Hindu Vani
Index
expand_more
ವಚನಗಳು
.
ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ ಆಲಿಕಲ್ಲ ಹಸೆಯ ಹಾಸಿ ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದನು, ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ, ಚನ್ನಮಲ್ಲಿಕಾರ್ಜುನನೆಂಬ ಗಂಡಗೆನ್ನ ಮದುವೆ ಮಾಡಿದರು.
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಂಗಳಿಗಂಜಿದಡೆಂತಯ್ಯಾಸಮುದ್ರದ ತಡಿಯಲ್ಲಿ ಮನೆಯ ಮಾಡಿ ನೊರೆ ತೆರೆಗಳಿಗಂಜಿದಡೆಂತಯ್ಯಾಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ! ಚನ್ನಮಲ್ಲಿಕಾರ್ಜುನದೇವ ಕೇಳಯ್ಯಾ! ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು!!
ಗಿರಿಯಲ್ಲದೆ ಹುಲ್ಲು ಮೊರಡಿಯಲ್ಲಾಡುವುದೆ ನವಿಲು? ಕೊಳನಲ್ಲದೆ ಕಿರಿವಳ್ಳಳಸುವುದೆ ಹಂಸೆ? ಮಾಮರ ತಳಿರಲ್ಲದೆ ಸ್ವರಗೈವುದೆ ಕೋಗಿಲೆ? ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ? ಎನ್ನ ದೇವ, ಮಲ್ಲಿಕಾರ್ಜುನನಲ್ಲದೆ ಅನ್ಯಕ್ಕೆಳಸುವುದೆ ಎನ್ನ ಮನ?
- ಅಕ್ಕಮಹಾದೇವಿ