಯಾದರು. ಅವರನ್ನು ಅಮಾನುಷವಾಗಿ ಥಳಿಸಲಾಯಿತು. ಆ ನಂತರ ಅವರಿಗೆ ಕೋಳವನ್ನು ಹಾಕಿ ಇಡಲಾಯಿತು. ಅದಾಗುತ್ತಲೇ ಸನ್ಯಾಲರನ್ನು ಒಬ್ಬಂಟಿಯಾಗಿರುವ ಶಿಕ್ಷೆಯನ್ನು ಕೊಟ್ಟರು. ಜೋಗೇಶ್ ಚಟರ್ಜಿಯವರು ತಮ್ಮ ಆತ್ಮಚರಿತ್ರೆಯಲ್ಲಿ ರಾಮ ಪ್ರಸಾದ್ ಬಿಸ್ಮಿಲ್ ಕೂಡಾ ತಮಗೆ ತಲುಪಿದ ಗರಗಸದಿಂದ ಸೆರೆಮನೆಯ ಕೋಣೆಯಿಂದ ಕಂಬಿಯನ್ನು ಕತ್ತರಿಸಿ ತಮ್ಮಿಬ್ಬರು ಸಂಗಾತಿಗಳೊಡನೆ ಹೊರ ಬಂದಿದ್ದರು ಎಂದು ಬರೆದಿದ್ದರು. ಆದರೆ ಜೈಲಿನ ಗೋಡೆಯನ್ನು ಹತ್ತಲು ದಾರಿ ಕಾಣದೆ ಹೋದರು. ಹಾಗೇನಾದರೂ ಅವರು ತಪ್ಪಿಸಿಕೊಂಡಿದ್ದರೆ ಅವರನ್ನು ಅಲ್ಲಿಂದ ಕರೆದೊಯ್ಯಲು ಚಿತ್ತಗಾಂಗ್ ತಂಡದ ಮುಖ್ಯಸ್ಥ ಸೂರ್ಯಸೇನ್ ಸೆರೆಮನೆಯ ಹೊರಗೆ ಕಾದು ನಿಂತಿದ್ದರು.

1927ರ ನಡುವಿನಲ್ಲಿ ಈ ಕಾಕೋರಿ ಕ್ರಾಂತಿಕಾರಿಗಳ ಪ್ರಕರಣದ ತೀರ್ಪು ಬರಲಿದ್ದಿತ್ತು. ಆಗಲೇ ರಾಮಪ್ರಸಾದ್ ಬಿಸ್ಮಿಲ್ ಪ್ರಸಿದ್ಧವಾದ “ಮೇರಾ ರಂಗದೇ ಬಸಂತಿ ಚೋಲಾ” ಗೀತೆಯನ್ನು ಬರೆದಿರುವುದು. ಜೈಲಿನ ಎಲ್ಲಾ ಕೈದಿಗಳು ಆ ಗೀತೆಯನ್ನು ಸಾಮೂಹಿಕವಾಗಿ ಹಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೆ ಆ ಗೀತೆಯು ಜೈಲಿನ ಹೊರಗೂ ಹೋಗಿ, ಎಲ್ಲಾ ಕಡೆಯೂ ಸಾಮೂಹಿಕ ಸ್ವಾತಂತ್ರ್ಯ ಗೀತೆಯಂತೆ ಪ್ರಸಿದ್ಧವಾಯಿತು. ನ್ಯಾಯಾಧೀಶರು ಪ್ರಕರಣದ ತೀರ್ಪನ್ನು ಅತ್ಯಂತ ಭದ್ರತೆಯಲ್ಲಿ ಲಕ್ಷ್ಮೀನಗರದ ರಿಂಗ್ ಥಿಯೇಟರ್‌ನಲ್ಲಿ ಓದಿದರು. ನಾಲ್ವರಿಗೆ ಮರಣದಂಡನೆಯ ಶಿಕ್ಷೆ ಕೊಟ್ಟರು.

ಕ್ರಾಂತಿ

ರಾಮ ಪ್ರಸಾದ ಬಿಸ್ಮಿಲ್,ಠಾಕೂರ್ ರೋಶನ್ ಸಿಂಗ್ ಅಶ್ಚಕ್ ಉಲ್ಲಾಖಾನ್, ರಾಜೇಂದ್ರ ಲಾಹರಿಯರು ಮರಣ ದಂಡನೆಯ ಗೌರವವನ್ನು ಪಡೆದರು. ಸಚೀಂದ್ರನಾಥ ಸನ್ಯಾಲ್ ಮತ್ತು ಜೋಗೇಶ ಚಟರ್ಜಿ ಯವರೊಂದಿಗೆ ಇನ್ನಿಬ್ಬರು ಜೀವಾವಧಿಯೊಂದಿಗೆ ಗಡಿಪಾರಿನ ಶಿಕ್ಷೆಯನ್ನು ಪಡೆದರು. ಇನ್ನು 12 ಕ್ರಾಂತಿಕಾರಿಗಳು 5 ರಿಂದ 14 ವರ್ಷಗಳ ಶಿಕ್ಷೆ ಪಡೆದರು. ಇವರಲ್ಲಿ ಭೂಪೇಂದ್ರ ನಾಥ ಸನ್ಯಾಲ್ ಸೇರಿದ್ದರು. ಬನಾರಸಿ ದಾಸಲಾಲ್ ಮತ್ತು ಇಂದು ಭೂಷಣ ಮಿತ್ರ ಮಾಫಿ ಸಾಕ್ಷಿದಾರರಾಗಿ ಕ್ಷಮಾದಾನವನ್ನು ಪಡೆದರು. ಉತ್ತರ ಪ್ರಾಂತ್ಯದ ವಿಧಾನ ಪರಿಷತ್ತು ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿಸುವಂತೆ ಗೊತ್ತುವಳಿಯನ್ನು ಅಂಗೀಕರಿಸಿತು. ಮದನ ಮೋಹನ ಮಾಳವೀಯರು ಈ ವಿಚಾರವಾಗಿ ವೈಸರಾಯ್‌ರವರನ್ನೂ ಭೇಟಿಯಾದರು. ಸರಕಾರವು ತನ್ನ ನಿರ್ಧಾರವನ್ನು ಬದಲಿಸಲಿಲ್ಲ.

ರಾಮಪ್ರಸಾದ ಬಿಸ್ಮಿಲ್ ಕೊನೆಯ ದಿನಗಳನ್ನು ತಮ್ಮ ಆತ್ಮಚರಿತ್ರೆ 'ಕ್ರಾಂತಿಕಾರಿ' ಯನ್ನು ಬರೆಯುವುದರಲ್ಲಿ ಕಳೆದರು. ಅವರು ಗಲ್ಲುಶಿಕ್ಷೆಯ ಮೊದಲು ತಮ್ಮನ್ನು ವರ್ಗಾಯಿಸಿದ ಕೋಣೆಯನ್ನು ಹೀಗೆ ವರ್ಣಿಸುತ್ತಾರೆ. “ಗೋರಖಪುರ ಸೆರೆಮನೆಯ ಗಲ್ಲು ಶಿಕ್ಷೆಯ ನಿರೀಕ್ಷಾ ಕೋಣೆಯು ಒಂದು ಒಣ ಸುಡುಮೈದಾನದ ಮಧ್ಯದಲ್ಲಿದ್ದಿತು. ನೆರಳಿನ ಮಾತೇ ಇರದ ನೆಲ. ಬೆಳಿಗ್ಗೆ 8ರಿಂದ ರಾತ್ರಿ ಶಿವರೆಗೆ ಆ ಕೋಣೆಯು ಸುಡುಬಿಸಿಲಿನ ಬೇಗೆಯಲ್ಲಿ ಇರುತ್ತಿತ್ತು. ಸುತ್ತಲಿನ ಮರಳಿನಿಂದಾಗಿ ಸೆಕೆ. ಆ ಕೋಣೆ 9ಅಡಿ X 9ಅಡಿ ಅಳತೆಯದ್ದು. ಅದಕ್ಕಿರುವುದು ಒಂದು ಬಾಗಿಲು, ಸ್ನಾನ ಶೌಚ ಮತ್ತು ಊಟವೆಲ್ಲವೂ ಅಲ್ಲೇ. ರಾತ್ರಿ ಸೊಳ್ಳೆಗಳದ್ದೇ ಸಾಮ್ರಾಜ್ಯ 3ಅಥವಾ4 ಗಂಟೆಗಳ ನಿದ್ರೆಯೂ ಇರುತ್ತಿರಲಿಲ್ಲ.”

18.12.1927ರಲ್ಲಿ ಬಿಸಿಲರನ್ನು ಗಲ್ಲಿಗೇರಿಸಲಾಯಿತು. ಬ್ರಿಟಿಷ್ ಸಾಮ್ರಾಜ್ಯವು ಅಳಿಯಲೆಂದು ನಾನು ಆಶಿಸುತ್ತೇನೆ” ಇದು ಅವರ ಕೊನೆಯ ಮಾತು. ರೋಶನ್ ಸಿಂಗ್ ಮತ್ತು ರಾಜೇಂದ್ರ ಲಾಹರಿಯರು ವಂದೇಮಾತರಂ ಗೀತೆಯನ್ನು ಹಾಡುತ್ತಾ ನೇಣಿನ ಬಳಿ ಹೋದರು. ಅವರ ಕೈಯಲ್ಲಿ ಭಗವದ್ಗೀತೆಯಿದ್ದಿತು. ಅಶ್ವಕ್ ಉಲ್ಲಾಖಾನ್ ಖುರಾನ್‌ನ್ನು ತಮ್ಮ ಕುತ್ತಿಗೆಯಲ್ಲಿ ತೂಗಿಸಿಕೊಂಡು ಪ್ರಾಣ ಬಿಟ್ಟರು. ಕುತ್ತಿಗೆಗೆ ನೇಣು ಹಾಕುವ ಮೊದಲು “ನಾನು ಭಾರತವನ್ನು ಸ್ವತಂತ್ರವನ್ನಾಗಿಸಲು ಪ್ರಯತ್ನಿಸಿದೆ. ನನ್ನ ಪ್ರಯತ್ನವು ನನ್ನ ಜೀವನದೊಂದಿಗೆ ಕೊನೆಯಾಗದು” ಎಂದು ಹೇಳಿ ನಗು ನಗುತ್ತಾ ಗಲ್ಲಿಗೇರಿದರು. ಪ್ರಾಣ ಬಿಡುವಾಗ ಬಿಸ್ಮಿಲ್ 30 ವರ್ಷದವರು. ಅಶ್ವಕುಲ್ಲಾರಿಗೆ 27, ರೋಶನ್ ಸಿಂಗ್ 35 ಮತ್ತು ಲಾಹಿರಿಗೆ ಬರೇ 26 ವಯಸ್ಸು.

ಕಾಕೋರಿ ಪ್ರಕರಣದ ಶಿಕ್ಷೆಯಿಂದ ಸನ್ಯಾಲ್ ಕುಟುಂಬವು ಛಿದ್ರವಾಗಿಬಿಟ್ಟಿತು. ಭೂಪೇಂದ್ರನಾಥ ಸನ್ಯಾಲ್ 5 ವರ್ಷಗಳ ಸೆರೆವಾಸವನ್ನು ಅನುಭವಿಸಲು ಹೋದರು. ಸಚೀಂದ್ರನಾಥ ಸಂನ್ಯಾಲ್ ಅಂಡಮಾನ್‌ ಈ ಪ್ರಕರಣದ ಶಿಕ್ಷೆಗೊಳಗಾಗಿ ಎರಡನೇಯ ಬಾರಿಗೆ ಗಡಿಪಾರಾದರು. ವಾರಣಾಸಿಯಲ್ಲಿದ್ದ ಕುಟುಂಬದ ಪಿತ್ರಾರ್ಜಿತ ಆಸ್ತಿಯೆಲ್ಲವೂ ಮುಟ್ಟುಗೋಲಾಯಿತು ಮತ್ತು ಸರ್ಕಾರವು ಬಲಾತ್ಕಾರದಿಂದ ವಶಪಡಿಸಿಕೊಂಡಿತು. ಇಡೀ ಕುಟುಂಬವು ತಮ್ಮ ಪೂರ್ವಜರ ಊರಾದ ಬೆಂಗಾಲಿ ಟೋಲಾ ಮತ್ತು ಮದನಪುರದಿಂದ ನೆಲೆ ಕಳೆದುಕೊಂಡಿತು. ಬೆಂಗಾಲಿ ತೋಲಾ ಇಂಟರ್ ಕಾಲೇಜಿನ ಗೋಡೆಯಲ್ಲಿ ಈಗಲೂ ಇರುವ ಫಲಕವೊಂದರಲ್ಲಿ ಸನ್ಯಾಲ್ ಕುಟುಂಬದ ಹಲವು ತಲೆಮಾರುಗಳ ಸ್ವಾತಂತ್ರ್ಯಯೋಧರ ಹೆಸರುಗಳು ಕಾಣಸಿಗುತ್ತಿವೆ. ಸಚಿಂದ್ರನಾಥರ ಸೋದರಮಾವ ಶ್ಯಾಮ ಚರಣ ಲಾಹರಿಯವರ ಮನೆಯು ಈಗಲೂ ಇದೆ.