Logo

VHP PUBLICATIONS

Hindu Vani


expand_more

ವ್ಯಾಖ್ಯಾನ

ವ್ಯಾಖ್ಯಾನ

ಮೂಲ ರಾಮಾಯಣ - ಒಂದು ಪ್ರಸ್ತಾವನೆ

- ಬಿ.ಈ.ಸೀತಾಲಕ್ಷ್ಮೀ 33

ಮೂಲ ರಾಮಾಯಣ, ಸಂಕ್ಷಿಪ್ತ ರಾಮಾಯಣ, ಶತಶ್ಲೋಕಿ ರಾಮಾಯಣ ಎನ್ನುವ ಎಲ್ಲ ಹೆಸರುಗಳು ಒಂದೇ ಆಗಿವೆ. ರಾಮಾಯಣವು ಆದಿ ಕಾವ್ಯ ರಚಿಸಿದವರು ಆದಿಕವಿ ವಾಲ್ಮೀಕಿ.ರಚನೆಯಾದದ್ದು ತ್ರೇತಾ ಯುಗ ಕಾಲದಲ್ಲಿ. ಸಂಸ್ಕೃತ ಸಾಹಿತ್ಯದ ಆರಂಭವಾಗಿದ್ದು ಆಗಲೇ.ರಾಮಾಯಣಕ್ಕೂ ಮೊದಲು ಇದ್ದದ್ದು ವೇದಗಳು. ವೇದಗಳು ಅಪೌರುಷೇಯ. ಎಂದರೆ ಮನುಷ್ಯರಿಂದ ರಚಿತವಾದದ್ದಲ್ಲ.

ವಾಲ್ಮೀಕಿ ಮುನಿಗಳ ಮೂಲ ಹೆಸರು ಪ್ರಚೇತಸ. ಕಾಡಿನಲ್ಲಿ ವಾಸ ಮಾಡುತ್ತಿದ್ದಾಗ ಅವರಿಗೆ ಸಪ್ತರ್ಷಿಗಳಿಂದ ತಾರಕ ಮಂತ್ರದ ಉಪದೇಶವಾಗುತ್ತದೆ. ಇದನ್ನೇ ಜಪಿಸುತ್ತಾ ಧ್ಯಾನದಲ್ಲಿ ಮುಳುಗಿ ತಪಸ್ಸಿಗೆ ತೊಡಗುತ್ತಾರೆ. ಕಾಲ ಕಳೆದಂತೆ ಅವರ ಸುತ್ತ ಒಂದು ಹುತ್ತವೇ ಬೆಳೆದುಬಿಡುತ್ತದೆ. ಸಂಸ್ಕೃತದಲ್ಲಿ ವಕ ಎಂದರೆ ಹುತ್ತ, ದೈವ ಸಾಕ್ಷಾತ್ಕಾರವಾಗಿ ವಕ ದಿಂದ ಹೊರಬಂದ ಕಾರಣ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂತು.

ವಾಲ್ಮೀಕಿಗಳು ತಮಸಾ ನದಿ ತೀರದಲ್ಲಿ ಆಶ್ರಮವನ್ನು ನಿರ್ಮಿಸಿಕೊಂಡು ಸಾಧನೆ ಮಾಡುತ್ತಿರುತ್ತಾರೆ. ಒಮ್ಮೆ ಅವರು ತಮ್ಮ ಶಿಷ್ಯನಾದ ಭಾರದ್ವಾಜನೊಡನೆ ನದೀ ತೀರಕ್ಕೆ ಬರುತ್ತಾರೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಅನಂದಿಸುತ್ತಿರುತ್ತಾರೆ. ಅದೇ ಸಮಯದಲ್ಲಿ ಒಬ್ಬ ಬೇಡನು, ಅಲ್ಲಿಯೇ ಒಂದು ಮರದ ಮೇಲೆ ಸಂತೋಷದಿಂದ ಕಾಲಕಳೆಯುತ್ತಿದ್ದ ಜೋಡಿ ಕ್ರೌಂಚ ಪಕ್ಷಿಗಳಲ್ಲಿ, ಗಂಡು ಹಕ್ಕಿಯನ್ನು ತನ್ನ ಬಾಣದಿಂದ ಹೊಡೆದು ಹಾಕುತ್ತಾನೆ.ಗಂಡು ಹಕ್ಕಿ ಸತ್ತು ಕೆಳಗುರುಳಿದಾಗ, ಹೆಣ್ಣು ಹಕ್ಕಿ ಅತೀವ ದುಃಖದಿಂದ ವಿಲಪಿಸುತ್ತದೆ.

ಈ ದೃಶ್ಯವನ್ನು ಕಂಡ ವಾಲ್ಮೀಕಿ ಮಹರ್ಷಿಗಳಿಗೆ ಬಹಳ ಸಂಕಟವಾಗಿ ಕೋಪದ ಭರದಲ್ಲಿ “ಮಾ ನಿಷಾದ ಪ್ರತಿಷ್ಠಾಂತ್ವಮ್ ಆಗಮಃ ಶಾಶ್ವತೀಹಿ ಸಮಾಃ ಯತ್ಕಂಚ ಮಿಥುನಾದೇಕಂ ಅವಧೀಹಿ ಕಾಮಮೋಹಿತಂ” ಎಂಬುದಾಗಿ ನುಡಿಯುತ್ತಾರೆ. “ಎಲೈ ನಿಷಾದನೇ, ಕಾಮಮೋಹಿತವಾಗಿದ್ದ ಕ್ರೌಂಚ ದಂಪತಿಗಳಲ್ಲಿ ಒಂದನ್ನು ನೀನು ಸಮಯದಲ್ಲಿ ಕೊಂದೆಯಾದ್ದರಿಂದ ನೀನು ಬಹುಕಾಲ ಬದುಕದಂತಹ ಸ್ಥಿತಿಯನ್ನು ಪಡೆ” ಎಂಬ ಅರ್ಥ ಇದಕ್ಕಿದೆ.

ಶೋಕದಿಂದ ಬಂದ ಶಾಪವೇ ಶ್ಲೋಕವಾಯಿತು. ವಾಲ್ಮೀಕಿಗಳಿಗೆ ಅರಿವಾಗದಂತೆ ಲಯಬದ್ಧ, ಪ್ರಾಸಬದ್ಧ, ಛಂದೋಬದ್ಧವಾಗಿ ಹೊರಹೊಮ್ಮಿದ ಶ್ಲೋಕ. ಇದರಲ್ಲಿ 8 ಅಕ್ಷರಗಳುಳ್ಳ 4 ಸಾಲುಗಳು, ಒಟ್ಟು 32 ಅಕ್ಷರಗಳ ಅನುಷ್ಟುಪ್ ಛಂದದ ಉಗಮವಾಯಿತು. ಆಶ್ರಮಕ್ಕೆ ಹಿಂದಿರುಗಿ ಬಂದ ವಾಲ್ಮೀಕಿಗಳು ಜಿತಕ್ರೋಧರಾಗಬೇಕಿದ್ದ ತಮ್ಮಿಂದ ಈ ರೀತಿ ಶಾಪವು ಹೊರಬಂದಿತಲ್ಲ ಎಂದು ಕಳವಳ ಪಡುತ್ತಿರುತ್ತಾರೆ. ಅದೇ ಸಮಯಕ್ಕೆ ಬ್ರಹ್ಮ ದೇವರು ಅಲ್ಲಿಗೆ ಬರುತ್ತಾರೆ. ಚಿಂತಾಕ್ರಾಂತರಾಗಿದ್ದ ವಾಲ್ಮೀಕಿಗಳಿಗೆ “ಚಿಂತಿಸುವ ಕಾರಣವಿಲ್ಲ.ನಿಮ್ಮ ಬಾಯಿಂದ ವಾಣಿಯೇ ಈ ಶ್ಲೋಕವನ್ನು ನುಡಿಸಿದ್ದಾಳೆ. ಮುಂದೆ ನೀವು ರಚಿಸಲಿರುವ ರಾಮಾಯಣಕ್ಕೆ ಇದು ನಾಂದೀ ಶ್ಲೋಕವಾಗಿ ಪರಿಣಮಿಸುತ್ತದೆ”, ಎಂದು ಹೇಳುತ್ತಾರೆ.

ವಾಲ್ಮೀಕಿಗಳು ತಮಗೆ ರಾಮಾಯಣದ ಕಥೆ ತಿಳಿದಿಲ್ಲವಲ್ಲ ಎಂದಾಗ ನಾರದರ ಬಳಿ ಕೇಳುವಂತೆ ಬ್ರಹ್ಮದೇವರು ತಿಳಿಸಿದರು. ನಾರದರನ್ನು ವಾಲ್ಮೀಕಿಗಳು ಕೇಳಲಾಗಿ ರಾಮಾಯಣದ ಕಥೆಯನ್ನು ಸಂಕ್ಷಿಪ್ತವಾಗಿ 100 ಶ್ಲೋಕಗಳಲ್ಲಿ ಹೇಳಿದರು. ಸಂಪೂರ್ಣ ರಾಮಾಯಣದ ಮೊದಲ ಕಾಂಡ ಬಾಲಕಾಂಡ. ಇದರ ಮೊದಲನೇ ಸರ್ಗದಲ್ಲಿ ನಾರದರು ತಿಳಿಸಿದ 100 ಶ್ಲೋಕಗಳಿವೆ. ಇದೇ ಮೂಲ ರಾಮಾಯಣ, ಸಂಕ್ಷಿಪ್ತ ರಾಮಾಯಣ ಅಥವಾ ಶತಶ್ಲೋಕೀ ರಾಮಾಯಣ. ಮುಂದೆ ಇದನ್ನು ವಾಲ್ಮೀಕಿಗಳು ವಿಸ್ತರಿಸಿ 24000 ಶ್ಲೋಕಗಳ ರಾಮಾಯಣವನ್ನು ಬರೆದರು.


ನಾರೀಶಕ್ತಿ ಜಾಗೃತಿ ಕಾರ್ಯಾಗಾರ

ಯಲಹಂಕ ಜಿಲ್ಲೆ: ಮಾರ್ಚ್ 31ರ ಭಾನುವಾರ ಎಂ.ಇ.ಸಿ. ಶಾಲೆಯಲ್ಲಿ ಮಾತೃಶಕ್ತಿ ವಿಭಾಗದ ಸಹಯೋಗದೊಂದಿಗೆ ದುರ್ಗಾವಾಹಿನಿಯ ದುರ್ಗೆಯರಿಗಾಗಿ ನಾರೀಶಕ್ತಿ ಜಾಗೃತಿಯ ಕಾರ್ಯಗಾರವನ್ನು ಯೋಜಿಸಲಾಗಿತ್ತು.

ಜಿಲ್ಲಾ ಅಧ್ಯಕ್ಷರಾದ ಡಾ| ರತ್ನಾಕರ ಭಟ್, ಕಾರ್ಯದರ್ಶಿಗಳಾದ ಮಂಜುನಾಥ್, ಮಾತೃಶಕ್ತಿ ಸಂಯೋಜಕಿ ಶ್ರೀಮತಿ ನಾಗಮಣಿ ಮತ್ತು ದುರ್ಗಾವಾಹಿನಿ ಸಂಯೋಜಿಕೆ ಶ್ರೀಮತಿ ವನಿತಾ ರಾಮಾನುಜ ಉಪಸ್ಥಿತರಿದ್ದರು.

ಪ್ರಸ್ತುತದಲ್ಲಿ ಮಹಿಳೆಯರ ಜಾಗೃತಿಯ ಅಗತ್ಯವನ್ನೂ ಅದರಿಂದ ಸಮಾಜವು ಪಡೆಯುವ ಕೊಡುಗೆಯನ್ನು ಮಂಜುನಾಥರವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವಿಶದ ಪಡಿಸಿದರು. ಪ್ರಾಂತ ಉಪಾಧ್ಯಕ್ಷರಾದ ಟಿ.ಎ.ಪಿ. ಶೆಣೈಯವರು 'ಸಮಾಜದ ಪ್ರಗತಿಯಲ್ಲಿ ನಾರಿಯರ ಪಾತ್ರ ಇತಿಹಾಸದುದ್ದಕ್ಕೂ ಹರಿದು ಬಂದುದನ್ನು ವಿವರಿಸಿದರು. ಪ್ರಾಂತ ಧರ್ಮ ಪ್ರಸಾರದ ಮಹಿಳಾ ಪ್ರಮುಖ ಅಕ್ಷತಾ ಬಚ್ಚೆ ಲವ್ ಜಿಹಾದ್‌ ಭಯಾನಕ ಸತ್ಯವನ್ನು ಮುಂದಿಟ್ಟರು.

ದುರ್ಗೆಯರು ದಂಡ, ನಿಯುದ್ಧ ಯೋಗದ ಆಕರ್ಷಕ ಪ್ರದರ್ಶನವನ್ನು ನಡೆಸಿಕೊಟ್ಟರು ಜಿಲ್ಲಾ ಸಮಿತಿಯ ಸದಸ್ಯರೆಲ್ಲರೂ ಕಾರ್ಯಕ್ರಮದಲ್ಲಿದ್ದರು. ಹಲಸೂರು ಜಿಲ್ಲಾ ಮಾತೃಶಕ್ತಿ ಸಂಯೋಜಿಕೆ ಶ್ರೀವಿದ್ಯಾಜಿ ಬಂದುದು ವಿಶೇಷ ಉತ್ಸಾಹ ನೀಡಿತು. 80 ಉಪಸ್ಥಿತಿಯಿದ್ದ ಕಾರ್ಯಕ್ರಮದಲ್ಲಿ 35 ದುರ್ಗೆಯರು ಭಾಗವಹಿಸಿದರು. ಕಾರ್ಯಕ್ರಮವು ಬೌದ್ಧಿಕ, ವೈಚಾರಿಕ ಮತ್ತು ಶಾರೀರಿಕ ಅವಧಿಗಳೊಂದಿಗೆ ಪ್ರೇರಣಾತ್ಮಕವಾಗಿ ಪರಿಣಮಿಸಿತು.

- ವನಿತಾ ರಾಮಾನುಜ