Logo

VHP PUBLICATIONS

Hindu Vani


expand_more

ಕತೆಕತೆ ಕಾರಣ

ಕತೆಕತೆ ಕಾರಣ

ಅಹಂಕಾರ ಮತ್ತು ವಿನಯ

ರಾಜ ಭರತ ಮತ್ತು ಬಾಹುಬಲಿಯರು ವೃಷಭನಾಥನ ಮಕ್ಕಳು. ವೃಷಭನಾಥರು ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳಿದರು. ಆಗ ರಾಜನಾದ ಭರತನಿಗೆ ಎಲ್ಲ ದೇಶಗಳನ್ನು ಗೆಲ್ಲಬೇಕೆಂದು ಇಚ್ಚೆಯಾಯಿತು. ಭರತನು ದಿಗ್ವಿಜಯಕ್ಕಾಗಿ ಹೊರಟನು. ರಾಜ್ಯ ರಾಜ್ಯಗಳನ್ನು ಗೆದ್ದನು. ಅರಸರೆಲ್ಲರೂ ಅವನನ್ನು ಚಕ್ರವರ್ತಿಯೆಂದು ಒಪ್ಪಿಕೊಂಡರು. ರಾಜರೆಲ್ಲರೂ ತನಗೆ ಸಾಮಂತರಾದರು, ಎಂದುಕೊಂಡು ಅಹಂಕಾರ ಪಟ್ಟ ಭರತನು ಮತ್ತೆ ರಾಜಧಾನಿಗೆ ಮರಳಿದನು. ದಿಗ್ವಿಜಯದ ಉದ್ದಕ್ಕೂ ಅವನು ಮುಂದುವರಿದಂತೆ ಅವನ ಜೊತೆಯಲ್ಲಿ ಪ್ರತ್ಯಕ್ಷವಾದ ಒಂದು ಚಕ್ರವೂ ಅವನೊಂದಿಗೆ ಆಯಾ ರಾಜ್ಯಗಳನ್ನು ಪ್ರವೇಶಿಸುತ್ತಿತ್ತು. ಆದರೆ ತನ್ನದೇ ರಾಜಧಾನಿಗೆ ಮರಳುವಾಗ ಮಾತ್ರ ಆ ಚಕ್ರವು ರಾಜಧಾನಿಯ ಹೆಬ್ಬಾಗಿಲಿನಲ್ಲೇ ನಿಂತುಬಿಟ್ಟಿತು.



ಮಂತ್ರಿಗಳೆಲ್ಲರೂ ಸೇರಿದರು. ಚಕ್ರವು ನಿಲ್ಲಲು ಕಾರಣವೇನೆಂದು ಚರ್ಚಿಸಿದರು. ಆಗ ಅವರಿಗೆ ಕಾರಣವು ತಿಳಿದುಬಂದಿತು. ಉಳಿದ ಎಲ್ಲರೂ ಒಪ್ಪಿದರೂ ಅವನ ತಮ್ಮಂದಿರು ಮಾತ್ರ ಭರತನನ್ನು ಚಕ್ರವರ್ತಿಯೆಂದು ಒಪ್ಪದಿರುವುದೇ ಅದಕ್ಕೆ ಕಾರಣವಾಗಿದ್ದಿತು. ಆಗ ಭರತನು ಎಲ್ಲ ತಮ್ಮಂದಿರಿಗೂ ಕಪ್ಪ ಕಾಣಿಕೆಗಳನ್ನು ಹಿಡಿದು ತನ್ನ ಬಳಿಗೆ ಬರಬೇಕೆಂದು ಹೇಳಿ ಕಳುಹಿಸಿದನು. ತಮ್ಮಂದಿರು ಕಪ್ಪವನ್ನು ಒಪ್ಪಿಸಲು ಬರಲೇ ಇಲ್ಲ. ಅದರ ಬದಲು ತಮ್ಮ ತಮ್ಮ ರಾಜ್ಯಗಳನ್ನು ಬಿಟ್ಟು ಹೋದರು. ಅಷ್ಟೇ ಅಲ್ಲ, ತೀಥರ್ಂಕರರಾದ ತಮ್ಮ ತಂದೆ ವೃಷಭನಾಥರ ಬಳಿ ಹೋಗಿ ಅವರಿಂದ ಉಪದೇಶವನ್ನು ಪಡೆದು ಅಲ್ಲೇ ಉಳಿದುಬಿಟ್ಟರು.

ಭರತನ ತಮ್ಮಂದಿರಲ್ಲಿ ಪ್ರಮುಖನಾದವನು ಬಾಹುಬಲಿ. ಅವನು ಮಾತ್ರ ಕಪ್ಪಕಾಣಿಕೆಯನ್ನು ನೀಡಲಿಲ್ಲ ಅಲ್ಲದೆ ರಾಜ್ಯವನ್ನೂ ಬಿಟ್ಟು ಹೋಗಲಿಲ್ಲ. ಅಷ್ಟೇ ಅಲ್ಲ, ಅಣ್ಣನು ತನ್ನನ್ನು ಗೆದ್ದುಬಿಟ್ಟರೆ ಮಾತ್ರ ಅವನನ್ನು ಚಕ್ರವರ್ತಿಯೆಂದು ಒಪ್ಪಿಕೊಳ್ಳುವೆನು ಎಂದು ಸಾರಿದನು. ಎರಡೂ ಕಡೆಯ ಮಂತ್ರಿಗಳಿಗೂ ಜನರಿಗೂ ಯೋಚನೆಗಿಟ್ಟುಕೊಂಡಿತು. ಏಕೆಂದರೆ ಇಬ್ಬರೂ ಅಣ್ಣ ತಮ್ಮಂದಿರು ಬಹಳ ವೀರರೂ ಶೂರರೂ ಆದವರು. ಅವರೇನಾದರೂ ಯುದ್ಧಕ್ಕೆ ನಿಂತರೆ ಎರಡು ಕಡೆಯೂ ಬಹಳ ಸಾವು ನೋವುಗಳು ಉಂಟಾಗುತ್ತವೆ. ಅದನ್ನು ತಪ್ಪಿಸಬೇಕು ಎಂದು ನಿಶ್ಚಯಿಸಿದರು.

ಅದಕ್ಕಾಗಿ ಸೈನ್ಯಗಳು ಯುದ್ಧದಲ್ಲಿ ತೊಡಗಬಾರದು. ಭರತ ಬಾಹುಬಲಿಯರು ಮಾತ್ರ ಯುದ್ಧದಲ್ಲಿ ತೊಡಗಬೇಕು. ಅದರಲ್ಲೂ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಬಾರದು ಎಂದು ತೀರ್ಮಾನಿಸಿದರು. ಹಾಗಾದರೆ ಯಾವ ರೀತಿ ಯುದ್ಧ ಮಾಡಬೇಕು? ಜಲಯುದ್ಧ ಮೊದಲನೆಯದು. ನದಿಯಲ್ಲಿ ಎದುರು ಬದುರಾಗಿ ನಿಂತು ಎರಡೂ ತೋಳುಗಳಿಂದ ನೀರನ್ನು ತಡೆದು ಎದುರಾಳಿಯ ಕಡೆಗೆ ತಳ್ಳಬೇಕು. ಆಗ ಹಿಂದೆ ಹೋದವನು, ಸೋತಂತೆ. ಎರಡನೆಯದಾಗಿ ದೃಷ್ಟಿಯುದ್ಧ. ಇಬ್ಬರೂ ಒಬ್ಬರನ್ನು ಒಬ್ಬರು ನೇರವಾಗಿ ದೃಷ್ಟಿಸುತ್ತ ಇರಬೇಕು. ಯಾರು ನಡುವೆ ಕಣ್ಣು ಮುಚ್ಚುವರೋ ಅಥವಾ ದೃಷ್ಟಿಯನ್ನು ಬದಲಿಸುವರೋ ಅವರು ಸೋತರು ಎಂದು. ಮಲ್ಲ ಯುದ್ಧದಲ್ಲಿ ಇಬ್ಬರು ಕುಸ್ತಿಯಲ್ಲಿ ಭಾಗವಹಿಸುವಂತೆ ಸೆಣಸಬೇಕು. ಅಲ್ಲೂ ಸೋಲು ಗೆಲುವು ಹಿಂಸೆಯಿಲ್ಲದೆ ನಿರ್ಧಾರವಾಗುತ್ತದೆ.

ಆದರೆ ಈ ಮೂರೂ ಯುದ್ಧಗಳಲ್ಲಿ ತಮ್ಮನಾದ ಬಾಹುಬಲಿಯೇ ಗೆದ್ದುಬಿಡುತ್ತಾನೆ. ಎಲ್ಲ ದೇಶಗಳನ್ನು ಗೆದ್ದು ಬಂದೆ ಎನ್ನುವ ಭರತ ಸೋತುಬಿಡುತ್ತಾನೆ. ಆದರೆ ಮನುಷ್ಯನ ಅಹಂಕಾರಕ್ಕೆ ಸೋಲು ಸುಲಭದಲ್ಲಿ ಬರದು. ಅವನ ಸಿಟ್ಟು ಉಕ್ಕುತ್ತದೆ. ಅವಮಾನದ ರೋಷ ಹೆಡೆ ಎತ್ತುತ್ತದೆ. ಭರತನು ತನ್ನ ಜೊತೆಯಲ್ಲಿ ತಿರುಗುತ್ತ ಬಂದು ತನ್ನ ಗೆಲುವನ್ನು ಕಂಡ ಚಕ್ರರತ್ನವನ್ನೇ ಎತ್ತಿ, ಅದಕ್ಕೆ “ಹೋಗು ಬಾಹುಬಲಿಯನ್ನು ಸೋಲಿಸು” ಎಂದು ಆಜ್ಞಾಪಿಸುತ್ತಾನೆ.

ನೋಡು ನೋಡುತ್ತಿದ್ದಂತೆ ಚಕ್ರವು ಬಾಹುಬಲಿಯ ಬಳಿ ಹೋಗಿ ಅವನ ಮೇಲೆ ಆಕ್ರಮಣ ಮಾಡದೆ ವಿಧೇಯತೆಯಿಂದ ಅವನ ಬಲ ಭಾಗದಲ್ಲಿ ಹೋಗಿ ನಿಲ್ಲುತ್ತದೆ. ಅದಕ್ಕೆ ಯಾರು ಗೆದ್ದವರು ಎನ್ನುವುದು ತಿಳಿದಿದ್ದಿತು. ಇಷ್ಟಾಗುವಾಗ ಗೆದ್ದ ಬಾಹುಬಲಿಗೆ ತಾನೇನೋ ತಪ್ಪು ಮಾಡಿದೆ ಎಂದೆನಿಸಿತು. “ನನಗೇಕೆ ಅಣ್ಣನನ್ನು ಗೆಲ್ಲಬೇಕೆನಿಸಿತು? ನನ್ನನ್ನು ಪ್ರೀತಿಸುತ್ತಿದ್ದ ಅಣ್ಣನಿಗೆ ನನ್ನ ಮೇಲೆ ಚಕ್ರವನ್ನು ಕಳುಹಿಸಬೇಕೆಂದು ಏಕೆ ಅನಿಸಿತು? ಇಷ್ಟಕ್ಕೆಲ್ಲ ಕಾರಣ ಅಹಂಕಾರ, ಅಂತಹ ಅಹಂಕಾರಕ್ಕೆ ಕಾರಣವಾಗುವುದು, ರಾಜ್ಯವನ್ನು ಆಳಬೇಕು ಎನ್ನುವ ಆಸೆ. ಚಕ್ರವರ್ತಿಯಾಗಬೇಕೆಂಬ ಬಯಕೆ. ಇವು ಸೇರಿದಾಗ ಮನುಷ್ಯನು ಅಣ್ಣ ತಮ್ಮ ಎನ್ನುವ ಸಂಬಂಧವನ್ನು ಮರೆಯುತ್ತಾನೆ. ಪ್ರೀತಿ ವಿಶ್ವಾಸಗಳೆಂಬ ಸಜ್ಜನಿಕೆಯನ್ನು ಮರೆಯುತ್ತಾನೆ. ಇದಕ್ಕೆಲ್ಲ ಕಾರಣವಾದ ಈ ರಾಜ್ಯ ಈ ಯುದ್ದ, ಈ ರಾಜನ ವೈಭವ ಎಲ್ಲವನ್ನೂ ಬಿಟ್ಟು ಬಿಡುವೆ” ಎಂದುಕೊಂಡನು.

ಈ ರಾಜ್ಯ “ನಿನ್ನ ತೋಳುಗಳ ಶಕ್ತಿಯ ಅಹಂಕಾರದಿಂದ ಅಣ್ಣನ ಮೇಲೆ ಯುದ್ದ ಮಾಡಲು ಹೊರಟೆ. ತಂದೆಯು ಬೇರಲ್ಲ, ಅಣ್ಣನು ಬೇರಲ್ಲ ಎಂಬುದನ್ನು ಮರೆತೆ. ಗೆಲುವು ಎಲ್ಲವೂ ಇಂದು ಇರಬಹುದು, ನಾಳೆ ಹೋಗಬಹುದು. ಅದಕ್ಕಾಗಿ ಇಷ್ಟೆಲ್ಲಾ ನಡೆಯಬೇಕೇ” ಎಂದು ತನ್ನನ್ನೇ ಪ್ರಶ್ನಿಸಿಕೊಂಡ ಬಾಹುಬಲಿಯು ರಾಜ್ಯವನ್ನು ಭರತನಿಗೆ ಒಪ್ಪಿಸಿ ತಪಸ್ಸಿಗೆ ಹೋಗುತ್ತಾನೆ.

ಇತ್ತ ಭರತನಿಗೂ ನಾಚಿಕೆ ಎನಿಸಿತು. “ನನ್ನ ತಮ್ಮ ಬಾಹುಬಲಿ ಎಷ್ಟು ದೊಡ್ಡವನು” ಎಂದು ಅವನಿಗೆ ಅನಿಸಿತು. ಒಬ್ಬ ಅಣ್ಣನಲ್ಲಿ ಇರಬೇಕಾದ ಪ್ರೀತಿ, ತನ್ನಲ್ಲಿರುವುದನ್ನು ಕೊಡುವ ಉದಾರತೆ, ಯಾವಾಗಲೂ ಕ್ಷಮಿಸುವ ಗುಣವೆಲ್ಲವೂ ತಮ್ಮನಲ್ಲಿದೆ. ನಾನು ಅಣ್ಣನಾಗಿ ಹೇಗೆ ಇರಬೇಕೆಂದು ತಿಳಿಸುವಲ್ಲಿ ಸೋತುಹೋದೆ ಎಂದು ಅನಿಸಿತು.

ತಪಸ್ಸಿಗೆ ನಿಂತ ತಮ್ಮನ ಬಳಿ ಹೋಗಿ ನಿಂತ ಅಣ್ಣ ಭರತ ಅವನಿಗೆ ತಲೆಬಾಗುತ್ತಾನೆ. ತಪ್ಪು ಮಾಡಿದೆ ಎನ್ನುವ ಭಾವನೆಯಿಂದ ಹರಿದ ಅವನ ಕಣ್ಣೀರು ತಮ್ಮನ ಪಾದಗಳಿಗೆ ಹನಿಯುತ್ತದೆ. ಆ ಹನಿಗಳಿಂದ ಬಾಹುಬಲಿಯ ದೇಹದ ಸುತ್ತ ಸುತ್ತಿಕೊಂಡ ಬಳ್ಳಿಗಳ ಎಲೆಗಳು ಹಸಿರು ಹಸಿರಾಗುತ್ತವೆ. ಅವುಗಳಲ್ಲಿ ಹೂ ಅರಳುತ್ತದೆ. ಸುಗಂಧವು ಘಮಘಮಿಸುತ್ತದೆ. ಚಿಟ್ಟೆಗಳು ಬಂದು ಮುತ್ತುತ್ತವೆ. ಪ್ರೀತಿ, ಸ್ನೇಹ ವಾತ್ಸಲ್ಯಗಳು ಅರಳುವುದೆಂದರೆ ಇದೇ.