Hindu Vani
Index
expand_more
ಹಾಡು
ಹೊಸಹಾಡು
- ಪು.ತಿ. ನರಸಿಂಹಾಚಾರ್ಯ
ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ
ಈ ಜಗವೋಡುತಿದೆ
ಹಳತು ನೋಡಿ ತಾ ಕಿಲಕಿಲ ನಗುತಲಿ
ಈ ಜಗವೋಡುತಿದೆ.
ದಿನ ದಿನ ಯುಗ ಯುಗ ಮನು ಮನ್ವಂತರ
ಮಾಡಿದುದನೆ ತಾ ಮಾಡುತ್ತ
ಒಂದೆ ಹಾಡು ಓ ಒಂದೆ ಸೋಬಾನೆ
ಹಾಡಿದುದನೆ ತಾ ಹಾಡುತ್ತ.
ಕಣ್ಣ ಕಪಾಟಿನ ರಥಾಶ್ವದಂದದಲಿ
ಒಂದೇ ಹಾದಿಯ ಹಂಬಲವಾಗಿ
ನಡೆದೀ ಲೋಕವು ಆವ ಶಕ್ತಿಗೋ
ಇಂದು ತಾನು ಬಲು ಬಲು ಮರುಳಾಗಿ
ಓಡುತಿದೆ ಅಹ ಓಡುತಿದೆ!
ಹಳತು ನೋಡಿ ತಾ ಕಿಲ ಕಿಲ ನಗುತಲಿ
ಈ ಜಗವೋಡುತಿದೆ
ಅಜ್ಞಾನಕೆ ವಿಜ್ಞಾನದ ಹೊಸ ಬೆಳಕು,
ನಿಂತ ಮನಕೆ ಹೊಸ ಮತಗಳ ಚುರುಕು
ಊಹೆಯನೇ ಮುಂಚುವ ಹೊಸ ಸೃಷ್ಟಿ
ಹೊಸ ಬಾಳಿಗೆ ಹೊಂಚುವ ಹೊಸ ದೃಷ್ಟಿ
ಕವಿಗಾಯಿತು ನವ ಹರ್ಷ ಕ್ರಾಂತಿ,
ಕಲೆಗಾಯಿತು ಹೊಸ ಚಲುವಿನ ಕಾಂತಿ
ಚಿತ್ರಕ್ಕೆ ಹೊಸ ರಂಗು
ಹಾಡಿಗು ಹೊಸ ಗುಂಗು!
ಗಳಿಗೆ ಗಳಿಗೆಗೂ ಹೊಸಹೊಸ ರೀತಿಗೆ
ಈ ಜಗವೋಡುತಿದೆ
ಪ್ರಗತಿಯಹಂತಕೊ
ಪ್ರಲಯದ ದುರಂತಕೊ
ಹಳತು ನೋಡಿ ತಾ ಕಿಲ ಕಿಲ ನಗುತಲಿ
ಈ ಜಗವೋಡುತಿದೆ.