Hindu Vani
Index
ಧರ್ಮ
ಆಚಾರ್ಯ ಶಂಕರರ ನಾಲ್ವರು ಶಿಷ್ಯರು
ಅದೈತ ತತ್ವದ ಪ್ರತಿಪಾದಕರಾದ ಆದಿ ಶಂಕರರು ಭಾರತದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ, ಅಲ್ಲಿ ಪ್ರತಿಯೊಂದು ಮಠಕ್ಕೂ ತಮ್ಮ ಶಿಷ್ಯರನ್ನು ನೇಮಿಸಿದ್ದು ಎಲ್ಲರಿಗೂ ವಿದಿತವಾದ ವಿಷಯವೇ ಆಗಿದೆ.ಈಗ ಅವರ ನಾಲ್ಕು ಪ್ರಮುಖ ಶಿಷ್ಯರ ಬಗ್ಗೆ ತಿಳಿಯೋಣ.
ಪದ್ಮಪಾದರು
ಪದ್ಮಪಾದರು ಸದಾನಂದ ಎಂಬ ಮೂಲ ಹೆಸರಿನ ಇವರು ಕಾಶಿಯಲ್ಲಿ ಆಚಾರ್ಯ ಶಂಕರರನ್ನು ಭೇಟಿಯಾದ ನಂತರ ಅವರ ಪ್ರಥಮ ಶಿಷ್ಯರಾದರು. ಒಮ್ಮೆ ಸದಾನಂದರು ಗಂಗಾ ನದಿಯ ಆಚೆ ದಡದಲ್ಲಿದ್ದರು. ಗುರುಗಳು ಅವರನ್ನು “ಸದಾನಂದ ಇತ್ತ ಬಾ”, ಎಂದು ಕರೆದರು. ತ್ವರಿತವಾಗಿ - ಗುರುಗಳ ಬಳಿ ಹೋಗಬೇಕೆಂದು ಚಿಂತಿಸಿ ಗುರುಚರಣವನ್ನೇ ನೆನೆಯುತ್ತಾ ಗಂಗೆಯ ಮೇಲೆಯೇ ನಡೆದು ಬಂದರು. ಇವರ ಗುರು ಭಕ್ತಿಗೆ ಮೆಚ್ಚಿ ಗಂಗೆಯು ಅವರು ಪಾದಗಳನ್ನು ಇಟ್ಟೆಡೆಯಲ್ಲೆಲ್ಲಾ ಒಂದೊಂದು ಕಮಲದ ಹೂವನ್ನು ಆಸರೆಯಾಗಿ ನೀಡಿದಳು.ಸದಾನಂದರು ಯಾವುದೇ ಆತಂಕವಿಲ್ಲದೆ ನದಿಯನ್ನು ದಾಟಿ ಗುರುಗಳ ಬಳಿಗೆ ಬಂದು ಅವರಿಗೆ ನಮಸ್ಕರಿಸಿದರು ಗುರುಗಳು ಅವರಿಗೆ 'ಪದ್ಮಪಾದ' ಎಂಬ ಹೆಸರಿತ್ತರು.
ಮುಂದೆ ಇವರನ್ನು ಆಚಾರ್ಯರು ಪಶ್ಚಿಮ ಆಮ್ನಾಯ ಪೀಠ ಅಂದರೆ ದ್ವಾರಕಾ ಪೀಠದ ಅಧಿಪತಿಗಳನ್ನಾಗಿ ನೇಮಿಸಿದರು.
ಸುರೇಶ್ವರಾಚಾರ್ಯರು
ಸುರೇಶ್ವರಾಚಾರ್ಯರು - ಇವರ ಮೂಲ ಹೆಸರು ಮಂಡನಮಿಶ್ರ ಎಂದು. ಮಾಹಿಷ್ಮತಿಯಲ್ಲಿ ಶಂಕರರು ಮತ್ತು ಇವರ ನಡುವೆ ಭಾರತಿ ದೇವಿಯ ಸಮ್ಮುಖದಲ್ಲಿ ಸನ್ಯಾಸ ಆಶ್ರಮ ಹೆಚ್ಚೇ ಗೃಹಸ್ಥ ಆಶ್ರಮ ಹೆಚ್ಚೇ ಎಂಬ ವಿಷಯದ ಬಗೆಗೆ ವಾದ ವಿವಾದ ನಡೆಯಿತಷ್ಟೇ. ವಾದದಲ್ಲಿ ಆಚಾರ್ಯರ ವಿರುದ್ಧ ಮಂಡನ ಮಿಶ್ರರು ಸೋತಿದ್ದರಿಂದ ಅವರು ಸನ್ಯಾಸ ಸ್ವೀಕರಿಸಬೇಕಾಯಿತು. ಶಂಕರರು ಇವರಿಗೆ ವಿಧ್ಯುಕ್ತವಾಗಿ ಸನ್ಯಾಸವನ್ನು ನೀಡಿ 'ಸುರೇಶ್ವರಾಚಾರ್ಯ' ಎಂಬ ಹೆಸರನ್ನು ಕೊಟ್ಟು ತಮ್ಮ ಎರಡನೇ ಶಿಷ್ಯನನ್ನಾಗಿ ಮಾಡಿಕೊಂಡರು. ಮುಂದೆ ಇವರನ್ನು ದಕ್ಷಿಣಾಮ್ನಾಯ ಪೀಠ ಅಂದರೆ ಶೃಂಗೇರಿ ಪೀಠದ ಅಧಿಪತಿಗಳನ್ನಾಗಿ ನೇಮಿಸಿದರು.
ಹಸ್ತಾಮಲಕರು
ಹಸ್ತಾಮಲಕರು – ಒಮ್ಮೆ ಆಚಾರ್ಯ ಶಂಕರರು ಕೊಲ್ಲೂರಿನ ಬಳಿ ಒಂದು ಅಗ್ರಹಾರದಲ್ಲಿ ಓರ್ವ 13 ವರ್ಷದ ಮೂಕ ಬಾಲಕನನ್ನು ನೋಡಿದರು.ಅವನ ತಂದೆಯು ಬಹಳ ಚಿಂತಿತರಾಗಿ ಅವನನ್ನು ಆಚಾರ್ಯರ ಬಳಿ ಕರೆತಂದರು.ಆಚಾರ್ಯರು ಅವನನ್ನು ಏಕೆ ಜಡನಂತೆ ವರ್ತಿಸುವೆಯಲ್ಲ? “ಎಂದು ಕೇಳಿದರು. ಅವನಾದಾರೋ; ನಾನು ಜಡನಲ್ಲ. ಆದರೆ ನನ್ನ ಸನ್ನಿಧಾನ ಮಾತ್ರದಿಂದ ಜಡವು ಪ್ರವರ್ತಿಸುತ್ತದೆ” ಎಂದು ಉತ್ತರಿಸಿದನು. ಇಷ್ಟೇ ಅಲ್ಲದೆ ಚಿದಾನಂದ ತತ್ವವನ್ನು ನಿರೂಪಿಸುವ ಹನ್ನೆರಡು ಪದ್ಯಗಳನ್ನು ಪಠಿಸಿದನು.
ಸಂತುಷ್ಟರಾದ ಗುರುಗಳು ಅಂಗೈಯಲ್ಲಿರುವ ನೆಲ್ಲಿಕಾಯಿಯಂತೆ ಪರಮತತ್ವವನ್ನು ಸುಸ್ಪಷ್ಟವಾಗಿ ನಿರೂಪಿಸಿದುದರಿಂದ ಅವನಿಗೆ 'ಹಸ್ತಾಮಲಕ' ಎಂಬ ಹೆಸರು ನೀಡಿ, ಸನ್ಯಾಸ ದೀಕ್ಷೆ ಕೊಟ್ಟರು. ಅವನನ್ನು ತಮ್ಮ ಮೂರನೆಯ ಶಿಷ್ಯನನ್ನಾಗಿ ಸ್ವೀಕರಿಸಿದರು. ಮುಂದೆ ಇವರನ್ನು ಪೂರ್ವ ಅಮ್ಮಾಯ ಪೀಠಕ್ಕೆ ಅಂದರೆ ಪುರಿಯಲ್ಲಿನ ಗೋವರ್ಧನ ಪೀಠಕ್ಕೆ ಅಧಿಪತಿಯನ್ನಾಗಿ ನೇಮಿಸಿದರು.
ತೋಟಕಾಚಾರ್ಯ
ತೋಟಕಾಚಾರ್ಯ - ಶೃಂಗೇರಿಯಲ್ಲಿದ್ದಾಗ ಆಚಾರ್ಯರಿಗೆ ಗಿರಿ ಎಂಬ ಓರ್ವ ಶಿಷ್ಯನು ದೊರಕಿದನು. ಇವನಿಗೆ ಗುರುಗಳ ಪಾಠಕ್ಕಿಂತಲೂ ಗುರುಸೇವೆಯಲ್ಲಿಯೇ ಹೆಚ್ಚು ಆಸಕ್ತಿ. ಗುರುಗಳಿಗೆ ಇವನ ಮೇಲೆ ಅತಿ ಪ್ರೀತಿ ಉಂಟಾಯಿತು. ಒಮ್ಮೆ ಶಿಷ್ಯರೆಲ್ಲ ಪಾಠಕ್ಕೆ ಸಿದ್ಧರಾಗಿ ಕುಳಿತಿದ್ದರು. ಗಿರಿ ಗುರುಗಳ ವಸ್ತ್ರವನ್ನು ಒಗೆಯುವುದರಲ್ಲಿಯೇ ಮಗ್ನನಾಗಿದ್ದನು. ಇತರ ಶಿಷ್ಯರು ಗಿರಿಯು ಪಾಠಕ್ಕೆ ಬಂದರೂ ಏನು ಉಪಯೋಗ? ಎಂದು ಹೀಯಾಳಿಸಿದರು. ಇದರಿಂದ ನೊಂದ ಗುರುಗಳು ಶಾರದಾ ಮಾತೆಯನ್ನು ಪ್ರಾರ್ಥಿಸಿ ಅವನಿಗೆ ಸಕಲ ವಿದ್ಯೆಗಳನ್ನೂ ನೀಡುವಂತೆ ಬೇಡಿದರು
ಕೂಡಲೇ ನದಿಯ ತೀರದಲ್ಲಿದ್ದ ಶಿಷ್ಯನು ವಿದ್ಯಾವರ್ಚಸ್ಸಿನಿಂದ ಶೋಭಿಸಿದನು. ಗುರುಗಳನ್ನು ಸಂಸ್ಕೃತದಲ್ಲಿ ಕಾವ್ಯಮಯವಾದ ಪದ್ಯಗಳಿಂದ ಸ್ತುತಿಸುತ್ತ ಅವರ ಬಳಿ ಸಾರಿದನು. ಆ ಪದ್ಯವು 'ತೋಟಕ' ಎಂಬ ವೃತ್ತದಿಂದ ಹೆಣೆದುದಾಗಿತ್ತು. ಇದರಿಂದಾಗಿ ಗುರುಗಳು ಇವನಿಗೆ 'ತೋಟಕಾಚಾರ್ಯ' ಎಂಬ ಹೆಸರು ನೀಡಿದರು. ಮುಂದೆ ಇವರನ್ನು ಉತ್ತರಾಮ್ನಾಯ ಪೀಠ ಅಂದರೆ ಬದರಿಕಾಶ್ರಮದ ಪೀಠಕ್ಕೆ ಅಧಿಪತಿಯಾಗಿ ನೇಮಿಸಿದರು.
ನಾಲ್ಕು ವೇದಗಳಲ್ಲಿ ಬಂದ ಯಾವುದೇ ಧಾರ್ಮಿಕ ಪ್ರಶ್ನೆಗಳಿಗೆ ಈ ನಾಲ್ಕು ಶಿಷ್ಯರು ಅಥವಾ ಅವರ ಮುಂದಿನ ಸ್ವಾಮಿಗಳು ಉತ್ತರಿಸುವರು. ಶಂಕರರ ಈ ನಾಲ್ಕು ಶಿಷ್ಯರನ್ನು ಕಂಡ ವಿದ್ವಾಂಸರು ಈ ನಾಲ್ವರು ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಪುರುಷಾರ್ಥಗಳ ಅಭಿಮಾನಿ ದೇವತೆಗಳಿರಬಹುದೇ? ವಿಮಲವಾದ ಮೋಕ್ಷ ಸಾಮ್ರಾಜ್ಯದ ಸಾಯುಜ್ಯ, ಸಾಮೀಪ್ಯ, ಸಾರೂಪ್ಯ, ಸಾಲೋಕ್ಯ ಎಂಬ ನಾಲ್ಕು ವಿಧಗಳಾಗಿರಬಹುದೇ? ಚತುರ್ಮುಖ ಬ್ರಹ್ಮನ ನಾಲ್ಕು ಮುಖಗಳಿರಬಹುದೇ? ಎಂದು ಚಿಂತಿಸುತ್ತ ಇದ್ದರಂತೆ.