Logo

VHP PUBLICATIONS

Hindu Vani


expand_more

ಸ್ವಾತಂತ್ರ್ಯ

By ಸಂಜಯ್, ಸಂಘಟನಾ ಕಾರ್ಯದರ್ಶಿ, ತುಮಕೂರು ವಿಭಾಗ

'ಕ್ರಾಂತಿಯ ಕಣ'

ಕಿವುಡರನ್ನು ಎಚ್ಚರಿಸಲೆಂದು ಸ್ಫೋಟಿಸಿದ ಬಾಂಬ್

ಸ್ಯಾಂಡರ್ಸ್ ಕೊಲೆಯ ಉರುಬು ಕಮ್ಮಿಯಾಗುತ್ತಲೇ ಕ್ರಾಂತಿಕಾರಿಗಳು ತಮ್ಮ ಚಟುವಟಿಕೆಗಳನ್ನು ಮತ್ತೆ ಶುರುಗಟ್ಟಿದರು. ಆಗ್ರಾದ ಇಂಗು ಮಾರಾಟದ ಮಂಡಿಯ ಬಳಿ ಸಣ್ಣ ಮನೆಯೊಂದನ್ನು ಬಾಡಿಗೆಗೆ ಪಡೆದು ಅದನ್ನು ತಮ್ಮ ಪ್ರಧಾನ ಕೇಂದ್ರವಾಗಿರಿಸಿಕೊಂಡರು. ಆಜಾದ್, ಭಗತ್‌ಸಿಂಗ್, ಸುಖದೇವ್ ಮತ್ತು ರಾಜಗುರು ಅಲ್ಲಿ ಉಳಿದುಕೊಳ್ಳುತ್ತಿದ್ದರು. ಕೆಲವು ಹೊಸ ತರುಣರು ಅವರೊಂದಿಗೆ ಸೇರಿಕೊಂಡರು. ಕಾಕೋರಿ ಪ್ರಸಂಗದ ಮೊದಲಿನಿಂದಲೂ ಇದ್ದ ಜತೀಂದ್ರನಾಥದಾಸ್, ಬಟುಕೇಶ್ವರ ದತ್ತ, ರಾಮಶರಣ ದಾಸ್‌ರವರು ಕೂಡಾ ಜೊತೆಯಾದರು. ಸ್ಫೋಟಕಗಳ ವಿಶೇಷ ತಜ್ಞರಾಗಿದ್ದ ಜತಿನ್‌ದಾಸ್ ಕಲ್ಕತ್ತಾದಲ್ಲಿ ಸಚೀಂದ್ರನಾಥ ಸನ್ಯಾಲರ ಒಡನಾಡಿಯಾಗಿದ್ದವರು. ಬಂಗಾಲದ ಬಟುಕೇಶ್ವರ ದತ್ತರು ಕಾನಪುರದಲ್ಲಿ ವಿದ್ಯಾರ್ಥಿಯಾಗಿಂದಿನಿಂದಲೂ ಕ್ರಾಂತಿಕಾರಿಗಳ ಜೊತೆಯಲ್ಲಿದ್ದವರು. ಕಾಕೋರಿ ಘಟನೆಯಲ್ಲಿ ಶಿಕ್ಷೆಗೊಳಗಾಗಿದ್ದ ರಾಮಶರಣದಾಸ್ ಅಂಡಮಾನದ ಸೆಲ್ಯುಲರ್ ಜೈಲಿನಲ್ಲಿ ತಮ್ಮ ಶಿಕ್ಷೆಯ ಅವಧಿಯನ್ನು ಮುಗಿಸಿ ಬಂದವರು. ಅಲ್ಲಿಯ ಕಠಿಣ ಜೈಲುವಾಸದಿಂದ ಅವರ ಸ್ವಾತಂತ್ರ್ಯದ ಹಂಬಲವು ಕಿಂಚಿತ್ತೂ ಕುಂದಿರಲಿಲ್ಲ.

ಕ್ರಾಂತಿಕಾರಿಗಳ ಮುಂದೆ ಇದ್ದ ದೊಡ್ಡ ಪ್ರಶ್ನೆಯೆಂದರೆ ಹೋರಾಟಕ್ಕೆ ಅವಶ್ಯವಿದ್ದ ಹಣದ ಕೊರತೆ. ಆದರೆ ಇಲ್ಲೂ ಒಂದು ವಿಶೇಷವಿದ್ದಿತು. ಕೆಲವೊಮ್ಮೆ ಊಹಿಸದ ರೀತಿಯಲ್ಲಿ ಹಣವು ಒದಗಿಬರುತ್ತಿದ್ದಿತು. ಒಮ್ಮೆ ಆಜಾದ್‌ ಬಂಗಾಲದ ಅಡ್ವಕೇಟ್ ಜನರಲ್ ಸರ್ ಎನ್. ಸರ್ಕಾರ್‌ರವರು ಕಳುಹಿಸಿಕೊಟ್ಟ ಬ್ಯಾಂಕ್ ಚೆಕ್ ಬಂದು ತಲುಪಿತು. ಅದನ್ನು ಆಜಾದ್ ಸುಳಿವು ಸಿಗದಂತೆ ಆ ಕೂಡಲೇ ನಗದು ಮಾಡಿ ಬಿಟ್ಟರು.

1929ರಲ್ಲಿ ವೈಸ್‌ರಾಯ್ ಆಗಿದ್ದುದು ಇರ್ವಿನ್. ಆತನು ಪಬ್ಲಿಕ್ ಸೇಫ್ಟಿಬಿಲ್ ಎನ್ನುವ ಎರಡು ಮಸೂದೆಗಳನ್ನು ಮಂಡಿಸಿದನು. ಮೊದಲನೆಯ ಮಸೂದೆಯು ವಿಚಾರಣೆಯಿಲ್ಲದೆ ಬಂಧಿಸುವ ಅಧಿಕಾರವನ್ನು ಸರ್ಕಾರಕ್ಕೆ ಕೊಡಲಿದ್ದಿತು. ಎರಡನೆಯ ಮಸೂದೆಯು ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ಹೂಡುವುದನ್ನು ತಡೆಯಲೆಂದು ಇದ್ದಿತು. ಈ ಮಸೂದೆಗಳನ್ನು ಮಂಡಿಸುವ ದಿನವೇ ಅಂದರೆ ಏಪ್ರಿಲ್ 8ರಂದು ಕೇಂದ್ರ ಶಾಸನ ಸಭೆಗೆ ಬಾಂಬನ್ನು ಎಸೆದು ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕೆಂದು ಕ್ರಾಂತಿಕಾರಿಗಳು ನಿರ್ಧರಿಸಿದರು. ಇದರ ಉದ್ದೇಶವು ಯಾರಿಗಾದರೂ ಹಾನಿಯಾಗಬೇಕೆಂದು ಇರಲಿಲ್ಲ. ಆದರೆ ಈ ಕಾನೂನುಗಳಿಗೆ ವಿರೋಧವಿರುವುದನ್ನು ಸಾರ್ವಜನಿಕರಿಗೆ ಸ್ವಷ್ಟವಾಗಿ ತಿಳಿಸಬೇಕೆಂದು ಅವರು ನಿಶ್ಚಯಿಸಿದ್ದರು. ಆದರೆ ಸ್ಯಾಂಡರ್ಸ್‌ ಪ್ರಕರಣದಲ್ಲಿ ನಡೆದಂತೆ ತಪ್ಪಿಸಿಕೊಳ್ಳುವ ಬದಲು ಬಂಧನಕ್ಕೆ ಒಳಪಟ್ಟು ನಂತರ ಪ್ರಬಲವಾದ ಹೇಳಿಕೆಯನ್ನು ನೀಡಬೇಕು ಎಂದು ನಿರ್ಧಾರವಾಯಿತು. ಮೊದಲು ಬಟುಕೇಶ್ವರ ದತ್ತ ಮತ್ತು ರಾಮ ಶರಣ ದಾಸರಿಬ್ಬರು ಈ ಕಾರ್ಯಾಚರಣೆಯನ್ನು ನಡೆಸಬೇಕೆಂದು ನಿರ್ಧಾರವಾಯಿತು. ಆ ನಡುವೆ ಸುಖದೇವ ಮತ್ತು ಭಗತಸಿಂಗ್‌ ನಡುವೆ ಬಿರುಸಾದ ಚರ್ಚೆಯು ಪ್ರಾರಂಭವಾಯಿತು. ಮಾತಿಗೆ ಮಾತು ಬೆಳೆದು ಸುಖದೇವನು ಭಗತ್‌ಸಿಂಗ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಭಯಪಡುತ್ತಿರುವನೆಂದು ಆಪಾದಿಸಿದನು. ಆಗ ಭಗತ್‌ಸಿಂಗನು ಸಿಟ್ಟಿನಿಂದ ತಾನೇ ಈ ಕಾರ್ಯಾಚರಣೆಯ ನೇತೃತ್ವ ವಹಿಸುವೆನೆಂದು ಸಿಟ್ಟಿನಿಂದ ಹಟತೊಟ್ಟನು. ಆಜಾದನಿಗೆ ಇದು ಇಷ್ಟವಾಗಲಿಲ್ಲ. ಹಾಗೇನಾದರೂ ಆದರೆ ಪೊಲೀಸರು ಕೂಡಲೇ ಸ್ಯಾಂಡರ್ಸ್‌ ಕೊಲೆಯ ಹಿನ್ನೆಲೆಯನ್ನು ಕಂಡುಹಿಡಿದು ಎಲ್ಲರಿಗೂ ಅಪಾಯವು ಕಾದಿರಲಿದೆ ಎಂದು ಗ್ರಹಿಸಿದನು. ಅಪಾಯಕಾರಿಯಲ್ಲದ ಎಚ್ಚರಿಕೆಯ ಬಾಂಬ್ ಎಸೆಯುವುದೇನೋ ಜೈಲು ಶಿಕ್ಷೆಗೆ ಕಾರಣವಾಗಬಹುದು. ಆದರೆ ಪೊಲೀಸ್ ಅಧಿಕಾರಿಯೊಬ್ಬನ ಕೊಲೆಯು ಖಚಿತವಾಗಿ ಮರಣ ದಂಡನೆಗೆ ಕಾರಣವಾಗುವುದು ಖಚಿತ. ಆದುದರಿಂದ ಭಗತ್‌ಸಿಂಗ್ ಸುಖದೇವರು ಈ ಕಾರ್ಯಕ್ಕೆ ಮುನ್ನುಗ್ಗಬಾರದು ಎಂದರು. ಆದರೆ ಭಗತ್‌ಸಿಂಗನು ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಒಪ್ಪಲೇ ಇಲ್ಲ. ಹೀಗೆ ದೇಶ ಭಕ್ತರಾದ ಈ ತರುಣರು ತಮ್ಮ ಧೈರ್ಯ ಸಾಹಸಗಳ ನಡುವೆ ವಾದವಿವಾದ, ಭಿನ್ನಾಭಿಪ್ರಾಯ ಮತ್ತು ಕ್ಷಣಿಕ ಭಾವಾತೀರೇಕಕ್ಕೆ ಒಳಗಾಗುವುದರಿಂದ ಹಲವು ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುತ್ತಿದ್ದರು.

ಸ್ವಾತಂತ್ರ್ಯ

ಮುಂದೆ ಭಾರತದ ಸಂಸದ್ ಭವನವಾದ ಕಟ್ಟಡವು ಆಗ ಕೇಂದ್ರ ಶಾಸನ ಸಭೆಯಾಗಿದ್ದಿತು. ಏಪ್ರಿಲ್ 6 ರಂದು ಬಟುಕೇಶ್ವರ ದತ್ತ ಮತ್ತು ಭಗತ್‌ಸಿಂಗರು ಪ್ರಾಥಮಿಕ ತಯಾರಿಗಾಗಿ ಮುಖ್ಯ ಸಭಾಂಗಣದ ಸಂದರ್ಶಕರ ಛಾವಣಿಗೆ ಹೋಗಿ ಬಂದರು. ಯಾರೂ ಅವರನ್ನು ಪ್ರಶ್ನಿಸದಿದ್ದುದು ಸಮಾಧಾನಕರ ಪ್ರಸಂಗವಾಗಿದ್ದಿತು. ಏಪ್ರಿಲ್ 8ರ ಬೆಳಿಗ್ಗೆ ದುರ್ಗಾದೇವಿ, ಭಗವತಿ ಚರಣ್ ಮತ್ತು ಅಜಾದರು ಹಳೆ ದೆಹಲಿಯ ಪಾರ್ಕ್‌ನಲ್ಲಿ ಭೇಟಿಯಾದರು. ಆ ಪಾರ್ಕ್ ಈಗಲೂ ಇದೆ. ಅದರ ಒಂದು ಭಾಗವು ಈಗ ಅಂತರ ರಾಜ್ಯ ಬಸ್ ನಿಲ್ದಾಣವಾಗಿದೆ. ಭಗತ್‌ಸಿಂಗ್ ಅಲ್ಲಿ ತನ್ನ ಇಷ್ಟದ ಸಿಹಿತಿಂಡಿಯನ್ನೂ, ಕಿತ್ತಳೆ ಹಣ್ಣುಗಳನ್ನೂ ತಂದು ತಿಂದನು. ಎಲ್ಲರಿಗೂ ಗೊತ್ತಿದ್ದಿತು. ಅವನನ್ನು ನೋಡುವುದು ಕೊನೆಯ ಬಾರಿಗೆ ಎಂದು.

ಪಾರ್ಕಿನಿಂದ ಭಗತ್‌ಸಿಂಗ್ ನೇರವಾಗಿ ಶಾಸನ ಸಭೆಯ ಕಟ್ಟಡದ ಕಡೆಗೆ ಹೋದನು. ಅಲ್ಲಿ ಬಟುಕೇಶ್ವರ ದತ್ತನು ಅವನಿಗಾಗಿ ಕಾಯುತ್ತಲಿದ್ದನು. ಅವರಿಬ್ಬರೂ ಖಾಕಿ ನಿಕ್ಕರನ್ನೂ ಶರ್ಟನ್ನೂ ಧರಿಸಿದ್ದರು. ಅವರಿಬ್ಬರಿಗೂ ಶಾಸನ ಸಭೆಯ ಭಾರತೀಯ ಸದಸ್ಯರೊಬ್ಬರು ಪ್ರವೇಶದ ಪಾಸನ್ನು ಕೊಟ್ಟವರೇ ಅಲ್ಲಿಂದ ಹೊರಟು ಬಿಟ್ಟರು. 1lಘಂಟೆಗೆ ಕೆಲವು ನಿಮಿಷಗಳಿರುವಾಗ ಇಬ್ಬರೂ ಸಂದರ್ಶಕರ ಗ್ಯಾಲರಿಯನ್ನು ಪ್ರವೇಶಿಸಿದರು. ಗ್ಯಾಲರಿಯಲ್ಲಿ ಜನರು ತುಂಬಿ ಬಿಟ್ಟಿದ್ದರು. ಅಲ್ಲಿಂದ ಇಬ್ಬರು ಕೆಳಗಿನ ಸಭಾಂಗಣವನ್ನು ವೀಕ್ಷಿಸಿದರು. ಪ್ರಮುಖ ನಾಯಕರೆಲ್ಲ ಅಲ್ಲಿ ಇರುವುದು ಅವರಿಗೆ ಕಂಡು ಬಂದಿತು. ಅವರಲ್ಲಿ ಮೋತಿಲಾಲ್ ನೆಹರು, ಮಹಮ್ಮದಾಲಿ ಜಿನ್ನಾ, ಮದನ ಮೋಹನ ಮಾಲವೀಯ, ಮೊದಲಾದವರು ಇದ್ದರು. ಭಗತ್‌ಸಿಂಗ್ ಈ ನಾಯಕರೆಲ್ಲರೂ ಕುಳಿತ ಜಾಗದಿಂದ ದೂರಕ್ಕೆ ತನ್ನ ಕೈಲಿದ್ದ ಬಾಂಬನ್ನು ಎಸೆದನು. ಯಾರಿಗೂ ಹಾನಿಯಾಗಬಾರದೆಂಬುದು ಅವನ ಉದ್ದೇಶವಾಗಿದ್ದಿತು. ಆದರೆ ಅದು ಬೀಳುತ್ತಲೇ ಸಭಾಂಗಣದಲ್ಲಿ ಎಲ್ಲಿಲ್ಲದ ಗೊಂದಲವು ಸೃಷ್ಟಿಯಾಯಿತು. ಅಷ್ಟರಲ್ಲಿ ಬಟುಕೇಶ್ವರ ದತ್ತನೂ ತನ್ನ ಜೊತೆಗಿದ್ದ ಬಾಂಬನ್ನು ಎಸೆದನು. ಅದು ಕೂಡಾ ಸ್ಫೋಟಗೊಂಡಿತು. ಅದರೊಂದಿಗೆ ಇಬ್ಬರೂ ಕರಪತ್ರಗಳನ್ನು ಎಸೆದರು. ಬಾಂಬ್‌ಗಳೆರಡೂ ದೊಡ್ಡ ಶಬ್ದವನ್ನು ಮಾಡಬೇಕಲ್ಲದೆ ಹಾನಿಯಲ್ಲ ಎಂದು ಅವನ್ನು ಸಿದ್ಧ ಪಡಿಸಲಾಗಿದ್ದಿತು. ಆದರೆ ಎಷ್ಟೊಂದು ಭಯಾನಕವೆನ್ನುವಂತೆ ಪರಿಸ್ಥಿತಿಯು ನಿರ್ಮಾಣವಾಯಿತು. ಎಲ್ಲರೂ ಅಲ್ಲಿಯ ಹೊರ ಹೋಗುವ ಬಾಗಿಲುಗಳ ಕಡೆ ಧಾವಿಸುತ್ತಿದ್ದರು.

ಇಬ್ಬರು ಕ್ರಾಂತಿಕಾರಿಗಳ ಬಳಿಯೂ ರಿವಾಲ್ವರ್‌ಗಳಿದ್ದವು. ಹಿಂಸೆಯು ಅವರ ಉದ್ದೇಶವಾಗಿದ್ದರೆ ಇಬ್ಬರೂ ಅಲ್ಲಿದ್ದ ಪೊಲೀಸರಿಗೂ ಹಿರಿಯ ಅಧಿಕಾರಿಗಳಿಗೂ ಗುಂಡು ಹಾರಿಸಬಹುದಾಗಿದ್ದಿತು. ಆದರೆ ಇಬ್ಬರೂ ಓಡಿಹೋಗಲಿಲ್ಲ. ತಮ್ಮ ರಿವಾಲ್ವರ್‌ಗಳನ್ನು ತಮ್ಮ ತಮ್ಮ ಪಕ್ಕದ ಆಸನಗಳ ಮೇಲಿಟ್ಟು ಶಾಂತವಾಗಿ ಕೂತರು. ಪೊಲೀಸರು ಬಂದಾಗಲೂ ಅವರು ಹಾಗೆಯೇ ಕೂತಿದ್ದರು. ಇಬ್ಬರನ್ನೂ ಬಂಧಿಸಿದಾಗ 'ಕ್ರಾಂತಿ ಚಿರಾಯುವಾಗಲಿ' 'ಸಾಮ್ರಾಜ್ಯಶಾಹಿಗೆ ಧಿಕ್ಕಾರ' ಎಂದು ಘೋಷಣೆಯನ್ನು ಕೂಗಿದರು. ಅವರು ಚೆಲ್ಲಿದ ಕರಪತ್ರವಂತೂ ಅವರ ಉದ್ದೇಶವನ್ನು ಚೆನ್ನಾಗಿ ವಿವರಿಸುತ್ತಿತ್ತು. ಅದರಲ್ಲಿ 1893ರಲ್ಲಿ ಫ್ರಾನ್ಸ್ ಶಾಸನ ಸಭೆಯಲ್ಲಿ ಬಾಂಬ್ ಎಸೆದ ಆಗಸ್ಟ್ ವೈಲೆಂಟ್ ಎನ್ನುವ ಹೋರಾಟಗಾರರ “ಕಿವುಡರಿಗೆ ಕೇಳಿಸಲು ಗಡಚಿಕ್ಕುವ ಶಬ್ದವೇ ಮೊಳಗಬೇಕು' ಎನ್ನುವ ಘೋಷಣೆಯನ್ನು ಬರೆಯಲಾಗಿದ್ದಿತು.

ಕಟ್ಟಡದ ಹೊರಗೆ ನಿಂತಿದ್ದ ಭಗವತಿ ಚರಣ್ ಮತ್ತು ದುರ್ಗಾದೇವಿಯರು ತಮ್ಮ 4 ವರ್ಷದ ಮಗನೊಂದಿಗೆ ಒಂದು ಕುದುರೆ ಸಾರೋಟನ್ನು ಬಾಡಿಗೆಗೆ ತೆಗೆದುಕೊಂಡು ಕಟ್ಟಡದ ಸುತ್ತು ತಿರುಗುತ್ತಿದ್ದರು. ಭಗತಸಿಂಗನನ್ನು ಹೊರಗೆ ತರುತ್ತಿರುವುದನ್ನು ಕಂಡರು. ಭಗತ್‌ಸಿಂಗನೂ ಆವರತ್ತ ತಲೆ ಎತ್ತಿ ನೋಡಿದನು. ಅವನನ್ನು ನೋಡುತ್ತಲೇ ಪುಟ್ಟ ಬಾಲಕನು 'ಲಂಬಾ ಚಾಚಾ' ಅಂದರೆ ಎತ್ತರದ ಮಾಮಾ ಎಂದು ಭಗತ್‌ಸಿಂಗ್‌ನನ್ನು ಗಟ್ಟಿಯಾಗಿ ಕರೆದನು. ಆದರೆ ಗದ್ದಲದಲ್ಲಿ ಯಾರೂ ಅದನ್ನು ಗಮನಿಸಲಿಲ್ಲ.

ಬ್ರಿಟಿಷ್ ಪೊಲೀಸರಿಗೆ ಈ ಬಾಂಬ್ ಪ್ರಕರಣವು ಜನಾಭಿಪ್ರಾಯವನ್ನು ಕೆರಳಿಸುವುದಕ್ಕೆ ಮಾತ್ರ ಸೀಮಿತ ಎನ್ನುವುದು ಅರಿವಾಗಿದ್ದಿತು. ಅವರಿಗೆ ಈ ಪ್ರಸಂಗಕ್ಕೆ ಹೆಚ್ಚಿನ ಮಹತ್ವ ನೀಡಿದಂತಾಗಬಾರದು ಎಂದೂ ಇದ್ದಿತು. ಹಾಗಾಗಿ ಪತ್ರಿಕೆಗಳು ಅದನ್ನು ನಿರ್ಲಕ್ಷಿಸಬೇಕೆಂದು ಮನವಿ ಮಾಡಿದರು. ಮೊದಮೊದಲು ಎಲ್ಲ ಪತ್ರಿಕೆಗಳು ಹಾಗೆಯೇ ನಡೆದುಕೊಂಡವು. ಹಿಂದುಸ್ಥಾನ್ ಟೈಮ್ಸ್ ಪತ್ರಿಕೆಯು ಮಾತ್ರ ಈ ಪ್ರಸಂಗವನ್ನು ಪ್ರಮುಖವಾಗಿ ಮುದ್ರಿಸಿತು. ಪತ್ರಿಕೆಯ ಮಾಲೀಕರಾದ ಮಾಲವೀಯರು ಸ್ವಾತಂತ್ರ್ಯ ಹೋರಾಟದ ಬೆಂಬಲಿಗರಾದ ಕಾರ್ಯಕರ್ತರನ್ನೇ ತಮ್ಮ ಪತ್ರಿಕೆಯಲ್ಲಿ ನೇಮಿಸಿಕೊಂಡಿದ್ದರು. ಅವರೆಲ್ಲರೂ ಸೇರಿ ತಮ್ಮ ಪತ್ರಿಕೆಯಲ್ಲಿ ಈ ಪ್ರಸಂಗವನ್ನು ಪ್ರಮುಖ ಸುದ್ದಿಯಾಗಿ ಪ್ರಕಟಿಸಿದರು. ಏಪ್ರಿಲ್ 10ರಂದು ಈ ಪ್ರಕರಣದ ಸುದ್ದಿ ಹಿಂದುಸ್ಥಾನ್ ಟೈಮ್ಸ್‌ನಲ್ಲಿ ಬರುತ್ತಿದ್ದಂತೆ ಮರುದಿನದಿಂದ ಉಳಿದ ಪತ್ರಿಕೆಗಳೂ ಅದೇ ಧಾಟಿಯಲ್ಲಿ ಬರೆಯಲು ಪ್ರಾರಂಭಿಸಿದವು. (ಮುಂದುವರೆಯುವುದು)