Hindu Vani
Index
ಸೂಕ್ತಶ್ರೀ
ಕಾರ್ಯಸಾಧನೆಯ ಚಿಂತನೆ
-ಬಿ.ಈ. ಸುರೇಶ, ಬೆಂಗಳೂರು
ಕಃ ಕಾಲಃ ಕಾನಿ ಮಿತ್ರಾಣಿ ಕೋ ದೇಶಃ ಕೌ ವ್ಯಯಾಗಮ್
ಕಸ್ಯ ಹಂ ಕಾ ಚ ಮೇ ಶಕ್ತಿರಿತಿ ಚಿಂತ್ಯಂ ಮುಹುರ್ಮುಹುಃ |
-ಸುಭಾಷಿತ ನಿಧಿ
ಈಗ ಎದುರಾಗಿರಿವ ಕಾಲದ ಪರಿಸ್ಥಿತಿ ಹೇಗಿದೆ? ಈ ಸನ್ನಿವೇಶದಲ್ಲಿ ನನಗೆ ಯಾರಾರು ಮಿತ್ರರು ನೆರವಾಗಬಲ್ಲರು? ನಾನೀಗ ಇರುವ ದೇಶದ ಸ್ಥಿತಿಗತಿಗಳು ಹೇಗಿವೆ? ನನ್ನ ಇಚ್ಛೆಯಂತೆ ನಾನು ನಡೆಯುವುದರಿಂದ ಲಾಭವೇ ಅಥವಾ ನಷ್ಟವೇ? ನಾನು ಯಾರು? ನನ್ನಲ್ಲಿ ವಿಶೇಷವಾಗಿ ಕಾಣುವ ಶಕ್ತಿ ಯಾವುದು? ಇಷ್ಟೆಲ್ಲವನ್ನೂ ನನಗೆ ನಾನೇ ಪ್ರಶ್ನಿಸುತ್ತಾ ಸದಾ ಅದನ್ನೇ ಮರು ಚಿಂತಿಸುತ್ತಿದ್ದು ಕಾರ್ಯನಿರತನಾಗಿರಬೇಕು.
ಈ ರೀತಿ ನಮ್ಮನ್ನು ನಾವು ಅವಲೋಕಿಸುವುದು ದಿನ ನಿತ್ಯದ ಸಮಸ್ಯೆಗಳು ಎದುರಾದಾಗಲೂ ಇರಬಹುದೇನೋ? ಇಲ್ಲವೇ ಆಕಸ್ಮಿಕವಾದ ಅವಘಡಗಳೋ ಅಥವಾ ಆಪತ್ತುಗಳೊ ಸಂಭವಿಸಿದಾಗಲೂ ಇರಬಹುದು. ಆದರೆ ಸಿಮಿತ ಮನಸ್ಸಿನಿಂದ, ಈ ಸಮಸ್ಯೆಯು ನನ್ನದಲ್ಲದಿದ್ದರೆ ಏನು ಮಾಡುತ್ತಿದ್ದೆ ಎನ್ನುವ ತ್ರಯಸ್ಥ ಮನಸ್ಸಿನಿಂದ ಹಿಂದು ಮುಂದುಗಳೆಲ್ಲವನ್ನೂ ಅಳೆದು ತೂಗಿ ನಿರ್ಧರಿಸುವುದು ಮತ್ತು ಕಾರ್ಯಶೀಲನಾಗುವುದು, ಗೆಲುವು ಸಾಧಿಸುವವರ ರೀತಿಯಾಗಿದೆ. ವ್ಯಕ್ತಿಗತ ನಿರ್ಧಾರಗಳೂ ಕೌಟುಂಬಿಕ ವಿಚಾರಗಳೂ ಸಾಮಾಜಿಕ ಸಮಸ್ಯೆಗಳೂ ಅಷ್ಟೇಕೆ ಕೋಟ್ಯಾಂತರ ಜನರ ಒಳತಿಗಾಗಿ ಕೈಗೊಳ್ಳುವ ರಾಜನೈತಿಕ ನಿದರ್ಶನಗಳೆಲ್ಲವೂ ಈ ಮೇಲಿನ ಸುಭಾಷಿತದ ಆಶಯಗಳಂತೆ ಕೈಗೊಂಡರೆ ಕಾರ್ಯತಂತ್ರಗಳಲ್ಲಿ ಮೇಲುಗೈಯನ್ನು ಸಾಧಿಸುವುದು ಸಾಧ್ಯ.
ಇತಿಹಾಸದಲ್ಲಿ ಇಂತಹ ಮೇಲೆಯನ್ನು ಸಾಧಿಸಿ ನಮಗೆ ಅತಿ ಸನಿಹದಲ್ಲಿದ್ದವರೆಂದರೆ ಛತ್ರಪತಿ ಶಿವ ಮಹಾಪ್ರಭು, ಗೆಲುವಿನಲ್ಲಿ, ಸೋಲಿನ ಮುಖದಲ್ಲಿ, ಸಮಸ್ಯೆಗಳ ಸಂದಿಗ್ಧ ಪರಿಸ್ಥಿತಿಯಲ್ಲಿ ಆತನು ತೋರಿದ ಅಸಾಧಾರಣ ಬುದ್ಧಿಮತ್ತೆ ಧೀರೋದಾತ್ತತೆಗಳೆಲ್ಲವೂ ಎಂದೆಂದಿಗೂ ಮಾದರಿಪ್ರಾಯವಾದವುಗಳು. ಹಿಂದು ಸ್ವರಾಜ್ಯದ ಕನಸುಕಂಡ ಶಿವಾಜಿ ತನ್ನ ಸುತ್ತಲಿನ ವನವಾಸಿ ತರುಣರ ಮನಸ್ಸನ್ನು ಗೆದ್ದು ಬಿಟ್ಟ. ಆ ಮಾವಳಿ ಸೈನಿಕರ ಪಡೆ ಕಟ್ಟಿಕೊಂಡು ಪ್ರತಿಯೊಂದು ಕೋಟೆ ಕೊತ್ತಳಗಳ ರಹಸ್ಯಗಳನ್ನು ಸಂಗ್ರಹಿಸಿ ಬಿಟ್ಟ. ಕೋಟೆಗಳ ರಹಸ್ಯ ದ್ವಾರಗಳು, ಕೋಟೆಯೊಳಗೆ ಸಂಗ್ರಹಿಸಿದ ನಿಧಿಯ ವಿವರ, ಗಹನ ಅರಣ್ಯದಲ್ಲಿ ಹುಗಿದಿಟ್ಟ ಸಂಪತ್ತು, ಕಾಡಿನಲ್ಲಿ ಅವಿತು ಇರಬಹುದಾದ ಗವಿ ಗುಹೆಗಳ ಕರಾರುವಾಕ್ಕಾದ ವಿವರಗಳು ಅವನ ಸೈನಿಕರಿಗೆ ಅರಿವಿದ್ದವು.
ತನ್ನ ಅಪ್ಪ ಶಹಜಿಯವರೇ ನೌಕರಿಯಲ್ಲಿದ್ದ ಬಿಜಾಪುರದ ಕೋಟೆಗಳನ್ನು ಮೊದಮೊದಲು ವಶಪಡಿಸಿಕೊಳ್ಳುತ್ತಿದ್ದ ಶಿವಾಜಿಯನ್ನು ಹದ್ದು ಬಸ್ತಿನಲ್ಲಿಡಲು ಸುಲ್ತಾನ ನಿರ್ಧರಿಸಿದ. ಮೂಗು ಮುಚ್ಚಿದರೆ ಬಾಯಿ ತೆರೆಯುವುದೆಂದು ತಿಳಿದ ಆತ ತನ್ನದೇ ಸೇನಾಪತಿ ಶಹಜಿಯವರನ್ನೇ ಬಂಧಿಸಿಬಿಟ್ಟ. ಆಗ ಶಿವಾಜಿ ಬರಲೇ ಬೇಕಲ್ಲ! ಆದರೆ ಶಿವ ಪ್ರಭುವಿನ ಲೆಕ್ಕಾಚಾರಕ್ಕೆ
ಸುಲ್ತಾನನು ಸರಿಸಾಟಿಯೇ ಅಲ್ಲ. ಶಿವಾ ಆಗ ಪತ್ರ ಬರೆದುದು ದೆಹಲಿಯ ಬಾದಶಹಾನಿಗೆ ದಕ್ಷಿಣದಲ್ಲಿ ಮೊಗಲರಿಗೆ ಸಮನಾದ ಶತ್ರುವಿದ್ದರೆ ಅದು ಬಿಜಾಪುರ. ಅದನ್ನು ಬಡಿಯಲು ದೆಹಲಿಗೆ ನೆರವಾಗುವೆ ಎನ್ನುವ ಸ್ನೇಹ ಪತ್ರವನ್ನು ಕಳುಹಿಸಿ ಮೊಗಲರ ಆದರವನ್ನು ಶಿವಾಜಿ ಗಳಿಸಿಬಿಟ್ಟ. ಮೊಗಲರು ಶಿವಾಜಿಯ ನೆರವಿಗೆ ಬರುವುದನ್ನು ಕನಸಿನಲ್ಲೂ ಕಲ್ಪಿಸದ ಬಿಜಾಪುರ ಸುಲ್ತಾನ ನಿರ್ವಾಹವಿಲ್ಲದೆ ಶಹಾಜಿಯವರನ್ನು ಬಿಡುಗಡೆಗೊಳಿಸಿದ.
ಶಿವಾಜಿಯನ್ನು ಹಿಡಿದು ಬಿಜಾಪುರದ ಆಸ್ಥಾನಕ್ಕೆ ಬರುವೆ ಎಂದು ಸುಲ್ತಾನನ ತಾಯಿಯಿಂದ ಪಾನ್ ಪಡೆದು ತಿಂದು ಹೊರಟ ಅಫಜಲಖಾನ್, ಶಿವಾಜಿಯು ಸಿದ್ಧತೆಯಿಲ್ಲದೆ ಯುದ್ಧಕ್ಕೆ ಇಳಿಯಲೆಂದು ತಂತ್ರವನ್ನು ಹೂಡಿದ. ಮಾರ್ಗದುದ್ದಕ್ಕೂ ದೇವಸ್ಥಾನಗಳನ್ನು ಧ್ವಂಸಗೊಳಿಸುತ್ತ ಗೋವುಗಳನ್ನು ವಧಿಸುತ್ತಾ ಶಿವಾಜಿಯನ್ನು ಉದ್ರೇಕಿಸಬೇಕೆಂದುಕೊಂಡ. ಭೋನ್ ಮನೆಯ ಕುಲದೇವತೆ ತುಳಜಾ ಭವಾನಿಯ ಗರ್ಭಗುಡಿಯಲ್ಲಿ ಗೋವನ್ನು ವಧಿಸಿ ಅದರ ನೆತ್ತರನ್ನು ತಾಯಿಯ ವಿಗ್ರಹದ ಮೇಲೆ ಸುರಿಸಿದ. ಇದನ್ನು ಕೇಳಿಯೂ ಶಿವಾಜಿ ತಾನಿದ್ದ ಕೋಟೆಯಿಂದ ಕೆಳಗಿಳಿಯಲಿಲ್ಲ. ಮುಂದೆ ಪಂಢರಪುರದಲ್ಲೂ ಇದುವೇ ಮುಂದುವರಿಯಲಿದೆ ಎನ್ನುವ ಗುಪ್ತಚಾರರ ವರದಿ ಬಂದರೂ ಶಿವಾಜಿ ಕಂಗೆಡಲಿಲ್ಲ. ಆದರೆ ಮುಂದಿನ ತಂತ್ರದ ಬಗ್ಗೆ ಮಾತ್ರ ಲೆಕ್ಕಾಚಾರ ನಡೆಯುತ್ತಲೇ ಇತ್ತು. ಮುಂದೆ ಪ್ರತಾಪಗಡದ ಬುಡದ ಅರಣ್ಯದಲ್ಲಿ ಅಫಜಲಖಾನನನ್ನು ಎದುರಿಸಬೇಕು ಎನ್ನುವುದು ನಿರ್ಧಾರವಾಗುವವರೆಗೆ ಎಲ್ಲವನ್ನೂ ಸಹಿಸಿಕೊಂಡು ಇರಬೇಕು ಎನ್ನುವುದು ಶಿವಾಜಿಯ ಕಾರ್ಯತಂತ್ರವಾಗಿದ್ದಿತು.
ಮುಂದೆ ರಾಯಗಡದಲ್ಲಿ ಪಟ್ಟಾಭಿಷಿಕ್ತನಾಗುವವರೆಗೂ ಹೆಜ್ಜೆಹೆಜ್ಜೆಗೂ ಎಲ್ಲಾ ದೃಷ್ಟಿಕೋನಗಳಿಂದ ಕಾರ್ಯತಂತ್ರವನ್ನು ರೂಪಿಸುತ್ತ ಅದರ ಚಿಂತನೆಯಲ್ಲೇ ನಿರತನಾಗಿದ್ದ ಶಿವ ಪ್ರಭುವೇ ನಮ್ಮ ಆದರ್ಶನಾಗಿರಬೇಕು. ನಡುವೆ ಹತಾಶೆಯಾಗಲೀ, ತಪ್ಪ ಕಲ್ಪನೆಯನ್ನಾಗಲೀ ಹೊಂದದೆ ಮುಂದುವರೆಯಬೇಕು.