Hindu Vani
Index
ಶ್ರದ್ದಾಂಜಲಿ
ಸದಾ ಸೇವಾ ನಿರತ ರಮೇಶ್ ಪರಾಂಡೆ
-ಸುರೇಶ್ ಕುಮಾರ್
ಧಾರವಾಡ ಜಿಲ್ಲೆಯ ಮಿಶ್ರಿಕೋಟೆಯವರಾದ ರಮೇಶ್ ಪರಾಂಡೆಯವರು ತಮ್ಮ ವಿದ್ಯಾಭ್ಯಾಸದ ನಂತರ ಬೆಂಗಳೂರಿನ ಹಿಂದುಸ್ತಾನ ವಿಮಾನ ಕಾರ್ಖಾನೆ (H.A.L) ಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಸದಾ ಪರಹಿತನಿರತರಾಗಿದ್ದ, ಜನ್ಮದಿಂದಲೇ ಸೇವಾ ಸ್ವಭಾವವನ್ನು ಮೂಡಿಸಿಕೊಂಡಿದ್ದ ಅವರು ಸಮಾಜ ಹಿತದ ಸೇವಾ ಕಾರ್ಯಗಳಲ್ಲಿ ಸಹಜವಾಗಿ ತೊಡಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಕರ್ನಾಟಕದ ವಿಶ್ವ ಹಿಂದೂ ಪರಿಷತ್ತಿನಲ್ಲಿ ಅನುಪಮ ಸೇವೆಗೈದವರಲ್ಲಿ ಪ್ರಮುಖರು. ಅವರು ಸಂಘಟನೆಯು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ ಕಷ್ಟಪಟ್ಟು ಸಂಪನ್ಮೂಲಗಳನ್ನು ಒದಗಿಸುತ್ತಿದ್ದವರು.
ಸಮಾಜದಲ್ಲಿನ ಅಪರಿಚಿತರ ಸಂಪರ್ಕವನ್ನು ಮಾಡಿ, ಅವರಿಂದ ಸಂಪನ್ಮೂಲವನ್ನು ಸಂಗ್ರಹಿಸಿ ಕ್ರಮೇಣ ಅವರನ್ನು ಪರಿಷತ್ತಿನ ಹಿತೈಷಿ ಹಾಗೂ ಕಾರ್ಯಕರ್ತರನ್ನಾಗಿ ಮಾಡುತ್ತಿದ್ದುದು ಅವರ ವಿಶೇಷ ಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ. ಒಮ್ಮೆ ವಿಶ್ವ ಹಿಂದೂ ಪರಿಷತ್ತಿನ ಸೇವಾ ವಿಭಾಗದಲ್ಲಿ ಉಚಿತ ಅಂಬುಲೆನ್ಸ್ ಸೇವೆಯ ಆಲೋಚನೆ ಹೊಳೆಯಿತು. ಇದಕ್ಕಾಗಿ ಹಿರಿಯ ಕಾರ್ಯಕರ್ತರಾದ ರಾಮಕೃಷ್ಣರಾವ್, ಬಿ ಎನ್ ಮೂರ್ತಿ ಅವರ ಸೋದರ ಪ್ರಹ್ಲಾದ ಬಾಬು ಈ ಮೂವರು ಒಂದೇ ದಿನದಲ್ಲಿ ದಾನಿಗಳನ್ನು ಸಂಪರ್ಕಿಸಿ ಮರುದಿನವೇ ಧರ್ಮಶ್ರೀ ಮುಂದೆ ಅಂಬುಲೆನ್ಸ್ ತಂದು ನಿಲ್ಲಿಸಿದರು. ಅವರ ಕ್ಷಮತೆಗೆ ಇದೊಂದು ಉದಾಹರಣೆ. ಇಂತಹದ್ದು ಹಲವಾರು. ಒಮ್ಮೆ ಹಿಡಿದ ಕೆಲಸವನ್ನು ಉಡದಂತೆ ಪಟ್ಟು ಬಿಡದೆ ಮಾಡುವ ಸ್ವಭಾವ ಅವರಲ್ಲಿ ಹಾಸು ಹೊಕ್ಕಾಗಿತ್ತು.
ಸಾಮಾನ್ಯವಾಗಿಯೇ ಸರ್ಕಾರದಿಂದ ಸಿಗುವ ಅನುದಾನ ಸಹಾಯಗಳನ್ನು ಪಡೆಯುವುದು ಬಹಳ ಕಷ್ಟಕರವಾದದ್ದು ಎಂಬುದು ಎಲ್ಲರಿಗೂ ತಿಳಿದದ್ದೇ, ಹೀಗಿರುವಾಗ ಇನ್ನು ಹಿಂದು ಸಂಘಟನೆಗಳಿಗೆ? ವಿಶ್ವ ಹಿಂದೂ ಪರಿಷತ್ತಿನ ಪ್ರಕಲ್ಪಗಳಿಗೆ ಇಂತಹ ಕೆಲಸಗಳನ್ನು ಅತ್ಯಂತ ಪರಿಶ್ರಮದಿಂದ ಪಟ್ಟು ಹಿಡಿದು ಕಾರ್ಯಗತ ಮಾಡುತ್ತಿದ್ದ ಅಪರೂಪದ ವ್ಯಕ್ತಿ ಅವರು. ಮಡಿಕೇರಿಯ ಅಶ್ವಿನಿ ಆಸ್ಪತ್ರೆ, ಗಾಣಗಾಪುರದ ಕುಷ್ಠರೋಗಿ ನಿರೋಗಿ ಮಕ್ಕಳ ವಿದ್ಯಾರ್ಥಿ ನಿಲಯ, ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಇವು ಅನುದಾನ ಪಡೆದ ಸಂಸ್ಥೆಗಳಲ್ಲಿ ಉಲ್ಲೇಖನೀಯ. ಕೇವಲ ಪರಿಷತ್ತಿನ ಮಾತ್ರವಲ್ಲ, ಯಾವುದೇ ಸಂಸ್ಥೆಯವರು ಸಹಾಯ ಕೇಳಿದರೂ ಅದನ್ನು ನಮ್ಮದೆಂದೇ ಭಾವಿಸಿ ಕೆಲಸ ಮಾಡುತ್ತಿದ್ದರು. ಅನ್ಯಾಯವನ್ನು ಕಂಡರೆ ಸಿಡಿದೇಳುವ, ಪ್ರತಿಭಟಿಸುವ ಕಠೋರ ಮನೋಭಾವದವರು ಅವರು. ಇದಕ್ಕಾಗಿ ಅವರು ಬಹಳ ಜನರೊಡನೆ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು ಆದರೂ ಕೂಡ ಸತ್ಯದ ದಾರಿಯನ್ನು ಬಿಡದೆ ಅದರಲ್ಲಿಯೇ ನೇರವಾಗಿ ನಡೆದರು. ಅವರು ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಸೇವಾ ಪ್ರಮುಖರಾಗಿ, 'ಹಿಂದುವಾಣಿ' ಪತ್ರಿಕೆಯ ಪ್ರಕಾಶಕರಾಗಿ ಕಾರ್ಯ ನಿರ್ವಹಿಸಿದ್ದರು.
15 ಕಿ.ಮೀ ದೂರದ ಅವರ ಮನೆಯಿಂದ ಧರ್ಮಶ್ರೀಗೆ ಬರಲು 3 ಬಸ್ ಬದಲಾಯಿಸಿ ಕನಿಷ್ಠ ಮೂರು ಗಂಟೆ ಸಮಯ ಹಿಡಿಯುತ್ತಿತ್ತು. ಒಮ್ಮೊಮ್ಮೆ ಕೇವಲ ಅರ್ಧ ಗಂಟೆ ಕೆಲಸಕ್ಕಾಗಿ 6 ತಾಸು ಶ್ರಮ ಪಡುತ್ತಿದ್ದರು. 'ಎಲ್ಲ ಕೆಲಸಗಳನ್ನು ಒಟ್ಟಿಗೆ ಮಾಡಬಹುದಲ್ಲ ಎಂದು ಹೇಳಿದರೆ “ಇಲ್ಲ ಇಲ್ಲ, ಇಂದಿನ ಕೆಲಸ ಇಂದೇ ಆಗಬೇಕು” ಎನ್ನುತ್ತಿದ್ದರು. ಹೀಗೆ ಹಲವಾರು ವರ್ಷಗಳ ಕಾಲ ಬಂದರು. ಕೆಲಸದ ಮುಂದುವರಿಕೆ ಎಂಬುದು ಅವರ ಜಾಯಮಾನದಲ್ಲೇ ಇರಲಿಲ್ಲ. ಹಸಿವು, ವಿಶ್ರಾಂತಿ, ಆಲಸ್ಯಗಳೆಂಬುದು ಅವರಿಗೆ ತಿಳಿದೇ ಇರಲಿಲ್ಲ. ಅವರಲ್ಲಿ 'ಸಂಪರ್ಕ' ಎಂಬ ಅಮೃತವಿತ್ತು. ಯಾರನ್ನು, ಎಲ್ಲಿ ಬೇಕಾದರೂ ಮಾತನಾಡಿಸುವ ಮೊಂಡು ಧೈರ್ಯವೇ ಅವರ ಮುಖ್ಯ ಬಂಡವಾಳವಾಗಿತ್ತು. ಅವರಿಗೆ ಮುಖ್ಯವಾಗಿ ಪರಿಷತ್ತಿನ ಕೆಲಸವಾಗಬೇಕಷ್ಟೇ, ಉಳಿದೆಲ್ಲವೂ ಗೌಣ. ಬಾಬುರಾವ್ ದೇಸಾಯಿ, ವೈ.ಕೆ. ರಾಘವೇಂದ್ರರಾವ್ ಇತ್ಯಾದಿ ಹಿರಿಯರು ಹೇಳಿದ ಸೂಚನೆಗಳನ್ನು ಅತ್ಯಂತ ವಿಧೇಯತೆಯಿಂದ ಪಾಲಿಸುತ್ತಿದ್ದರು. ಎಂದೂ ತಪ್ಪುತ್ತಿರಲಿಲ್ಲ. ಯಾವ ಕೆಲಸವನ್ನೂ ನಿರಾಕರಣೆ ಮಾಡುತ್ತಿರಲಿಲ್ಲ. ಸ್ವರ್ಗಿಯ ಕೇಶವ ಹೆಗಡೆ, ಭಾಸ್ಕರ್ ಬಾಪಟ್, ರಾಮಾಯಣದ ಸುರೇಶ್ ಕುಮಾರ್, ಆನಂದ ಕುಮಾರ್, ವೆಂಕಟೇಶ್ ಭಟ್, ರಾಮಕೃಷ್ಣರಾವ್, ಟಿ.ಇ.ಒ.ಐ. ಜಯರಾಮ್, ಪ್ರಹ್ಲಾದ ಬಾಬು, ಗಂಗಾಧರ ಹೆಗಡೆ, ರಮೇಶ್ ಕುಲಕರ್ಣಿ ಇವರು ಅವರ ಒಡನಾಟದ ವಲಯದಲ್ಲಿದ್ದ ಕೆಲವರು.
ಜೀವನದ ಕೊನೆಯ ಹಂತದಲ್ಲಿ ಅವರ ಮಿಶ್ರಿಕೋಟೆಯ ಶ್ರೀಭವಾನಿ ಶಂಕರ ದೇವಾಲಯದ ಜೀರ್ಣೋದ್ದಾರಕ್ಕಾಗಿ ತಮ್ಮ ಸರ್ವಶಕ್ತಿಯನ್ನು ಸಮರ್ಪಿಸಿದರು. ಆ ದೇವಾಲಯಕ್ಕೆ ದೃಢ ವ್ಯವಸ್ಥೆಯನ್ನು ಕಲ್ಪಿಸಿ, ಕೃತಕೃತ್ಯರಾದರು. ಒಬ್ಬ ಅಣ್ಣ, ಇಬ್ಬರು ಅಕ್ಕಂದಿರೊಡನೆ ಜನಿಸಿದ ಅವರು, ಅಪಾರ ಬಂಧು ಬಳಗದೊಡನೆ ನಿಕಟ ಸಂಬಂಧಗಳನ್ನಿಟ್ಟುಕೊಂಡಿದ್ದರು. ಶುಭಾಶುಭ ಎಲ್ಲ ಸಂದರ್ಭಗಳಲ್ಲಿಯೂ ಇಡೀ ಪರಿವಾರದ ಹಿರಿಯರಾಗಿ ನಿಂತು ಶುಭಹಾರೈಸುತ್ತಾ, ಧೈರ್ಯ, ಭರವಸೆಗಳನ್ನು ತುಂಬಿ ಸಮಾಧಾನಗೊಳಿಸುತ್ತಾ ಎಲ್ಲರಿಗೂ ಪ್ರೀತಿಯ 'ಮಾಮ' ಆಗಿದ್ದರು. ಇವೆಲ್ಲಕ್ಕೂ ಅವರ ಧರ್ಮಪತ್ನಿ ಶ್ರೀಮತಿ ಸರೋಜಾ ಬೆನ್ನೆಲುಬಾಗಿದ್ದು, ಕುಟುಂಬಕ್ಕೆ ಸ್ಪೂರ್ತಿಯಾಗಿರುವರು. ಇಬ್ಬರು ಮಕ್ಕಳು, ಸೊಸೆಯಂದಿರು, ನಾಲ್ವರು ಮೊಮ್ಮಕ್ಕಳು ಎಲ್ಲರೂ ಅವರ ಹಿಂದು ಸಂಘಟನೆಯ ಕಾರ್ಯದ ಶ್ರುತಿಯಾಗಿದ್ದರು. ಸಂಸ್ಕಾರ ಸಂಪನ್ನವಾದ ಕುಟುಂಬದ ಗುರುತಿನಂತೆ ಮೊದಲ ಮೊಮ್ಮಗ ಸಮರ್ಥನನ್ನು ವೇದಾಧ್ಯಯನಕ್ಕಾಗಿ ಗುರುಕುಲ ಶಿಕ್ಷಣಕ್ಕೆ ಅರ್ಪಿಸಿ, ಅವನೀಗ ಘನಪಾಠಿ ಶಿಕ್ಷಣದ ಹಂತದಲ್ಲಿರುವುದು ಎಲ್ಲರಿಗೂ ಮಾದರಿಯಾಗಿದೆ. ಹಿಂದು ಸಂಘಟನೆಗೆ ಒಮ್ಮೆ ತಮ್ಮನ್ನು ಅರ್ಪಿಸಿಕೊಂಡ ಅವರು ತಮ್ಮ ಜೀವನದ ಕೊನೆಯುಸಿರಿನವರೆಗೂ ಅದನ್ನು ವ್ರತದಂತೆ ನಡೆಸಿದರು. ಅವರಿಗೆ ಹೃತೂರ್ವಕ ನುಡಿನಮನಗಳ ಶ್ರದ್ದಾಂಜಲಿ. ಧರ್ಮಶ್ರೀ ಪರಿವಾರವು ಅವರ ಕುಟುಂಬಕ್ಕೆ ಎಲ್ಲ ರೀತಿಯ ಭಗವತೃಪೆ ಸದಾ ಇರಲೆಂದು ಪ್ರಾರ್ಥಿಸಿ, ಹಾರೈಸುವುದು.