Hindu Vani
Index
ಪ್ರಚಲಿತ
ತಿರುಪತಿಗೆ ಭಕ್ತರು ಬರಬಾರದಂತೆ!
- ಪ್ರವೀಣ ಸಾಯಿ, ಅನಂತಪುರ
ವೈಕುಂಠ ಏಕಾದಶಿಯ ದಿನದಂದು ತಿರುಪತಿ ದೇವರ ದರ್ಶನ ಕಾಲದ ಜನ ಜಂಗುಳಿಯಲ್ಲಿ 6 ಭಕ್ತರು ಮೃತ್ಯುವಶರಾದ ದುರಂತವು ನಡೆಯಿತು. ಇಂತಹ ದುರಂತವನ್ನು ತಡೆಯುವ ಮಾರ್ಗೋಪಾಯಗಳನ್ನು ಕಂಡುಹಿಡಿಯುವುದು. ಅತಿ ಅಗತ್ಯ. ಆದರೆ ಇಂತಹ ಘಟನೆಗಳಾದಾಗ ಇರುವ ಕಾತರತೆಯು ಕೆಲವು ದಿನಗಳಾಗುತ್ತಲೇ ಕ್ರಮೇಣ ಅದು ಮಾಯವಾಗುವುದೂ ಸಹಜವೆ.
ಈ ಕುರಿತು ಹಿಂದು ಪತ್ರಿಕೆಯು ತನ್ನ 16.01.2025ರ ಸಂಚಿಕೆಯಲ್ಲಿ ಸಂಪಾದಕೀಯ ಅಂಕಣವನ್ನು ಬರೆಯಿತು. ಹಿಂದು ಕ್ಷೇತ್ರಗಳಲ್ಲಿ ತೀರ್ಥಯಾತ್ರೆಗೆ ಬರುವ ಜನಜಂಗುಳಿಯನ್ನು ನಿಭಾಯಿಸುವ ಕುರಿತು ಮತ್ತೊಮ್ಮೆ ಆಲೋಚಿಸುವ ಅಗತ್ಯವಿದೆ ಎಂದು ಪ್ರಾರಂಭವಾಗುವ ಸಂಪಾದಕರ ಅಭಿಪ್ರಾಯವು; ಭಾರತವು ಧಾರ್ಮಿಕ ಕಾರ್ಯಕ್ರಮದ ಕಾಲ್ತುಳಿತದ ಘಟನೆಯಲ್ಲಿ ಸಾವನ್ನು ಅಪ್ಪುವ ಸಂಖ್ಯೆಯಲ್ಲಿ ಮೊದಲನೆಯದಾಗಿದೆ ಎಂದು ಸಾರುತ್ತದೆ. ಎಂದೂ ಕೂಡಾ ಭಾರತವು ಸಾಧನೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಪ್ರಸಂಗಗಳನ್ನು ತಪ್ಪಿಯೂ ಉಲ್ಲೇಖಿಸದ ಪತ್ರಿಕೆಯು ಇಂತಹ ಪ್ರಸಂಗಗಳನ್ನು ಮಾತ್ರ ಅವುಗಳ ದುರಂತ ಮುಖಗಳ ಅಸಹನೀಯತೆಯನ್ನು ಅಖ್ಯಾನಿಸುವಲ್ಲಿ ತನ್ನ ಪಾಲನ್ನು ನಿರ್ವಹಿಸುತ್ತದೆ. ಪ್ರಸಂಗಗಳ ಅಂಕೆ ಸಂಖ್ಯೆಗಳನ್ನು ನೀಡುವ ಸಂಪಾದಕರು ಈ 3 ದಶಕಗಳಲ್ಲಿ ಇಂತಹ ಹಿಂದೂ ಧಾರ್ಮಿಕ ಅವಘಡಗಳಲ್ಲಿ 3000 ಮಂದಿ ಪ್ರಾಣಗಳನ್ನು ಕಳೆದುಕೊಂಡರು ಎನ್ನುತ್ತದೆ.
ಈ ರೀತಿಯ ಒಂದು ಸಾವು ಕೂಡಾ ಸಂಭವಿಸಬಾರದು ಎನ್ನುವುದು ಖಚಿತವೆ. ಲಕ್ಷಾವಧಿ ದೇವಾಸ್ಥಾನಗಳೂ ತೀರ್ಥಕ್ಷೇತ್ರಗಳೂ ಇರುವ ಭಾರತದ ಬಗ್ಗೆ ವರದಿ ಮಾಡುವ ಪತ್ರಿಕೆಯು ಹಾಗೆ ನೋಡಿದರೆ ಪ್ರಮುಖವಾಗಿ, ಮುಸ್ಲಿಮರು ಆಚರಿಸುವ ಈ ಪ್ರಮಾಣದ ಒಂದೇ ಒಂದು ಹಜ್ ಯಾತ್ರೆಯ ಬಗ್ಗೆ ಉದಾಹರಿಸಿದಂತಿಲ್ಲ. ಮಕ್ಕಾದಲ್ಲಿ ಸತ್ತರೆ ಸಕಲ ಪಾಪಗಳನ್ನು ಕಳೆದು ನೇರ ಸ್ವರ್ಗಸೇರುವ ಸೌಲಭ್ಯದ ಅವಕಾಶವಿದೆ ಎಂದುಕೊಂಡೆ ಏನೋ ಎನ್ನುವಂತೆ ಹಜಮಾತ್ರೆಯಲ್ಲಿ 2024ರಲ್ಲಿ 1301ಮಂದಿ, 2015ರಲ್ಲಿ 2431ಯಾತ್ರಿಗಳು 1990ರಲ್ಲಿ 1426ಮಂದಿ ಹಾಗೂ ವರ್ಷವೂ ಹಲವು ನೂರು ಸಂಖ್ಯೆಗಳಲ್ಲಿ ಕಾಲ್ತುಳಿತಕ್ಕೆ ತುತ್ತಾಗುವುದನ್ನು ಪತ್ರಿಕೆಯು ಉಲ್ಲೇಖಿಸುವುದನ್ನು ಮರೆಯುತ್ತಿದೆ. ಇದರೊಂದಿಗೆ ಬಿಸಿಗಾಳಿಗೆ 1927ರಲ್ಲಿ 1500ಮಂದಿ, 1757ರಲ್ಲಿ ಶಿಯಾ ಸುನ್ನಿ ಮುಸ್ಲಿಂ ಸೋದರ ಕಾದಾಟದಲ್ಲಿ 20ಸಾವಿರ ಜನ ಮಕ್ಕಾದಲ್ಲಿ ಬಲಿಯಾದುದು ಕೂಡಾ ನಿರಂತರವಾಗಿ ನಡೆಯುವುದಕ್ಕೆ ಸಂಪಾದಕರು ಯಾವ ಪರಿಹಾರವನ್ನು ಸೂಚಿಸುತ್ತಿಲ್ಲ.
ಈ ನಡುವೆ ತಿರುಪತಿಯಲ್ಲಿ ಪರಿಸರ ರಕ್ಷಣೆಯ ನೆನಪು ಕೂಡಾ ಘಟನೆಯ ನಂತರ ಸಂಪಾದಕರಿಗೆ ನೆನಪಾಗುತ್ತದೆ. ರಾಜಕೀಯ ವ್ಯಕ್ತಿಯೊಬ್ಬರು ಜಾಮೀನು ಪಡೆದು ಸೆರೆಮನೆಯಿಂದ ಹೊರಬಂದಾಗ ಹೊಡೆದ ಪಟಾಕಿಯ ಸರಮಾಲೆಯ ಬಗ್ಗೆ ತೆಪ್ಪಗಿರುವ ಪರಿಸರವಾದಿಗಳು ದೀಪಾವಳಿಯ ಬಾಣಬಿರುಸುಗಳಿಂದ ಉಸಿರುಗಟ್ಟಿ ಭಾಧೆಗೊಳಗಾಗುವರು. ಈ ಮುಸ್ಲಿಂ ಹಬ್ಬಗಳಲ್ಲಿ ರಸ್ತೆಗಳಲ್ಲಿ ಪ್ರಾಣಿಗಳನ್ನು ಕೊಯ್ದು ನೆತ್ತರು ಹರಿಸಿದರೂ ಮಾಲಿನ್ಯವಾಗದೆ ಇದ್ದುದು ತಿರುಪತಿಗೆ ಬರುವ ಯಾತ್ರಿಕರಿಂದ ಮಾನವಜನ್ಯ ಮಾಲಿನ್ಯವಾಗುತ್ತದೆ ಎನ್ನುತ್ತಾರೆ. ಇದಕ್ಕಾಗಿ ಬರುವ ಯಾತ್ರಿಕರ ಸಂಖ್ಯೆಯನ್ನು ನಿಯಂತ್ರಿಸಬೇಕು ಎನ್ನುವುದು ಪತ್ರಿಕೆಯ ವಾದ. ಇದಕ್ಕಾಗಿ ಪರಂಪರೆಗೆ ವಿರುದ್ಧವಾದ ಆನ್‌ಲೈನ್ ದರ್ಶನವನ್ನು ಪ್ರಾರಂಭಿಸಬೇಕು ಎನ್ನುವುದು ಎಡಪಂಥೀಯರ ಆಗ್ರಹ.
ಕಾಲ್ತುಳಿತದ ವಿವಾದವನ್ನು ಎತ್ತಿದ ಸಂಪಾದಕೀಯವು ಕೊನೆಗೆ ಸಾರುವುದು ಧಾರ್ಮಿಕ ಮುಖಂಡರು, ಸರಕಾರದ ಅಧಿಕಾರಿಗಳು ಈ ಜನ ಸಂದಣಿಯನ್ನು ಹೇಗೆ ತಡೆಯಬಹುದು ಎಂದು ಕಂಡು ಹಿಡಿಯಲು ಪರಿಸರ ತಜ್ಞರು, ಮತ್ತು ಸಾರ್ವಜನಿಕರು ಸೇರಬೇಕಂತೆ. ಇದನ್ನೇ ಹಜ್ ದುರಂತವಾದಾಗ ಹೇಳಬಲ್ಲರೇ? ವರ್ಷ ವರ್ಷವೂ ಹಜ್ ಕೋಟಾವನ್ನು ಹೆಚ್ಚಿಸಬೇಕೆಂಬ ಮುಸ್ಲಿಮರ ಆಗ್ರಹಕ್ಕೆ ಬಾಗುವ ಸರಕಾರಗಳು ಹಿಂದು ಯಾತ್ರಿಕರ ಸಂಖ್ಯೆಗೆ ಮಿತಿ ಹಾಕಲು ಹೊರಡುವರು.
ಫುಟ್‌ಬಾಲ್ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಮಾನವನ್ನು ಒಪ್ಪದ ಆಟಗಾರರ ಬೆಂಬಲಿಗರು ಮಾಡುವ ದಾಂಧಲೆಯಲ್ಲಿ ಸಾಯುವ ಸಂಖ್ಯೆಯನ್ನು ಸಹಿಸುವ ಪತ್ರಿಕೆಗಳು, ಆಟವನ್ನು ಕೆಲವು ವರ್ಷಕಾಲ ತಡೆಹಿಡಿಯುವ ಸಲಹೆಯನ್ನು ಕೊಡುವುದಿಲ್ಲ. ಸಿನೆಮಾ ಪ್ರದರ್ಶನ ಕಾಲದಲ್ಲಿ ನಡೆಯುವ ಅನಾಹುತಗಳನ್ನು ತಡೆಯಲು ಸಿನೆಮಾಗಳನ್ನೇ ನಿರ್ಮಿಸ ಬಾರದೆನ್ನುವ ನಿರ್ಬಂಧ ಹಾಕಬಲ್ಲರೇ.