Logo

VHP PUBLICATIONS

Hindu Vani


expand_more

ಪ್ರಸ್ತುತ

By ಶಾರದಾ ವಿ. ಮೂರ್ತಿ ಮೈಕೋ ಬಡಾವಣೆ, ಬೆಂಗಳೂರು

ಬಾಳು ಬೆಳಕಾಗಲಿ

ಎಲ್ಲಾ ಪೋಷಕರೂ ತಮ್ಮ ಮಕ್ಕಳನ್ನು ಸಾಧ್ಯವಾದಷ್ಟೂ ಚೆನ್ನಾಗಿ ಸಾಕಿ ಸಲಹುತ್ತಾರೆ, ಅವರ ಭವಿಷ್ಯದ ಬಗ್ಗೆ ಹೊಂಗನಸುಗಳನ್ನು ಕಾಣುತ್ತಾರೆ. ಕೆಲವೊಮ್ಮೆ ನಾನಾ ಕಾರಣಗಳಿಂದಾಗಿ ಮಕ್ಕಳ ಆಸೆಗಳನ್ನು ಈಡೇರಿಸಲಾಗದಿದ್ದರೆ ತಮ್ಮ ಅಸಹಾಯಕತೆಗಾಗಿ ಮರುಗುತ್ತಾರೆ.

ಕೆಲವು ಮಕ್ಕಳು ತಮ್ಮ ವಯಸ್ಸಿಗೆ ಮೀರಿದ ಪ್ರಬುದ್ಧತೆಯಿಂದ ನಡೆದುಕೊಂಡು ತಾಯ್ತಂದೆಯರ ಚಿಂತೆಯನ್ನು ಕಡಿಮೆ ಮಾಡುತ್ತಾರೆ. ತಮ್ಮ ಆಸೆಗಳನ್ನು ಹತ್ತಿಕ್ಕಿಕೊಂಡು ಮನೆಯಲ್ಲಿ ಸಂತೃಪ್ತ ಭಾವದಿಂದಲೇ ಇರುತ್ತಾರೆ. ಇಂತಹ ಮಕ್ಕಳಿದ್ದರೆ ತಾಯ್ತಂದೆಯರಿಗೆ ಅಷ್ಟಾಗಿ ಯೋಚನೆ ಇರದು.

ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಮಕ್ಕಳು ಆಕಾಶಕ್ಕೆ ಏಣಿ ಹಾಕುತ್ತಾರೆ. ತಾವೂ ಬೇಸರಿಸಿಕೊಂಡು ಮನೆಯವರಿಗೆಲ್ಲಾ ಬೇಸರ ಉಂಟುಮಾಡುತ್ತಾರೆ. ಮನೆಯ ಪರಿಸ್ಥಿತಿಯನ್ನು ಸ್ವಲ್ಪವೂ ಅರಿಯದೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿಯುತ್ತಾರೆ. ಕೈಗೊಡದಿದ್ದರೆ ಅವರ ಮನಸ್ಸಿನಲ್ಲಿ ಕೆಟ್ಟ ಕೆಟ್ಟ ಯೋಜನೆಗಳು ದಾಂಗುಡಿಯಿಡುತ್ತವೆ. ಅಶಾಂತಿಯಿಂದ ಬಳಲುತ್ತಾರೆ. ಅವರ ವರ್ತಮಾನವೇ ಅಯೋಮಯವಾಗಿ ಬಿಡುತ್ತದೆ.


ಪ್ರಸ್ತುತ

ಸುಮಾರು ನಡೆದ 8 ಎರಡು ತಿಂಗಳುಗಳ ಕೆಳಗೆ ಘಟನೆ ಈ ವಿಚಾರಗಳನ್ನು ಪುಷ್ಟಿಕರಿಸುವಂತಿತ್ತು. ನಾವು ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟ ಬಸ್‌ನಲ್ಲಿ ಸುಮಾರು ಹನ್ನೆರಡರ ಪ್ರಾಯದ ಹುಡುನೊಬ್ಬನಿದ್ದ. ಅಂಗಿ, ಚಡ್ಡಿ ಹಾಕಿಕೊಂಡು, ಸಣ್ಣದೊಂದು ಕೈಚೀಲ ಹಿಡಿದುಕೊಂಡಿದ್ದ. ಇಟ್ಟುಕೊಂಡ ನೋಟುಗಳ ಭಾರದಿಂದ ಜಗ್ಗಿದ ಜೇಬಿನಿಂದ ಒಂದೆರಡು ನೋಟುಗಳು ಹೊರಗೂ ಇಣುಕುತ್ತಿದ್ದವು.

ಅದು ರಾತ್ರಿ ಹೊರಡುವ ಬಸ್, ಕಂಡಕ್ಟರ್ ಎಲ್ಲರ ಬಳಿ ಟಿಕೆಟ್ ಪರೀಕ್ಷೆ ಮಾಡುವಾಗ ಆ ಬಾಲಕ ಗಾಬರಿಯಿಂದ ಬೆಂಗಳೂರಿಗೆ ಟಿಕೆಟ್ ಪಡೆಯಲು ಹಣ ತೆಗೆದುಕೊಟ್ಟ. ಹಣ ತೆಗೆಯುವಾಗ ಅವನ ಜೇಬಿನಿಂದ ಕೆಳಕ್ಕೆ ಬಿದ್ದ ಐನೂರರ ನೋಟನ್ನು ನೋಡಿದವರೊಬ್ಬರು ಅವನಿಗೆ ತೆಗೆದುಕೊಟ್ಟರು.

ಯಾವ ಊರಿಗೆ ಟಿಕೆಟ್ ಎಂದು ಹೇಳಲೂ ಹುಡುಗ ತುಸು ಹಿಂಜರಿಯುತ್ತಿದ್ದ. “ಏನಪ್ಪ ಹುಡುಗ...ನಿನ್ನೆ ಟಿಕೆಟ್ ಬೇಕೋ ಬೇಡವೋ” ಎಂದು ಕಂಡಕ್ಟರ್ ತುಸು ಜೋರಾಗಿ ಕೇಳಿದಾಗ ಬೆಂಗಳೂರಿಗೆ ಟಿಕೆಟ್ ಮಾಡಿಸಿದ್ದ ಹುಡುಗ. ಎಲ್ಲರಿಗೂ ಟಿಕೆಟ್ ಕೊಟ್ಟ ನಂತರ ಕಂಡಕ್ಟರ್ ಆ ಹುಡುಗನ ಬಳಿ ಬಂದಿದ್ದರು. “ಏನಪ್ಪ ನಿನ್ನ ಹೆಸರೇನು... ಏನಂತ ಕರೀಬೇಕಪ್ಪ.” ಹೀಗವರು ಕೇಳುತ್ತಿದ್ದರೆ ಬಸ್‌ನಲ್ಲಿದ್ದ ನಮಗೆಲ್ಲರಿಗೂ ಆ ಬಾಲಕನ ಬಗ್ಗೆ ಕಾಳಜಿ, ಕುತೂಹಲ..

ಅಷ್ಟು ಚಿಕ್ಕ ಹುಡುಗ ಒಬ್ಬನೇ ಪ್ರಯಾಣಿಸುತ್ತಿರುವುದು. ಹಾಗೆ ಜೇಬಿನಲ್ಲಿ ಹಣ ತುಂಬಿಕೊಂಡು ಬಂದಿರುವುದು, ಟಿಕೆಟ್ ಮಾಡಿಸುವಾಗ ಪರದಾಟ, ಹೆಸರು ಹೇಳಲು ಹಿಂಜರಿಯುವಿಕೆ ಇವೆಲ್ಲವೂ ನಮಗೆ ಆತನ ಬಗ್ಗೆ ಏನೇನೋ ಅನುಮಾನಗಳನ್ನು ಹುಟ್ಟು ಹಾಕಿದ್ದವು.

ಮಲಗಿಕೊಂಡು ಹೋಗುವ ಬಸ್ ಅದು. ಮುಂದೆ ಡ್ರೈವರ್, ಕಂಡಕ್ಟರ್ ಪಕ್ಕದಲ್ಲಿ ಕುಳಿತುಕೊಂಡು ಹೋಗುವ ಸೀಟ್ ಅವನಿಗೆ ಕೊಟ್ಟಿದ್ದರು.

ಆ ಹುಡುಗ ಹೆಸರು ಹೇಳಲೂ ಬಾಯಿ ಬಿಡದಿದ್ದಾಗ, “ಹೆಸರಿಲ್ಲೇನೋ ನಿನಗೆ ನೀನು ಮೂಕ ಅಂತೂ ಅಲ್ಲ... ಎಂದು ರೇಗಿದ್ದರು. ಕಪ್ಪಿಟ್ಟ ಹುಡುಗನ ಮುಖ ಕಂಡು ನಮಗೆ ಕನಿಕರವಾಗಿತ್ತು.

ಅತಿ ಸುಮಾರು ನಲವತ್ತು ನಲವತ್ತೈದರ ಮಹಿಳೆಯೊಬ್ಬರು ಕಳಕಳಿಯಿಂದ ಮೃದುಸ್ವರದಲ್ಲಿ ಹುಡುಗನನ್ನು ವಿಚಾರಿಸಿದ್ದರು. ಏನೋ ಪಟ್ಟ ನಿನ್ನ ಹೆಸರು ನಾನು ಟೀಚರ್ ಆಗಿದ್ದೀನಿ. ನನ್ನ ಹತ್ತಿರ ಯಾವ ವಿದ್ಯಾರ್ಥಿಗಳೂ ಗುಟ್ಟು ಮಾಡೋದಿಲ್ಲ. ನೀನು ಏನು ಓದುತ್ತಿದ್ದೆ.. ಹೆಸರೇನು.. ಬೆಂಗಳೂರಿಗೆ ಯಾಕೆ ಹೋಗ್ತಾ ಇದ್ದೆ.. ಏನೂ ಮುಚ್ಚುಮರೆ ಮಾಡದೆ ಹೇಳೇಕು. ಸರಿಯಾ... ಉಹುಂ... ಬಾಲಕ ಬಾಯಿ ಬಿಡಲೇ ಇಲ್ಲ. ಆದರೆ ಆಕೆ ಮರಳಿ ಯತ್ನವ ಮಾಡಿದ್ದರು. “ನೀನಿನ್ನೂ ಚಿಕ್ಕವನು.. ಇಷ್ಟೊಂದು ಹಣ ಇಡ್ಕೊಂಡು ಪ್ರಯಾಣ ಮಾಡ್ತಿದ್ದೀಯಾ.. ಬೆಂಗಳೂರಿನಂತಹ ದೊಡ್ಡ ಊರಿನಲ್ಲಿ ನೀನು ಮೋಸ ಹೋಗಿ ಬಿಡ್ತೀಯಾ.. ಯಾರಾದ್ರೂ ಬಂದು ನಿನಗೆ ಹೆದರಿಸಿ ಹೊಡೆದು, ಬಡಿದೂ ದುಡ್ಡು ಎಗರಿಸ್ತಾರಪ್ಪ. ಆಮೇಲೆ ನಿನ್ನನ್ನೂ ಕಕ್ಕೊಂಡು ಹೋಗಿ ಭಿಕ್ಷೆ ಬೇಡೋಕೆ, ಕಳಿಸ್ತಾರೆ. ಆಮೇಲೆ ಅವರಿಂದ ತಪ್ಪಿಸಿಕೊಳ್ಳೋಕೇ ಆಗೋಲ್ಲ. ಯೋಚನೆ ಮಾಡಿ ಹೇಳು ಇಲ್ಲಿಂದ ಎಲ್ಲಿ ಹೋಗಿ ಉಳಿದುಕೊಳ್ಳುತ್ತೀಯಾ.. ಮುಂದೇನು.. ಈಗಲೂ ಬಾಯಿ ಬಿಡೋಲ್ಲ ಅಂದ್ರೆ ನಿನಗೆ ಇಷ್ಟ ಬಂದ ಹಾಗೆ ಮಾಡಿಕೋ ಎಂದು ತಿಳಿ ಹೇಳಿದಾಗ ಅಲ್ಲಿದ್ದ ನಾವೆಲ್ಲರೂ ದನಿಗೂಡಿಸಿದ್ದೆವು.

“ನಾವು ಕೆಲಸ ಮಾಡುವಾಗ ಊರೂರು ಸುತ್ತುವವರು. ಇಂತಹ ಎಷ್ಟೋ ಕಥೆ ನೋಡ್ತಾ ಇದ್ದೀವಿ. ನಿನ್ನಿಷ್ಟ. ಏನಾದ್ರು ಮಾಡಿಕೋ.” ನಿರ್ವಾಹಕರು ತುಸು ಏರುದನಿಯಲ್ಲಿ ನುಡಿಯುವಾಗ ಅವರ ಮನಸ್ಸು ಬಾಲಕನಿಗಾಗಿ ಮಿಡಿಯುತ್ತಿರುವಂತೆನಿಸಿತ್ತು. “ಮನೆಯಲ್ಲಿ ಬಡತನ.. ಕೆಲಸಕ್ಕೆ ಸೇರಲು ಬಂದೆ. ಎಂದು ತೊದಲುತ್ತಾ ನುಡಿದ ಹುಡುಗನಿಗೆ ಏನನ್ನಿಸಿತೋ ತನ್ನ ವಿಷಯವನ್ನೆಲ್ಲಾ ತೆರೆದಿಟ್ಟಿದ್ದ.

ರವಿ ಎಂಬ ಹೆಸರಿನ ಈ ಹುಡುಗನಿಗೆ ಶಾಲೆ, ಓದು, ಹೋಂವರ್ಕ್ ಒಂದೂ ಹಿಡಿಸದು. ತಂದೆ ಇಲ್ಲ. ತಾಯಿ ಟೈಲರಿಂಗ್‌ನಿಂದ ದುಡಿಯುತ್ತಿದ್ದಾರೆ. ಅವರಿಗೆ ಎರಡು ಹೆಣ್ಣು ಒಂದು ಗಂಡು ಒಟ್ಟು ಮೂರು ಮಕ್ಕಳು.

ಏಳನೆಯ ತರಗತಿ ಓದುತ್ತಿರುವ ರವಿಯೇ ಚಿಕ್ಕವನು. ದೊಡ್ಡಕ್ಕ ಖಾಸಗಿ ಶಾಲೆಯೊಂದದಲ್ಲಿ ಶಿಶುವಿಹಾರದ ಶಿಕ್ಷಕಿ, ಮತ್ತೊಬ್ಬಳು ಮೊದಲ ವರ್ಷದ ಪಿ.ಯು.ಸಿ. ಓದುತ್ತಿದ್ದಾಳೆ. ಚೆನ್ನಾಗಿ ಓದಿಕೊಳ್ಳುವಂತೆ ಹೇಳುವ ಅಕ್ಕ ಅಮ್ಮಂದಿರ ಮಾತು ಇವನಿಗೆ ಅಪಥ್ಯವಾಗುತ್ತದೆ. ಓದಿನಲ್ಲಿ ಆಸಕ್ತಿಯಿರದ ಅವನಂತಹವರೇ ಇಬ್ಬರು ಆತ್ಮೀಯ ಸ್ನೇಹಿತರು. ಮೂರು ಮಂದಿಯೂ ಒಟ್ಟಿಗೆ ಹೋಗುವುದೆಂದು ತಂತ್ರ ಹೆಣೆದಾಗಿತ್ತು. ಆದರೆ ಮನೆಯನ್ನು ಬಿಟ್ಟು ಬರಲು ಭಯವೆಂದು ಉಳಿದ ಇಬ್ಬರು ಕೊನೆಯ ಕ್ಷಣದಲ್ಲಿ ಬರದೆ ಉಳಿದುಕೊಂಡರು.

ಸಣ್ಣ ಅಕ್ಕನ ಶುಲ್ಕಕ್ಕೆ, ಹಳೆಯ ಕಂಪ್ಯೂಟರ್ ಖರೀದಿಸುವುದಕ್ಕೆಂದು ದೊಡ್ಡ ಅಕ್ಕ ತಂದಿಟ್ಟಿದ್ದ ಹಣ ರವಿಯ ಆಶೆಗೆ ವರವಾಗಿ ಪರಿಣಮಿಸಿತ್ತು. ಅದನ್ನು ತೆಗೆದುಕೊಂಡು ಯಾರಿಗೂ ಹೇಳದೆ ಹೊರಟಿದ್ದಾನೆ ಹುಡುಗ. ಹಳ್ಳಿಯಿಂದ ತುಸುದೂರ ನಡೆದು ಬಸ್‌ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದಾನೆ. ನಂತರ ರಾತ್ರಿಯ ಬೆಂಗಳೂರಿನ ಬಸ್‌ ಹಿಡಿದಿದ್ದಾನೆ. ಕೆಲಸಕ್ಕೆ ಸೇರುವುದಾಗಿ ಯೋಚಿಸಿದ್ದ ಹುಡುಗನಿಗೆ ಯಾವ ಹೋಟೆಲ್ ಅವರದೂ ಪರಿಚಯವೇ ಇಲ್ಲ. ಮುಖ ಕೆಳಕ್ಕೆ ಹಾಕಿಕೊಂಡೇ ಎಲ್ಲವನ್ನೂ ಹೇಳುತ್ತಿದ್ದ ರವಿಯ ಕಂಗಳಲ್ಲಿ ನೀರು ತುಂಬಿಕೊಂಡಿತ್ತು. ಹೋಟೆಲ್

ಮನೆಗೆ ಫೋನ್ ಮಾಡುವುದಾಗಿ ಎಲ್ಲರೂ ಹೇಳಿದಾಗ ಅವನಿಗೆ ಮತ್ತಷ್ಟು ಭಯ. “ತಪ್ಪು ಒಪ್ಪಿಕೊಳ್ಳುವುದು ಅವಮಾನವಲ್ಲ. ನೀನಾಗಿಯೇ ನಿನ್ನ ಬದುಕನ್ನು ಹಾಳು ಮಾಡಿಕೊಳ್ಳಬೇಡ. ನೀನಿನ್ನೂ ಚಿಕ್ಕವನು. ಚೆನ್ನಾಗಿ ಬದುಕಿ ಬಾಳಬೇಕು. ಅಮ್ಮ, ಅಕ್ಕಂದಿರು ನಿನ್ನ ಒಳ್ಳೆಯದಕ್ಕಾಗಿಯೇ ಹೇಳುವುದಲ್ಲವೇ? ಅವರ ಮನಸ್ಸಿಗೆ ಬೇಸರ ಉಂಟು ಮಾಡಬೇಡ. ಅವರೆಲ್ಲರೂ ನಿನಗಾಗಿ ಹುಡುಕುತ್ತಾ ಅದೆಷ್ಟು ದುಃಖಿಸುತ್ತಿದ್ದಾರೋ... ಅವರು ನಿನ್ನನ್ನು ಬೈಯುವುದಿಲ್ಲ. ನೀನು ಅವರ ಕ್ಷಮೆ ಕೇಳಿಕೋ, ಒಳ್ಳೆಯ ಹುಡುಗನಾಗಿ ಎಲ್ಲರ ಮೆಚ್ಚುಗೆ ಗಳಿಸು.”

ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರ ಮಾತು ಅವನಿಗೆ ಸರಿಯೆಂದು ಕಂಡಿರಬೇಕು. ಕೊಟ್ಟ ದೂರವಾಣಿ ಸಂಖ್ಯೆಗೆ ಅವನಮ್ಮನಿಗೆ ಫೋನ್ ಮಾಡಿದ್ದೂ ಆಯಿತು. ಆತಂಕದಲ್ಲಿದ್ದ ಅವರಿಗೆ ಮಗನ ಸುಳಿವು ತಿಳಿದು ಸಂತೋಷವಾಗಿತ್ತು.

ಬೆಂಗಳೂರಿನಲ್ಲಿರುವ ಅವರ ಸಂಬಂಧಿಕರೊಬ್ಬರಿಗೆ ಬಸ್‌ ಸ್ಟ್ಯಾಂಡ್‌ಗೆ ಬಂದು ರವಿಯನ್ನು ಕರೆದುಕೊಂಡು ಹೋಗುವಂತೆ ತಿಳಿಸುವುದಾಗಿ ಹೇಳಿದ್ದರು. ಕೊನೆಗೂ ರವಿಯು ತಾಯಿಯೊಂದಿಗೆ ಕ್ಷಮೆ ಕೇಳಿ ಸಂಬಂಧಿಕರೊಂದಿಗೆ ಬರಲು ಒಪ್ಪಿಕೊಂಡಿದ್ದ.

ಅಂತೂ ಮುಂದೆ ಎಲ್ಲವೂ ಸುಖಾಂತವಾಗಿತ್ತು. ರವಿ ನಮ್ಮ ಮಾತಿಗೆ ಒಪ್ಪಿದ್ದರಿಂದ ನಾವೆಲ್ಲಾ ನಿರಾಳವಾಗಿ ನಿದ್ರಿಸಿದೆವು. ಬೆಂಗಳೂರಿಗೆ ಬಂದಾಗ ರವಿಯ ಸಂಬಂಧಿಕರು ಕಾಯುತ್ತಿದ್ದುದನ್ನು ಕಂಡು ನಮ್ಮ ಪ್ರಯತ್ನ ಯಶಸ್ವಿಯಾಗಿದ್ದಕ್ಕಾಗಿ ಸಾರ್ಥಕ ಭಾವ ಉಂಟಾಗಿತ್ತು.

ಈ ಘಟನೆ ನಮ್ಮ ಯೋಚನೆಗಳಿಗೆ ಒಂದಿಷ್ಟು ಗ್ರಾಸವಾಗಿತ್ತು. ಪ್ರತಿದಿನವೂ ಎಷ್ಟು ಮಕ್ಕಳು ತಾವಾಗಿಯೇ ತಮ್ಮ ಬದುಕನ್ನು ದುರಂತಕ್ಕೆ ಒಡ್ಡಿಕೊಳ್ಳುವರೋ ಎಂಬ ಕಲ್ಪನೆಯೇ ವಿಷಾದವೆನಿಸಿತ್ತು. ಹೆಣ್ಣು ಮಕ್ಕಳಾದರೆ ಮತ್ತಷ್ಟು ಕಷ್ಟ. ಇಂತಹ ಘಟನೆಗಳು ಮರುಕಳಿಸಿದಿರಲಿ ಎಂಬ ಹಾರೈಕೆ ನಮ್ಮೆಲ್ಲರದಾಗಿತ್ತು.

ಮಕ್ಕಳು ಶಾಲೆಗೆ ಹೋಗುವಾಗಲೋ ಬೇರೆಲ್ಲಾದರೂ ಓಡಾಡುವಾಗಲೇ ಅಪಹರಿಸಿಕೊಂಡು ಹೋಗುವ ವಂಚಕರ ಬಗ್ಗೆ ಪತ್ರಿಕೆಯಲ್ಲಿ ಓದುತ್ತಲೇ ಇರುತ್ತೇವೆ.

ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು, ಅವರ ಚಟುವಟಿಕೆಗಳನ್ನು ಅವರ ಸ್ನೇಹಿತರನ್ನು ಗಮನಿಸುತ್ತಾ ಇರುವುದು ತುಂಬಾ ಅಗತ್ಯ. ಮಕ್ಕಳೊಂದಿಗೆ ಪೋಷಕರು ಸಾಧ್ಯವಾದಷ್ಟು ಸಮಯ ಕಳೆಯುತ್ತಾ, ಅವರ ಸಮಸ್ಯೆಗಳನ್ನು ಅರ್ಥೈಸಿಕೊಂಡು, ಪರಿಹಾರ ಹೇಳಿ, ಸಂತೈಸಿ, ಅವಶ್ಯಕವಿದ್ದಾಗ ಧೈರ್ಯ ತುಂಬಬೇಕು. ಶಾಲೆಯಲ್ಲಿ ಮಕ್ಕಳು ಸರಿಯಾಗಿ ಇದ್ದಾರೆಯೇ? ಏನಾದರೂ ತೊಂದರೆ ಇದೆಯೇ... ಪಾಠಗಳು ಅರ್ಥವಾಗುತ್ತಿಲ್ಲವೆ? ಶಿಕ್ಷಕರ ಅಭಿಪ್ರಾಯವೇನು ಎಂಬುದೆಲ್ಲವನ್ನೂ ತಿಳಿದುಕೊಂಡು ಮಕ್ಕಳನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುವ ಜವಬ್ದಾರಿಯೂ ಪೋಷಕರದ್ದೇ ಆಗಿದೆ.

ಮಕ್ಕಳು ತಮ್ಮ ಶಾಲೆ, ಶಿಕ್ಷಕರು, ಸಹ ಅಧ್ಯಾಯಿಗಳ ಬಗ್ಗೆ ಪೋಷಕರೆಲ್ಲ ಹಂಚಿಕೊಂಡರೆ ಚಿಂತೆಯಿರದು. ಅಂತರ್ಮುಖಿಗಳಾಗಿ ಎಲ್ಲವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಪರಿಹಾರಕ್ಕಾಗಿ ತಪ್ಪಾಗಿ ಆಯ್ಕೆ ಮಾಡಿಕೊಂಡರೆ ಜೀವನವೇ ದುರ್ಭರವಾದೀತು.

ಪ್ರತಿಯೊಂದು ಮಗುವೂ ಸ್ವಚ್ಛಂದವಾಗಿ ಬಾಲ್ಯವನ್ನು ಅನುಭವಿಸುತ್ತಾ, ಸುಂದರ ಕನಸುಗಳನ್ನು ಕಾಣುತ್ತಾ ಒಳ್ಳೆಯ ವಿದ್ಯಾರ್ಥಿಯಾಗಿ ಮುಂದೆ ಸತ್ಪಜೆಯಾಗಿ ಬದುಕು ಕಟ್ಟಿಕೊಳ್ಳಲಿ ಎಂಬ ಆಶಯ ಎಲ್ಲಾ ಹಿರಿಯರದು.

ಪ್ರಸ್ತುತ

.