Logo

VHP PUBLICATIONS

Hindu Vani


expand_more

ಪ್ರಸ್ತುತ

By ಶಾರದಾ ವಿ. ಮೂರ್ತಿ ಮೈಕೋ ಬಡಾವಣೆ, ಬೆಂಗಳೂರು

ನಾನು ನಾನೆಂಬ ಮೇಲ್ಮೆ

ನಿನ್ನ ಸ್ವಪ್ರತಿಷ್ಠೆಯೇ ನಿನ್ನ ದೊಡ್ಡ ಶತ್ರು' ಹಿರಿಯರ ಈ ಹೇಳಿಕೆಯನ್ನು ನಾವು ಗ್ರಹಿಸುವುದೇ ಇಲ್ಲ: ನಾನು ಹೇಳಿದ ಮಾತು ನಡೆಯಲೇಬೇಕು: ನನ್ನ ಮಾತನ್ನು ಎಲ್ಲರೂ ಕೇಳಲೇಬೇಕು; ನನ್ನ ವಿರುದ್ಧ ಯಾರೂ ಮಾತನಾಡಬಾರದು ನಾನು ಹೇಳುವುದೆಲ್ಲಾ ಸರಿಯಾಗಿಯೇ ಇದೆ. ಇಂತಹ ಅಭಿಪ್ರಾಯಕ್ಕೆ ನಾವು ಹೆಚ್ಚಿನವರು ಬದ್ಧರಾಗಿರುತ್ತೇವೆ.

ನಮ್ಮ ಅನಿಸಿಕೆಗಳನ್ನು ಬೇರೆಯವರ ಮೇಲೆ ಹೇರಿದಾಗ ಅವರಿಗಿದು ಇಷ್ಟವಾಗುವುದೇ ಇಲ್ಲವೋ ಅದೇ ರೀತಿ ಅವರು ಹೇಳಿದ್ದೆಲ್ಲವನ್ನೂ ನಾವು ಕೇಳುತ್ತೇವೆಯೇ ಎಂದೂ ಯೋಚಿಸಬೇಕಲ್ಲವೆ? ಯೋಚಿಸಿರುತ್ತಿದ್ದರೆ ಕೆಳಗೆ ಉದಾಹರಿಸುವ ಘಟನೆಗಳಿಗೆ ಅಸ್ಪದವೇ ಇರುವುದಿಲ್ಲವೇನೋ.

ಅಂದೊಮ್ಮೆ ನಾವು ಒಂದು ಸಮಾರಂಭಕ್ಕೆ ಹೋಗಿದ್ದವರು ಬಸ್‌ನಲ್ಲಿ ಮನೆಗೆ ಮರಳುತ್ತಿದ್ದೆವು. ವಯಸ್ಸಾದವರು ಬಸ್‌ನಲ್ಲಿ ಓಡಾಡುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಬಸ್‌ನಲ್ಲಿ ಜನಜಂಗುಳಿ ಕಡಿಮೆ ಇದ್ದರೆ, ನಾವು ಹೊರಡುವ ಸ್ಥಳದ ಸಮೀಪವೇ ಬಸ್ ಅನುಕೂಲವಿದ್ದರೆ ಆಗ ಬಸ್ಸಿನ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಬಸ್‌ನಲ್ಲಿ ಪ್ರಯಾಣಿಸುವ ಅಭ್ಯಾಸ ಹೋಗಬಾರದಲ್ಲ! ಊಬರ್, ಓಲೋಗಳಿಗೆ ಆ್ಯಪ್ ಮೂಲಕ ನೋಂದಣಿ ಮಾಡಿದರೂ ಬೇಗ ಸಿಕ್ಕುತ್ತದೆ ಎಂದು ಹೇಳಲಾಗದು ಒಮ್ಮೊಮ್ಮೆ ಬುಕ್ ಆಗಿದ್ದನ್ನು ರದ್ದು ಪಡಿಸುತ್ತಾರೆ. ಸಹನೆಯಿಂದ ಕಾಯುತ್ತಿರಬೇಕಷ್ಟೇ...

“ಉಚಿತ'ದ ಆಕರ್ಷಣೆಯಿಂದಾಗಿ ಬಸ್‌ನಲ್ಲಿ ಮಹಿಳೆಯರ ಓಡಾಟವು ತುಸು ಹೆಚ್ಚೇ ಆಗಿರುತ್ತದೆ. ಇನ್ನು ಬಸ್‌ನಿಲ್ದಾಣಗಳಲ್ಲಿ ಇಳಿಯುವಾಗಲೂ ಸಾಕಷ್ಟು ಎಚ್ಚರಿಕೆ ವಹಿಸಲೇ ಬೇಕಾಗುತ್ತದೆ. ಅಕ್ಕ ಪಕ್ಕಗಳಲ್ಲಿ ಓಡಾಡುವ ವಾಹನಗಳ ಭರಾಟೆ. ಅಂತಹ ವಾಹನ ದಟ್ಟಣೆಯಲ್ಲಿ ರಸ್ತೆ ದಾಟುವುದಂತೂ ಸಾಹಸದ ಕೆಲಸವೇ ಹೌದು. ಮೆಟ್ರೋ ಕಾಮಗಾರಿಯಿಂದಾಗಿ ರಸ್ತೆಯ ಗುಂಡಿಗಳು ಮತ್ತಷ್ಟು ಹೆಚ್ಚಾಗಿ ಓಡಾಡುವುದೇ ದುರ್ಭರ ಎನ್ನುವಂತಾಗಿದೆ. “ ವಯಸ್ಸಾದ್ಮಲೆ ಬಸ್‌ನಲ್ಲಿ ಯಾಕೆ ಓಡಾಡ್ತಾರೋ” ಎಂಬ ಮಾತನ್ನು ನಾವು ಕೇಳಿಯೂ ಕೇಳಿಸದಂತಿರಬೇಕಾದದ್ದು ಅನಿವಾರ್ಯವೆನಿಸುತ್ತದೆ. 66

ನಮ್ಮ ನಿಲುಗಡೆ ಬಂದಾಗ ಬೇಗ ಬೇಗ ಇಳಿದುಕೊಳ್ಳಿ ಎಂಬ ಕಂಡಕ್ಟರ್‌ನ ದನಿಗೆ ಬೇಗ ಇಳಿದುಕೊಳ್ಳಬೇಕಾದ ಅನಿವಾರ್ಯತೆ. ಅಂತೂ ಅಕ್ಕಪಕ್ಕ ನೋಡಿಕೊಂಡು ಇಳಿದುಕೊಂಡಾಗ ದೊಡ್ಡ ಸಾಹಸ ಮಾಡಿದ ಅನುಭವ. ಅಷ್ಟರಲ್ಲೇ ಮೈ ಜುಮ್ಮೆನ್ನುವಂತೆ ಎದುರಿನಲ್ಲಿ ರಾಂಗ್‌ ಸೈಡಿನಿಂದ ಒಬ್ಬಾತ ಸ್ಕೂಟರ್‌ನಲ್ಲಿ ಬರುತ್ತಿದ್ದಾರೆ. ತೀರಾ ನಮ್ಮ ಸಮೀಪದಲ್ಲೇ ಹೋಗುತ್ತಿದ್ದಾರೆ. ಭಯ ಹಾಗೂ ಗಾಬರಿಯಿಂದ ನಮ್ಮವರು ಆತನನ್ನು ಕೇಳಿಯೇ ಬಿಟ್ಟರು. “ನೀವು ಮಾಡುತ್ತಿರುವುದು ಸರಿಯೇ? ಅದರಲ್ಲೂ ಬಸ್ ಇಳಿದು ರಸ್ತೆ ದಾಟುತ್ತಿರುವಾಗ ಏನಾದರೂ ಹೆಚ್ಚು ಕಡಿಮೆಯಾದರೆ...

ಅದಕ್ಕೆ ಪ್ರತಿಯಾಗಿ ಕಂಗಳಲ್ಲಿ ಕೆಂಡಕಾರುತ್ತಾ ಆತನಾಡಿದ ಮಾತಿನ ರೀತಿ ಭಯ ಹುಟ್ಟಿಸಿತ್ತು. “ನನಗೆ ಬುದ್ದಿ ಹೇಳೀರಾ... ಈಗ ನಿಮಗೆ ಏನಾಯಿತು? ಸ್ಕೂಟರ್‌ನಿಂದ ನಿಮಗೆ ಗುದ್ದಿದ್ದೀನಾ? ನಾನು ಹೇಗೆ ಬಂದರೆ ನಿಮಗೇನು? ಕಾನೂನು ಎಲ್ಲಾ ನಿಮಗೆ ಮಾತ್ರ ಗೊತ್ತಿರೋದಾ?”

ಇನ್ನೇನಾದರೂ ಒಂದು ಮಾತನಾಡಿದರೂ ಆತ ಏನು ಮಾಡುವುದಕ್ಕೂ ಸಿದ್ಧ ಎಂಬಂತಿದ್ದ ಆತನ ಮಾತಿನ ಧಾಟಿ, ನೋಡಿ ನಾವೇ ಮೌನವಾದೆವು. ಕಡೆಯ ಪಕ್ಷ ಅಪರಾಧೀ ಮನೋಭಾವವಾದರೂ ಇದ್ದಿದ್ದರೆ ಆತನನ್ನು ಪ್ರಶ್ನಿಸಿದ ನಾವೇ ತಪ್ಪಿತಸ್ಥರಾಗುತ್ತಿದ್ದೆವು.

“ಇಂತಹವರಿಗೆ ಹೇಳಿ ಏನೂ ಪ್ರಯೋಜನವಿಲ್ಲ.” ಎಂದು ಒಂದಿಬ್ಬರು ಆತ ಹೋದ ನಂತರ ನಮ್ಮನ್ನು ಸಾಂತ್ವನಿಸುವವರಂತೆ ನುಡಿದಿದ್ದರು.ನಾನು ಮಾಡಿದ್ದೇ ಸರಿ ಎಂದು ತಮ್ಮ ಮನಸೋ ಇಚ್ಛೆ ನಡೆದುಕೊಳ್ಳುವವರು ಎಲ್ಲೆಲ್ಲಿಯೂ ಸಿಗುತ್ತಾರೆ. ನಾವೊಮ್ಮೆ ರಾಗಿಗುಡ್ಡ ದೇವಾಲಯಕ್ಕೆ ಹೋದಾಗ ನಡೆದ ಘಟನೆಯಿದು. ದೇವಾಲಯದ ವಿಶಾಲವಾದ ಪ್ರಾಂಗಣದ ಒಂದು ಬದಿಯಲ್ಲಿ ಬ್ರಹ್ಮ, ವಿಷ್ಣು, ಶಿವ ಹೀಗೆ ತ್ರಿಮೂರ್ತಿಗಳನ್ನು ಅಲ್ಲಿರುವ ದೊಡ್ಡ ಬಂಡೆಯಲ್ಲೇ ಸುಂದರವಾಗಿ ಕೆತ್ತಿದ್ದಾರೆ. ಪೋಟೋ ತೆಗೆಯುವುದು ನಿಷಿದ್ಧ! ಎಂದು ಪಕ್ಕದಲ್ಲಿ ಫಲಕವನ್ನು ಹಾಕಿದ್ದಾರೆ. ಹಾಗಿದ್ದರೂ ಕೆಲವರು ಫೋಟೋ ತೆಗೆಯುತ್ತಲೇ ಇದ್ದರು.

ಆಗ ಸುಮ್ಮನಿರಲಾಗದೆ ಆ ಬೋರ್ಡನ್ನು ನಾವು ಅವರಿಗೆ ತೋರಿಸಿದ್ದೆವು. ಅವರ ಕೆಂಪಾದ ಮುಖ ಅವರಿಗೆ ಬಂದಿರುವ ಸಿಟ್ಟನ್ನು ಪ್ರತಿಬಿಂಬಿಸುವಂತಿತ್ತು. ಹಾಗೆಯೇ ಖಾರವಾದ ಪ್ರತಿಕ್ರಿಯೆ ಬಂದೂ ಬಿಟ್ಟಿತ್ತು. “ನಿಮ್ಮ ವಯಸ್ಸು ನೋಡಿ ಸುಮ್ಮನೆ ಬಿಟ್ಟಿದ್ದೀವಿ. ನಿಮ್ಮ ಕೆಲಸ ಎಷ್ಟೋ ಅಷ್ಟು ಮಾಡಿಕೊಂಡು ಹೋಗುವುದನ್ನು ಇನ್ನಾದರೂ ಕಲಿತುಕೊಳ್ಳಿ”. ಅವರು ಕಿಡಿಕಾರಿದಾಗ ನಾವೇ ಏನಾದರೂ ತಪ್ಪು ಮಾಡಿದೆವೇನೋ ಎಂದು ತಳಮಳಿಸುವಂತಾಗಿತ್ತು. ಅವರ ನಾನು ಎಂಬ ಪ್ರತಿಷ್ಠೆಗೆ ದುರಭಿಮಾನಕ್ಕೆ ನಾವು ದೊಡ್ಡ ತಪ್ಪು ಮಾಡಿದ್ದೆವಲ್ಲ!

ಮತ್ತೊಮ್ಮೆ ಇಂತಹುದೇ ಮುಜುಗರದ ಪ್ರಸಂಗ ತಂದುಕೊಂಡಿದ್ದೆ ನಾನು. ನಮ್ಮ ಪಕ್ಕದ ಮನೆಯವರು ತಮ್ಮ ಮನೆಯ ಹೊರಗೆ ಚಂದದ ಗಿಡಗಳನ್ನು ಬೆಳೆಸಿದ್ದಾರೆ. ತುಳಸಿ, ಪಚ್ಚೆತೆನೆ ಕಾಮಕಸ್ತೂರಿ, ಕರ್ಣಕುಂಡಲ, ಕಾಶಿ ತುಂಬೆಯಂತಹ ಗಿಡಗಳು ಚೆನ್ನಾಗಿ, ಸೊಂಪಾಗಿ ಬೆಳೆದಿವೆ. ಅದೊಂದು ದಿನ ಮುಂಜಾವಿನ ನಸುಗತ್ತಲು ನಿಧಾನವಾಗಿ ಸರಿಯುತ್ತಿರುಯವಾಗ ಪೂಜೆಗೆ ಹೂಬಿಡಿಸುತ್ತಿದ್ದೆ. ಪಕ್ಕದ ಮನೆಯ ಮುಂದಿರುವ ಹೂಗಿಡಗಳ ಬಳಿ ಮಹಿಳೆಯೊಬ್ಬರು ಬಗ್ಗಿ, ಏನೋ ಮಾಡುತ್ತಿರುವುದು ಕಂಡು ಅಚ್ಚರಿಯಿಂದ ಬಾಗಿ ನೋಡಿದ್ದೆ. ಆಕೆಯ ಮುಖ ಸರಿಯಾಗಿ ಕಾಣಿಸದಿದ್ದರೂ ಕೈಯಲ್ಲಿದ್ದ ಪುಟ್ಟ ಪುಟ್ಟ ಸಸಿಗಳು ಕಂಡಿದ್ದವು. ಸುಮ್ಮನಿರಲಾಗಿರಲಿಲ್ಲ ನನಗೆ. “ಪಕ್ಕದ ಮನೆಯವರು ಕಷ್ಟಪಟ್ಟು ಬೆಳೆಸಿದ್ದನ್ನು ಯಾಕೆ ಕಿಳ್ತಾ ಇದ್ದೀರಿ. ನಿಮಗೆ ಬೇಕಾದರೆ ಅವರನ್ನೇ ಕೇಳಿ ತೆಗೆದುಕೊಳ್ಳಬಹುದಲ್ಲ.

ನನ್ನ ಮಾತಿನಿಂದ ಅವಮಾನಗೊಂಡವರಂತೆ ಮುಖ ಹುಳ್ಳಗೆ ಮಾಡಿಕೊಂಡು ಸಿಟ್ಟಿನಿಂದ ಆ ಮಹಿಳೆ ನನ್ನತ್ತ ದೃಷ್ಟಿಸಿದಾಗ ಆಕೆಯ ಗುರುತು ಸಿಕ್ಕಿತ್ತು. ನಮ್ಮ ರಸ್ತೆಯಿಂದ ಎರಡು ಕ್ರಾಸ್ ಪಕ್ಕದಲ್ಲಿರುವವರು ಅವರೆಂದು ಗೊತ್ತಿದ್ದರೆ ನಾನು ಹಾಗೆ ಹೇಳುವ ಸಾಹಸಕ್ಕೆ ಹೋಗುತ್ತಿರಲಿಲ್ಲ. ಆದರೆ ನಾನಂತೂ ಆಡಿದ ಮಾತನ್ನು ಹಿಂತೆಗೆದುಕೊಳ್ಳುವಂತಿರಲಿಲ್ಲ.

“ಏನೋ ಮನೆ ಹೊರಗಡೆ ಇತ್ತಲ್ಲ. ಮನೆಯಲ್ಲಿ ಚೆನ್ನಾಗಿ ಬೆಳೆಸೋಣವೆಂದು ಒಂದೆರಡು ಸಸಿಗಳನ್ನು ತಗೊಂಡೆ, ಅಷ್ಟಕ್ಕೂ ಗಿಡಗಳು ನಿಮ್ಮದಲ್ಲವಲ್ಲ.. ಎನ್ನುತ್ತಾ ಕೆನ್ನೆಗೆ ರಾಚಿದಂತೆ ಮುಖ ದುಮ್ಮಿಸಿಕೊಂಡು ಹೋಗಿದ್ದರು. ಆದರೆ ಕೈಯಲ್ಲಿದ್ದ ಗಿಡಗಳನ್ನು ಹಿಡಿದುಕೊಂಡೇ ಹೋಗಿದ್ದರು. ಈ ಘಟನೆಯಾದ ನಂತರ ನಾವು ಒಬ್ಬರಿಗೊಬ್ಬರು ಮುಖಾಮುಖಿಯಾದರೂ ಅವರು ಮುಖ ತಿರುಗಿಸಿಕೊಂಡು ಹೋಗಿಬಿಡುತ್ತಾರೆ. ಒಟ್ಟಾರೆ ಯಾರ ಅಹಂಗೂ ನೋವುಂಟು ಮಾಡಬಾರದು! ಅಂತೂ 'ನಾನು' ಎಂಬುದಕ್ಕೆ ಬಹಳ ಗೌರವ ಸಲ್ಲಿಸಬೇಕು.

ಆದರೆ ಇತ್ತೀಚೆಗೆ ಪತ್ರಿಕೆಯಲ್ಲಿ ಅನೇಕರು ಓದಿರಬಹುದಾದ ಒಂದು ಘಟನೆಯಂತೂ ತೀರಾ ಹೇಯವಾದದ್ದು. ಮಡದಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವರು ತುಸುದೂರದಲ್ಲಿ ಕಾರು ನಿಲ್ಲಿಸಿದರು. ಕಿಟಕಿಯಿಂದಲೇ ಪಕ್ಕದಲ್ಲಿ ಮಡದಿಯೊಂದಿಗೆ ನಿಂತಿದ್ದ ವ್ಯಕ್ತಿಯ ಬಳಿ ತಮಗೆ ಸಿಗರೇಟ್ ತಂದು ಕೊಡುವಂತೆ ಆಜ್ಞೆ ಮಾಡಿದರು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಬೇರೆ ಯಾರೇ ಆದರೂ ಹಾಗೇ ಮಾಡುತ್ತಿದ್ದರಷ್ಟೇ! ಯಾವುದೋ ಅಗತ್ಯ ವಸ್ತುವೋ, ಔಷಧವೋ, ನೀರೋ ಆಗಿದ್ದರೆ, ಕೇಳುವವರಿಗೆ ವಯಸ್ಸಾಗಿದ್ದು ತುರ್ತು ಅವಶ್ಯಕತೆಯಿದ್ದು ಇಳಿಯುವುದು ತೊಂದರೆಯಾಗಿದ್ದರೆ ಸ್ಪಂದಿಸಬಹುದೇನೋ.. ಯಾರೋ ಅಪರಿಚಿತ ವ್ಯಕ್ತಿ ಸಿಗರೇಟ್ ತಂದುಕೊಡುವಂತೆ ದರ್ಪ ತೋರಿದರೆ ನಿರ್ಲಕ್ಷ್ಯವೇ ಅದಕ್ಕೆ ಉತ್ತರವಾದೀತು. ನಮ್ಮಲ್ಲಿ ಹೆಚ್ಚಿನವರು ಬೇರೆಯವರಿಗೆ ಸಹಾಯದ ಅವಶ್ಯಕತೆ ಇದ್ದಾಗ, ತಮ್ಮಿಂದ ಸಾಧ್ಯವಾಗುವುದಾದರೆ ಯಾವುದೇ ಅಪೇಕ್ಷೆಯಿಲ್ಲದೆ ಸಹಾಯ ಮಾಡುತ್ತಾರೆ. ಆದರೆ ಹಣ ಅಹಂಕಾರ, ದರ್ಪ, ದುಶ್ಚಟಗಳಿಗೆ ಮಣೆಹಾಕುವುದು ಅನೇಕರಿಗೆ ಹಿಡಿಸದು.

ಅಂತೆಯೇ ಸಿಗರೇಟ್ ತಂದುಕೊಡಲು ನಿರಾಕರಿಸಿದ ವ್ಯಕ್ತಿ ತಮ್ಮ ಪತ್ನಿಯೊಂದಿಗೆ ಸ್ಕೂಟರ್‌ನಲ್ಲಿ ಹೊರಟಿದ್ದರು., ತನಗೆ ಅವರಿಂದ ಅವಮಾನವಾಗಿದೆಯೆಂದು ಭಾವಿಸಿದ ಈ ಮನುಷ್ಯ ಕಾರಿನಲ್ಲಿ ವೇಗವಾಗಿ ಸ್ಕೂಟರಿನವರನ್ನು ಹಿಂಬಾಲಿಸತೊಡಗಿದ್ದರು. ಅವರ ಮಡದಿಯೂ ಭಯದಿಂದ ಪತಿಯು ಹಿಂಬಾಲಿಸುವುದನ್ನು ವಿರೋಧಿಸುತ್ತಿದ್ದರು. ಆತ ಅದನ್ನು ಗಮನಿಸಲೂ ಇಲ್ಲ ಕೊನೆಗೆ ಅತ್ಯಂತ ವೇಗವಾಗಿ ಹೋಗಿ ಸ್ಕೂಟರಿಗೆ ಡಿಕ್ಕಿ ಹೊಡೆದು ಅವನನ್ನು ಸಾಯಿಸಿಯೇ ಬಿಟ್ಟ. ಆದರೂ ಆತನಿಗೆ ಏನೂ ಅನ್ನಿಸಲೇ ಇಲ್ಲವೇನೋ.. ತಾನು ಹೇಳಿದ್ದನ್ನು ಆ ವ್ಯಕ್ತಿ ಕೇಳಲಿಲ್ಲವೆಂಬುದೇ ದೊಡ್ಡ ಅವಮಾನವಾಗಿ ಅವನನ್ನೇ ಇಲ್ಲವಾಗಿಸುವವರೆಗೂ ಎಳೆದುಕೊಂಡು ಹೋಯಿತು. ನೆತ್ತರ ಹೊಳೆಯಲ್ಲಿ ಇಬ್ಬರು ಮಡದಿಯರ ಅಕ್ರಂದನ ಕರುಳು ಬೇಧಿಸುವಂತಿತ್ತು. ಆ ವ್ಯಕ್ತಿಯ ಬಂಧನವೂ ಆಯಿತು. ಎರಡು ಕುಟುಂಬಗಳ ಭವಿಷ್ಯವೂ ಅಯೋಮಯವಾಗಿತ್ತು.

ತನ್ನದೇನೋ ತಪ್ಪಿಲ್ಲದಿದ್ದರೂ ಕೊಲೆಯಾದ ದುರ್ದೈವಿಯೊಂದಿಗೆ ಆತನ ಮಡದಿಗೂ ಬದುಕೇ ಕರಾಳವಾಯಿತು.ಕೇವಲ 'ನಾನು' ಎಂಬ ಪ್ರತಿಷ್ಠೆ ದುರಂಹಕಾರ, ದುಡುಕು ಆತನಿಂದ ಇಂತಹ ಹೀನಕೃತ್ಯ ಎಸಗುವಂತೆ ಮಾಡಿತ್ತು.

ನಮ್ಮ ಆತ್ಮೀಯರೊಬ್ಬರ ಮಗನದ್ದು ತುಸು ವಿಚಿತ್ರ ಸ್ವಭಾವ. ನಮ್ಮಂತ ಸಾಮಾನ್ಯರಿಂದ ಅವರು ಸದಾ ಅಂತರ ಕಾಯ್ದುಕೊಳ್ಳುತ್ತಾರೆ. ಸಂಗೀತ, ವೀಣೆಯನ್ನು ಆಸಕ್ತರಿಗೆ ಶುಲ್ಕ ತೆಗೆದುಕೊಂಡು ಹೇಳಿಕೊಡುವ ಇವರು ಸಣ್ಣ ಪುಟ್ಟ ಕಛೇರಿಗಳನ್ನು ಕೊಡುತ್ತಾರೆ. ತಾವು ವಿದ್ವಾಂಸರಾಗಿದ್ದು ಎಲ್ಲರೊಂದಿಗೆ ಸೇರಬಾರದೆಂಬುದು ಅವರ ಅವರ ಇಂಗಿತವೇನೋ? ಆದ್ದರಿಂದಲೇ ನಾವು ಎದುರಿಗೆ ಸಿಕ್ಕರೂ ಮಾತು, ಮುಗಳಗು ಯಾವುದೂ ಇಲ್ಲ. ಕರೆಗಂಟೆ ಮಾಡಿದರೂ ಬಂದು ಬಾಗಿಲು ತೆಗೆಯುವುದಾಗಲಿ, ಒಳಗೆ ಕರೆಯುವುದಾಗಲಿ ಇಲ್ಲವೇ ಇಲ್ಲ. ಅವರ ಸ್ವಭಾವ ಗೊತ್ತಿದ್ದರೂ ಇವರೇಕೆ ಹೀಗೆ ಎಂದು ಮನಸ್ಸು ಮತ್ತೆ ಪ್ರಶ್ನಿಸುತ್ತದೆ. ತುಂಬಿದ ಕೊಡ ಖಂಡಿತ ತುಳುಕದಲ್ಲವೆ..

ದೇವಸ್ಥಾನಗಳಲ್ಲಿ ವಿಧಿಸಿರುವ ವಸ್ತ್ರ ಸಂಹಿತೆಯ ಬಗ್ಗೆಯೂ ಕೆಲವರಿಗೆ ಅಸಹನೆ. ದೇವರ ದರ್ಶನಕ್ಕೆ ಯಾವ ಉಡುಪು ಹಾಕಿಕೊಂಡರೆ ಏನೂ? ಭಕ್ತಿ ಮುಖ್ಯವಷ್ಟೇ; ಇವರು ಹೀಗೇಕೆ ಕಟ್ಟುಕಟ್ಟಳೆ ವಿಧಿಸಬೇಕು ಎಂಬ ಉಡಾಫೆಯ ಮಾತು ಕೆಲವರದು. ಒಟ್ಟಾರೆ ನಾನು ಏನು ಮಾಡಿದರೂ ಯಾರೂ ಟೀಕಿಸಬಾರದು, ಬದಲು ನುಡಿಯಬಾರದು. ಎಂಬ ಅಭಿಮತ. ಒಟ್ಟಾರೆ ನಮ್ಮ ಬಗ್ಗೆ ನಮಗೆ ಅಭಿಮಾನ ಇರುವುದು ಒಳ್ಳೆಯದಾದರೂ ದುರಭಿಮಾನದಿಂದ ನಮಗೆ ಹಾನಿಯಾಗುವುದು ನಿಶ್ಚಿತ. ಹೀಗೆಲ್ಲಾ ಯೋಚಿಸುವಾಗ ರಾವಣ, ದುರ್ಯೋಧನರು ಎದುರು ಬಂದು ಬಿಡುತ್ತಾರೆ. 'ನಾನು ಒಮ್ಮೆ ಹೇಳಿದ ಮಾತನ್ನು ಹಿಂತೆಗೆದುಕೊಳ್ಳುಲಾರೆ. ನನ್ನ ಪ್ರವೃತ್ತಿಯನ್ನು ಬದಲಾಯಿಸಿಕೊಳ್ಳಲಾರೆ.' ಎಂಬ ಹಟಕ್ಕೆ ಇಬ್ಬರೂ ಬದ್ದರು.

ಜಾನಾಮಿ ಧರ್ಮಂ ನಚಮೇ ಪ್ರವೃತ್ತಿ :

ಜಾನಾಮ್ಯಧರ್ಮಂ ನಚಮೇ ನಿವೃತ್ತಿ:

ಹೀಗೆ ದುರ್ಯೋಧನನು ತಾನು ಅಧರ್ಮದ ಹಾದಿ ಹಿಡಿದಿದ್ದೇನೆಂದು ತಿಳಿದಿದ್ದರೂ ಅದನ್ನು ಬಿಟ್ಟು ಧರ್ಮದ ಹಾದಿಯಲ್ಲಿ ಹೋಗಲು ಇಚ್ಛಿಸುವುದಿಲ್ಲ. ಅವನ ದುರಭಿಮಾನವೇ ಅವನಿಗೆ ಮೃತ್ಯುವಾಯಿತು. ಅದೇ ರೀತಿಯಲ್ಲಿ ತಮ್ಮ ವಿಭೀಷಣ ಅಣ್ಣ ರಾವಣನಿಗೆ ತನ್ನ ತಪ್ಪನ್ನು ತಿದ್ದಿಕೊಂಡು ಸೀತೆಯನ್ನು ರಾಮನಿಗೊಪ್ಪಿಸುವಂತೆ ಪರಿಪರಿಯಾಗಿ ಕೇಳಿಕೊಂಡನು. ರಾವಣ ಒಪ್ಪಲಿಲ್ಲ. ಬದಲಾಗಿ ವಿಭೀಷಣನಿಗೆ ಗಡಿಪಾರಿನ ಶಿಕ್ಷೆ ವಿಧಿಸುತ್ತಾನೆ. ಮಡದಿ ಮಂಡೋದರಿಯು ನಾನಾ ಬಗೆಯಲ್ಲಿ ತಿಳಿಸಿ ಹೇಳಿದರೂ ಕರಗಲಿಲ್ಲ. ಯುದ್ಧದಲ್ಲಿ ಮಕ್ಕಳನ್ನೆಲ್ಲಾ ಕಳೆದುಕೊಂಡರೂ, 'ನಾನು' ಎಂಬ ಪ್ರತಿಷ್ಠೆ ಬಿಡಲಿಲ್ಲ. ಕೊನೆಗೂ ಅವನ ದರ್ಪ, ಅಹಂಕಾರ, ದುರಭಿಮಾನವೆಲ್ಲಾ ಮರಣದಲ್ಲಿ ಸಮಾಪ್ತಿಯಾಯಿತು.

ಹೀಗೆ ತಮ್ಮ ಮೂಗಿನ ನೇರಕ್ಕೆ ನಡೆಯುವವರು ಬೇರೆಯವರಿಗೆ ತಮ್ಮಿಂದ ತೊಂದರೆಯಾದೀತೆಂದು ಯೋಚಿಸುವುದಿಲ್ಲ. ಬೇರೆಯವರು ಅವರಿಗೇನೂ ಹೇಳಕೂಡದು. ಕಾನೂನು ಪಾಲಿಸದಿರುವುದಂತೂ ಅವರ ಜನ್ಮಸಿದ್ಧ ಹಕ್ಕು.

ನಾನು ಹೋಗಿ ನಾವು ಆಗಿ ಎಲ್ಲರ ಬಗ್ಗೆಯೂ ಯೋಚಿಸುವಂತಾದರೆ.. ಅವರಿಗೆ ಆಗುವ ದುಃಖ, ಅವಮಾನ, ನೋವು ನಮಗೂ ಸೇರಿದ್ದು ಎಂದು ಚಿಂತಿಸುವಂತಾದರೆ ? ಹಾಗಾಗಲಿ ಎಂದು ಆಶಿಸೋಣವೇ.........