Hindu Vani
Index
ಪ್ರಸ್ತುತ
ವೀರ ಮಾತೆಯ ನುಡಿಗಳಿಂದ
ಶಾರದಾ ಮೂರ್ತಿ ಮೈಕೋ ಬಡಾವಣೆ, ಬೆಂಗಳೂರು
ಮಾರ್ಚ್ 8 ಮಹಿಳಾ ದಿನಾಚರಣೆಯಂದೇ ಜಾಗ್ರತಿ ಮಾಸಪತ್ರಿಕೆಗೆ ರಜತ ಸಂಭ್ರಮವಾದ್ದರಿಂದ ಸಮಾರಂಭ ಮತ್ತಷ್ಟು ಕಳೆಗಟ್ಟಿತ್ತು. ಸಮಾರಂಭಕ್ಕೆ ಕರೆಸಿದ್ದ ಅಧ್ಯಕ್ಷರು ಹಾಗೂ ಅತಿಥಿಗಳೆಲ್ಲರ ಮಾತುಗಳೂ ಪ್ರೇರಣಾದಾಯಿಯಾಗಿದ್ದು, ಎಲ್ಲರ ಮನಗಳಿಗೂ ಮುಟ್ಟುವಂತಿತ್ತು. ಶ್ರೀಮತಿ ಅನುರಾಧ ವೆಂಕಟೇಶ್ ಅವರೂ ಅತಿಥಿಗಳಲ್ಲಿ ಒಬ್ಬರಾಗಿದ್ದರು. ಮರಣೋತ್ತರ ಶೌರ್ಯಚಕ್ರಕ್ಕೆ ಭಾಜನರಾದ ವೀರಯೋಧ ಕ್ಯಾಪ್ಟನ್ ಪ್ರಾಂಜಲ್‌ನ ತಾಯಿ ಅವರು ಎಂದೊಡನೆ ಅನೇಕರ ಹೃದಯ ದ್ರವಿಸುತ್ತದೆ.
ಮಂಗಳೂರಿನ ಕ್ಯಾಪ್ಟನ್ ಪ್ರಾಂಜಲ್, 1923ರ ನವೆಂಬರ್ 22 ರಂದು ಜಮ್ಮು ಕಾಶ್ಮೀರದ ರಔರ್‌ನಲ್ಲಿ ಉಗ್ರರೊಂದಿಗೆ ಸೆಣಸಾಡುತ್ತಾ ದೇಶಕ್ಕಾಗಿ ಪ್ರಾಣಕೊಟ್ಟ ವೀರಯೋಧ, ಬದುಕಿದ್ದರೆ ಇನ್ನೆರಡು ತಿಂಗಳಲ್ಲಿ ಅವರಿಗೆ ಮುಂಬಡ್ತಿ ಸಿಗುತ್ತಿತ್ತು. ತಮ್ಮ ಸೈನಿಕ ಜೀವನದಲ್ಲಿ ಅನೇಕ ಸಾಹಸಗಳನ್ನು ಎದುರಿಸುವಲ್ಲಿ ಯಶಸ್ವಿಯಾಗಿದ್ದವರು. ಬಾಲ್ಯದಿಂದಲೂ ಮಾತೃಭೂಮಿಯೆಂದರೆ ಅಪಾರ ಭಕ್ತಿ, ತಾಯಿ ತಂದೆಯರು, ಶಾಲೆಯ ಶಿಕ್ಷಕರು ಅವನ ದೇಶಭಕ್ತಿಗೆ ಮತ್ತಷ್ಟು ಪ್ರೇರಣೆ ಕೊಡುತ್ತಿದ್ದರು. ಪ್ರೋತ್ಸಾಹಿಸುತ್ತಿದ್ದರು.
ಪಿ.ಯು.ಸಿ. ಮುಗಿಸಿದ್ದ ಪ್ರಾಂಜಲ್ ಆರ್. ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಮಾಡುತ್ತಿದ್ದವರು. ಅದನ್ನು ಬಿಟ್ಟು ಸೈನಿಕರ ಶಾಲೆ (ಎನ್.ಡಿ.ಎ) ಸೇರಿದ್ದು. ಅಲ್ಲಿ ಅತಿ ಕಷ್ಟದ ತರಬೇತಿಗಳಲ್ಲಿ ಉತ್ತೀರ್ಣರಾಗಿ ಸೈನಿಕ ವೃತ್ತಿ ಆರಂಭಿಸಿದ್ದರು ಪ್ರಾಂಜಲ್.
ಜುಲೈ 1995ರಂದು ಹುಟ್ಟಿದ ಪ್ರಾಂಜಲ್, ತಾಯ್ತಂದೆಯರ ಒಬ್ಬನೇ ಮಗ. ಇಷ್ಟಪಟ್ಟು ಆರಿಸಿಕೊಂಡ ಸೈನಿಕ ವೃತ್ತಿಯಲ್ಲಿಯೂ ಅವರದು ಯಶೋಗಾಥೆಯೇ. ಒಂಬತ್ತು ವರ್ಷಗಳ ವೃತ್ತಿಜೀವನ ಮುಂದುವರೆಯುತ್ತಿರುವಾಗ ಕಾಶ್ಮೀರ ಕಣಿವೆಯಲ್ಲಿನ ದಂಗೆ ನಿಗ್ರಹ ಕಾರ್ಯಚರಣೆಗಳಿಗಾಗಿ ರಾಷ್ಟ್ರೀಯ ಬೆಟಾಲಿಯನ್‌ನೊಂದಿಗೆ ಸೇವೆ ಸಲ್ಲಿಸಲು ನಿಯೋಜಿಸಲ್ಪಟ್ಟರು. ಅಲ್ಲಿ ಉಗ್ರರ ಕಾರ್ಯಾಚರಣೆ ನಡೆಸುತ್ತಿರುವಾಗ ಹುತಾತ್ಮರಾದ ನಾಲ್ಕು ಮಂದಿಯಲ್ಲಿ ಇವರು ಒಬ್ಬರು. ಭಾರತಾಂಬೆಯ ಸೇವೆಯಲ್ಲಿ ಪ್ರಾಣಾರ್ಪಣೆ ಮಾಡಿದ ಆ ಧೀರಯೋಧರ ಅಗಲಿಕೆ ಎಲ್ಲರಿಗೂ ನೋವನ್ನುಂಟುಮಾಡಿತ್ತು.
ತ್ರಿವರ್ಣಧ್ವಜ ಹೊದ್ದು ಬಂದ ಪ್ರಜ್ವಲ್‌ನನ್ನು ಅವರ ತಂದೆ, ತಾಯಿ, ಮಡದಿ ಅದಿತಿ ಮೌನವಾಗಿ ಬೀಳ್ಕೊಡಬೇಕಾಯಿತು. ಅಪಾರ ಜನಸ್ತೋಮ ಅಶ್ರುತರ್ಪಣದೊಂದಿಗೆ ಬೀಳ್ಕೊಟ್ಟಿತ್ತು. ಶ್ರೀಮತಿ ಅನುರಾಧ ಅವರನ್ನು ನೋಡುತ್ತಿದ್ದಂತೆ ಅನೇಕರ ಮನಗಳಲ್ಲಿ ಈ ಘಟನೆಗಳೆಲ್ಲಾ ಕಣ್ಮುಂದೆ ಸುಳಿದಿರುತ್ತವೆ.
ಅನುರಾಧ ಅವರು ಸಹಜವಾಗಿಯೇ ಇದ್ದು ಪ್ರಸ್ತುತ ಸಂದರ್ಭಕ್ಕೆ ಹೊಂದುವಂತೆ ಮಹಿಳಾ ದಿನಾಚರಣೆಯ ಬಗ್ಗೆ ಸ್ವರಚಿತ ಕವನವೊಂದನ್ನು ವಾಚಿಸಿದರು. ಮಹಿಳೆ ಕ್ರಿಯಾಶೀಲೆ, ಆಕೆ ಎಲ್ಲಾ ಕಾರ್ಯಗಳನ್ನೂ ಸಮರ್ಥವಾಗಿ ಮಾಡಬಲ್ಲಳು. ಆಕೆ ಪ್ರತಿದಿನವೂ ಮಾಡುವ ಸಾಧನೆಗಳ ಪಟ್ಟಿಯನ್ನು ಪ್ರಕಟಪಡಿಸಲು ಈ ದಿನ ಪ್ರಶಸ್ತವಾಗಿದೆ ಎಂದು ಪಾರಂಭಿಸಿದರು.
ನಿಧಾನವಾಗಿ ಮುಂದುವರೆಸುತ್ತಾ, ಪ್ರಾಂಜಲ್ ಬಗ್ಗೆ ತಮಗೆ ತುಂಬಾ ಹೆಮ್ಮೆಯೆಂದೂ, ಒಳ್ಳೆಯ ಸಂಸ್ಕಾರವಂತ ಆತನೆಂದೂ, ಅವನಿಗೆ ಗುರುಗಳಿಂದ ಒಳ್ಳೆಯ ಮಾರ್ಗದರ್ಶನ ಸಿಕ್ಕಿತ್ತೆಂದೂ ಸ್ಮರಿಸಿಕೊಂಡರು. “ಓದುವುದರಲ್ಲಿಯೂ ಮುಂದು, ಸ್ನೇಹಜೀವಿಯಾತ, ನಾಯಕತ್ವದ ಗುಣ ಅತನಲ್ಲಿತ್ತು. ಬಾಲ್ಯದಿಂದಲೇ ದೇಶಭಕ್ತಿ ಅವನಲ್ಲಿ ಅಂತರ್ಗತವಾಗಿತ್ತು. ಏರ್‌ಫೋರ್ಸಗೆ ಸೇರಿ ಪೈಲಟ್ ಆಗುವುದು ಅವನ ಗುರಿಯಾಗಿತ್ತು. ಮೈಕಟ್ಟಿನ ಯಾವುದೋ ಒಂದು ಸಣ್ಣ ತೊಂದರೆಯಿಂದ ಆಯ್ಕೆಯಾಗಲಿಲ್ಲ. ಆದರೆ ಸೈನಿಕನಾಗಬೇಕೆಂಬ ಅದಮ್ಯ ಬಯಕೆ ಇನ್ನೂ ಹಸಿರಾಗಿಯೇ ಇತ್ತು. ಇಂಜಿನಿಯರಿಂಗ್ ಓದಲು ಸೇರಿದ್ದ ಮಗ, ಎನ್.ಡಿ.ಎ. ಸೇರಿಕೊಂಡ. ಎಲ್ಲಾ ಅರ್ಹತಾ ಪರೀಕ್ಷೆಗಳಲ್ಲೂ ಯಶಸ್ವಿಯಾಗಿ, ದೇಶಸೇವೆ ಸಲ್ಲಿಸಲು ಸೈನಿಕನಾದ. ತುಸು ನಿಲ್ಲಿಸಿ ಮತ್ತೆ ನಿರ್ಭಾವುಕರಾಗಿ ಮಾತು ಮುಂದುವರಿಸಿದ್ದರು. “ರಜೆಯಲ್ಲಿ ಬಂದಾಗ ಸೈಟ್ಸ್ ವಿದ್ಯಾರ್ಥಿಗಳಿಗೆ ತರಬೇತಿ ಕೊಡಲು ಹೋಗುತ್ತಿದ್ದ. ಬಿ.ಎಡ್. ವಿದ್ಯಾರ್ಥಿಗಳಿಗೆ ಧ್ವಜಸಂಹಿತೆಯ ಬಗ್ಗೆ ತಿಳಿಸುತ್ತಿದ್ದ. ಸ್ನೇಹಿತರನ್ನೆಲ್ಲಾ ಒಟ್ಟು ಸೇರಿಸುತ್ತಿದ್ದ. ಸದಾ ಚಟುವಟಿಕೆಯಿಂದಿರುತ್ತಿದ್ದ. ತನ್ನ ವೃತ್ತಿಯ ಸವಾಲುಗಳನ್ನೆಲ್ಲಾ ಧೈರ್ಯದಿಂದ ಎದುರಿಸುತ್ತಿದ್ದ. ಇಂತಹ ಉತ್ಸಾಹೀ, ಶೂರ ಮಗ ಒಂದು ದಿನ ತ್ರಿವರ್ಣಧ್ವಜ ಹೊದಿಸಿಕೊಂಡು ಮನೆಗೆ ಮರಳಿದ. ನಮಗಂತೂ ಅವನ ಬಗ್ಗೆ ಹೆಮ್ಮೆಯಿದೆ. ತಾಯಿಯಾಗಿ ನಾವು ಕಣ್ಣು ಮುಚ್ಚುವರೆಗೂ ದುಃಖ ಇದ್ದೇ ಇರುತ್ತದೆ. ನಮ್ಮಂತೆಯೇ ಅಸಂಖ್ಯಾತ ಪೋಷಕರು ನೋವನ್ನು ಅನುಭವಿಸುತ್ತಿದ್ದಾರೆ. ಇಲ್ಲಿ ಬೇರೆ ಎಲ್ಲರೂ ಸುಖವಾಗಿರಲು, ನಿಶ್ಚಿಂತೆಯಿಂದಿರಲು ಯೋಧರು ತಮ್ಮ ಬದುಕು ಕೊಡುತ್ತಿದ್ದಾರೆ.
ಈಗ ಸೈನ್ಯದಲ್ಲಿರುವ ಯೋಧರೆಲ್ಲರೂ ಕೇವಲ ವೃತ್ತಿಗೆಂದು ಸೈನ್ಯ ಸೇರುವುದಿಲ್ಲ. ದೇಶ ಉಳಿಸಲು, ದೇಶದ ಗೌರವ ಕಾಪಾಡಲು ಅವರು ಸೈನ್ಯಕ್ಕೆ ಸೇರುತ್ತಿದ್ದಾರೆ. ಅವರೆಲ್ಲರ ಪ್ರಾಣಗಳೂ ಅನಿಶ್ಚಿತವಾಗಿರುತ್ತವೆ.
ಯೋಧರು ಹುತಾತ್ಮರಾದಾಗ ಅವರೆಲ್ಲರ ಕುಟುಂಬಗಳಿಗೂ ಈ ಅಗಲುವಿಕೆ, ನೋವು ಸಹಜವೇ! ಸ್ವಾತಂತ್ರ್ಯ ಉಳಿಸಲು ಆಗ ಲಕ್ಷಾಂತರ ಮಂದಿ ಪ್ರಾಣ ಕೊಟ್ಟಿದ್ದರೆ, ಈಗ ಅದನ್ನು ಉಳಿಸಿಕೊಳ್ಳಲು ಯೋಧರ ಬಲಿದಾನವಾಗುತ್ತಿದೆ. ಅತ್ಯಂತ ಕಷ್ಟದ ಕಾರ್ಯಚರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇವರೆಲ್ಲರ ಬಗ್ಗೆ ನನಗೆ ಅತ್ಯಂತ ಹೆಮ್ಮೆ ಇದೆ. ಆ ತಾಯಿ ಸಂಯಮದಿಂದ ಸ್ಥಿತಪ್ರಜ್ಞರಂತೆ ಹೇಳುವಾಗ ಸಭಿಕರೆಲ್ಲರ ಕಣ್ಣುಗಳು ಒದ್ದೆಯಾಗಿದ್ದವು.
ಎಲ್ಲವನ್ನು ಸಮಗ್ರವಾಗಿ, ಚಿಂತಿಸುವ ವಿವೇಚಿಸುವ ತಾಯಿ ಆಕೆ. ಇಪ್ಪತ್ತೆರಡರಿಂದ ಮೂವತ್ತರ ಒಳಗಿನ ಅದೆಷ್ಟು ಯುವಕರು ದೇಶಕ್ಕಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಕೊಟ್ಟ ಆ ವಿಶೇಷ ತರಬೇತಿಯ ಜೊತೆಗೆ ಯುವಶಕ್ತಿಯೂ ವ್ಯರ್ಥವಾಗುತ್ತಿದೆ. ಇದೆಲ್ಲಾ ದೇಶಕ್ಕೆ ಎಂತಹ ನಷ್ಟ ಅಲ್ಲವೆ? ಯೋಧರ ಸ್ಮರಣಾರ್ಥ ಕಟ್ಟಿಸಲಾಗಿರುವ ಸ್ಮರಣ ಮಂದಿರಗಳನ್ನು ನೋಡುತ್ತಿದ್ದರೆ ದುಃಖವಾಗುತ್ತದೆ. ತಮ್ಮ ನೋವನ್ನು ನುಂಗಿಕೊಂಡು ಬೇರೆಯವರ ನೋವಿಗೆ ಮಿಡಿಯುವ ಅನುರಾಧರ ಬಗ್ಗೆ ಏನೆಂದು ಹೇಳಲಾದೀತು! ಒಬ್ಬ ವಿಶಾಲ ಹೃದಯಿ ತಾಯಿ ಮಾತ್ರವೇ ಹೀಗೆ ಮತ್ತೊಬ್ಬರ ದುಃಖವನ್ನು ಅರಿಯಬಲ್ಲರು.
ಆಕೆಯ ಸಕಾರಾತ್ಮಕ ಚಿಂತನೆಯ ಮಾತುಗಳನ್ನು ಕೇಳಿದಾಗ ಆಕೆಯ ಬಗ್ಗೆ ಮತ್ತಷ್ಟು ಅಭಿಮಾನವುಂಟಾಗಿತ್ತು. ಈಗಿನ ಸಾಮಾಜಿಕ ಮಾಧ್ಯಮಗಳು ಹಾಗೂ ಮುದ್ರಣ
ಮಾಧ್ಯಮಗಳು ಕೇವಲ ನಕಾರಾತ್ಮಕ ಸುದ್ದಿಗಳನ್ನೇ ಪ್ರಕಟಿಸುತ್ತವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಹೆಚ್ಚು ಹೆಚ್ಚು ಜನರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇದು ನನ್ನ ಸ್ವಂತ ಅನುಭವವಾಗಿದೆ. ವೀರಯೋಧ ಎಂಬ ಯುವಕರ ತಂಡ ನಮ್ಮೊಂದಿಗೆ ಇರುತ್ತದೆ. ನಮ್ಮ ಮಗ ದೂರವಾಗಿದ್ದಾನೆ. ಆದರೆ ಇವರೆಲ್ಲರೂ ನಮ್ಮ ಮಕ್ಕಳೇ ಆಗಿ ತಮ್ಮ ಜೊತೆಗಿದ್ದಾರೆ. ಅಂದು ಪ್ರಾಂಜಲ್ ತ್ರಿವರ್ಣ ಧ್ವಜವನ್ನು ಹೊದಿಸಿಕೊಂಡು ಮನೆಗೆ ಬಂದಾಗ ಅದೆಷ್ಟು ಮಂದಿ ಬಂದು ನಮ್ಮ ದುಃಖದಲ್ಲಿ ಭಾಗಿಯಾಗಿದ್ದರು! ಸಾಂತ್ವನದ ನುಡಿಗಳನ್ನಾಡಿದ್ದರು. ನಮ್ಮ ಬಗ್ಗೆ ಇವರಿಗೆಲ್ಲಾ ಕಾಳಜಿಯಿದೆ. ನಮ್ಮ ನೋವಿನಲ್ಲಿ ಇವರೆಲ್ಲಾ ಭಾಗಿಗಳು ಎಂಬುದೇ ನಮಗೆ ಎಷ್ಟೋ ಸಾಂತ್ವನ ಕೊಡುತ್ತದೆ.
ಅವರು ತಮ್ಮ ಮಗನ ಮೇಲಿನ ಹೆಮ್ಮೆ, ಗೌರವವನ್ನು ಬೇರೆ ಬೇರೆ ರೀತಿಯ ಉತ್ತಮ ಕಾರ್ಯವೈಖರಿಯಿಂದ ತೋರಿಸುತ್ತಿದ್ದಾರೆ. “ಪ್ರಾಂಜಲ್ ಅಮ್ಮ ಅಮ್ಮ” ಎಂಬ ಒಂದು ಯೂಟ್ಯೂಬ್ ಚಾನೆಲ್‌ನಲ್ಲಿ ಭಾರತೀಯ ಸೈನಿಕರ ಅನೇಕ ವಿಷಯಗಳನ್ನು ನಾಗರಿಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಸೈನಿಕರು ಹೇಗೆಲ್ಲಾ ಕಷ್ಟ ಅನುಭವಿಸುತ್ತಿದ್ದಾರೆ ಎಂಬುದು ಜನ ಸಾಮಾನ್ಯರಿಗೆ ಗೊತ್ತಾದಾಗ ಅವರಿಗೆ ಸೈನಿಕರ ಬಗ್ಗೆ ಗೌರವ ಹೆಚ್ಚಾಗುತ್ತದೆ ಎಂಬ ಅವರ ಅನಿಸಿಕೆ ವಾಸ್ತವವೇ ಆಗಿದೆ.
ಆಗೊಬ್ಬರು ಮಹಿಳೆ ಅನುರಾಧ ಅವರಿಗೆ ಒಂದು ಪ್ರಶ್ನೆ ಕೇಳಿದರು. ನಿಮಗೆ ಒಬ್ಬನೇ ಮಗ ಇದ್ದದ್ದು. ಹಾಗಿರುವಾಗ ನೀವು ಅವನನ್ನು ಸೈನಿಕ ವೃತ್ತಿಗೆ ಏಕೆ ಕಳುಹಿಸಿಕೊಟ್ಟರಿ? ಇಡೀ ಸಭೆಯ ಅವರ ಉತ್ತರಕ್ಕಾಗಿ ಕಾಯುತ್ತಿತ್ತು.
“ನಾವು ಪೋಷಕರು ಮಕ್ಕಳ ಮೇಲೆ ನಮ್ಮ ಇಚ್ಛೆಗಳನ್ನು ಹೇರಬಾರದು. ನೀನು ಇಂಜಿನಿಯರೋ, ಡಾಕ್ಟರೋ, ಸರ್ಕಾರದ ಕಚೇರಿಯ ಆಫೀಸರೋ ಆಗಬೇಕೆಂದು ಒತ್ತಡ ಹೇರಬಾರದು. ಅವರ ಬದುಕನ್ನು ಅವರ ಇಚ್ಛೆಯಂತೆ ರೂಪಿಸಿಕೊಳ್ಳುವ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರಿಗಿರಬೇಕು. ಪ್ರಾಂಜಲ್‌ಗೆ ಮೊದಲಿನಿಂದಲೂ ಸೈನ್ಯಕ್ಕೆ ಸೇರುವ ಇಚ್ಛೆ ಇತ್ತು. ದೇಶಕ್ಕಾಗಿ ಸೇವೆ ಸಲ್ಲಿಸುವುದು ಅವನ ಬಯಕೆಯಾಗಿತ್ತು. ಅವನಿಗೆ ಗುರುಗಳಿಂದ ಒಳ್ಳೆಯ ಪ್ರೇರಣೆ ಸಿಕ್ಕಿತ್ತು. ಇದು ನಮಗೆ ಅಭಿಮಾನದ ಹೆಮ್ಮೆಯ ವಿಷಯವೆ ತನ್ನ ಬದುಕನ್ನೇ ದೇಶಕ್ಕಾಗಿ ಸಮರ್ಪಿಸಿಕೊಳ್ಳುವ ಗೌರವದ ವೃತ್ತಿಗಾಗಿ ಅವನು ಹಂಬಲಿಸುತ್ತಿರುವಾಗ ಏಕೆ ಮತ್ತು ಹೇಗೆ ಬೇಡವೆನ್ನುವುದು?”
ಧೀರ ಮಗನ ಆಗಲುವಿಕೆಯ ನೋವಿನಲ್ಲೂ ಹೆಮ್ಮೆಯಿಂದ ಆ ತಾಯಿ ಸಭಿಕರಿಗೆ ಪ್ರಶ್ನೆ ಹಾಕಿದಾಗ ಎಲ್ಲರ ಮೌನವೇ ಉತ್ತರವಾಗಿ ಕಣ್ಣುಗಳು ತುಂಬಿ ಬಂದಿದ್ದವು. ಕೈಗಳು ಚಪ್ಪಾಳೆ ತಟ್ಟುತ್ತಾ ಆ ವೀರಮಾತೆಯ ನಿಲುವನ್ನು ಬೆಂಬಲಿಸಿದ್ದವು.
ಮಗನ ಹುಟ್ಟಿದ ಹಬ್ಬವನ್ನು ಅನುರಾಧ ಹಾಗೂ ವೆಂಕಟೇಶ್ ದಂಪತಿಗಳು ಆಚರಿಸುವ ರೀತಿಯೂ ವಿಶೇಷವೆ! ವಿದ್ಯಾರ್ಥಿಗಳ ಯುವ ಜನತೆಯ ನಾಗರಿಕರ ಸಭೆಯನ್ನು ಸೇರಿಸುತ್ತಾರೆ. ದೇಶದ ಬಗ್ಗೆ, ಸೈನಿಕರ ತ್ಯಾಗ, ಸಮರ್ಪಣೆಯ ಬಗ್ಗೆ ಅರಿವುಂಟು ಮಾಡುವ ಆ ಮೂಲಕ ಎಲ್ಲಾ ಸೈನಿಕರನ್ನೂ ಗೌರವದಿಂದ ನೋಡಲು ಪ್ರೇರೆಪಿಸುವಂತಹ ಮಾತನಾಡುವವರನ್ನು ಕರೆಯುತ್ತಾರೆ.
ಹಿಂದಿನ ಜುಲೈ 18 ರಂದು ಅವರು ಶ್ರೀ ಅಜಿತ್ ಹನುಮಕ್ಕನವರ್ ಅವರನ್ನು ಮಾತನಾಡುವಂತೆ ಕೇಳಿಕೊಂಡಿದ್ದರು. ಶ್ರೀ ಅಜಿತ್ ಅವರ ಮಾತುಗಳು ಯೋಧರ ಕುಟುಂಬದವರ ತ್ಯಾಗ, ದುಃಖ ಎಲ್ಲವನ್ನು ಬಿಂಬಿಸುವಂತಿದ್ದವು. ನಾವು ಯೋಜನೆಯಂತೆ ವೇಳಾಪಟ್ಟಿಯನ್ನು ಹಾಕಿಕೊಂಡು ಸುಂದರ ವಾರಾಂತ್ಯಗಳನ್ನು ಕಳೆಯುತ್ತಿದ್ದೇವೆಂದರೆ ಅದಕ್ಕೆ ಕಾರಣಕರ್ತರು ನಮಗಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ವೀರಯೋಧರು. ನಾವು ಅವರ ಬಲಿದಾನವು ವ್ಯರ್ಥವಾಗದಂತೆ, ಚ್ಯುತಿ ಬರದಂತೆ ಶುದ್ಧ ಚಾರಿತ್ರ್ಯದ ಬಾಳನ್ನು ಬದುಕಬೇಕು. ಎಂದೆಂದೂ ಆ ಯೋಧರಿಗೆ, ಅವರ ಕುಟುಂಬದವರಿಗೆ ನಾವು ಋಣಿಗಳಾಗಿರಬೇಕು ಎಂದು ನಮ್ಮೆಲ್ಲರ ಕರ್ತವ್ಯವನ್ನು ನೆನಪಿಸಿದರು. ಹತ್ತು ದಿನಗಳವರೆಗೆ ಹಿಮ ಬಂಡೆಗಳ ಅಡಿಯಲ್ಲಿ ಉಸಿರಾಡುತ್ತಾ ಕೊನೆಗೂ ಹುತಾತ್ಮರಾದ ಲಾನ್ಸ್ ನಾಯ್ಕ ಹನುಮಂತಪ್ಪ ಕೊಪ್ಪಡ್ ಬಗ್ಗೆ, ಹೇಮಂತ್ ಕರ್ಕರೆ ಬಗ್ಗೆ, ವಿಜಯ ಸಾಲಸ್ಕರ್ ಸಂದೀಪ ಉನ್ನಿಕೃಷ್ಣನ್ ಬಗ್ಗೆ ತಿಳಿಸುತ್ತಾ ಬಲಿದಾನದ ಕುರಿತು ಮಾತನಾಡಿದಾಗ ನೆರೆದಿದ್ದ ಎಲ್ಲರಿಗೂ ಹೃದಯಗಳು ತುಂಬಿ ಬಂದಿದ್ದವು.
ಆ ಸಭೆಯಲ್ಲಿ ಪ್ರಾಂಜಲ್‌ನ ಭಾವಚಿತ್ರದೊಂದಿಗೆ ಇತರ ಹುತಾತ್ಮರು ಕೆಲವರ ಭಾವಚಿತ್ರಕ್ಕೂ ಹಾರಗಳನ್ನು ಹಾಕಿ ಕೃತಜ್ಞತೆ ಸಲ್ಲಿಸಿದ್ದರು. “ಹುತಾತ್ಮ ಯೋಧರ ಕುಟುಂಬದವರ ಕಂಗಳಲ್ಲಿ ಕಣ್ಣಿಟ್ಟು ಮಾತನಾಡುವುದು ಬಹಳ ಪ್ರಯಾಸದ ಕೆಲಸ” ಎಂಬ ಅಜಿತ್ ಹನುಮಕ್ಕನವರ್ ಅವರ ನುಡಿ ಭಾವಪೂರ್ಣವಾಗಿತ್ತು. ವಾಸ್ತವಾಗಿತ್ತು.
ಹುತಾತ್ಮ ವೀರಯೋಧರಿಗೆ ತಾಯಿ ತಂದೆಯರಾಗಿ ಅವರು ಈಗಲೂ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಸಮಾಜದಲ್ಲಿ ದೇಶಭಕ್ತಿಯನ್ನು ಸ್ಪುರಿಸುವ ಕಾರ್ಯಕ್ರಮಗಳು ಸೈನಿಕರ ಬಗ್ಗೆ ಗೌರವ, ಶ್ರದ್ಧೆಯನ್ನು ಬಿತ್ತುವ ಮಾತುಗಳು, ಯುವ ಜನತೆಯಲ್ಲಿ ಸೈನ್ಯಕ್ಕೆ ಸೇರುವಂತಹ ಪ್ರೇರಣಾದಾಯಿ ಸಭೆಗಳು ಇವೆಲ್ಲವುಗಳನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತಿವೆ.
ಇಂತಹ ಪೋಷಕರಿರುವುದರಿಂದಲೇ ಅಂತಹ ವೀರಯೋಧರು ನಿರ್ಮಾಣವಾಗುವುದು ತಾನೇ! ಸತ್ಪಜೆಯನ್ನಾಗಿ ಮಕ್ಕಳನ್ನು ರೂಪಿಸುವ ತಾಯ್ತಂದೆಯಿಂದಲೇ ದೇಶದ ಉಳಿವು, ಉನ್ನತಿ ಸಾಧ್ಯ!
ಸ್ವತಃ ಕವಯಿತ್ರಿಯಾದ ಕ್ಯಾಪ್ಟನ್ ಪ್ರಾಂಜಲ್‌ನ ತಾಯಿ ಅನುರಾಧ ಅವರ ಕವನವಿದು.
'ಕ್ಯಾಪ್ಟನ್ ಪ್ರಾಂಜಲ್‌ಗೆ ಶೌರ್ಯಚಕ್ರದ ಗರಿ... ನಮ್ಮ ಬಾಳ ಬೆಳಗುತ್ತಿತ್ತು ನಿನ್ನ ಕಣ್ಣ ಹೊಳಪು ನಿನ್ನ ನೆನಪೆ ನಮ್ಮ ಬದುಕನ್ನು ಬೆಳಗಬೇಕು ಧ್ವಜವ ಹೊದ್ದು ಬಂದೆ ಮಗನೆ, ಮನೆಗೆ ನೀನಂದು ದುಃಖ-ಹೆಮ್ಮೆ ಜೋಡಿಯಾಗಿ ಇಲ್ಲೇ ಇಹವು ಇಂದೂ ನೆತ್ತಿ ಎತ್ತಿ ನಡೆಯುತಿಹೆವು ನಿನ್ನ ಹೆಸರು ಹೊತ್ತು ಭರತಮಾತೆ ಹರಸುತಿಹಳು ನಿನ್ನನಿಂದು ಖುದ್ದು ಹೆಮ್ಮೆಯೊಂದೆ ಉಕ್ಕುತ್ತಿದ್ದರೆಷ್ಟು ಚೆನ್ನವಿತ್ತು ಕರುಳಕುಡಿಯ ಕಳಿಸಿಕೊಡುವ ಭಂಗ ಬೇಡವಿತ್ತು
ಶೌರ್ಯಚಕ್ರವಿದೋ ಮಗನೆ, ನಿನ್ನ ಭುಜದ ಸೊತ್ತೊ ಅದರ ಸವಿಯ ಸವಿಯೆ ನೀನು ಇಲ್ಲಿರಬೇಕಿತ್ತು ಕಡಲಿನಲೆಯ ನಿರಂತರತೆ ನಿನ್ನ ನೆನಪುಗಳಿಗೆ ನಗಿಸುತೊಮ್ಮೆ ಅಳಿಸುತೊಮ್ಮೆ ಕೈಗೆ ಸಿಗದೆ ಇರುವೆ