Hindu Vani
Index
ಪ್ರಸ್ತುತ
ಯಾವಾಗಲೂ ಹೀಗೇ
ಕಳೆದ ವಾರವಷ್ಟೆ ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆವು. ಆ ವಾರದಲ್ಲಿ ಒಂದು ದಿನ ರಜೆ ಹಾಕಿದರೆ ನಾಲ್ಕು ದಿನ ರಜೆ ಸಿಗುವಂತಿತ್ತು. ಮಕ್ಕಳಿಗೆ ಬೇಸಿಗೆ ರಜೆ ಬೇರೆ, ಸಮಾರಂಭಗಳಿಗೆ ಶುಭ ಮೂಹೂರ್ತಗಳಿಗೆ ಆಗಲಿ ಹಾಗೆಂದೇ ಊರಿಗೆಂದು ಓಡಾಡುವರು ಅತಿ ಹೆಚ್ಚು ತವರಿಗೆ ಮಕ್ಕಳೊಂದಿಗೆ ಹೋಗುವವರು ಅನೇಕರು. ಪಿಕ್‌ನಿಕ್ ಪ್ರೇಕ್ಷಣಿಯ ಸ್ಥಳಗಳಂತೂ ಜನ ಜಂಗುಳಿ ಹೇಳತೀರದು. ಬಿಸಿಲಿನ ತಾಪವಿದ್ದರೂ ಪ್ರವಾಸದ ಉತ್ಸಾಹ ಕಡಿಮೆಯಾಗದು. ಕೆಲವೆಡೆಗಳಲ್ಲಿ ಊಟ ತಿಂಡಿಗೂ ತತ್ವಾರವಾದರೂ ಪ್ರವಾಸವೆಂದರೆ ಈಗ ಜನರಿಗೆ ಆಸಕ್ತಿ ಹೆಚ್ಚು. ಒಟ್ಟಾರೆ ರೈಲೂ ಜನರಿಂದ ತುಂಬಿ ತುಳುಕುತ್ತಿತ್ತು.
ಒಂದು ಬಾರಿಗೆ ಸಾವಿರಾರು ಮಂದಿಯನ್ನು ಹೊತ್ತೊಯ್ಯುವ ಅನೇಕ ರೈಲುಗಳೂ ಜನರ ಓಡಾಟಕ್ಕೆ ಸಾಲದು. ಟಿಕೆಟ್ ಕಾಯ್ದಿರಿಸಿದರೂ ತಿಂಗಳ ಮುಂಚೆಯೇ ಯತ್ನಿಸಿದರೂ ನಿರಾಶರಾಗಬೇಕಾಗುತ್ತದೆ. ಗಿಜಿಗಿಜಿಗುಟ್ಟುವ ಬಸ್‌ಗಳಲ್ಲಿ ಕಾಯ್ದಿರಿಸದೆ ಪ್ರಯಾಣಿಸುವುದು ಮತ್ತಷ್ಟು ಕಷ್ಟ. ಸೀಟ್ ಉಚಿತದ ಹಾವಳಿಯಿಂದಾಗಿ ಸೇಟು ಪಡೆಯುವುದು ಸುಲಭದ ಮಾತಲ್ಲ. ಕರವಸ್ತ್ರ, ಟವೆಲ್‌ಗಳನ್ನು ಕಿಟಕಿಗಳ ಮೂಲಕ ಹಾಕಿ, ದನಿ ಎತ್ತರಿಸಿ ಸೀಟ್ ಗಿಟ್ಟಿಸಿಕೊಳ್ಳಲು ಚಾಕಚಕ್ಯತೆ ಬೇಕು. ಅಗತ್ಯವಾದರೆ ಕೈಕೈ ಮಿಲಾಯಿಸಿಕೊಳ್ಳಲೂ ಸಿದ್ದರಾಗಿರಬೇಕು. ಹೀಗೆಲ್ಲಾ ಅಸಾಧ್ಯವೆನಿಸಿದಾಗ ತುರ್ತಾಗಿ ಊರಿಗೆ ಹೋಗಲೇ ಬೇಕಾದವರು ರೈಲಿನಲ್ಲಿ ಸಾಮಾನ್ಯ (ಜನರಲ್) ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಾರೆ. ಹೇಗಾದರೂ ಕುಳಿತುಕೊಳ್ಳಲು ಸ್ಥಳ ಸಿಗಬಹುದು ಎಂಬ ಆಶೆ ಕೆಲವೊಮ್ಮೆ ಫಲಿಸಿಯೂ ಬಿಡುತ್ತದೆ.
ಅವರೆಲ್ಲರೂ ಟಿಕೆಟ್ ಕಾಯ್ದಿರಿಸಿದ ಬೋಗಿಗಳಿಗೆ ಹತ್ತಿಕೊಳ್ಳುತ್ತಾರೆ. ಕಾನೂನಿನ ಪ್ರಕಾರ ಅದು ತಪ್ಪೇ ಆದರೂ ವಾಸ್ತವವಾಗಿ ಅವರಿಗೇನೂ ತೊಂದರೆಯಾಗುತ್ತಿಲ್ಲ. ಎಷ್ಟೋ ಬಾರಿ ಟಿಕೆಟ್ ಪರೀಕ್ಷಕರು ಬರುವುದೇ ಇಲ್ಲ. ಒಂದು ವೇಳೆ ಬಂದರೂ ನಿಂತಿರುವವರ ಬಗ್ಗೆ ಕನಿಕರಿಸಿ ಹಾಗೇ ಹೋಗುತ್ತಾರೆ. ಕೆಲವೊಮ್ಮೆ ರದ್ದು ಮಾಡಿದ ಸೀಟ್‌ಗಳಲ್ಲಿ ವ್ಯವಹಾರ ಕುದುರಿಸಿಕೊಳ್ಳುತ್ತಾರೆ. ಸೀಟ್ ಗಿಟ್ಟಿಸಿಕೊಳ್ಳುವ ಕಲೆ ಕರಗತವಾಗಿರುವವರು ಮೊದಲು ಖಾಲಿ ಸೀಟ್ ಇದ್ದಲ್ಲಿ ಕುಳಿತು ಬಿಡುತ್ತಾರೆ. ಹಾಗಿಲ್ಲವಾದರೆ ತುದಿ ಸೀಟ್‌ನಲ್ಲಿ ಕುಳಿತಿರುವವರಿಗೆ ಸ್ವಲ್ಪ ಜರುಗಿಕೊಳ್ಳುವಂತೆ ವಿನಂತಿಸಿಕೊಳ್ಳುತ್ತಾರೆ. ಮೆಲ್ಲಗೆ ಸರಿಯಾಗಿ ಸ್ಥಳ ಹೊಂದಿಸಿ ಕೊಳ್ಳುತ್ತಾರೆ. ಮೂರು ಜನ ಕುಳಿತುಕೊಳ್ಳುವಾಗಲೇ ಕಷ್ಟವೆನಿಸುವಾಗ ಮತ್ತೊಬ್ಬರು ಕುಳಿತರೆ ಪ್ರಯಾಣದ ಉದ್ದಕ್ಕೂ ಶಿಕ್ಷೆಯೇ ಆಗಿ ಬಿಡುತ್ತದೆ. ಕೆಲವೊಮ್ಮೆ ಸ್ವಲ್ಪವೂ ಸ್ಥಳವಿಲ್ಲದಂತೆ ಜನರು ನಿಂತಿರುತ್ತಾರೆ. ಕೆಲವೊಮ್ಮೆ ಕೆಳಗೂ ಕುಳಿತು ಬಿಟ್ಟಿರುತ್ತಾರೆ.
ರೈಲು ಹೊರಡುವ ಮೊದಲೇ “ಇಡ್ಲಿ-ವಡೆ, ಪಲಾವ್, ಮಸಾಲೆಪುರಿ, ಮದ್ದೂರ್‌ವಡೆ, ಕಾಫಿ, ಟೀ, ನೀರು ಎಂದು ವ್ಯಾಪಾರ ಮಾಡುವವರು, ನಿಲ್ಲಲಾಗದೆ ಸೀಟಿಗೆ ಒದಗಿಸಿಕೊಂಡು ನಿಂತುಕೊಳ್ಳುವವರು, ಹೇಗೋ ಸ್ಥಳ ಮಾಡಿಕೊಂಡು ಪ್ರಕೃತಿ ಕರೆಗೆ ಹೋಗುವವರು, ನಿಂತಲ್ಲಿ ನಿಲ್ಲಲ್ಲಾಗದೆ ಆಚೀಚೆ ಓಡಾಡುವರು. ಸೆಕೆ, ಬೆವರು ಮೇಲೆ ಫ್ಯಾನ್ ತಿರುಗಿತ್ತಿದ್ದರೂ ಅನುಭವಕ್ಕೆ ಬಾರದು. ಎರಡನೇ ದರ್ಜೆಯ ಸಾಮಾನ್ಯವಾಗಿ ಕಾಯ್ದಿರಿಸಿದ ಬೋಗಿಗಳಲ್ಲಿ ಕುಳಿತು ಪ್ರಯಾಣಿಸಲು ಇಂತಹ ತೊಂದರೆಗಳನ್ನೆಲ್ಲಾ ಸಹಿಸಿಕೊಳ್ಳುವ ಶಕ್ತಿಯಿರಲೇಬೇಕು. ಬೇಸರಿಸಿ ಮುಖ ಧುಮ್ಮಿಸಿಕೊಂಡರೆ ಪ್ರಯಾಣ ಪ್ರಯಾಸವಾಗಿ ಬಿಡುತ್ತದೆ.
ಒಮ್ಮೆ ನಾವು ಮೈಸೂರಿನಿಂದ ಬೆಂಗಳೂರಿಗೆ ಬರುವ ರೈಲಿಗೆ ಶ್ರೀರಂಗಪಟ್ಟಣದಲ್ಲಿ ಟಿಕೆಟ್ ಕಾಯ್ದಿರಿಸಿಕೊಂಡಿದ್ದೆವು. ರೈಲು ಹತ್ತಿದಾಗ ನಮ್ಮ ಸೀಟ್‌ಗಳೆಲ್ಲಾ ಭರ್ತಿಯಾಗಿದ್ದವು. ಅಲ್ಲಿ ಕುಳಿತವರಿಗೆ ನಮ್ಮ ಟಿಕೆಟ್ ತೋರಿಸಿದಾಗ ಜೋರಾಗಿ ನಕ್ಕು ಬಿಟ್ಟರು, ಏನು ರೈಲ್ವೇ ನಿಮ್ಮದಾ ಎಂಬ ಮರುಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿದ್ದೆವು. “ಹೊಂದಾಣಿಕೆ ಮಾಡಿ ಕುಳಿತುಕೊಳ್ಳೋಣ ಬನ್ನಿ.. ಎಂದು ತುಸುವೇ ಪಕ್ಕಕ್ಕೆ ಸರಿದುಕೊಂಡಾಗ, ಟಿ.ಸಿ.ಗೆ ಹೇಳಬೇಕಾಗುತ್ತೆ. ನಮ್ಮ ಸೀಟ್‌ನಲ್ಲಿ ಕುಳಿತುಕೊಂಡು ತಕರಾರು ಮಾಡುತ್ತಿದ್ದೀರಿ” ಎಂದು ಕೋಪದಿಂದ ಹೇಳಿದೆವು.
“ಟಿ.ಸಿ. ಬಂದಾಗ ತಾನೆ! ಯಾರು ಏನೂ ಮಾಡೋಕಾಗೋಲ್ಲ; ಎಂದು ಉಡಾಫೆಯ ಉತ್ತರ ಕೊಟಿದ್ದರು. ಟಿ.ಸಿ. ಬರುವ ಲಕ್ಷ್ಮಣಗಳೂ ಕಾಣದಿದ್ದಾಗ ನಾವೇ ನಮ್ಮನ್ನು ಹೊಂದಾಣಿಕೆಯ ಸೂತ್ರಕ್ಕೆ ಅಳವಡಿಸಿಕೊಂಡೆವು. ಹಾಗೆ ಇಕ್ಕಟ್ಟಿನಲ್ಲಿ ಕುಳಿತುಕೊಳ್ಳುವುದಕ್ಕಿಂತ ನಿಂತುಕೊಂಡರೆ ಒಳ್ಳೆಯದು ಎನಿಸಿತ್ತು. ಆದರೆ ಬೆಂಗಳೂರು ಬರುವ ತನಕ ನಿಲ್ಲುವುದು ಸಾಧ್ಯವಾಗದು ಎನ್ನಿಸಿ ಹಾಗೆಯೇ ಕಾಯ್ದಿರಿಸಿದ ಸೀಟ್‌ಗಳ್ಳಲ್ಲಿ ಇಕ್ಕಟ್ಟಿನಲ್ಲಿ ಪ್ರಯಾಸದಿಂದ ಕುಳಿತುಕೊಂಡಿದ್ದೇವು. ನಮ್ಮ ಅಸಹಾಯಕ ಸ್ಥಿತಿಗೆ ನಮ್ಮಷ್ಟಕ್ಕೆ ಗೊಣಗಿಕೊಂಡಿದ್ದೇವು. ಮೈಸೂರಿನಲ್ಲೇ ಹತ್ತಿ ಕುಳಿತರೆ ಸರಿ.. ಇಲ್ಲವಾದರೆ ಇದೇ ಪಾಡು ಮತ್ತೊಬ್ಬರು ನಮ್ಮನ್ನು ಕುರಿತು ಉದ್ಧರಿಸಿದ್ದರು. ಟಿಕೆಟ್ ಕಾಯ್ದಿರಿಸಿದ್ದರೂ ಆರಾಮವಾಗಿ ಕುಳಿತುಕೊಳ್ಳಲೂ ಆಗದ ಪೂರ್ತಿಯಾಗಿ ನಿಲ್ಲುವ ಧೈರ್ಯವಿಲ್ಲದ ಅತಂತ್ರ ಸ್ಥಿತಿ ನಮ್ಮದಾಗಿತ್ತು.
ಈಗ ರೈಲಿನಲ್ಲಿರುವ ಜನದಟ್ಟಣೆಯನ್ನು ನೋಡಿದಾಗ ಹಳೆಯದೆಲ್ಲಾ ನೆನಪಾಗಿದ್ದರೂ ಕುಳಿತುಕೊಳ್ಳಲು ಆಗುವಷ್ಟು ಸ್ಥಳವಿದೆಯಲ್ಲ ಎಂಬುದೇ ಸಮಾಧಾನವಾಗಿತ್ತು. ಮಧ್ಯಾಹ್ನ 3.45ಕ್ಕೆ ಹೊರಡುವ ರೈಲದೂ ಮುಂದೆ ಭದ್ರಾವತಿಯ ನಿಲ್ದಾಣದಲ್ಲಿ ಮತ್ತಷ್ಟು ಪ್ರಯಾಣಿಕರು ಹತ್ತಿದ್ದರು. ನಾವಿದ್ದ ಬೋಗಿಯಲ್ಲಿಯೂ ಸಂಖ್ಯೆ ಹೆಚ್ಚಾಗಿತ್ತು. ಸೆಕೆ ತಡೆಯಲಾಗದೆ ಅಳುತ್ತಿದ್ದ ಚಿಕ್ಕ ಮಕ್ಕಳ ಸ್ವರ ರೈಲಿನ ಶಬ್ದಕ್ಕೆ ಹಿಮ್ಮೇಳದಂತಿತ್ತು.
ಕಿಟಕಿಯಿಂದ ಹೊರಗಿನ ವಿದ್ಯಮಾನಗಳನ್ನು ಗಮನಿಸುತ್ತಿದ್ದವರಿಗೆ ಅಚ್ಚರಿಯ ಘಟನೆಯೆಂದು ಕಂಡು ಬಂದಿತ್ತು. ಕೈಕಾಲುಗಳು ತೀರಾ ಸಪೂರವಾಗಿರುವ ವ್ಯಕ್ತಿಯೊಬ್ಬರನ್ನು ಮತ್ತೊಬ್ಬ ವ್ಯಕ್ತಿ ರೈಲಿನೊಳಗೆ ಕುಳಿರಿಸಿ ತೆವಳುತ್ತಾ ಬಂದು ಹಣಕ್ಕಾಗಿ ಯಾಚಿಸುತ್ತಿದ್ದುದು ನೋಡಿ ಬೇದವೆನಿಸುತ್ತಿತ್ತು. ಅಂಗ ಊನವಾಗಿರುವ ಈ ವ್ಯಕ್ತಿ ಮತ್ತೊಬ್ಬರು ಆದಾಯಕ್ಕೆ ಮೂಲವಾಗಿದ್ದಾರೆ. ಅಥವಾ ಬಲಿಪಶುವಿರಬಹುದೆ. ಆದರೆ ಸ್ವತಃ ಆ ವ್ಯಕ್ತಿಯ ಮುಖದಲ್ಲಿ ಸ್ವಲ್ಪವೂ ಬೇಸರದ ಛಾಯೆ ಇದ್ದಂತಿರಲಿಲ್ಲ. ಆತ ಅದನ್ನು ತಮ್ಮ ವೃತ್ತಿಯೆಂದೇ ಭಾವಿಸಿರಬಹುದು. ಮತ್ತೊಂದು ನಿಲ್ದಾಣದಲ್ಲಿ ಅವರನ್ನು ಬೇರೊಬ್ಬರು ಕರೆದುಕೊಂಡು ಹೋಗುತ್ತಾರೇನೋ, ಹಾಗಾದರೆ ಆ ವ್ಯಕ್ತಿಯ ವಾಸ್ತವ್ಯವೆಲ್ಲಿ ಎರಡೆರಡು ಮನೆಯೇ ಅವರಿಗೆ ಸರಿಯಾಗಿ ಊಟ ಬಟ್ಟೆ ಎಂದು ಬದುಕಿನ ಅಗತ್ಯವನ್ನಾದರೂ ಒದಗಿಸುತ್ತಾರೋ ಅಥವಾ ಮುಂದೆ ಯೋಚಿಸುವುದು ಕಷ್ಟವಾಗಿತ್ತು. ಒಟ್ಟಾರೆ ಹೀಗೆ ಯಾರೆಲ್ಲಾ ರೈಲಿನೊಳಗೆ ಬರುವುದು, ಬಂದಂತೆ ಮಾಯವಾಗುವುದು ಎಲ್ಲವೂ ವಿಸ್ಮಯವೆನಿಸುತ್ತಿತ್ತು. ಒಟ್ಟಿನಲ್ಲಿ ಇದ್ಯಾವುದರ ಪರಿವೆ ಇಲ್ಲದಂತೆ ರೈಲು ಓಡುತ್ತಿತ್ತು. ಯಾರಿಗೂ ಕಾಯದೆ ತನ್ನಷ್ಟಕ್ಕೆ ಸಾಗುವ ಕಾಲನಂತಲ್ಲವೆ ರೈಲು ಎನಿಸಿ ನಗುಬಂದಿತ್ತು.
ಕಿಟಕಿಯಿಂದ ತಣ್ಣನೆಯ ಗಾಳಿ ಜೊತೆ ಜೊತೆಗೇ ಮಳೆ ಹನಿಗಳ ಸಿಂಚನ ಕಾದು ಬಿಸಿಯಾಗಿದ್ದ ರೈಲು ತಂಪಾಗಿ ನಮ್ಮನ್ನೂ ತಂಪಾಗಿಸಿತ್ತು. ಎಂಟು ಹತ್ತು ತಿಂಗಳ ಮಗುವನ್ನು ಎತ್ತಿಕೊಂಡಿದ್ದ ಯುವತಿಯೊಂದಿಗೆ ನಾಲ್ಕು ವರ್ಷದ ಮತ್ತೊಂದು ಪೋರಿ, ಆಕೆಯ ಪತಿ ಆ ನಿಲ್ದಾಣದಲ್ಲಿ ರೈಲನ್ನು ಹತ್ತಿಕೊಂಡಿದ್ದರೂ ಇಷ್ಟು ಪುಟ್ಟ ಮಕ್ಕಳಿರುವವರು ಟಿಕೆಟ್ ಕಾಯ್ದಿರಿಸದೆ ಯಾವ ಧೈರ್ಯದಿಂದ ಪ್ರಯಾಣಿಸುತ್ತಾರೆ ಎಂಬ ನನ್ನ ಸಂದೇಹಕ್ಕೆ ಮುಂದೆ ಉತ್ತರ ದೊರಕಿತ್ತು. ಎಳೆಕಂದ ಅಳ ತೊಡಗಿದಾಗ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದ ಯುವಕರೊಬ್ಬರ ಹತ್ತಿರ “ಮಗುವಿಗೆ ಹಸಿವಾಗಿದೆ.” ಎಂದು ಕೇಳಿಕೊಂಡಿದ್ದರು. ಮರು ಮತನಾಡದೆ ಸೀಟು ಬಿಟ್ಟುಕೊಟ್ಟ ಆತ ತುಸು ಮುಂದೆ ಹೋಗಿ ನಿಂತವರ ಸಾಲಿನಲ್ಲಿ ಸೇರಿಕೊಂಡಿದ್ದರೂ ನಾಲ್ಕರ ಮಗು ಅಮ್ಮನಿಗೆ ಅಂಟಿಕೊಂಡಾಗ ಆ ಯುವತಿಯ ಪಕ್ಕದ ಮಹಿಳೆ ಮುದುರಿ ಕುಳಿತು ಜಾಗ ಬಿಟ್ಟಿದ್ದರು. ಹಾಲು ಕುಡಿಯುತ್ತಾ ಸಣ್ಣ ಮಗು ಹಾಗೇ ನಿದ್ದೆ ಮಾಡಿತ್ತು. ಯುವತಿ ಈಗ ಯುವಕನಡೆಗೆ ಕೃತಜ್ಞತೆಯ ನೋಟ ಹರಿಸುತ್ತಾನೆ ಮುಗುಳ್ಳಕ್ಕಿದ್ದಳು. ಒಟ್ಟಾರೆ ಆ ಯುವಕನಿಗೆ ನಿಲ್ಲುವ ಶಿಕ್ಷೆ ಖಾತ್ರಿಯಾಗಿತ್ತು. ಪಕ್ಕದ ಮಹಿಳೆಗೆ ಒತ್ತರಿಸಿ, ಹಿಡಿಯಾಗಿ ಕುಳಿತುಕೊಳ್ಳುವ ಸಜೆ 'ಅಯ್ಯೋ ಪಾಪ”, ಎಂದು ಕನಿಕರಿಸಿ ಸ್ಥಳ ಬಿಟ್ಟವರಿಗೆ ಗಂಟೆಗಟ್ಟಲೆ ನಿಲ್ಲುವ ಶಿಕ್ಷೆ, ಅದಕ್ಕೆ ಇರಬಹುದಲ್ಲವೆ ಮೆಟ್ರೋ, ಬಸ್‌ಗಳಲ್ಲಿ ಪ್ರತಿದಿನವೂ ಓಡಾಡುವ ಕೆಲವರು ನಿಂತಿರುವವರ ಕಡೆ ದೃಷ್ಟಿ ಹಾಯಿಸುವುದೇ ಇಲ್ಲ. ವಯಸ್ಸಾದವರೂ ಗರ್ಭಿಣಿಯರು, ಚಿಕ್ಕ ಮಕ್ಕಳು ಎಂದು ಸ್ಥಳ ಬಿಡುತ್ತಿದ್ದರೆ ಪ್ರತಿದಿನವು. ನಿಲ್ಲುತ್ತಲೇ ಪ್ರಯಾಣಿಸುವ ಪಾಡು. ಎಂದು ಒಬ್ಬರು ತುಸು ಜೋರಾಗಿಯೇ ಹೇಳುತ್ತಿದ್ದುದು ಸತ್ಯವೇ ಆಗಿತ್ತು. ಪ್ರತಿದಿನವೂ ಮರುಕಳಿಸುವ ಘಟನೆ ಕನಿಕರದ ಫಲ ಸ್ವಯಂಕೃತ ಅಪರಾಧವೆಂದನಿಸಬಹುದು ಆದರೆ ಯಾವುದು ಸರಿಯೆಂದು ಅವರವರಿಗೆ ಬಿಟ್ಟಿದ್ದು. ವೃದ್ಧರಿಗೆ, ಗರ್ಭಣಿಯರಿಗೆ ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡ ತಾಯಂದಿರಿಗೆ ನಿಂತು ಪ್ರಯಾಣ ಕಷ್ಟವಲ್ಲವೆ.. ಹಾಗಾದರೆ ಯುವಕರು ನಿಂತೇ. ಪ್ರಯಾಣಿಸಬೇಕೆ? ಅವರಲ್ಲೂ ಕೆಲವರಿಗೆ ನೋವು. ದಣಿವು ಆಯಾಸ ಆಗುವುದಲ್ಲವೆ?
ಚಲಿಸುತ್ತಿದ್ದ ರೈಲು ನಿಲ್ದಾಣವಲ್ಲದ ಕಡೆ ಧಟ್ಟನೆ ನಿಂತಾಗ ನನ್ನ ಯೋಚನೆಗಳಿಗೆ ತಡೆಯಾಗಿತ್ತು. ಸರಿ ಮಾಮೂಲು ಗೋಳು ಮುಂದಿನ ಸ್ಟೇಷನಿನಲ್ಲಿ ಪ್ಲಾಟ್ ಫಾರಮ್ ಖಾಲಿ ಇಲ್ಲವೇನೊ.... ಎಂದು ನಮ್ಮಲ್ಲೇ ಮಾತನಾಡಿಕೊಂಡೆವು. ಸದ್ಯಕ್ಕಂತೂ ಹೊರಗಿನ ನೋಟ ಕಂಗಳಿಗೆ ಹಿತವಾಗಿತ್ತು. ಬಿಸಿಲಿನ ಧಗೆಯೂ ಕಡಿಮೆಯಾಗಿತ್ತು. ಮುಂದಿನ ಹತ್ತು ಹದಿನೈದು ನಿಮಿಷಗಳು ಹೀಗೆ ಹೊರಗಿನ ಸೌಂದರ್ಯವನ್ನು ಆಸ್ವಾಧಿಸುತ್ತಿದ್ದೆವು. ಆದರೆ ರೈಲು ಹೊರಡುವ ಸೂಚನೆಯೇ ಇಲ್ಲದಾಗ “ ಪ್” ಎಂಬ ಲೋಚಗುಟ್ಟುವಿಕೆ, ಚಡಪಡಿಕೆ, ಆರಂಭವಾಗಿತ್ತು. ನಿಂತಿದ್ದವರ ಪಾಡಂತೂ ಮತ್ತಷ್ಟು ತ್ರಾಸದಾಯಕ ಎನಿಸತೊಡಗಿತ್ತು. (ಮುಂದುವರೆಯುವುದು...)
ತಿದ್ದುಪಡಿ - ಕಳೆದ ಸಂಚಿಕೆಯಲ್ಲಿ ಮುದ್ರಣದ ದೋಷ
ಆತ್ಮೀಯ ಓದುಗರಲ್ಲಿ ವಿನಂತಿ, ಕಳೆದ ಬಾರಿಯ ಏಪ್ರಿಲ್ 2025ರ 'ಪ್ರಸ್ತುತ' ವಿಭಾಗದ “ವೀರ ಮಾತೆಯ ನುಡಿಗಳಿಂದ” ಅಂಕಣದಲ್ಲಿ ಕೆಲವು ತಪ್ಪುಗಳಾಗಿದ್ದವು. ಅವುಗಳ ತಿದ್ದುಪಡಿಯನ್ನು ಈ ಕೆಳಗೆ ಕೊಡುತ್ತಿದ್ದೇನೆ.
ಶೌರ್ಯ ಚಕ್ರದ ಗರಿಗೆ ಪಾತ್ರರಾದ ಹುತಾತ್ಮ ವೀರಯೋಧ ಪ್ರಾಂಜಲ್ ಓ.ಟಿ.ಎ ಗಯಾದಲ್ಲಿ ಹಾಗೂ ನಂತರ ಎಂ.ಸಿ.ಟಿ.ಇ. ಮಹುನಲ್ಲಿ ಕಲಿತಿದ್ದು (ಓ.ಟಿ.ಎಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಎಂ.ಸಿ.ಟಿ.ಇಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುಮಿಕೇಷನ್ ಇಂಜಿನಿಯರಿಂಗ್).
ಆತನ ಬಲಿದಾನದ ದಿವಸ 2023 ನವೆಂಬರ್ 22 ಎಂದಾಗಬೇಕು. ನಾಲ್ಕನೇ ಪ್ಯಾರಾದಲ್ಲಿ ರಾಷ್ಟ್ರೀಯ ಬೆಟಾಲಿಯನ್ ಎನ್ನುವುದು 63 ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ಎಂದಾಗಬೇಕು ಹಾಗೂ ಹುತಾತ್ಮರಾದವರು ಐದು ಸೈನಿಕರು (ನಾಲ್ವರಲ್ಲ). ಐದನೇ ಪ್ಯಾರಾದಲ್ಲಿ ಪ್ರಜ್ವಲ್ ಪ್ರಾಂಜಲ್ ಆಗಬೇಕು. ಯೂಟ್ಯೂಬ್ ಚಾನೆಲ್ ಹೆಸರು Pranjal Lok ಎಂದಾಗಬೇಕು. ಅದೇ ಹೆಸರಿನ ಫೇಸ್‌ಬುಕ್ ಪುಟ ಕೂಡಾ ಇದೆ.
.