Hindu Vani
Index
ಸೂಕ್ತಿಶ್ರೀ
ಜೀವನದ 9 ದಾಕ್ಷಿಣ್ಯಗಳು
ಆಯುರ್ವಿಂ ಗೃಹಚ್ಚಿದ್ರಂ ಸಾಹಸಂ ಮಂತ್ರಮೌಷಧಂ।
ತಪೋ ದಾನವಮಾನೌ ಚ ನವ ಗೋಪ್ಯಾನಿ ಕಾರಯೇತ್॥
- ಉಚಿತ ಪದ್ಯಮಾಲಿಕಾ
“ಆಯುಸ್ಸು, ಹಣ, ಮನೆಯ ಒಡಕುಗಳು, ದುಡುಕು ಸ್ವಭಾವವು ಉಂಟುಮಾಡುವ ಎಡವಟ್ಟುಗಳು.ಯೋಜನೆಯಲ್ಲಾದ ವಿಫಲತೆ, ಔಷಧದ ಸಫಲತೆ, ಮಾಡಿದ ಪ್ರಯತ್ನ, ಕೊಟ್ಟ ದಾನ, ಆದ ಅವಮಾನಗಳು ಈ ಒಂಬತ್ತನ್ನು ಗುಟ್ಟಾಗಿ ಇಟ್ಟಿರಬೇಕು.”
ಆಯುಸ್ಸು ಖಚಿತವಾಗಿ ಅರಿತಿರುವ ವಿಚಾರವಲ್ಲ. ಆದರೆ ಬದುಕು ಅಸ್ಥಿರವೆಂದಾಗಲೀ ಇಂದೋ ನಾಳೆಯೋ ಮುಗಿದು ಹೋಗುವುದೆಂದಾಗಲೀ ತಳೆಯುವ ವೈರಾಗ್ಯದ ನಿಲುವು ಮಾತ್ರ ಸರಿಯಲ್ಲ. ಅದೇ ಕಾಲದಲ್ಲಿ ತಾನು ಚಿರಾಯು ಎನ್ನುವ ಅಹಂಕಾರದ ಬದುಕು ಕೂಡಾ ಯುಕ್ತವಲ್ಲ. ಈ ಎರಡೂ ತದ್ವಿರುದ್ಧ ವಾಸ್ತವಗಳು. ಇಂತಹದೊಂದು ಜಾಗರೂಕತೆಯಂತೂ ಬೇಕೆ ಬೇಕು.
ಇನ್ನು ಹಣದ ಸ್ಥಿತಿಗತಿಯನ್ನು ಪರರಿಗೆ ಹೇಳುವುದು ವ್ಯಾವಹಾರಿಕ ಜಗತ್ತಿನಲ್ಲಿ ಸರಿಯೆನಿಸದು. ಕೆಲವರು ಪರಿಸ್ಥಿತಿಯನ್ನು ಯಾವ ರೀತಿಯಲ್ಲಿ ದುರುಪಯೋಗಿಸಿಕೊಂಡಾರು ಎನ್ನುವುದು ಊಹಿಸಲೂ ಕೆಲವೊಮ್ಮೆ ಸಾಧ್ಯವಾಗದು.
ಮನೆಯ ಮಾತು, ಅಡಿದಾಗಲೂ ಅಥವಾ ಅನಂತರವೂ ಮನೆ ಮಂದಿಗೆ ಮಾತ್ರ ಅರ್ಥವಾಗಬಲ್ಲುದು. ಉಳಿದವರಿಗೆ ಅದು ಅನರ್ಥವಾಗಿ ಕೇಳಬಹುದು. ಆದುದ್ದರಿಂದ ಮನೆಯಲ್ಲಿ ನಡೆದ ಮಾತುಗಳು ಮನೆಯೊಳಗೆ ಸೀಮಿತಗೊಳ್ಳಬೇಕು. ಅದು ಹೊರಹೋಗುವುದು ಸೂಕ್ತವಲ್ಲ. ಮನೆಯೊಳಗೆ ಭೇದಗಳು ಉಂಟಾಗುತ್ತವೆ. ಅದು ಸಾರ್ವಜನಿಕವಾಗುವುದು ಆರೋಗ್ಯಕರವಾದ ಬೆಳವಣಿಗೆಯಲ್ಲ.
ಕೆಲವೊಮ್ಮೆ ನಮ್ಮ ದುಡುಕು ಸ್ವಭಾವವು ಹಲವು ಅನಿರೀಕ್ಷಿತಗಳಿಗೆ ಎಡೆಮಾಡಿಕೊಡುತ್ತದೆ. ಅವುಗಳ ಪರಿಣಾಮಗಳೂ ಕೂಡಾ ಹಾಗೆಯೇ ಇರುತ್ತವೆ. ಅವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಸರಿಯೂ ಅಲ್ಲ. ಅವುಗಳಿಂದ ಯಾವುದೇ ನಿರೀಕ್ಷಿತ ಉದ್ದೇಶಗಳು ಈಡೇರವು. ಹಾಗಿರುವಾಗ ಅವನ್ನು ಸಾರ್ವಜನಿಕವಾಗಿಸುವುದರಿಂದ ಉಪಯೋಗವೇನು?
ಮಂತ್ರಗಳು ಪವಿತ್ರವಾದವುಗಳು. ಅವು ಗುರುಗಳಿಂದ ಉಪದೇಶಿತವಾಗಿರುತ್ತವೆ. ಅವು ಅವರವರ ಮನಸ್ಸು ಶಕ್ತಿಗಳಿಗೆ ಯುಕ್ತವಾಗಿಸಿ ನೀಡಲಾಗಿರುತ್ತವೆ. ಹಾಗಿರುವಾಗ ಅವನ್ನು ಇನ್ನೊಬ್ಬರಿಗೆ ತಿಳಿಯಪಡಿಸುವುದು ಗುರುಗಳನ್ನು ಅವಮಾನಿಸಿದಂತೆ. ಮಂತ್ರಾಲೋಚನೆ ಎನ್ನುವುದರಲ್ಲಿ ರಾಜಕೀಯ ರಹಸ್ಯಗಳೂ ಅಡಗಿರುತ್ತವೆ. ಇದನ್ನು ಸಂಬಂಧಿಸದವರಿಗೆ ತಿಳಿಸುವುದೂ ದ್ರೋಹ ಕಾರ್ಯವಾಗುತ್ತದೆ.
ಔಷಧಿಯನ್ನಂತೂ ಗೌಪ್ಯವಾಗಿಡುವುದು ವೈದ್ಯ ಪದ್ಧತಿಯಲ್ಲೊಂದು ಸಾಮಾನ್ಯ ಶಿಷ್ಟಾಚಾರವಾಗಿ ಬಿಟ್ಟಿತ್ತು. ಇದರಿಂದ ಬಹುದೊಡ್ಡ ನಷ್ಟವೂ ಸಂಭವಿಸಿದೆ. ವೈದ್ಯರು ಗತಿಸಿದ ನಂತರ ಅಂತಹ ಔಷಧಿಗಳ ಪರಿಚಯವಿಲ್ಲದೆ ಹಲವು ವೈದ್ಯಕೀಯ ಜ್ಞಾನವು ಕಳೆದು ಹೋದುದಿವೆ. ಕೆಲವೊಮ್ಮೆ ಅತಿ ಪ್ರಬಲ ವ್ಯಾಧಿಗಳಿಗೆ ರಾಮಬಾಣವಾದುದು ಅತಿ ಸಾಮಾನ್ಯವಾದ ಉಪಚಾರವಾಗಿರುತ್ತದೆ. ಬೆಲೆಯೂ ಅತಿ ಕನಿಷ್ಠವಾಗಿರುತ್ತದೆ. ರೋಗಿಯು ಅದನ್ನು ಬಹಳ ಭಯ ಭಕ್ತಿಗಳಿಂದ ಸೇವಿಸುತ್ತಾನೆ. ಇಂದಿನ ಪ್ರಚಾರ ಯುಗದಲ್ಲಿ ಬೆಲೆಯುಳ್ಳದ್ದು ಮಾತ್ರ ಪ್ರಭಾವಶಾಲಿ ಎನ್ನುವ ನಂಬಿಕೆ ಇದೆ. ಹಾಗಿರುವಾಗ ರೋಗಿಯ ನಂಬಿಕೆಯನ್ನು ಕೆಡಿಸಿ ಪರಿಣಾಮವನ್ನು ಹಾಳುಗೆಡಿಸುವುದು ಸಲ್ಲದು.
ತಪಸ್ಸು ಎನ್ನುವುದು ಅವರವರು ಗಳಿಸಿದ ಸಾಧನೆ. ಅದನ್ನು ಹೇಳುವುದೆಂದರೆ ಅದು ಹೆಗ್ಗಳಿಕೆಯ ಪ್ರಚಾರವೆನಿಸುತ್ತದೆ. ಅದಕ್ಕಾಗಿಯೇ ತಪಸ್ಸನ್ನು ಏಕಾಂತದಲ್ಲಿ ನಿರ್ಜನ ಪ್ರದೇಶದಲ್ಲಿ ಮಾಡುವುದು. ಅದೇರೀತಿ ಪುಣ್ಯವು ಕೂಡಾ. ಮಾಡಿದ ದಾನವನ್ನು ಮರೆತು ಬಿಡುವುದೂ ಕೂಡಾ ನಮ್ಮ ನೆಲದ ಪರಂಪರೆ, ಬಲಗೈ ನೀಡಿದುದು ಎಡಗೈಗೂ ತಿಳಿಯಬಾರದು ಎನ್ನುವುದು ಪ್ರಚಲಿತದಲ್ಲಿರುವ ಮಾತು. ದಾನದ ಪ್ರಚಾರ ಮಾಡಿದರೆ ದಾನದಪುಣ್ಯ ಕುಂಠಿತವಾಗುತ್ತದೆ ಎನ್ನುವ ಪ್ರತಿಬಂಧಕದ ಎಚ್ಚರಿಕೆಯೂ ಇದೆ. ಇನ್ನು ಅವಮಾನವಾದ ಸಂದರ್ಭಗಳನ್ನು ಬಹಿರಂಗ ಪಡಿಸಬಾರದು ಎನ್ನುವ ಮಾತಿದೆ. ಹಾಗಾದಾಗ ತಾವೂ ತಿಳಿದವರೇನೋ ಸುಮ್ಮನಿರಬಹುದು. ಆದರೆ ಮೂರ್ಖರು ಇದನ್ನೇ ನೆಪವಾಗಿಸಿ ಅವಮಾನಿಸಲು ಪ್ರಾರಂಭಿಸುವರು. ಸುಭಾಷಿತಗಳು ನಿತ್ಯ ಜೀವನದಲ್ಲಿ ಬೀರುವ ಪ್ರಭಾವಗಳು ಹೀಗಿರುತ್ತವೆ.