Hindu Vani
Index
ಕ್ಷೇತ್ರದರ್ಶನ
ತೊಂಡನೂರು ಶ್ರೀಯೋಗಾನರಸಿಂಹ ಕ್ಷೇತ್ರ
ಮಂತ್ರ, ತೀರ್ಥಕ್ಷೇತ್ರ, ವಿಪರು, ದೇವರು, ದೈವಜ್ಞರು, ವೈದ್ಯರು, ಗುರುಗಳಲ್ಲಿ ನಮ್ಮ ನಂಬಿಕೆ ವಿಶ್ವಾಸ ಹೇಗೆ ಇರುತ್ತದೋ ಹಾಗೆ ಅದಕ್ಕನುಗುಣವಾಗಿ ಫಲ ಪ್ರಾಪ್ತಿಯಾಗುವುದು.
ಯದ್ಭಾವಂ ತದ್ಭವತಿ ಎಂಬಂತೆ ನಿಮ್ಮ ಭಾವಕ್ಕೆ ತಕ್ಕಂತೆ ನೀವು ರೂಪಿತರಾಗುತ್ತೀರಿ. ಹಾಗಾಗಿಯೇ ನಮ್ಮ ಅನುಭವೀ ಹಿರಿಯರು ಧನಾತ್ಮಕ ಚಿಂತನೆಯಲ್ಲಿರುವುದು ಉತ್ತಮ ಎಂದಿದ್ದಾರೆ. ಎಲ್ಲಾ ಕಲ್ಲು ಶಿಲ್ಪವಾಗುವುದಿಲ್ಲ. ಶಿಲ್ಪಿಗೆ ಕಲ್ಲನ್ನು ಉತ್ತಮ ಶಿಲ್ಪವಾಗಿಸಬಲ್ಲ ಕಲೆಯಿದ್ದರೂ, ನೈಪುಣ್ಯತೆ ಇದ್ದರೂ ಶಿಲ್ಪವಾಗುವ ಯೋಗ್ಯತೆ ಲಕ್ಷಣ ಆ ಕಲ್ಲಿಗೂ ಇರಬೇಕು. ಕುಂಬಾರನಿಗೆ ಮಣ್ಣಿನಿಂದ ಸುಂದರ ಕಲಾಕೃತಿ ರಚಿಸುವ ನೈಪುಣ್ಯತೆ ಇದ್ದರೂ ಅವನು ಬಳಸುವ ಆ ಮಣ್ಣಿಗೆ ಕಲೆಯಾಗುವ ಲಕ್ಷಣವಿರಬೇಕು ಎಲ್ಲಾ ಮಣ್ಣಿನಿಂದಲೂ ಕಲೆ ಅರಳದು. ಅಂತೆಯೇ ನಮ್ಮ ಭಾವನೆಗಳು ನಮ್ಮ ಜೀವನವನ್ನು ಉತ್ತಮವಾಗಿಸಬಲ್ಲವು.
ಅಂತೆಯೇ ನಮ್ಮ ನಂಬಿಕೆ ದೇವರು, ತೀರ್ಥಕ್ಷೇತ್ರಗಳು, ಮಂತ್ರ ಪೂಜೆ ಇತ್ಯಾದಿಗಳಲ್ಲಿ ಅಪಾರವಾಗಿದೆ. ಕರ್ನಾಟಕದ ಜಿಲ್ಲೆಗಳಲ್ಲಿ ಇತಿಹಾಸ ಪ್ರಸಿದ್ದ ಅನೇಕ ನರಸಿಂಹ ದೇಗುಲಗಳಿವೆ. ಮೈಸೂರಿನ ತಿರುಮಕೂಡಲು, ಹೆಡೆತಲೆ, ಸೋಮನಾಥಪುರ, ಸಾಲಿಗ್ರಾಮ, ಹಾಸನದ ಶಾಂತಿಗ್ರಾಮ, ಮುದಿಗೆರೆ ನುಗ್ಗೆಹಳ್ಳಿ, ಗೊರೂರು, ಜಾವಗಲ್, ಅರಕೆರೆ, ಹೊಳೆನರಸಿಪುರ, ಹೊಳಲು, ಹಾರನಹಳ್ಳಿ, ರಾಮನಗರದ ಶುಕಪುರಿ, ಸಾವನದುರ್ಗ, ಕೂರಣಗೆರೆ, ತುಮಕೂರಿನ ಸೀಬಿ, ಕಡಬ, ಶೇಷೇನಹಳ್ಳಿ ದೇವರಾಯನದುರ್ಗ, ನೊಣವಿನಕೆರೆ, ಚಿಕ್ಕಮಗಳೂರಿನ ತಂಗಲೀ ಬಗ್ಗವಳ್ಳಿ, ಬೆಳವಾಡಿ, ಮಚೇರಿ, ಮುಗುಳಾದ್ರಿ, ಬೆಂಗಳೂರಿನ ಮಲ್ಲೇಶ್ವರಂ, ಬಳೇಪೇಟೆ, ತಿರುಮಲಗಿರಿ, ಅಹೋಬಿಲಮಠ ಪ್ರಕಾಶನಗರ, ಕಮ್ಮಸಂದ್ರ ಶಿವಾಜಿನಗರ, ಮೈಸೂರಿನ ಅಹೋಬಿಲ ಮಠ, ವಿಜಯನಗರ, ಉಡುಪಿಯ ಸಾಲಿಗ್ರಾಮ, ಚಿಕ್ಕಬಳ್ಳಾಪುರದ ಜಾಲಾರಿ, ಧೇನುಗಿರಿ, ಬೀದರನ ಝರಣಿ, ಬಿಜಾಪುರದ ತೊರವಿ, ಬಾಗಲಕೋಟೆಯ ಶುರ್ಫಾಲಿ, ಶಿವಮೊಗ್ಗದ ಭದ್ರಾವತಿ, ಮಂಡ್ಯದ ಮಾರೇನಹಳ್ಳಿ, ಕಿಕ್ಕೇರಿ, ಅಕ್ಕಿ ಹೆಬ್ಬಾಳು, ನಿಲಿವಾಗಿಲು, ನಾಗಮಂಗಲ, ಹೊಸಹೊಳಲು, ಮದ್ದೂರು ಮೇಲುಕೋಟೆ, ದಿದ್ದ ಕೋಟೆಬೆಟ್ಟ ತೊಂಡನೂರು ಇತ್ಯಾದಿ ಕ್ಷೇತ್ರಗಳಲ್ಲಿ ಶ್ರೀ ನರಸಿಂಹರು ಲಕ್ಷ್ಮೀ ಸಹಿತರಾಗಿ ಶ್ರೀದೇವಿ ಭೂದೇವಿ ಸಹಿತರಾಗಿ, ಯೋಗ ಭೋಗನಾಗಿ ನೆಲೆ ನಿಂತಿದ್ದಾರೆ.
ಹೀಗೆ ಶ್ರೀ ನರಸಿಂಹ ಸ್ವಾಮಿಯು ನೆಲೆ ನಿಂತು ಇಂದಿಗೂ ಅಪಾರ ಭಕ್ತ ಜನರಿಂದ ಪೂಜಿಸಲ್ಪಡುತ್ತಿರುವ ಪವಿತ್ರ ಕ್ಷೇತ್ರಗಳಲ್ಲಿ ತೊಂಡನೂರು ಶ್ರೀ ಯೋಗಲಕ್ಷ್ಮೀನರಸಿಂಹ ಕ್ಷೇತ್ರವು ಪ್ರಮುಖವಾದದ್ದು. ಈ ಕ್ಷೇತ್ರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ತೊಂಡನೂರಿನಲ್ಲಿದೆ. ಈ ಕ್ಷೇತ್ರವು ಶ್ರೀ ಯೋಗಾ ನರಸಿಂಹ ಕ್ಷೇತ್ರವೆಂದು ಕೀರ್ತನೆಗಳಿಂದ ಪ್ರಸಿದ್ಧವಾಗಿದೆ.
ಕಾಲ ಇತಿಹಾಸ ಹಿನ್ನೆಲೆ: ಈ ಕ್ಷೇತ್ರವು ಸುಮಾರು 1000 ವರ್ಷಗಳ ಇತಿಹಾಸವನ್ನು ಹೊಂದಿದೆ. 11 ಹಾಗು 12 ನೇ ಶತಮಾನದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಂಡ ಕೇತ್ರವಾಗಿದೆ. ಹಿಂದೆ ಹೊಯ್ಸಳ ಸಾಮ್ರಾಜ್ಯ ಆಳಿದ ಕಾಲದಲ್ಲಿ ಪ್ರಸಿದ್ಧ ರಾಜ ವಿಷ್ಣುವರ್ಧನನಿಂದಲೂ ಶ್ರೀರಾಮಾನುಜರು ಬಹಳ ವರ್ಷಗಳ ಇಲ್ಲಿ ನೆಲೆನಿಂತುದರಿಂದ ಇಲ್ಲಿ ಶ್ರೀಯೋಗನರಸಿಂಹನ ದೇಗುಲವು ಸ್ಥಾಪನೆಯಾಯಿತು. ವಿಷ್ಣುವರ್ಧನನು ತಲಕಾಡಿನ ಚೋಳರೊಂದಿಗೆ ವಿಜಯ ಸಾಧಿಸಿದ ನೆನಪಿಗಾಗಿ ಪಂಚನಾರಾಯಣ ದೇಗುಲಗಳು ಮರುಸ್ಥಾಪನೆಗೊಂಡವು ಅವುಗಳಲ್ಲಿ ತೊಂಡನೂರು ಕ್ಷೇತ್ರವು ಒಂದಾಗಿದೆ. ಈ ಕ್ಷೇತ್ರವು ಹೊಯ್ಸಳರ ಎರಡನೆಯ ರಾಜಧಾನಿಯಾಗಿತ್ತೆಂದು ತಿಳಿದುಬರುತ್ತದೆ.
ಪಂಚ ನಾರಾಯಣ ಕ್ಷೇತ್ರಗಳು: ತಲಕಾಡಿನ ಕೀರ್ತಿನಾರಾಯಣ, ಬೇಲೂರಿನ ಸೌಮ್ಯನಾರಾಯಣ, ಗದಗಿನ ವೀರನಾರಾಯಣ, ಮೇಲುಕೋಟೆಯ ಚೆಲುವನಾರಾಯಣ, ತೊಂಡನೂರಿನ ನಂಬಿನಾರಾಯಣ, ಪಂಚನಾರಾಯಣ ಕ್ಷೇತ್ರಗಳೆಂದು ಹೆಸರು ಪಡೆದಿವೆ.
ಪೌರಾಣಿಕ ಹಿನ್ನೆಲೆ: ಇಲ್ಲಿನ ಶ್ರೀ ಯೋಗಾನರಸಿಂಹ ಸ್ವಾಮಿಯು ಶ್ರೀಪಾದರಾಜರಿಂದ ಸ್ಥಾಪಿತವಾಗಿದೆಯೆಂದು ಹೇಳಲಾಗುತ್ತದೆ. ಸುಮಾರು 5000 ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಹಾಗಾಗಿ ತನ್ನದೇ ಆದ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ.
ಹಿಂದೆ ದೇವಾನುದೇವತೆಗಳಿಗೂ ರಾಕ್ಷಸರಿಗೂ ಯುದ್ಧ ನಡೆದಾಗ ದೇವೇಂದ್ರನು ಬ್ರಹ್ಮಹತ್ಯಾ ದೋಷಕ್ಕೆ ಒಳಗಾಗುತ್ತಾನೆ. ಅದರ ಪರಿಹಾರಕ್ಕಾಗಿ ಪಂಚ ಕ್ಷೇತ್ರಗಳಲ್ಲಿ ನಾರಾಯಣನನ್ನು ಕುರಿತು ಪೂಜಿಸಿ ಬ್ರಹ್ಮಹತ್ಯಾ ದೋಷವನ್ನು ಪರಿಹರಿಸಿಕೊಂಡನು. ಅಂತಹ ಪವಿತ್ರ ಕ್ಷೇತ್ರಗಳಲ್ಲಿ ಇಲ್ಲಿನ ನಂಬಿನಾರಾಯಣ ಕ್ಷೇತ್ರವು ಮೊದಲಿನದು. ನಂತರದ ಕಾಲದಲ್ಲಿ ಶ್ರೀ ರಾಮಾನುಜರು ಇಲ್ಲಿಗೆ ಆಗಮಿಸಿ ಹತ್ತಾರು ವರ್ಷಗಳು ಈ ಕ್ಷೇತ್ರದಲ್ಲಿ ನೆಲೆಸಿ ತಪಗೈದ ಪವಿತ್ರ ಕ್ಷೇತ್ರವಾಗಿದೆ.
ಕ್ಷೇತ್ರದ ವಿಶೇಷತೆ: ಹೊಯ್ಸಳ ಅರಸ ವಿಷ್ಣುವರ್ಧನನು ತನ್ನ ಮಗಳಿಗೆ ಒದಗಿದ್ದ ಅನಾರೋಗ್ಯವನ್ನು ಯೋಗನರಸಿಂಹ ದಂಡದಿಂದ ಶ್ರೀ ರಾಮಾನುಜರು ಪರಿಹರಿಸಿದ ಕಾರಣ ಪ್ರಭಾವಿತನಾಗಿ, ಜೈನನಾಗಿದ್ದವನು ವೈಷ್ಣವ ಮತಾವಲಂಬಿಯಾಗುತ್ತಾನೆ. ಶ್ರೀರಾಮಾನುಜರ ಸಲಹೆಯ ಮೇರೆಗೆ ಪಂಚ ನಾರಾಯಣ ದೇಗುಲಗಳ ಅಭಿವೃದ್ಧಿಗೆ ತೊಡಗುತ್ತಾನೆ. ಇದರಿಂದ ಕೋಪಗೊಂಡ ಸಾವಿರಾರು ಜೈನರು ಒಂದೇ ಬಾರಿಗೆ ಶ್ರೀ ರಾಮಾನುಜರಿದ್ದ ಸ್ಥಳಕ್ಕೆ ಆಗಮಿಸಿ, ಸಾವಿರ ಪ್ರಶ್ನೆಗಳನ್ನು ಕೇಳುತ್ತಾರೆ. ದೇವರ ಪೂಜಾಕಾರ್ಯದಲ್ಲಿದ್ದ ಆಚಾರ್ಯರು ಬಿಳಿ ಪರದೆಯ ಹಿಂದಿನಿಂದಲೇ ಸಾವಿರ ಪ್ರಶ್ನೆಗಳಿಗೂ ಆದಿಶೇಷನ ರೂಪದಲ್ಲಿ ಉತ್ತರಿಸುತ್ತಾರೆ. ಇದನ್ನರಿತ ಜೈನ ಸನ್ಯಾಸಿಗಳು ಕ್ಷಮೆಯಾಚಿಸಿ ತೆರಳುತ್ತಾರೆ.
ಶ್ರೀರಾಮಾನುಜರು ಈ ಕ್ಷೇತ್ರಕ್ಕೆ ತಾವು ಬಂದ ಕಾರ್ಯವನ್ನು ಮುಗಿಸಿ ಶ್ರೀರಂಗಂಗೆ ಹಿಂದಿರುಗಲು ಸಿದ್ಧರಾದಾಗ ಇಲ್ಲಿನ ಭಕ್ತರು ಆಚಾರ್ಯರನ್ನು ಇಲ್ಲಿಯೇ ಉಳಿಯುವಂತೆ ಕೋರುತ್ತಾರೆ. ಆಗ ಆಚಾರ್ಯರು ತಮ್ಮ ಒಂದು ವಿಗ್ರಹವನ್ನು ಸ್ಥಾಪಿಸಿ ತಾನು ಈ ರೂಪದಲ್ಲಿ ಇಲ್ಲಿಯೇ ನೆಲೆಸಿರುತ್ತೇನೆಂದು ಹೇಳಿ ಹೊರಡುತ್ತಾರೆ. ಇಂದಿಗೂ ಈ ವಿಗ್ರಹ ಬೆವರುತ್ತದೆ. ಹಾಗಾಗಿ ಆಚಾರ್ಯರು ಇಲ್ಲಿಯೇ ಇದ್ದಾರೆಂದು ಭಕ್ತರು ನಂಬಿದ್ದಾರೆ. ಆದಿಶೇಷನಾಗಿ ರಾತ್ರಿ ಸಮಯ ಸಂಚರಿಸುತ್ತಾರೆಂದು ಹೇಳಲಾಗುತ್ತದೆ.
ಶ್ರೀ ಯೋಗಾನರಸಿಂಹ ದೇಗುಲ: ಶ್ರೀ ಯೋಗಾನರಸಿಂಹ ದೇಗುಲದ ವಿಗ್ರಹವು ಶ್ರೀಶ್ರೀಪಾದರಾಜರಿಂದ ಸ್ಥಾಪಿತವಾದುದೆಂದು ಹೇಳಲಾಗುತ್ತದೆ. ದೇಗುಲದ ಕಾಲಜ್ಞಾನ ಆಧಾರಗ್ರಂಥಿಯನ್ನು ಕಂಡು ಈ ದೇಗುಲ ದ್ವಾಪರ ಕೊನೆಯಲ್ಲಿ ನಿರ್ಮಾಣವಾಗಿದೆ. ಈ ದೇಗುಲಕ್ಕೆ ದೊಡ್ಡದಾದ ಕಲ್ಯಾಣಿ ಕುಂಟೆ ಮಾಹಿತಿ ನೀಡುವ ಕಲ್ಲಿನ ಯುಗ ಕಾಲದ ಶಾಸನಗಳು ಈ ದೇಗುಲದ ದಾಖಲೆಗಳಾಗಿವೆ.
ದೇವಾಲಯದ ಒಳಬದಿಯ ಮೇಲಿನ ಚಪ್ಪರ ಕಲ್ಲಿನ ಮೇಲ್ಬಾಗಗಳನ್ನು ಎತ್ತಿ ಸವೆದಿದೆ ಎತ್ತರದ ಪ್ರದೇಶದಲ್ಲಿ ಮೈಬಾಡಿಯಲ್ಲಿ ಮತ್ತು ಮಂಚಬಡಿಯಲ್ಲಿ ಒಂದೊಂದು ಮಂಟಪ ನಿರ್ಮಿಸಿ, ಪುಷ್ಕರಣಿ ಗದ್ದೆ, ಗರ್ಭಗೃಹ ಹೊಂದಿರುವ ಈ ದೇಗುಲ ನಿರ್ಮಾಣವಾಗಿದೆ. ಕಲ್ಲಿನ ಕಂಬಗಳಿಂದ ಆವೃತವಾದ ಗರ್ಭಗೃಹದಲ್ಲಿ ಸಾಲಿಗ್ರಾಮ ಶಿಲೆಯ ದಂಡ ಸಹಿತ ಶ್ರೀಯೋಗಾನರಸಿಂಹರ ಮೂರ್ತಿ ಭಂಗಿಯಲ್ಲಿ ಆಚಾರ್ಯರು ವಿರಾಜಮಾನರಾಗಿದ್ದಾರೆ. ಇಲ್ಲಿ ಆರಾಧಕರಷ್ಟೇ ಆರಾಧನಾಕಾರರಲ್ಲದ ಶ್ರೀ ರಾಮಾನುಜರು ನೆಲೆಸಿದ್ದಾರೆ.ಅವರು ಬಳಸುತ್ತಿದ್ದ ಪವಿತ್ರ ಬೆತ್ತವನ್ನ ಯೋಗನರಸಿಂಹದಂಡ ಎನ್ನುತ್ತಾರೆ.
ನಂಬಿ ನಾರಾಯಣ ದೇಗುಲ: ಶ್ರೀ ರಾಮಾನುಜಾಚಾರ್ಯರಿಂದ ವಿಷ್ಣುವರ್ಧನನು ಪಂಚನಾರಾಯಣ ದೇಗುಲಗಳನ್ನು ಮರು ಸ್ಥಾಪಿಸಿ ಅಭಿವೃದ್ಧಿಯ ಕಾರ್ಯ ಕೈಗೊಂಡನು. ಅಂತೆಯೇ ನಂಬಿ ನಾರಾಯಣ ದೇಗುಲವು ಅಭಿವೃದ್ಧಿ ಪ್ರಾಮುಖ್ಯದಲ್ಲಿದೆ. ಶ್ರೀರಾಮಾನುಜರು ನಂಬಿ ಎಂಬ ಶಿಷ್ಯನಿಗೆ ಶ್ರೀಮಠ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು ನಂಬಿ ನಾರಾಯಣ ದೇಗುಲ ನಿರ್ಮಾಣ ಮಾಡಲು ಹೇಳುತ್ತಾರೆ. ವಿಶಾಲ ಹೊರ ಆವರಣದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿರುವ ಈ ದೇಗುಲದ ಮುಂಭಾಗದಲ್ಲಿ 45 ಅಡಿಯ ಗರುಡ ಕಂಬವಿದ್ದು ದೇಗುಲದ ಹೊರಗಿನಿಂದ ಪಕ್ಕದಲ್ಲಿ ಸ್ಥಾಪಿತವಾದಂತೆಯೂ, ದೇಗುಲದ ಒಳಗಿನಿಂದ ನೋಡಲು ದೇಗುಲದ ಮುಂಭಾಗದಲ್ಲಿ ಮಧ್ಯೆ ಸ್ಥಾಪಿತವಾದಂತೆಯೂ ವಿಶೇಷ ಕೋನದಲ್ಲಿ ಸ್ಥಾಪಿತವಾಗಿರುವುದು ಶಿಲ್ಪಿಯ ಕಲಾನೈಪುಣ್ಯತೆಗೆ ಹಿಡಿದ ಕನ್ನಡಿ, ಸುಂದರ ಕಂಬಗಳ ಮಂಟಪದ ಮುಖ್ಯದ್ವಾರದ ಮೂಲಕ ಒಳ ನಡೆದರೆ ಮಹಾರಂಗ ಮಂಟಪದಲ್ಲಿ 50 ಕಂಬಗಳ ವಿಶಾಲ ಆವರಣ, ಅದನ್ನು ದಾಟಿದರೆ ಪಾತಾಲಂಕದಲ್ಲಿ 40 ಕಂಬಗಳು ಆಕರ್ಷಣೀಯವಾಗಿವೆ. ಬಳಪದ ಕಲಿನಲ್ಲಿನ ಕೆತ್ತನೆಯ ಕಂಬಗಳು ಕಣ್ಮನ ಸೆಳೆಯುತ್ತವೆ. ಇಲ್ಲೇ ಶ್ರೀ ರಾಮಾನುಜರು ಕುಳಿತುಕೊಳ್ಳುತ್ತಿದ್ದ ಸ್ಥಳದಲ್ಲಿ ಅವರ ಪಾದುಕೆಯನ್ನು ಸ್ಥಾಪಿಸಲಾಗಿದೆ. ಅಂತರಾಳದಲ್ಲಿ ಮೇಲ್ಬಾವಣಿಯಲ್ಲಿನ ಪದ್ಮಪುಷ್ಪದ ಕೆತ್ತನೆಯು ಸುಂದರವಾಗಿದೆ.
ಗರ್ಭಗೃಹದಲ್ಲಿ ನಂಬಿ ನಾರಾಯಣ ಸ್ವಾಮಿಯು 8 ಅಡಿಯ ವಿಗ್ರಹ ಶಂಕು ಚಕ್ರಧಾರಿಯಾಗಿ ನಿಂತ ಭಂಗಿಯಲ್ಲಿ ಶ್ರೀದೇವಿ ಭೂದೇವಿ ಸಹಿತನಾಗಿ ದರ್ಶನ ನೀಡುತ್ತಾನೆ. ಸಾಮಾನ್ಯವಾಗಿ ವಿಷ್ಣುವಿನ ವಿಗ್ರಹ ಎಡಗೈಲಿ ಶಂಕು ಬಲದಲ್ಲಿ ಚಕ್ರ ಹಿಡಿದ ಭಂಗಿಯಲ್ಲಿ ಕಾಣಸಿಗುತ್ತದೆ. ಆದರೆ ಇಲ್ಲಿ ಅದಕ್ಕೆ ವಿರುದ್ಧವಾಗಿ ಬಲಗೈಲಿ ಶಂಕು ಎಡಗೈಲ್ಲಿ ಚಕ್ರ ಹಿಡಿದಿರುವುದು ವಿಶೇಷ, ಬಾಗಿಲಲ್ಲಿ ಜಯವಿಜಯರು ನೆಲೆಸಿದ್ದಾರೆ.
ನಂಬಿ ನಾರಾಯಣನ ಎದುರಿನ ದೇಗುಲದಲ್ಲಿ ಶ್ರೀವೇಣುಗೋಪಾಲನು ಪಾರ್ಥಸಾರಥಿಯಾಗಿಯೂ ನೆಲೆ ನಿಂತಿದ್ದಾನೆ. ಶ್ರೀ ಅರವಿಂದ ನಾಯಕಿ ಅಮ್ಮ ಹಾಗು ನಮ್ಮಾಳ್ವರು ಇಲ್ಲಿ ಸ್ಥಾಪಿತಗೊಂಡಿದ್ದಾರೆ.ಇಲ್ಲಿನ ಯಾಗಶಾಲೆಯು ಯಜ್ಞಯಾಗಾದಿಗಳ ಕಾರ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲೇ ಪಕ್ಕದಲ್ಲಿ ಗರುಡ ಕೊಳವಿದೆ.
ಯಾತ್ರಿಕರಿಗೆ ಹೆಚ್ಚಿನ ಮಾಹಿತಿ
* ಬೆಂಗಳೂರಿನಿಂದ ಸುಮಾರು 130 ಕಿ.ಮೀ ದೂರದಲ್ಲಿದೆ. ಮೈಸೂರಿನಿಂದ 38 ಕಿ.ಮೀ, ಪಾಂಡವಪುರದಿಂದ 10 ಕಿ.ಮೀ, ಶ್ರೀರಂಗ ಪಟ್ಟಣದಿಂದ 21 ಕಿ.ಮೀ ದೂರದಲ್ಲಿದೆ.
* ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಸಂತಾನ, ವಿವಾಹ ಹಾಗು ದೋಷಮುಕ್ತ ಜೀವನದ ಹರಕೆಹೊತ್ತ ಭಕ್ತರು ಒಳಿತನ್ನು ಕಂಡು ಇಲ್ಲಿನ ಸ್ವಾಮಿಗೆ ಬಿಳಿ ವಸ್ತ್ರವನ್ನು ಶ್ರೀ ರಾಮಾನುಜರಿಗೆ ಕೇಸರಿ ವಸ್ತ್ರವನ್ನು ನೀಡಿ ಪೂಜಿಸುತ್ತಾರೆ.
* ಇಲ್ಲೆಗೆ ಸರ್ಕಾರಿ ಹಾಗು ಖಾಸಗಿ ವಾಹನ ವ್ಯವಸ್ಥೆ ಇದೆ. ಪಾಂಡವಪುರಕ್ಕೆ ರೈಲು ವ್ಯವಸ್ಥೆ ಇದೆ.
* ಇಲ್ಲಿಗೆ ಹತ್ತಿರದ ಕ್ಷೇತ್ರಗಳು ಶ್ರೀರಂಗ ಪಟ್ಟಣ, ನಿಮಿಷಾಂಬ, ಮೇಲುಕೋಟೆ, ಕುಂತಿಬೆಟ್ಟ, ಕರಿಘಟ್ಟ.
* ಈ ದೇಗುಲವು ಪ್ರತಿನಿತ್ಯ ಬೆಳಿಗ್ಗೆ 9.30 ರಿಂದ ಸಂಜೆ 5.30 ವರೆಗೆ ತೆರೆದಿರುತ್ತದೆ.