Hindu Vani
Index
ಸಂಪಾದಕೀಯ
ಸಂವಿಧಾನದ ವಿಧಾನ ಅರಿಯದ ಅಹಂಕಾರಿಗಳು
'ಭಾರತದ ಪ್ರಜೆಗಳಾದ ನಾವು' ಎಂದು ತನ್ನನ್ನು ಸಂಬೋಧಿಸಿಕೊಂಡ ಸಂವಿಧಾನ ಸಭೆಯು 26.11.1949ರಂದು ತಾನು ರಚಿಸಿದ ಭಾರತದ ಸಂವಿಧಾನವನ್ನು ತನಗೆ ತಾನು ಆತ್ಮಾರ್ಪಿತಗೊಳಿಸಿಕೊಂಡಿತು. ಈಚೆಗೆ ಇಂತಹ ಸಂವಿಧಾನದ ಮೊದಲ ಭಾಗದ ಮೊದಲ ಈ ಮೂರು ಶಬ್ದಗಳಿಗೆ ಅಪಚಾರಗೊಳಿಸಿದ ಘಟನೆಯು ಸಂಸತ್ತಿನಲ್ಲೂ ಮತ್ತು ಸಾರ್ವಜನಿಕ ವಲಯಗಳಲ್ಲೂ ನಡೆಯಿತು.
ಮುಸ್ಲಿಮರಿಗೆ ಸರಕಾರಿ ಗುತ್ತಿಗೆಯಲ್ಲಿ ಮೀಸಲು ನೀಡುವ ಔದಾರ್ಯವನ್ನು ತೋರಿದ ಡಿ.ಕೆ ಶಿವಕುಮಾರ್ 'ನಾವೊಂದು ರಾಷ್ಟ್ರೀಯ ಪಕ್ಷ. ನಾವು ಸಂವಿಧಾನವನ್ನು ತಂದವರು. ಅದರ ಮಹತ್ವವೇನು ಎನ್ನುವುದು ಎಲ್ಲರಿಗಿಂತ ನಮಗೆ ಹೆಚ್ಚು ಗೊತ್ತು' ಎಂದರು. ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನಲ್ಲಿ ಮಾತನಾಡುತ್ತ 'ನಾವು ಭಾರತ್ ಜೋಡೋ ಕಾರ್ಯಕ್ರಮವನ್ನು ನಡೆಸಿದವರು. ದೇಶಕ್ಕೆ ಸಂವಿಧಾನವನ್ನು ತಂದವರು' ಎಂದು ಹೇಳಿ ಸಂವಿಧಾನ ಸಭೆಯೇ ಸ್ಪಷ್ಟವಾಗಿ ಉಚ್ಚರಿಸಿದ ಸಂವಿಧಾನದ ಕರ್ತಗಳೆಂದರೆ ಈ ದೇಶದ ಪ್ರಜೆಗಳು ಎನ್ನುವ ಮಾತುಗಳನ್ನು ಅಲ್ಲಗಳೆದು ಸಂವಿಧಾನದ ಪ್ರಸ್ತಾವನೆಯ ಮೊದಲ ಭಾಗದ ಮೊದಲ ಶಬ್ದಗಳನ್ನೇ ನಿರಾಕರಿಸಿದರು.
ಈ ವರೆಗೆ ಸ್ವಾತಂತ್ರ್ಯವನ್ನು ತರಿಸಿಕೊಟ್ಟವರು ನಾವೇ ಎನ್ನುತ್ತಿದ್ದ ಕಾಂಗ್ರೆಸ್ ಸಾವಿರಾರು ಜ್ಞಾತಅವಿಜ್ಞಾತ ಕ್ರಾಂತಿಕಾರಿಗಳಿಗೆ ಅವಮಾನ ಮಾಡುತ್ತಿತ್ತು. ಈಗ ಸಂವಿಧಾನವನ್ನು ರಚಿಸಿದವರೂ ನಾವೆನ್ನುತ್ತಾ ಸಂವಿಧಾನ ಸಭೆಗೂ ಅಧ್ಯಕ್ಷರಾಗಿದ್ದ ಡಾ|| ಬಾಬಾಸಾಹೇಬ ಅಂಬೇಡ್ಕರ್‌ರವರ ಕೊಡುಗೆಯನ್ನು ಅಲ್ಲಗಳೆಯುತ್ತಿದ್ದು ಈಗ ಅವರ ಸಾಧನೆಯನ್ನು ತನ್ನದೆಂದು ಹೇಳಲು ಪ್ರಾರಂಭಿಸಿತು.
ಪ್ರಸ್ತಾವನೆಯ ಮೊದಲ ಶಬ್ದಗಳನ್ನು ಬಿಡಿ, ಸಂವಿಧಾನವನ್ನೇ ತಿರಸ್ಕಾರದಿಂದ ಕಂಡವರಲ್ಲಿ ಮೊದಲಿಗರು ಜವಹರಲಾಲ್ ನೆಹರೂ. ಸಂವಿಧಾನವನ್ನು ಅಂಗೀಕರಿಸಿ ಇನ್ನೂ ವರ್ಷವೊಂದು ಕಳೆಯುತ್ತಿದ್ದಂತೆ; ನೆಹರೂ ಪಾಲಿಗೆ ಅದು ಹಳಸಿ ಹೋಗಿದ್ದಿತು. ಅದರ ಕುರಿತು ಮಾತನಾಡಿದ ನೆಹರೂ “ಬದಲಾಗದ ಸಂವಿಧಾನವು ಎಷ್ಟು ಚೆನ್ನಾಗಿದ್ದರೇನು? ಅದೀಗ ಉಪಯೋಗವಿಲ್ಲವಾಗಿದೆ. ವಾರ್ಧಕ್ಯದಲ್ಲಿದೆ. ಮುಕ್ತಾಯವನ್ನು ಎದುರು ಕಾಣುತ್ತಿದೆ. ಜೀವಂತ ಸಂವಿಧಾನವಾಗಿದ್ದರೆ ಅದು ಬೆಳೆಯಬೇಕು. ಅದಕ್ಕೆ ಹೊಂದಾಣಿಕೆಯ ಸಾಮರ್ಥ್ಯವಿರಬೇಕು. ಎಲ್ಲಕ್ಕೂ ಒಗ್ಗುವ ಗುಣವಿರಬೇಕು” ಎಂದಿದ್ದರು. ಈ ಮಾತು ಕೂಡಾ ಡಾ|| ಅಂಬೇಡ್ಕರರು ದೂರದರ್ಶಿತ್ವವಿಲ್ಲದ ನಾಯಕರು ಎಂದು ಅವರನ್ನೇ ಹೀಗಳೆಯಲು ಉದ್ದೇಶಿಸಿದ ಮಾತು.
ವಿಚಾರಣೆಯಿಲ್ಲದೆ ಬಂಧನದಲ್ಲಿದ್ದ 28 ರಾಜಕೀಯ ಕೈದಿಗಳನ್ನು ಆ ದಿನಗಳಲ್ಲಿ ಬಿಡುಗಡೆಗೊಳಿಸಿದ ಬೊಂಬಾಯಿ ಉಚ್ಚ ನ್ಯಾಯಲಯದ ಮೇಲೆ ನೆಹರೂ ಉರಿದು ಬಿದ್ದಿದ್ದರು. 'ಜಗತ್ತಿನಲ್ಲಿ ಎಲ್ಲಾ ಸ್ವಾತಂತ್ರ್ಯಗಳಿಗೂ ಮಿತಿ ಇದೆ. ಇಂತಹ ಸ್ವಾತಂತ್ರ್ಯವನ್ನು ಉದಾರವಾಗಿ ನೀಡಬೇಕೆನ್ನುವ ಸಂವಿಧಾನವು ಕಾನೂನಿನ ಆಡಳಿತಕ್ಕೆ ಅಡ್ಡಬಂದಿದೆ.ಅದಕ್ಕೊಂದು ಪರಿಹಾರದ ಅಗತ್ಯವಿದೆ ಎಂದ ನೆಹರೂರವರು ನಮ್ಮ ಸಂವಿಧಾನಕ್ಕೆ ವ್ಯಕ್ತಿಸ್ವಾತಂತ್ರ್ಯವನ್ನು ಅಲ್ಲಗಳೆಯುವ ಮೊದಲ ತಿದ್ದುಪಡಿಯನ್ನು ತಂದರು.ಸಂವಿಧಾನದ ರಕ್ಷಣೆಯೆನ್ನುತ್ತಾ, ಸಂವಿಧಾನದ ಪ್ರತಿಯೆನ್ನುತ್ತಾ ಕೆಂಪುಹೊದಿಕೆಯ ಕೈಪಿಡಿಯೊಂದನ್ನು ಪ್ರದರ್ಶಿಸುವ ವಿರೋಧ ವಿರೋಧ ಪಕ್ಷದ ನಾಯಕರಾದ ರಾಹುಲ ಗಾಂಧಿಯವರು. ಸಂವಿಧಾನವನ್ನು ತಿದ್ದಿ ತೀಡಿ ಕರಾಳ ತುರ್ತುಪರಿಸ್ಥಿತಿಯನ್ನು ತಂದು ಭಾರತದ ಸರ್ವಾಧಿಕಾರಿಯಾಗಿ ಮೆರೆದ ಅವರ ಅಜ್ಜಿ ಇಂದಿರಾಗಾಂಧಿಯವರನ್ನು ಸ್ಮರಿಸಿಕೊಳ್ಳಬೇಕಾಗಿದೆ. ನ್ಯಾಯಾಲಯಗಳು ಸಂವಿಧಾನದ ತಿದ್ದು ಪಡಿಯನ್ನು ಪ್ರಶ್ನಿಸುವಂತಿಲ್ಲ ಎನ್ನುವ ಮಿತಿಯಿಲ್ಲದ ಅಧಿಕಾರವನ್ನು ಅವರು ತಾವು ಮಾಡಿದ 42ನೇ ತಿದ್ದುಪಡಿಯಿಂದ ಪಡೆದುಕೊಂಡರು. 39ನೇ ತಿದ್ದುಪಡಿಯಿಂದ ಪ್ರಧಾನಿಯ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಪ್ರಶ್ನಿಸುವಂತಿಲ್ಲ ಎನ್ನುವ ರಾಕ್ಷಸವರವನ್ನು ಪಡೆದುಕೊಂಡಿದ್ದರು.
ಇಂತಹ ಅಂದಾದುಂದಿ ರಾಜಕೀಯ ಸ್ವಾರ್ಥವನ್ನು ವಿರೋಧಿಸುವ ತೀರ್ಪುನೀಡಿದ ನ್ಯಾಯಾಧೀಶರಾದ ಹೆಚ್. ಆರ್. ಖನ್ನಾರವರ ಹಿರಿತನವನ್ನು ಅಲಕ್ಷಿಸಿ ಸೇವಾವಧಿಯಲ್ಲಿ ಅವರಿಗಿಂತಲೂ ಕಿರಿಯರನ್ನು ಮುಖ್ಯ ನ್ಯಾಯಾಧೀಶರನ್ನಾಗಿಸಿದರು. ತುರ್ತುಸ್ಥಿತಿಯ ಆ ಕಾಲದಲ್ಲಿ ಸಾವಿರಾರು ಹೋರಾಟಗಾರರು ಸೆರೆಮನೆಯಲ್ಲಿ ಇರುವರಲ್ಲವೇ ಎಂದು ಕೇಳಿದ ವಿದೇಶಿ ಪತ್ರಕರ್ತರಿಗೆ 'ಇಲ್ಲ ಹಾಗೇನಿಲ್ಲ' ಎಂದರು. ಎಷ್ಟು ಜನರು ಬಂಧನದಲ್ಲಿರುವರು ಎಂದು ಹೇಳಿಎಂದು ಮತ್ತೊಮ್ಮೆ ಕೇಳಿದಾಗ 'ವೆರಿ ಸ್ಕೂ' ಎಂದು ಹಸಿಸುಳ್ಳನ್ನು ಹೇಳಿದರು.
ಈಗ ಸಂವಿಧಾನವನ್ನೇ ಅದರ ಆಶಯಗಳನ್ನೇ ಬದಲಿಸುವ ಪ್ರಯತ್ನವೊಂದು ಮತ್ತೆ ಪ್ರಾರಂಭಗೊಂಡಿದೆ. ಸರಕಾರವು ನೀಡುವ ಗುತ್ತಿಗೆಯಲ್ಲಿ ಶೇ. 4ರಷ್ಟನ್ನು ಮುಸ್ಲಿಮರಿಗೆ ಮೀಸಲಿಡುವ ನಿರ್ಧಾರವನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ. ಹಲವು ಉಚ್ಚನ್ಯಾಯಾಲಯಗಳು ಧರ್ಮಾಧಾರಿತ ಮೀಸಲು ನಿರ್ಧಾರಗಳು ಸಂವಿಧಾನಿಕವಲ್ಲವೆಂದು ತೀರ್ಪನ್ನು ನೀಡಿವೆ. ಆಂಧ್ರಪ್ರದೇಶ ಸರ್ಕಾರವು ಮುಸ್ಲಿಮರಿಗೆ 4.5 ಶೇಕಡಾ ಮೀಸಲಿಡುವ ನಿರ್ಧಾರವನ್ನು ಕೈಗೊಂಡಿತ್ತು. ಇದು ಸರ್ವೋಚ್ಚ ನ್ಯಾಯಾಲಯದ ಅಂಗಳವನ್ನೂ ತಲುಪಿತು. ನ್ಯಾಯಾಧೀಶರರಾದ ಕೆ. ಎಸ್. ರಾಧಾಕೃಷ್ಣನ್ ಮತ್ತು ಮುಖ್ಯ ನ್ಯಾಯಾಧೀಶರಾದ ಜೆ. ಎಸ್. ಖೇಹರ್‌ರವರ ಪೀಠವು ಆ ನಿರ್ಧಾರವನ್ನು ತಳ್ಳಿ ಹಾಕಿತು. ಅಷ್ಟೇ ಅಲ್ಲದೆ ಅಂತಹ ಸೂಕ್ಷ್ಮವೂ ಸಂಕೀರ್ಣವೂ ಆದ ಕಾನೂನು ವಿಚಾರದಲ್ಲಿ ಸರ್ಕಾರವು ನಡೆದುಕೊಂಡ ರೀತಿಯನ್ನು ಕಟುವಾಗಿ ಟೀಕಿಸಿತು. ಪಶ್ಚಿಮ ಬಂಗಾಳ ಸರ್ಕಾರವು ಈ ವಿಚಾರದಲ್ಲಿ ಸುಳ್ಳು ಮಾಹಿತಿಯನ್ನು ನೀಡಿದುದನ್ನು ಇದೇ ಕಾಲದಲ್ಲಿ ನ್ಯಾಯಾಲಯವು ಟೀಕಿಸಿದ್ದಿತು.
ಧರ್ಮಾಧಾರಿತ ಮೀಸಲು ಬೇಕೇ ಎನ್ನುವುದನ್ನು ಸಂವಿಧಾನ ರಚನಾ ಕಾಲದಲ್ಲಿ ಕೂಲಂಕಷವಾಗಿ ನಿರ್ಧರಿಸಲೆಂದು ಸಂವಿಧಾನ ರಚನಾ ಸಮಿತಿಯು ಸಲಹಾ ಸಮಿತಿಯೊಂದನ್ನು ರಚಿಸಿತ್ತು. ಅದರ ಅಧ್ಯಕ್ಷರಾಗಿ ಎಸ್. ಸಿ. ಮುಖರ್ಜಿ ಎನ್ನುವ ಅಲ್ಪಸಂಖ್ಯಾತ ಕ್ರೈಸ್ತರೊಬ್ಬರನ್ನು ನೇಮಿಸಿತು. ಸಮಿತಿಯಲ್ಲಿ ಅವರಲ್ಲದೆ ಅಬುಲ್ ಕಲಾಂ ಆಜಾದ್, ಜವಹರಲಾಲ ನೆಹರೂ ಮತ್ತು ಸರ್ದಾರ್ ಪಟೇಲರೂ ಇದ್ದರು. ಐದು ದಿನಗಳ ಚರ್ಚೆಯ ನಂತರ ಸಮಿತಿಯು ಅಂತಹ ಮೀಸಲು ನೀತಿಯು ಅಗತ್ಯವಿಲ್ಲವೆಂದು ಹೇಳಿತು. ಈ ವಿಚಾರವನ್ನು ಪ್ರಕಟಿಸಿದ ಸರ್ದಾರ ಪಟೇಲರು ಸಮಿತಿಯ ನಿರ್ಧಾರವು ಸರ್ವಸಮ್ಮತವಾಗಿದ್ದಿತು' ಎಂದಿದ್ದರು.
ಡಿ.ಕೆ. ಶಿವಕುಮಾರ್ ರಾಜ್ಯದ ಉಪಮುಖ್ಯಮಂತ್ರಿ, ಅವರಿಗೆ ಇಂತಹ ಉಪಕ್ರಮಗಳ ಪರಿಣಾಮಗಳ ಅರಿವಿದೆ. ಕರ್ನಾಟಕ ಸರ್ಕಾರದ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ4 ರಷ್ಟನ್ನು ಮುಸ್ಲಿಮರಿಗೆ ಕಾದಿಡುವ ವಿಚಾರವನ್ನು ವಿವರಿಸುತ್ತಾ 'ಇದು ನ್ಯಾಯಾಲಯದ ತೀರ್ಪಿನ ಪರೀಕ್ಷೆಗೆ ಒಳಗಾಗಬಹುದು ಎಂದು ಹೇಳಿದರು. ಮತ್ತೆ ಮುಂದುವರಿಸಿ ಹೇಳಿದ ಅವರು ಅದು ಉತ್ತಮ ದಿನಗಳನ್ನು ತರಬಹುದು. ಹಾಗೆ ಆಗದಿದ್ದರೆ ಅದನ್ನು ಅನುಸರಿಸಿ ಸಂವಿಧಾನದ ತಿದ್ದುಪಡಿಯನ್ನೂ ಬೇಕಿದ್ದಲ್ಲಿ ಮಾಡುವೆವು' ಎನ್ನುವ ಅಹಂಕಾರದ ಮಾತನ್ನೂ ಆಡಿದರು.
ಸಂವಿಧಾನದ ಆಶಯಗಳನ್ನೂ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ನಡೆಯುವ ಕಾಂಗ್ರೆಸ್ ಮಂತ್ರಿಯ ದುರಹಂಕಾರವನ್ನು ವಿರೋಧಿಸಿದ ಸಂಸತ್ತಿನ ಉಭಯ ಸದನಗಳನ್ನು ಎರಡೆರಡು ಬಾರಿ ಮುಂದೂಡಬೇಕಾಯಿತು. ವಿರೋಧಿಸಿದ ರಾಜ್ಯದ ಎಲ್ಲಾ ಕಡೆಗಳಲ್ಲೂ ವಿರೋಧ ಪ್ರದರ್ಶನಗಳೂ ಪ್ರತಿಭಟನೆಗಳೂ ನಡೆಯುತ್ತಲೇ ಇವೆ. ನ್ಯಾಯಾಲಯಗಳ ಎಚ್ಚರಗಣ್ಣುಗಳನ್ನು ಮೀರಿ ನಡೆಯುವ ದುರಂಹಕಾರವನ್ನು ಮುರಿಯುವ ಬೆಳವಣಿಗೆಗಳು ನಡೆಯಲಿವೆ. ಮುಸ್ಲಿಂ ಓಲೈಕೆಯ ತರಹವಾರಿ ಪ್ರದರ್ಶನಗಳಿಗೆ ಅಂಕುಶ ಬೀಳಲಿದೆ.
ಶ್ರದ್ದಾನಮನ
ಧರ್ಮನಾರಾಯಣ ಶರ್ಮಾ ವಿಶ್ವ ಹಿಂದು ಪರಿಷದ್ ಕೇಂದ್ರಿಯ ಕಾರ್ಯದರ್ಶಿಗಳು, 21.03.2025ರಂದು ದೆಹಲಿಯಲ್ಲಿ ನಿಧನ ಹೊಂದಿದರು. 85 ವರ್ಷ ವಯಸ್ಸಿನ ಸಾರ್ಥಕ ಜೀವನವನ್ನು ನಡೆಸಿದ ಹಿರಿಯರು 65 ವರ್ಷಗಳ ಕಾಲ ದೇಶ ಸೇವೆಯ ಪ್ರಚಾರಕ ಜೀವನವನ್ನು ಬಾಳಿದರು. ರಾಜಾಸ್ಥಾನದ ಉದಯಪುರದಲ್ಲಿ ಜನಿಸಿದ ಶ್ರದ್ಧೆಯ ಶರ್ಮಾರವರು ಜಿಲ್ಲಾ ಪ್ರಚಾರಕರಾಗಿದ್ದು ನಂತರ ವಿಭಾಗ ಪ್ರಚಾರಕರಾದರು. ಕೋಸಲ ಪ್ರಾಂತದ ಪ್ರಾಂತ ಪ್ರಚಾರಕರೂ ಆಗಿದ್ದರು. ಅವರ ನಿಧನದ ವಾರ್ತೆಯು ತಿಳಿಯುತ್ತಿದ್ದಂತೆ ಕರ್ನಾಟಕ ಪ್ರವಾಸದಲ್ಲಿದ್ದ ಧರ್ಮಪ್ರಸಾರ ವಿಭಾಗದ ಸುಧಾಂಶು ಪಟ್ನಾಯಕರರು ದೆಹಲಿಗೆ ಧಾವಿಸಿದರು.
ವಿಶ್ವಹಿಂದು ಪರಿಷತ್ತಿನ ಅಧಿಕಾರಿಗಳಾಗಿ ನಿಯುಕ್ತಿಗೊಂಡ ನಂತರ ಪೂರ್ವಾಂಚಲದ ಹೊಣೆಯನ್ನು ಹೊತ್ತರು. 2009ರಲ್ಲಿ ಧರ್ಮಪ್ರಸಾರ ವಿಭಾಗದ ಗುರುತರ ಜವಬ್ದಾರಿಯು ಅವರ ಪಾಲಿಗೆ ಬಂದಿತು. ಕೇಂದ್ರೀಯ ಕಾರ್ಯದರ್ಶಿಗಳಾದ ಧರ್ಮನಾರಾಯಣ ಶರ್ಮಾರವರು ವಿದ್ವತ್ತು ವಕೃತ್ವ ಮತ್ತು ತಮ್ಮ ಪ್ರಭಾವಿ ಬರೆಹಗಳಿಗಾಗಿ ಪ್ರಸಿದ್ಧರು. ಪರಮಪೂಜ್ಯ ಸರ ಸಂಘಚಾಲಕರು ಅಪೇಕ್ಷೆಪಟ್ಟಂತೆ ಶರ್ಮಾರವರು ಹಿಂದು ಸಂಹಿತೆಯ ಬೃಹತ್ ಸಂಘಟವನ್ನು ಸಂಪಾದಿಸಲು ಪ್ರಾರಂಭಿಸಿದರು. ಉಡುಪಿಯ ಧರ್ಮಸಂಸತ್ ಕಾಲದಲ್ಲಿ ತಂದ ವಿಶೇಷ ಸಂಚಿಕೆ ಪಾಥೇಯದ ಸಂಪಾದಕರಲ್ಲಿ ಅವರೂ ಒಬ್ಬರಾಗಿದ್ದರು. ಅವರ ಹಲವು ಹಿಂದಿ ಕೃತಿಗಳು ವಿದ್ವಾಂಸರ ಅಪಾರ ಮನ್ನಣೆಯನ್ನು ಪಡೆದಿವೆ. ಅವರಿಗೆ ನಮ್ಮ ಶ್ರದ್ಧಾನಮನಗಳನ್ನು ಅರ್ಪಿಸುತ್ತೇವೆ.