Logo

VHP PUBLICATIONS

Hindu Vani


expand_more

ಆರ್ ಎಸ್ ಎಸ್ 100

ಆರ್ ಎಸ್ ಎಸ್ 100

ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾ

ಬೆಂಗಳೂರಿನಲ್ಲಿ 2025ರ ಮಾರ್ಚ್ 21ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರು ದಿನಗಳ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ ನಡಾವಳಿಗಳನ್ನು ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಪತ್ರಿಕಾಗೋಷ್ಠಿಯ ಸಾರಾಂಶ: ಅಖಿಲ ಭಾರತೀಯ ಪ್ರತಿನಿಧಿ ಸಭಾದ ಉದ್ಘಾಟನಾ ದಿನದಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್ ಮಾತನಾಡಿದರು. ಒಟ್ಟು 1482 ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.


ಗಣ್ಯರಿಗೆ ಶ್ರದ್ಧಾಂಜಲಿ ಸಂತಾಪ

ಪ್ರತಿವರ್ಷ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ರಾಷ್ಟ್ರಕ್ಕೆ ಮತ್ತು ಸಮಾಜಕ್ಕೆ ಕೊಡುಗೆಯನ್ನು ನೀಡಿ ನಮ್ಮನ್ನಗಲಿದ ನಾಡಿನ ಪ್ರಮುಖರಿಗೆ, ಆರೆಸ್ಸೆಸ್ ಹಿರಿಯ ಕಾರ್ಯಕರ್ತರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಗುತ್ತದೆ.

ಎಲ್ಲರೊಂದಿಗೆ ಕರ್ನಾಟಕದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಪರಿಸರ ಪ್ರೇಮಿ ತುಳಸಿ ಗೌಡ, ಲೇಖಕ ನಾ ಡಿಸೋಜಾ (ನಾರ್ಬಟ್್ರ ಡಿಸೋಜಾ), ಚಲನಚಿತ್ರ ಮತ್ತು ದೂರದರ್ಶನ ನಟ ಸರಿಗಮ ವಿಜಿ, ಶಿಕ್ಷಣ ತಜ್ಞ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ದೊರೆಸ್ವಾಮಿ ನಾಯ್ತು, ವನವಾಸಿ ಸಂಗೀತದ ಸಂರಕ್ಷಣೆಗಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಸುಕ್ರಿ ಬೊಮ್ಮಗೌಡ, ವಿಶ್ವ ಹಿಂದೂ ಪರಿಷತ್ ನ ಜೇಷ್ಠ ಕಾರ್ಯಕರ್ತ ಬಿ ಎನ್ ಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘಕಾರ್ಯ: ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಹೆಚ್ಚು ಸಮಯ ಸಂಘಕಾರ್ಯದ ವಿಮರ್ಶೆ ಹಾಗೂ ಯೋಜನೆಗಳಿಗೆ ಮೀಸಲಿಡಲಾಗುತ್ತದೆ. ಈ ವರ್ಷ ಸಂಘ 100ನೇ ವರ್ಷವನ್ನು ಆಚರಿಸುತ್ತಿದ್ದು ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸಂಘಕಾರ್ಯದ ಸಾಮಾಜಿಕ ಪ್ರಭಾವ ಮತ್ತು ಸಮಾಜದಲ್ಲಿ ತರಲಾಗುತ್ತಿರುವ ಬದಲಾವಣೆಗಳ ಕುರಿತು ಚರ್ಚಿಸಲಾಗುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯ ರಾಷ್ಟ್ರೀಯ ದತ್ತಾಂಶದ ಕುರಿತು ತಿಳಿಸಿದ ಸಹಸರಕಾರ್ಯವಾಹರು, ಒಟ್ಟು 51,570 ಸ್ಥಾನಗಳಲ್ಲಿ 83,129 ಶಾಖೆಗಳು ನಡೆಯುತ್ತಿದ್ದು ಕಳೆದ ವರ್ಷಕ್ಕಿಂತ 9483 ಶಾಖೆಗಳು ಹೆಚ್ಚಾಗಿವೆ. ವಾರಕ್ಕೊಮ್ಮೆ ನಡೆಯುವ ಮಿಲನ್ ಸಂಖ್ಯೆ ಕಳೆದ ಬಾರಿಗಿಂತ 4430 ಹೆಚ್ಚಾಗಿದ್ದು, ಪ್ರಸ್ತುತ ದೇಶವ್ಯಾಪಿ 32147 ಮಿಲನ್ ಗಳು ಜರುಗುತ್ತಿವೆ. ತಿಂಗಳಿಗೊಮ್ಮೆ ನಡೆಯುವ ಮಂಡಲಿಗಳು ಒಟ್ಟು 12097 ಇವೆ. ಒಟ್ಟು 1,27,367 ಶಾಖೆ, ಮಿಲನ್ ಮತ್ತು ಮಂಡಲಿಗಳು ನಡೆಯುತ್ತಿವೆ.

ಸಂಘ ತನ್ನ ಶತಾಬ್ಬಿ ವರ್ಷದಲ್ಲಿ ಕಾರ್ಯವಿಸ್ತಾರದ ದೃಷ್ಟಿಯಿಂದ ಗ್ರಾಮೀಣ ಮಂಡಲಗಳನ್ನು ಕೇಂದ್ರೀಕರಿಸಲಿದೆ. ಸಂಘದ ಆಡಳಿತಾತ್ಮಕ ವ್ಯವಸ್ಥೆಯ ಪ್ರಕಾರ 58,981 ಗ್ರಾಮೀಣ ಮಂಡಲಗಳಿದ್ದು ಅವುಗಳಲ್ಲಿ 30,717 ಮಂಡಲಗಳಲ್ಲಿ ಶಾಖೆ ನಡೆಯುತ್ತಿದೆ. 9,200 ಮಂಡಲಗಳಲ್ಲಿ ವಾರದ ಮಿಲನ್ ಗಳು ನಡೆಯುತ್ತಿವೆ. ಒಟ್ಟು 3050 ಸಂಖ್ಯೆ ಹೆಚ್ಚಾಗಿದ್ದು ಒಟ್ಟು 39,917 ಶಾಖೆ ಮತ್ತು ಮಂಡಲಗಳು ನಡೆಯುತ್ತಿವೆ. ಮಂಡಲಗಳಲ್ಲಿ ಶೇ.67ರಷ್ಟು ಸಂಘಕಾರ್ಯ ವೃದ್ಧಿಯಾಗಿದೆ.

ಕಳೆದ ವರ್ಷ ಸರಸಂಘಚಾಲಕರು ಸಂಘದ ಕಾರ್ಯವಿಸ್ತಾರಕ್ಕಾಗಿ ಸಂಪೂರ್ಣ ಎರಡು ವರ್ಷಗಳ ಕಾಲ ಸಮಯ ಕೊಡಬಲ್ಲ ಕಾರ್ಯಕರ್ತರನ್ನು ಆಹ್ವಾನಿಸಿದ್ದರು. ಇದರಿಂದಾಗಿ 2,453 ಸ್ವಯಂಸೇವಕರು ಶತಾಬಿ ವಿಸ್ತಾರಕರಾಗಿ ತಮ್ಮ ಮನೆಯನ್ನು ಬಿಟ್ಟು ಸಂಘಕಾರ್ಯಕ್ಕಾಗಿ ಬದ್ಧರಾಗಿ ಕಾರ್ಯನಿರ್ವಹಿಸಿದ್ದರು.

ಸಂಘಕ್ಕೆ ಸೇರುವ ಯುವಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಯುವಕರು, ವಿಶೇಷವಾಗಿ 14-25 ವರ್ಷ ವಯಸ್ಸಿನವರು ಸ್ವಯಂಸೇವಕರಾಗಿ ಆರ್. ಎಸ್.ಎಸ್. ಗೆ ಸೇರುತ್ತಾರೆ. ಈ ವರ್ಷ ದೇಶದಾದ್ಯಂತ ಒಟ್ಟು 4,415 ಪ್ರಾರಂಭಿಕ ಶಿಕ್ಷಾ ವರ್ಗಗಳು (ಆರಂಭಿಕ ತರಬೇತಿ ಶಿಬಿರ) ನಡೆದವು. 2,22,962 ಮಂದಿ ಈ ವರ್ಗಗಳಿಗೆ ಹಾಜರಾಗಿದ್ದು ಅವರಲ್ಲಿ 1,63,000 ಮಂದಿ 14-25ರ ವಯೋಮಾನದವರು. 20,000 ಕ್ಕೂ ಹೆಚ್ಚು ಮಂದಿ 40 ಕ್ಕಿಂತ ಹೆಚ್ಚು ವಯಸ್ಸಿನವರು.

ಪ್ರತಿ ವರ್ಷ ಹೊಸ ವಿದ್ಯಾರ್ಥಿಗಳು ಮತ್ತು ಯುವಕರು ಸೇರ್ಪಡೆಯಾಗುತ್ತಿದ್ದಾರೆ. JOIN RSS ಮೂಲಕ ಆರ್.ಎಸ್.ಎಸ್.ಗೆ ನಾವು ಅವಕಾಶವನ್ನು ಕಲ್ಪಿಸಲಾಗಿದೆ. 2012 ರಿಂದ, ವೆಬ್‌ಸೈಟ್ ಮೂಲಕ 12,72,453 ಕ್ಕೂ ಹೆಚ್ಚು ಜನರು ಆರ್.ಎಸ್.ಎಸ್.ಗೆ ಸೇರಲು ಆಸಕ್ತಿ ತೋರಿಸಿದ್ದಾರೆ. ಅವರಲ್ಲಿ 46,000 ಕ್ಕೂ ಹೆಚ್ಚು ಮಹಿಳೆಯರು. ಇಂತಹ ಸಾವಿರಾರು ಮಹಿಳಾ ಕಾರ್ಯಕರ್ತರು ವಿವಿಧ ಕ್ಷೇತ್ರಗಳಲ್ಲಿ ಸಂಘದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವೆಬ್‌ಸೈಟ್ ಮೂಲಕ ಆರ್.ಎಸ್.ಎಸ್.ಗೆ ಸೇರಲು ಆಸಕ್ತಿ ವ್ಯಕ್ತಪಡಿಸಿದ ಹಲವರು ಅರುಣಾಚಲ ಪ್ರದೇಶ, ಮಣಿಪುರ ಸೇರಿದಂತೆ ಭಾರತದ ಈಶಾನ್ಯ ಪ್ರದೇಶದವರು ಇದ್ದಾರೆ. ಈ ಅಂಕಿ ಅಂಶಗಳ ಪ್ರಮುಖ ಅಂಶವೆಂದರೆ ಆರ್.ಎಸ್.ಎಸ್. ಯುವ ಸಂಘಟನೆಯಾಗಿದ್ದು, ಅದರಲ್ಲಿ ಯುವಕರು ಹೆಚ್ಚಿದ್ದು ಭಾರತದ ಹೊರಗಿನವರೂ ಸೇರಿರುವರು.