Logo

VHP PUBLICATIONS

Hindu Vani


expand_more

ಕ್ಷೇತ್ರ ದರ್ಶನ

ಕ್ಷೇತ್ರ ದರ್ಶನ

ಬಿಳ್ಳೂರಿನ ಶ್ರೀ ಸ್ತಂಭ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲ

ಪಾರಿಜಾತ.ಬಿ.ಎಸ್. ಬೆಂಗಳೂರು

ಮಾಂ ಕೇಶವೋ ಗದಯಾ ಪ್ರಾತರವ್ಯಾತ್‌

ಗೋವಿಂದ ಆಸಂಗವಮಾತ್ತ ವೇಣುಃ

ನಾರಾಯಣಃ ಪ್ರಾಪ್ತ ಉದಾತ್ತ ಶಕ್ತಿಃ

ಮಧ್ಯಂದಿನೇ ವಿಷ್ಣುರರೀಂದ್ರ ಪಾಣೀ (ನಾರಾಯಣ ಕವಚ)

ಗದಾಧಾರಿ ಕೇಶವನು ಪ್ರಾತಃಕಾಲದಲ್ಲಿಯೂ, ವೇಣುಧರ ಗೋವಿಂದನು ಸಂಗಮ ಕಾಲದಲ್ಲಿಯೂ, ಮಹಾ ಪರಾಕ್ರಮಿ ನಾರಾಯಣನು ಪೂರ್ವಾಹ್ನದಲ್ಲಿಯೂ,ಚಕ್ರಪಾಣಿ ವಿಷ್ಣುವು ಮಧ್ಯಾಹ್ನದಲ್ಲಿಯೂ ನಮ್ಮನ್ನು ಸಲಹಲಿ.

ಶುದ್ಧ ಜ್ಞಾನ ಹಾಗು ಶುದ್ಧ ಭಕ್ತಿ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಂತೆಯೇ ಭಗವಂತ ಹಾಗು ಭಕ್ತರು. ಭಕ್ತಿ ಮಾರ್ಗದಿಂದ ಭಕ್ತನು ಭಗವಂತನನ್ನು ಒಲಿಸಿಕೊಳ್ಳಲು ಜ್ಞಾನ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ಹೀಗೆ ಭಕ್ತ ಮತ್ತು ಭಗವಂತನ ಅವಿನಾಭಾವ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ದೈವ ಸಾನ್ನಿಧ್ಯತೆಯಿರುವ ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ.

ಕರ್ನಾಟಕ ರಾಜ್ಯದ, ಚಿಕ್ಕಬಳ್ಳಾಪುರ ಜಿಲ್ಲೆಯ, ಬಾಗೇಪಲ್ಲಿ ತಾಲ್ಲೂಕಿನ, ಬಿಳ್ಳೂರಿನಲ್ಲಿ ಶ್ರೀ ಸ್ತಂಭ ಲಕ್ಷ್ಮೀನರಸಿಂಹಸ್ವಾಮಿ ದೇಗುಲವಿದೆ. ಇದು ಕರ್ನಾಟಕದಲ್ಲಿರುವ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಗಳಲ್ಲಿ ಪ್ರಮುಖವಾಗಿದೆ.

ಐತಿಹಾಸಿಕ ಹಿನ್ನೆಲೆ

ಈ ಕ್ಷೇತ್ರವು ಕರ್ನಾಟಕ ಹಾಗು ಆಂಧ್ರಪ್ರದೇಶದ ಗಡಿಭಾಗದಲ್ಲಿದೆ. ಸುಮಾರು 1300 ವರ್ಷಗಳ ಇತಿಹಾಸವನ್ನು ಹೊಂದಿದೆ. ಚೋಳರು,ವಿಜಯನಗರದ ಅರಸರು, ಗಂಗರ ಕಾಲದಲ್ಲಿ ಈ ಕ್ಷೇತ್ರವು ಸಾಕಷ್ಟು ಅಭಿವೃದ್ಧಿಗೊಂಡಿದೆ. 13 ನೇ ಶತಮಾನದ ಚೋಳರ ಕಾಲದಲ್ಲಿ ದೇವಾಲಯವು ನಿರ್ಮಿತವಾಗಿದೆ. ಈ ದೇಗುಲಕ್ಕೆ ವಿಜಯನಗರದ ಪ್ರಸಿದ್ದ ದೊರೆ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಮುಖಮಂಟಪವನ್ನು ನಿರ್ಮಿಸಲಾಗಿದೆ. ಗಂಗರು ಈ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆಂದು ತಿಳಿದು ಬರುತ್ತದೆ.

ಸ್ತಂಭ ಲಕ್ಷ್ಮೀನರಸಿಂಹ ದೇಗುಲ

ಸುಂದರ ಪ್ರಕೃತಿಯ ಮಡಿಲಿನ ಮಧ್ಯದಲ್ಲಿರುವ ಈ ದೇಗುಲವು ಪುಟ್ಟ ಬೆಟ್ಟದ ಮೇಲಿದೆ. ವಿಶಾಲವಾದ ಪ್ರಾಕಾರ ಹೊಂದಿದ್ದು ವಿಶೇಷ ಪ್ರವೇಶ ದ್ವಾರವನ್ನು ಹೊಂದಿದ ದೇಗುಲದ ಗರ್ಭಗೃಹದಲ್ಲಿ 16 ಅಡಿ ಎತ್ತರದ ಕಂಬದಲ್ಲಿ ನರಸಿಂಹ ಸ್ವಾಮಿಯ ಆಕಾರವಿದೆ. ಈ ಕಂಬದ ಕೆಳಗೆ 4 ಅಡಿ ಎತ್ತರದ ವಾಮಾಂಕ ಸ್ಥಿತಿಯಲ್ಲಿನ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಹಿಂದೆ ಪ್ರಹ್ಲಾದರ ಕರೆಗೆ ಓಗೊಟ್ಟು ಹಿರಣ್ಯಕಶಿಪುವನ್ನು ಸಂಹರಿಸಲು ಕಂಬದಿಂದ ಉಗ್ರನಾಗಿ ಪ್ರತ್ಯಕ್ಷನಾದ ಸ್ವಾಮಿಯು, ಇಲ್ಲಿ ಕಂಬದಲ್ಲಿ ಶಾಂತನಾಗಿ, ಪ್ರಸನ್ನ ನರಸಿಂಹನಾಗಿ ತಾಯಿ ಲಕ್ಷ್ಮೀದೇವಿಯ ಸಹಿತ ವಿರಾಜಮಾನನಾಗಿದ್ದಾನೆ. ಗರ್ಭಗೃಹದಲ್ಲಿನ ಕಂಬವು ದಿನದಿಂದ ದಿನಕ್ಕೆ ಬೆಳೆಯುತ್ತಿದೆಯೆಂಬ ನಂಬಿಕೆಯಿಂದ ಅದರ ಮೇಲೆ ಕಬ್ಬಿಣದ ಸರಳನ್ನು ನೆಟ್ಟು ಕಂಬವು ಬೆಳೆಯದಂತೆ ತಡೆಯಲಾಗಿದೆಯೆಂದು ಹೇಳಲಾಗುತ್ತದೆ.

ಪುಟ್ಟ ಬೆಟ್ಟದ ಮೇಲಿರುವ ಈ ದೇಗುಲವು ಪೂರ್ವಾಭಿಮುಖವಾಗಿದ್ದು, ಸ್ವಾಮಿಯ ದರ್ಶನ ಪಡೆಯಲು 65 ಮೆಟ್ಟಿಲುಗಳನ್ನು ಏರ ಬೇಕಾಗುತ್ತದೆ. ನವಗ್ರಹ ಹಾಗು ಮಹಾಗಣಪತಿಯ ದೇಗುಲಗಳು ಮೆಟ್ಟಿಲಿನ ಎಡ ಹಾಗು ಬಲ ಭಾಗದಲ್ಲಿವೆ. ದೇಗುಲದ ಮುಂದೆ ಧ್ವಜಸ್ತಂಭವು ಆಕರ್ಷಣೀಯವಾಗಿದ್ದು ಗರ್ಭಗೃಹದ ಮೇಲಿನ ವಿವಿಧ ದೇವರುಗಳ ಶಿಲಾ ವಿನ್ಯಾಸದ ವಿಮಾನ ಗೋಪುರ ಸುಂದರ ಬಣ್ಣಗಳಿಂದ ಅಲಂಕೃತವಾಗಿದೆ. ಪ್ರವೇಶದಲ್ಲಿ ಗರುಡ ದೇವನು ದರ್ಶನ ನೀಡುತ್ತಾನೆ. ಪ್ರವೇಶದ್ವಾರದ ಅಕ್ಕಪಕ್ಕಗಳಲ್ಲಿ ದ್ವಾರಪಾಲಕರು ಕಾಣಸಿಗುತ್ತಾರೆ. ಗೋಪುರದಲ್ಲಿ ಶ್ರೀನಿವಾಸ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ ಪ್ರತಿಬಿಂಬಿಸುವ ಹಾಗು ಗರುಡ, ಹನುಮ, ಇತ್ಯಾದಿ ಮೂರ್ತಿಗಳಿವೆ. ಭಿತ್ತಿಯೊಂದರಲ್ಲಿ ಮೀನಿನ ಉಬ್ಬು ಕೆತ್ತನೆಯಿದೆ. ಹೊರ ಪ್ರಾಕಾರದಲ್ಲಿ ದಶಾವತಾರದ ಶಿಲ್ಪಗಳು ಆಕರ್ಷಕವಾಗಿವೆ. ದೇಗುಲದ ಒಳ ಗೋಡೆ ಮೇಲ್ಬಾವಣಿ ಬಣ್ಣಬಣ್ಣದ ದೇವಾನು ದೇವತೆಗಳ ಚಿತ್ರ ಬರಹ ಹಾಗು ವಿಗ್ರಹಗಳಿಂದ ಕಣ್ಮನ ಸೆಳೆಯುತ್ತವೆ. ಗರ್ಭಗೃಹದಲ್ಲಿನ ಕಂಬದಲ್ಲಿ ಸ್ವಾಮಿ ಲಕ್ಷ್ಮೀನರಸಿಂಹನು ಸ್ವಯಂಭು ಉದ್ಭವ ಮೂರ್ತಿಯಾಗಿ ಶಂಕು ಚಕ್ರಧಾರಿಯಾಗಿ ವಿರಾಜಿಸಿದ್ದಾನೆ. ದಕ್ಷಿಣಕ್ಕೆ ಆದಿಶೇಷ ಹಾಗು ಉತ್ತರಕ್ಕೆ ತಾಯಿ ಶ್ರೀ ಲಕ್ಷ್ಮೀದೇವಿಯ ದೇಗುಲವಿದೆ. ಉತ್ಸವ ಮೂರ್ತಿಯು ವಿಶೇಷತೆಯನ್ನು ಪಡೆದಿದೆ.ಗಂಗರ ಕಾಲದಲ್ಲಿ ಈ ದೇಗುಲದ ಜೀರ್ಣೋದ್ಧಾರ ಕಾರ್ಯವು ನಡೆದಿದೆಯೆಂದು ಹೇಳಲಾಗುತ್ತದೆ, ಮುಂದುವರೆದು ಭಕ್ತವೃಂದದಿಂದಲೂ ಜೀರ್ಣೋದ್ಧಾರ ಕೆಲಸ ನಡೆದಿದೆ. 

ಕ್ಷೇತ್ರ ದರ್ಶನ

ಆಸ್ಟ್ರೇಲಿಯಾದ ಸಿಡ್ನಿ ನಿವಾಸಿ ಸಿವಿಲ್ ಇಂಜಿನಿಯರ್ ಕೂಡೂರು ರಾಮಮೂರ್ತಿ ಎಂಬ ಭಕ್ತರು ತಮ್ಮ ತವರೂರಾದ ಬಿಳ್ಳೂರಿನ ದೇಗುಲದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿದ್ದಾರೆ. ಶ್ರೀರಾಮ ದೇವರು ಹನುಮಂತನೊಂದಿಗಿರುವ ಸುಂದರ ದೇಗುಲವನ್ನು ನಿರ್ಮಿಸಿದ್ದಾರೆ. ದೇಗುಲದ ಹೊರ ವಿಶಾಲ ಆವರಣದಲ್ಲಿ ಬಯಲು ಆಂಜನೇಯನು ಕಲ್ಲಿನ ಮೇಲಿನ ಉಬ್ಬು ಶಿಲ್ಪವಾಗಿ ನೆಲೆಸಿದ್ದಾನೆ. ನಂಬಿ ಬರುವ ಭಕ್ತರನ್ನು ಸಲಹುತ್ತಿದ್ದಾನೆ.

ಕ್ಷೇತ್ರ ದರ್ಶನ

ಚೋಳರ ಕಾಲದಲ್ಲಿ ಸ್ಥಾಪಿತವಾದ ಶ್ರೀ ವೆಂಕಟೇಶ್ವರನ ಪುರಾತನವಾದ ದೇಗುಲವು ಜೀರ್ಣೋದ್ಧಾರಗೊಂಡು ಕಂಗೊಳಿಸುತ್ತಿದೆ. ದೇಗುಲದಲ್ಲಿ ಶ್ರೀ ವೆಂಕಟೇಶ ದೇವರು ಶ್ರೀದೇವಿ ಭೂದೇವಿ ಸಹಿತನಾಗಿ ನಿಂತಿರುವ ಭಂಗಿಯಲ್ಲಿದ್ದಾರೆ.

ದೇವಾಲಯದ ಪ್ರಾಕಾರದಲ್ಲಿ ಶ್ರೀವೆಂಕಟೇಶ್ವರನ ಮೂರ್ತಿಯಿದೆ. ರಾಮಲಕ್ಷ್ಮಣರನ್ನು ಹೆಗಲ ಮೇಲೆ ಹೊತ್ತ ಬೃಹದಾಕಾರದ ಹನುಮಂತನ ಗಾರೆ ವಿಗ್ರಹ ಮತ್ತು 40 ಅಡಿ ಎತ್ತರದ ಪರಶಿವನ ಮೂರ್ತಿಗಳಿವೆ. ದೇವಾಲಯದ ಮುಂಭಾಗದಲ್ಲಿ ಲಕ್ಷ್ಮೀನರಸಿಂಹ ಶಿಲ್ಪವಿರುವ ಕಮಾನು ಇದ್ದು, ಕಂಬಗಳಲ್ಲಿ ಜಯವಿಜಯರ ಮೂರ್ತಿಗಳು ಆಕರ್ಷಿಸುತ್ತವೆ.

ಯಾತ್ರಿಕರಿಗೆ ಹೆಚ್ಚಿನ ಮಾಹಿತಿ

* ಬೆಂಗಳೂರಿನಿಂದ ಸುಮಾರು 125 ಕಿ.ಮೀ ದೂರ ಮತ್ತು ಬಾಗೆಪಲ್ಲಿಯಿಂದ 32 ಕಿಮೀ ದೂರದಲ್ಲಿದೆ.

* ಹೈದರಾಬಾದ್‌ನಿಂದ ಮೆಹಬೂಬ್‌ನಗರ, ಅನಂತಪುರಂ, ಕದಿರಿ ಮೂಲಕ ಈ ಕ್ಷೇತ್ರಕ್ಕೆ ಬರಬಹುದು

* ಬೆಂಗಳೂರಿನಿಂದ ದೇವನ ಹಳ್ಳಿ ಚಿಕ್ಕಬಳ್ಳಾಪುರ ಮಾರ್ಗವಾಗಿ ಬಾಗೇಪಲ್ಲಿಗೆ ಬಂದು ಅಲ್ಲಿಂದ ಬಿಳ್ಳುರಿಗೆ ಬರಬಹುದು.

* ಇಲ್ಲಿಗೆ ಖಾಸಗಿ ಸರ್ಕಾರಿ ಬಸ್ ವ್ಯವಸ್ಥೆ ಹಾಗು ಹಿಂದೂಪುರದವರೆಗೂ ರೈಲು ವ್ಯವಸ್ಥೆಯಿದೆ.

* ವಿಶೇಷ ದಿನಗಳಲ್ಲಿ ವಿಶೇಷ ಪೂಜಾ ಕೈಂಕರ್ಯ, ಶ್ರೀನಿವಾಸ ಕಲ್ಯಾಣ, ನರಸಿಂಹ ಉತ್ಸವಗಳು ಹೋಮಹವನ ನಿರಂತರವಾಗಿ ನಡೆಯುತ್ತವೆ.

* ದುಷ್ಟಶಕ್ತಿಗಳ ಬಾಧೆ, ಕೌಟುಂಬಿಕ ಸಮಸ್ಯೆ, ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.