Hindu Vani
Index
ಮುಖ್ಯ ಲೇಖನ
ಸಂಘಕಾರ್ಯ - ಸೇವೆ - ಸಂಪರ್ಕ - ಸಾಮರಸ್ಯ
ಸಹಸರಕಾರ್ಯವಾಹ ಮುಕುಂದ ಸಿ. ಆರ್. ಅವರು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಮಂಡಿಸಿದ ವಾರ್ಷಿಕ ವರದಿಯ ಮುಖ್ಯಾಂಶಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ದೇಶಾದ್ಯಂತ ಸರಸಂಘಚಾಲಕರ ಯೋಜಿತ ಪ್ರವಾಸ ಕಾರ್ಯಕ್ರಮದಲ್ಲಿ ಅವರು ಪ್ರಮುಖ ಸ್ಥಳಗಳಲ್ಲಿ ಪ್ರಮುಖರನ್ನು ಭೇಟಿ ಮಾಡಿದರು. ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ದೋನಿ-ಪೋಲೋ ದೇವಸ್ಥಾನಕ್ಕೆ ಭೇಟಿ ನೀಡಿದರು. ಶಹೀದ್ ಅಬ್ದುಲ್ ಹಮೀದ್ ಅವರ ಹುಟ್ಟೂರಿಗೆ ಭೇಟಿ ನೀಡಿ ಅವರ ಜೀವನ ಚರಿತ್ರೆಯನ್ನು ಬಿಡುಗಡೆ ಮಾಡಿದರು.
ಮುಂಬೈನಲ್ಲಿ ಇಸ್ಕಾನ್, ರಾಮಕೃಷ್ಣ ಮಿಷನ್, ಸ್ವಾಮಿ ನಾರಾಯಣ ಸಂಸ್ಥೆ, ಭಾರತ್ ಸೇವಾಶ್ರಮ, ಚಿನ್ಮಯ ಮಿಷನ್‌ಗಳಂತಹ ಜಾಗತಿಕ ವಿಸ್ತಾರ ಹೊಂದಿರುವ ಹಿಂದೂ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಮುಖ್ಯಸ್ಥರು ಮತ್ತು ಉನ್ನತ ಪದಾಧಿಕಾರಿಗಳನ್ನು ಸರಸಂಘಚಾಲಕರು ಮತ್ತು ಸರಕಾರ್ಯವಾಹರು ಭೇಟಿಯಾದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ದುಃಸ್ಥಿತಿ ಹಾಗೂ ಭಾರತ ಮತ್ತು ವಿದೇಶಗಳಲ್ಲಿನ ಹಿಂದೂಗಳ ಸಮಸ್ಯೆಗಳನ್ನು ಪರಿಹರಿಸುವ ಮತ್ತು ನಮ್ಮ ಸಮಾಜವನ್ನು ಅನ್ನೋನ್ಯ ಸಹಕಾರಿ ಪ್ರಯತ್ನದ ಮೂಲಕ ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಾಯಿತು. ಧಾರ್ಮಿಕ ಸಂಘಟನೆಗಳೊಂದಿಗೆ ಇಂತಹ ಸಭೆಗಳು ಪ್ರತಿ 2 ವರ್ಷಕ್ಕೊಮ್ಮೆ ನಡೆಯುತ್ತಿದ್ದು, ಇದು 5ನೇ ಸಭೆಯಾಗಿದೆ ಎಂದು ತಿಳಿಸಿದರು. ಸೇವಾ ಭಾರತಿ ಕಾರ್ಯಕ್ರಮಕ್ಕಾಗಿ ಕನ್ಯಾಕುಮಾರಿಗೆ ಸರಸಂಘಚಾಲಕರು ಭೇಟಿ ನೀಡಿದ್ದರು. ಅಲ್ಲಿ ದೇಶಾದ್ಯಂತದ ಸ್ವ-ಸಹಾಯ ಗುಂಪುಗಳಲ್ಲಿ ತೊಡಗಿಸಿಕೊಂಡಿರುವ 60,000 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ನಂತರ ಸೇವಾ ವಿಭಾಗದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಮುಕುಂದ ಸಿ. ಆರ್. ಅವರು ದೇಶಾದ್ಯಂತ ಒಟ್ಟು 89,706 ಸೇವಾ ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 40,920, ವೈದ್ಯಕೀಯ ಸೇವೆಗೆ ಸಂಬಂಧಿಸಿದ 17461, ಸ್ವಾವಲಂಬನೆ ಕ್ಷೇತ್ರದಲ್ಲಿ 10,779, ಸಾಮಾಜಿಕ ಜಾಗೃತಿಗೆ ಸಂಬಂಧಿಸಿದ ಇತರ ಚಟುವಟಿಕೆಗಳಿಗೆ ಸಂಬಂಧಿಸಿದ 20,546 ಕೇಂದ್ರಗಳಿವೆ. ಗ್ರಾಮ ವಿಕಾಸ (ಗ್ರಾಮೀಣಾಭಿವೃದ್ಧಿ), ಮತ್ತು ಗೋ ಸಂರಕ್ಷಣೆಯಂತಹ ಗ್ರಾಮೀಣಾಭಿವೃದ್ಧಿಗಾಗಿ ಆರ್. ಎಸ್.ಎಸ್. ವಿಶೇಷ ಉಪಕ್ರಮಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಕೆಲವು ದುರದೃಷ್ಟಕರ ಘಟನೆಗಳಿಂದಾಗಿ ಹೆಚ್ಚಿನ ಬದಲಾವಣೆಯ ಅಗತ್ಯವಿರುವ ಕ್ಷೇತ್ರಗಳಲ್ಲೊಂದಾದ ಸಾಮಾಜಿಕ ಸಮರಸತಾ (ಸಾಮಾಜಿಕ ಸಾಮರಸ್ಯ) ಕ್ಕೆ ಆರ್. ಎಸ್.ಎಸ್. ಸ್ವಯಂಸೇವಕರು ವಿಶೇಷ ಗಮನ ನೀಡುತ್ತಿದ್ದಾರೆ. 1084 ಸ್ಥಳಗಳಲ್ಲಿ, ನಮ್ಮ ಸ್ವಯಂಸೇವಕರು ಮಂದಿರಗಳ ಪ್ರವೇಶವನ್ನು ನಿಷೇಧಿಸುವ ಮತ್ತು ಒಂದೇ ಮೂಲದಿಂದ ಸಾಮೂಹಿಕವಾಗಿ ಕುಡಿಯುವ ನೀರನ್ನು ನಿಷೇಧಿಸುವಂತಹ ತಪ್ಪು ಸಾಮಾಜಿಕ ಆಚರಣೆಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಗಳನ್ನು ಮಾಡಿದ್ದಾರೆ. ಸ್ವಯಂಸೇವಕರು ಇಂತಹ ಅಸಹಜ ಆಚರಣೆಗಳನ್ನು ನಿಲ್ಲಿಸಿ ಸಮಾಜದಲ್ಲಿ ಸೌಹಾರ್ದತೆ ತರುವ ಕೆಲಸ ಮಾಡುತ್ತಿದ್ದಾರೆ. 260 ಕ್ಕೂ ಹೆಚ್ಚು ಸ್ಥಳಗಳಲ್ಲಿ, ಸ್ವಯಂಸೇವಕರು ನೈರ್ಮಲ್ಯ ಕಾರ್ಮಿಕರಿಗೆ ಆಹಾರ, ನೈರ್ಮಲ್ಯ, ವೈದ್ಯಕೀಯ ಪರೀಕ್ಷೆ, ಕೆಲಸದಲ್ಲಿ ಅವರಿಗೆ ಸಹಾಯ ಮಾಡುವ ಉಪಕರಣಗಳು ಇತ್ಯಾದಿಗಳಿಗೆ ಸಹಾಯ ಮಾಡಿದ್ದಾರೆ.
ಮುಂದುವರೆದು ಮಾತನಾಡಿದ ಮುಕುಂದ ಅವರು ಪ್ರತಿ ವರ್ಷದಂತೆ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ವರ್ತಮಾನದ ರಾಷ್ಟ್ರೀಯ ಸನ್ನಿವೇಶದ ವಿಶ್ಲೇಷಣೆಯ ಕೆಲವು ಮುಖ್ಯಾಂಶಗಳನ್ನು ಒದಗಿಸಿದರು. ಅವರು ಪಟ್ಟಿ ಮಾಡಿದ ಮುಖ್ಯಾಂಶಗಳಲ್ಲಿ, ಭಾರತೀಯರ ಸಾಂಸ್ಕೃತಿಕ ಹೆಮ್ಮೆಯನ್ನು ಹೆಚ್ಚಿಸಿದ ಮತ್ತು ಇಡೀ ರಾಷ್ಟ್ರಕ್ಕೆ ಆತ್ಮ ವಿಶ್ವಾಸವನ್ನು ಹುಟ್ಟುಹಾಕಿದ ಪ್ರಯಾಗ್‌ರಾಜ್‌ನ ಮಹಾಕುಂಭ ಪ್ರಮುಖವಾದದ್ದು. ಈ ವಿಶೇಷ ಮಹಾಕುಂಭವು ಭಾರತದ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಅದ್ಭುತ ನೋಟವನ್ನು ನೀಡಿತು ಮತ್ತು ನಮ್ಮ ಸಮಾಜದ ಆಂತರಿಕ ಉದಾತ್ತತೆಯನ್ನು ನಮಗೆ ಅರಿತುಕೊಳ್ಳುವಂತೆ ಮಾಡಿತು. ಈ ಬೃಹತ್ ಕುಂಭದ ಸೂಕ್ತ ಮತ್ತು ಸುಗಮ ಮೂಲಸೌಕರ್ಯ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ರಚಿಸಿ, ನಡೆಸಿದ್ದಕ್ಕೆ ಉತ್ತರ ಪ್ರದೇಶ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಇಡೀ ರಾಷ್ಟ್ರದ ಅಭಿನಂದನೆಗೆ ಅರ್ಹವಾಗಿದೆ ಎಂದು ಅವರು ಹೇಳಿದರು. ನಂತರ ಅವರು ಮಹಾಕುಂಭದ ಸಂದರ್ಭದಲ್ಲಿ ಅನೇಕ ಸಂಘ-ಪ್ರೇರಿತ ಸಂಸ್ಥೆಗಳು ವಿವಿಧ ರೀತಿಯ ಸೇವಾ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವೈಚಾರಿಕ ಕಾರ್ಯಕ್ರಮಗಳನ್ನು ಆಯೋಜಿಸಿವೆ ಎಂದು ತಿಳಿಸಿದರು. ಸಂಘದ ಕಾರ್ಯಕರ್ತರು ಮಾಡಿದ ಎರಡು ವಿಶೇಷ ಪ್ರಯತ್ನಗಳನ್ನು ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರಸ್ತಾಪಿಸಿದರು.
ಸಕ್ಷಮ ಆಯೋಜಿಸಿದ್ದ ನೇತ್ರ ಕುಂಭದಲ್ಲಿ ಕುಂಭಕ್ಕೆ ಆಗಮಿಸುವ ಜನರಿಗೆ ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಅಗತ್ಯವಿದ್ದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಹಲವಾರು ಆಸ್ಪತ್ರೆಗಳು, ಆರೋಗ್ಯ ಸಂಸ್ಥೆಗಳು ಮತ್ತು ಸೇವಾ ಮನೋಭಾವದ ಇತರ ಸಾಮಾಜಿಕ ಸಂಸ್ಥೆಗಳು ಈ ಕಾರ್ಯದಲ್ಲಿ ಸಂಪೂರ್ಣ ಸಹಕಾರವನ್ನು ನೀಡಿವೆ. ಚಟುವಟಿಕೆಯ ವಿವರ ನೀಡಿದ ಅವರು, ಉಚಿತ ನೇತ್ರ ತಪಾಸಣೆಯಿಂದ 2,37,964 ಮಂದಿ ಪ್ರಯೋಜನ ಪಡೆದರೆ, 1,63,652 ಮಂದಿಗೆ ಉಚಿತ ಕನ್ನಡಕ ಹಾಗೂ 17,069 ಮಂದಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದರು. 53 ದಿನಗಳ ಕಾಲ ನಡೆದ ಈ ಸೇವಾ ಕಾರ್ಯದಲ್ಲಿ 300 ಕ್ಕೂ ಹೆಚ್ಚು ನೇತ್ರ ತಜ್ಞರು ಮತ್ತು 2800 ಕಾರ್ಯಕರ್ತರು ಕೆಲಸ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ದೇಶದ ಹಲವು ಸಂಸ್ಥೆಗಳ ಸಹಯೋಗದಲ್ಲಿ ಪರಿಸರ ಸಂರಕ್ಷಣಾ ಗತಿವಿಧಿ ಆಯೋಜಿಸಿದ “One Thali-One Thaili (Bag) Campaign”, ಮತ್ತೊಂದು ಗಮನಾರ್ಹ ಚಟುವಟಿಕೆಯಾಗಿದೆ. ಕುಂಭದಲ್ಲಿ ಥರ್ಮಾಕೋಲ್ ಪ್ಲೇಟ್‌ಗಳು ಅಥವಾ ಪಾಲಿಥೀನ್ ಬ್ಯಾಗ್‌ಗಳನ್ನು ಬಳಸದಿರುವ ಗುರಿಯನ್ನು ಹೊಂದಿರುವ ಈ ಅಭಿಯಾನವು ದೇಶಾದ್ಯಂತ ಸ್ಟೀಲ್ ಪ್ಲೇಟ್‌ಗಳು ಮತ್ತು ಬಟ್ಟೆಯ ಚೀಲಗಳ ದೊಡ್ಡ ಸಂಗ್ರಹಕ್ಕೆ ಕಾರಣವಾಯಿತು. ಕಾರ್ಯಕರ್ತರು 2241 ಸಂಸ್ಥೆಗಳ 7258 ಕೇಂದ್ರಗಳಿಂದ ಒಟ್ಟು 14,17,064 ಪ್ಲೇಟ್‌ಗಳು ಮತ್ತು 13,46,128 ಬ್ಯಾಗ್‌ಗಳನ್ನು ಸಂಗ್ರಹಿಸಿದರು, ಅವುಗಳನ್ನು ಕುಂಭದ ವಿವಿಧ ಪೆಂಡಾಲುಗಳಲ್ಲಿ ವಿತರಿಸಲಾಯಿತು. ಈ ಅಭಿಯಾನವು ಸ್ವತಃ ಒಂದು ವಿಶಿಷ್ಟವಾದ ಪ್ರಯೋಗವಾಗಿದೆ ಮತ್ತು ಪರಿಸರ ಜಾಗೃತಿ ಮೂಡಿಸುವಲ್ಲಿ ಸ್ವಚ್ಛ ಕುಂಭದ ಕಲ್ಪನೆಯನ್ನು ಜನಸಾಮಾನ್ಯರಿಗೆ ಕೊಂಡೊಯ್ಯುವಲ್ಲಿ ಭಾರಿ ಯಶಸ್ವಿಯಾಗಿದೆ.
ಲೋಕಮಾತೆ ಅಹಲ್ಯಾದೇವಿ ಹೋಲ್ಕರ್ ಅವರ 300ನೇ ಜಯಂತಿಯ ಅಂಗವಾಗಿ ಸರಕಾರ್ಯವಾಹರು ಹೊರಡಿಸಿದ ಪ್ರಕಟಣೆಯ ಬಗ್ಗೆ ಮಾತನಾಡಿ, ಅವರ ಆದರ್ಶ ಆಡಳಿತ, ನ್ಯಾಯಾಂಗ ಸುಧಾರಣೆಗಳು ಧಾರ್ಮಿಕ ನಂಬಿಕೆ, ಜನಪದ ಮಾತೃಪ್ರೇಮ, ನಿಷ್ಕಳಂಕ ಗುಣಗಳ ಮೂರ್ತರೂಪವಾಗಿದ್ದವು. ಆ ಹಿನ್ನೆಲೆಯಲ್ಲಿ ದೇಶದ ಹಲವೆಡೆ ವಾರ್ಷಿಕೋತ್ಸವವನ್ನು ಆಚರಿಸಲು ಪರಿಣಾಮಕಾರಿ, ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಲೋಕಮಾತೆಯ ಸ್ಪೂರ್ತಿದಾಯಕ ವ್ಯಕ್ತಿತ್ವವನ್ನು ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ಸಮಾಜದ ಮುಂದೆ ತರಲು ಹಲವು ಸಾಮಾಜಿಕ ಮತ್ತು ಶಿಕ್ಷಣ ಸಂಸ್ಥೆಗಳು ಯಶಸ್ವಿ ಪ್ರಯತ್ನ ನಡೆಸಿದವು.
ರಾಷ್ಟ್ರೀಯ ಸ್ವಯಂಸೇವಕ ಸಂಘ
ಸಂಘ ಶತಾಬ್ದ ವರ್ಷದ ನಿಮಿತ್ತ ಕಾರ್ಯಕ್ರಮಗಳು (ವಿಜಯದಶಮಿ 2025 ವಿಜಯದಶಮಿ 2026)
1. ಶತಾಬ್ಲಿ ವರ್ಷದ ಶುಭಾರಂಭ ಪರ್ವಕಾಲದಲ್ಲಿ ಮಂಡಲ ಅಥವಾ ಖಂಡ/ ನಗರ ಸ್ತರದಲ್ಲಿ ಗಣವೇಷದಲ್ಲಿ ಸ್ವಯಂಸೇವಕರ ಉತ್ಸವ.
2. ವ್ಯಾಪಕ ಮನೆ ಸಂಪರ್ಕ (ಪ್ರತಿ ಗ್ರಾಮ, ವಸತಿ, ಪ್ರತಿ ಮನೆ -2025ರ ನವೆಂಬರ್ ಮತ್ತು ಡಿಸೆಂಬರ್ ಹಾಗೂ 2026ರ ಜನವರಿ ತಿಂಗಳುಗಳಲ್ಲಿ 3 ವಾರಗಳ ವಿಸ್ತತ ಯೋಜನೆ) 2025ರ ವಿಜಯದಶಮಿಯ
3. ಹಿಂದೂ ಸಮ್ಮೇಳನ - ಮಂಡಲ/ವಸತಿ ಸ್ತರದಲ್ಲಿ
4. ಸಾಮಾಜಿಕ ಸದ್ಭಾವ ಬೈಠಕ್ ಖಂಡ/ನಗರ ಸ್ತರದಲ್ಲಿ
5. ಪ್ರಮುಖ ನಾಗರಿಕರ ಗೋಷ್ಠಿ - ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ
6. ಯುವಕರಿಗಾಗಿ ಕಾರ್ಯಕ್ರಮ ಆಯಾ ಪ್ರಾಂತದ ಯೋಜನೆಯೊಂದಿಗೆ
ಸಂಘ ಮತ್ತು ರಾಜಕೀಯ - ಸೌಹಾರ್ದತೆ - ಭಾಷೆ - ಪ್ರಾದೇಶಿಕ
ಮಣಿಪುರದ ಪರಿಸ್ಥಿತಿಯನ್ನು ಉದ್ದೇಶಿಸಿ ಮಾತನಾಡಿದ ಮುಕುಂದ ಅವರು, ಕಳೆದ 20 ತಿಂಗಳುಗಳಿಂದ ರಾಜ್ಯವು ಗೊಂದಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ತಿಳಿಸಿದರು. ಅಲ್ಲಿನ ಎರಡು ಸಮುದಾಯಗಳ ನಡುವೆ ವ್ಯಾಪಕ ಹಿಂಸಾಚಾರದ ಘಟನೆಗಳಿಂದಾಗಿ ಪರಸ್ಪರ ಅಪನಂಬಿಕೆ, ವೈಷಮ್ಯ ಉಂಟಾಗಿದೆ. ಜನಸಾಮಾನ್ಯರು ಹಲವು ರೀತಿಯ ಸಂಕಷ್ಟಗಳನ್ನು ಅನುಭವಿಸಿದ್ದಾರೆ ಆದರೆ, ರಾಷ್ಟ್ರಪತಿ ಆಳ್ವಿಕೆ ತರುವುದು ಸೇರಿದಂತೆ ರಾಜಕೀಯ ಮತ್ತು ಆಡಳಿತಾತ್ಮಕ ಮಟ್ಟದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಗಳು ಪರಿಸ್ಥಿತಿ ಸುಧಾರಣೆಯತ್ತ ಭರವಸೆ ಮೂಡಿಸಿವೆ. ಆದರೆ ಸೌಹಾರ್ದತೆ ಮತ್ತು ವಿಶ್ವಾಸದ ಸಹಜ ವಾತಾವರಣ ಮೂಡಲು ಬಹಳ ಸಮಯ ಹಿಡಿಯುತ್ತದೆ ಎಂದರು.
ಈ ಸಂಪೂರ್ಣ ಅವಧಿಯಲ್ಲಿ, ಸಂಘ ಮತ್ತು ಸಂಘ-ಪ್ರೇರಿತ ಸಾಮಾಜಿಕ ಸಂಘಟನೆಗಳು ಹಿಂಸಾಚಾರದಿಂದ ಸಂತ್ರಸ್ತರಾದ ಜನರಿಗೆ ಪರಿಹಾರ ಮತ್ತು ಸಹಾಯವನ್ನು ಒದಗಿಸಲು ಒಟ್ಟಾಗಿ ಕೆಲಸ ಮಾಡಿವೆ ಎಂದು ಅವರು ತಿಳಿಸಿದರು. ವಿವಿಧ ಸಮುದಾಯಗಳ ಜತೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ತಾಳ್ಮೆಯನ್ನು ಕಾಯ್ದುಕೊಳ್ಳುವ ಸಂದೇಶ ನೀಡುವ ಮೂಲಕ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದಾರೆ. ಸಾಮರಸ್ಯಕ್ಕಾಗಿ ಈ ಎಲ್ಲಾ ಪ್ರಯತ್ನಗಳು ಇನ್ನೂ ನಡೆಯುತ್ತಿವೆ ಮತ್ತು ಅದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಮಣಿಪುರದ ಎಲ್ಲಾ ಸಮುದಾಯಗಳು ತಮ್ಮ ತಲ್ಲಣ ಮತ್ತು ಅಪನಂಬಿಕೆಯನ್ನು ಬಿಟ್ಟು ಪರಸ್ಪರ ಸಹೋದರತೆಯಿಂದ ಸಾಮಾಜಿಕ ಐಕ್ಯತೆಗಾಗಿ ಜಾಗೃತ ಪ್ರಯತ್ನವನ್ನು ಮಾಡಬೇಕೆಂಬುದು ಸಂಘದ ಶ್ರದ್ಧಾಪೂರ್ವಕ ವಿನಂತಿಯಾಗಿದೆ ಎಂದು ಅವರು ಹೇಳಿದರು.
ಭಾಷೆ, ಸೀಮೆ, ಪ್ರದೇಶ, ಉತ್ತರ-ದಕ್ಷಿಣ ವಿಭಜನೆ ಇತ್ಯಾದಿ ಹೆಸರಿನಲ್ಲಿ ಒಂದಲ್ಲ ಒಂದು ವಿಭಜಕ ಅಜೆಂಡಾಗಳನ್ನು ಬಳಸಿಕೊಂಡು ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಗೆ ಹಲವು ಶಕ್ತಿಗಳು ಸವಾಲಾಗಿ ನಿಂತಿವೆ. ಆದರೂ ನಮ್ಮ ಕಾರ್ಯಕರ್ತರು ಮತ್ತು ನಮ್ಮ ವಿಚಾರ ಪರಿವಾರದ ಹಲವರು ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಇಂತಹ ವಿಭಜಕ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಶೋತ್ತರ ಅವಧಿ ನಡೆಯಿತು. ಮಣಿಪುರದಲ್ಲಿ ಶಾಂತಿ ನೆಲೆಸುವಲ್ಲಿ ಸಂಘದ ಪ್ರಯತ್ನಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಕುಂದ ಅವರು, ನಾಯಕತ್ವ ಮತ್ತು ಬುಡಕಟ್ಟು ಗುಂಪುಗಳಾದ ಮೈಥೇಯಿಗಳು ಮತ್ತು ಕುಕಿಗಳ ಜನರನ್ನು ಒಟ್ಟುಗೂಡಿಸಿ ಚರ್ಚಿಸಲು ಮತ್ತು ಸಾಮಾನ್ಯ ತಿಳುವಳಿಕೆಗೆ ಬರಲು ಪ್ರೋತ್ಸಾಹಿಸುವಲ್ಲಿ ಸಂಘದ ಪ್ರಯತ್ನ ಹೆಚ್ಚು ಎಂದು ಹೇಳಿದರು. ಸಂಘವು ಸಮುದಾಯಗಳನ್ನು ಒಟ್ಟುಗೂಡಿಸುವ ಮೂಲಕ ಮಣಿಪುರದ ಜನರಿಗೆ ಸಹಾಯ ಮಾಡುತ್ತಿದೆ. ಎರಡೂ ಸಮುದಾಯಗಳ ಹಲವು ಮುಖಂಡರು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಸೌಹಾರ್ದತೆ ತರಲು ಇಂಫಾಲ, ಗೌಹಾಟಿ ಮತ್ತು ದೆಹಲಿಯಲ್ಲಿ ಸಭೆಗಳನ್ನು ನಡೆಸಲಾಗಿದೆ. ಸಂಕೀರ್ಣ ಸಮಸ್ಯೆಗೆ ಇತರ ಅಂಶಗಳಿವೆ. ಆದರೆ ಸಂಘವು ಜನರನ್ನು ಪ್ರಭಾವಿಸಲು ಮತ್ತು ಸಂಪರ್ಕಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ಇದಲ್ಲದೆ, ಸಂಘ ಸ್ವಯಂಸೇವಕರು ತಮ್ಮ ಸ್ವಂತ ಮನೆಗಳಿಂದ ಹೊರಹಾಕಲ್ಪಟ್ಟ ನಿರಾಶ್ರಿತರಿಗಾಗಿ 100 ಪರಿಹಾರ ಶಿಬಿರಗಳನ್ನು ಆಯೋಜಿಸಿದ್ದಾರೆ, ಅಲ್ಲಿ ಆಹಾರ, ವಸತಿ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ. ರಾಷ್ಟ್ರಪತಿ ಆಳ್ವಿಕೆ ಜಾರಿಯಾದ ನಂತರ ಈಗ ಸ್ವಲ್ಪ ಆಶಾಭಾವನೆ ಎದ್ದಿದೆ. ಆದರೆ ಅದಕ್ಕೆ ಸಮಯ ಹಿಡಿಯುತ್ತದೆ ಎಂದರು.
ಉತ್ತರ-ದಕ್ಷಿಣ ವಿಭಜನೆಯ ಪ್ರಶ್ನೆಗೆ ಸಂಬಂಧಿಸಿದಂತೆ, ಹೆಚ್ಚಿನ ಸಮಸ್ಯೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದರು. ಡಿಲಿಮಿಟೇಶನ್‌ಗೆ ಸಂಬಂಧಿಸಿದಂತೆ, ಗೃಹ ಸಚಿವರೇ ಅದನ್ನು ಅನುಪಾತದ ಆಧಾರದ ಮೇಲೆ ಮಾಡಲಾಗುವುದು ಎಂದು ಹೇಳಿದ್ದಾರೆ, ಅಂದರೆ ಪ್ರಸ್ತುತ ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳ ಅನುಪಾತದ ಮೇಲೆ ಮಾಡಲಾಗುವುದು. ಹೀಗಾಗಿ ಆರ್.ಎಸ್.ಎಸ್.ಗೆ ಈ ಬಗ್ಗೆ ಹೆಚ್ಚು ಹೇಳಲು ಏನೂ ಇಲ್ಲ. ಆದಾಗ್ಯೂ, ರೂಪಾಯಿ ಚಿಹ್ನೆಯನ್ನು ತೆಗೆದುಹಾಕುವುದು ಮತ್ತು ಭಾಷಾ ಸಮಸ್ಯೆಗಳನ್ನು ಕೆರಳಿಸುವಂತಹ ರಾಜಕೀಯ ಪ್ರೇರಿತ ಕ್ರಮಗಳನ್ನು ರಾಜಕೀಯ ನಾಯಕರಿಂದ ಅಲ್ಲ, ಸಾಮಾಜಿಕ ಮತ್ತು ಸಮುದಾಯದ ಮುಖಂಡರು ಪರಿಹರಿಸಬೇಕು ಎಂದು ಆರ್.ಎಸ್. ಎಸ್. ನಂಬುತ್ತದೆ. ಸಂಘವು ನ್ಯಾಯಕ್ಕಾಗಿ ನಿಂತಿದೆ ಮತ್ತು ಎಲ್ಲಾ ಸಮಸ್ಯೆಗಳನ್ನು ಸಾಮರಸ್ಯದಿಂದ ಪರಿಹರಿಸಬಹುದು ಎಂದು ನಂಬುತ್ತದೆ ಎಂದು ಅವರು ಹೇಳಿದರು.
ಆರ್.ಎಸ್.ಎಸ್. 100 ಸ್ಥಿತಿ ಮತ್ತು 1925 ರಿಂದ ಸ್ವಯಂಸೇವಕರ ಒಟ್ಟು ಸಂಖ್ಯೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇಂದು ದೇಶದಲ್ಲಿ 1 ಕೋಟಿಗೂ ಹೆಚ್ಚು ಸ್ವಯಂಸೇವಕರಿದ್ದಾರೆ. ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ದೈನಂದಿನ ಶಾಖಾಗಳಿಗೆ ಹಾಜರಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಸ್ವಯಂಸೇವಕರು ಸಮಾಜ ಸೇವೆ, ಕಾರ್ಮಿಕ ಸಂಘಗಳು, ರೈತರು, ಮುಂತಾದ ಸಮಾಜದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಾರೆ. RSS ಗೆ ಸೇರುವವರಲ್ಲಿ ಹೆಚ್ಚಿನವರು 12-14 ಮತ್ತು 20-15 ವರ್ಷ ವಯಸ್ಸಿನವರು. 40 ವರ್ಷದ ನಂತರವೂ ಅನೇಕರು ಆರ್.ಎಸ್.ಎಸ್.ಗೆ ಸೇರುತ್ತಾರೆ, ಹೆಚ್ಚಿನವರು ಬಾಲ್ಯದಲ್ಲಿ ಸೇರುತ್ತಾರೆ. ಕಳೆದ 8 ರಿಂದ 10 ವರ್ಷಗಳಲ್ಲಿ ಸಂಸ್ಥೆಗೆ ಸೇರ್ಪಡೆಗೊಳ್ಳುವ ಹೊಸ ಸ್ವಯಂಸೇವಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ನಮ್ಮ ಕೊರತೆಯಿದ್ದ ತಮಿಳುನಾಡಿನಲ್ಲಿ, ನಾವು ಹೊಸ ಕಾರ್ಯಕರ್ತರನ್ನು ಪಡೆಯುತ್ತಿದ್ದೇವೆ ಮತ್ತು ಶಾಖಾಗಳ ಸಂಖ್ಯೆ 4000 ದಾಟಿದೆ. ಬಿಹಾರ ಮತ್ತು ಒಡಿಶಾದಲ್ಲಿ, ನಾವು ಮೊದಲು ಸೀಮಿತ ಅಸ್ತಿತ್ವವನ್ನು ಹೊಂದಿದ್ದು, ಈಗ ನಾವು ಹೊಸ ಸ್ವಯಂಸೇವಕರ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಾಣುತ್ತಿದ್ದೇವೆ. ಆರ್.ಎಸ್.ಎಸ್. ವಿಸ್ತರಣಾ ಕಾರ್ಯಕ್ಕೆ ದೇಶದ ಯಾವುದೇ ಭಾಗದಲ್ಲಿ ವಿರೋಧವಿಲ್ಲ ಮತ್ತು ಕೆಲವು ಭಾಗಗಳಲ್ಲಿ ವಿರೋಧವಿದ್ದರೂ ಅದು ಧಾರ್ಮಿಕ ಕಾರಣಗಳಿಂದಲ್ಲ, ರಾಜಕೀಯ ಕಾರಣಗಳಿಂದಾಗಿ ಎಂಬುದನ್ನು ಗಮನಿಸಬೇಕು. ಆದರೆ ಮಾತುಕತೆ ಮತ್ತು ಸಮಾಲೋಚನೆಯಿಂದ ಇದನ್ನು ಪರಿಹರಿಸಬಹುದು ಎಂದು ನಾವು ನಂಬುತ್ತೇವೆ ಎಂದು ಅವರು ಹೇಳಿದರು.
ಭಾಷಾ ವಿಷಯದ ಕುರಿತ ಪ್ರಶ್ನೆಗೆ ಉತ್ತರಿಸಿದ ಮುಕುಂದ ಅವರು, ಮಾತೃ ಭಾಷೆ ಶಿಕ್ಷಣದಲ್ಲಿ ಮಾತ್ರವಲ್ಲದೆ ನಮ್ಮ ದೈನಂದಿನ ಜೀವನದ ಎಲ್ಲಾ ಅಂಶಗಳಲ್ಲಿ ಬಳಸಬೇಕು ಎಂದು ಆರ್.ಎಸ್.ಎಸ್. ನಂಬುತ್ತದೆ ಎಂದು ಹೇಳಿದರು. ಆರ್.ಎಸ್.ಎಸ್. ಮಾತೃ ಭಾಷಾ ನಿರ್ಣಯವನ್ನು ಅಂಗೀಕರಿಸಿದೆ. ಬಹು ಭಾಷೆಗಳನ್ನು ಕಲಿತರೆ ಅನುಕೂಲವಾಗುತ್ತದೆ ಎಂದು ಹೇಳಿದರು. ಮಾತೃ ಭಾಷೆ, ನಾವು ವಾಸಿಸುವ ಸ್ಥಳದ ಭಾಷೆಯಾದ ಪ್ರಾದೇಶಿಕ ಭಾಷೆ ಮತ್ತು ವೃತ್ತಿಪರ ಉದ್ದೇಶಗಳಿಗಾಗಿ ಇಂಗ್ಲಿಷ್ ನಂತಹ ವೃತ್ತಿ ಭಾಷೆ ತಿಳಿದಿದ್ದರೆ ಅದು ಸೂಕ್ತವಾಗಿದೆ. ಸರಸಂಘಚಾಲಕರು ಔಪಚಾರಿಕ ಮತ್ತು ಅನೌಪಚಾರಿಕ ಸಭೆಗಳಲ್ಲಿ ನಾವು ನಮ್ಮ ದೈನಂದಿನ ಜೀವನದಲ್ಲಿ ಮಾತೃ ಭಾಷೆಯನ್ನು ಬಳಸಬೇಕು ಎಂದು ತಿಳಿಸುತ್ತಾರೆ ಮತ್ತು ಜನರು ಇತರ ಪ್ರದೇಶಗಳ ಭಾಷೆಗಳನ್ನು ಕಲಿಯಬೇಕು ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ದುರವಸ್ಥೆಯ ಪರಿಹಾರದ ಕುರಿತ ಪ್ರಶ್ನೆಗೆ, ಸಹ ಸರಕಾರ್ಯವಾಹ ಅವರು ನಿರ್ಣಯವನ್ನು ಎಬಿಪಿಎಸ್ ತೆಗೆದುಕೊಳ್ಳುತ್ತದೆ ಮತ್ತು ಅದನ್ನು ಮಾಧ್ಯಮಗಳಿಗೆ ಹಂಚಿಕೊಳ್ಳುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್, ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖರಾದ ನರೇಂದ್ರ ಕುಮಾರ್, ಪ್ರದೀಪ್ ಜೋಶಿ ಉಪಸ್ಥಿತರಿದ್ದರು.