Logo

VHP PUBLICATIONS

Hindu Vani


expand_more

ಪುರಾಣ

ಪರಶುರಾಮ

ಪರಶುರಾಮರನ್ನು ದಶಾವತಾರಗಳಲ್ಲಿ ಒಬ್ಬರೆಂದು ಪರಿಗಣಿಸುತ್ತಾರೆ. ಕೃತ, ತ್ರೇತಾ ಮತ್ತು ದ್ವಾಪರಯುಗಗಳೆಲ್ಲದರಲ್ಲಿಯೂ, ರಾಮಾಯಣ-ಮಹಾಭಾರತಗಳಲ್ಲಿಯೂ ಪರಶುರಾಮರ ಚರಿತ್ರೆಯನ್ನು ಕಾಣುತ್ತೇವೆ.

ಪರಶುರಾಮರು ಅಕ್ಷಯತೃತೀಯೆಯ ದಿನ ಜನಿಸಿದರೆಂದು ಹೇಳುತ್ತಾರೆ. ಜಮದಗ್ನಿ ಮತ್ತು ರೇಣುಕೆಯರು ಇವರ ತಾಯಿತಂದೆಯರು. ರುಮಂತ, ಸುಷೇಣ, ವಸು ಮತ್ತು ವಿಶ್ವಾವಸುವೆಂಬ ನಾಲ್ವರು ಇವರ ಸಹೋದರರು. ತಂದೆ ಜಮದಗ್ನಿ ಒಮ್ಮೆ ಈ ಮಕ್ಕಳ ತಾಯಿಯ ಮೇಲೆ ಕುಪಿತರಾಗಿ ಆಕೆಯ ಶಿರಚ್ಛೇದಮಾಡುವಂತೆ ಆಜ್ಞಾಪಿಸಿದಾಗ, ಇವರ ನಾಲ್ವರೂ ಸಹೋದರರು ಒಪ್ಪದೆ, ತಂದೆಯ ಶಾಪಕ್ಕೆ ಗುರಿಯಾದರು. ಪರಶುರಾಮರು ತಂದೆಯ ಆಜ್ಞೆಯನ್ನು ಪಾಲಿಸಿ, ತಮ್ಮ ಬುದ್ಧಿಶಕ್ತಿಯಿಂದ ತಾಯಿಯನ್ನು ಬದುಕಿಸಿಕೊಂಡು, ಅಣ್ಣಂದಿರನ್ನೂ ಶಾಪಮುಕ್ತರನ್ನಾಗಿ ಮಾಡಿದರು.

ಜಮದಗ್ನಿಯ ಆಶ್ರಮದಿಂದ ಹೋಮಧೇನುವಿನ ಕರುವನ್ನು ಕಾರ್ತವೀರ್ಯನೆಂಬ ರಾಜನು ಬಲಾತ್ಕಾರವಾಗಿ ಎಳೆದುಕೊಂಡು ಹೋದನು. ಆಗ ಪರಶುರಾಮರು ಆಶ್ರಮದಲ್ಲಿ ಇರಲಿಲ್ಲ. ಅವರು ಬಂದ ಕೂಡಲೆ ಜಮದಗ್ನಿ ನಡೆದ ವಿಷಯವನ್ನೆಲ್ಲ ತಿಳಿಸಿದರು. ಕೂಡಲೇ ಪರಶುರಾಮರು ಧನುರ್ಬಾಣಗಳನ್ನು ತೆಗೆದುಕೊಂಡು ಕಾರ್ತವೀರ್ಯನನ್ನು ಬೆನ್ನಟ್ಟಿದರು. ಸ್ವಲ್ಪ ಹೊತ್ತಿನಲ್ಲಿಯೇ ಅವನನ್ನು ಸಂಧಿಸಿ, ಸಿಂಹನಾದ ಮಾಡಿದರು. ಇಬ್ಬರಿಗೂ ಘೋರಯುದ್ಧವು ಆರಂಭವಾಯಿತು. ಪರಶುರಾಮರು ತಮ್ಮ ಭಲ್ಲಾಯುಧದಿಂದ ಕಾರ್ತವೀರ್ಯಜರ್ುನ ಸಾವಿರ ಬಾಹುಗಳನ್ನೂ ಕತ್ತರಿಸಿಹಾಕಿದರು. ಕಾರ್ತವೀರ್ಯನ ಪರಾಕ್ರಮವು ಕುಂದುತ್ತ ಬಂದಿತು. ಕೊನೆಗೆ ಅವನು ಪರಶುರಾಮರ ಕೈಯಲ್ಲಿ ಮರಣಹೊಂದಿದನು.

ಕಾರ್ತವೀರ್ಯನ ಮರಣದಿಂದ ಕುಪಿತರಾದ ಅವನ ಪುತ್ರರು ಮತ್ತು ಬಂಧುಗಳು ಪರಶುರಾಮರಿಲ್ಲದ ಸಮಯವನ್ನು ನೋಡಿ, ಆಶ್ರಮಕ್ಕೆ ಮುತ್ತಿಗೆ ಹಾಕಿದರು. ಆಗ ಮಹರ್ಷಿ ಜಮದಗ್ನಿ ತಪೋನಿರತರಾಗಿದ್ದರು. ಕಾರ್ತವೀರ್ಯನ ಮಕ್ಕಳು ಅವರನ್ನು ಎಳೆದಾಡಿದರು. ಮಹರ್ಷಿಗಳು 'ರಾಮಾ' ಎಂದು ಮಗನನ್ನು ಕುರಿತು ಆರ್ತನಾದಮಾಡುತ್ತಿದ್ದಂತೆ, ದುಷ್ಟರು ಅವರನ್ನು ಕೊಂದು ಹೊರಟುಹೋದರು.

ಸ್ವಲ್ಪ ಹೊತ್ತಿನ ನಂತರ ಬಂದ ಪರಶುರಾಮರು ಗತಪ್ರಾಣರಾಗಿ ಬಿದ್ದಿದ್ದ ತಂದೆಯನ್ನು ನೋಡಿದರು. ಅವರಿಗೆ ಶೋಕ ಮತ್ತು ಕೋಪಗಳು ಒಟ್ಟಿಗೇ ಉಂಟಾದವು. ತಂದೆಯ ಅಂತ್ಯಸಂಸ್ಕಾರವನ್ನು ಮಾಡಿ, ಉರಿಯುತ್ತಿರುವ ಚಿತೆಯ ಮುಂದೆಯೇ, “ನಿರಾಯುಧರಾದ, ಧರ್ಮಾತ್ಮರಾದ ಮತ್ತು ವೃದ್ಧರಾದ ನನ್ನ ತಂದೆಯನ್ನು ಕೊಂದ ಪಾಪಿಗಳಾದ ಕ್ಷತ್ರಿಯರ ಕುಲವನ್ನೇ ನಿರ್ಮೂಲಮಾಡಿಬಿಡುತ್ತೇನೆ” ಎಂದು ಪ್ರತಿಜ್ಞೆ ಮಾಡಿದರು. ಕೊಡಲಿಯನ್ನು ಹೆಗಲಿಗೇರಿಸಿ ಪರಶುರಾಮರು ಕ್ಷತ್ರಿಯ ವಿಧ್ವಂಸಕರಾಗಿ ಹೊರಟುಬಿಟ್ಟರು. ಮೊದಲು ಕಾರ್ತವೀರ್ಯನ ವಂಶದವರನ್ನೆಲ್ಲ ನಾಶಮಾಡಿದರು. ಇಪ್ಪತ್ತೊಂದು ಬಾರಿ

ಭೂಮಿಯನ್ನೆಲ್ಲ ಸುತ್ತುಹಾಕಿ ಕ್ಷತ್ರಿಯರನ್ನು ನಿರ್ನಾಮಮಾಡಿದರು. ಈ ಕ್ಷತ್ರಿಯರ ರಕ್ತದಿಂದ ಸಮಂತಪಂಚಕಗಳೆಂಬ ಐದು ಸರೋವರಗಳನ್ನು ನಿರ್ಮಾಣಮಾಡಿ, ಆ ರಕ್ತದಿಂದಲೇ ಪಿತೃಗಳಿಗೆ ತರ್ಪಣವನ್ನು ಕೊಟ್ಟರು. ಆ ಸಂದರ್ಭದಲ್ಲಿ ಅವರ ತಾತ ಋಚೀಕರು ಸಶರೀರರಾಗಿ ಬಂದು, ಈ ನಾಶಕಾರ್ಯವನ್ನು ನಿಲ್ಲಿಸುವಂತೆ ಹೇಳಿ ಪರಶುರಾಮರನ್ನು ಸಮಾಧಾನಗೊಳಿಸಿದರು.

ಪರಶುರಾಮರು ಅದರಂತೆ ಯುದ್ಧವನ್ನು ನಿಲ್ಲಿಸಿ, ಒಂದು ಮಹಾಯಜ್ಞವನ್ನು ಆರಂಭಿಸಿ, ಕ್ಷತ್ರಿಯರಿಂದ ಸಂಪಾದಿಸಿದ್ದ ಭೂಭಾಗವನ್ನೆಲ್ಲ ಋತ್ವಿಜರಿಗೆ ದಾನಮಾಡಿಬಿಟ್ಟರು. ತಾವು ಮಹೇಂದ್ರ ಪರ್ವತಕ್ಕೆ ತಪಸ್ಸು ಮಾಡಲು ಹೊರಟು ಹೋದರು. ಪಾಂಡವರು ತೀರ್ಥಯಾತ್ರಾ ಸಂದರ್ಭದಲ್ಲಿ ಪರಶುರಾಮರನ್ನು ಸಂದರ್ಶಿಸಿದ್ದು ಈ ಪರ್ವತದಲ್ಲಿಯೇ.

ವಿವಾಹದ “ಶ್ರೀರಾಮನು ಶಿವಧನುಸ್ಸನ್ನು ಮುರಿದು ಸೀತೆಯನ್ನು ವರಿಸಿದನು. ನಂತರ ವರನ ಕಡೆಯವರೆಲ್ಲ ಅಯೋಧ್ಯೆಗೆ ಪ್ರಯಾಣ ಹೊರಟರು. ದಾರಿಯಲ್ಲಿ ದುರ್ನಿಮಿತ್ತಗಳು ಗೋಚರಿಸತೊಡಗಿದವು. ದಶರಥನು ಪರಿತಪಿಸುತ್ತಿರಲು, ಭೀಮಾಕಾರನೂ ಜಟಾಮಂಡಲಧಾರಿಯೂ ಆದ ಭಾರ್ಗವರಾಮನು ಗೋಚರಿಸಿದನು. ಅವನು ಹೆಗಲಿನ ಮೇಲೆ ಕೊಡಲಿಯನ್ನೂ ಕೈಯಲ್ಲಿ ವೈಷ್ಣವಧನುವನ್ನೂ ಹಿಡಿದಿದ್ದನು. ಋಷಿಗಳು ಪೂಜಾಸಾಮಗ್ರಿಗಳೊಡನೆ ಅವನನ್ನು ಸಮೀಪಿಸಿ, ಗೌರವಿಸಿದರು. ಪರಶುರಾಮನು ಅವರ ಪೂಜೆಯನ್ನು ಸ್ವೀಕರಿಸಿ ಶ್ರೀರಾಮನನ್ನು ಕುರಿತು, ನೀನು ಧನುಸ್ಸನ್ನು ಮುರಿದ ಸಂಗತಿಯನ್ನು ಕೇಳಿ ನಾನು ಇನ್ನೊಂದು ಉತ್ತಮವಾದ ಧನುಸ್ಸನ್ನು ತಂದಿದ್ದೇನೆ. ಮಹತ್ತರವಾದ ಈ ಧನುಸ್ಸಿಗೆ ಹೆದೆಯೇರಿಸಿ ನಿನ್ನ ಪರಾಕ್ರಮವನ್ನು ತೋರಿಸು, ನೋಡೋಣ' ಎಂದನು.

ಶ್ರೀರಾಮನು ಕೂಡಲೇ ಭಾರ್ಗವರಾಮನ ಕೈಯಿಂದ ಆ ಬಿಲ್ಲನ್ನು ತೆಗೆದುಕೊಂಡು ಬಗ್ಗಿಸಿ, ಶರಸಂಧಾನ ಮಾಡಿ, ಆ ಬಾಣಕ್ಕೆ ಆಹುತಿಯಾಗಿ ಭಾರ್ಗವನ ಶೀಘ್ರಸಂಚಾರಶಕ್ತಿಯನ್ನು ಅಥವಾ ತಪೋಬಲದಿಂದ ಅವನಿಗೆ ಲಭ್ಯವಾಗಿದ್ದ ದಿವ್ಯಲೋಕಗಳನ್ನು ನೀಡುವಂತೆ ಕೇಳಿದನು. ಶ್ರೀರಾಮನ ತೇಜಸ್ಸಿನ ಎದುರು ಭಾರ್ಗವನು ನಿರ್ವೀಯ್ರನಾದನು. ಅವನು 'ನಾನು ಈ ಭೂಮಂಡಲವನ್ನು ಕಶ್ಯಪನಿಗೆ ಧಾರೆಯೆರೆದು ಕೊಟ್ಟಿದ್ದೇನೆ. ಆದ್ದರಿಂದ ಈ ಭೂಮಿಯ ಮೇಲೆ ಒಂದು ರಾತ್ರಿಯೂ ನಿಲ್ಲುವಂತಿಲ್ಲ. ಮನೋವೇಗದಿಂದ ನಾನು ಮಹೇಂದ್ರ ಪರ್ವತಕ್ಕೆ ಹೋಗಬೇಕು. ನನ್ನ ಗತಿಯನ್ನು ಘಾತಿಸಬೇಡ, ಬದಲಾಗಿ ನಾನು ಆರ್ಜಿಸಿರುವ ತಪೋಲೋಕಗಳನ್ನು ಭಂಗಿಸು' ಎಂದು ಹೇಳಿ, ಮಹೇಂದ್ರಪರ್ವತಕ್ಕೆ ಹೊರಟುಹೋದನು.

ಮಹಾಭಾರತದ ವನಪರ್ವದಲ್ಲಿ ಲೋಮಶರು ಭಗುತೀರ್ಥದ ಮಹಿಮೆಯನ್ನು ಹೇಳುತ್ತ, 'ಭಾರ್ಗವನು ಶ್ರೀರಾಮನನ್ನು ಹುಡುಕುತ್ತ ಅಯೋಧ್ಯೆಗೆ ಬಂದನೆಂದೂ ಶ್ರೀರಾಮನು ಈ ವಿಚಾರವನ್ನು ತಿಳಿದು ಮಹಾದ್ವಾರದಲ್ಲಿ ನಿರೀಕ್ಷಿಸುತ್ತಿದ್ದನೆಂದೂ' ಹೇಳಿರುತ್ತಾರೆ. ಶ್ರೀರಾಮನು ಪರಶುರಾಮನು ತಂದಿದ್ದ ವೈಷ್ಣವಧನುವನ್ನು ಬಗ್ಗಿಸಿದುದಲ್ಲದೆ, ಅವನಿಗೆ ದಿವ್ಯದೃಷ್ಟಿಯನ್ನಿತ್ತು ತನ್ನ ವಿಶ್ವರೂಪವನ್ನು ತೋರಿಸಿದನು. ರಾಮನ ಬಾಣವು ಪರಶುರಾಮನ ತೇಜಸ್ಸನ್ನು ಅಪಹರಿಸಿತು. ಭಾರ್ಗವನು ನಾಚಿಕೆಯಿಂದ ಮಹೇಂದ್ರ ಪರ್ವತದಲ್ಲಿ ಅವಿತುಕೊಂಡನು.

ಒಂದು ವರ್ಷದ ನಂತರ ಪಿತೃದೇವತೆಗಳು ದರ್ಶನವನ್ನಿತ್ತು, ವಧೂಸರವೆಂಬ ನದಿಯ ತೀರ್ಥದಲ್ಲಿ ಸ್ನಾನಮಾಡುವುದರಿಂದ ಮೊದಲಿನ ತೇಜಸ್ಸನ್ನು ಪಡೆಯಬಹುದೆಂದು ಅಥವಾ ಪರಶುರಾಮನಿಗೆ ಹೇಳಿದರು. ಇದೇ ತೀರ್ಥವು ಮುಂದೆ ದೀಪೋದ ಭೂಗುತೀರ್ಥವೆಂದು ಪ್ರಸಿದ್ಧವಾಯಿತು. ಪರಶುರಾಮನು ಇಲ್ಲಿ ಸ್ನಾನಮಾಡಿ ಮೊದಲಿನ ತೇಜಸ್ಸನ್ನು ಪಡೆದನು.

ಪಾಂಡವರು ವನವಾಸ ಮತ್ತು ಅಜ್ಞಾತವಾಸಗಳನ್ನು ಪೂರೈಸಿದ ನಂತರ ಶ್ರೀಕೃಷ್ಣನು ಅವರಿಗೆ ರಾಜ್ಯವನ್ನು ಕೊಡಿಸುವ ಸಲುವಾಗಿ ಸಂಧಾನಕ್ಕಾಗಿ ಹಸ್ತಿನಾವತಿಗೆ ಬಂದನು. ರಾಜಸಭೆಯಲ್ಲಿ ಅವನು ಅದ್ಭುತವಾಗಿ ಮಾತನಾಡಿ, ದುರ್ಯೋಧನನನ್ನು ಸಂಧಿಗೆ ಒಪ್ಪಿಸಲು ಪ್ರಯತ್ನಿಸಿದನು. ಅವನ ಮಾತನ್ನು ಸಮರ್ಥಿಸುತ್ತ, ರಾಜಸಭೆಗೆ ಆಗಮಿಸಿದ್ದ ಮಹರ್ಷಿಗಳ ಮಧ್ಯದಲ್ಲಿದ್ದ ಪರಶುರಾಮರು, ಈ ಕಥೆಯನ್ನು ಹೇಳಿ, ನರ-ನಾರಾಯಣರೇ ಕೃಷ್ಣಾರ್ಜುನರೆಂದೂ ಅವರೊಂದಿಗೆ ದ್ವೇಷ ಬೇಡವೆಂದೂ ದುರ್ಯೋಧನನಿಗೆ ಬುದ್ದಿ ಹೇಳಿದರು. ಆದರೆ ದುರ್ಯೋಧನ ಅವರ ಬುದ್ಧಿಮಾತನ್ನು ಸ್ವೀಕರಿಸಲಿಲ್ಲ.

ದ್ರೋಣರೂ ಪರಶುರಾಮರ ಶಿಷ್ಯರೇ. ಅವರು ಮೊದಲು ಅಗ್ನಿವೇಶನೆಂಬ ಮಹರ್ಷಿಯಿಂದ ಧನುರ್ವಿದ್ಯೆಯನ್ನು ಅಭ್ಯಾಸಮಾಡಿದ್ದರು. ಇದೇ ಸಮಯದಲ್ಲಿ ಪರಶುರಾಮರು ತಮ್ಮ ಸಕಲೈಶ್ವರ್ಯವನ್ನೂ ಸಮುದ್ರಾಂತವಾದ ಭೂಮಿಯನ್ನೂ ಬ್ರಾಹ್ಮಣರಿಗೆ ದಾನಮಾಡಿಬಿಡುವರೆಂಬ ವಾರ್ತೆಯು ಎಲ್ಲೆಲ್ಲಿಯೂ ಹರಡಿತು. ದ್ರೋಣರೂ ಕೂಡ ಪರಶುರಾಮರಿಂದ ಐಶ್ವರ್ಯವನ್ನೂ ಧನುರ್ವಿದ್ಯೆಯನ್ನೂ ಪಡೆಯಬೇಕೆಂದು ನಿಶ್ಚಯಿಸಿ, ಅಲ್ಲಿಗೆ ಹೊರಟರು. ಮಹೇಂದ್ರಪರ್ವತಕ್ಕೆ ಹೋಗಿ, ತಮ್ಮ ಪರಿಚಯವನ್ನು ಹೇಳಿ, ತಾವು ದಾನವನ್ನು ಪ್ರತಿಗ್ರಹಮಾಡಲು ಬಂದಿರುವುದಾಗಿ ವಿಜ್ಞಾಪಿಸಿದರು. ಆಗ ಪರಶುರಾಮರು “ದ್ರೋಣ, ಕಾಲವು ಮಿಂಚಿಹೋಯಿತು. ನನ್ನಲ್ಲಿರುವ ಸಮಸ್ತವನ್ನೂ ನಾನು ದಾನಮಾಡಿಬಿಟ್ಟೆನು. ಆದರೆ ನಿನ್ನನ್ನು ಹಾಗೆಯೇ ಕಳುಹಿಸಲು ನನಗೆ ಮನಸ್ಸಿಲ್ಲ. ನನ್ನಲ್ಲಿನ್ನು ಎರಡು ವಸ್ತುಗಳು ಆಯಾಚಿತವಾಗಿ ಉಳಿದುಕೊಂಡಿವೆ. ಅವುಗಳೆಂದರೆ ನನ್ನ ಶರೀರ ಮತ್ತು ನನ್ನಲ್ಲಿರುವ ಶಸ್ತ್ರಾಸ್ತ್ರಗಳು. ಇವುಗಳಲ್ಲಿ ಯಾವುದನ್ನು ಬೇಕಾದರೂ ನೀನು ಸ್ವೀಕರಿಸಬಹುದು” ಎಂದು ಹೇಳಿದರು. ದ್ರೋಣರು ರಹಸ್ಯಯುಕ್ತವಾದ, ಪ್ರಯೋಗ ಮತ್ತು ಉಪಸಂಹಾರವಿಧಿಸಹಿತವಾದ ಶಸ್ತ್ರಾಸ್ತ್ರಗಳನ್ನೇ ತಾವು ಸ್ವೀಕರಿಸುವುದಾಗಿ ಹೇಳಿದರು. ಪರಶುರಾಮರು ಅಲ್ಲಿಯೇ ಕುಳಿತು ಸಂಕಲ್ಪಮಾಡಿ ಸಮಗ್ರವಾದ ಧನುರ್ವೇದವನ್ನು ದ್ರೋಣರಿಗೆ ದಾನಮಾಡಿದರು.

ಮಹಾಭಾರತದ ಉದ್ಯೋಗಪರ್ವದಲ್ಲಿ ಭೀಷ್ಮ ಮತ್ತು ಪರಶುರಾಮರ ನಡುವೆ ನಡೆದ ಯುದ್ಧವೊಂದು ವರ್ಣಿತವಾಗಿದೆ. ಭೀಷ್ಮನು ತನ್ನ ತಮ್ಮನಾದ ವಿಚಿತ್ರವೀರ್ಯನಿಗಾಗಿ ಕಾಶೀರಾಜನ ಮೂವರು ಪುತ್ರಿಯರಾದ ಅಂಬೆ, ಅಂಬಿಕೆ ಮತ್ತು ಅಂಬಾಲಿಕೆಯರನ್ನು ಸ್ವಯಂವರಮಂಟಪದಿಂದ ತಂದನು. ಅವರಲ್ಲಿ ಹಿರಿಯಳಾದ ಅಂಬೆಯು ತಾನು ಸಾಲ್ವರಾಜನನ್ನು ಪ್ರೀತಿಸಿರುವುದಾಗಿ ಹೇಳಿ ಭೀಷ್ಮನ ಅನುಮತಿಯನ್ನು ಸಾಲ್ವರಾಜನಲ್ಲಿಗೆ ಹೋದಳು. ಆದರೆ ಬೇರೊಬ್ಬರಿಂದ ಬಲಪೂರ್ವಕ ಅಪಹೃತಳಾದ ಕನ್ನೆಯನ್ನು ಸ್ವೀಕರಿಸಲು ಸಾಲ್ವರಾಜನು ಒಪ್ಪಲಿಲ್ಲ. ಅಂಬೆಯು ದುಃಖಿತಳಾಗಿ ಈ ಸ್ಥಿತಿಗೆ ಕಾರಣನಾದ ಭೀಷ್ಮನಿಗೆ ಪ್ರತೀಕಾರ ಮಾಡಬೇಕೆಂದು ತಪಸ್ಸುಮಾಡಲು ನಿರ್ಧರಿಸಿದಳು. ಪಡೆದು ಭೀಷ್ಮನನ್ನು ಕುರಿತಾದ ದ್ವೇಷಸಾಧನೆಗಾಗಿ ತಪಸ್ಸಿಗೆ ಸಿದ್ಧಳಾದ ಅಂಬೆಯನ್ನು ಕುರಿತು, ಅದೇ ಅರಣ್ಯದಲ್ಲಿದ್ದ ತಪಸ್ವಿಗಳೆಲ್ಲ ಚಿಂತಿಸುತ್ತಿರುವಾಗ ಅಂಬೆಯ ಮಾತಾಮಹನಾದ ಹೋತ್ರವಾಹನನು ಅಲ್ಲಿಗೆ ಬಂದನು. ಅವನು ಅಂಬೆಗೆ ಮಹಾತಪಸ್ವಿಯಾದ ಪರಶುರಾಮರನ್ನು ಶರಣುಹೊಂದಬೇಕೆಂದೂ ಅವರು ಭೀಷ್ಮನಿಗೆ ಹೇಳಿ, ಅಂಬೆಯನ್ನು ವಿವಾಹವಾಗುವಂತೆ ಮಾಡುತ್ತಾನೆಂದೂ ಹೇಳಿದನು. ಹೋತ್ರವಾಹನನು ಪರಶುರಾಮರ ಪ್ರಿಯಮಿತ್ರನಾಗಿದ್ದನು.

ಯೋಗಾಯೋಗದಿಂದ ಪರಶುರಾಮರೂ ಮರುದಿನ ಅದೇ ಆಶ್ರಮಕ್ಕೆ ಬಂದರು. ಮಹರ್ಷಿಗಳೆಲ್ಲರೂ ವಿಧಿಪೂರ್ವಕವಾಗಿ ಅವರನ್ನು ಆದರಿಸಿದ ನಂತರ ಅಂಬೆಯು ಪರಶುರಾಮರಿಗೆ ನಮಸ್ಕರಿಸಿ, ತನ್ನ ವ್ಯಥೆಯ ಕಥೆಯನ್ನು ಹೇಳಿದಳು.

ಪರಶುರಾಮರು ಸಾಮೋಪಾಯದಿಂದಲೇ ಕಾರ್ಯವನ್ನು ಸಾಧಿಸಬೇಕೆಂದು ನಿಶ್ಚಯಿಸಿ, ಹಸ್ತಿನಾಪುರದ ಹೊರಭಾಗದಲ್ಲಿ ನಿಂತುಕೊಂಡು ಭೀಷ್ಮನಿಗೆ ಒಂದು ಸಂದೇಶವನ್ನು ಕಳಿಸಿಕೊಟ್ಟರು. ಭೀಷ್ಮನು ಕೂಡಲೇ ಹೊರಟುಬಂದು ಮಹರ್ಷಿಗಳನ್ನು ಸಂಧಿಸಿ, ಯಥೋಚಿತವಾಗಿ ಸತ್ಕರಿಸಿದನು. ಆಗ ಭಾರ್ಗವರು ಅಂಬೆಯ ಸ್ಥಿತಿಯನ್ನು ವರ್ಣಿಸಿ, ಈ ಸ್ಥಿತಿಗೆ ಭೀಷ್ಮನೇ ಕಾರಣನೆಂದೂ ಆದ್ದರಿಂದ ಅವನೇ ಅಂಬೆಯನ್ನು ಪರಿಗ್ರಹಿಸಬೇಕೆಂದೂ ಆದೇಶಿಸಿದರು. ಆದರೆ ಭೀಷ್ಮನು ತಾನು ಮಾಡಿರುವ ಪ್ರತಿಜ್ಞೆಯನ್ನು ತಿಳಿಸಿ, ಅಂಬೆಯನ್ನು ಪತ್ನಿಯನ್ನಾಗಿ ಸ್ವೀಕರಿಸುವುದು ಸಾಧ್ಯವಿಲ್ಲವೆಂದು ಹೇಳಿಬಿಟ್ಟನು.

ಪರಶುರಾಮರು ಭೀಷ್ಮನಿಗೂ ಗುರುಗಳು. ಬಾಲ್ಯದಲ್ಲಿ ಅಸ್ತ್ರಪ್ರಯೋಗವನ್ನು ಅವರೇ ಕಲಿಸಿಕೊಟ್ಟಿದ್ದರು. ಈಗ ಗುರುವಾಕ್ಯವನ್ನು ತಿರಸ್ಕರಿಸಿದ ಭೀಷ್ಮನಲ್ಲಿ ಅವರಿಗೆ ಅಗಾಧ ಕೋಪ ಬಂದಿತು. ಭೀಷ್ಮನೊಡನೆ ಯುದ್ಧಕ್ಕೆ ನಿಂತರು. ತಮ್ಮ ಸಂಕಲ್ಪದಿಂದಲೇ ರಥವನ್ನು ಸಿದ್ಧಮಾಡಿಕೊಂಡ ಪರಶುರಾಮರು ಭೀಷ್ಮನೊಡನೆ ಯುದ್ಧವನ್ನು ಆರಂಭಿಸಿದರು. ಭೂಮಿಯನ್ನು ರಥವನ್ನಾಗಿಯೂ ನಾಲ್ಕು ವೇದಗಳನ್ನೇ ಕುದುರೆಗಳನ್ನಾಗಿಯೂ ವಾಯುದೇವನನ್ನೇ ಸಾರಥಿಯನ್ನಾಗಿಯೂ ವೇದಮಾತೆಯರಾದ ಗಾಯತ್ರೀ-ಸಾವಿತ್ರೀಸರಸ್ವತಿಯರನ್ನು ಕವಚವನ್ನಾಗಿಯೂ ಮಾಡಿಕೊಂಡು ಭೀಷ್ಮನೊಡನೆ ಯುದ್ಧವನ್ನು ಆರಂಭಿಸಿದರು. ಭೀಷ್ಮನು ಪರಶುರಾಮರಿಗೆ ವಂದಿಸಿ, ಅವರಿಂದ ಜಯಶೀಲನಾಗುವಂತೆ ಆಶೀರ್ವಾದವನ್ನು ಬೇಡಿ, ಅನಂತರ ಯುದ್ಧಕ್ಕೆ ನಿಂತನು. ಇಬ್ಬರ ನಡುವೆ ಘೋರಯುದ್ಧವು ಆರಂಭವಾಯಿತು; ಯುದ್ಧವು ಇಪ್ಪತ್ತೊಂದು ದಿನ ನಡೆಯಿತು. ದೇವತೆಗಳು, ಪಿತೃಗಳು, ಗಂಗಾದೇವಿ, ಇವರೆಲ್ಲ ಆಕಾಶದಲ್ಲಿ ಕಾಣಿಸಿಕೊಂಡು ಯುದ್ಧವನ್ನು ನಿಲ್ಲಿಸುವಂತೆ ಪ್ರಾರ್ಥಿಸಿದರು. ಅವರೆಲ್ಲರ ಮಾತನ್ನು ಗೌರವಿಸಿ, ಇಬ್ಬರೂ ಯುದ್ಧವನ್ನು ನಿಲ್ಲಿಸಿದರು. ಪರಶುರಾಮರು ಅಂಬೆಯನ್ನು ಕರೆದು ಯುದ್ಧದಲ್ಲಿ ಭೀಷ್ಮನನ್ನು ಜಯಿಸುವುದು ಸಾಧ್ಯವಿಲ್ಲವೆಂದೂ ಭೀಷನಿಗೆ ಶರಣಾಗುವುದು ಒಳಿತೆಂದೂ ಹೇಳಿದರು. ಆದರೆ ಅಂಬೆಯು ತಾನೇ ಸ್ವತಃ ಭೀಷ್ಮನನ್ನು ಸಂಹರಿಸುವ ಶಕ್ತಿಯನ್ನು ತಪಸ್ಸಿನಿಂದ ಪಡೆದುಕೊಳ್ಳುವುದಾಗಿ ಹೇಳಿ ಹೊರಟು ಹೋದಳು.

ಹೀಗೆ ನಮ್ಮ ಪರಂಪರೆಯ ಹಲವು ಕಾವ್ಯ-ಪುರಾಣಗಳಲ್ಲಿ ಪರಶುರಾಮರು ಉಲ್ಲೇಖಿಸಲ್ಪಟ್ಟಿದ್ದಾರೆ. ಸಾವರ್ಣಿಮನ್ವಂತರದಲ್ಲಿ ಪರಶುರಾಮರು ವ್ಯಾಸ, ಗಾಲವ, ದೀಪ್ತಿಮಾನ್, ಕೃಪ, ಋಷ್ಯಶೃಂಗ, ಅಶ್ವತ್ಥಾಮರ ಜೊತೆ ಸಪ್ತರ್ಷಿಗಳಲ್ಲಿ ಒಬ್ಬರಾಗಿದ್ದಾರೆ.


(ಪ್ರಾಚೀನ ಭಾರತದ ಮಹರ್ಷಿಗಳು - ಡಾ. ಎಸ್. ಹೇಮಲತಾ)