Hindu Vani
Index
ಪ್ರಚಲಿತ
ಪೋಲಾಗುವ ಆಹಾರ ಮತ್ತು ಜಗತ್ತಿನ ಹಸಿವು
ವಿಶ್ವಸಂಸ್ಥೆಯ ಪರಿಸರ ಗತಿವಿಧಿಯು ವ್ಯರ್ಥಗೊಳ್ಳುತ್ತಿರುವ ಆಹಾರ ಪದಾರ್ಥಗಳ ವರದಿಯನ್ನು ಪ್ರಕಟಿಸಿದೆ. ಅದರ ಪ್ರಕಾರ 2022ರ ವರ್ಷದಲ್ಲಿ 105 ಕೋಟಿ ಟನ್‌ಗಳಷ್ಟು ಆಹಾರ ಪದಾರ್ಥಗಳನ್ನು ಚೆಲ್ಲಿಬಿಡಲಾಗಿದೆ. ಅಂದರೆ ಹಸಿದವರು ಉಣ್ಣಬಹುದಾಗಿದ್ದ ಆಹಾರದ ಶೇ20ರಷ್ಟು ಭಾಗವು ವ್ಯರ್ಥವಾಗಿಬಿಟ್ಟಿತ್ತು. ಹೀಗೆ ಉಣ್ಣುವ ಅನ್ನವನ್ನು ಬಿಸಾಡುವ ದೇಶಗಳಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ಅತಿ ತುರ್ತಾಗಿ ಗಮನಹರಿಸಬೇಕಾಗಿರುವ ಈ ವಿಚಾರವೀಗ, ಜಗತ್ತಿನಲ್ಲಿ ದೊರಕುವ ಆಹಾರದ ಸಂಪನ್ಮೂಲ ನಿರ್ವಹಣೆಯ ವ್ಯವಸ್ಥೆಯ ಪ್ರಶ್ನೆಯಾಗಿ ಉಳಿಯದೆ, ನೈತಿಕ ಮತ್ತು ಪರಿಸರ ವಿಫಲತೆಯ ವಿಚಾರವಾಗಿಯೂ ಕೂಡಾ ಮುನ್ನೆಲೆಗೆ ಬಂದಿದೆ.
ಪೋಲಾಗುವ ಆಹಾರದ ವಿಚಾರವೀಗ ಅದರ ತಯಾರಿಯ ಮತ್ತು ಉತ್ಪಾದನೆಯ ಹಂತದಿಂದ ಪ್ರಾರಂಭವಾಗಿ ಅದರ ಹಂಚಿಕೆಯ ಕೊನೆಯ ಕೊಂಡಿಯಾಗಿರುವ ಹೋಟೆಲುಗಳು ಹಾಗೂ ಅಡುಗೆ ಮನೆಯವರೆಗೆ ಹರಡಿದೆ. ಇಷ್ಟಲ್ಲದೆ ಆಹಾರ ಧಾನ್ಯಗಳ ಮತ್ತು ಸಿದ್ಧ ಆಹಾರಗಳ ದಾಸ್ತಾನು ವ್ಯವಸ್ಥೆಯ ಲೋಪವೂ ಸಾಗಣೆ ಮತ್ತು ನಿರ್ವಹಣೆಯ ನಷ್ಟವೂ ಇಲ್ಲಿ ಒಳಗೊಳ್ಳುತ್ತದೆ. ಆಹಾರವನ್ನು ಚೆಲ್ಲುವುದರಲ್ಲಿ ಭಾರತವು ಮೊದಲ ದೇಶವಾಗಿದ್ದರೆ, ಚೀನಾ ದೇಶವು ಎರಡನೆಯ ಸ್ಥಾನವನ್ನು ಪಡೆದಿದೆ. ಈ ರೀತಿ ಸರಾಸರಿ ಒಬ್ಬ ವ್ಯಕ್ತಿಯು ವ್ಯರ್ಥಮಾಡುವ ಆಹಾರವನ್ನು ಗಮನಿಸಿದರೆ ಭಾರತದಲ್ಲಿ ಅದು ತಲಾ55 ಕಿಲೋ ಗ್ರಾಮ್‌ಗಳಾಗಿವೆ. ಆದರೆ ಅಮೆರಿಕಾದಲ್ಲಿ ಅದು ತಲಾ 73 ಕಿಲೋಗಳಾಗಿವೆ. ಭಾರತದ ಜನಸಂಖ್ಯೆಯು ಅಮೆರಿಕಾ ಸಂಖ್ಯೆಯ 4 ಪಟ್ಟು ಹೆಚ್ಚಾಗಿರುವುದರಿಂದ ಈ ರೀತಿ ಭಾರತದಲ್ಲಿ ಒಬ್ಬನಿಂದ ನಷ್ಟವಾಗುವ ಆಹಾರದ ಮೊತ್ತವು ಕಮ್ಮಿಯೆನಿಸಿದರೂ ಒಟ್ಟು ಚೆಲ್ಲುವ ಆಹಾರವು ಮಾತ್ರ ಅಮೆರಿಕಾ ದೇಶಕ್ಕೆ ಹೋಲಿಸಿದಾಗ ಅಪಾರವೆನಿಸುತ್ತದೆ. ಇದು ಅಗಾಧವಾದ ಸಂಪತ್ತಿನ ಸೋಲು ಎನಿಸುತ್ತದೆ. ಅಷ್ಟೇ ಅಲ್ಲ ಇದೊಂದು ಸಾಮಾಜಿಕ ಅನ್ಯಾಯವೂ ಆಗಿದೆ.
8ಕೋಟಿ ಜನರು ಉಣ್ಣಬಹುದಾದ ಆಹಾರವು ಪೋಲಾಗುತ್ತಿದೆ. ಅದೇ ಭಾರತದಲ್ಲಿ ಈಗಲೂ 20ಕೋಟಿ ಜನರು ಹಸಿವಿನಲ್ಲಿ ಬದುಕುವರು ಎನ್ನುವ ವಿಪರ್ಯಾಸವಿದೆ. ಭಾರತವು ಜಗತ್ತಿನಲ್ಲಿ ಅತಿಹೆಚ್ಚು ಆಹಾರ ಧಾನ್ಯಗಳನ್ನು ಉತ್ಪಾದಿಸುವ ದೇಶ. ಆದರೆ ಸದಾ ಕಾಲ ಆಹಾರದ ಅಭಾವವನ್ನು ಅನುಭವಿಸುವ ದೇಶವು ಕೂಡಾ ಭಾರತವೆ. ಬೆಳೆಯುವ ಹೊಲದಿಂದ ಹಿಡಿದು ಉಣ್ಣುವ ತಟ್ಟೆಯವರೆಗೆ ಹರಡಿರುವ ವ್ಯವಸ್ಥೆಯ ಲೋಪವು ಇದಕ್ಕೆ ಬಹು ಮುಖ್ಯ ಕಾರಣವಾಗಿದೆ. ಅಗತ್ಯವಿಲ್ಲದಿದ್ದರೂ ಕೊಂಡುಕೊಂಡು ಸಂಗ್ರಹಿಸುವ ಸ್ವಭಾವವೂ ಅಡುಗೆ ವ್ಯವಸ್ಥೆಯಲ್ಲಿ ಕಾಣುವ ಉತ್ತಮ ಯೋಜನೆಯ ಲೋಪವೂ, ಸಂಗ್ರಹಣೆಯಲ್ಲಿ ಒಳಗೊಂಡ ಅವ್ಯವಸ್ಥೆಯೂ, ಹಂಚಿಕೆಯಲ್ಲಿ ಅಭಾವದ ಪ್ರದರ್ಶನವಾಗಬಾರದೆಂಬ ಧಾವಂತವೂ, ವ್ಯಾಪಾರ ಮಳಿಗೆಗಳಲ್ಲೂ ಸಾಮಾನ್ಯವಾಗಿ ಕಂಡು ಬರುವ ಇಂತಹದೇ ದೋಷಗಳೂ ಶೇ61ರಷ್ಟು ಮನೆಗಳಲ್ಲಿ ನಡೆಯುವ ವ್ಯವಸ್ಥೆಯ ಲೋಪಗಳೂ ಮೇಲೆ ಹೇಳಿದ ವ್ಯರ್ಥ ಹೋಗೆ ಕಾರಣವಾಗಿವೆ.
ಬೆಳೆಯ ನಾಟಿಯಿಂದ ಪ್ರಾರಂಭಗೊಂಡು ಇಳುವರಿಯವರೆಗೆ ಹೆಚ್ಚಿನ ಸ್ಥಳಾವಕಾಶವು ಬೇಕಾಗಿರುವ ವೃತ್ತಿಯಿದ್ದರೆ ಅದು ವ್ಯವಸಾಯ. ಇಷ್ಟಾಗಿಯೂ ಬೆಳೆದ ಬೆಳೆಯನ್ನು ಪೋಲಾಗಲು ಬಿಡುವುದೆಂದರೆ ಅದಕ್ಕಾಗಿ ಮೀಸಲಿಟ್ಟ ಸಂಪನ್ಮೂಲಗಳೂ ವ್ಯರ್ಥವಾದಂತೆ. ಆಹಾರ ಪದಾರ್ಥಗಳನ್ನು ಕೊಳೆಯಲು ಬಿಡುವುದು ಪರಿಸರಕ್ಕೆ ಅಪಾಯಕಾರಿಯಾದ ಮಿಥೇನ್ ಮೊದಲಾದ `ಗ್ರೀನ್‌ಹೌಸ್' ಅನಿಲಗಳು ಹುಟ್ಟಲು ಅವಕಾಶ ನೀಡಿದಂತೆ. ಹಸಿವನ್ನು ನಿರ್ಮೂಲನ ಮಾಡಲು ಹೊರಟ ಸರ್ಕಾರಗಳು ಭಾರತದಲ್ಲಿ ಈ ಆಹಾರದ ಪೋಲನ್ನು ತಪ್ಪಿಸಲು ಪ್ರಯತ್ನಿಸಲೇ ಬೇಕಾಗಿದೆ.
ಈಗಾಗಲೇ ಹೆಚ್ಚುತ್ತಿರುವ ತಾಪಮಾನದ ಹೆಚ್ಚಳ, ಮಳೆಯ ಅನಿಶ್ಚಿತತೆಗಳ ನಡುವೆ ಇರುವ ಮಿತಿಯಲ್ಲಿ ಆಹಾರವನ್ನು ಬೆಳೆದು ಅದನ್ನು ಹಂಚುವ ಮಹತ್ವದ ಕಾರ್ಯವನ್ನು ನಿರ್ವಹಿಸುವ ಅನಿವಾರ್ಯತೆಯು ಆಡಳಿತದ ಮುಂದಿದೆ. ಇಂತಹ ವಾತಾವರಣದಲ್ಲಿ ಘಟಿಸಬಹುದಾದ ಆಹಾರ ಪದಾರ್ಥಗಳು ವ್ಯರ್ಥವಾಗುವುದು, ಆಹಾರದ ಬೇಡಿಕೆಯನ್ನು ಹೆಚ್ಚಿಸುತ್ತದೆ. ಇಂತಹ ಸ್ಥಿತಿಯನ್ನು ಬದಲಾಯಿಸಲೇ ಬೇಕಿದೆ. ಅದಕ್ಕೆ ವೈಯಕ್ತಿಕ ಪ್ರಯತ್ನವೂ ನಡೆಯಬೇಕು. ಅದರೊಂದಿಗೆ ವ್ಯವಸ್ಥೆಯ ಬದಲಾವಣೆಯೂ ಆಗಬೇಕಾಗಿದೆ.
ಮನೆ ಮನೆಗಳೂ ನೈಪುಣ್ಯದ ಆಹಾರ ವ್ಯವಸ್ಥೆಯ ಯೋಜನೆಯನ್ನು ಕಲ್ಪಿಸಿಕೊಳ್ಳಬೇಕು. ಆಪತ್ತಿನಲ್ಲೂ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೋಲಾಗುವ ಆಹಾರದಿಂದ ಜೈವಿಕ ಇಂಧನ ಮತ್ತು ಸಾವಯವಗೊಬ್ಬರದ ಉತ್ಪಾದನೆಯ ಸಾಧ್ಯತೆಗಳನ್ನು ಹುಡುಕಬೇಕಾಗಿದೆ. ಆಹಾರ ಬ್ಯಾಂಕುಗಳ ವ್ಯವಸ್ಥಿತ ವಿತರಣೆಯ ಸೌಲಭ್ಯದಿಂದ ಹೆಚ್ಚುವರಿ ತಿಂಡಿ ತಿನಿಸು, ಆಹಾರಗಳು ತಮ್ಮ ಗಮ್ಯಸ್ಥಾನಗಳಿಗೆ ತಲುಪುವಂತಾಗಬೇಕು. ಇಷ್ಟಾಗಿ ಇವೆಲ್ಲವುಗಳ ಉದ್ದೇಶವು ಯಾರೊಬ್ಬರೂ ಹಸಿವಿನಿಂದ ದಿನ ರಾತ್ರಿಗಳನ್ನು ಕಳೆಯುವಂತಾಗಬಾರದು ಎನ್ನುವುದು.
ಕೃಪೆ: ದಿ ಹಿಂದು ಪತ್ರಿಕೆ