Logo

VHP PUBLICATIONS

Hindu Vani


expand_more

ಇತಿಹಾಸ

ಮಹಾತ್ಮಾ ಗಾಂಧಿ ಸುತ್ತಲಿನ ಕಟ್ಟು ಕಥೆಗಳು

- ಟಿ.ಎ.ಪಿ.ಶೆಣೈ

ಗಾಂಧೀಜಿ ತಮ್ಮನ್ನು 'ಸಂತನಾಗಲು ಪ್ರಯತ್ನಿಸುತ್ತಿರುವ ರಾಜಕಾರಣಿ' ಎಂದು ಕರೆಸಿಕೊಳ್ಳಲು ಇಚ್ಚಿಸುತ್ತಿದ್ದರು. ಇದು ಮಾತ್ರ ಕೊನೆಯವರೆಗೂ ಪ್ರಯತ್ನದ ಹಂತದಲ್ಲೇ ಉಳಿಯಿತು ಎಂದು ಕಾಣುತ್ತದೆ. ಅವರ ಉತ್ತರಾಧಿಕಾರಿಗಳಾಗಿ ಹೆಸರು ಪಡೆದವರು ಕೂಡಾ ಮುಂದೆ ಸಂತರಾಗಲೂ ಇಲ್ಲ, ಯಶಸ್ವೀ ರಾಜಕಾರಣಿಗಳೂ ಆಗಲಿಲ್ಲ. ಅವರೆಲ್ಲರೂ ಗಾಂಧಿತನವನ್ನು ಬಿಟ್ಟಿದ್ದೇ ಹೆಚ್ಚು. ಹಾಗಾಗಿ ವಿಫಲಗೊಂಡ ಗಾಂಧಿತನ ಇಂದು ಮಾತಿನ ವಿಜೃಂಭಣೆಯಲ್ಲಿ ಮಾತ್ರ ಕಾಣುತ್ತಿದೆ.

ಕೆಲವೊಮ್ಮೆ ಪ್ರಾಸಂಗಿಕ ಘಟನೆಗಳು ಹೇಗೆ ಐತಿಹಾಸಿಕ ಬೆಳವಣಿಗೆಗಳೆಂದು ಬಿಂಬಿತವಾಗುತ್ತವೆ ಎನ್ನುವುದನ್ನು ಮಾರ್ಕ್ ಶಫರ್ಡ್ ಎನ್ನುವ ಅಮೆರಿಕಾದ ಲೇಖಕರೊಬ್ಬರು ವಿವರಿಸುತ್ತಾರೆ. 1960ರ ದಶಕದಲ್ಲಿ ದಕ್ಷಿಣ ವಿಯಟ್ನಾಂ ಅಧ್ಯಕ್ಷ ಎಂಗೋಡಿನ್ ಡಿಯಮ್ ವಿರುದ್ಧ ಬೌದ್ಧ ಬಿಕ್ಷುಗಳು ದೊಡ್ಡ ವಿರೋಧಿ ಚಳುವಳಿಯನ್ನು ಹುಟ್ಟು ಹಾಕಿದರು. ಅದು ಅಧ್ಯಕ್ಷರ ವಿರುದ್ದ ಜನರ ಅಭಿಪ್ರಾಯವನ್ನು ಎತ್ತಿ ಕಟ್ಟಿತು. ಹೀಗೆ ಜನ ವಿರೋಧವು ಮೇರೆ ಮೀರಿದಾಗ ಸೇನೆಯು ಮಧ್ಯ ಪ್ರವೇಶಿಸಿ ಅಧ್ಯಕ್ಷರನ್ನು ಪದಚ್ಯುತಿಗೊಳಿಸಿತು. ಲೇಖಕರು ಹೇಳುವಂತೆ ಅವರು ಓದಿದ ಆ ಕಾಲದ ರಾಜಕೀಯ ಸ್ಥಿತಿಯನ್ನು ವಿವರಿಸುವ ಪುಸ್ತಕಗಳೆಲ್ಲವೂ ಅಧ್ಯಕ್ಷರ ಪದಚ್ಯುತಿಯು ಸೇನಾಕ್ರಾಂತಿಯಿಂದ ನಡೆಯಿತೆಂದು ಹೇಳಿದುವಲ್ಲದೆ ಯಾವುದೂ ಕೂಡಾ ಜನಚಳುವಳಿಯ ಪರಿಣಾಮದಿಂದ ಎಂದು ಹೇಳಲೇ ಇಲ್ಲ ಎಂದಿದ್ದರು. ಗಾಂಧೀಜಿ ಕೂಡಾ ಭಾರತದಲ್ಲಿ ಇಂತಹ ಹತ್ತು ಹಲವು ರಾಜಕೀಯ ಬೆಳವಣಿಗೆಗಳ ಲಾಭವನ್ನು ತಮ್ಮ ಪಾಲಿಗೆ ಒತ್ತರಿಸಿಕೊಂಡರು. ಸ್ವಾತಂತ್ರಗಳಿಕೆಗೆ ಆ ಅರ್ಧಶತಮಾನದ ಧಾರ್ಮಿಕ ಚಳುವಳಿಗಳಾಗಲೀ ಕಾಂತಿಕಾರಿ ತರುಣರ ಚಟುವಟಿಕೆಗಳಾಗಲೀ, ಮುಂದೆ ವಿಫಲವಾದ ಸೇನಾ ಅಸಂತುಷ್ಟಿಗಳ ಪರಿಣಾಮಗಳಾಗಲೀ ಉಲ್ಲೇಖವಾಗಲೀ ಎಲ್ಲೂ ಇಲ್ಲ. ಭಾರತದ ಸ್ವಾತಂತ್ರ್ಯ ಚಳುವಳಿಯೆಂದರೆ ಗಾಂಧೀಜಿಯವರ ಸತ್ಯಾಗ್ರಹವೆಂದು ಹೆಸರು ಪಡೆಯಿತು.

ಸತ್ಯಾಗ್ರಹದ ಪ್ರಮುಖ ಭಾಗವಾಗಿರುವುದು ಕಾನೂನನ್ನು ಉಲ್ಲಂಘಿಸುವುದಕ್ಕಾಗಿ ಆಳುವವರು ವಿಧಿಸುವ ಶಿಕ್ಷೆಯನ್ನು ವಿರೋಧವಿಲ್ಲದೆ ಒಪ್ಪುವುದು. ಅಂದರೆ ಹೆಚ್ಚಿನ ಸಂಖ್ಯೆಯಲ್ಲಿ ಸೆರೆಮನೆಯನ್ನು ತುಂಬುವುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸತ್ಯಾಗ್ರಹವೆಂದರೆ ಆ ಮೂಲಕ ಸರ್ಕಾರದ, ಆಳುವವರ ಹೃದಯವನ್ನು ಪರಿವರ್ತಿಸುವುದು. ಆದರೆ ನಿಜವಾಗಿ ಇದರಿಂದ ಬದಲಾಗುವುದು ಹೃದಯವೇ? ಅಥವಾ ಸತ್ಯಾಗ್ರಹದ ಪರಮಾರ್ಥವಾದ ಹೃದಯ ಪರಿವರ್ತನೆಗೆ ವಿರೋಧವಾಗಿರುವ ಅಥವಾ ಅನುಚಿತವಾಗಿರುವ ಲೌಕಿಕ ಪರಿಣಾಮಗಳ ಒತ್ತಡದ ಒತ್ತಾಯವೇ? ಇದನ್ನು ವಿವರಿಸಬೇಕೆಂದರೆ ಮೊದಲನೆಯದಾಗಿ ಸತ್ಯಾಗ್ರಹದಿಂದ ಕಾನೂನಿನ ಉಲ್ಲಂಘನೆಯಾಗುತ್ತದೆ. ಆಗ ಆಳುವ ಜನರು ಸತ್ಯಾಗ್ರಹಿಗಳನ್ನು ಹಿಡಿದು ತಂದು ಸೆರೆಮನೆಯನ್ನು ತುಂಬುವರು. ಸತ್ಯಾಗ್ರಹಿಗಳು ಸಂತೋಷದಿಂದಲೇ ಸೆರೆಮನೆಯನ್ನು ತುಂಬುವರು. ಆಗ ಉಳಿದ ಸಾರ್ವಜನಿಕರಿಗೆ; ತಮ್ಮ ಸ್ವಾತಂತ್ರ್ಯಕ್ಕಾಗಿ ಸೆರೆಮನೆಗೆ ಹೋಗುವವರ ಸ್ವಾತಂತ್ರ್ಯ ಪ್ರೇಮದ ಬಗ್ಗೆ ಅಭಿಮಾನ ಉಕ್ಕುವುದು. ಅವರ ಮೇಲೆ ಈಶನ್ಯಾಗ್ರಹಿಗಳು ಇವರೆಲ್ಲ ನಮಗಾಗಿ ಜೈಲುಗಳನ್ನು ತುಂಬುತ್ತಿರುವರಲ್ಲ ಎಂದು ಸಹಾನುಭೂತಿಯು ಹೆಚ್ಚುತ್ತದೆ. ಈ ವಾತಾವರಣವು ಸರ್ಕಾರವನ್ನು ಗಾಂಧಿಯವರೊಡನೆ ಮಾತುಕತೆ ಪ್ರಾರಂಭಿಸುವಂತೆ ಒತ್ತಡವನ್ನು ಹೇರುತ್ತದೆ. ಸತ್ಯಾಗ್ರಹದ ಭರಾಟೆಯು ಹೆಚ್ಚುತ್ತಿದ್ದಂತೆ ಆ ಸಾಮಾಜಿಕ ಅಭಿಪ್ರಾಯವು ಅಂತಿಮವಾಗಿ ಆಳುವ ಸರ್ಕಾರವನ್ನು ಗಾಂಧಿಯವರೊಡನೆ ಸಂಧಾನಕ್ಕೆ ಸಿದ್ಧವಾಗಿಸುತ್ತದೆ. ವಸ್ತುಶಃ ಇಲ್ಲಿ ಹೃದಯ ಪರಿವರ್ತನೆಯು ನಡೆಯುವುದು ಒತ್ತಡವನ್ನು ಹೇರುವ ಸಾರ್ವಜನಿಕ ಹೃದಯದಲ್ಲಿ. ಆಳುಗರಲ್ಲಿ ಆಗುವುದು ಇಚ್ಛೆಯಿಲ್ಲದ ಒತ್ತಡದ ಒತ್ತಾಯ ಮಾತ್ರವೆ.

ಇನ್ನು ಗಾಂಧೀಜಿಯವರ ಉದಾಹರಣೆಯಲ್ಲಿ ಹೇಳಬೇಕೆಂದರೆ ಆಗ ಭಾರತದಲ್ಲಿ ಆಳುವವರನ್ನು ನಿರ್ದೇಶಿಸುವವರು ಇಂಗ್ಲೆಂಡಿನಲ್ಲಿರುವ ಸರ್ಕಾರ ಮತ್ತು ಅಲ್ಲಿಯ ಸಂಸತ್ತು. ಭಾರತದ ಆಗು ಹೋಗುಗಳು ಇಂಗ್ಲೆಂಡಿನ ವಾತಾವರಣವನ್ನು ಪ್ರಭಾವಿಸುವ ಘಟನೆಗಳಾಗಿ ಪರೋಕ್ಷವಾಗಿ ಕಾರ್ಯವೆಸಗುತ್ತವೆ. ಗಾಂಧೀಜಿಯವರಿಂದ ಪ್ರಭಾವಿತರಾದ ಇಂಗ್ಲೆಂಡಿನ ಪ್ರಜೆಗಳು ಅಲ್ಲಿಯ ಸರ್ಕಾರದ ಮೇಲೆ ಹೇರುವ ಒತ್ತಡಗಳು ಭಾರತದ ಆಡಳಿತ ಯಂತ್ರವನ್ನು ತನ್ನ ದಾರಿಗೆ ಬರುವಂತೆ ಮಾಡುತ್ತದೆ. ಅಂದರೆ ಸತ್ಯಾಗ್ರಹವು ಪ್ರಭಾವಿಸುವುದು ಇಂಗ್ಲೆಂಡಿನ ಜನರನ್ನು ಮಾತ್ರ ಆಳುವ ಸರ್ಕಾರವನ್ನಲ್ಲ!

ಅಸಹಕಾರ ಚಳುವಳಿಯ ಬುನಾದಿಯೆಂದರೆ ಅನ್ಯಾಯದ ಕಾನೂನುಗಳ ಉಲ್ಲಂಘನೆ ಮಾತ್ರವೆ. ಚಳುವಳಿಕಾರರು ಎಲ್ಲಾ ಕಾನೂನುಗಳನ್ನು ಉಲ್ಲಂಘಿಸುವವರಲ್ಲ. ಇಲ್ಲಿ ಇನ್ನೊಂದು ಕಡ್ಡಾಯವೂ ಇದೆ. ಅದೆಂದರೆ ಯಾರು ಕಾನೂನುಗಳನ್ನು ಅತ್ಯಂತ ಗೌರವಿಸುವರೋ ಅವರು ಮಾತ್ರ ಕಾನೂನನ್ನು ಉಲ್ಲಂಘಿಸುವ ಸತ್ಯಾಗ್ರಹಿಗಳಾಗಲು ಅರ್ಹರು. ಅವರಿಂದ ಮಾತ್ರ ಸಾರ್ವಜನಿಕರ ಗೌರವವನ್ನು ಪಡೆಯಲು ಸಾಧ್ಯ. ಆದರೆ ಗಾಂಧೀಜಿಯವರ ಚಳುವಳಿಯು ಇಂತಹ ಅರ್ಹರಿಂದ ಮಾತ್ರ ಮುನ್ನಡೆಯಲಿಲ್ಲ. ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿ ಅಲ್ಲಲ್ಲಿ ಸತ್ಯಾಗ್ರಹದ ತಾತ್ವಿಕತೆಗೆ ವಿರುದ್ದವಾದ ಹಿಂಸಾತ್ಮಕ ಪ್ರಸಂಗಗಳೂ ನಡೆದವು.

ಮಹಾತ್ಮಗಾಂಧಿಯವರ ಸತ್ಯಾಗ್ರಹವು ಪ್ರಸಿದ್ದಿಯನ್ನು ಪಡೆದುದು ಇಂಗ್ಲೆಂಡಿಗೆ ತಾನು ಕೆಲವು ನಾಗರಿಕ ಮೌಲ್ಯಗಳ ಪ್ರತಿಪಾದಕನೆಂಬ ಮುಖವಾಡವನ್ನು ತೊಟ್ಟುಕೊಳ್ಳಲೇ ಬೇಕಾದ ಅಗತ್ಯವಿದ್ದುದರಿಂದ. ಇದೇ ಸತ್ಯಾಗ್ರಹವು ಚೀನಾದಲ್ಲೋ ರಷ್ಯಾದಲ್ಲೋ ಅಥವಾ ಹಿಟ್ಲರ್‌ನ ಜರ್ಮನಿಯಲ್ಲೋ ನಡೆದಿದ್ದರೆ ಅದು 'ಯಶಸ್ವಿಯಾಗುತ್ತಿತ್ತೇ? ಅಂತಹ ಪ್ರಸಿದ್ಧಿಯನ್ನು ಪಡೆಯುತ್ತಿತ್ತೇ? ಸತ್ಯಾಗ್ರಹದಿಂದ ದೇಶಕ್ಕೆ ಆದ ಪ್ರಯೋಜನವೆಂದರೆ ಸಾವು ನೋವು ನಾಶಗಳ ಪ್ರಮಾಣವು ಕಮ್ಮಿಯಾದುದು. ಅದಕ್ಕೆ ಕಾರಣವೂ, ಬ್ರಿಟಿಷರು ಉಳಿದ ಯುರೋಪಿನ ದೇಶಗಳಿಗಿಂತ ಕ್ರೌರ್ಯದಲ್ಲಿ ಒಂದಿಷ್ಟು ಹಿಂದುಳಿದಿರುವುದೂ ಆಗಿರಬಹುದು. ಫ್ರೆಂಚರು ತಮ್ಮ ಕಾಲೋನಿಗಳಲ್ಲಿ ತೋರಿದ ಅತಿ ಕ್ರೌರ್ಯವು ಬ್ರಿಟಿಷರನ್ನು ಹೋಲಿಕೆಯಲ್ಲಿ ದಯಾಳುಗಳಾಗಿದ್ದರು ಎಂದು ಚಿತ್ರಿಸಿತು. ಆದರೆ ಒಟ್ಟು ಪರಿಣಾಮದಲ್ಲಿ ಗಾಂಧಿಯವರ ನಿಲುವು ದೇಶದ ವಿಭಜನೆಗೆ ಕಾರಣವಾಯಿತು. ಒಂದು ಕೋಟಿ ಜನರ ಸಾವುನೋವುಗಳಿಗೆ ಕಾರಣವಾಯಿತು.

ಇಷ್ಟಾಗಿಯೂ ಇತಿಹಾಸದ ಒಂದು ಘಟ್ಟದಲ್ಲಿ ಬದಲಾವಣೆಯ ಹೊಸ ಹಾದಿಯೆಡೆಗೆ ಮಹಾತ್ಮಾಗಾಂಧಿ ಕರೆದೊಯ್ದರು ಎನ್ನುವುದು ಸ್ಥಾಪಿತವಾಯಿತು.