Hindu Vani
Index
ಸಂವಿಧಾನ
ರಿಲಿಜನ್ನುಗಳು ಮತ್ತು ವಿವಿಧ ಸಂಪ್ರದಾಯಗಳನ್ನು ತೌಲನಿಕವಾಗಿ ಅಧ್ಯಯನ ಮಾಡದವರಿಗೆ ಎಲ್ಲವೂ ಒಂದೇ ರೀತಿ ಕಾಣುತ್ತದೆ! ಅಂಥವರಿಗೆ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ಸ್ಥಿತಿಯು ಭಾರತದಲ್ಲಿರುವ ಅಲ್ಪಸಂಖ್ಯಾತರ ಸ್ಥಿತಿಯಂತೆಯೇ ಕಾಣುತ್ತದೆ. ಭಾರತದಲ್ಲಿಯೂ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿರುವಂತೆಯೇ ಬಹುಸಂಖ್ಯಾತರು ದಬ್ಬಾಳಿಕೆ ಮಾಡುವವರಾಗಿ ಕಾಣುತ್ತಾರೆ. ಮತ್ತು ಅಂತಹ ದಬ್ಬಾಳಿಕೆಗೆ ಪಾಕಿಸ್ತಾನದಲ್ಲಿ ಯಾವ ಕಾರಣವಿದೆಯೋ ಅದೇ ಕಾರಣ ಅವರಿಗೆ ಭಾರತದಲ್ಲಿಯೂ ಕಾಣುತ್ತದೆ.ವಿವಿಧ ರಿಲಿಜನ್ನುಗಳು ಮತ್ತು ವಿವಿಧ ಸಂಪ್ರದಾಯಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿ ಅವುಗಳನ್ನು ತರತಮ ಜ್ಞಾನದಿಂದ ನೋಡದವರು ಸಂವಿಧಾನಕ್ಕೆ ಗೌರವ ನೀಡುವವರನ್ನೂ ನೀಡದವರನ್ನೂ ಒಂದೇ ಆಗಿ ಕಾಣುವ ಮುಗ್ಧತೆಯನ್ನು ಪ್ರದರ್ಶಿಸುತ್ತಾರೆ. ಸಂವಿಧಾನದಲ್ಲಿ ಅನೇಕ ಆಶಯಗಳಿವೆಯಾದರೂ ಅದರ ಒಂದು ಬಹುಮುಖ್ಯ ಆಶಯವೇನೆಂದರೆ ದೇಶದ ಜನರು ತಮ್ಮ ಸಾಮಾಜಿಕ ಬದುಕಿನಲ್ಲಿ ಸೌಹಾರ್ದ ಸಾಮರಸ್ಯವನ್ನು ಹೊಂದಿರಬೇಕು ಎನ್ನುವುದು. ಈಗ, ತಕ್ಕಡಿಯ ಒಂದು ಬದಿಯಲ್ಲಿ ಸಂವಿಧಾನ, ಮತ್ತೊಂದು ಬದಿಯಲ್ಲಿ ಮಲೆಮಹದೇಶ್ವರ ಕಾವ್ಯ, ಪಾಡ್ಡನಗಳು, ವೇದ, ಸ್ಮೃತಿ, ಗೀತೆ, ಪುರಾಣಗಳನ್ನೆಲ್ಲ ಒಟ್ಟಾಗಿ ಇಟ್ಟರೆ ನಮ್ಮ ಸಾಮಾಜಿಕ ಬದುಕಿನ ಮಟ್ಟಿಗೆ ಸಂವಿಧಾನವೇ ಹೆಚ್ಚು ತೂಗುತ್ತದೆ ಎಂದು ಹೇಳುವ ಹಿಂದುಗಳು ಎಷ್ಟು ಬೇಕು ನಿಮಗೆ? ನಾನು ಕೂಡ ಯಾವ ಬಂದೂಕಿನ ಮೊನೆಯನ್ನು ಎದೆಗೆ ಯಾರೂ ಒತ್ತದಿದ್ದಾಗಲೂ ಅದನ್ನೇ ಹೇಳುವವನು. ಕನ್ನಡದ ಶೇಕಡಾ 99ರಷ್ಟು ಹಿಂದೂ ಲೇಖಕ-ಲೇಖಕಿಯರೂ ಅದನ್ನೇ ಘಂಟಾಘೋಷವಾಗಿ ಹೇಳಬಲ್ಲರು. ಗಾಂಧೀವಾದಿ ಹಿಂದುಗಳೂ ನೆಹರೂವಾದಿ ಹಿಂದುಗಳೂ ಅದನ್ನೇ ಹೇಳುವವರು.
ಆದರೆ, ಬೇರೆಬೇರೆ ರಿಲಿಜಿಯಸ್ ನಂಬಿಕೆಗಳನ್ನು ಹೊಂದಿರುವ 'ಪ್ರಗತಿಪರ' ಲೇಖಕಲೇಖಕಿಯರು ಏನು ಮಾಡುತ್ತಾರೆ? ಬುದ್ಧಿವಂತಿಕೆಯಿಂದ ತಕ್ಕಡಿಯ ಅಸ್ತಿತ್ವವನ್ನೇ ನಿರಾಕರಿಸುತ್ತಾರೆ! ಆದರೆ ತಕ್ಕಡಿಯನ್ನು ಹಿಡಿದಿರುವ ನ್ಯಾಯಾಲಯದಲ್ಲಿ ತಮ್ಮ ಪುಸ್ತಕವೇ ನಿರ್ಣಾಯಕವಾಗಬೇಕೆಂದು ಅನೇಕ ಖಟ್ಟೆಗಳಲ್ಲಿ ಕಕ್ಷಿಗಾರರು ಬೇಡಿಕೆಯನ್ನು ಮಂಡಿಸುವುದನ್ನು ಅಂತಹ 'ಪ್ರಗತಿಪರರು ಖಂಡಿಸುವುದು ಅಂತಿರಲಿ; ಗಮನಿಸುವುದೇ ಇಲ್ಲ. ತಕ್ಕಡಿ ಕಂಡಾಗ ಕಣ್ಣುಮುಚ್ಚಿಕೊಳ್ಳುತ್ತಾರೆ. ನ್ಯಾಯದೇವತೆ ಈಗ ಕಣ್ಣು ಬಿಟ್ಟಿದ್ದರೂ ಇಂತಹ 'ಪ್ರಗತಿಪರರು ಕಣ್ಣು ಬಿಡಲಾರರು. ವಿವಿಧ ರಿಲಿಜನ್ನುಗಳು ಮತ್ತು ಸಂಪ್ರದಾಯಗಳ ನಡುವೆ ಇರುವ ಇಂತಹ ಎದ್ದು ಕಾಣುವ ವ್ಯತ್ಯಾಸವನ್ನು ಸ್ವತಂತ್ರ ಚಿಂತಕರು ಗುರುತಿಸಬೇಕೇ ಬೇಡವೇ? ಅಥವಾ ನಾವು 'ಪ್ರಗತಿಪರರು ಎಂದು ಹೇಳಿಕೊಳ್ಳುವ ಲೇಖಕರನ್ನೆಲ್ಲ ಹಾಗೆಂದೇ ಭಾವಿಸಬೇಕೇ? ಗಾಂಧೀಜಿಯವರಾಗಲೀ ನೆಹರೂ ಅವರಾಗಲೀ ರಿಲಿಜನ್ನುಗಳು ಮತ್ತು ವಿವಿಧ ಸಂಪ್ರದಾಯಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದಂತೆ ಕಾಣುವುದಿಲ್ಲ. ಅಥವಾ ಅಧ್ಯಯನ ಮಾಡಿದ್ದರೂ ಅದು ಅವರ ಮಾತು-ನಡೆಗಳಲ್ಲಿ ಕಾಣುವುದಿಲ್ಲ. ಹಾಗಾಗಿ ಅವರಿಬ್ಬರಿಗೆ ಎಲ್ಲ ರಿಲಿಜನ್ನುಗಳೂ ಸಂಪ್ರದಾಯಗಳೂ ಒಂದೇ ರೀತಿ ಕಂಡವು. ಇದು ಕೊರತೆಯೇ ಆಗಿದೆ. ಅದೇ ಕೊರತೆ ಗಾಂಧೀವಾದಿಗಳಲ್ಲೂ ನೆಹರೂವಾದಿಗಳಲ್ಲೂ ಕಾಣುತ್ತದೆ.
ಹಾಗಾಗಿಯೇ ಯಾರಾದರೂ ಜನರನ್ನು ಸೇರಿಸಿ ನೂರು ಸಲ ಸಂವಿಧಾನ, ಸಾಂವಿಧಾನಿಕ ಹಕ್ಕು ಅನ್ನುವ ಪದಗಳನ್ನು ಕೂಗಿ ಹೇಳಿದಾಗ ಅಂತಹ 'ಸಂವಿಧಾನಾತ್ಮಕ' ನಡವಳಿಕೆಯನ್ನು ಮೆಚ್ಚಿ ಇವರು ಚಪ್ಪಾಳೆ ತಟ್ಟಬಲ್ಲರು; ಹೊರತು “ಹೌದೇ? ಸಂವಿಧಾನ ಮತ್ತು ನಿಮ್ಮ ಪುಸ್ತಕ ಇವೆರಡರಲ್ಲಿ ನಿಮ್ಮ ಪ್ರಕಾರ ಯಾವುದಕ್ಕೆ ಹೆಚ್ಚು ಬೆಲೆ?” ಎಂದು ಎಂದೂ ಕೇಳಲಾರರು. ನಿಜ; ಹತ್ತು ಕಡೆ ತಂಟೆ ಮಾಡುವ ಮಗು ಒಂದೆಡೆ ತಂಟೆ ಮಾಡದೆ ಇದ್ದರೆ, ಅದನ್ನು ಹೆತ್ತವರು ಮೆಚ್ಚಿ ಕೊಂಡಾಡುತ್ತಾರೆ. ಹತ್ತು ಕಡೆ ತಂಟೆ ಮಾಡದ ಮಗು ಒಂದೆರಡು ಕಡೆ ತಂಟೆ ಮಾಡಿದರೆ ಹೆತ್ತವರಿಗೆ ಹೆಚ್ಚು ಸಿಟ್ಟು ಬರುತ್ತದೆ.
ಭಾರತದಂತಹ ಬಹುಸಂಸ್ಕೃತಿಗಳುಳ್ಳ ಬಹುಸಂಸ್ಕೃತಿಗಳುಳ್ಳ ದೇಶದಲ್ಲಿ 'ಸೆಕ್ಯುಲರ್' ನೀತಿಯನ್ನು ರೂಪಿಸುವವರು ರಿಲಿಜನ್ನುಗಳು ಮತ್ತು ವಿವಿಧ ಸಂಪ್ರದಾಯಗಳ ತೌಲನಿಕ ಅಧ್ಯಯನ ಮಾಡಿರಲೇಬೇಕಾಗುತ್ತದೆ. ಸಂವಿಧಾನರಚನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಡಾ. ಅಂಬೇಡ್ಕರರಿಗೆ ಅಂತಹ ಅಧ್ಯಯನ ಇತ್ತು. ಅಂತೆಯೇ ಸಂವಿಧಾನವು, ರಿಲಿಜನ್ ಆಧರಿಸಿ ಯಾರಿಗೂ ಅನುಕೂಲ ಅಥವಾ ಅನನುಕೂಲ ಆಗಬಾರದು ಎಂದು ಸ್ಪಷ್ಟವಾಗಿಯೇ ಹೇಳಿತು. ಅಂತೆಯೇ 'ರಿಲಿಜನ್ ಅಥವಾ ಭಾಷೆಯನ್ನು ಅಧರಿಸಿ ಯಾರಿಗೂ ಅನನುಕೂಲ ಉಂಟುಮಾಡಬಾರದು' ಎಂದರೆ 'ಸಂಖ್ಯೆಯಲ್ಲಿ ಹೆಚ್ಚು ಇದ್ದವರಿಗೂ ರಿಲಿಜನ್ ಅಥವಾ ಭಾಷೆಯ ಕಾರಣಕ್ಕೆ ಅನನುಕೂಲ ಆಗಬಾರದು' ಎಂಬುದು ಕಾಮನ್ ಸೆನ್ಸ್! ಅದುವೇ ಸಂವಿಧಾನದ ಆಶಯ! ಆಶಯ! ಆದರೆ ಸ್ವಾತಂತ್ರೋತ್ತರ ಕಾಲದಲ್ಲಿ ಸಂವಿಧಾನದ ಅಶಯದಲ್ಲಿ ಇದ್ದಂತೆಯೇ 'ಸೆಕ್ಯುಲರಿಸಂ' ಅನುಷ್ಠಾನವಾಯಿತೆ? ಅಥವಾ ಬೇರೆ ರೀತಿಯಲ್ಲಿಯೆ? ನಾನು ವಿವರಿಸಲು ಹೋಗುವುದಿಲ್ಲ.
ನಿಜವಾಗಿ ಆಗಬೇಕಾದುದೇನು? ಏನೆಂದರೆ, ಶಾಲಾಕಾಲೇಜುಗಳಲ್ಲಿ ಮತ್ತು ವಿವಿಧ ಜ್ಞಾನಾಧಿಕಾರ ಕೇಂದ್ರಗಳಲ್ಲಿ 'ಸೆಕ್ಯುಲರಿಸಂ'ನ್ನು ಬೋಧಿಸುವ ಮತ್ತು ಪ್ರಚಾರ ಮಾಡುವ ಮೂಲಕ ದೇಶದೊಳಗಿನ ಸಮುದಾಯಗಳಲ್ಲಿ ಸೌಹಾರ್ದ, ಹೊಕ್ಕುಬಳಕೆ ಮತ್ತು ಪರಸ್ಪರ ನಂಬಿಕೆ ಹೆಚ್ಚಾಗಬೇಕು.
ಸ್ವಾತಂತ್ರ್ಯ ಪಡೆದ ನಂತರ ಭಾರತದಲ್ಲಿ ಮೊದಲ ಸುಮಾರು ಆರು ದಶಕಗಳ ಕಾಲ ಶಾಲಾಕಾಲೇಜುಗಳಲ್ಲಿ ಕಲಿತವರೆಲ್ಲರೂ 'ಸೆಕ್ಯುಲರ್' ತತ್ವಗಳನ್ನು ತಮ್ಮ ಭಾಷಾ ಪಠ್ಯಪುಸ್ತಕಗಳ ಮೂಲಕ ಮತ್ತು ಸಮಾಜವಿಜ್ಞಾನ ವಿಷಯದ ಪಠ್ಯಪುಸ್ತಕಗಳ ಮೂಲಕ ಕಡ್ಡಾಯವಾಗಿ ಕಲಿತರು. (ಸ್ವಾತಂತ್ರ್ಯ ಬಂದು 78 ವರ್ಷಗಳಾಗುತ್ತ ಬಂದರೂ ಆರು ದಶಕಕ್ಕೆ ಸೀಮಿತಗೊಳಿಸಿದ್ದು ಯಾಕೆಂದರೆ ನನ್ನ ಈ ಸಿದ್ದಾಂತವನ್ನು ಯಾರಾದರೂ ಸುತ್ತಿಗೆಯಿಂದ ಕುಟ್ಟಿ ಕತ್ತಿಯಿಂದ ಕಡಿದು ಸುಲಭದಲ್ಲಿ ಪುಡಿಪುಡಿಮಾಡಿ ಬಿಡುವುದು ಬೇಡ ಎಂಬ ಕಾರಣಕ್ಕೆ). ಆದರೆ 'ಸೆಕ್ಯುಲರಿಸಂ'ನ್ನು 'ಪಾಠಗಳಲ್ಲಿ' ಅಷ್ಟೆಲ್ಲಾ ಅನುಷ್ಠಾನಕ್ಕೆ ಕಾಲ ತಂದ ಬಳಿಕವೂ ಸ್ವಾತಂತ್ರೋತ್ತರ ಭಾರತದಲ್ಲಿ ಹಿಂದೂ ಮುಸ್ಲಿಮರ ನಡುವೆ ಪರಸ್ಪರ ಸೌಹಾರ್ದ, ಹೊಕ್ಕುಬಳಕೆ ಮತ್ತು ವಿಶ್ವಾಸ ವರ್ಷದಿಂದ ವರ್ಷಕ್ಕೆ ಹೆಚ್ಚಾಯಿತೆ? ಇಲ್ಲ; ಬದಲಾಗಿ ಅಪನಂಬಿಕೆ ಹೆಚ್ಚಾಗುತ್ತ ಹೋಯಿತು. ಆರು ದಶಕಗಳ ಶಾಲಾಕಾಲೇಜುಗಳಲ್ಲಿ 'ಸೆಕ್ಯುಲರಿಸಂ'ನ ಆದರ್ಶಗಳನ್ನೇ ಪಾಠಪುಸ್ತಕಗಳ ಮೂಲಕ ಕಲಿತರೂ ಯಾಕೆ ಸಮುದಾಯಗಳ ನಡುವೆ ಹೊಕ್ಕುಬಳಕೆ ಹೆಚ್ಚಾಗುವ ಬದಲು ಅಪನಂಬಿಕೆಯೇ ಹೆಚ್ಚಾಯಿತು? ಹೀಗಾಗಲು ರಾಜಕಾರಣಿಗಳೇ ಕಾರಣ ಎನ್ನುವವರಿದ್ದಾರೆ. ಸಂಘಟನೆಗಳೇ ಕಾರಣ ಎನ್ನುವವರಿದ್ದಾರೆ. ರಾಜಕಾರಣಿಗಳನ್ನು ಅಥವಾ ಸಂಘಟನೆಗಳನ್ನು ದೂರುವುದು ಸುಲಭ. ಆದರೆ ಅದೊಂದು ನುಣುಚಿಕೊಳ್ಳುವ ತಂತ್ರ ಅಷ್ಟೇ. ಮತ್ತದೇ ತರತಮ ಜ್ಞಾನವನ್ನು ಉಪಯೋಗಿಸದ ಮುಗ್ಧರ ಅಪಲಾಪ ಅಷ್ಟೇ. ಅದಕ್ಕಾಗಿಯೇ ಶಾಲಾಕಾಲೇಜುಗಳಲ್ಲಿ ಮಕ್ಕಳಿಗೆ ಸೆಕ್ಯುಲರಿಸಂ ಬೋಧನೆ ಮತ್ತು ಕಲಿಕೆಯಿರುವುದನ್ನು ಒತ್ತಿ ಹೇಳಿದ್ದು, ಮಕ್ಕಳು ತಾವು ರೂಪುಗೊಳ್ಳುವ ವರ್ಷಗಳಲ್ಲಿ (formative ವರ್ಷಗಳಲ್ಲಿ) ಯಾವ ರಾಜಕಾರಣಿ ಅಥವಾ ಸಂಘಟನೆಯ ಜೊತೆಗಿಂತಲೂ ಹೆಚ್ಚು ಹೊತ್ತು ಒಡನಾಡುವುದು ತಮ್ಮ ಶಾಲಾಕಾಲೇಜುಗಳ ಪಾಠಗಳೊಂದಿಗೆ! ಮತ್ತೆ ಶಾಲಾಕಾಲೇಜುಗಳಿಗೆ ಹೋಗದ, ತಮ್ಮಷ್ಟಕ್ಕೆ ತಾವೇ ಕೂಲಿನಾಲಿ ಅಥವಾ ಕೃಷಿ ಮಾಡಿಕೊಂಡು ದುಡಿಯುವ ಅನಕ್ಷರಸ್ಥರ ಮೇಲೆ ಕೋಮುವಾದದ ಆರೋಪವೂ ಅಷ್ಟಾಗಿ ಇಲ್ಲ!
ನಿಜವಾಗಿ ಸೆಕ್ಯುಲರಿಸಮ್ಮಿನ ಆದರ್ಶಗಳು ಸೋಲಲು ಕಾರಣವೇನೆಂದರೆ ರಿಲಿಜನ್ನುಗಳು ಮತ್ತು ವಿವಿಧ ಸಂಪ್ರದಾಯಗಳನ್ನು ತೌಲನಿಕವಾಗಿ ಅಧ್ಯಯನ ಮಾಡದವರೇ 'ಸೆಕ್ಯುಲರ್' ನೀತಿಗಳನ್ನು ರೂಪಿಸಿದ್ದು,
ಸೆಕ್ಯುಲರಿಸಂ ನೀತಿಯ ಜೊತೆಗೆ ಮೀಸಲಾತಿ ನೀತಿಯನ್ನು ಹೋಲಿಸಿದರೆ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಡಾ. ಅಂಬೇಡ್ಕರ್ ಚಿಂತನೆಯ ಆಳ ಮತ್ತು ಗಾಂಧೀವಾದ/ನೆಹರೂವಾದದ ಆಳ-ಅಗಲಗಳ ಹೋಲಿಕೆಯೂ ಆದಂತಾಗುತ್ತದೆ. ಗಮನಿಸಿ: ಸ್ವಾತಂತ್ರೋತ್ತರ ಭಾರತದಲ್ಲಿ ಜಾತಿರಾಜಕೀಯ, ಜಾತಿಪ್ರಜ್ಞೆ, ಜಾತಿ ಸಂಘಟನೆ ಇತ್ಯಾದಿ ಏನೇ ಇರಬಹುದು; ಹೆಚ್ಚಾಗಿಯೂ ಇರಬಹುದು; ಆದರೆ ಜಾತಿಭೇದ ಕಳೆದ ಏಳು ದಶಕಗಳಲ್ಲಿ ಅತ್ಯಂತ ಗಣನೀಯವಾಗಿ ಕಡಮೆಯಾಗಿದೆ; ಜಾತಿಗಳ ನಡುವೆ ಹೊಕ್ಕುಬಳಕೆ ಹೆಚ್ಚಾಗಿದೆ. ಇದು ಮೀಸಲಾತಿ ನೀತಿಯ ಯಶಸ್ಸು. ಅಂದರೆ ಸೆಕ್ಯುಲರ್ ನೀತಿ ಸೋತಿರುವಲ್ಲಿ ಮೀಸಲಾತಿ ನೀತಿಯು ಗಣನೀಯವೆಂಬಷ್ಟು ಗೆದ್ದಿದೆ. ಮೀಸಲಾತಿ ನೀತಿಯಲ್ಲಿ ಯಾವ ಬಗೆಯ ಪರಿಷ್ಕಾರ ಆಗಬೇಕು ಎಂಬುದೆಲ್ಲ ಬೇರೆಯೇ ಚರ್ಚೆ. ಅಂತಹ ಪರಿಷ್ಕಾರವು ಕಾಲಕಾಲಕ್ಕೆ ಆಗಲಿಲ್ಲ; ಮತ್ತು ಹಾಗಾಗಿಯೇ ಬೇರೆಬೇರೆ ನಮೂನೆಯಲ್ಲಿ ಹಾನಿಯಾಯಿತು ಎಂದಾದರೆ ಆ ವೈಫಲ್ಯಕ್ಕೆ 'ಕಾಲಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ಪರಿಷ್ಕಾರ ಆಗಬೇಕು' ಎಂದು ಹೇಳಿದ್ದ ಡಾ. ಅಂಬೇಡ್ಕರ್ ಹೊಣೆಯಲ್ಲ! ಸಂವಿಧಾನವೂ ಹೊಣೆಯಲ್ಲ.
ಸ್ವಾತಂತ್ರೋತ್ತರ ಅವಧಿಯಲ್ಲಿ ಈ ದೇಶದಲ್ಲಿ ಹಿಂದೂ-ಮುಸ್ಲಿಮರ ಮಧ್ಯೆ ಪರಸ್ಪರ ಸೌಹಾರ್ದ, ಹೊಕ್ಕುಬಳಕೆ, ವಿಶ್ವಾಸ ಹೆಚ್ಚಿಸುವಲ್ಲಿ ನಮ್ಮಲ್ಲಿ 'ಅನುಷ್ಠಾನಗೊಂಡ' ನಮೂನೆಯ ಸೆಕ್ಯುಲರಿಸಂ ಸೋತಿದ್ದರೆ ಅದು ಕೂಡ ಸಂವಿಧಾನದ ಸೋಲಲ್ಲ. ಬದಲಾಗಿ ಸಂವಿಧಾನದ ಆಶಯವನ್ನು ಅರ್ಥ ಮಾಡಿಕೊಂಡು ತರತಮ ಜ್ಞಾನವನ್ನು ಬಳಸಬೇಕಿದ್ದವರು ಹಾಗೆ ಮಾಡದೆ ಇದ್ದುದರಿಂದಾದ ಸೋಲು.