Logo

VHP PUBLICATIONS

Hindu Vani


expand_more

ಕತೆಕತೆ ಕಾರಣ

ಏಕಾಗ್ರತೆಯೇ ಜ್ಞಾನಕ್ಕೆ ಮೂಲ


ನೂರು ಮಂದಿ ಕೌರವರಿಗೂ ಐದು ಮಂದಿ ಪಾಂಡವರಿಗೂ ಗುರುಗಳಾಗಿದ್ದವರು ದ್ರೋಣಾಚಾರ್ಯರು. ಒಂದು ದಿನ ಆಚಾರ್ಯರು ತಮ್ಮ ಶಿಷ್ಯರನ್ನು ಕರೆದು, ನಾಳೆ ನಿಮಗೆ ಬಿಲ್ಲಿನಿಂದ ಬಿಟ್ಟ ಬಾಣದ ಗುರಿಯನ್ನು ಮುಟ್ಟುವ ಪರೀಕ್ಷೆ ಇದೆ ಎಂದು ಹೇಳಿದರು. ಎಲ್ಲರೂ ಬೆಳಿಗ್ಗೆ ಸಿದ್ಧರಾಗಿ ಬನ್ನಿ ಎಂದರು.

ಶಿಷ್ಯರೆಲ್ಲರೂ ಸಿದ್ಧರಾಗಿಯೇ ಬಂದರು. ತಮ್ಮ ಬಿಲ್ಲನ್ನು ಚೆನ್ನಾಗಿ ಹೊಳೆಯುವ ತರಹ ಮಾಡಿದ್ದರು. ಬಾಣವನ್ನು ಹರಿತವಾಗಿ ಮಾಡಿದರು. ಬಿಲ್ಲನ್ನು ಹೆಗಲಲ್ಲಿ ಇಟ್ಟರು, ಬಾಣಗಳನ್ನು ಬತ್ತಳಿಕೆಗಳಲ್ಲಿ ತುಂಬಿ ಬೆನ್ನ ಹಿಂದೆ ಕಟ್ಟಕೊಂಡಿದ್ದರು. ಎಲ್ಲರೂ ನೋಡುತ್ತಿದ್ದಂತೆ ಗುರುಗಳಾದ ದ್ರೋಣಾಚಾರ್ಯರು ಬಂದರು. ಎಲ್ಲ ವಿದ್ಯಾರ್ಥಿಗಳು ಗುರುಗಳಿಗೆ ಕಾಲುಮುಟ್ಟಿ ನಮಸ್ಕರಿಸಿದರು. ಎಲ್ಲರನ್ನೂ ಆಚಾರ್ಯರು ಆಶೀರ್ವದಿಸಿದರು. 'ಎಲ್ಲರೂ ಸಿದ್ಧರಾಗಿರುವಿರಾ' ಎಂದು ಕೇಳಿದರು. ಎಲ್ಲರೂ 'ಹೌದು ಗುರುಗಳೇ' ಎಂದರು.

ದ್ರೋಣಾಚಾರ್ಯರು ಎಲ್ಲರನ್ನೂ ಪಕ್ಕದ ದೊಡ್ಡ ಮೈದಾನಕ್ಕೆ ಕರೆದುಕೊಂಡು ಹೋದರು. ಅಲ್ಲಿ ಒಂದು ಕಡೆ ಎಲ್ಲರನ್ನೂ ನಿಲ್ಲಿಸಿದ ಗುರುಗಳು ಸ್ವಲ್ಪ ದೂರ ನಡೆದು ಹೋದರು. ಅಲ್ಲಿಗೆ ಶಿಷ್ಯರಲ್ಲಿ ಹಿರಿಯವನಾದ ಯುಧಿಷ್ಠಿರನನ್ನು ಹತ್ತಿರ ಕರೆದರು. 

ಕತೆಕತೆ ಕಾರಣ

.

ಬಂದ ಯುಧಿಷ್ಠಿರನನ್ನು ಪಕ್ಕದಲ್ಲಿ ನಿಲ್ಲಿಸಿದ ಗುರುಗಳು ಅವನನ್ನು 'ಮಗೂ ನೋಡು' ಎನ್ನುತ್ತಾ ತಮ್ಮ ಮುಂದೆ ಬೊಟ್ಟು ತೋರಿಸುತ್ತ “ಓ ಅಲ್ಲಿ ಇರುವ ದೊಡ್ಡ ಆಲದ ಮರ ನಿನಗೆ ಕಾಣುತ್ತಿದೆಯೇ' ಎಂದು ಕೇಳಿದರು. ಯುಧಿಷ್ಠಿರನು “ಹೌದು ಗುರುಗಳೇ ಕಾಣುತ್ತಿದೆ” ಎಂದನು. ಗುರುಗಳು ಮುಂದುವರಿದು “ಮಗೂ ಈಗ ನೀನು ಏನು ಮಾಡಬೇಕೆಂದರೆ, ಮರದಲ್ಲಿ ಇಟ್ಟ ಆ ಪಾರಿವಾಳದ ಗೊಂಬೆಯ ಎಡಕಣ್ಣಿಗೆ ಗುರಿ ಹಿಡಿಯಬೇಕು ಸರಿಯೇ” ಎಂದು ಹೇಳಿದರು. ಯುಧಿಷ್ಠಿರನು “ಸರಿ, ಸರಿ, ಗುರುಗಳೇ” ಎನ್ನುತ್ತಾ ಬತ್ತಳಿಕೆಯಿಂದ ಬಾಣವನ್ನು ಹೊರತೆಗೆದನು. ದ್ರೋಣರು ಯುಧಿಷ್ಠಿರನನ್ನು ಮತ್ತೆ ನಿಲ್ಲಿಸಿದರು” ಮಗೂ ಈಗ ನೀನು ಗುರಿ ಇಡಬೇಕಾದುದು ಪಾರಿವಾಳದ ಎಡಕಣ್ಣಿಗೆ, ಸರಿ ತಾನೇ? ಮೊದಲು ನಿನಗೆ ಪಾರಿವಾಳ ಕಾಣುತ್ತಿದೆ ತಾನೇ” ಎಂದರು. 'ಹೌದು' ಎಂದ ಯುಧಿಷ್ಠಿರ. “ಸರಿ ಮರ ಕಾಣುತ್ತಿದೆಯೇನಪ್ಪ” ಎಂದು ಕೇಳಿದರು ಗುರುಗಳು, “ಹೌದು ಗುರುಗಳೇ” ಎಂದ ಯುಧಿಷ್ಠಿರ, “ಮಗೂ ನೀನು ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ ಎಂದುಕೋ. ಹೋಗು ಆಕಡೆ ನಿಲ್ಲು” ಎಂದರು. ಯುಧಿಷ್ಠಿರನು ಹಿಂತಿರುಗಿದನು.

ದ್ರೋಣಾಚಾರ್ಯರು ಈಗ ದುರ್ಯೋಧನನನ್ನು ಕರೆದರು. ಮತ್ತೆ ಮೊದಲಿನಂತೆ ಪರೀಕ್ಷೆ ಏನಿದೆ ಎಂದು ಹೇಳುತ್ತಾ ಮರ, ಹಕ್ಕಿ ಮತ್ತು ಅದರ ಕಣ್ಣಿನ ವಿವರಣೆ ಕೊಡುತ್ತಾ ಗುರಿ ಹಿಡಿ ಎಂದರು. 'ಗುರಿ ಹಿಡಿಯುತ್ತಿದ್ದಂತೆ ಮೊದಲು ಕೇಳಿದಂತೆ ಏನು ಕಾಣುತ್ತದೆ ನಿನಗೆ ಎನ್ನುತ್ತಾ, ಮುಂದುವರಿದು ಮರ ಕಾಣುತ್ತದೆಯೇ ಎನ್ನುವರು. ಕಾಣುತ್ತದೆ ಎಂದೊಡನೆ 'ಸರಿ ನೀನೀಗ ಹಿಂದಿರುಗು' ಎಂದು ಅನುತ್ತೀರ್ಣನನ್ನಾಗಿಸಿದರು.

ಹೀಗೆ ಭೀಮ, ದುಶ್ಯಾಸನರೇ ಮೊದಲಾದವರ ಪರೀಕ್ಷೆ ನಡೆಯಿತು. ಎಲ್ಲರೂ ಗುರಿ ಹಿಡಿಯುತ್ತಿದ್ದಂತೆ ಗುರುಗಳು ಕೇಳುತ್ತಿದ್ದ ಪ್ರಶ್ನೆಗಳಿಗೆಲ್ಲ ಕಾಣುತ್ತಿದೆ ಎನ್ನುತ್ತಿದ್ದರು. ಎಲ್ಲರನ್ನೂ ಹಿಂದೆ ಹೋಗಿ ನಿಲ್ಲು ಎನ್ನುತ್ತಿದ್ದರು.

ಕೊನೆಗೆ ಉಳಿದವನು ಅರ್ಜುನ, ಅವನನ್ನು ಗುರು ದ್ರೋಣರು ಮುಂದೆ ಕರೆದರು. ಅವನು ಅತ್ಯಂತ ಆತ್ಮವಿಶ್ವಾಸದಿಂದ ಬಂದನು. ದ್ರೋಣಾಚಾರ್ಯರು ಅವನನ್ನು ಕುರಿತು “ಮಗೂ ಪರೀಕ್ಷೆಗೆ ಸಿದ್ಧವಾಗಿರುವೆಯಾ” ಎಂದೊಡನೆ ಅರ್ಜುನನು “ಹೌದು ಗುರುಗಳೇ” ಎಂದನು.

ಗುರುಗಳು ಮೊದಲಿನಂತೆ ಪರೀಕ್ಷೆಯ ವಿಚಾರವನ್ನು ವಿವರಿಸಿದರು. ಒಟ್ನಲ್ಲಿ ಪಾರಿವಾಳದ ಎಡಕಣ್ಣಿಗೆ ಗುರಿ ಇಡಬೇಕೆಂಬುದು ಪ್ರಶ್ನೆ ತಾನೇ! ಗುರುಗಳು ಮೊದಲು ಕೇಳುತ್ತಿದ್ದ ಮರ, ಪಾರಿವಾಳ, ಅದರ ಕಣ್ಣುಗಳೆಲ್ಲವು ಕಾಣುತ್ತವೆ ಎಂದು ಅರ್ಜುನನು ಹೇಳಿದನು. ಈಗ ಗುರುಗಳು 'ಹಾಗಾದರೆ ಈಗ ಗುರಿ ಹಿಡಿದು ನಿಲ್ಲು' ಎಂದರು. ಮತ್ತು ಮತ್ತೆ ಕೇಳಿದರು “ಅರ್ಜುನಾ ಮರ ಕಾಣುತ್ತದೆಯೇ” ಎಂದರೆ “ಇಲ್ಲ” ಎಂದನು ಅರ್ಜುನ, ಹಾಗಾದರೆ 'ಪಾರಿವಾಳ' ಎಂದು ಕೇಳಿದರು. ಅದಕ್ಕೂ ಅರ್ಜುನನು 'ಇಲ್ಲ' ಎಂದೇ ಉತ್ತರಿಸಿದನು. ಗುರುಗಳು ಆಶ್ಚರ್ಯಪಟ್ಟಂತೆ ಕೇಳಿದರು 'ಮತ್ತೆ ನೀನು ಯಾವುದನ್ನು ನೋಡುತ್ತಿದ್ದೀಯಾ' ಎಂದು ಕೇಳಿದರು. ಅರ್ಜುನನು 'ನನಗೆ ಪಾರಿವಾಳದ ಎಡ ಕಣ್ಣು ಮಾತ್ರ ಕಾಣುತ್ತಿದೆ' ಎಂದನು.

ಆಗ ಗುರುಗಳಾದ ದ್ರೋಣಾಚಾರ್ಯರು “ಸರಿ ಭೇಷ್ ಬಾಣ ಬಿಡು” ಎಂದು ಅರ್ಜುನನ ಬೆನ್ನು ತಟ್ಟಿದರು. ಅರ್ಜುನನ ಬಾಣವು ರೊಯ್ಯನೆ ಹೋಗಿ ಪಾರಿವಾಳದ ಎಡಕಣ್ಣಿಗೆ ನಾಟಿತು ಮತ್ತು ಪಾರಿವಾಳದ ಬೊಂಬೆ ನೆಲಕ್ಕೆ ಬಿದ್ದಿತು.