Hindu Vani
Index
ಕ್ಷೇತ್ರ ದರ್ಶನ
ವಿದ್ಯಾಧಿದೇವತೆ ಹಯಗ್ರೀವ ಸ್ವಾಮಿ ಕ್ಷೇತ್ರ
“ಜ್ಞಾನಾನಂದಂ ಮಯಂ ದೇವಂ ನಿರ್ಮಲ ಸ್ಪಟಿಕಾಕೃತಿಂ ಆಧಾರಂ ಸರ್ವ ವಿದ್ಯಾನಾಂ ಹಯಗ್ರೀವಂ ಉಪಾಸ್ಮಹೇ”
ಈ ಜಗತ್ತಿನಲ್ಲಿ ಪ್ರತಿಯೊಂದು ವಿಷಯಕ್ಕೂ ಘಟನೆಗೂ ಒಂದು ಕಾರಣವುಂಟು ಎಂಬುದನ್ನು ಅರಿತ ಮನುಜ ಕುಲ ಅದರ ಆಗು ಹೋಗುಗಳನ್ನು ತನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ಅನುಭವಿಸುತ್ತಾ ಸಾಗುತ್ತಿದೆ. ಕಾರ್ಯಕ್ಕೊಂದು ಕಾರಣ, ಕಾರಣಕ್ಕೊಂದು ಸಮಸ್ಯೆ, ಸಮಸ್ಯೆಗೊಂದು ಪರಿಹಾರವೆಂಬುದು ಬಲ್ಲ ಮನುಜ ಈ ಕಾರ್ಯ, ಕಾರಣ ಸಮಸ್ಯೆ ಪರಿಹಾರಗಳಲ್ಲಿ ಆ ಭಗವಂತನ ಕೈಚಳಕವನ್ನು ಹುಡುಕುತ್ತಾನೆ. ಹೊಣೆ ಮಾಡುತ್ತಾನೆ.
ಅಂತೆಯೇ ವಿದ್ಯೆ, ಬುದ್ದಿ, ಅರೋಗ್ಯ ಸಿರಿಸಂಪತ್ತುಗಳಿಗಾಗಿ ಕೊನೆಯವರೆಗೂ ಹೋರಾಟದ ಬದುಕು ಮನುಕುಲದ್ದು. ಈ ಹೋರಾಟದ ಸೂತ್ರದಾರ ಆ ಭಗವಂತನೆಂದು ಆತನನ್ನು ತನ್ನೊಡನೇ ಅನೇಕ ಕ್ಷೇತ್ರಗಳಲ್ಲಿ ವಿವಿಧ ರೂಪಗಳಲ್ಲಿ ಬಗೆಬಗೆಯ ರೀತಿಯಲ್ಲಿ ಆರಾಧಿಸಿ ಪೂಜಿಸಿ ಒಲಿಸಿ, ತನ್ನೆಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನೆರವೇರೆಸಿಕೊಳ್ಳುವಲ್ಲಿ ಮನುಜ ತನ್ನದೇ ಆದ ದಾರಿ ಕಂಡುಕೊಂಡಿದ್ದಾನೆ. ಇಂತಹ ದೈವ ಸಾನಿಧ್ಯವಿರುವ ಪವಿತ್ರ ಕ್ಷೇತ್ರಗಳಲ್ಲಿ ವಿದ್ಯೆಗೆ ಅಧಿದೇವತೆಯಾಗಿ ಹಯಗ್ರೀವ ಸ್ವಾಮಿ ನೆಲೆಸಿರುವ ಬೆಂಗಳೂರಿನ ಹೃದಯ ಭಾಗದ ಶ್ರೀ ಹಯಗ್ರೀವ ದೇವಾಲಯ ಕ್ಷೇತ್ರ ಒಂದು. ಈ ಕ್ಷೇತ್ರವು ಬೆಂಗಳೂರಿನ ಮೆಜಸ್ಟಿಕ್ ಪ್ರದೇಶದಲ್ಲಿದೆ. ಸದಾ ಜನಜಂಗುಳಿಯ ಪ್ರದೇಶದಲ್ಲಿದ್ದರೂ ಸುಂದರ ಆವರಣದೊಳಗೆ ಪ್ರಶಾಂತ ವಾತಾವರಣದಲ್ಲಿ ದೇಗುಲದ ಒಳಹೊಕ್ಕಂತೆ ನಿರ್ಮಲ ಮನಸ್ಸು ನಮ್ಮದಾಗುತ್ತದೆ. ವಿದ್ಯೆಗೆ ಅಧಿದೈವವಾ ಸಹಸ್ರಾರು ಭಕ್ತರ ಅದರಲ್ಲೂ ವಿದ್ಯಾರ್ಥಿಗಳ ಆರಾಧ್ಯ ದೈವವಾಗಿ ಆರಾದಿಸಲ್ಪಡುತ್ತಿದೆ.
ಹಯಗ್ರೀವ ಅವತಾರ ಪೌರಾಣಿಕ ಹಿನ್ನೆಲೆ: ಹಿಂದೆ ಹಯಗ್ರೀವ ನೆಂಬ ಅಸುರನು ದೇವತೆಯನ್ನು ಒಲಿಸಿಕೊಂಡು ವರ ಪಡೆದು ತನಗೆ ಅಂತ್ಯವೇ ಇಲ್ಲವೆಂಬ ಅಹಂನಿಂದ ಮೂರು ಲೋಕಗಳಲ್ಲೂ ದರ್ಪದಿಂದ ಮೆರೆಯುತ್ತಿರಲು ಈತನ ಉಪಟಳ ತಾಳಲಾರದೇ ದೇವಾನುದೇವತೆಗಳು ಒಂದಾಗಿ ಶ್ರೀ ಮನ್ನಾರಾಯಣನ್ನು ಮೊರೆಹೋಗಲು ಆ ಮಹಾವಿಷ್ಣುವು ಮಣಿದು ಅಸುರನ ಸಂಹಾರಕ್ಕಾಗಿ ಆತನೊಂದಿಗೆ ಹೋರಾಡಲು ಮುಂದಾದನಂತೆ ಆದರೆ ಹೋರಾಟದಲ್ಲಿ ಫಲಕಾಣದೆ ಬಳಲಿ ತನ್ನ ಧನಸ್ಸನ್ನೆ ತಲೆದಿಂಬಾಗಿಸಿ ಯೋಗನಿದ್ರೆಗೆ ಜಾರಿಬಿಟ್ಟನಂತೆ ಇದನ್ನು ಕಂಡ ಹಯಗ್ರೀವ ಅಸುರನು ಮಹಾವಿಷ್ಣುವೇ ತನ್ನನ್ನು ಸೋಲಿಸಲಾಗದೇ ಹಿಂದಿರುಗಿದನಲ್ಲಾ ಎಂದು ಇನ್ನು ತನ್ನನ್ನು ನಿಗ್ರಹಿಸುವವರಾರು ಇಲ್ಲವೆಂಬ ಅಹಂಕಾರದಿಂದ ತನ್ನ ಉಪಟಳವನ್ನು ಮತ್ತಷ್ಟು ಹೆಚ್ಚಿಸಲು ದಾರಿ ಕಾಣದೆ ದೇವಾನು ದೇವತೆಗಳು ವಿಷ್ಣುವನ್ನು ಮತ್ತೆ ಮೊರೆಹೋದರಂತೆ. ಆಗ ಅಲ್ಲಿಗೆ ಆಗಮಿಸಿದ ಬ್ರಹ್ಮ ಮಹೇಶ್ವರರು ವಿಷ್ಣುವನ್ನು ಯೋಗ ನಿದ್ರೆಯಿಂದ ಎದ್ದೇಳಿಸಲು ಪ್ರಯತ್ನಿಸಿ ಸೋತು ಕೊನೆಗೆ ಧನಸ್ಸಿನಿಂದ ಜೋರಾದ ಝೇಂಕಾರವನ್ನು ಮಾಡಿಸಲು ಆ ರಭಸದಲ್ಲಿ ಧನಸ್ಸಿನ ತಂತಿಯು ಅಚಾತೂರ್ಯವಾಗಿ ಯೋಗನಿದ್ರೆಯಲ್ಲಿದ್ದ ವಿಷ್ಣುವಿನ ತಲೆಯನ್ನು ಕೊಯ್ದಿತಂತೆ, ತಲೆ ಇಲ್ಲದ ವಿಷ್ಣುವನ್ನು ಕಂಡು ಬ್ರಹ್ಮ ಮಹೇಶ್ವರರು ನೊಂದು ದಿಗ್ಗಾಂತರಾಗಿ ತಾಯಿ ಜಗನ್ಮಾತೆಯ ಮೊರೆಯಿಡಲು ಮಹಾಮಾಯೆ ದುರ್ಗೆಯು ಇದು ಅಸುರನಿಗೆ ನೀಡಿದ್ದ ವರವನ್ನು ಪಾಲಿಸಲೆಂದು ತಾನು ಮಾಡಿದ ಮಾಯೆ ಎಂದು ಹೇಳಿ ಒಂದು ಶ್ವೇತ ಹಯದ ಮುಖವನ್ನು ಬ್ರಹ್ಮನಿಗೆ ನೀಡಿ ಆ ಮೂಖವನ್ನು ವಿಷ್ಣುವಿನ ದೇಹಕ್ಕೆ ಜೋಡಿಸಲು ಅಣತಿ ಮಾಡಿದಳಂತೆ. ಹೀಗೆ ಹಯದ ಮುಖವನ್ನು ಹೊಂದಿದ ವಿಷ್ಣುವು ಯೋಗ ನಿದ್ರೆಯಿಂದೆದ್ದು ಹಯಗ್ರೀವ ಅಸುರನನ್ನು ಸಂಹರಿಸಿ ಹಯಗ್ರೀವನೆನಿಸಿದನಂತೆ.
ಶ್ರೀ ವಿದ್ಯಾಧಿದೇವತೆ ಹಿನ್ನೆಲೆ: ಒಮ್ಮೆ ವಿಶಿಷ್ಟಾದ್ವತ ಸಿದ್ಧಾಂತದ ಪ್ರತಿಪಾದಕಾರಾದ ರಾಮಾನುಜಾಚಾರ್ಯರು ಒಮ್ಮೆ ಬ್ರಹ್ಮ ಸೂತ್ರ ಭಾಷ್ಯ”ವನ್ನು ತಾಯಿ ಸರಸ್ವತಿದೇವಿಯ ಮಂದಿರದಲ್ಲಿ ದೇವರ ಮುಂದೆ ಮಂಡಿಸಿದರಂತೆ ಮಹಾಭಾಷ್ಯವನ್ನು ಕೇಳಿ ಸಂಪ್ರೀತಳಾದ ತಾಯಿ ಸರಸ್ವತಿಯು ಅದಕ್ಕೆ "ಶ್ರೀಭಾಷ್ಯಂ” ಎಂದು ಹೆಸರಿಸಿದಳಂತೆ. ಅಲ್ಲದೆ ಯತಿರಾಜರಿಗೆ ಚತುರ್ಭುಜ ಭೂಷಿತನಾದ, ಶ್ವೇತವಸ್ತರದಾರಿಯಾದ, ಶ್ವೇತಾಶ್ವಮುಖಿ, ಬಿಳಿಯ ಕಮಲ ಪುಷ್ಪದಲ್ಲಿ ತನ್ನೆರಡೂ ಕೈಗಳಲ್ಲಿ ಶಂಖ ಚಕ್ರ, ಒಂದು ಕೈಯಲ್ಲಿ ಪುಸ್ತಕ ಹಿಡಿದು ಮತ್ತೊಂದರಲ್ಲಿ ಜಪಮಾಲೆ ಹೊಂದಿ ಕಾಲಿಗೆ ಗೆಜ್ಜೆ ಕಟ್ಟಿ ಪತ್ನಿ ಲಕ್ಷ್ಮಿಯೊಡನೆ ಆಸೀನನಾದ ಹಯಗ್ರೀವ ಸ್ವಾಮಿಯ ಮೂರ್ತಿಯನ್ನಿತ್ತಳಂತೆ. ಹೀಗೆ ವಿದ್ಯೆಗೆ ಅದಿದೇವತೆಯಾದನು ಆ ಭಗವಂತ.
ಮತ್ತೊಂದು ಘಟನೆಯಂತೆ ಒಮ್ಮೆ ಶ್ರೀ ವೈಷ್ಣವಾಚಾರ್ಯರಾದ ವೇದಾಂತ ದೇಶಿಕರು ಒಮ್ಮೆ ಯಾತ್ರೆ ಮುಗಿಸಿಕೊಂಡು ಕಂಚಿಗೆ ಹಿಂದಿರುಗುವ ಮಾರ್ಗ ಮಧ್ಯೆ ಕತ್ತಲಾಗಲು ರಾತ್ರಿ ಪ್ರಯಾಣ ಬೇಡವೆಂದು ಹತ್ತಿರದ ಶ್ರೀಮಂತ ಧಾನ್ಯವ್ಯಾಪಾರಿಯ ಮನೆಯಲ್ಲಿ ಆಶ್ರಯ ಪಡೆದರಂತೆ ಅಂದು ಹಯಗ್ರೀವನಿಗೆ ನೈವೇಧ್ಯ ನೀಡಲು ಏನೂ ದೊರೆಯದೇ ಬರಿ ನೀರನ್ನು ನೈವೇಧ್ಯ ಮಾಡಿ ಬೇಸರದಿಂದ ಮಲಗಿದರಂತೆ ಮಧ್ಯ ರಾತ್ರಿ ವ್ಯಾಪಾರಿಯು ದೇಶಿಕರ ಬಳಿ ಬಂದು ಎಚ್ಚರಗೊಳಿಸಿ ನಿಮ್ಮ ಶ್ವೇತಾಶ್ವವು ನಮ್ಮ ಉಗ್ರಾಣದಲ್ಲಿದ್ದ ಕಡಲೆ, ಹೆಸರು ಹುರುಳಿಯನ್ನು ತಿಂದು ಹಾಕುತ್ತಿದೆ ದಯಮಾಡಿ ಬಂದು ಕಟ್ಟಿ ಹಾಕಿ ಎನ್ನಲು ಆಶ್ಚರ್ಯಗೊಂಡ ಅವರು ಉಗ್ರಾಣಕ್ಕೆ ಹೋಗಿ ನೋಡಲು ದಿವ್ಯ ತೇಜಸ್ಸಿನಿಂದ ದಿವ್ಯ ಜ್ಯೋತಿಯೊಂದು ಕಂಡು ಬಂದಿತಂತೆ. ಕುದುರೆ ತಿಂದ ಧಾನ್ಯದ ಚೀಲವು ಚಿನ್ನದಿಂದ ತುಂಬಿತ್ತಂತೆ ಅಂದಿನಿಂದ ಹಯಗ್ರೀವನಿಗೆ ಕಡಲೆ ಹುರುಳಿ ಬೆಲ್ಲದ ನೈವೇಧ್ಯ ಪ್ರತೀತಿಯಾಯಿತಂತೆ.
ಮತ್ತೊಂದು ಸಂಧರ್ಭದಲ್ಲಿ ಉಡುಪಿಯ ಅಕ್ಕಸಾಲಿಗನೊಮ್ಮೆ ಗಣಪತಿಯ ವಿಗ್ರಹವನ್ನು ಮಾಡಲು ಮುಂದಾಗಿ ಎಷ್ಟೇ ಪ್ರಯತ್ನಿಸಿದರೂ ಆ ವಿಗ್ರಹದ ಮುಖವು ಆನೆಯ ಮುಖದಂತಾಗದೆ ಅಶ್ವದ ಮುಖವಾಗಿಯೇ ರೂಪುಗೊಳ್ಳತ್ತಿತಂತೆ ಬೇಸತ್ತ ಅಕ್ಕ ಸಾಲಿಗನು ಆ ವಿಗ್ರಹವನ್ನು ಕಸದ ಬುಟ್ಟಿಗೆ ಹಾಕಿ ಬಿಟ್ಟನಂತೆ. ಅಂದೇ ರಾತ್ರಿ ಉಡುಪಿಯ ಮಠ ಸ್ಥಾಪಿಸಿದ ಶ್ರೀವಾದಿರಾಜಸ್ವಾಮಿಗಳ ಕನಸಿನಲ್ಲಿ ಮಹಾವಿಷ್ಣುವು ಕಾಣಸಿಕೊಂಡು ಅಶ್ವ ಮುಖದ ರೂಪದಲ್ಲಿರುವ ನನ್ನ ವಿಗ್ರಹವನ್ನು ಅಕ್ಕಸಾಲಿಗನು ಧೂಳಿನಲ್ಲಿಟ್ಟಿರುವನು ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡು ಎಂದು ಆದೇಶಿಸಿದಂತಾಯಿತಂತೆ.
ಭಗವಂತನ ಆಜ್ಞಾನುಸಾರ ವಾದಿರಾಜರು ಬಂದು ನೋಡಲು ಹಯಗ್ರೀವ ಸ್ವಾಮಿಯ ವಿಗ್ರಹವು ಗೋಚರಿಸಲು ಆನಂದ ಭರಿತರಾದ ಸ್ವಾಮಿಗಳು ಆ ವಿಗ್ರಹವನ್ನು ತಂದು ಮಠದಲ್ಲಿ ಆರಾದಿಸಲು ಪ್ರಾರಂಬಿಸಿದರಂತೆ. ಹಯಗ್ರೀವ ಸ್ವಾಮಿಗೆ ಪ್ರತಿನಿತ್ಯ ಒಂದು ಹರಿವಾಣದಲ್ಲಿ ಬೆಲ್ಲ ಕಡಲೆ ತೆಂಗಿನ ಕಾಯಿಯನ್ನಿಟ್ಟು ಆ ಹರಿವಾಣವನ್ನು ತಮ್ಮ ತಲೆಯ ಮೇಲಿಟ್ಟು ನೈವೇದ್ಯ ನೀಡಲು ಸಾಕ್ಷಾತ್ ಹಯಗ್ರೀವ ಸ್ವಾಮಿಯೇ ಶ್ವೇತಾಶ್ವ ರೂಪದಲ್ಲಿ ಬಂದು ತನ್ನೆರಡೂ ಮುಂಗಾಲುಗಳನ್ನು ವಾದಿರಾಜರ ಭುಜದ ಮೇಲಿಟ್ಟು ನೈವೇಧ್ಯವನ್ನು ಸ್ವೀಕರಿಸುತ್ತಿದ್ದರಂತೆ. ಹೀಗೆ ಜ್ಞಾನ ಹಾಗು ವಿದ್ಯೆಗೆ ಅಧಿ ದೇವತೆಯಾಗಿ ಹಯಗ್ರೀವ ಸ್ವಾಮಿಯನ್ನು ಪೂಜಿಸಲಾಗುತ್ತದೆ.
ಶ್ರೀ ವೈಷ್ಣವರಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮುನ್ನ ಸ್ವಾಮಿ ಹಯಗ್ರೀವನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಅಕ್ಷರಾಭ್ಯಾಸ ಮಾಡಿಸುವ ಸಂಪ್ರದಾಯವಿದೆ. ತಮಿಳು ನಾಡಿನ ಶ್ರೀರಂಗದ ದೇವಾಲಯದ ಆವರಣದಲ್ಲಿರುವ ಹಯಗ್ರೀವ ದೇವಾಲಯ, ವೇದಾಂತದೇಶಿಕ ಸ್ವಾಮಿಗಳ ಶಿಷ್ಯರಾಗಿದ್ದ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಜೀಯರ್ ಸ್ವಾಮಿಗಳಿಂದ ಮೈಸೂರಿನಲ್ಲಿ ಸ್ಥಾಪಿಸಲ್ಪಟ್ಟ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದ ಶ್ರೀಲಕ್ಷ್ಮೀ ಹಯಗ್ರೀವ ಸ್ವಾಮಿ ದೇವಾಲಯಗಳು ಪ್ರಸಿದ್ಧವಾದವು. ಈ ಪರಕಾಲ ಮಠದ ಒಂದು ಭಾಗವಾಗಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿನ ಹಯಗ್ರೀವ ಸ್ವಾಮಿ ದೇವಾಲಯ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು ಇಲ್ಲಿನ ಮೂಲ ವಿಗ್ರಹವು ನಯನ ಮನೋಹರವಾಗಿ ಧನಾತ್ಮಕ ಶಕ್ತಿಭರಿತವಾಗಿ ವಿದ್ಯೆಗೆ ಅಧಿದೇವತೆ ಎಂಬ ಮಾತಿಗೆ ಸಂಕೇತವಾಗಿ ನಂಬಿ ಬರುವ ಭಕ್ತರನ್ನು ಸಲಹುತ್ತಿದೆ ಒಳಿತನ್ನು ಕಂಡ ಎಷ್ಟೋ ಭಕ್ತರ ಆರಾಧ್ಯದೈವವಾಗಿ ನೆಲೆನಿಂತಿದೆ.
“ಹಯಗ್ರೀವನಿಗಿಂದ ಮಂಗಳವಾದ್ದದ್ದು ಮತ್ತೊಂದಿಲ್ಲ, ಹಯಗ್ರೀವನಿಗಿಂತ ಪಾಪಗಳಿಂದ ಮುಕ್ತಿ ಹೊಂದುವ ಪಾವನ 'ತ್ವ ಮತ್ತೊಂದಿಲ್ಲ, ಹಯಗ್ರೀವನಿಗಿಂತ ಹಿರಿದಾದ ದೈವವಿಲ್ಲ. ಅವನಲ್ಲಿ ಶರಣಾದರೆ ದುಃಖವೇ ಇಲ್ಲ” ಎಂದು ವಾದಿರಾಜ ಸ್ವಾಮಿಗಳು ತಮ್ಮ ಹಯಗ್ರೀವ ಸ್ತೋತ್ರದಲ್ಲಿ ಹಾಡಿ ಹೊಗಳಿದ್ದಾರೆ. ಇಂತಹ ಹಯಗ್ರೀವ ಸ್ವಾಮಿಯ ಸ್ಪಟಿಕಾಕೃತಿ ಭಕ್ತರ ಮನದಲ್ಲಿ ಜ್ಞಾನದ ದಿವ್ಯ ಜೋತಿಯನ್ನು ಬೆಳಗಲು ಈ ಕ್ಷೇತ್ರಗಳಲ್ಲಿ ಸ್ವಾಮಿ ನೆಲೆನಿಂತಿದ್ದಾರೆ.
ಈ ದೇವಾಲಯವು ನೋಡಲು ಹೊರ ನೋಟಕ್ಕೆ ಚಿಕ್ಕದೆನಿಸಿದರೂ ಒಳಹೊಕ್ಕಂತೆ ವಿಶಾಲ ಪ್ರಾಂಗಣ ಹೊಂದಿದ್ದು, ದೇವಾಲಯದ ಒಳ ಆವರಣದಲ್ಲಿ ಗುರು ಪರಂಪರೆಯ ಪ್ರತಿಬಿಂಬಿಸುವ ವಿವಿಧ ಆಕರ್ಷಕ ಚಿತ್ರ ಪಟಗಳು ಸುಂದರ ಕಂಬಗಳು ಮನೋಹರವಾಗಿವೆ. ಗರ್ಭ ಗುಡಿಯಲ್ಲಿ ವಿಶೇಷ ಸಂಪ್ರದಾಯ ಆಚಾರಗಳಿಂದ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಭಕ್ತರನ್ನು ಉದ್ಧರಿಸುತ್ತ ಹಯಗ್ರೀವ ಸ್ವಾಮಿಯು ಸುಂದರ ವಿಗ್ರರೂಪದಲ್ಲಿ ನೆಲೆಸಿದ್ದಾನೆ..
ಈ ಸ್ವಾಮಿಗೆ ಜೇನು ತುಪ್ಪದ ಅಭಿಷೇಕ ನೆರವೇರಿಸಿ ವ್ರತಾಚರಿಸಿದರೆ ವಿದ್ಯೆಯಲ್ಲಿ ಯಾವುದೇ ಅಡಚಣೆ ಉಂಟಾಗದು ಯಶಸ್ಸು ದೊರೆಯುವುದೆಂಬ ಅಚಲವಾದ ನಂಬಿಕೆ ಭಕ್ತರಲ್ಲಿದೆ. ಹಾಗೆಂದೇ ಈ ದೇಗುಲಕ್ಕೆ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಆರಾದಿಸುತ್ತಾರೆ ರೇಷ್ಮೆ ದಾರದಲ್ಲಿ ಪೋಣಿಸಿದ ಏಲಕ್ಕಿ ಮಾಲೆ ಅರ್ಪಣೆ ಈ ಸ್ವಾಮಿಗೆ ವಿಶೇಷ ಸೇವೆ. ಕಡಲೆ ಬೇಳೆ ಬೆಲ್ಲದ ನೈವೇಧ್ಯ ವಿಶೇಷ. ಪ್ರತಿನಿತ್ಯವೂ ಸ್ವಾಮಿಗೆ ವಿಶೇಷ ಪೂಜಾಕೈಂಕರ್ಯ ನಡೆಸಿ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಈ ದೇಗುಲದಲ್ಲಿ ಸಂಕಲ್ಪ ಮಾಡಿ ಸ್ವಾಮಿಗೆ ಜೇನುತುಪ್ಪ ಅಭಿಷೇಕ ಮಾಡಿಸಿ ಪ್ರಸಾದ ರೂಪದಲಿ ಜೇನುತುಪ್ಪ ಪಡೆದು ಪ್ರತಿನಿತ್ಯ ಸರಸ್ವತಿ ಮತ್ತು ಹಯಗ್ರೀವ ಸ್ತೋತ್ರ ಪಠಿಸಿ ಖಾಲಿ ಹೊಟ್ಟೆಯಲ್ಲಿ ಪ್ರಸಾದ ಜೇನುತುಪ್ಪ ಸವಿಯುವುದರಿಂದ ವಿದ್ಯೆಯಲ್ಲಿ ಬುದ್ದಿಯಲ್ಲಿ ಜ್ಞಾನದಲ್ಲಿ ಯಶಸ್ಸನ್ನು ಹೊಂದುವರೆಂದು ಹೇಳಲಾಗುತ್ತದೆ.
ಯಾತ್ರಿಕರಿಗೆ ವಿಶೇಷ ಮಾಹಿತಿ: ಈ ದೇವಾಲಯವು ಬೆಂಗಳೂರಿನ ಹೃದಯ ಭಾಗವಾದ ಕೆಂಪೇಗೌಡ ಬಸ್ ನಿಲ್ದಾಣದ ಎದುರಿಗೆ ಇದೆ. ಇಲ್ಲಿಗೆ ಕರ್ನಾಟಕದ ಎಲ್ಲಾ ಪ್ರದೇಶಗಳಿಂದಲೂ ಬಸ್ ವ್ಯವಸ್ಥೆ ಇದೆ. ಪ್ರತಿ ಗುರುವಾರದಂದು ಜೇನುತುಪ್ಪ ಅಭಿಷೇಕ ನೆರವೇರಿಸಲಾಗುತ್ತದೆ. ಸುತ್ತಮುತ್ತಲಲ್ಲಿ ಉತ್ತಮ ವಸತಿ ಸೌಕರ್ಯವಿದೆ. ಪ್ರತಿನಿತ್ಯ ಬೆಳಿಗ್ಗೆ 8 ರಿಂದ ಮಧ್ಯಾನ 12.20 ರವರೆಗೂ ಮತ್ತು ಸಂಜೆ 6 ರಿಂದ 8.30 ರವರೆಗೂ ತೆರೆದಿರುತ್ತದೆ. ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.